ಅಣಿಮಾಂಡವ್ಯನ ಮಾಯೆಯೂ ನನ್ನ ಭ್ರಮೆಯೂ!

ಅಣಿಮಾಂಡವ್ಯನ ಮಾಯೆಯೂ ನನ್ನ ಭ್ರಮೆಯೂ!

*

ನನ್ನನ್ನು ನಾನು ಹುಡುಕಲು ತೊಡಗಿ ಸುಮಾರು ವರ್ಷಗಳಾಯಿತು! ಇನ್ನೂ ಕಂಡುಕೊಳ್ಳಲಾಗಿಲ್ಲ...!

*

ಅಣಿಮಾಂಡವ್ಯ ಅನ್ನುವ ಮಹಾ ಋಷಿಯೊಬ್ಬರಿದ್ದರಂತೆ. ಮಾಡದ ತಪ್ಪಿಗೆ ಶೂಲಕ್ಕೇರಿಸಲ್ಪಟ್ಟು ತಪಸ್ಸಿನ ಶಕ್ತಿಯಿಂದಾಗಿ, ಸಾಯಲೂ ಇಲ್ಲ- ಬದುಕೋ ನರಕ ಅನ್ನುವಂತಾಗಿತ್ತು ಪರಿಸ್ತಿತಿ!

ಮೂರು ದಿನವಾದರೂ ಆತ ಸಾಯದಿರುವುದನ್ನು ನೋಡಿ ಗಾಬರಿಯಾದ ಶೂಲಕ್ಕೇರಿಸಿದ ಮಹಾರಾಜ, ಈತನಾರೋ ಮಹಾನುಭಾವನೇ ಇರಬೇಕು, ತನಗೆ ತಪ್ಪಾಗಿದೆ ಅನ್ನುವುದನ್ನು ಅರಿತು, ತಾನೇ ಖುದ್ದಾಗಿ ಬಂದು, ಋಷಿಯನ್ನು ಶೂಲದಿಂದ ಇಳಿಸಿ, ಋಷಿ ಪಾದಕ್ಕೆ ಬಿದ್ದು ಉರುಳಾಡಿ ಕ್ಷಮೆ ಕೇಳಿದನಂತೆ!

ಪರಮ ಸಾಧು ಋಷಿ ಕ್ಷಮೆಯನ್ನು ನೀಡಿ ಮತ್ತೊಮ್ಮೆ ತಪಸ್ಸಿಗೆ ಹೊರಟ- ತನಗೇಕೆ ದೇವರು ಈ ಶಿಕ್ಷೆಯನ್ನು ನೀಡಿದ ಎಂದು ಕಂಡುಕೊಳ್ಳಬೇಕಿತ್ತು!!

*

ಅದೇ ಸಮಯದಲ್ಲಿ ನಾನೂ ತಪಸ್ಸಿಗೆ ತೊಡಗಿದ್ದೆ! ಉದ್ದೇಶ- ದುಃಖದಿಂದ ಹೊರಬರುವುದು! ನನ್ನೊಳಗೆ ನಾನು ಪರಮಾನಂದವನ್ನು ಕಂಡುಕೊಳ್ಳುವುದು!

ಪ್ರತ್ಯಕ್ಷರಾದ ದೇವರು ಹೇಳಿದ್ದು....,

ಅಣಿಮಾಂಡವ್ಯ ತಪಸ್ಸಿಗೆ ಹೊರಟ ಕಾರಣವನ್ನು ನೀನು ಹೇಳಿದೆ! ನೀನು ಹೊರಟ ಕಾರಣವನ್ನು ಹೇಳಿಲ್ಲ- ಉದ್ದೇಶ ಮಾತ್ರ ಹೇಳಿದ್ದೀಯೆ! ಕಾರಣವನ್ನು ಪ್ರಪಂಚದ ಮುಂದೆ ಹೇಳಿಕೋ.... ನಿಜದರಿವಾಗುತ್ತದೆ!”

*

ಅಣಿಮಾಂಡವ್ಯನ ತಪಸ್ಸು ಮುಗಿಯುವ ಸೂಚನೆಯೇ ಇಲ್ಲ! ಮುಂಚೆಯೆಲ್ಲಾ ಅಷ್ಟು ಬೇಗ ದರ್ಶನ ಕೊಡುತ್ತಿದ್ದ ದೇವರಿಗೂ ತಾನು ಬೇಡವಾದೆನೆ?

ಕೊನೆಯಬಾರಿ ದೇವರು ಪ್ರತ್ಯಕ್ಷನಾಗಿದ್ದಾಗ ತಾನು ಕೇಳಿದ ವರ ಅಣಿಮಾಂಡವ್ಯ ಮರೆತು ಹೋಗಿದ್ದ! ಅದರ ಫಲವಾಗಿ...

ಮಹಾ ಪ್ರಳಯದ ಅನುಭವವಾಯಿತು! ಎಲ್ಲಿಯೋ ಭೂಮಿ ಬಿರುಕುಬಿಟ್ಟ ಶಬ್ದ! ಭೂಮಿಯೇ ಸಮುದ್ರದೊಳಗೆ ಮುಳುಗುತ್ತಿದೆಯೋ ಸಮುದ್ರವೇ ಭೂಮಿಯನ್ನು ಕಬಳಿಸುತ್ತಿದೆಯೋ ಅರಿಯದ ಅವಸ್ತೆ!

ಕುಳಿತಲ್ಲಿಂದ ಚಲಿಸಲಾಗಲಿಲ್ಲ! ನೀರು ಸಂಪೂರ್ಣವಾಗಿ ತನ್ನನ್ನು ಆವರಿಸಿದರೂ ಉಸಿರುಕಟ್ಟಿ ಒದ್ದಾಡುವಂತಾದರೂ ತಾನು ಸಾಯುತ್ತಿಲ್ಲ!! ಅಯೋಮಯ ಪರಿಸ್ತಿತಿ! ಹೊಸಾ ಪ್ರಪಂಚವೊಂದು ಸೃಷ್ಟಿಯಾದಂತೆ.... ಸಮುದ್ರದೊಳಗೆ ಅರಮನೆಗಳು, ರಾಜ ರಾಣಿಯರ ಕಾಮಕೇಳಿ! ಚಿನ್ನ ವೈಢೂರ್ಯಗಳನ್ನು ಆಹಾರದಂತೆ ಸೇವಿಸುತ್ತಿರುವ ಮಾನವರು! ಜಲಕನ್ಯೆಯರು ಬಂದು ಕಚಗುಳಿಯಿಟ್ಟು ಹೋಗುತ್ತಿದ್ದಾರೆ! ಹಾವುಗಳು ಕಚ್ಚುತ್ತಿವೆ! ಇನ್ನೇನು ತಿಮಿಂಗಿಲವೊಂದು ತನ್ನನ್ನು ನುಂಗಬೇಕು- ದೇವರು ಪ್ರತ್ಯಕ್ಷರಾದರು!!

*

ನಾನೇಕೆ ತಪಸ್ಸಿಗೆ ಹೋದೆ?

ವಿಚಿತ್ರ ಅಯೋಮಯ ಪರಿಸ್ತಿತಿಗೆ ಒಳಗಾಗಿದ್ದೆ! ಕಾರಣ- ನನ್ನೊಳಗಿ ಪ್ರೇಮ!

ಅದೊಂದು ದುಮ್ಮಿಕ್ಕುವ ಜಲಧಾರೆ! ಅಡೆತಡೆಯಿಲ್ಲದೆ ಹರಿಯಬೇಕೆಂದುಕೊಳ್ಳುವ ಮಹಾನದಿ!

ಹೆಣ್ಣು! ಅವಳೊಂದು ಅದ್ಭುತ ನನಗೆ! ಸ್ಪಂದಿಸಿದ ಪ್ರತಿ ಹೆಣ್ಣಿನಲ್ಲೂ ಪ್ರೇಮವೇ...!

ಯಾವ ರೀತಿಯ ಪ್ರೇಮ?

ತಿಳಿಯದು! ಅರ್ಥವನ್ನು ಹುಡುಕಿದವನಲ್ಲ! ಅದೊಂದು ಅದ್ಭುತ ಅನುರಾಗ!

ಪ್ರತಿ ಹೆಣ್ಣಿನೊಂದಿಗೂ ಅವಳಿಗನುಸಾರವಾಗಿ- ಅವಳ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ಸ್ಪಂದಿಸಿದೆ!

ಹೆಣ್ಣು ಅವಳು! ಅವಳ ಪ್ರೇಮಿಯೇ ಅವಳ ಪ್ರಪಂಚವಾಗಬೇಕು ಅಂದುಕೊಳ್ಳುವವಳು- ಅವಳೊಬ್ಬಳ ಪ್ರಪಂಚ ಆಗಬೇಕು ಅಂದುಕೊಳ್ಳುವವಳು!!

ನನ್ನ ನಿಜಾಯಿತಿ ಅವಳನ್ನು ಚಂಚಲಗೊಳಿಸಿತು!

ಇವನು ನನ್ನೊಂದಿಗೆ ಮಾತ್ರವಲ್ಲ ಹೀಗೆ! ಎಲ್ಲಾ ಹೆಣ್ಣಿನೊಂದಿಗೂ ಹೀಗೆಯೇ!

ಇವನ- ಎಲ್ಲ ಹೆಣ್ಣಿನಲ್ಲಿ ನಾನೂ ಒಬ್ಬಳು ಅಷ್ಟೇ ಹೊರತು, ನನಗೆ ಇವನೇ ಪ್ರಪಂಚವಾದಂತೆ ಇವನಿಗೆ ನಾನಲ್ಲ- ಅನ್ನುವ ಅರಿವು.... ಹೆಣ್ಣನ್ನು ನನ್ನಿಂದ ದೂರ ಮಾಡಿತು!

ಇದೇ ನಾನು ತಪಸ್ಸಿಗೆ ಹೋಗಲು ಕಾರಣ- ಪ್ರತಿ ಹೆಣ್ಣನ್ನೂ ಪ್ರೇಮಿಸಿದೆ! ಅದೇ ಕಾರಣವಾಗಿ ಯಾರೊಬ್ಬರೂ ಉಳಿಯಲಿಲ್ಲ! ಯಾರೊಬ್ಬರೂ ಉಳಿಯದೇ ಹೋದಾಗ ನನ್ನೊಳಗೆ ದುಃಖ ಪ್ರವೇಶಿಸಿತು- ಮಡುಗಟ್ಟಿತು!!

*

ತನ್ನ ಅವಸ್ತೆಯನ್ನು ನೋಡಿ ನಗುತ್ತಿರುವ ದೇವರನ್ನು ಕಂಡು ಅಣಿಮಾಂಡವ್ಯ ಗಲಿಬಿಲಿಗೊಂಡ! ಸುತ್ತಲೂ ನೊಡಿದ! ಮಹಾಪ್ರಳಯದ ಅವಸಾನವಾಗಿತ್ತು! ಪ್ರಕೃತಿ- ಅದ್ಭುತ ರಮಣೀಯವಾಗಿತ್ತು!

ನೆನಪು ಮಾಡಿಕೋ ಅಣಿಮಾಂಡವ್ಯ- ನೀನು ಕೊನೆಯಬಾರಿ ತಪಸ್ಸು ಮಾಡಿದಾಗ ಕೇಳಿದ ವರ!” ಎಂದರು ದೇವರು!

ನೆನಪಾಯಿತು....!

ಮಾಯೆ ಅಂದರೆ ಏನು? ದಯಮಾಡಿ ಅದರ ಅನುಭವ ಮಾಡಿಸಿಕೊಡು ದೇವ...!!!”

ತಥಾಸ್ತು!” ಅನ್ನುವ ವರವನ್ನು ಪಡೆದು ಹೊರಟಾಗಲೇ.... ಸೈನಿಕರು ಆತನನ್ನು ಬಂಧಿಸಿದ್ದು- ಶೂಲಕ್ಕೇರಿಸಿದ್ದು...!!

*

ಪ್ರಪಂಚದ ಮುಂದೆ ತೆರೆದುಕೊಂಡ ಮಾತ್ರಕ್ಕೆ ಸತ್ಯದ ಅರಿವಾಗುವುದಿಲ್ಲ. ಬಂದ ಅಭಿಪ್ರಾಯಗಳನ್ನು ತೆರೆದ ಮನದಿಂದ ಆತ್ಮಾವಲೋಕನ ಮಾಡಬೇಕು! ಬಂದ ಅಭಿಪ್ರಾಯವೋ.... ಒಂದು ಪ್ರಶ್ನೆ...!

ಪ್ರೇಮ ಅನ್ನುವ ಪದದ ಭಾಷ್ಯದ ಅರಿವಿರದೆ- ಕಂಡ ಹೆಣ್ಣು ಮಕ್ಕಳನ್ನೆಲ್ಲಾ ಯಾವ ಭಾವದಿಂದ ಪ್ರೇಮಿಸಿದೆ ನೀನು? ಪ್ರೆಮಿಸುವಾಗ ನಿನಗೆ ಪಾತ್ರರು- ಅಪಾತ್ರರ ಅರಿವಿರಬೇಕು. ನಿಷ್ಕಾಮ ಪ್ರೇಮ ಧಾರೆ ಎರೆಯುವವನ ಮನಸ್ಸಿನ ಭಾವ ತಿಳಿಯದೆ ಪ್ರೇಮಿ ಕಾಮಿಯಾದರೆ ಯಾರೂ ಉಳಿಯದೆ ದೂರ ಹೋಗುವುದು ರವಿ ಚಂದ್ರರಷ್ಟೇ ಸತ್ಯ. ಪ್ರೇಮ ಏಕ ಮುಖಿಯಲ್ಲ ಎಂಬುದೂ ಸತ್ಯವಲ್ಲವೇ?"

ಕೇಳಿದವರೂ ಹೆಣ್ಣು! ನನ್ನ ತಾಯಿ! ಇವರೊಂದಿಗಿನ ಚರ್ಚೆ ಯಾವತ್ತಿಗೂ ನನಗೊಂದು ಹೊಸಾ ಆಲೋಚನೆಗೆ ಮೂಲ! ಅದಕ್ಕೇ ಇರಬೇಕು ದೇವರು-

"ಪ್ರಪಂಚದ ಮುಂದೆ ತೆರೆದುಕೋ..." ಅಂದಿದ್ದು!

ಆಕೆ ತಾಯಿ! ಆಕೆಯ ವಾತ್ಸಲ್ಯ ನನ್ನಕಡೆಯೇ...! ನಾನೇ ಸರಿ ಅನ್ನುವಂತೆ- ಅವರ ಪ್ರಶ್ನೆ ನನ್ನ ಮನಸ್ಸಿಗನುಗುಣವಾಗಿ! ಅಂದರೆ ನಾನು ಪ್ರೇಮಿಸಿದ ಹೆಣ್ಣಿಗೆ ನನ್ನ ಪ್ರೇಮ ಅರ್ಥವಾಗದೇ ಹೋಗಿರಬಹುದು! ಆದ್ದರಿಂದ ಯಾರೂ ಉಳಿಯಲಿಲ್ಲವೇನೋ ಅನ್ನುವುದು ಅವರ ಸಂಶಯ! ಅವರ ಸಂಶಯವನ್ನು ನಿವಾರಿಸಿದೆ.

"ಇಲ್ಲಿ ಕಾಮಕ್ಕೆ ಪ್ರಸಕ್ತಿಯಿಲ್ಲ! ಇಲ್ಲೊಂದು ಸೂಚ್ಯವಿದೆ! ಪ್ರತಿ ಹೆಣ್ಣನ್ನು ಪ್ರೇಮಿಸಿದ್ದೇ ಕಾರಣವಾಗಿ ಯಾರೂ ಉಳಿಯಲಿಲ್ಲ- ಎಂದೆ! ಆದರೆ ನಾನು ಯಾರನ್ನೂ ಬೇಕೆಂದೇ ಪ್ರೇಮಿಸಿದವನಲ್ಲ! ಪ್ರೇಮಿಸಿದ್ದೇನೆ ಅಂದುಕೊಂಡ ಪ್ರತಿ ಹೆಣ್ಣಿನಲ್ಲಿ ಪ್ರೇಮ..., ಅದಾಗಿ ಉಂಟಾಗಿದ್ದು ಹೊರತು- ಉದ್ದೇಶಪೂರಿತ ಪ್ರೇಮವೂ ನನದಲ್ಲ! ಇಲ್ಲಿ ಇಬ್ಬರದ್ದೂ ತಪ್ಪಿಲ್ಲ.... ಪ್ರೇಮದ ವಿಷಯದಲ್ಲಿ ಹೆಣ್ಣು ಸ್ವಾರ್ಥಿ- ಅದನ್ನು ಸ್ವಾರ್ಥ ಅನ್ನಲಾಗದು- ಬೇರೆ ಪದವಿಲ್ಲ!! ತನ್ನ ಪ್ರೇಮಿ ತನಗೊಬ್ಬಳಿಗೇ ಉಳಿಯಬೇಕೆಂಬ ಭಾವ- ಅದು ಅನಾದಿ ಕಾಲದಿಂದಲೂ ಹಾಗೆಯೇ- ಅದು ತಪ್ಪಲ್ಲ! ಹೆಣ್ಣು ಅಸೂಯೆಯ ಸಂಕೇತ ಕೂಡ! ಅದೂ ಮುಂಚಿನಿಂದಲೂ ಬಂದುಬಿಟ್ಟಿದೆ- ಪ್ರೇಮಿಯ ವಿಷಯದಲ್ಲಿ ಅದು ಇರಬೇಕು ಕೂಡ!! ಆದರೆ ನನಗೋ ಅಂಕೆಯಿಲ್ಲದೆ- ಪ್ರತೀ ಹೆಣ್ಣಿನಲ್ಲೂ ಪ್ರೇಮ ಮೂಡುತ್ತದೆ!!ಹಾಗೆ ಪ್ರೇಮಾನುಭೂತಿಯುಂಟಾದ ಪ್ರತಿ ಹೆಣ್ಣೂ- ನಾನು ಅವಳಿಗೆ ಮಾತ್ರ ಉಳಿಯಬೇಕು ಅಂದುಕೊಂಡಾಗ- ಸಮಸ್ಯೆ!" ಎಂದೆ.

ಅವರು ಕೊಟ್ಟ ವಿವರಣೆಯೇ..., ನನ್ನ ಆತ್ಮಶೋಧನೆಯ ಮೂಲ, ನನಗಿರುವ ದೇವರ ಉತ್ತರ!

*

"ಅಣಿಮಾಂಡವ್ಯ.... ಕೆಲವರಿಗೆ ತಾವು ಮಾಯೆಯಲ್ಲಿದ್ದೇವೆಂದು ತಿಳಿಯದು! ಕೆಲವರಿಗೆ ಅದರಲ್ಲೇ ಆನಂದ! ಕೆಲವರಿಗೆ ಅದರಿಂದ ಮುಕ್ತಿ ಬೇಕು- ಆದರೆ ಅಸಾಧ್ಯ! ನೀನೋ... ಮಾಯಾ ಮೋಹ ವಿವರ್ಜಿತನಾದರೂ, ಅದರ ಅರಿವೇ ಇಲ್ಲದವನಾದರೂ ಮಾಯೆಯ ಒಳಗಾಗುವ ಆಸೆ! ಅರಿವಾಯಿತೇನು? ಅದರಲ್ಲೇ ಇರಬೇಕೆಂಬ ಆಸೆಯೇನಾದರೂ....?"

"ದೇವ! ಈಗ ನೀನು ನನಗೆ ಕೊಡಬಹುದಾದ ವರ ನಿನಗೇ ಗೊತ್ತು, ಜನನ ಮರಣಗಳಿಲ್ಲದಂತೆ, ನಿನ್ನ ಸಾನ್ನಿಧ್ಯದಲ್ಲಿಯೇ ಕಳೆಯುವಂತೆ- ಮೋಕ್ಷವೆಂಬ ವರ! ಮಾಯೆಯ ಅರಿವಾಗಿಯೂ ಇನ್ನೂ ಅದರಲ್ಲೇ ಇರಲೇನು?"

"ತಥಾಸ್ತು!"

*

"ಹಾಗಾದರೆ ಇದು ನಾನೆಂದುಕೊಂಡ ಹಾಗೆ ಹೆಣ್ಣಿನ ತಪ್ಪಲ್ಲ. ನಿನ್ನದೇ ತಪ್ಪು. ಹೌದು, ಕಂಡ ಹೆಣ್ಣುಗಳನ್ನೆಲ್ಲ ಪ್ರಿಮಿಸಲು ಆರಂಭಿಸಿದರೆ ಯಾವ ಹೆಣ್ಣು ತಾನೇ ಸಹಿಸಿಯಾಳು? ಮತ್ತೆ, ಅಸೂಯೆ ಕೇವಲ ಹೆಣ್ಣಿಗೆ ಅಲ್ಲ. ಅವಳಿಗಿಂತ ಹೆಚ್ಚಿನ ಅಸೂಯೆ ಗಂಡಿಗೂ ಇದೆ. ಅದು ಪೊಸೆಸಿವ್ (ನನಗೆ ಹೊಳೆಯದೇ ಹೋದ- ಸ್ವಾರ್ಥಕ್ಕೆ ಪರ್ಯಾಯ ಪದ!!) ನೇಚರ್ ಇರಬಹುದು, ಯಾವುದೇ ಇರಬಹುದು. ಅಸೂಯೆ ಪಡುವಲ್ಲಿ ಪುರುಷ ಒಂದು ಹೆಜ್ಜೆ ಮುಂದೂ ಕೂಡ" ಎಂದರು ತಾಯಿ.

ಮನಸ್ಸಿಗೇನೋ ಹೊಳೆಯಿತು! ಮಾಯೆಯೊಳಗಿದ್ದಾಗ ಅಣಿಮಾಂಡವ್ಯನ ಅವಸ್ತೆ! ನಾನೊಂದು ಮಹಾ ಭ್ರಮೆಯಲ್ಲಿದ್ದೆ...!! ಪ್ರೇಮವೆನ್ನುವ ಭ್ರಮೆ!!

ಒಬ್ಬಳು ಹೆಣ್ಣೂ ಉಳಿಯಲಿಲ್ಲ ಅಂದಮೇಲೆ ನನ್ನದು ಪ್ರೇಮವೇ ಅಲ್ಲವೇನೋ!! ಪುರುಷ ಅಸೂಯೆಯಲ್ಲಿ ಒಂದು ಹೆಜ್ಜೆ ಮುಂದೆ ಅಂದಮೇಲೆ... ನನಗೆ ಯಾವೊಂದು ಸಂದರ್ಭದಲ್ಲೂ, ಯಾವೊಂದು ಹೆಣ್ಣಿನಮೇಲೂ ಅಸೂಯೆಯೇ ಮೂಡದಿದ್ದುದ್ದರಿಂದ- ನಾನು 'ಹೆಣ್ಣನ್ನು ಪ್ರೇಮಿಸುತ್ತಿದ್ದೇನೆ' ಅನ್ನುವ ಭ್ರಮೆಯಲ್ಲಿದ್ದೆನೇನೋ!!

ಭ್ರಮೆ ಸರಿದಾಗ, ವಾಸ್ತವದರಿವು! ಆ ಅರಿವು..., ನನ್ನನ್ನು ನಿಜವಾದ ಪ್ರೇಮಕ್ಕೂ ಅನರ್ಹನನ್ನಾಗಿ ಮಾಡಿತು!

ಭಾವ ರಹಿತನಾದೆ!!

ಈ ಅವಸ್ತೆಗೆ ಬಂದಮೇಲೆ ಪುನಃ ಪ್ರೇಮವೆಂಬ ಭ್ರಮೆಯೇ- ವ್ಯಾಮೋಹವೇ....?

ಅಸಾಧ್ಯ!

ಈಗ...,

ಮಾಯೆಯನ್ನು ತಿರಸ್ಕರಿಸಿದ ಅಣಿಮಾಂಡವ್ಯನಂತೆ ನಾನು!

Comments

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!