ನಿಸ್ಸಹಾಯಕತೆ!
ನಿಸ್ಸಹಾಯಕತೆ ಇದೇ ಕಡೆಯ ದಿನ - ಕೊನೆಯ ತೀರುಮಾನ ! ಸಣ್ಣ ಆಸೆಯಿತ್ತು - ಉಳಿಸಿಕೊಳ್ಳುತ್ತಾಳೆಂದು ! ಅವಳನ್ನು ತಪ್ಪು ಹೇಳಲೇ ಅಥವಾ ನನ್ನ ನಿಸ್ಸಹಾಯಕತೆಯನ್ನು ಒಪ್ಪಿಕೋ ಎಂದು ಬೇಡಲೆ ? ಹೇಗೆ ಸಾಧ್ಯ ? ಅವಳೇ ತನ್ನ ನಿಸ್ಸಹಾಯಕತೆಯನ್ನು ನೀನೇ ಒಪ್ಪಿಕೋ ಎಂದಮೇಲೆ ? ಆದರೆ ಅವಳ ಪ್ರಕಾರ ಅವಳದ್ದು ನಿಸ್ಸಹಾಯಕತೆ - ನನ್ನದು ಕೈಯ್ಯಲ್ಲಾಗದ ತನ ! ೧ “ ಐ ಲವ್‌ಯು !” ಎಂದೆ . ನಿಟ್ಟಿಸಿ ನೋಡಿದಳು . ಕಣ್ಣುಗಳಲ್ಲಿ ಹೊಳಪು ! ನನಗೆ ನಂಬಿಕೆಯಿತ್ತು ಅವಳು ಒಪ್ಪಿಕೊಳ್ಳುತ್ತಾಳೆಂದು ! ರಾಂಕ್ ಸ್ಟೂಡೆಂಟ್ - ನೋಡಲೂ ಪರವಾಗಿಲ್ಲ ! ಒಪ್ಪಿಕೊಳ್ಳದಿರಲು ಕಾರಣವೇನೂ ಇರಲಿಲ್ಲ ! “ ಲವ್‌ಯೂ ಟೂ !” ಎಂದಳು . ದಿನಗಳುರುಳಿದವು ! ಕಾಲೇಜು ಜೀವನ ಮುಗಿಯಿತು ! ೨ “ ಐ ಲವ್‌ಯು !” ಎಂದೆ - ಎಂದಿನಂತೆ . ಅವಳನ್ನು ಕಂಡಾಗಲೆಲ್ಲಾ ಪ್ರೇಮ ಉಕ್ಕುತ್ತದೆ .... “ ನೀನು ಬೇರೆ ಹೆಣ್ಣುಮಕ್ಕಳನ್ನು ಯಾಕೆ ನೋಡುತ್ತೀಯ ?” ಎಂದಳು . “ ನೀನು ಬೇರೆ ಹುಡುಗರನ್ನು ನೋಡುತ್ತೀಯಲ್ಲ ?” “ ಅದು ಬೇರೆ ಇದು ಬೇರೆ !” ಎಂದಳು . “ ಹೇಗೆ ? ಅದೊಂದು ಆಯಾಚಿತ ವರ್ತನೆ ಅಷ್ಟೆ ಹೊರತು - ಗಂಡು ಹೆಣ್ಣನ್ನು ಹೆಣ್ಣು ಗಂಡನ್ನು ನೋಡುವುದು ತಪ್ಪೇ !” “ ಇಲ್ಲ ... ನೀನು ಬದಲಾಗುತ್ತಿದ್ದೀಯ ! ನಿನಗೆ ನಾನು ಸೆಟ್ ಆಗುವುದಿಲ್ಲ !” ಎಂದಳು . ೩ “ ಐ ಲವ್‌ಯು !” ಎಂದೆ - ಅವಳ ಕಣ್ಣಿನಾಳಕ್ಕೆ ದಿಟ್ಟಿಸಿ ! “ ನಿನಗೆ ನಿನ್ನ ಗುರಿಯೇ ಹೆಚ್ಚೆ ?...