ಸತ್ಯಂ ಶಿವಂ ಸುಂದರಂ
ಸತ್ಯಂಶಿವಂಸುಂದರಂ!
*
ಕಾಲು ನಡಿಗೆಯ ಪ್ರಯಾಣ. ದಿನಕ್ಕೊಂದು ಹೊತ್ತು ಊಟ. ಎರಡುಗಂಟೆ ಸಮಯ ನಿದ್ರೆ. ಯಾಕೆ ಈ ದಂಡನೆಯೋ ತಿಳಿಯದು. ದಿನಗಳುರುಳಿದವು. ತಪಸ್ಸು ಹೀಗೇ ಇರುತ್ತದಂತೆ. ಯಾಕೆ ತಪಸ್ಸು?
*
ಗಂಡು ಹೆಣ್ಣು
ಪುರುಷ ಪ್ರಕೃತಿ
ಎಷ್ಟು ಹೇಳಿದರೇನು- ಹುಡುಕಿದರೇನು....!
ಈ ನಾನು- ಅಹಂ- ಅನ್ನುವುದು ಅತಿ ಪ್ರಭಲವಾದದ್ದು!
ಅಹಂಬ್ರಹ್ಮಾಸ್ಮಿಯ ಪಾಠದ ಕೊನೆಗೆ-
“ನಿನ್ನನ್ನು ನೀನು ತಿಳಿ!” ಎಂದರು ಗುರುಗಳು.
“ನಿಮ್ಮಿಂದ ನಾನು ಬೇರೆಯೇ ಗುರುಗಳೇ...?” ಎಂದೆ ನಾನು!
“ಮೊದಲು ದ್ವೈತ- ನಂತರ ಅದ್ವೈತ!” ಎಂದರು ಗುರುಗಳು.
“ಯಾಕೆ ಗುರುವೇ...? ನನಗೆಲ್ಲವೂ ನಾನೇ ಆಗಿ ಕಾಣಿಸುತ್ತಿರುವಾಗ ದ್ವೈತವೇಕೆ?” ಎಂದೆ.
ಅಹಂ! ತನ್ನನ್ನು ಮೀರಿದನೇ ಶಿಷ್ಯ- ಅನ್ನುವ ಅಹಂ! ಕೆಲವು ಕ್ಷಣಗಳು ಮಾತ್ರ! ನಂತರ....,
“ನಿನ್ನ ಅರಿವು ಪರಮಪದವನ್ನು ತಲುಪಿದೆ! ನೀನಿನ್ನು ಹೊರಡಬಹುದು...!” ಎಂದರು ಗುರುಗಳು.
“ಗರುರ್ಬ್ರಹ್ಮ, ಗುರುರ್ವಿಷ್ಣೋ, ಗುರುರ್ದೇವೋ ಮಹೇಶ್ವರಾಃ ಗುರುರ್ಸಾಕ್ಷಾತ್ ಪರಃಬ್ರಹ್ಮ ತಸ್ಮೈಶ್ರೀ ಗುರವೇ ನಮಹ! ಎಂದೆಂದಿಗೂ ನಿಮ್ಮ ಆಶೀರ್ವಾದ ನನ್ನ ಶ್ರೀರಕ್ಷೆಯಾಗಿರಲಿ ಗುರುವೇ...!” ಎಂದೆ.
ಮುಗುಳು ನಕ್ಕರು ಗುರುದೇವ...,
“ಮಾತಾ ಪಿತಾ ಗುರುರ್ದೈವಂ! ಮೊದಲು ತಾಯಿ, ನಂತರ ತಂದೆ, ಆನಂತರ ಗುರು... ಇವರು ಮೂವರ ನಂತರ ಸಾಕು ದೇವರು! ಹೋಗಿ ಬಾ...!” ಎಂದರು.
ಇಷ್ಟರಲ್ಲಿ ನನಗೆ ಅರಿವಾಯಿತು- ನಿನಗಿಂತ ಯಾವತ್ತಿಗೂ ನಾನೇ ಶ್ರೇಷ್ಠ ಎಂದು ನಿರೂಪಿಸುವ ಮನಃಸ್ಥಿತಿಯಲ್ಲಿದ್ದಾರೆ ಗುರುದೇವ! ಹಾಗೇ ಇರಲಿ... ಅದೇ ನಾನವರಿಗೆ ನೀಡುವ ಗುರುದಕ್ಷಿಣೆ!
*
“ಓಯ್!” ಅನ್ನುವ ಕರೆಕೇಳಿ ತಿರುಗಿ ನೋಡಿದೆ.
ಪ್ರಕೃತಿ! ಹೆಸರೇ ಸೌಂಧರ್ಯದ ಸಂಕೇತ ಅಂದಮೇಲೆ- ವಿವರಣೆ ಅನಗತ್ಯ!
“ಕೊನೆಯ ಮಾತು ನಿನ್ನದೇ ಇರಬೇಕೆಂದುಕೊಳ್ಳುವವನು- ಗುರುವಿನ ಮಾತಿಗೆ ಮೌನವಾದೆ ಯಾಕೆ?” ಎಂದಳು.
“ಕೊನೆಯ ಮಾತು ಮನದಲ್ಲಿದೆ!” ಎಂದೆ.
“ಏನು?”
“ಗುರುವಿನಬಗ್ಗೆ ನಾನು ಹೇಳಿದ ಶ್ಲೋಕ- ಜ್ಞಾನಕ್ಕೆ ಸಂಬಂಧಿಸಿದ್ದು! ಗುರು ಹೇಳಿದ್ದು ಜ್ಞಾನಕ್ಕೆ ಸಂಬಂಧಿಸಿದ್ದನ್ನು ಅಳವಡಿಸಿಕೊಳ್ಳಬೇಕಾದ ಜೀವನಕ್ಕೆ ಸಂಬಂಧಿಸಿದ್ದು- ಜೀವನ ಧ್ಯೇಯ!” ಎಂದೆ.
“ಅಹಂಕಾರಿ!” ಎಂದಳು.
ಎಲ್ಲವೂ ಅಹಂನ ಸುತ್ತ ಸುತ್ತುತ್ತಿದೆ ಅನ್ನಿಸಿತು.
“ಏನೇ!” ಎಂದೆ.
“ನಾವೊಮ್ಮೆ ಮಾತನಾಡಿದ್ದು ಮರೆತೆಯಾ?” ಎಂದಳು.
“ಒಮ್ಮೆಯಾ? ಎಷ್ಟೋ ಸಾರಿ, ಎಷ್ಟೋ ಮಾತುಗಳು!” ಎಂದೆ.
“ಜಾಣ! ನಾವಿಬ್ಬರು ಸೇರುವಬಗ್ಗೆ!” ಎಂದಳು.
*
ಜೀವನದಲ್ಲಿ ಸಂಧಿಘಟ್ಟ ಅನ್ನುವುದೊಂದಿದೆಯಂತೆ!
ಪ್ರಾಮುಖ್ಯತೆ ಯಾವುದಕ್ಕೆ ಕೊಡಬೇಕು ಅನ್ನುವ ಪ್ರಶ್ನೆ ಉದಿಸುವ ಕಾಲ!
ಹೆಣ್ಣು- ಗಂಡು... ಅದೊಂದು ಸಂಘರ್ಷ- ಘರ್ಷಣೆ!
ಅದನ್ನು ಮೀರಬೇಕಾದರೆ....?
ಹೆಣ್ಣಿನಿಂದ ದೂರ ಓಡಲೇ?
ಮೀರಬೇಕಾದರೂ ಯಾಕೆ?
ಕೆಲವರಿದ್ದಾರೆ... ಅವರಿಗೆ ಪ್ರೇಮವೇನೆಂದು ತಿಳಿಯದು. ಪ್ರೇಮದ ಪರಾಕಾಷ್ಠೆ ತಿಳಿಯದು. ಅವರಿಗೆಲ್ಲವೂ ಕರ್ತವ್ಯ! ಗಂಡು ಹೆಣ್ಣಿನ ಸಂಘರ್ಷ ಅವರಿಗೆ ಅಸಹ್ಯ- ಮಹಾಪರಾಧ!
ಜೀವನ ಸೂತ್ರ ನಿಂತಿರುವುದೇ ಸತ್ಯಂ ಶಿವಂ ಸೌಂಧರ್ಯದಲ್ಲಿ!
ಜೀವನದ ಉದ್ದೇಶವೇನು?
ನೆಮ್ಮದಿ!
ಎಲ್ಲಿದೆ ನೆಮ್ಮದಿ?
ನಮ್ಮೊಳಗೆ!
ನನಗದು ಹೆಣ್ಣಿನಲ್ಲಿ ದೊರೆತರೆ....?
*
“ಇಷ್ಟುಬೇಗ ಸಾಕಾಯಿತೆ?” ಎಂದಳು.
ಪ್ರಶ್ನೆ! ಇದು ಸರಿಯೇ?
ನನ್ನ ನಿರಾಸಕ್ತಿಯನ್ನು ಕಂಡು,
“ಹೋಗಲೇ ಬೇಕೆ?” ಎಂದಳು.
“ಒಂದು ಸುತ್ತು ಹೊಡೆದು ಬರುತ್ತೇನೆ!” ಎಂದೆ.
“ತಪ್ಪಿಸಿಕೊಳ್ಳುತ್ತಿದ್ದೀಯ?” ಎಂದಳು.
“ಎಲ್ಲಿಗೆ?” ಎಂದೆ.
“ಅದೇ.... ಹೆಣ್ಣಿನಿಂದ..!” ಎಂದಳು.
“ಯಾರಿಂದ ಅನ್ನಲಿಲ್ಲ.... ಎಲ್ಲಿಗೆ ಎಂದೆ!” ಎಂದೆ.
ನಿಟ್ಟುಸಿರಿಟ್ಟಳು.
“ಹೋಗುತ್ತಿರುವ ಉದ್ದೇಶವೇನು?” ಎಂದಳು.
“ನಿನ್ನನ್ನು- ಅಂದರೆ- ಪ್ರಕೃತಿ ನಿಯಮವನ್ನು ಅರಿಯುವುದು!” ಎಂದೆ.
“ಸರಿ, ಹೋಗಿ ಬಾ! ಆದರೆ ಬಾ..!” ಎಂದಳು.
“ಪ್ರಕೃತಿನಿಯಮ ನಿನ್ನೆಡೆಗೆ ಬರುವುದಕ್ಕೆ ಅನುಗುಣವಾಗಿದ್ದರೆ!” ಎಂದೆ.
*
ಕಾಲು ನಡಿಗೆಯ ಪ್ರಯಾಣ. ದಿನಕ್ಕೊಂದು ಹೊತ್ತು ಊಟ. ಎರಡುಗಂಟೆ ಸಮಯ ನಿದ್ರೆ. ಯಾಕೆ ಈ ದಂಡನೆಯೋ ತಿಳಿಯದು. ದಿನಗಳುರುಳಿದವು. ತಪಸ್ಸು ಹೀಗೇ ಇರುತ್ತದಂತೆ.
ಯಾಕೆ ತಪಸ್ಸು?
ದೈಹಿಕ ವಾಂಛೆಗಳನ್ನು ಮೀರಲು..!
ಯಾಕೆ ಮೀರಬೇಕು?
ದೇವರಿಗೇ ಗೊತ್ತು!
*
ಸತ್ಯಂ ಶಿವಂ ಸುಂದರಂ!
ಏನು ಸತ್ಯ?
ಪ್ರಪಂಚ ಸತ್ಯ! ನಾನು ಹುಟ್ಟಿರುವುದು ಸತ್ಯ! ಬದುಕುತ್ತಿರುವುದು ಸತ್ಯ! ಕೊನೆಗೆ ಸಾಯುವುದೂ ಸತ್ಯವೇ- ಪರಮ ಸತ್ಯ!
ಸತ್ಯದ ಅನ್ವೇಷಣೆಯಲ್ಲಿ....,
ಸೃಷ್ಟಿ- ಸ್ಥಿತಿ- ಲಯಗಳು ಕಾಣಿಸುತ್ತವೆ!
ಏನು ಶಿವಂ?
ಸತ್ಯವನ್ನು ಕಂಡುಕೊಳ್ಳುವ ದೈವೀಕತೆ! ಅಹಂ ಬ್ರಹ್ಮಾಸ್ಮಿ ಅನ್ನುವ ಅರಿವು! ದೇವರು ನನ್ನಿಂದಲೋ ನಾನು ದೇವರಿಂದಲೋ ಹೊರತಲ್ಲ ಅನ್ನುವ ಅರಿವು- ಶಿವಂ!
ಬ್ರಹ್ಮಾಂಡವೆಲ್ಲಾ ಶಿವಮಯ!
ಇಲ್ಲಿ ಸೃಷ್ಟಿ- ಲಯಗಳಿಲ್ಲ! ಸ್ಥಿತಿ ಮಾತ್ರ- ಇರುವಿಕೆ..!
ಇನ್ನು... ಏನು ಸುಂದರಂ?
ಪ್ರಪಂಚ ಚೈತನ್ಯದ ಅರಿವು- ಸತ್ಯ ಮತ್ತು ಶಿವದ ಅನುಭಾವ!
ಸೌಂಧರ್ಯ ಅಂದರೆ ಚೈತನ್ಯ.... ಪ್ರಕೃತಿಯನ್ನು ಚಾಲಿಸುವ ಶಕ್ತಿ! ಪ್ರತಿಯೊಂದರಲ್ಲೂ ಇರುವ ಜೀವಕಳೆ!
ಅರ್ಥವಾಯಿತೇ?
ನಮ್ಮೆದುರಿಗೆ ಇರುವುದು- ನಮ್ಮನ್ನೂ ಒಳಗೊಂಡಂತೆ ಕಾಣುವ ಪ್ರತಿಯೊಂದೂ- ಪ್ರಕೃತಿ!
ಪ್ರಕೃತಿಗೊಂದು ಚಲನೆ ನೀಡುವುದು, ಕಳೆ ನೀಡುವುದು, ಚೈತನ್ಯವನ್ನು ತುಂಬುವುದು- ಪುರುಷ!!
ಪ್ರಕೃತಿಯಿಲ್ಲದೆ ಪುರುಷನಿಲ್ಲ! ಪುರುಷನಿಲ್ಲದೆ ಪ್ರಕೃತಿಯಿಲ್ಲ!
ಪ್ರಕೃತಿ ಪುರುಷರ ಸಂಯೋಗ- ಸೃಷ್ಟಿ!!
ಪ್ರಕೃತಿ ಪುರುಷರ ಹೊಂದಾಣಿಕೆ- ಸ್ಥಿತಿ!!!
ಪ್ರಕೃತಿ ಪುರುಷರ ವಿರಸ- ಲಯ!!!!
ಸತ್ಯಂ ಶಿವಂ ಸುಂದರಂ- ಹೊಂದಿಕೊಂಡಿದ್ದಷ್ಟೂ ಬ್ರಹ್ಮಾಂಡ!
ಹೊಂದಿಕೆ ನಷ್ಟವಾದಂದು- ಪ್ರಳಯ!
ಅದೊಂದು ಚಕ್ರ!
*
ತಪಸ್ಸು ನಿಲ್ಲಿಸಿದೆ! ಮರಳಿ ಪ್ರಕೃತಿಯ ಮಡಿಲನ್ನು ಸೇರಿದೆ!!
ನನ್ನ ಮನಸ್ಸು ನನ್ನ ನಿಯಂತ್ರಣದಲ್ಲಿರುವಷ್ಟುಕಾಲ ಯಾವುದನ್ನೇ ಆದರೂ ಬೇಡ ಅನ್ನುವ ಬಲವಂತದ ನಿಯಮ- ಅತಿರೇಕ!
ಮನುಷ್ಯ ನಾನು!
ಪ್ರಕೃತಿ ನಿಯಮಕ್ಕೆ ಬದ್ಧನೇ ಹೊರತು- ಕಾಲಕ್ಕೆ ತಕ್ಕಂತೆ ಮನುಷ್ಯ ರೂಪಿಸಿಕೊಂಡಿರುವ ಅತಿರೇಕದ ನಿಯಮಕ್ಕೆ ನಾನು ಅತೀತ! ಬಲವಂತವಾಗಿ ನನಗೇನೂ ಬೇಡ! ಪ್ರಾಕೃತಿಕವಾಗಿದ್ದು...? ಪ್ರಕೃತಿ ನೀಡಿದ್ದು...? ಕಳೆದುಕೊಳ್ಳಲಾರೆ!!
ಸಮಾಜದ ಕಟ್ಟುಪ್ಪಾಡುಗಳನ್ನು ಮೀರಿ ನಿಂತವರನ್ನು ತೆಗಳುವವರು ಕೈಯ್ಯಲ್ಲಾಗದವರೇ ಹೊರತು- ಶ್ರೇಷ್ಠರಲ್ಲ!!
ನೆನಪಿರಲಿ.... ಸಮಾಜದ ಸಮತೋಲನ ಕಾಪಾಡಲು ರೂಪಿಸಿದ ಕಾನೂನಿನ ಬಗ್ಗೆ ನನಗೆ ಗೌರವವಿದೆ... ಆದರೆ ಮನುಷ್ಯ ತನ್ನಸುತ್ತ ತಾನೇ ರಚಿಸಿಕೊಂಡಿರುವ ಪ್ರಕೃತಿವಿರುದ್ಧ ವೃತ್ತದಬಗ್ಗೆ ನನಗೆ ಗೌರವವಿಲ್ಲ!
ತನ್ನನ್ನು ತಾನು ಅರಿತುಕೊಳ್ಳುವುದು ಎಂದರೆ ಅರ್ಥ- ಪ್ರಪಂಚ ತನ್ನ ಹೊರತಲ್ಲ, ತನಗಾಗಿ-ಎಂದು ತಿಳಿದುಕೊಳ್ಳುವುದು!
ಸತ್ಯವನ್ನು ತಿಳಿದುಕೊಳ್ಳುವುದು ನನ್ನ ಕರ್ತವ್ಯ! ಕಂಡುಕೊಂಡ ಸತ್ಯದಲ್ಲಿ ದೈವತ್ವವನ್ನು ಕಾಣುವುದು ನನ್ನ ಕರ್ತವ್ಯ ಮತ್ತು ಹಕ್ಕು! ಸೌಂಧರ್ಯವನ್ನು ಅದಕ್ಕೆ ಧಕ್ಕೆ ಬರದಂತೆ ಆಸ್ವಾದಿಸುವುದು ಪರಿಪೂರ್ಣವಾಗಿ ನನ್ನ ಹಕ್ಕು!!
ಸತ್ಯಂಶಿವಂಸುಂದರಂ! ಇದಕ್ಕನುಗುಣವಾಗಿ ನನ್ನ ಜೀವನವಿರುವಷ್ಟು ಕಾಲ- ನನ್ನನ್ನು ತೀರ್ಮಾನಿಸಲು ಯಾರಿಗೂ ಸಾಧ್ಯವಿಲ್ಲ!! ಇದಕ್ಕೆ ವಿರುದ್ಧವಾದಂದು.... ನನ್ನ ಅಸ್ಥಿತ್ವವೇ ಇರುವುದಿಲ್ಲ!!
Comments
Post a Comment