ಸಹಜ ಗುಣ!
ಸಹಜಗುಣ!
೧
“ನಾನು ಓದಿರುವ ನಿನ್ನ ಕಥೆಗಳಲ್ಲಿ- ಹೆಣ್ಣಿನ ಸ್ಥಾನವನ್ನು ತುಂಬಾ ಕೆಳಮಟ್ಟಕ್ಕೆ ಇಳಿಸಿದ್ದೀಯಲ್ಲ- ಯಾಕೆ?!” ಎಂದರು.
ಆಶ್ಚರ್ಯವಾಯಿತು! ದೇವೀಭಕ್ತ ನಾನು!!
“ಯಾವ ಕಥೆಯಲ್ಲಿ ಹಾಗೆ ಬರೆದಿದ್ದೇನೆ?” ಎಂದೆ.
“ಕಥೆ ಯಾವುದೋ ನೆನಪಿಲ್ಲ! ನಾನು ಎಂದು ಉಪಯೋಗಿಸಿ ನೀನು ಬರೆಯುವ ಕಥೆಗಳಲ್ಲಿ, ನಾಮಪದದ ಪುರುಷ- ತಾನು ಹೇಳುವುದೇ ಸರಿ, ತಾನು ಮಾಡುತ್ತಿರುವುದೇ ಸರಿ ಎಂಬಂತೆ ಬಿಂಬಿಸಿದ್ದೀಯ... ನಿಜ ಹೇಳಬೇಕೆಂದರೆ ಹೆಣ್ಣಿನಲ್ಲಿರುವ ಶಕ್ತಿ ಸಾಮರ್ಥ್ಯ, ಜೀವನ ಎದುರಿಸುವ ಕಲೆ ಪುರುಷರಲ್ಲಿ ಅರ್ಧದಷ್ಟು ಸಹ ಇಲ್ಲ!” ಎಂದರು.
“ನೋಡಿ... ನನ್ನ ಕಥೆಗಳಲ್ಲಿನ ವಿಪರ್ಯಾಸವೇ ಇದು! ಬರೆದಿರುವ ಕಥೆಗಳಲ್ಲಿ ಹೆಚ್ಚು ಕಥೆಗಳು- ಹೆಣ್ಣು ಗಂಡಿಗಿಂತ ಶ್ರೇಷ್ಠಳು ಎಂದೇ ಬಿಂಬಿಸುತ್ತವೆ!! ಕೆಲವೇ ಕೆಲವು ಕಥೆಗಳಲ್ಲಿ ಹೆಣ್ಣಿನ ಸಹಜಗುಣವನ್ನು ಹೇಳಿದ್ದೇನೆ. ಅದೇ ಹೈಲೈಟ್ ಆಗಿರಬಹುದು ಹೊರತು- ಹೆಣ್ಣನ್ನು ಎಲ್ಲಿಯೂ ಕೆಳಮಟ್ಟಕ್ಕೆ ಇಳಿಸಿಲ್ಲ! ಯಾವ ಕಥೆಯಲ್ಲೂ ಗಂಡೇ ಸರಿ ಎಂದು ಬಿಂಬಿಸಿಲ್ಲ- ಸಮರ್ಥಿಸಿಲ್ಲ... ಹೆಣ್ಣು ಚಂಚಲೆ- ಹೆಣ್ಣೂ ತಪ್ಪು ಮಾಡಬಲ್ಲಳು ಎಂದು ಬರೆದಿರಬಹುದು ಅಷ್ಟೆ!” ಎಂದೆ.
“ಹೆಣ್ಣಿನ ಸಹಜ ಗುಣಗಳೇ? ಯಾವುದದು??” ಎಂದರು!
“ಅಸೂಯೆ ಸಂಶಯ ಗೊಂದಲ!” ಎಂದೆ.
“ಗಂಡಿನ ಸಹಜ ಗುಣ ಎಂತದ್ದೋ...?”
“ಅಹಂಕಾರ!” ಎಂದೆ.
“ಸ್ತ್ರೀಯರ ಬಗೆಗಿನ ನಿನ್ನ ಸಮೂಲಾಗ್ರ ಅಭಿಪ್ರಾಯವೇ ಇದು? ನಿನ್ನ ಜೀವನದಲ್ಲಿ ಎಷ್ಟು ಜನ ಸ್ತ್ರೀಯರನ್ನು ಅತ್ಯಂತ ಸನಿಹದಿಂದ ಬಲ್ಲೆ ಹೇಳು- ಅಮ್ಮನ ಹೊರತಾಗಿ? ನಿನ್ನ ಅಮ್ಮನಲ್ಲೂ ಈ ಗುಣಗಳನ್ನು ಕಂಡಿದ್ದೀಯ?” ಎಂದರು.
ಒಂದುಕ್ಷಣ- ಕೆನ್ನೆಯಮೇಲೆ ರಪ್ಪನೆ ಏಟು ಬಿದ್ದಂತಾಯಿತು!
ಎಲ್ಲಿಯೋ ಎಡವುತ್ತಿದ್ದೇನೆ! ಉದ್ದೇಶ ತಪ್ಪು ದಾರಿ ಹಿಡಿಯುತ್ತಿದೆ! ಸಿಕ್ಕಿಕೊಂಡಿದ್ದೇನೆ! ಹೊರಬರಲೇ ಬೇಕು! ಹೆಣ್ಣನ್ನು ಹೀಗೆ ನಿರೂಪಿಸುವುದು ನನಗೂ ಬೇಕಿಲ್ಲ! ಆದರೆ ಪ್ರಶ್ನೆ ಕೇಳುತ್ತಿರುವವರೂ ಸಾಮಾನ್ಯೆಯಲ್ಲ! ಪಕ್ಕಾ ಸ್ತ್ರೀವಾದಿ! ನಾನು ನಿರೂಪಿಸ ಹೊರಟಿರುವುದು ಅದನ್ನೂ ಕೂಡ ಹೊರತು- ಹೆಣ್ಣು ಕೆಟ್ಟವಳೆಂದಲ್ಲ!- ಅಲ್ಲ!!
“ಈ ಪ್ರಶ್ನೆಗಳ ಉದ್ದೇಶವೇನು? ಅಸೂಯೆ ಸಂಶಯ ಗೊಂದಲಗಳು ಹೆಣ್ಣಿನ ಸಹಜ ಗುಣ ಅಲ್ಲ ಎಂದೇ? ನಿಮ್ಮಲ್ಲಿ ಈ ಗುಣಗಳಿಲ್ಲವೇ?!” ಎಂದೆ.
“ಪ್ರಶ್ನೆಗಳ ಉದ್ದೇಶ- ನೀನು ಹೆಣ್ಣಿನ ಬಗ್ಗೆ ಕೊಟ್ಟ ಸ್ಟೇಟ್‌ಮೆಂಟ್!! ಯಾವ ಕಾರಣಕ್ಕೂ ಅಸೂಯೆ, ಸಂಶಯ, ಗೊಂದಲಗಳು ಹೆಣ್ಣಿನ ಸಹಜ ಗುಣಗಳಲ್ಲ! ಗಂಡಿಗಿಂತ ಹೆಚ್ಚಿನ ಸಹನೆ, ತಾಳ್ಮೆ, ಪ್ರೀತಿಸುವ ಮನೋಭಾವ ನನ್ನಲ್ಲಿದೆ!” ಎಂದರು.
“ಇದನ್ನು ನೀವು- ಹೆಣ್ಣಿನ ಬಗೆಗಿನ ನನ್ನ ಸ್ಟೇಟ್‌ಮೆಂಟಾಗಿ ತೆಗೆದುಕೊಂಡಿರಾ...? ಕರ್ಮ! ಸಾವಿರಾರು ಗುಣಗಳಿರುವ ಮನುಷ್ಯನಲ್ಲಿ ಕೆಲವೊಂದು ಸಹಜ ಗುಣಗಳಿರುತ್ತದೆ! ಅದರಲ್ಲಿ ಈ ಸಂಶಯ ಅಸೂಯೆ ಗೊಂದಲಗಳೂ ಇದೆ- ಹೆಣ್ಣನ್ನು ನಕಾರಾತ್ಮಕವಾಗಿ ತೋರಿಸಿರಬಹುದಾದ ಗುಣ- ಅಷ್ಟೇ ಹೊರತು ಅದು ಸ್ಟೇಟ್‌ಮೆಂಟೇ? ಹೆಣ್ಣಿನ ಸಹಜ ಗುಣ ಅಂದೆನೇ ಹೊರತು ಹೆಣ್ಣಿನಲ್ಲಿರುವ ಗುಣಗಳು ಇದು ಮಾತ್ರ ಅನ್ನಲಿಲ್ಲವಲ್ಲ!?” ಎಂದೆ.
“ಹೆಣ್ಣು ಚಂಚಲೆ ಅಂದೆ...! ಇದು ಕೂಡ ತಪ್ಪು...! ಸ್ತ್ರೀ ದೃಢ ಚಿತ್ತಳು. ಗಂಡಿಗೇ ಹೆಚ್ಚು ಚಂಚಲತೆ! ಸ್ವಾಭಾವಿಕ ಗುಣಗಳು ಕೂಡ ಕಾಲಮಾನ ಪರಿಸ್ಥಿತಿಗೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಾ ಹೋಗುತ್ತದೆ! ಯಾವ ಗುಣವೂ ಶಾಶ್ವತ ಅಲ್ಲ...!” ಎಂದರು.
“ನಾನು ಸಹಜ ಗುಣ ಅಂದೆ! ನೀವು ಸ್ವಾಭಾವಿಕ ಗುಣ ಅನ್ನುತ್ತಿದ್ದೀರಿ! ಯಾವುದದು ಸ್ವಾಭಾವಿಕ ಗುಣಗಳು?” ಎಂದೆ.
“ಹುಟ್ಟಿನಿಂದ ಕೆಲವು ಗುಣಗಳು ನಮ್ಮಲ್ಲಿ ಸಹಜವಾಗಿರುತ್ತದೆ. ಉದಾಹರಣೆಗೆ... ಸಹಾಯ ಮಾಡುವ ಗುಣ... ಇದು- ನಾವು ಬೆಳೆಯುತ್ತಾ ನಮ್ಮ ಸಮಾಜದಲ್ಲಿ ಅವಶ್ಯವಿರುವ ಜನಕ್ಕೆ ಸಹಾಯ ಮಾಡುತ್ತೇವೆ ಅಂತಿಟ್ಟುಕೊಳ್ಳೋಣ! ಅವರು ಕೃತಜ್ಞತೆ ಉಳ್ಳವರಾದರೆ ನಮ್ಮಲ್ಲಿ ಈ ಗುಣ ಬೆಳೆಯುತ್ತಾ ಶಾಶ್ವತವಾಗುತ್ತದೆ. ಅದೇ ಅವರು ಕೃತಘ್ನರಾದರೆ ನಮ್ಮ ಸ್ವಾಭಾವಿಕ ಗುಣವನ್ನು ಬದಲಿಸಿಕೊಳ್ಳುತ್ತೇವೆ. ಇದೇ ರೀತಿಯಲ್ಲಿ ಅನೇಕ ಗುಣಗಳನ್ನು ಹೆಸರಿಸಬಹುದು. ಒಂದು ಸಿದ್ದಾಂತದ ಮೇಲೆ ನಾವು ದೃಢವಾಗಿ ಇದ್ದರೂ ಕಾಲಮಾನ ಪರಿಸ್ಥಿತಿಗಳು, ನಮಗೆ ಒದಗಿ ಬರುವ ಸಂದರ್ಭಗಳು ಆ ದೃಢತೆಯನ್ನು ಸಡಿಲಗೊಳಿಸುವ ಅವಕಾಶಗಳು ಬೇಕಾದಷ್ಟಿದೆ.” ಎಂದರು.
“ಇದಕ್ಕಿಂತ ಸ್ಪಷ್ಟವಾದ ಉತ್ತರ ನಿಮಗೇನು ಬೇಕು? ಒಂದು ಸಿದ್ದಾಂತಕ್ಕೆ ಬದ್ದರಾದಮೇಲೆ- ಯಾವ ಕಾರಣಕ್ಕೂ ಬದಲಾಗಬಾರದು ಅನ್ನುತ್ತಾನೆ ಗಂಡು!- ಆಗಲಾರ ಕೂಡ! ಅದು ನಮ್ಮತನವನ್ನು ಇಲ್ಲವಾಗಿಸುತ್ತದೆ! ಹೆಣ್ಣು ತಾನು ಮಾಡಿದ್ದರ ಪ್ರತಿಫಲಕ್ಕೆ ಅನುಸಾರವಾಗಿ ಸುಲಭದಲ್ಲಿ ಬದಲಾಗಬಲ್ಲಳು- ಗೊಂದಲ- ಅದು ಅವಳ ಸಹಜ ಗುಣ!” ಎಂದೆ.
ಅವರೇನೂ ಮಾತನಾಡಲಿಲ್ಲ!
“ಈಗ ನೋಡಿ- ನಾನು ನಮ್ಮ ಸಹಜ ಗುಣಗಳಬಗ್ಗೆ ಹೇಳುವಾಗ ನೀವು ಅದನ್ನು ಗಂಡಿನೊಂದಿಗೆ ಹೋಲಿಸುತ್ತಿದ್ದಿರಿ! ಗಂಡಿಗಿಂತ ಹೆಣ್ಣು ಶ್ರೇಷ್ಟ ಗಂಡಿಗಿಂತ ಹೆಣ್ಣು ಶ್ರೇಷ್ಟ ಅಂತ...! ಯಾಕೆ? ಇದರಲ್ಲಿ ಗಂಡಿನಬಗೆಗಿನ ನಿಮ್ಮ ದೃಷ್ಟಿಕೋನವನ್ನು ತೀರ್ಮಾನಿಸಲೆ? ನೀವು ಗಂಡು ದ್ವೇಶಿ ಅನ್ನಲೆ? ಗಂಡು ಹೆಣ್ಣಿನಬಗ್ಗೆ ಹೇಳಿದಾಗ- ಅದು ನಕಾರಾತ್ಮಕವಾಗಿದ್ದರೆ- ಅದು ಹೆಣ್ಣಿನಬಗೆಗಿನ ಸ್ಟೇಟ್‌ಮೆಂಟಾಗಿ ತೆಗೆದುಕೊಳ್ಳುವುದರಲ್ಲೇ ನಿಮಗೆ ಗಂಡಿನಮೇಲಿರುವ ಅಭಿಪ್ರಾಯ ಗೋಚರಿಸುತ್ತದೆ! ಇದರ ಬೇಸ್ ಅಸೂಯೆಯೇ....!” ಎಂದೆ.
ಒಂದು ಕ್ಷಣ ಮೌನ!
“ಇನ್ನು.... ನಿನಗೆಷ್ಟು ಹೆಣ್ಣಿನ ಪರಿಚಯವಿದೆ- ಅಂದಿರಿ....! ಹುಟ್ಟಿದಂದಿನಿಂದ- ಶಾಲಾಕಾಲೇಜುಗಳಲ್ಲಿ ಓದುವಾಗಿನ ಗೆಳತಿಯರಿಂದ ಹಿಡಿದು- ಡಿವೋರ್ಸ್ ಕೊಡುತ್ತಿರುವ ಹೆಂಡತಿಯವರೆಗೆ ಎಷ್ಟೋ ಎಷ್ಟೋ ಹೆಣ್ಣಿನ ಪರಿಚಯ ನನಗಿದೆ! ಎಷ್ಟೋ ಗಂಡು- ಹೆಣ್ಣಿನ (ಗಂಡ ಹೆಂಡತಿ) ಜೀವನವನ್ನು ನೋಡಿದ್ದೇನೆ! ಅಕ್ಕಂದಿರ ನಡುವೆ ಜಗಳವೇರ್ಪಡುವಂತೆ- ನನ್ನೊಂದಿಗೆ ಜಗಳ ಏರ್ಪಡುವುದಿಲ್ಲ! ಅಮ್ಮ ದೊಡ್ಡಮ್ಮನಮಧ್ಯೆಯೂ ನಾನು ಈ ಗುಣಗಳನ್ನು ಕಂಡಿದ್ದೇನೆ! ತರಗತಿಯಲ್ಲೂ ಹೆಣ್ಣುಮಕ್ಕಳಂತೆ ಅರಚಾಟ ವಾದ ವಿವಾದಗಳು ಗಂಡುಮಕ್ಕಳನಡುವೆ ಉಂಟಾಗುವುದಿಲ್ಲ! ಯಾವುದೇ ಸಾಹಿತ್ಯವನ್ನು ತೆಗೆದುಕೊಂಡರೂ ಗಂಡು ಹೆಣ್ಣಿನ ಸಹಜ ಗುಣಗಳನ್ನು ನಾವು ನೋಡಬಹುದು! ಇದನ್ನೆಲ್ಲಾ ಹೆಣ್ಣನ್ನು ಕೀಳಾಗಿಸಲು ಹೇಳುತ್ತಿಲ್ಲ! ಕೆಲವೊಂದು ವಾಸ್ತವವನ್ನು ನಾವು ಒಪ್ಪಲೇ ಬೇಕು! ಆ ವಾಸ್ತವವನ್ನು ಹೇಳಿದ್ದರಿಂದ ಹೇಳಿದವರನ್ನು ದೂಶಿಸುವುದು ಅಷ್ಟು ಒಳ್ಳೆಯ ಬೆಳವಣಿಗೆಯಲ್ಲ! ಒಂದು ಕಥೆಯಲ್ಲಿ ಹೆಣ್ಣು ಕೆಟ್ಟವಳಾದಳು- ಅದು ಕಥೆಗಾರನಿಗೆ ಹೆಣ್ಣಿನಮೇಲಿರುವ ದ್ವೇಶವಲ್ಲ! ಅಥವಾ ಬೇಕೆಂದೇ ಕೆಟ್ಟವಳನ್ನಾಗಿ ಮಾಡಿದ್ದಲ್ಲ! ಅದು- ಆ ಘಟನೆ ಅಥವಾ ಸಂದರ್ಭ- ಹಾಗೆಯೇ ಇದೆ ಅಂದಮೇಲೆ ಹಾಗೆಯೇ ಬರೆಯದೆ ಏನು ಮಾಡಲಿ? ಹಾಗೆ ಬರೆದದ್ದರಿಂದ ಕಥೆಗಾರನನ್ನು ಹಳಿದರೆ.... ಹಾಗೆ ನಡೆದದ್ದು ತಪ್ಪಲ್ಲ- ಅದನ್ನು ಹೇಳಿದ್ದು ತಪ್ಪು ಅನ್ನುವಂತಿದೆ ನಿಮ್ಮ ವಾದ!” ಎಂದೆ.
“ಹೆಣ್ಣಿನ ಸಹಜ ಗುಣಗಳಬಗ್ಗೆ ಇಷ್ಟು ವಿವರಣೆ ಕೊಡುತ್ತಿರುವವನು ಗಂಡಿನ ಗುಣವನ್ನು ಮುಚ್ಚಿಡುತ್ತಿದ್ದೀಯಲ್ಲ ಯಾಕೆ?” ಎಂದರು!
“ನಾನು ಮುಚ್ಚಿಟ್ಟೆನೆ? ಗಂಡಿನ ಸಹಜಗುಣ ಅಹಂಕಾರ ಎಂದೆ! ನೀವೇನು ಮಾಡಿದಿರಿ? ಅದರಬಗ್ಗೆ ಏನೂ ಹೇಳಲಿಲ್ಲ- ಕೇಳಲಿಲ್ಲ! ಅದರ ಅರ್ಥ ನೀವದನ್ನು ಒಪ್ಪಿಕೊಂಡಿರಿ ಅಂತ- ಅಲ್ಲವೇ?” ಎಂದೆ.
ಅವರೇನೂ ಮಾತನಾಡಲಿಲ್ಲ!
“ಗಂಡಿನ ಅಹಂಕಾರಕ್ಕೆ ಉದಾಹರಣೆ- ಈ ಕಥೆಗಿಂತ ಇನ್ನೇನು ಬೇಕು!?” ಎಂದೆ.
ಮುಗುಳು ನಕ್ಕರು...,
“ಆದರೆ ಸಂಶಯ ಮಾತ್ರ ಹೆಣ್ಣಿನ ಗುಣವಲ್ಲ!” ಎಂದರು.
೨
“ಹೃದಯ ಹಿಂಡಿದಂತೆ- ನೋವು!” ಎಂದಳು.
“ಏನಾಯಿತೆ?” ಎಂದೆ.
“ನಿನ್ನಮೇಲಿನ ನಂಬಿಕೆ- ಸಡಿಲಗೊಳ್ಳುತ್ತಿದೆ!” ಎಂದಳು.
ನನ್ನ ವಿಷಾದ ಅವಳನ್ನು ತಾಕುವುದಿಲ್ಲ!
ಅವಳ ನೋವು ನನಗೆ ದುಃಖ ಕೊಡುತ್ತದೆ! ಅದರಲ್ಲಿ ಆಶ್ಚರ್ಯವಿಲ್ಲ! ಆದರೆ ಅವಳ ಆ ನೋವಿಗೆ ಕಾರಣ ನಾನೆನ್ನುವುದು- ನನ್ನ ನಿಯತ್ತೆನ್ನುವುದು- ನನ್ನನ್ನೆಷ್ಟು ವಿಷಾದಕ್ಕೆ ತಳ್ಳುತ್ತದೋ ಅವಳಿಗೆ ತಿಳಿಯುವುದಿಲ್ಲ!
ಈ.... ‘ನಂಬಿಕೆ'ಯ ಮಾನದಂಡವೇನೋ....! ಅಥವಾ.... ನಿಜಕ್ಕೂ.... ಈ ನಂಬಿಕೆಯ 'ಅರ್ಥವೇನು?’
ತೆರೆದುಕೊಂಡಷ್ಟೂ ಅಪನಂಬಿಕೆಗೆ ಒಳಗಾಗುವುದು ಹೆಣ್ಣಿನೊಂದಿಗೆ ಮಾತ್ರ ಸಾಧ್ಯ!
“ನೀನು ಬೇರೆ ಹೆಣ್ಣಿನೊಂದಿಗೆ ಮಾತನಾಡುವುದು- ಬೆರೆಯುವುದು ನನಗಿಷ್ಟವಿಲ್ಲ! ದೂರವಾಗೋಣ!” ಎಂದು ಹೇಳಿ ದೂರವಾಗುವ ಹೆಣ್ಣಿನ ಬಗೆಗೆ ನನಗೆ ಗೌರವವಿದೆ! ಅದು ವಾಸ್ತವ...! ಆದರೆ ಬೇರೆ ಹೆಣ್ಣನ್ನು ಪರಿಚಯವಾದೆ ಎಂದು ಹೇಳಿದ ಕ್ಷಣ- ನಿನ್ನ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದೇನೆ ಎಂದು ಹೇಳಿ- ನನ್ನೊಳಗೊಂದು ಕೀಳರಿಮೆ ಹುಟ್ಟಿಸಿ- ನನ್ನನ್ನು ದೂಷಿಸಿ ದೂರವಾಗುವುದು ಅಷ್ಟು ಒಳ್ಳೆಯ ವಾದವಲ್ಲ!! ಇಲ್ಲಿ ನನ್ನ ಮೇಲಿನ ನಂಬಿಕೆ ಕಳೆದುಕೊಳ್ಳಲು ಕಾರಣ- “ಬೇರೆ ಹುಡುಗಿಯನ್ನು ಪರಿಚಯವಾದೆ!” ಎಂದು ನಾನು ಹೇಳಿದ- ನಿಜ- ನನ್ನ ನಿಯತ್ತು!!
ಹೆಣ್ಣೆಂದರೆ ದೈವಾಂಶಸಂಭೂತಳು ಅನ್ನುವುದು ನನ್ನ ನಂಬಿಕೆ! ಯಾವೊಂದು ಹೆಣ್ಣಿನ ಸಾನ್ನಿಧ್ಯವನ್ನೂ ಬೇಡ ಅನ್ನುವವನಲ್ಲ! ಹಾಗೆಂದು ಅದನ್ನು ಮುಚ್ಚಿಡುವವನೂ ಅಲ್ಲ! ನೆನಪಿರಲಿ- ವ್ಯಕ್ತಿಗತವಾಗಿ ಯಾರೊಂದಿಗೆ ಹೇಗೆ ಅನ್ನುವುದು ನಾನು ಮತ್ತು ಆ ಹೆಣ್ಣಿನ ಹೊರತು ಪ್ರಪಂಚದ ಯಾರೆಂದರೆ ಯಾರೊಬ್ಬರಿಗೂ ತಿಳಿಯುವುದಿಲ್ಲ! ಆದರೆ ನಾನು ಹೇಗೆ ಅನ್ನುವುದನ್ನು ಮಾತ್ರ ನಾನು ಮುಚ್ಚಿಡಲು ಹೋಗುವುದಿಲ್ಲ- ಈ ಮುಚ್ಚಿಡದೇ ಇರುವುದೇ- ಹೆಣ್ಣು ನನ್ನ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಕಾರಣವಾಗುವುದು- ನನ್ನ ಜೀವನದ ಅತಿ ದೊಡ್ಡ ವಿಪರ್ಯಾಸ- ವಿರೋಧಾಭಾಸ!
ಒಬ್ಬಳು ಹೇಳುತ್ತಾಳೆ-
“ನೀವಿಬ್ಬರೂ ಒಂದೇ ಸಮಯದಲ್ಲಿ ಆನ್‌ಲೈನ್ ಇರುತ್ತೀರ! ನನಗೆ ಮೆಸೇಜ್ ಮಾಡುವುದಿಲ್ಲ!”
ಇನ್ನೊಬ್ಬಳು ಹೇಳುತ್ತಾಳೆ-
“ನಾನು ಕಾಲ್ ಮಾಡಿದ್ದೆ! ಬ್ಯುಸಿಬಂತು! ನಾನು ಆಪ್ಷನ್!”
ಪ್ರತಿ ಹೆಣ್ಣಿಗೂ ಪ್ರತ್ಯೇಕವಾದ ಹೃದಯವಿದೆ! ಮಿದುಳಿದೆ! ಭಾವನೆಗಳಿದೆ ಎಂದು ನಂಬುವವನು ನಾನು! ಮತ್ತೆ ಹೋಲಿಕೆ ಯಾಕೆ? ಒಬ್ಬರು ಇಪ್ಪತ್ತನಾಲ್ಕು ಗಂಟೆ ಸಮಯವೂ ಆನ್‌ಲೈನ್ ಇದ್ದು- ನಾನು ಮಧ್ಯೆ ಒಮ್ಮೆ ಆನ್‌ಲೈನ್‌ಗೆ ಬಂದರೆ ಅರ್ಥ- ಅವರೊಂದಿಗೆ ಮಾತನಾಡಲೆಂದೇ? ಕಾಲ್ ಮಾಡಿದಾಗ ಬ್ಯುಸಿ ಬಂದರೆ ಅರ್ಥ ನಾನು ಇನ್ನೊಬ್ಬಳು ಹೆಣ್ಣಿನೊಂದಿಗೇ ಮಾತನಾಡುತ್ತಿದ್ದೆನೆಂದೇ? ಹಾಗೆ ಇದ್ದರೂ ನಾನದನ್ನು ನೇರವಾಗಿಯೇ ಹೇಳುತ್ತೇನಲ್ಲ....? ಮತ್ತೇನು ಸಮಸ್ಯೆ?
ಪ್ರತಿಹೆಣ್ಣು ಮಾಡುವ ತಪ್ಪು.... ಅವಳೊಂದಿಗೆ ನಾನು ಹೇಗೆ ಎಂದು ಅಳೆಯುವುದು ಬಿಟ್ಟು- ಇತರರೊಂದಿಗೆ ನಾನು ಹೇಗೆ ಎನ್ನುವುದನ್ನು ನೋಡಿ ತನ್ನೊಂದಿಗಿನ ನನ್ನನ್ನು ತೀರ್ಮಾನಿಸುವುದು!! ಅದಕ್ಕೆ ಕಾರಣ....,
“ಸಂಶಯ! ಅಸೂಯೆ! ಗೊಂದಲ....! ಚಂಚಲತೆ!!!”
Comments
Post a Comment