ಪಾರ್ಕಿಂಗ್ ಸಮಸ್ಯೆ
ಪಾರ್ಕಿಂಗ್ ಸಮಸ್ಯೆ
ತುಂಬಾ ಸೀರಿಯಸ್ ವಿಷಯ ಇದು! ತಮಾಷೆ ಎಂದು ಹೇಳಿ ಬರೆದು ಆಮೇಲೆ ನಗು ಬರದೆ.... ಯಾಕೆ ಬೇಕು...!
ನಾವು ನಾಲ್ಕು ಜನ ಸ್ನೇಹಿತರು. ಪ್ರಾಣ ಸ್ನೇಹಿತರು ಎಂದು ಹೇಳಬಹುದು... ಬಹದು ಅಲ್ಲ, ಪ್ರಾಣ ಸ್ನೇಹಿತರೇ...
ಇಬ್ಬರು ಗೃಹಸ್ಥರು- ನಾನೂ ತೇಜ!
ಇಬ್ಬರು ಬ್ರಹ್ಮಚಾರಿಗಳು- ಭಟ್ಟ, ಕೆಂಚ ಆಲಿಯಾಸ್ ರವಿಶಂಕರ್!
ಗೃಹಸ್ಥರಿಬ್ಬರು ಆಚೆಗೂ ಇಲ್ಲ, ಈಚೆಗೂ ಇಲ್ಲ- ಒಂದೇ ಮೆಂಟಾಲಿಟಿ!
ಬ್ರಹ್ಮಚಾರಿಗಳಲ್ಲಿ ಕೆಂಚ ಶೇಖಡಾ ನೂರು- ಇರಿಟೇಟಿಂಗ್!
ಇನ್ನೊಬ್ಬ- ಬಾಲ ಬ್ರಹ್ಮಚಾರಿ- ಭಟ್ಟ, ಪಕ್ಕಾ ಸೀರಿಯಸ್- ಆದರೇನು? ಅವನು ಏನು ಮಾಡಿದರೂ ಮಾತನಾಡಿದರೂ ನಮಗೆ ನಗು ಬರುತ್ತದೆ! ಹಾಗೆಂದು ಅವ ಜೋಕರ್ ಅಲ್ಲ!
ಒಬ್ಬನ ಇರಿಟೇಷನ್ ಮತ್ತೊಬ್ಬನ ತಮಾಷೆಯಿಂದ ಕವರಪ್ ಆಗುವುದರಿಂದ ಒಂದು ರೀತಿಯ ಬ್ಯಾಲನ್ಸ್- ನಮ್ಮ ಗೆಳೆತನದಲ್ಲಿ! ಈ ಬ್ರಹ್ಮಚಾರಿಗಳಬಗ್ಗೆ ಹೇಳತೊಡಗಿದರೆ ಸಾವಿರಾರು ವಿಷಯಗಳಿದೆ.... ಅದರಲ್ಲಿ ನಮ್ಮ ನಾಲ್ವರಿಗೂ ಪ್ರಿಯವಾದ ಒಂದು ಸಣ್ಣ ಘಟನೆಯಿದೆ.
ನಾವೊಂದು ಟೂರ್ ಹೋದೆವು. ಮೂರು ದಿನದ್ದು. ಮೈಸೂರಿನಿಂದ ಮೂಕಾಂಬಿಕಾಗೆ. ಬ್ರಹ್ಮಚಾರಿಗಳಿಬ್ಬರು ಒಂದುಗಾಡಿ, ನಾವಿಬ್ಬರು ಒಂದು.
ಎಲೆಕ್ಷನ್ ಸಮಯ. ಭಾರೀ ಚೆಕಿಂಗ್. ಟೂವೀಲರ್‌ಗಳಿಗೆ ಅಂಥಾ ಸಮಸ್ಯೆಯೇನೂ ಇರಲಿಲ್ಲ.... ಇನ್ನೇನು ಮೂಕಾಂಬಿಕಾಗೆ ಐದು ನಿಮಿಷದ ದೂರ...
ಜೀಪೊಂದು ಯೂಟರ್ನ್ ತೆಗೆದುಕೊಳ್ಳಲು ರಿವರ್ಸ್ ಬರುತ್ತಿತ್ತು. ಗಾಡಿ ನಿಲ್ಲಿಸಿ ಅವರಿಗೆ ದಾರಿ ಕೊಡುವುದು ಬಿಟ್ಟು, ಗಾಡಿ ಓಡಿಸುತ್ತಿದ್ದ ಕೆಂಚ ರಸ್ತೆಯಿಂದ ಎಡಕ್ಕೆ ಗಾಡಿ ಇಳಿಸಿ, ಗ್ಯಾಪ್ ಮಾಡಿ ಮುಂದಕ್ಕೆ ನುಗ್ಗಲು ಶ್ರಮಿಸುತ್ತಿದ್ದ.
“ಇದ್ಯಾಕೋ ಮಗ್ನೆ ಗಾಡಿ ನಿಲ್ಸು- ಅವ್ರು ಹೋಗ್ಲಿ!” ಎಂದ ಹಿಂದೆ ಕೂತಿದ್ದ ಭಟ್ಟ.
“ನೋಡು, ಎಷ್ಟು ಕೊಬ್ಬು ಅವ್ರಿಗೆ? ಈ ಥರ ರಿವರ್ಸ್ ತಗೋಬೋದ?” ಎಂದ ಕೆಂಚ!
“ನಿನ್‌ತಲೆ!” ಎಂದು ಇನ್ನೂ ಏನೋ ಹೇಳಬೇಕು.... ಜೀಪು ಯಾವಕಡೆಗೂ ತಿರುಗಿಸಲಾಗದೆ ಮಧ್ಯ ರಸ್ತೆಯಲ್ಲಿ ಸ್ಟಕ್ ಆಯಿತು! ಬ್ರಹ್ಮಚಾರಿಗಳ ಗಾಡಿಯೂ- ಮುಂದಕ್ಕೂ ಹಿಂದಕ್ಕೂ ತೆಗೆಯಲಾಗದ ಪರಿಸ್ತಿತಿ!!
ಎಲೆಕ್ಷನ್ ಡ್ಯೂಟಿಗೆ ಹಾಕಿದ್ದ ಇಬ್ಬರು ಪಿಡಿಓಗಳು ಬಂದರು.
ನಾವಿಬ್ಬರು ಸ್ವಲ್ಪ ಹಿಂದೆಯೇ ಗಾಡಿ ನಿಲ್ಲಿಸಿ ಹೇಗೋ ಜೀಪಿಗೆ ದಾರಿ ಮಾಡಿಕೊಟ್ಟೆವು!
ಪಿಡಿಓಗಳು ಶುರು,
“ನಿಮ್ಗೇನು ಅಷ್ಟೂ ತಲೆ ಸರಿ ಇಲ್ವಾ? ಹೀಗಾ ಗಾಡಿ ಓಡಿಸೋದು? ನಿಮ್ಗೆಲ್ಲಾ ಅದ್ಯಾರು ಲೈಸನ್ಸ್ ಕೊಡ್ತಾರೋ ಏನೋ...” ಎಂದು.
ನಾವು ಮಧ್ಯೆ ತಲೆ ಹಾಕಿ,
“ಸಾರಿ ಸರ್, ತುಂಬಾ ದೂರದಿಂದ ಬರ್ತಿದೀವಿ... ಏನೋ ಅರ್ಜೆಂಟಲ್ಲಿ ಆಗೋಯ್ತು...” ಅನ್ನುತ್ತಿದ್ದೇವೆ...
“ನೋಡಿ... ಗಾಡಿ ಓಡಿಸ್ವಾಗ ಹೆಲ್ಮೆಟ್ ಹಾಕ್‌ಬೇಕು ಅನ್ನೋ ಜ್ಞಾನಾನೂ ಇಲ್ಲ” ಎಂದರು.
ಆಗಲೇ ನಾವೂ ಗಮನಿಸಿದ್ದು. ಕೆಂಚ ಹೆಲ್ಮೆಟ್ ತೆಗದು ಕೈಗೆ ನೇತು ಹಾಕಿದ್ದ!!
“ಇದ್ಯಾವಾಗ್ಲ ತೆಗ್ದೆ?” ಎಂದ ಭಟ್ಟ!
“ಈಗ, ಸ್ವಲ್ಪ ಮುಂಚೆ- ತಲೆ ತುಂಬಾ ಹೀಟ್ ಆಗ್ತಿತ್ತಾ...” ಎಂದ ಕೆಂಚ!
ಹಾಗೂ ಹೀಗೂ ಹೇಗೋ ಕಾಡಿ ಬೇಡಿ
“ಸರಿ ಹೊರಡಿ!” ಅನ್ನಿಸಿದೆವು!
ಇನ್ನೇನು....? ಗಾಡಿ ಸ್ಟಾರ್ಟ್ ಮಾಡಿ ಮುಂದಕ್ಕೆ ತೆಗೆಯಬೇಕು,
“ಇವರನ್ನು ಸ್ಟೇಷನ್‌ಗೆ ಕಳಿಸಿದರೇನೇ ಬುದ್ಧಿ ಬರೋದು!” ಎಂದು ಹೇಳಿ ಮತ್ತೆ ಅಡ್ಡ ಹಾಕಿದರು.
ಒಂದು ಕ್ಷಣ ನಮಗೇನೂ ಅರ್ಥ ಆಗಲಿಲ್ಲ.... ಹಿಂದೆಯಿಂದ ಇಳಿದ ಭಟ್ಟ ಕೆಂಚನ ಮುಖ ನೋಡಿ ಹಲ್ಲು ಕಡಿಯುತ್ತಾ,
“ಬಡ್ಡೀ ಮಗ್ನೆ!” ಎಂದ.
ಇರಿಟೇಟಿಂಗ್ ಕೆಂಚ ಪುನಃ ಹೆಲ್ಮೆಟ್ ಹಾಕದೆ ಗಾಡಿ ಮುಂದಕ್ಕೆ ತೆಗೆಯುತ್ತಿದ್ದ!!
*
ಪೋಲೀಸ್ ಸ್ಟೇಷನ್!
ಗಾಡಿ ಭಟ್ಟನದು.
“ಡಾಕ್ಯುಮೆಂಟ್ಸ್ ಎಲ್ಲಾ ಇದೆಯಾ?” ಎಂದರು ಇನ್ಸ್‌ಪೆಕ್ಟರ್.
“ಇದೆ ಸರ್!” ಎಂದ.
“ಎಲ್ಲಿ ಕೊಡಿ...”
ಎಲ್ಲವನ್ನೂ ಕೊಟ್ಟ- ಗಾಡಿ ಓಡಿಸುತ್ತಿದ್ದದ್ದು ಕೆಂಚನಾದ್ದರಿಂದ ಅವನ ಲೈಸನ್ಸೂ ನೋಡಿದರು...
“ಇನ್ಷೂರನ್ಸ್ ಎಲ್ಲಿ?” ಎಂದರು. ಅದೊಂದು ಮಿಸ್ ಆಗಿತ್ತು! ಮಿಸ್ ಆಗಿದ್ದಲ್ಲ ಇನ್ಷೂರನ್ಸ್ ಇಲ್ಲ- ಕಟ್ಟಿಲ್ಲ! ಆದರೂ,
“ಮನೇಲಿದೆ ಸರ್, ತಂದಿಲ್ಲ! ನಾವು ಫೈನ್ ಕಟ್ಟೋಕೆ ರೆಡಿ ಇದ್ದೇವೆ ಸರ್...” ಎಂದ ಭಟ್ಟ.
ಗಾಡಿ ಓಡಿಸುತ್ತಿದ್ದವ ಹೆಲ್ಮೆಟ್ ಹಾಕಿಲ್ಲ... ಇನ್ಷೂರನ್ಸ್ ಇಲ್ಲ ಎಂದು ಫೈನ್ ಕಟ್ಟಿಸಿ ಬಿಟ್ಟರು.
ಹೊರಬರುವಾಗ,
“ಅಟ್ಲೀಸ್ಟ್ ಪೋಲೀಸರಾದರೂ ಗಾಡಿ ಹಿಡಿದಿದ್ರೆ ಒಂದು ಘನತೆ ಇರೋದು! ಈ ಬಡ್ಡೀಮಗನಿಂದಾಗಿ- ಪಿಡಿಓಗಳ್ ಕೈಲಿ ಹಿಡಿಸ್ಕೊಂಡ್ವಲ್ಲ!” ಎಂದ ಭಟ್ಟ!
ಐದು ನಿಮಿಷ ಬೇಕಾಯಿತು ನಮಗೆ ನಗು ನಿಲ್ಲಿಸಲು!
ಗಾಡಿಯನ್ನು ಅಲ್ಲೇ ನಿಲ್ಲಿಸಿ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನಮಾಡಿ ಬಂದೆವು.
ಇನ್ನು ಪೂರ್ತಿಯಾಗಿ ಭಟ್ಟನೇ ಗಾಡಿ ಓಡಿಸುವುದೆಂದು ತೀರುಮಾನಿಸಿ ಗಾಡಿ ತೆಗೆಯುವಾಗ ಕೆಂಚ,
“ಸಧ್ಯ! ಪಾರ್ಕಿಂಗ್ ಸಮಸ್ಯೆ ತಪ್ತು!!!” ಎಂದ.
****
ಶುಭಂ!
Comments
Post a Comment