ನಿಸ್ಸಹಾಯಕತೆ!
ನಿಸ್ಸಹಾಯಕತೆ
ಇದೇ ಕಡೆಯ ದಿನ- ಕೊನೆಯ ತೀರುಮಾನ!
ಸಣ್ಣ ಆಸೆಯಿತ್ತು- ಉಳಿಸಿಕೊಳ್ಳುತ್ತಾಳೆಂದು! ಅವಳನ್ನು ತಪ್ಪು ಹೇಳಲೇ ಅಥವಾ ನನ್ನ ನಿಸ್ಸಹಾಯಕತೆಯನ್ನು ಒಪ್ಪಿಕೋ ಎಂದು ಬೇಡಲೆ?
ಹೇಗೆ ಸಾಧ್ಯ? ಅವಳೇ ತನ್ನ ನಿಸ್ಸಹಾಯಕತೆಯನ್ನು ನೀನೇ ಒಪ್ಪಿಕೋ ಎಂದಮೇಲೆ?
ಆದರೆ ಅವಳ ಪ್ರಕಾರ ಅವಳದ್ದು ನಿಸ್ಸಹಾಯಕತೆ- ನನ್ನದು ಕೈಯ್ಯಲ್ಲಾಗದ ತನ!
೧
“ಐ ಲವ್‌ಯು!” ಎಂದೆ.
ನಿಟ್ಟಿಸಿ ನೋಡಿದಳು. ಕಣ್ಣುಗಳಲ್ಲಿ ಹೊಳಪು! ನನಗೆ ನಂಬಿಕೆಯಿತ್ತು ಅವಳು ಒಪ್ಪಿಕೊಳ್ಳುತ್ತಾಳೆಂದು! ರಾಂಕ್ ಸ್ಟೂಡೆಂಟ್- ನೋಡಲೂ ಪರವಾಗಿಲ್ಲ! ಒಪ್ಪಿಕೊಳ್ಳದಿರಲು ಕಾರಣವೇನೂ ಇರಲಿಲ್ಲ!
“ಲವ್‌ಯೂ ಟೂ!” ಎಂದಳು.
ದಿನಗಳುರುಳಿದವು! ಕಾಲೇಜು ಜೀವನ ಮುಗಿಯಿತು!
೨
“ಐ ಲವ್‌ಯು!” ಎಂದೆ- ಎಂದಿನಂತೆ. ಅವಳನ್ನು ಕಂಡಾಗಲೆಲ್ಲಾ ಪ್ರೇಮ ಉಕ್ಕುತ್ತದೆ....
“ನೀನು ಬೇರೆ ಹೆಣ್ಣುಮಕ್ಕಳನ್ನು ಯಾಕೆ ನೋಡುತ್ತೀಯ?” ಎಂದಳು.
“ನೀನು ಬೇರೆ ಹುಡುಗರನ್ನು ನೋಡುತ್ತೀಯಲ್ಲ?”
“ಅದು ಬೇರೆ ಇದು ಬೇರೆ!” ಎಂದಳು.
“ಹೇಗೆ? ಅದೊಂದು ಆಯಾಚಿತ ವರ್ತನೆ ಅಷ್ಟೆ ಹೊರತು- ಗಂಡು ಹೆಣ್ಣನ್ನು ಹೆಣ್ಣು ಗಂಡನ್ನು ನೋಡುವುದು ತಪ್ಪೇ!”
“ಇಲ್ಲ... ನೀನು ಬದಲಾಗುತ್ತಿದ್ದೀಯ! ನಿನಗೆ ನಾನು ಸೆಟ್ ಆಗುವುದಿಲ್ಲ!” ಎಂದಳು.
೩
“ಐ ಲವ್‌ಯು!” ಎಂದೆ- ಅವಳ ಕಣ್ಣಿನಾಳಕ್ಕೆ ದಿಟ್ಟಿಸಿ!
“ನಿನಗೆ ನಿನ್ನ ಗುರಿಯೇ ಹೆಚ್ಚೆ? ಕೆಲಸಕ್ಕೆ ಹೋಗುವುದಿಲ್ಲವೇ?” ಎಂದಳು.
“ಕೆಲಸ ಮಾಡುತ್ತಿದ್ದೇನಲ್ಲಾ? ಗುರಿ ಎಂದು ಇಟ್ಟುಕೊಂಡಮೇಲೆ ಅದು ಹೆಚ್ಚಲ್ಲದಾಗುತ್ತದೆಯೇ....?” ಎಂದೆ.
“ಇದೆಲ್ಲಾ ಒಂದು ಕೆಲಸವಾ....? ನಿನಗೆ ನನಗಿಂತ ನಿನ್ನ ಗುರಿಯೇ ಮುಖ್ಯ!” ಎಂದಳು.
೪
“ಐ ಲವ್‌ಯು!” ಎಂದೆ- ಮುಂಚಿನಂತೆ ಅವಳ ಹೃದಯಕ್ಕೆ ತಲುಪುತ್ತಿಲ್ಲ ಅನ್ನುವ ಅರಿವಿನೊಂದಿಗೆ....!
“ಮನೆಯಲ್ಲಿ ಅಪ್ಪ ಅಮ್ಮ ಗಂಡು ನೋಡಿದ್ದಾರೆ!” ಎಂದಳು.
“ನಾನು ಮನೆಯವರೊಂದಿಗೆ ಬಂದು ಮಾತನಾಡಲೇ?” ಎಂದೆ.
“ಒಳ್ಳೆ ಕೆಲಸದಲ್ಲಿದ್ದಾನೆ! ಕೈತುಂಬಾ ಸಂಬಳ!” ಎಂದಳು.
೫
ಅವಳ ತೀರಾ ಸಮೀಪಕ್ಕೆ ಹೋದೆ. ಕಣ್ಣಿನಾಳಕ್ಕೆ ದಿಟ್ಟಿಸಿ ನೋಡಿದೆ. ಹೃದಯದಿಂದ ಒದ್ದುಕೊಂಡು ಬಂದ ಮಾತು- ಇನ್ನೇನು ಹೇಳಬೇಕು.....,
“ಐಯಾಂ ಸಾರಿ!” ಎಂದಳು.
ಗಂಟಲು ಸ್ಥಬ್ಧವಾಯಿತು! ಹೇಳಬೇಕೆಂದುಕೊಂಡರೂ ಹೊರಬರದಂತೆ.....
“ನೀನು ನನಗಾಗಿ ಏನೂ ಮಾಡುತ್ತಿಲ್ಲ! ಬರೀ ಪ್ರೇಮ ಇಟ್ಟುಕೊಂಡು ಏನು ಮಾಡೋದು! ಅಪ್ಪ ಅಮ್ಮ ನೋಡಿದವನನ್ನೇ ಮದುವೆಯಾಗುತ್ತೇನೆ!” ಎಂದಳು.
“ಇನ್ನೇನು ಗುರಿ ತಲುಪಲಿದ್ದೇನೆ- ನಿನಗೂ ಗೊತ್ತು! ಮನೆಯವರೊಂದಿಗೆ ಮಾತನಾಡುತ್ತೇನೆಂದರೆ ನೀನೇ ಬೇಡ ಎಂದೆ....” ನನ್ನ ಮಾತುಗಳು ಮುಗಿಯಲಿಲ್ಲ...,
“ಅದೆಲ್ಲಾ ಗೊತ್ತಿಲ್ಲ! ದಯವಿಟ್ಟು ಇನ್ನುಮುಂದೆ ಲವ್‌ಯು ಲವ್‌ಯು ಅಂತ ಪ್ರಾಣ ಹಿಂಡಬೇಡ...! ಗುಡ್‌ಬೈ!” ಎಂದು ಹೇಳಿ ಹೊರಟು ಹೋದಳು!
ಅವಳೆಡೆಗೆ ಓಡಬೇಕೆಂಬ ತುಡಿತ.... ದೇಹ ಸಹಕರಿಸಲಿಲ್ಲ- ಆತ್ಮ ಅವಳಿಗೆ ಕಾಣಿಸಲಿಲ್ಲ.....!!
ಕಥೆ ಅಲ್ಲ ನಿಜ ಜೀವನದಲ್ಲೂ ಎಷ್ಟೋ ಮಂದಿಯ ಬದುಕಿನಲ್ಲಿ ನಡೆವ ವ್ಯಥೆ!!.
ReplyDeleteವಾಸ್ತವದ ನಿರೂಪಣೆ ಚಂದ.