ಕಥೆಗಾರನ ಆತ್ಮ ವಿಶ್ಲೇಷಣೆ!
ಕಥೆಗಾರನ ಆತ್ಮ ವಿಶ್ಲೇಷಣೆ!
“ನನ್ನ ಪ್ರಾಮಾಣಿಕ ಅಭಿಪ್ರಾಯ: ಕಥೆ ಇಷ್ಟವಾಗಲಿಲ್ಲ!” ಎಂದು ಕಮೆಂಟ್ ಮಾಡಿದರು.
ಯೋಚನೆಗಿಟ್ಟುಕೊಂಡಿತು!
ಏನು ಮಾಡಲಿ?
ಬೇರೆಯವರ ಅಭಿಪ್ರಾಯವೂ ನೊಡೋಣವೆಂದು ಕಾದೆ! ಒಳ್ಳೆಯ ಅಭಿಪ್ರಾಯಗಳೇ ಬಂದವು! ಆದರೂ...,
“ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ನನ್ನ ತೆರೆದ ಮನದ ಧನ್ಯವಾದಳು ಸರ್... ಇನ್ನೂ ಎಷ್ಟು ದಿನಬೇಕೋ ಪಕ್ವವಾದ ಚಂದದ ಕಥೆ ಬರೆಯಲು.... ಯಾಕೆ ಇಷ್ಟವಾಗಲಿಲ್ಲವೋ ಹೇಳಿದ್ದರೆ ಉಪಕಾರವಾಗುತ್ತಿತ್ತು...! ಕಥಾವಸ್ತುವೇ? ಬರೆದ ಶೈಲಿಯೇ?” ಎಂದು ರೀಕಮೆಂಟ್ ಮಾಡಿದೆ.
“ಕಥಾ ಹಂದರ ಶಿಥಿಲ, ಪಾತ್ರ ಪೋಷಣೆ ಅಷ್ಟಕ್ಕಷ್ಟೆ, ಬರವಣಿಗೆಯ ಶೈಲಿ ಅನಾಕರ್ಷಕ....! ಇವಿಷ್ಟೂ ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ!” ಎಂದು ಉತ್ತರಿಸಿದರು.
ವಿಶ್ಲೇಷಣೆ ಶುರವಾಯಿತು!
ಕಥೆಯನ್ನು ಮತ್ತೊಮ್ಮೆ ಓದಿನೋಡಿದೆ. ಅಷ್ಟು ಬೇಗ ಅರ್ಥವಾಗುವುದಿಲ್ಲ! ಹಾಗೆಂದು ಕಥೆಯಲ್ಲಿ ಏನೂ ಇಲ್ಲವೆಂದಲ್ಲ- ಕಠಿಣ! ನಿಜ.... ಕಥೆಯಿಂದ ಕಥೆಗೆ ನನ್ನ ಶೈಲಿ ಕಠಿಣವಾಗುತ್ತಿದೆ! ಹಾಗೆಂದು ಅದನ್ನು ಬದಲಿಸಲು ನಾನೂ ತಯಾರಿಲ್ಲ!
ಇದನ್ನು ಹೇಗೆ ತೆಗೆದುಕೊಳ್ಳಲಿ....?
ಅವರು ಕಮೆಂಟ್ ಮಾಡಿರುವುದು ನಾನು ಬರೆದ ಅರವತ್ತೇಳನೇ ಕಥೆಗೆ! ಬರೆದ ಕಥೆಗಳೆಲ್ಲಾ ಎಲ್ಲರಿಗೂ ಇಷ್ಟವಾಗಬೇಕೆಂದಿಲ್ಲ! ಅರವತ್ತೇಳು ಕಥೆಗಳಲ್ಲಿ ಇದೇ ನನ್ನ ಕೆಟ್ಟ ಕಥೆಯಾಗಿರಲೂ ಬಹುದು...
ನಿಜ..., ಅರಗಿಸಿಕೊಳ್ಳಲು ಕಷ್ಟವಾದರೂ- ಒಪ್ಪಿದೆ!
ನಾನು ನನ್ನ ಕಥೆಗೆ ಕಮೆಂಟ್ ಮಾಡಿದವರ ಆಕ್ಟಿವಿಟಿ ನೋಡಿದೆ..., ನನ್ನ ಬೇರೆ ಯಾವೊಂದು ಕಥೆಯನ್ನೂ ಓದಿಲ್ಲ! ಓದಿರಬಹುದೇನೋ- ಲೈಕ್ ಆಗಲಿ, ಕಮೆಂಟ್ ಆಗಲಿ ಇಲ್ಲ!
ಛೇ! ನನ್ನ ಅತಿ ಕೆಟ್ಟ ಕಥೆಯನ್ನೇ ಓದಬೇಕೆ....? ಅವರೊಬ್ಬರು ಹೇಳಿದ್ದರಿಂದ ಕಥೆ ಕೆಟ್ಟದ್ದೆಂದು ತೀರ್ಮಾನಿಸಲೇ? ಅಥವಾ ನಿಜಕ್ಕೂ ಓದುವಂತೆ ಇಲ್ಲವೋ...?
ಅವರು ಹೇಳಿದಂತೆಯೇ ತೆಗೆದುಕೊಳ್ಳೋಣ!
ಈ ಒಂದು ಕಥೆಯ ಕಥಾ ಹಂದರವೇ ಶಥಿಲವಾಗಿರಬೇಕು! ಪಾತ್ರಪೋಷಣೆ.....? ಗೊಂದಲ ಹುಟ್ಟಿಸುವಂತೆ ಇದ್ದಿರಬೇಕು! ಶೈಲಿ..., ಯೋಚಿಸಬೇಕಾದ ವಿಷಯ!
ಒಂದೋ ಸಾಧಾರಣ ಓದುಗರಿಗೆ ಎಟುಕದ ಅವಸ್ಥೆಗೆ ನನ್ನ ಶೈಲಿ ಬದಲಾಗಿರಬೇಕು- ಅಥವಾ- ಮೇಧಾವಿಗಳಿಗೆ ಅಲ್ಪ ಅನ್ನಿಸುವ ಶೈಲಿಯಾಗಿರಬೇಕು! ಕಮೆಂಟ್ ಮಾಡಿದವರನ್ನು ನೋಡಿದರೆ- ಸಾಧಾರಣ ಓದುಗ ಅನ್ನುವಂತಿಲ್ಲ!
ಇನ್ನೇನು....?
ಇಲ್ಲೊಂದು ವಿಷಯವಿದೆ! ಒಂದು ಕಥೆ ಓದಿದರು! ತೆರೆದ ಮನದಿಂದ ಅಭಿಪ್ರಾಯ ಹೇಳಿದರು! ಮತ್ತೊಂದೆರಡು ಕಥೆಯನ್ನೂ ಓದಿ ಅಭಿಪ್ರಾಯ ಹೇಳಬಹುದಿತ್ತು! ಅಥವಾ ಪರ್ಸನಲ್ ಆಗಿ ಉಳಿದ ವಿವರಣೆಗಳನ್ನು ಕೊಡಬಹುದಿತ್ತು!
ಅವರು ಮಾಡಿದ್ದು..., ಅವರ ಕಮೆಂಟ್ ಹೇಳಿ ಮೌನವಾಗಿದ್ದು! ಮುಂದಿನ ನನ್ನ ಯಾವ ಪ್ರಶ್ನೆಗೂ ಉತ್ತರಿಸುವ ಸೌಜನ್ಯವನ್ನೇ ತೋರಿಸಲಿಲ್ಲ! ಬೇರೆ ಕಥೆ ಓದಿದ್ದೀರ? ಇದನ್ನೇ ಹೇಗೆ ಬರೆದಿದ್ದರೆ ಒಳಿತಿತ್ತು- ಪ್ರಶ್ನೆಗಳು ಮಾತ್ರ ಉಳಿದವು!!
ಅವರ ಕಮೆಂಟ್ ನೋಡಿದವರಿಗೆ ಅದೊಂದು ನೆಗೆಟಿವ್ ಫೀಡ್ ಆಗುವುದಿಲ್ಲವೇ- ಇವನು ಬರೆಯುವ ಎಲ್ಲಾ ಕಥೆಯೂ ಹೀಗೆಯೇ ಇರಬಹುದೇನೋ ಎಂದು?
ಏನೋಪ್ಪ!
ವಿಶ್ಲೇಷಣೆ ಮುಂದುವರೆದರೆ..., ನನ್ನ ಅಹಂಕಾರಕ್ಕೆ ನಾನಿದನ್ನು ತೆಗೆದುಕೊಳ್ಳುವುದು ಹೇಗೆಂದರೆ....,
ನನ್ನ ಇತರೆ ಕಥೆಗಳನ್ನೂ ಅವರು ಓದಿರುತ್ತಾರೆ! ಇಷ್ಟವಾಗಿರುತ್ತದೆ! ಅಲ್ಲಿ ಎಲ್ಲರ ಕಮೆಂಟ್‌ಗಳನ್ನು ನೋಡಿರುತ್ತಾರೆ! ಹುಡುಗ ಬೆಳೆಯುತ್ತಿದ್ದಾನೆ! ಅವನಿಗೆ ಅಹಂಕಾರ ತಲೆಗೆ ಹಿಡಿಯದಿರಲು ಒಂದು ಪೆಟ್ಟು ಕೊಡಬೇಕು- ಅನ್ನೋ ಉದ್ದೇಶದಿಂದ ತೆರೆದ ಮನದ ಅಭಿಪ್ರಾಯ- ಅನ್ನುವಂತೆ ಹೇಳಿರುತ್ತಾರೆ ಹೊರತು- ಕಥೆ ಕೆಟ್ಟದ್ದಾಗಿದ್ದರಿಂದ ಅಲ್ಲ!
ಹಾಗೆಂದು ಬೇರೆ ಯಾರೂ ನನ್ನ ಕಥೆಯನ್ನು ವಿಮರ್ಶೆ ಮಾಡಿಲ್ಲವೇ...? ಅಭಿಪ್ರಾಯ ಹೇಳಿಲ್ಲವೇ....? ಬೈದಿಲ್ಲವೇ...?!
ಮಾಡಿದ್ದಾರೆ! ಆದರದು ಕಥೆಯಲ್ಲಿನ ವಿಷಯಕ್ಕಾಗಿ! ಅರಗಿಸಿಕೊಳ್ಳಲಾಗದ ವಾಸ್ತವಕ್ಕಾಗಿ! ಕಥೆಯನ್ನು ಕಥೆಯಂತೆ ತೆಗೆದುಕೊಳ್ಳಲಾಗದೆ.... ಜೀವನಕ್ಕೆ ಅನ್ವಯಿಸಿಕೊಂಡಾಗ- ಇಷ್ಟು ಕೆಟ್ಟ ವಾಸ್ತವವನ್ನು ಬರೆದಿರುವರಲ್ಲಾ..., ಅನ್ನುವ ಭಾವ!
ಅದು ಕಥೆಗಾರನ ಗೆಲುವು! ಆ ಅಭಿಪ್ರಾಯ ಹೇಳಿದವರೆಲ್ಲಾ ನನ್ನ ಅತಿ ಆತ್ಮೀಯರಾಗಿದ್ದಾರೆಕೂಡ!!
ಒಂದೇ ಒಂದು ನೆಗೆಟಿವ್ ಅಭಿಪ್ರಾಯಕ್ಕೆ ಯಾಕಿಷ್ಟು ಮಾನಸಿಕ ವಿಪ್ಲವ? ಕಥೆಯಬಗ್ಗೆ ಹೇಳಿದ್ದರೆ ಈ ವಿಪ್ಲವ ಇರುತ್ತಿರಲಿಲ್ಲವೋ ಏನೋ...!
ಅವರು ಹೇಳಿದ್ದು- ಕಥಾ ಹಂದರ ಶಿಥಿಲ, ಪಾತ್ರ ಪೋಷಣೆ ಅಷ್ಟಕ್ಕಷ್ಟೆ, ಬರವಣಿಗೆಯ ಶೈಲಿ ಅನಾಕರ್ಷಕ!!
ಛೇ! ನನ್ನ ಅವಸ್ಥೆಗೆ ನನಗೇ ನಗು ಬಂತು! ಇನ್ನೂ ಪಕ್ವವಾಗಬೇಕು ನಾನು!
ಕಥೆಯೊಂದಕ್ಕೆ ಯಾರೋ ಒಬ್ಬರ ಅಭಿಪ್ರಾಯ ಹೀಗಾಯಿತಲ್ಲಾ ಎಂದು ಯೋಚಿಸುತ್ತಾ ಕುಳಿತರೆ...,
ಪ್ರಕಟಣೆಗೆ ಹೋಗಿರುವ ಎರಡು ಪುಸ್ತಕಗಳ ಬಗ್ಗೆ ಯೋಚಿಸುವವನಾರು?
ಅಲ್ಲದೆ..., ಒಂದೇ ಒಂದು ಕಥೆಗೆ..., ಕೇವಲ ಒಬ್ಬರೇ ಒಬ್ಬ ವ್ಯಕ್ತಿಯ ನೆಗೆಟಿವ್ ಅಭಿಪ್ರಾಯಕ್ಕೆ ಇಷ್ಟುಮಟ್ಟಿಗೆ ಮಹತ್ವ ಕೊಟ್ಟು ಯೋಚಿಸುತ್ತಾ ಕುಳಿತರೆ..., ಇತರ ಕಥೆಗಳಿಗೆ ದೊರೆತ ಮನ್ನಣೆ, ಅದ್ಭುತ ಪ್ರತಿಕ್ರಿಯೆಗಳಿಗೆ ಅವಮಾನ ಮಾಡಿದ ಹಾಗಾಗುವುದಿಲ್ಲವೇ...?
ಆದ್ದರಿಂದ..., ಕಥೆಗಾರನಿಗೆ ಪ್ರಸಕ್ತಿಯಿಲ್ಲ!! ಕಥೆ ಇಷ್ಟವಾದರೆ ಓದುತ್ತಾರೆ- ಇಲ್ಲದಿದ್ದರೆ ಇಲ್ಲ!
ಕಥೆಗಾರ...,
ಬರೆಯುತ್ತಲೇ ಇರಬೇಕು!
ಬರೆಯುತ್ತಲೇ ಇರಿ. ನಿಲ್ಲಿಸಬೇಡಿ. ನಿಮ್ಮಷ್ಟಕ್ಕೆ ಪಕ್ವವಾಗಿಬಿಡುತ್ತೀರಿ 👍🏻
ReplyDelete