ಅನೂಹ್ಯ

ಅನೂಹ್ಯ!

ಅನೂಹ್ಯವಾಗಿರಬೇಕು!”

ಏನು? ಕಥೆಯೋ? ಜೀವನವೋ?”

ಜೀವನ ಬಿಡು- ಯಾವಾಗಲೂ ಅನೂಹ್ಯವೇ...! ಕಥೆ- ಕಥೆಯ ಕ್ಲೈಮಾಕ್ಸ್!”

ನನ್ನ ಯಾವ ಕಥೆಯಲ್ಲಿನ ಕ್ಲೈಮಾಕ್ಸ್ ನೀನು ಊಹಿಸಿದ್ದೆ?”

ಎಲ್ಲಾ ಸಂಭಾಷಣೆ- ತತ್ತ್ವ! ಬೋರು!”

ಈಗೇನು ಮಾಡಲಿ?”

ವ್ಯತ್ಯಸ್ತವಾದ ಕಥೆಯೊಂದನ್ನು ಬರಿ!”

ಹಾಗಿದ್ದರೆ ನಾನು ಬರೆದ ಕಥೆಗಳಲ್ಲಿ ವ್ಯತ್ಯಸ್ತತೆ ಇರಲಿಲ್ಲವೇ?”

ಅದು ಬಿಡು! ಅಸ್ತಿರವಾದ ಜೀವನದ ಬಗ್ಗೆ ಬರಿ...! ಅವತ್ತು ಹೇಳಿದಂತೆ.... ಭಾವಗಳಿಗೆ ಒತ್ತು ಕೊಡದೆ- ಘಟನೆಗಳಿಗೆ ಒತ್ತು ಕೊಟ್ಟು ಬರಿ- ಓದುಗರು ಖುಷಿಯಾಗುತ್ತಾರೆ! ಜೊತೆಗೆ- ಪುಸ್ತಕ ಮಾತ್ರವಲ್ಲ ನಮ್ಮ ಉದ್ದೇಶ- ಸಿನೆಮಾ ಕೂಡ!

ಅಂದರೆ?”

ನಿನ್ನ ಸೈಕಾಲಜಿಯನ್ನು ಪಕ್ಕಕ್ಕೆ ಇಟ್ಟು ನೇರವಾಗಿ ಘಟನೆಗಳನ್ನು ಹೇಳು!”

ಸರಿ.... ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಸಿಗೋಣ- ವಿತ್ ಕಥೆ!”

ಅವನಿಗೇನು? ಹೇಳೋದು ಹೇಳುತ್ತಾನೆ! ಸೈಕಾಲಜಿ ಇಲ್ಲದ ಕಥೆಯಂತೆ! ಅದರಲ್ಲೂ ಅನೂಹ್ಯವಾದ ಕ್ಲೈಮಾಕ್ಸ್ ಬೇಕಂತೆ! ಬರೆಯುವವನು ನಾನು- ಹೇಳೋದೆಷ್ಟು ಸುಲಭ!

ಅವನಿಂದ ಬೀಳ್ಕೊಟ್ಟು ಮನೆಗೆ ಹೊರಟೆ! ತಲೆತುಂಬಾ ಯೋಚನೆ! ಏನು ಬರೆಯಲಿ?

ಅವನು ಹೇಳಿದ್ದು- ಘಟನೆಗಳನ್ನು ಬರಿ, ಭಾವ ಬೇಡ- ಎಂದು.

ರೇಪ್ ನಡೆಯಿತು- ಎಂದು ಬರೆದರೆ ಘಟನೆ!”

ಅವಳನ್ನು ನೋಡಿದಾಗ ಅವನ ಮನಸ್ಸಿನಲ್ಲೊಂದು ಮಿಂಚು- ತನ್ನನ್ನವಳು ಆಹ್ವಾನಿಸುತ್ತಿದ್ದಾಳೇನೋ ಅಂದುಕೊಂಡ! ಅವನ ಮನಸ್ಸಿನ ನಿಯಂತ್ರ ಬಿಟ್ಟು ಹೋಯಿತು! ರಾಕ್ಷಸನಾದ- ಎಂದು ಬರೆದರೆ ಭಾವ!”

ರೇಪ್ ನಡೆಯಿತು ಎಂದು ಹೇಳಿ- ಯಾಕೆ ನಡೆಯಿತು ಎಂದು ಹೇಳದಿದ್ದರೆ ಹೇಗೆ?

ಏನೋಪ್ಪ! ಆದರೆ ಅವನು ಹೇಳಿದ್ದು ನಿಜ! ಇದುವರೆಗಿನ ನನ್ನ ಕಥೆಗಳಲ್ಲಿ ಜನ ಮೆಚ್ಚಿರುವುದು ಘಟನೆಗೆ ಒತ್ತು ಕೊಟ್ಟ ಕಥೆಗಳೇ ಹೊರತು- ಭಾವಕ್ಕೆ ಒತ್ತು ಕೊಟ್ಟ ಕಥೆಗಳಲ್ಲ!

ನಗು ಬಂತು! ನನ್ನ ಯೋಚನೆ ಪೂರ್ತಿ ಕಥೆ ಕಾದಂಬರಿಗಳಿಗೆ ಸರಿ! ಅವನಿಗೆ ಬೇಕಿರುವುದು ಸಿನೇಮಾಕಥೆ!

ಮನೆ ತಲುಪಿಯೇ ಹೋಗೋಣ ಅಂದುಕೊಂಡರೂ ಅರ್ಜೆಂಟ್ ತಡೆದುಕೊಳ್ಳಲಾಗಲಿಲ್ಲ. ಗಾಡಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಇಳಿದೆ!

ಆಚೆ ಈಚೆ ನೋಡಿ ಯಾರೂ ಇಲ್ಲವೆಂದು ಕಂಫರ್ಮ್ ಮಾಡಿ ರಿಲಾಕ್ಸ್ ಆಗುವಾಗ ಏನೋ ಸದ್ದು! ಸ್ವಲ್ಪ ದೂರದಲ್ಲಿ ಪೊದೆಯೊಂದರಲ್ಲಿ ಚಲನೆ! ಕಥೆಯಲ್ಲಾದರೂ ಸಿನೆಮಾದಲ್ಲಾದರೂ ಇಷ್ಟು ಹೇಳಿದರೆ ಸಾಕು- ವಿಷಯವೇನೋ ಎಲ್ಲರಿಗೂ ಅರ್ಥವಾಗುತ್ತದೆ! ಮುಗುಳುನಗುತ್ತಾ ಅಲ್ಲಿಂದ ಹೊರಟೆ!

ಯೋಚನೆ ಬಂತು!

ಅಲ್ಲಾ.... ಪೊದೆಯಲ್ಲಿನ ಚಲನೆ! ಅಲ್ಲಿ ಗಂಡು ಹೆಣ್ಣಿರಬಹುದೆನ್ನುವ ಕಲ್ಪನೆ! ಹೌದು ಕಲ್ಪನೆ! ಹೋಗಿ ನೋಡಿದರೆ ಏನಾಗುತ್ತದೆ?

ಕಥಾವಸ್ತುವೇನಾದರೂ ಸಿಕ್ಕಿದರೆ?

ಪೊದೆಯತ್ತ ನಡೆದೆ!

ದಯವಿಟ್ಟು ಬರಬೇಡಿ! ಗಂಡಿಗೆ ಮಾತ್ರವಲ್ಲ- ಹೆಣ್ಣಿಗೂ ಅರ್ಜೆಂಟ್ ಆಗುತ್ತದೆ!”

ತಿರುಗಿ ನಡೆದೆ!

ಇದು ನಾ ಬರೆದ ಕಥೆ!

*

ಅವನಿಗೆ ಮನೆಯಲ್ಲಿ ಹೆಂಡತಿ ಕಾಯುತ್ತಿರುತ್ತಾಳೆ ಅನ್ನುವ ಚಿಂತೆ! ಗೆಳೆಯನಾದರೋ.... ಮಾತು ಮಾತು ಮಾತು! ಮೂರು ಬಾರಿ ಹೇಳಿ ಆಯಿತು-

ಹೊರಡುತ್ತೇನೋ.... ಹೆಂಡತಿ ಒಬ್ಬಳೇ- ಕಾಯುತ್ತಿರುತ್ತಾಳೆ ಮನೆಯಲ್ಲಿ!”

ಇರು ಮಗ! ಇವತ್ತೊಂದು ದಿನ! ನಾಳೆ ಏನೋ ಎಂತೋ ಯಾರಿಗೆ ಗೊತ್ತು!?”

ಗೆಳೆಯನ ವೇದಾಂತ!

ಗೆಳೆಯನನ್ನೇ ದಿಟ್ಟಿಸಿ ನೋಡಿದ! ಏನಾಗಿದೆ ಗೆಳೆಯನಿಗೆ?

ಅವನ ನೋಟವನ್ನು ಕಂಡು ಗೆಳೆಯ ನಕ್ಕ!

ರಾಜುವಾದರೂ ಇದ್ದಿದ್ದರೆ ಚೆನ್ನಾಗಿತ್ತು! ಸರಿ, ಹೊರಡು.... ನನ್ನಿಂದ ಯಾಕೆ ನಿನ್ನ ಹೆಂಡತಿಗೆ ನಷ್ಟ!”

ಅವನು ಹೇಳಿದ 'ನಷ್ಟ'ದ ಅರ್ಥ ಹೊಳೆದು ಮುಗುಳುನಕ್ಕ!

ಸರಿ ಮಗ... ನೀನೂ ಹೊರಡು- ನಿನ್ನ ಹೆಂಡತಿಯೂ ಕಾಯುತ್ತಿರುತ್ತಾಳೆ! ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಸಿಗೋಣ!” ಎಂದ.

ಅವಳೇನೂ ನನಗೋಸ್ಕರ ಕಾಯುವುದಿಲ್ಲ- ನೀನು ಹೊರಡು!”

ಹೊರಟ. ಕತ್ತಲು. ಮೂತ್ರವಿಸರ್ಜನೆಗೆ ಅಷ್ಟೊಂದು ಅರ್ಜೆಂಟಾಗುತ್ತಿದ್ದರೂ ಗಾಡಿ ನಿಲ್ಲಿಸಬೇಕು ಅನ್ನಿಸಲಿಲ್ಲ. ಹೆದರಿಕೆ! ಪ್ರಪಂಚ ಹಾಗಿದೆ! ಗಂಡಾಗಿದ್ದು ತಾನೇ ಇಷ್ಟು ಹೆದರಿದರೆ ಹೆಣ್ಣುಮಕ್ಕಳ ಕಥೆಯೇನು?

ಯಾಕೆ? ತನ್ನಲ್ಲೇನು ಹಿರಿಮೆ? ಹೆಣ್ಣು ತನಗಿಂತ ಕೀಳೇ...?

ವ್ಯರ್ಥ ಯೋಚನೆ! ಮನೆ ತಲುಪುವವರೆಗೆ ತಡೆದುಕೊಳ್ಳಲಾಗದೆ ಗಾಡಿ ನಿಲ್ಲಿಸಿದ.

ತಣ್ಣನೆ ಬೀಸುತ್ತಿದ್ದ ಗಾಳಿ. ನಿರ್ಜನ ಪ್ರದೇಶ.... ರಿಲಾಕ್ಸ್ ಆಗುತ್ತಿರುವಾಗ, ಸ್ವಲ್ಪ ದೂರದಲ್ಲಿ ಏನೋ ಸದ್ದು.

ಗಾಬರಿಯಾದ. ಹೆದರಿಕೆಯನ್ನು ಅಧಿಗಮಿಸಿದ ಕುತೂಹಲ ಅವನನ್ನು ಶಬ್ದ ಬಂದ ದಿಕ್ಕಿಗೆ ನಡೆಸಿತು!

ದಯವಿಟ್ಟು ಬರಬೇಡಿ- ಬಂದರೆ ಕೊಲ್ಲುತ್ತಾರೆ!”

ಯಾವುದೋ ಹೆಣ್ಣಿನ ಮಾತು ಕೇಳಿ ನಿಂತ. ಗೊಂದಲ! ಪರಿಚಿತ ಶಬ್ದ!

ಯಾರಿಗೆ ಹೇಳಿದ ಮಾತು? ಯಾರು ಯಾರನ್ನು ಕೊಲ್ಲುತ್ತಾರೆ...?

ತಾನು ಸಮೀಪ ಹೋಗುವಾಗ ಕೇಳಿಸಿದ ಮಾತಾದ್ದರಿಂದ- ತನಗೇ...!

ಆದರೂ ಹಾಳು ಕುತೂಹಲ! ಮುಂದಕ್ಕೆ ಹೆಜ್ಜೆ ಹಾಕಿದ.

ಪೊದೆಯಾಚೆ ಹೊರಳಾಡುತ್ತಿದ್ದ ಗಂಡು ಹೆಣ್ಣು ತಲೆಯೆತ್ತಿ ನೋಡಿದರು!

ಗಂಡು- ರಾಜು!

ಹೆಣ್ಣು- ಗೆಳೆಯನ ಹೆಂಡತಿ!

ಒಂದು ಕ್ಷಣ ಮೆದುಳು ತನ್ನ ವರ್ತನೆಯನ್ನು ನಿಲ್ಲಿಸಿತು!

ರಾಜುವಿನ ಕೈಯ್ಯಲ್ಲಿದ್ದ ಬಂದೂಕು ಠಾಂ ಎಂದಿತು!

ಬರೆದ ಕಥೆಯನ್ನೊಮ್ಮೆ ಓದಿದೆ! ನನ್ನ ಕಲ್ಪನೆಗೆ ಅಹಂಕಾರವಾಯಿತು! ಆದರೂ.... ಸೈಕಾಲಜಿಯಿಲ್ಲದೆ ಬರೆಯಲಾರೆ ಅನ್ನಿಸಿತು! ಪರವಾಗಿಲ್ಲ! ಭಾವನೆಗಳಿದ್ದರೂ ಅನೂಹ್ಯ ಕಥೆ!

ಬರೆದ ಪೇಪರನ್ನು ಮಡಚಿ ಕವರಿಗೆ ಹಾಕಿ ಗತ್ತಿನಿಂದ ಗೆಳೆಯನ ಮನೆಗೆ ಹೊರಟೆ.

ದೂರದಿಂದ ಕಾಣಿಸಿತು- ಯಾಕಿಷ್ಟು ಜನ?

ಗಾಭರಿಯಿಂದ ಹೋದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ ಗೆಳೆಯ-

ಪಕ್ಕದಲ್ಲಿ ತಲೆತಗ್ಗಿಸಿ ನಿಂತಿದ್ದಾರೆ,

ರಾಜು ಮತ್ತು ಗೆಳೆಯನ ಹೆಂಡತಿ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!