ಜ್ಞಾನಾಜ್ಞಾನ
ಜ್ಞಾನಾಜ್ಞಾನ!
ಏನನ್ನೂ ತಿಳಿದುಕೊಳ್ಳದಿರುವುದು ಅಜ್ಞಾನವಲ್ಲ! ತಿಳಿದುಕೊಳ್ಳಬೇಕೆಂಬ ಕುತೂಹಲವೇ ಇಲ್ಲದಿರುವುದು, ತಾನು ತಿಳಿದುಕೊಂಡಿರಿವುದೇ ಸರಿ ಅನ್ನುವ ಅಹಂ- ಅಜ್ಞಾನ!
ಜ್ಞಾನಿಯಾಗುವುದರಲ್ಲಿ ಎರಡು ವಿಧ!
ಒಂದು ಹನುಮಂತನಂತೆ! ಈತನಿಗೆ ಸಂಶಯಗಳಿಲ್ಲ! ಗುರುಗಳು- ಹಿರಿಯರು ಹೇಳಿದ್ದನ್ನು ಹಾಗೆಯೇ ಒಪ್ಪಿಕೊಂಡು ಬಿಡುತ್ತಾನೆ! ನಂತರ ಆತ್ಮವಿಮರ್ಶೆಯ ಮೂಲಕ ಅದನ್ನು ಸ್ಥಿರೀಕರಿಸುತ್ತಾನೆ!
ಎರಡು ಅರ್ಜುನನಂತೆ! ಈತನಿಗೆ ಸಂಶಯಗಳೋ ಸಂಶಯಗಳು! ಈತನ ಗೋಳು ಮುಗಿಯುವುದಿಲ್ಲ! ಶ್ರೀಕೃಷ್ಣ ಪರಮಾತ್ಮನಂತಾ ಪುಣ್ಯಾತ್ಮ ಸಿಕ್ಕಿದ್ದು ಈತನ ಪೂರ್ವಜನ್ಮ ಸುಕೃತ!
ನಾನು ಅರ್ಜುನನಂತೆ! ನನ್ನ ಗೋಳು ತಡೆದುಕೊಳ್ಳುವುದು ಸ್ವಲ್ಪ ಕಷ್ಟ! ಆದರೆ ಶ್ರೀಕೃಷ್ಣ ಪರಮಾತ್ಮನಂತಾ ಹಲವು ಜೀವಗಳು ದೊರಕಿದ್ದು ನನ್ನ ಪುಣ್ಯ!
ಪ್ರಸ್ತುತಾ ಒಂದು ಗೊಂದಲದಲ್ಲಿದ್ದೇನೆ! ಗೊಂದಲಕ್ಕೆ ಕಾರಣ ನನ್ನದೇ ಆದ ನಂಬಿಕೆ!
ಪುಸ್ತಕವೊಂದನ್ನು ಓದಿದೆ! ಆಶ್ಚರ್ಯವಾಯಿತು! ಇಷ್ಟು ಮಟ್ಟಿನ ನಿಯತ್ತಿನಿಂದ ಪುಸ್ತಕ ಬರೆಯಬಹುದೇ ಅನ್ನುವ ಆಶ್ಚರ್ಯವದು! ಯಾವುದೇ ಲೇಖಕನಿಗಾದರೂ ಯಾವುದೋ ಒಂದು ಪಾತ್ರದಕಡೆಗೆ ಒಲವು ಹೆಚ್ಚಿರುತ್ತದೆ! ಆದ್ದರಿಂದ ಸಣ್ಣಪುಟ್ಟ ಕೊರತೆಗಳನ್ನು ಮುಚ್ಚಿಟ್ಟು ಆ ಪಾತ್ರವನ್ನು ವೈಭವೀಕರಿಸುತ್ತಾನೆ-ತ್ತೇನೆ! ಆದರೆ ಈ ಪುಸ್ತಕದಲ್ಲಿ ಹಾಗಿಲ್ಲ. ನಾಯಕನಾದರೂ ತನ್ನ ಕೊರತೆಯನ್ನು ಒಪ್ಪಿಕೊಳ್ಳುವಂತೆ- ಆ ಪುಸ್ತಕವೊಂದು ಅದ್ಭುತ ಅನುಭವ ನನಗೆ! ಅಭಿಪ್ರಾಯ ಬರೆಯದೇ ಇರಲಾರದಾದೆ! ಪುಸ್ತಕದಲ್ಲಿನ ವಿಷಯವನ್ನೋ- ಲೇಖರ ಬಗ್ಗೆಯೋ ಬರೆಯದೆ, ಆ ಪುಸ್ತಕ ಓದಿದ್ದರಿಂದ ನನ್ನ ಮನಸ್ಸಿನ ಮೇಲಾದ ಪರಿಣಾಮವನ್ನಿಟ್ಟು ಅಭಿಪ್ರಾಯ ಬರೆದೆ.
ಆ ಅಭಿಪ್ರಾಯವನ್ನು ಓದಿ ತಾಯಿಯೊಬ್ಬರು ಸಲಹೆಯೊಂದನ್ನು ಕೊಟ್ಟರು!
“ಮನು, ನನ್ನದೊಂದು ಸಲಹೆ. ಯಾವುದೇ ಪುಸ್ತಕ ಅಥವಾ ಲೇಖನದ ಬಗ್ಗೆ ಬರೆಯುವಾಗ ಭಾವಾವೇಶಕ್ಕೆ ಒಳಗಾಗಿ ಬರೆದರೆ ಪುಸ್ತಕದ ಬಗ್ಗೆ ತಿಳಿಯುವುದಕ್ಕಿಂತ ಅದು ನಿಮ್ಮಲ್ಲಿ ಮೂಡಿಸಿದ ಭಾವನೆ ಮಾತ್ರ ವೇದ್ಯವಾಗುತ್ತದೆ. ಕಥಾವಸ್ತು, ರಚನಾತ್ಮಕತೆ, ಭಿನ್ನತೆ, ಭಾಷೆ- ಇನ್ನಿತರ ಯಾವುದೇ ಗುಣದ ಬಗ್ಗೆಯೂ ತಿಳಿಯಲಾರದು. ಪುಸ್ತಕ ಮುಗಿಸಿದಾಕ್ಷಣ ಹೊಮ್ಮುವ ಭಾವನೆಗಳು ತಿಳಿಯಾಗುವವರೆಗೂ ಸಮಯ ಕೊಟ್ಟು ನಂತರ ಪುಸ್ತಕದ ಬಗ್ಗೆ ಯೋಚಿಸಿ ಬರೆಯಿರಿ! ವಿಮರ್ಶೆ ನಕಾರಾತ್ಮಕವಾಗಬೇಕೆಂದೇ ಇಲ್ಲ. ಸಕಾರಾತ್ಮಕ ವಿಶ್ಲೇಷಣೆಯೂ ಆಗಬಹುದು. ಒಂದು ಉದಾಹರಣೆ: ನಿಮ್ಮ ಲೇಖನವೊಂದು 'ಆಹಾ! ಎಷ್ಟು ಚೆನ್ನಾಗಿದೆ!' ಎಂಬ ಉದ್ಗಾರ ತೆಗೆಯುವುದನ್ನು ಮಾತ್ರ ಬಯಸುವಿರೋ? ಅಥವಾ ಅಲ್ಲಿ ಅಂಥಾದ್ದು ಚೆನ್ನಾಗಿರುವುದು ಏನಿತ್ತೆಂದು ತಿಳಿಯಲು ಬಯಸುವಿರೋ? ಅಂತೆಯೇ... ಪ್ರತಿಯೊಬ್ಬ ಲೇಖಕನೂ ತನ್ನ ಲೇಖನ ಹೊರಡಿಸುವ ಉದ್ಗಾರದೊಡನೆ ಆ ಉದ್ಗಾರ ಏಕೆ ಹೊರಟಿತೆಂದು ತಿಳಿಯಲು ಇಚ್ಛಿಸುತ್ತಾನೆ. ನೀವು ಕಥಾವಸ್ತುವೋ, ಕಥಾ ಬೆಳವಣಿಗೆಯೋ, ಪಾತ್ರ ಬೆಳವಣಿಗೆಯೋ, ಭಾಷೆಯೋ, ಆದಿಯೋ, ಅಂತ್ಯವೋ, ತಿರುವುಗಳೋ ಇತ್ಯಾದಿ ಇತ್ಯಾದಿ ಇವುಗಳ ಬಗ್ಗೆ ಬರೆದಾಗ ಸಾರ್ಥಕ ಭಾವ ಅವನಲ್ಲಿ ಮೂಡುತ್ತದೆ. ಮುಂದಿನ ಬಾರಿ ಪುಟ್ಟದಾಗಿಯಾದರೂ ಲೇಖನವನ್ನು ವಿಶ್ಲೇಷಿಸಿ ಬರೆಯಿರಿ.”
ಈ ವಿವರಣೆ ನನ್ನ ತಲೆಗೆ ಹೋಗಲು ನಾನು ಹನುಮಂತನಲ್ಲ! ಅರ್ಜುನ!
“ಕೆಲವೊಮ್ಮೆ- ಪುಸ್ತಕವನ್ನು ಓದುವಾಗ ಆ ಪುಸ್ತಕದಲ್ಲಿರುವ ವಿಷಯದ ಬಗ್ಗೆ ಯಾವ ಅರಿವೂ ಇಲ್ಲದೆ ಓದುವುದೇ ಚಂದವೇನೋ.... ಅಂದರೆ ಪುಸ್ತಕದಲ್ಲಿ ಏನಿದೆ ಅನ್ನುವುದನ್ನು ಪುಸ್ತಕ ಓದಿಯೇ ಅರಿಯಲಿ ಅನ್ನುವ ಭಾವ.... ಆದ್ದರಿಂದ ಪುಸ್ತಕ ಓದಿದಾಗಿನ ಭಾವವನ್ನೂ ಪುಸ್ತಕದಲ್ಲಿ ಏನೋ ಇದೆ ಅನ್ನುವ ಭಾವವನ್ನೂ ಹೇಳಿದ್ದೇನೆ... ಕೆಲವೊಮ್ಮೆ ಮನೂಗಾಗಿರೋ ಅನುಭವ ಅದು.... ಯಾರೋ ಪುಸ್ತಕದಬಗ್ಗೆ- ಅದರ ತಿರುಳಿನ ಬಗ್ಗೆ- ಬರೆದಾಗ ಆ ಪುಸ್ತಕ ಓದುವ ಆಸಕ್ತಿ ಹೊರಟು ಹೋಗುತ್ತದೆ.... ಓ ಇಷ್ಟೇನ ವಿಷಯ ಅನ್ನಿಸಿಬಿಡುತ್ತದೆ.... ಆದ್ದರಿಂದ ಲೇಖಕನಿಗೆ ಹೇಳಬೇಕಾಗಿರುವುದನ್ನು ನೇರವಾಗಿ ಲೇಖಕನಿಗೆ ಹೇಳುವುದು- ಪುಸ್ತಕ ಓದಿದಾಗಿನ ಅನುಭವ ಮಾತ್ರ ಪಬ್ಲಿಕ್ ಆಗಿ ಹೇಳುವುದು ಅನ್ನುವ ತೀರ್ಮಾನ.... ಯೋಚಿಸಿನೋಡಿ- ಕಥಾವಸ್ತು, ಕಥಾಬೆಳವಣಿಗೆ, ಆದಿ ಅಂತ್ಯ ಹೇಳಿದರೆ ಓದುಗರಿಗೆ ಪುಸ್ತಕ ಓದುವ "ಕಷ್ಟ" ತಪ್ಪುತ್ತದೆ ಹೊರತು ಓದಬೇಕೆಂಬ ಉತ್ಸಾಹವೇ ಬರಬೇಕೆಂದಿಲ್ಲ.... ಇದು ಮನುವಿನ ಪರ್ಸನಲ್ ಅನುಭವ... ಪುಸ್ತಕದ ಬಗ್ಗೆ ಪೂರ್ತಿ ಅರಿವು ನೀಡಿ ಕೊಟ್ಟ ಪುಸ್ತಕಕ್ಕಿಂತ, ಚೆನ್ನಾಗಿದೆ- ಸಕತ್ತಾಗಿದೆ ಎಂದು ಹೇಳಿ ಕೊಟ್ಟ ಪುಸ್ತಕ ಹೆಚ್ಚು ಓದಲ್ಪಡುತ್ತದೆ...”
ಅವರೇನೂ ಉತ್ತರ ಕೊಡಲಿಲ್ಲ! ಇನ್ನು ಏನೋ ಹೇಳಲು ಹೋಗಿ- ಯಾಕೆ ಬೇಕು ಅನ್ನುವ ಭಾವವೂ ಇರಬಹುದು! ಅದು ನಿಜಕೂಡ! ನನ್ನ ಮನಸ್ಸಿಗೆ ಒಪ್ಪುವ ಉತ್ತರ ಸಿಗುವವರೆಗೆ ಲಂಗುಲಗಾಮಿಲ್ಲದೆ ಪ್ರಶ್ನೆಮಾಡುವವ ನಾನು! ನನಗೆ ಪಕ್ವತೆಯಿಲ್ಲವೆಂದು ಅವರಿಗಿಲ್ಲವೇ...?
ಅವರ ಮೌನ ನನ್ನನ್ನು ಯೋಚಿಸುವಂತೆ ಮಾಡಿತು! ಉತ್ತರ ಸಿಗಲು ನಾನು ಹನುಮಂತನಲ್ಲ! ಅವರ ವಿವರಣೆಯಲ್ಲಿ ಏನೋ ಇದೆ! ನನ್ನ ದೃಷ್ಟಿಕೋನಕ್ಕೆ ಎಟುಕದ ಏನೋ.... ನಾ ಅರ್ಜುನ! ಉತ್ತರ ಬೇಕು! ಅವರ ಇನ್‌ಬಾಕ್ಸಿಗೆ ಇಣುಕಿದೆ!
“ಮನುವಿನ ಗೊಂದಲ ಬಗೆಹರಿಸೋಕೆ ನೀವೇ ಸರಿ! ಇದುವರೆಗೂ ಪುಸ್ತಕಗಳ ವಿಮರ್ಶೆ ಮನು ಬರೆದಿಲ್ಲ... ಇನ್ನು ಮುಂದೆಯೂ ಬರೆಯುವ ಉದ್ದೇಶವಿಲ್ಲ... ವಿಮರ್ಶೆ ಬರೆಯುವಷ್ಟು ಮನು ಪಕ್ವನಲ್ಲ ಅನ್ನುವುದು ಒಂದು ಕಾರಣವಾದರೆ- ಕೆಲವೊಂದು ವಿಮರ್ಶೆಗಳನ್ನು ಓದಿ ಮನುವಿಗಾದ ಭಾವವೇನು ಅನ್ನುವುದು ಎರಡನೆಯ ಕಾರಣ! ಮನುವಿನ ಮೊದಲ ಗೊಂದಲ... ಒಂದು ಪುಸ್ತಕದ ವಿಮರ್ಶೆ ಯಾಕೆ ಬರೆಯಬೇಕು? ಎಷ್ಟೋ ಸಾರಿ ಪುಸ್ತಕ ಓದುವ ಮೊದಲೇ ವಿಮರ್ಶೆ ಓದಿದರೆ ಪೂರ್ವಾದೃಷ್ಟಿಯಿಂದಲೋ ಏನೋ ಆ ಪುಸ್ತಕದ ನಿಜವಾದ ಅನುಭೂತಿ ದೊರೆಯುವುದಿಲ್ಲ. ಮತ್ತೆಷ್ಟೋ ಸಾರಿ ಪುಸ್ತಕದ ಪರಿಚಯ- ಅಂದರೆ ಅದರಲ್ಲೇನಿದೆ ಎಂದು ತಿಳಿದ ನಂತರ ಪುಸ್ತಕ ಓದಬೇಕು ಅನ್ನಿಸುವುದಿಲ್ಲ! ಇದು ಮನುವಿನ ಅನುಭವ... ಆದ್ದರಿಂದ ಒಂದು ಪುಸ್ತಕವನ್ನು ಓದಿ- ಏನಿದೆ ಎಂದು ಹೇಳದೆ- ಇದರಲ್ಲೇನೋ ಇದೆ ಅನ್ನುವ ಭಾವವನ್ನು ಉಳಿಸುವುದು ಒಳ್ಳೆಯದು ಅನ್ನುವುದು ಮನುವಿನ ಅಭಿಪ್ರಾಯ... ಕೆಲವೊಮ್ಮೆ, ಪುಸ್ತಕ ಚೆನ್ನಾಗಿಲ್ಲ- ಪರವಾಗಿಲ್ಲ- ಚೆನ್ನಾಗಿದೆ- ತುಂಬಾ ಚೆನ್ನಾಗಿದೆ ಅನ್ನುವುದರ ಮೇಲೆ ನಾವು ಪುಸ್ತಕವನ್ನು ಓದುವುದು ಅವಲಂಬಿಸಿರುತ್ತದೆ. ಪುಸ್ತಕದಲ್ಲಿ ಏನಿದೆ ಎಂದು ತಿಳಿದನಂತರ- ಓದುವ ಆಸಕ್ತಿ ಉಳಿಯಬೇಕೆಂದಿಲ್ಲ... ಇನ್ನು ಎರಡನೆಯ ಗೊಂದಲ... ವಿಮರ್ಶೆ ಓದಿದ ನಂತರ ನಿಜವಾಗಿಯೂ ಪುಸ್ತಕ ಓದಬೇಕು ಅನ್ನಿಸುತ್ತದೇನೋ.... ಮನೂಗೆ ಒಬ್ಬನಿಗೆ ಮಾತ್ರ ಹಾಗೆ ಅನ್ನಿಸದಿರಬಹದು! ಸಾಮಾನ್ಯವಾಗಿ- ವಿಮರ್ಶೆ ಪುಸ್ತಕ ಓದಲು ಪ್ರೇರಣೆ ನೀಡುತ್ತದೇನೋ...? ವಿಮರ್ಶೆ ಮಾಡುವುದರಿಂದ- ಪುಸ್ತಕ ಓದಲು ಸಾಧ್ಯವಾಗದವರಿಗೆ ಆ ಪುಸ್ತಕದ ಅರಿವು ದೊರಕುತ್ತದೆ ಅನ್ನಿಸುತ್ತದೆ! ಇದೂ ಒಂದು ರೀತಿಯಲ್ಲಿ ಒಳ್ಳೆಯದೇ... ಆದರೆ ಪುಸ್ತಕವನ್ನೇ ಓದಬೇಕು ಅಂದುಕೊಂಡವರಿಗೆ....? ಇದು ಗೊಂದಲ!!”
ಮನು ಹನುಮಂತನಲ್ಲ ಅರ್ಜುನ ಅನ್ನುವ ಅರಿವು ಅವರಿಗೆ ಬಂದಿರಬೇಕು! ಏನು ಹೇಳಿದರೆ ಇವನು ತೃಪ್ತನಾಗುತ್ತಾನೆ ಅನ್ನುವುದು ಅರಿತು.....,
“ಮನು, ನಿಮ್ಮ ಅನುಮಾನಗಳಿಗೆ ಈ ಉತ್ತರ ನಿಮ್ಮನ್ನು ಸಮಾಧಾನ ಪಡಿಸಬಹುದೇನೋ. ರಾಮಾಯಣ- ಮಹಾಭಾರತ ಕಥೆಗಳು ಯಾರಿಗೆ ತಿಳಿಯದು? ‘ತಿಣುಕಿದನು ಫಣಿರಾಯ ರಾಮಾಯಣದ ಭಾರದೊಳು!’ ಎನ್ನುವಷ್ಟು ರಾಮಾಯಣಗಳಿವೆ. ಅಷ್ಟೇ ಮಹಾಭಾರತಗಳೂ ಇವೆ. ಹಾಗೆಂದು ಒಂದು ರಾಮಾಯಣ- ಒಂದು ಮಹಾಭಾರತ ಓದಿ ನಿಲ್ಲಿಸುವರೇ? ಪ್ರತಿಯೊಬ್ಬ ಕರ್ತೃವೂ ತನ್ನದೇ ಬಗೆಯಲ್ಲಿ ಮಹಾಕಾವ್ಯವನ್ನು ರಚಿಸಿರುವನಲ್ಲವೇ? ಒಂದು ಬಗೆಯ ಕಥೆಯನ್ನು ಒಬ್ಬ ಹೇಳಬಹುದು, ಅನೇಕರೂ ಹೇಳಬಹುದು. ಒಬ್ಬರ ಶೈಲಿ ಮತ್ತೊಬ್ಬರದಲ್ಲ. ಒಬ್ಬರ ಭಾಷೆ ಮತ್ತೊಬ್ಬರದಲ್ಲ. ಹೀಗಾಗಿ ಪ್ರತಿಯೊಂದು ಗ್ರಂಥವೂ ಓದುಗರನ್ನು ಓದಿಸಿಕೊಂಡು ಹೋಗುತ್ತದೆ. ಕಥೆ ಪುಸ್ತಕ ಚಲನ ಚಿತ್ರದಂತೆ ಅಲ್ಲ. ಅಥವಾ ಮಿಲ್ಸ್ ಅಂಡ್ ಬೂನ್ ಪುಸ್ತಕಗಳಂತೆ ಅಲ್ಲ. ಪಾತ್ರಧಾರಿಗಳು ಮಾತ್ರ ಬೇರೆಯಿದ್ದು ಉಳಿದೆಲ್ಲವೂ ಒಂದರಂತೆ ಮತ್ತೊಂದು ಇರುತ್ತವೆ. ಆಗ ಕಥೆಯ ಬಗ್ಗೆ, ಪಾತ್ರದ ಬಗ್ಗೆ ಹೇಳಿಬಿಟ್ಟರೆ ಇಷ್ಟೇ ತಾನೇ, ಮತ್ತೇನು ಓದುವುದು- ನೋಡುವುದು ಎಂಬ ಭಾವನೆಯಿಂದ ಓದುವಿಕೆ - ನೋಡುವಿಕೆ ನಿಲ್ಲುತ್ತದೆ. ಆದರೆ ನೀವು ಓದುತ್ತಿರುವುದು- ವಿಮರ್ಶಿಸುತ್ತಿರುವುದು ಅಂತ ಸಾಮಾನ್ಯ ಪುಸ್ತಕವಲ್ಲ. ಕಥಾಹಂದರ ತಿಳಿಸುವಾಗ ವಿಮರ್ಶೆಯಲ್ಲಿ ಇಡೀ ಕಥೆ ಹೇಳುವುದಿಲ್ಲ. ಪಾತ್ರದ ಬೆಳವಣಿಗೆ ಅಥವಾ ಬರೆಯುತ್ತಾ ಬೆಳೆಯುವ ಪೂರ್ತಿ ಘಟನೆಗಳನ್ನು ವಿಶದೀಕರಿಸುವುದಿಲ್ಲ, ಭಾಷೆಯ ಬಗ್ಗೆ ಹೇಳುತ್ತಾ ಒಂದೆರಡು ಉದಾಹರಣೆಗಳನ್ನು ಮಾತ್ರ ಕೊಡುತ್ತೇವೆ. ಕಥಾವಸ್ತುವಿನದು ಸೂಕ್ಷ್ಮ ಪರಿಚಯವಷ್ಟೇ. ಸನ್ನಿವೇಶಗಳದೂ ಕೇವಲ ತುಣುಕುಗಳಷ್ಟೇ. ಇಷ್ಟರ ಪರಿಚಯವಾದಾಗ ಓದುಗನಿಗೆ ಓದುವ ಕುತೂಹಲ ಬೆಳೆಯುತ್ತದೆ. ಎಲ್ಲವೂ ಇಲ್ಲೇ ತಿಳಿಯಿತಲ್ಲಾ ಎಂದು ಸುಮ್ಮನಾಗಲಾರ. ಏಕೆಂದರೆ ಎಲ್ಲವನ್ನೂ ಅಲ್ಲಿ ಹೇಳುವುದೇ ಇಲ್ಲ. ಸಿಹಿ ತಿಂಡಿಯ ವಾಸನೆ ಮಾತ್ರ ತೋರಿಸುತ್ತಾನೆ . ಅದರ ಘಮಲೇ ಇಷ್ಟಿದ್ದರೆ ರುಚಿ ಎಷ್ಟಿರಬಹುದೆಂಬ ಕುತೂಲದಿಂದ ಖಂಡಿತ ಓದುತ್ತಾನೆ. ನಿಮ್ಮ ವಿಮರ್ಶೆ ಓದುಗನನ್ನು ಅಷ್ಟಕ್ಕೇ ಸುಮ್ಮನಾಗಿಸಿದರೆ ಅದರ ಅರ್ಥ ಎರಡು. ಒಂದು ಅವನೊಬ್ಬ ಸೋಮಾರಿ- ಎರಡು ನಿಮ್ಮ ವಿಮರ್ಶೆ ಅವನಲ್ಲಿ ಕುತೂಹಲ ಹೆಚ್ಚಿಸಿಲ್ಲ. ವಿಮರ್ಶೆಯಲ್ಲಿ ಅತಿ ಹೊಗಳಿಕೆಯೂ ಇರಬಾರದು ಅತಿ ಮೂದಲಿಕೆಯೂ ಇರಬಾರದು. ಯಾವುದೂ ಹೆಚ್ಚು ಅಥವಾ ಕಡಿಮೆ ಕುತೂಹಲ ಮೂಡಿಸುವಂತಿರಬಾರದು. ಆಗ ಪುಸ್ತಕಕ್ಕೆ ಸಿಗಬೇಕಾದ ಮೌಲ್ಯ ಓದುಗನಿಂದ ಸಿಗುತ್ತದೆ... ನನ್ನ ಉತ್ತರ ನಿಮಗೆ ತೃಪ್ತಿ ತಂದಿದೆ ಎಂದು ಭಾವಿಸಲೇ?’
ಇನ್ನು ಹೇಗೆ ಇಲ್ಲವೆನ್ನಲಿ?
ಈಗ ಅರಿತೆ.... ವಿಮರ್ಶೆ ಅಂದರೇನು ಅನ್ನುವುದಲ್ಲ- ನನ್ನ ಸಮಸ್ಯೆ! ಸಮಸ್ಯೆ ನನ್ನ ಮಿತಿ!
“ಖಂಡಿತಾ ತೃಪ್ತಿ ತಂದಿದೆ.... ನೀವು ಹೇಳಿದಂತೆ ವಿಮರ್ಶೆ ಮಾಡುವ ಸಾಮರ್ಥ್ಯ ಮನೂಗಿಲ್ಲ.... ಅಳತೆಗೆ ಮೀರಿದ್ದು ಮಾಡದಿರುವುದು ಒಳ್ಳೆಯದು.... ಒಳ್ಳೆಯ ಉದ್ದೇಶದಿಂದ ಮನು ಮಾಡುವ ವಿಮರ್ಶೆ ಕೆಟ್ಟ ಫಲಿತಾಂಶ ತರಬಾರದು.... ಆದ್ದರಿಂದ ಯಾವಾಗ ಮನು ಸಮರ್ಥ ಅನ್ನುವ ನಂಬಿಕೆ ಬರುತ್ತದೋ ಆಗ ವಿಮರ್ಶೆ ಅಥವಾ ವಿಶ್ಲೇಷಣೆಗೆ ಇಳಿಯುತ್ತೇನೆ. ಈ ಚರ್ಚೆಗೆ ಕಾರಣವಾದ ಮನುವಿನ ಅಭಿಪ್ರಾಯ ಹಂಚಿಕೆ ಕೂಡ- ಲೇಖಕ ಅಜ್ಞಾತವಾಸಿ ಅನ್ನಿಸಿದ್ದರಿಂದಲೂ ಪುಸ್ತಕಗಳ ಘನತೆ ಅಷ್ಟು ಇರುವುದರಿಂದಲೂ ತಡೆಯಲಾಗದೆ ಹಂಚಿಕೊಂಡದ್ದು...! ಯಾವ ಕಾರಣಕ್ಕೂ ಮನುವಿನ ಅಭಿಪ್ರಾಯ ಅವರಿಗೆ ಹೊಡೆತ ತರಬಾರದು ಅನ್ನುವ ಕಾರಣಕ್ಕೆ- ಅಷ್ಟೇ ಹೇಳಿದೆ.... thank you ಅಮ್ಮ.... ತುಂಬಾ.... ಒಂದು ಕ್ಲಾರಿಟಿ ಸಿಕ್ಕಿತು.... ಉತ್ತಮ ವಿಮರ್ಶೆ ಓದುಗನಲ್ಲಿ ಕೌತುಕ ಹುಟ್ಟಿಸುವ ಸಂದರ್ಭವೇ ಹೆಚ್ಚು.... ಆ ಉತ್ತಮ ವಿಮರ್ಶೆ ಮನೂಗೆ ಸಾಧ್ಯ ಅನ್ನಿಸಿದಾಗ ವಿಮರ್ಶೆಗೆ ತೊಡಗುತ್ತೇನೆ... ಅದುವರೆಗೆ ಅವನ ಪರ್ಸನಲ್ ಅಭಿಪ್ರಾಯ ಮಾತ್ರ....!”
ಇನ್ನು ಪ್ರಶ್ನೆಗಳಿಲ್ಲವಾದ್ದರಿಂದ ಸದ್ಯಕ್ಕೆ ನಾನು ಹನುಮಂತನಂತೆ ಪರಮಜ್ಞಾನಿ!!!!!
Comments
Post a Comment