ಮನಸ್ಸೊಂದು ಮಹಾಸಮುದ್ರ!

ಮನಸ್ಸೊಂದು ಮಹಾಸಮುದ್ರ!

*

ಮಳೆಗಾಲದ ಒಂದು ರಾತ್ರಿ. ಸಮುದ್ರವನ್ನೇ ನೋಡುತ್ತಾ ಕುಳಿತಿದ್ದೆ. ಮಳೆ. ಎಷ್ಟು ಸುರಿದರೂ ಸಮುದ್ರ ಮಟ್ಟವೇನೂ ಅಧಿಕವಾಗುತ್ತಿಲ್ಲ!

ಅಲೆಗಳು ಉರುಳುರುಳಿ ಬಂದು ನನ್ನ ಕಾಲನ್ನು ತೋಯಿಸಿ ಮರಳುತ್ತಿತ್ತು!

ಒಂದು ಕಾಲು ನೀಡಿ- ಮತ್ತೊಂದು ಕಾಲು ಮಡಚಿ- ಹಿಂದಕ್ಕೆ ಕೈಯೂರಿ ಕುಳಿತಿದ್ದೆ.

ಸಮುದ್ರದಮೇಲೆ ಬೀಳುತ್ತಿರುವ ಮಳೆಯನ್ನು ವರ್ಣಿಸುವುದು ಹೇಗೆ?

ಅದೂ ಮಧ್ಯ ರಾತ್ರಿ?

ಕತ್ತಲಾದರೂ ನೈಸರ್ಗಿಕ ಬೆಳಕಿನಲ್ಲಿ?

ಕಂಡೇ ಅನುಭವಿಸಬೇಕು- ಅನುಭವಿಸಿಯೇ ಅರಿಯಬೇಕು!

ನಾನೂ ತೊಯ್ದು ತೊಪ್ಪೆಯಾಗಿದ್ದೆ!

ಯಾರೋ ಮಹಾನುಭಾವ- ಜೀವನವೊಂದು ಮಹಾಸಮುದ್ರ- ಎಂದು ಹೇಳಿದ್ದು ನೆನಪಾಗಿ ನಗು ಬಂತು!

ಸಮುದ್ರವೆಲ್ಲಿ- ಹುಲುಮಾನವನೆಲ್ಲಿ!

ಒಂದು ಕ್ಷಣ...

ಜೀವನವೋ ಮನುಷ್ಯ ಮನಸ್ಸೋ?

ಮನಸ್ಸೊಂದು ಮಹಾಸಮುದ್ರ!!

ಕ್ಷಣಮಾತ್ರದಲ್ಲಿ ಬ್ರಹ್ಮಾಂಡವನ್ನು ಸುತ್ತಿಬರುವ ಮನಸ್ಸೆಲ್ಲಿ- ಬ್ರಹ್ಮಾಂಡಕ್ಕೆ ಹೋಲಿಸಿದರೆ ಬೊಗಸೆಯಲ್ಲೂ ತುಂಬದ ಸಮುದ್ರವೆಲ್ಲಿ?

ಏನೋ....!

ಸಮುದ್ರದ ಅಂಚಿನಲ್ಲೊಂದು ಮಿಂಚು- ಕಣ್ಣು ಕೋರೈಸಿತು.

ಮಿಂಚಿನ ಬೆಳಕಿನಲ್ಲಿ ಪಕ್ಕದಲ್ಲಿ ಯಾರೋ ಇದ್ದಂತೆ!

ಮತ್ತೊಂದು ಮಿಂಚು!

ನಿಜ! ಯಾರೋ ಇದ್ದಾರೆ.

ಹೆದರಿಕೆ ಮಾನವ ಸಹಜ! ಆದರೆ ಆ ಹೆದರಿಕೆ ಎಷ್ಟು ಹೊತ್ತು ಇರುತ್ತದೆ ಅನ್ನುವುದರಮೇಲೆ- ನಮ್ಮ ಮನೋಸ್ಥೈರ್ಯ ನಿಂತಿದೆ!

ನಿಜಕ್ಕೂ ಅದು ಹೆದರಿಕೆಗೆ ಕಾರಣವೇ- ಎಂದೂ ಕೂಡ ತಿಳಿಯದೆ ಓಡಿ ಹೋಗುವ ಹೇಡಿಯಲ್ಲ ನಾನು!

ಮತ್ತೆ ಮಿಂಚಲಿಲ್ಲ! ಕಣ್ಣು ಕತ್ತಲೆಗೆ ಹೊಂದಿಕೊಂಡಿತು. ಪಕ್ಕಕ್ಕೆ ನೋಡಿದೆ,

ಕ್ಷಮೆಯಿರಲಿ!” ಎಂದಳು.

ಇರಲಿ!” ಎಂದೆ.

ಅದೋ.... ಅದೇ ನಮ್ಮ ಮನೆ! ಮಳೆಯ ರಾತ್ರಿಯಲ್ಲಿ- ಸಮುದ್ರತೀರದಲ್ಲಿ ಕುಳಿತು ಸಮುದ್ರವನ್ನು ನೋಡುವ ಹುಚ್ಚಿ ನಾನೊಬ್ಬಳೇ ಅಂದುಕೊಂಡಿದ್ದೆ!” ಎಂದಳು.

ಒಟ್ಟಿನಲ್ಲಿ ನಾನೂ ಒಬ್ಬ ಹುಚ್ಚ ಅನ್ನುವುದು ತೀರ್ಮಾನವಾಯಿತು!” ಎಂದೆ.

ನಕ್ಕಳು. ನನ್ನ ತೀರಾಹತ್ತಿರಕ್ಕೆ, ಒತ್ತಿಕೊಂಡಂತೆ ಕುಳಿತು ಮುಖವನ್ನೇ ದಿಟ್ಟಿಸಿ ನೋಡಿ,

ಯಾರಪ್ಪಾ ಮಹಾನುಭಾವ ಅಂದುಕೊಂಡೆ! ನೀನೇ...!” ಎಂದಳು.

*

ಮನಸ್ಸೊಂದು ಮಹಾಸಮುದ್ರ!

ಶತಮಾನಗಳ ಹಿಂದೆಯೇನೋ ಅನ್ನುವ ಭಾವ- ನೆನಪಿಗೆ!

ಮರೆಯಲಾರದೆ- ಮರೆಯದೇ ಇರಲಾರದೆ....

ತಪ್ಪು ಯಾರದು ಅನ್ನುವುದಲ್ಲ..., ನಡೆದದ್ದು ತಪ್ಪೇ ಅನ್ನುವುದೇ ಪ್ರಶ್ನೆ!

ಒಂದು ದಿನದ ವ್ಯತ್ಯಾಸ!

ಅವಳು- ಮತ್ತೊಬ್ಬರ ಪತ್ನಿ! ನಾನೋ.... ಬ್ರಹ್ಮಚಾರಿ ಎಂದು ಪ್ರಪಂಚ ನಂಬಿರುವ- ಬ್ರಹ್ಮಚಾರಿಯಲ್ಲದ- ಬ್ರಹ್ಮಚಾರಿ!

ಸಂಕಟದೊಂದಿಗೆ ಬಂದಿದ್ದಳು! ನನ್ನಿಂದಾದ ಮಟ್ಟಿಗೆ ಸಂಕಟವನ್ನು ನಿವಾರಿಸಿದ್ದೆ ಕೂಡ!

ಗಂಡು- ಹೆಣ್ಣು!

ಯಾವತ್ತಿಗೂ ಇದೊಂದು ಸಮಸ್ಯೆಯೇ! ಅಥವಾ... ಇದೇ ಪರಿಹಾರ!

ಯಾರು ಮೊದಲು ಮುಂದುವರೆದೆವೋ ತಿಳಿಯಲಿಲ್ಲ!

ಪರಿಪೂರ್ಣ ತೃಪ್ತಿಯಿಂದ ಪಕ್ಕಕ್ಕೆ ಹೊರಳಿದಾಗ ಅವಳ ಕಣ್ಣಂಚಿನಲ್ಲಿ ನೀರು- ತೃಪ್ತಿಯ ಸಂಕೇತ!

ನೀನು ನಿಜಕ್ಕೂ ಬ್ರಹ್ಮಚಾರಿಯೇ?” ಎಂದಳು.

ನಾನೆಂದಿಗೂ ಹಾಗೆ ಹೇಳಿದವನಲ್ಲ!” ಎಂದೆ.

ಹಾಗಿದ್ದರೆ ನಾನು ಮೊದಲನೆಯವಳಲ್ಲ!” ಎಂದಳು.

ನಾನೇನೂ ಮಾತನಾಡಲಿಲ್ಲ! ಸುಳ್ಳು ಹೇಳುವುದಿಲ್ಲವೆನ್ನುವುದು ಯಾರೂ ಹೇಳದೆಯೇ ನನಗೆ ನಾನು ತೆಗೆದುಕೊಂಡಿರುವ ತೀರ್ಮಾನ!

ಹಾಗೆಂದು ನಾನು ಹೇಳುವ ನಿಜದಿಂದ ಯಾರಿಗಾದರೂ ನೋವಾಗುತ್ತದೆ ಅನ್ನುವಾಗ?

ಮೌನ!!

ನಾನು ಮತ್ತೊಬ್ಬನ ಪತ್ನಿ!” ಎಂದಳು.

ನನಗೆ- ವಯಸ್ಸಿಗೆ ಬಂದ ಹೆಣ್ಣು!” ಎಂದೆ.

ಪ್ರಪಂಚದ ಮುಂದೆ ನೀನು ಬ್ರಹ್ಮಚಾರಿಯಾಗಿದ್ದಷ್ಟು ದಿನ- ನನಗೆ ಸಮಸ್ಯೆಯಿಲ್ಲ!” ಎಂದಳು.

ಹಾಗಿದ್ದರೆ.... ನಡೆದದ್ದರಬಗ್ಗೆ ಅಲ್ಲ ಚಿಂತೆ! ಪ್ರಪಂಚದ ಬಗ್ಗೆಯೋ....!” ಎಂದೆ.

ಅವಳೇನೂ ಮಾತನಾಡಲಿಲ್ಲ.

ನನ್ನ ಅಭಿಪ್ರಾಯ ಕೇಳದೆ- ನನ್ನನ್ನು ಅರಿಯದೆ ನನ್ನಬಗ್ಗೆ ತೀರ್ಮಾನಿಸಿದ್ದು- ಪ್ರಪಂಚದ ತಪ್ಪು!” ಎಂದೆ.

ಈ ತಪ್ಪಿಗೆ ಪ್ರಾಯಶ್ಚಿತ್ತವಿಲ್ಲ!” ಎಂದಳು.

ಇದು ತಪ್ಪೇ?” ಎಂದೆ.

ಪ್ರಪಂಚ ನಿನ್ನನ್ನು- ‘ನೀನು ನಿಜಕ್ಕೂ ಬ್ರಹ್ಮಚಾರಿಯೇ' ಎಂದು ಕೇಳುವವರೆಗೆ ತಪ್ಪಲ್ಲ!” ಎಂದಳು.

*

ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪು- ಮತ್ತಷ್ಟು ಗೊಂದಲ ಹುಟ್ಟಿಸಿತು!

ವಯಸ್ಸಿಗೆ ಬಂದ ಗಂಡು ಹೆಣ್ಣು ಸ್ವ ಇಚ್ಚೆಯಿಂದ ಸೇರಬಹುದು! ಅದು ವಿವಾಹ ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ!’

ನಿಜವೇ... ಗಂಡನಿಂದ ಹೆಂಡತಿಗೋ- ಹೆಂಡತಿಯಿಂದ ಗಂಡನಿಗೋ ಅದೊಂದು ವಿಷಯದಲ್ಲಿ ತೃಪ್ತಿ ಸಿಗದಿದ್ದರೆ ಏನು ಮಾಡುವುದು?

ಅದು ನನ್ನ ಸಮಸ್ಯಯಲ್ಲ!! ನನ್ನ "ಸಮಸ್ಯೆ" ಪ್ರೇಮ!

ಗಂಡು- ಹೆಣ್ಣು...

ತಮ್ಮ ಅರಿವಿಲ್ಲದೆ ಇವರಮಧ್ಯೆ ಏರ್ಪಡುವ ಪ್ರೇಮಕ್ಕೆ ಯಾರು ಕಾರಣರು- ಯಾರು ಹೊಣೆ?

ಹುಟ್ಟಿದ ಪ್ರೇಮವನ್ನು ಅಲ್ಲಗಳೆಯುವುದು ಹೇಗೆ?

ಸಮಾಜ- ಕುಟುಂಬ ಬೇರೆ! ಅರಿಯದೆಯೇ ಹುಟ್ಟಿದ ಪ್ರೇಮ ಬೇರೆ!

ನಮ್ಮ ಮಧ್ಯೆ ಅರಿಯದೆ ನಡೆದ ಪ್ರಕ್ರಿಯೆ ಅದು- ಕಾಮ! ಅದು ನಡೆಯಲು ಕಾರಣ....?

ನಮ್ಮ ಅರಿವಿಲ್ಲದೆ ನಮ್ಮ ಮಧ್ಯೆ ಹುಟ್ಟಿದ ಪ್ರೇಮ!

ಈಗ ನನ್ನ ಸಮಸ್ಯೆ... ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ- ಅದು ಸರಿ! ಮುಂಚೆ ತಪ್ಪೆ- ಒಂದೇ ಒಂದು ದಿನದ ವ್ಯತ್ಯಾಸದಲ್ಲಿ??

ಮತ್ತೊಮ್ಮೆ ಅವಳಿಗೆ ಕೀಳರಿಮೆ ಹುಟ್ಟಲು ಕಾರಣವಾಗಬಾರದೆಂದು ಬಹುದೂರ ಹೊರಟು ಬಂದಿದ್ದೆ!

ಈಗ- ಏನು ಮಾಡಲಿ?

ಕಾನೂನುಬದ್ಧ ಅನ್ನುವ ಕಾರಣಕ್ಕೆ ಸರಿ ಎಂದು ತೀರ್ಮಾನಿಸಲೇ..., ಅಥವಾ...,

ತೀರ್ಮಾನವನ್ನು ಅವಳಿಗೇ ಬಿಡೋಣವೆಂದು- ಪುನಃ ಹುಡುಕಿ ಬಂದೆ!

*

ಅವಳ ಬೊಗಸೆಯಲ್ಲಿ ನನ್ನ ಮುಖ! ಅವಳ ಮುಖದಲ್ಲಿ ಅದ್ಭುತ ಕಾಂತಿ!

ನೀನು ಮತ್ತೆ ಸಿಗುವುದಿಲ್ಲವೇನೋ ಅಂದುಕೊಂಡೆ.... ಹೋಗಬೇಡ ದೂರ!” ಎಂದಳು.

ಗಂಡ? ಮಕ್ಕಳು?”

ನಿನ್ನ ಕಾರಣವಾಗಿ ಒಂದಿಂಚಿನ ಕೊರೆತೆ ಅವರಿಗುಂಟಾಗುವುದಿಲ್ಲ...!” ಎಂದಳು.

*

ಪ್ರೇಮದ ಉತ್ತುಂಗ ಕಾಮವಂತೆ! ಹಾಗೆಂದು ಕಾಮ ನಡೆಯದಿದ್ದರೆ ಪ್ರೇಮ ಉತ್ತುಂಗವನ್ನು ತಲುಪಿಲ್ಲ ಎಂದೇ..?

ಅಲ್ಲ! ಪ್ರೇಮಕ್ಕೂ ಕಾಮಕ್ಕೂ ಸಂಬಂಧವೇ ಇಲ್ಲ! ಆದರೂ ಅದು ನಡೆದ ಮಾತ್ರಕ್ಕೆ ಅದೇ ಉದ್ದೇಶವೆಂದೂ ಅಲ್ಲ!

ಕಾಮ ನಡೆದರೆ ನಡೆಯಲಿ- ನಡೆಯದಿದ್ದರೆ ಬೇಡ!-

ಹೆಣ್ಣು ತನ್ನೆದೆಗೆ ಗಂಡನ್ನು ಒತ್ತಿಕೊಂಡಾಗ ಉಂಟಾಗುವ ಭಾವವೇನು....?

ಗಂಡು ತನ್ನ ತೋಳಿನಲ್ಲಿ ಹೆಣ್ಣನ್ನು ಬಂಧಿಸಿಕೊಂಡಾಗ ಉಂಟಾಗುವ ಭಾವಕ್ಕೆ ಅರ್ಥವೇನು...?

ತಾಕಲಾಟಗಳಿಗೆ ಕೊನೆಯೆಲ್ಲಿ?

ಕೇವಲ ಗಂಡು ಹೆಣ್ಣಿನ ವಿಷಯದಲ್ಲೇ ಇಷ್ಟು ಚಿಂತಿಸುವ- ಬ್ರಹ್ಮಾಂಡಕ್ಕೆ ಹುಲ್ಲುಕಡ್ಡಿಯ ಬೆಲೆಯನ್ನೂ ಕೊಡದ-

ಮನಸ್ಸೊಂದು ಮಹಾಸಮುದ್ರ!!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!