ಸಮಸಮಾಜ

ಸಮಸಮಾಜ!

*

ಒಬ್ಬ ಕೋಟ್ಯಾಧೀಶ್ವರನಿದ್ದ!” ಎಂದೆ.

ಅದಕ್ಕೆ?” ಎಂದ ಮಗ!

ನನ್ನ ಮಗನೇ! ನನಗಿಂತ ತಲೆಹರಟೆ! ಅವನನ್ನು ನೊಡಿ ನಕ್ಕು ಹೇಳಿದೆ,

ಹತ್ತು ಜನ ಗೆಳೆಯರಲ್ಲಿ ಒಬ್ಬ ಕೋಟ್ಯಾಧೀಶ್ವರನಿದ್ದ!”

ಈಗ ಅವನ ಕಣ್ಣಿನಲ್ಲಿ ಕುತೂಹಲ! ದಾರಿಗೆ ಬಾ ಮಗನೆ! ಯಾರೊಂದಿಗೆ ತಲೆಹರಟೆ!?

ನಾನೇನಾದರೂ ಹೇಳುತ್ತೇನೆಯೇ ಎಂದು ನನ್ನ ಮುಖವನ್ನೇ ನೋಡಿದ! ಹೇಳುವ ಸೂಚನೆ ಸಿಗದಿದ್ದಾಗ...

ಹೇಳಿ!” ಎಂದ.

ಏನು?”

ಕೋಟ್ಯಾಧೀಶ್ವರನ ಬಗ್ಗೆ!” ಎಂದ.

ಅದರಲ್ಲೇನಿದೆ? ಸಮಸಮಾಜದ ಬಗ್ಗೆ ಕನಸುಕಂಡ ಹತ್ತು ಜನ ಗೆಳೆಯರು ಅವರು- ಅಷ್ಟೆ!”

ಮತ್ತೆ ನನ್ನ ಮೌನವನ್ನು ಕಂಡು ಅಸಹನೆಗೊಂಡ! ಮುಗುಳುನಕ್ಕು ಮುಂದುವರೆಸಿದೆ,

ಹತ್ತು ಜನರೂ ಬಡವರು. ಬಡತನ ಕೆಟ್ಟದ್ದು! ಎರಡು ಹೊತ್ತಿನ ಊಟಕ್ಕೆ- ದಿನಪೂರ್ತಿ ಕಷ್ಟಪಡಬೇಕಾಗಿತ್ತು! ಕಷ್ಟ ಪಡುತ್ತಿದ್ದರು ಕೂಡ. ಆ ಹತ್ತು ಜನರಲ್ಲಿ- ಈ ಜೀವನ ಜಂಜಾಟದಲ್ಲಿ- ಒಬ್ಬ ಮಾತ್ರ ಭವಿಷ್ಯದ ಯೋಜನೆಯೊಂದನ್ನು ಸ್ಪಷ್ಟವಾಗಿ ರೂಪಿಸಿಕೊಂಡಿದ್ದ! ಎರಡು ಹೊತ್ತಿನ ಊಟ ಅನ್ನುವ ಚಿಂತೆ ಬಿಟ್ಟು ಒಂದು ಹೊತ್ತಿನ ಊಟವನ್ನು ಮಾತ್ರ ಮಾಡುತ್ತಿದ್ದ!”

ಮಧ್ಯೆ ತಲೆ ಹಾಕಿದ ಮಗ! ನನ್ನ ಮಗನಲ್ಲವೇ....,

ಇದು ನಿಮಗೇ ಸ್ವಲ್ಪ ಉತ್ಪ್ರೇಕ್ಷೆ ಅನ್ನಿಸುತ್ತಿಲ್ಲವೇ? ಒಂದು ಹೊತ್ತಿನ ಊಟ....?”

ಅದನ್ನು ಸೂಚ್ಯವಾಗಿ ತೆಗೆದುಕೋ.... ಹಲವಾರು ಖರ್ಚುವೆಚ್ಚಗಳನ್ನು ಕಡಿತಗೊಳಿಸಿ ಹಣ ಸೇರಿಸಿದ ಎಂದು ಅರ್ಥ!” ಎಂದು ಹೇಳಿ ಇನ್ನೇನಾದರೂ ಸಂಶಯವಿದೆಯೇ ಎಂದು ನೋಡಿದೆ. ಹೇಳಿ ಅನ್ನುವಂತೆ ನೋಡಿದ.

ಸುಮಾರು ಹತ್ತು ವರ್ಷದಲ್ಲಿ ಸ್ವಲ್ಪ ಹಣವನ್ನು ಒಟ್ಟುಗೂಡಿಸಿ ಉದ್ಯಮವೊಂದನ್ನು ಶುರುಮಾಡಿದ!” ಎಂದೆ.

ಉಳಿದವರು?” ಎಂದ ಮಗ!

ಅವನನ್ನು ಹೆದರಿಸಿದರು! ನಿನ್ನಿಂದ ಸಾಧ್ಯವಿಲ್ಲ ಎಂದರು! ಅದು ನಮಗೆ ಸೇರಿದ್ದಲ್ಲ- ಸುಮ್ಮನೆ ದುಡಿದ ಹಣವನ್ನು ಅನಗತ್ಯವಾಗಿ ಕಳೆದುಕೊಳ್ಳಬೇಡ ಎಂದರು! ಅವನು ತಲೆಕೆಡಿಸಿಕೊಳ್ಳಲಿಲ್ಲ! ಮುನ್ನುಗ್ಗಿದೆ!” ಎಂದೆ.

ಮುನ್ನುಗ್ಗಿದೆ ಎಂದರೆ?” ಎಂದ ಮಗ ಮಹಾರಾಯ!

ತಪ್ಪಾಯ್ತು ಪರಮಾತ್ಮ! ಮುನ್ನುಗ್ಗಿದ! ಮತ್ತೊಂದು ಹತ್ತುವರ್ಷ! ಅವನು ಕೋಟ್ಯಾಧೀಶ್ವರನಾದ!” ಎಂದೆ.

ಇಷ್ಟೇನ?” ಎಂದ ಮಗ!

ಅಲ್ಲ! ಇದು ಸಮಸಮಾಜ ಹೇಗಾಗುತ್ತದೆ? ಉಳಿದ ಒಂಬತ್ತುಜನ ಅವನನ್ನು ಹೊಡೆದುರುಳಿಸಿ ಅವನ ಒಂದು ಕೋಟಿಯನ್ನು ಹತ್ತು ಲಕ್ಷದಂತೆ ಎಲ್ಲರೂ ಹಂಚಿಕೊಂಡರು!” ಎಂದೆ.

ಮುಂದೆ?”

ಮುಂದೆ ಏನು? ಒಂದೇ ಒಂದು ವರ್ಷ! ಅವನು ಮತ್ತೆ ಕೋಟ್ಯಾಧೀಶ್ವರನಾದ!”

ಉಳಿದವರು?” ಎಂದ.

ಉಳಿದವರು ಮತ್ತೆ ಸಮಸಮಾಜದ ಕನಸುಕಾಣುತ್ತಿದ್ದಾರೆ!” ಎಂದೆ ಅಸಹ್ಯದಿಂದ.

ಮುಂದೇನು ಮಾಡುತ್ತೀರಪ್ಪ?” ಎಂದ!

ಮುಂದೇನು? ಒಮ್ಮೆ ಸಿಕ್ಕ ಪೆಟ್ಟು ಸಾಕು!”

ಅವರು ಮತ್ತೆ ಬಂದರೆ?” ಎಂದ.

ಇನ್ನು ಬರುವುದಿಲ್ಲ! ಬರಬೇಕೆಂದರೆ ನನಗೆ ಕರುಣೆ ಇರಬೇಕು!” ಎಂದೆ.

ಅಷ್ಟು ವರ್ಷದಿಂದ ಕೇಳಿದರೂ ಹೇಳದ ನಿಮ್ಮ ಈ ಕಥೆ ಇಂದು ಹೇಳಲು ಕಾರಣವೇನಪ್ಪ?”

ಫೇಸ್‌ಬುಕ್‌ನಲ್ಲಿ ನೋಡಿದ ಒಂದು ಪೋಸ್ಟ್!”

ಏನು ಪೋಸ್ಟ್?”

ಸನಾತನ ಧರ್ಮವನ್ನು ಆಚರಿಸುವ ಹುಡುಗಿಯೊಬ್ಬಳು ಕಪ್ಪು ಪರ್ಧ ಹಾಕಿಕೊಂಡು- ಸಮಸಮಾಜದ ಕನಸು ನನ್ನದು! ಎಂದು ಹೇಳಿಕೊಂಡಿದ್ದಾಳೆ!”

ಅದಕ್ಕೂ ನಿಮ್ಮ ಕಥೆ ಹೇಳಿದ್ದಕ್ಕೂ ಏನು ಸಂಬಂಧ?” ಎಂದ ಗೊಂದಲದಿಂದ!

ನಿಜಕ್ಕೂ ಸಮಸಮಾಜ ಅಂದರೇನು ಅನ್ನುವ ನನ್ನ ಚಿಂತೆ!”

ಸಮಸಮಾಜ ಅಂದರೆ ಏನು?”

ಹಣದಿಂದ ಅಳೆಯುವುದಲ್ಲ ಸಮಸಮಾಜ! ಹಾಗೆಯೇ ಹುಟ್ಟಿನಿಂದ ಬಂದ ನಮ್ಮ ಆಚಾರವನ್ನು ಬಿಟ್ಟು ಮತ್ತೊಂದನ್ನು ಆಚರಿಸುವುದಲ್ಲ ಸಮಸಮಾಜ!”

ಮತ್ತೆ?”

ನಮ್ಮ ಮತದಲ್ಲಿ ನಾವಿದ್ದು- ಮತ್ತೊಂದು ಮತವನ್ನೂ ಗೌರವಿಸುವುದು!” ಎಂದೆ.

ಕೇವಲ ಮತಕ್ಕೆ ಸೀಮಿತ ಮಾಡುತ್ತಿದ್ದೀರೇನು?” ಎಂದ.

ನನ್ನ ಮಗನಲ್ಲವೇ...!

ಇಲ್ಲವೋ....! ಅದನ್ನೂ ಸೂಚ್ಯವಾಗಿ ತೆಗೆದುಕೋ! ಮತ ಅನ್ನುವುದನ್ನು ತೆಗೆದು ಹಾಕು! ಯಾವ ಕಾರಣಕ್ಕೂ ಯಾರೊಬ್ಬರನ್ನೂ- ಯಾವುದೇ ಮತದವರಾಗಲಿ, ಯಾವುದೇ ಅಂತಸ್ತಿನವರಾಗಲಿ- ದೂಷಿಸದೆ ಅವರವರನ್ನು ಅವರವರಂತೆ ಪ್ರೀತಿಸುವುದು- ಗೌರವಿಸುವುದು ಸಮಾನತೆ!” ಎಂದೆ.

ಮತ್ತೇ....!” ಎಂದು ತುಂಟತನದಿಂದ ನನ್ನ ಕಣ್ಣುಗಳನ್ನೇ ನೋಡಿ-

ಕಾನೂನಿನ ದೃಷ್ಟಿಯಿಂದ ಒಬ್ಬೊಬ್ಬರಿಗೆ ಒಂದೊಂದು ನೀತಿ ಏಕೆ?” ಎಂದ.

ಅದನ್ನು ಕಾಲವೇ ಹೇಳಬೇಕು! ಕಾನೂನು ರೂಪುಗೊಂಡಾಗ ಉದ್ದೇಶ ಸಮಸಮಾಜವೇ ಆಗಿತ್ತು!” ಎಂದೆ.

ಅಪ್ಪಾ.... ಈ ಕಾನೂನಿನನ್ವಯ ಸಮಸಮಾಜ ಹೇಗೆ ಸಾಧ್ಯ? ಕೆಲವರಿಗೆ ಎಲ್ಲವೂ ಫ್ರೀ ದೊರಕುತ್ತಿದೆ! ಕೆಲವರಿಗೆ ಹೆಚ್ಚು ಶ್ರಮವಿಲ್ಲದೆ ಯೋಗ್ಯತೆಗೆ ಮೀರಿದ ಸ್ಥಾನ ಮಾನಗಳು ದೊರಕುತ್ತಿದೆ....!”

ಸುಮ್ಮನಿರು! ಕಾನೂನನ್ನು ನಾವು ವಿಮರ್ಶಿಸಲಾಗದು... ಎಲ್ಲವೂ ಕಾನೂನಿನನ್ವಯವೇ ನಡೆದರೆ ಸಮಸಮಾಜ ಸಾಧ್ಯ! ಆದರೆ....” ಎಂದು ಅವನ ಮುಖವನ್ನು ನೋಡಿದೆ.

ಮುಗಿಸಿ!” ಎಂದ.

ಗುಲಾಮನಿಗೆ ತಿಳಿಯದು- ತಾನೊಬ್ಬ ಗುಲಾಮನೆಂದು! 'ತನ್ನನ್ನು ಬೇರೆ ಯಾರೋ ತುಳಿಯುತ್ತಿದ್ದಾರೆ' ಅನ್ನುವ ಪ್ರತಿ ವ್ಯಕ್ತಿಯೂ ಗುಲಾಮನೇ! ಮೊದಲು ಈ ವಾಸ್ತವವನ್ನು ಅರಿತು- ಅದರಿಂದ ಹೊರಬಂದು- ತನ್ನ ಮಹತ್ವವನ್ನು ಅರಿತು- ಕಾನೂನನ್ನು ಸದ್ಭಳಕೆ ಮಾಡಿಕೊಂಡರೆ.... ಖಂಡಿತಾ ಸಮಸಮಾಜ ಸಾಧ್ಯ!” ಎಂದೆ.

Comments

  1. ಸಮಸಮಾಜದ ಪರಿಕಲ್ಪನೆ ಚೆನ್ನಾಗಿದೆ👌👍🏻

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!