ಮನಸ್ಸೊಂದು ಮಹಾಸಮುದ್ರ!
ಮನಸ್ಸೊಂದು ಮಹಾಸಮುದ್ರ ! * ಮಳೆಗಾಲದ ಒಂದು ರಾತ್ರಿ . ಸಮುದ್ರವನ್ನೇ ನೋಡುತ್ತಾ ಕುಳಿತಿದ್ದೆ . ಮಳೆ . ಎಷ್ಟು ಸುರಿದರೂ ಸಮುದ್ರ ಮಟ್ಟವೇನೂ ಅಧಿಕವಾಗುತ್ತಿಲ್ಲ ! ಅಲೆಗಳು ಉರುಳುರುಳಿ ಬಂದು ನನ್ನ ಕಾಲನ್ನು ತೋಯಿಸಿ ಮರಳುತ್ತಿತ್ತು ! ಒಂದು ಕಾಲು ನೀಡಿ - ಮತ್ತೊಂದು ಕಾಲು ಮಡಚಿ - ಹಿಂದಕ್ಕೆ ಕೈಯೂರಿ ಕುಳಿತಿದ್ದೆ . ಸಮುದ್ರದಮೇಲೆ ಬೀಳುತ್ತಿರುವ ಮಳೆಯನ್ನು ವರ್ಣಿಸುವುದು ಹೇಗೆ ? ಅದೂ ಮಧ್ಯ ರಾತ್ರಿ ? ಕತ್ತಲಾದರೂ ನೈಸರ್ಗಿಕ ಬೆಳಕಿನಲ್ಲಿ ? ಕಂಡೇ ಅನುಭವಿಸಬೇಕು - ಅನುಭವಿಸಿಯೇ ಅರಿಯಬೇಕು ! ನಾನೂ ತೊಯ್ದು ತೊಪ್ಪೆಯಾಗಿದ್ದೆ ! ಯಾರೋ ಮಹಾನುಭಾವ - ಜೀವನವೊಂದು ಮಹಾಸಮುದ್ರ - ಎಂದು ಹೇಳಿದ್ದು ನೆನಪಾಗಿ ನಗು ಬಂತು ! ಸಮುದ್ರವೆಲ್ಲಿ - ಹುಲುಮಾನವನೆಲ್ಲಿ ! ಒಂದು ಕ್ಷಣ ... ಜೀವನವೋ ಮನುಷ್ಯ ಮನಸ್ಸೋ ? ಮನಸ್ಸೊಂದು ಮಹಾಸಮುದ್ರ !! ಕ್ಷಣಮಾತ್ರದಲ್ಲಿ ಬ್ರಹ್ಮಾಂಡವನ್ನು ಸುತ್ತಿಬರುವ ಮನಸ್ಸೆಲ್ಲಿ - ಬ್ರಹ್ಮಾಂಡಕ್ಕೆ ಹೋಲಿಸಿದರೆ ಬೊಗಸೆಯಲ್ಲೂ ತುಂಬದ ಸಮುದ್ರವೆಲ್ಲಿ ? ಏನೋ ....! ಸಮುದ್ರದ ಅಂಚಿನಲ್ಲೊಂದು ಮಿಂಚು - ಕಣ್ಣು ಕೋರೈಸಿತು . ಮಿಂಚಿನ ಬೆಳಕಿನಲ್ಲಿ ಪಕ್ಕದಲ್ಲಿ ಯಾರೋ ಇದ್ದಂತೆ ! ಮತ್ತೊಂದು ಮಿಂಚು ! ನಿಜ ! ಯಾರೋ ಇದ್ದಾರೆ . ಹೆದರಿಕೆ ಮಾನವ ಸಹಜ ! ಆದರೆ ಆ ಹೆದರಿಕೆ ಎಷ್ಟು ಹೊತ್ತು ಇರುತ್ತದೆ ಅನ್ನುವುದರಮೇಲೆ - ನಮ್ಮ ಮನೋಸ್ಥೈರ್ಯ ನಿಂತಿದೆ ! ನಿಜಕ್ಕೂ ಅದು ಹೆದರಿಕೆಗೆ ಕಾ...