ಇರಬಹುದು!!
ಇರಬಹುದು!!
೧.
ಮನಸ್ಸಿಗೆ ತೋಚಿದ ವಿಷಯಕ್ಕೆ- ಉದ್ಭವಿಸಿದ ಸಂಶಯಕ್ಕೆ- ಸ್ಪಷ್ಟವಾದ ಉತ್ತರವನ್ನು ಹುಡುಕುವವನು ನಾನು! ಸಿಗುವವರೆಗೆ ನೆಮ್ಮದಿ ಇರುವುದಿಲ್ಲ! ಕೆಲವೊಮ್ಮೆ ಉತ್ತರ ಸಿಗುವುದಿಲ್ಲ. ಆದರೂ ನನ್ನರಿವಿಲ್ಲದೆ ನನ್ನೊಳಗೆ ವಿಮರ್ಶೆ ನಡೆಯುತ್ತಿರುತ್ತದೆ! ಯಾವುದೇ ಘಟನೆಯಾದರೂ ಯಾವುದೇ ಚಿಂತೆ ಅಥವಾ ಭಾವವಾದರೂ ಅದಕ್ಕೊಂದು ಕಾರಣ ಇರಲೇ ಬೇಕು! ಅದು ನಮ್ಮ ಅರಿವಿನ ಮಿತಿಗೆ ಎಟುಕದೆ ಹೋಗಬಹುದು... ಆದರೂ ಅದು ಹೀಗೆ "ಇರಬಹುದೇ" ಅನ್ನುವ ಚಿಂತೆಯಂತೂ ಬರುತ್ತದೆ! ಅದು ಆಧ್ಯಾತ್ಮಿಕವಾಗಿಯಾದರೂ ಸರಿ- ತಾತ್ತ್ವಿಕವಾಗಿಯಾದರೂ ಸರಿ!!
ಈಗ ಎರಡು ಸಮಸ್ಯೆಗಳು ನನ್ನನ್ನು ಕಾಡುತ್ತಿದೆ-
ಒಂದು- ನಾನು ಹೇಗೆ ಕಥೆಗಾರನಾದೆ!! ನಾನು ಬರೆದ ಕೆಲವೊಂದು ಕಥೆಗಳನ್ನು ಓದಿದಾಗ- ನಾನೇ ಬರೆದೆನೆ ಅನ್ನುವಷ್ಟು ಆಶ್ಚರ್ಯವಾಗುತ್ತದೆ! ಅದು ಹೇಗೆ ಬರೆಯುವವನಾದೆ? ಹೇಗೆ ತೋಚುತ್ತದೆ?
ಎರಡು- ಅಕಾರಣವಾಗಿ ಒಬ್ಬರಮೇಲೆ ಹೇಗೆ ಅಭಿಮಾನವುಂಟಾಗುತ್ತದೆ ಅನ್ನುವ ಸಮಸ್ಯೆ! ನನ್ನ ಜೀವನದಲ್ಲಿ ನಾನು ವ್ಯಕ್ತಿಗಳಿಗೆ ಹೆಚ್ಚು ಮಹತ್ವ ಕೊಟ್ಟವನಲ್ಲ- ಅಥವಾ ಎಲ್ಲರಿಗೂ ಸಮಾನ ಮಹತ್ವ ಕೊಟ್ಟವನು! ಯಾರೂ ನನಗೆ ಹೆಚ್ಚಲ್ಲ- ಅಥವಾ ಯಾರೂ ನನಗೆ ಕಡಿಮೆಯಲ್ಲ.... ಹುಟ್ಟಿನಿಂದ ಮತ್ತು ಒಡನಾಟದಿಂದ ಉತ್ಪತ್ತಿಯಾದ ಅಭಿಮಾನ ಬಿಡೋಣ... ಅಪ್ಪ ಅಮ್ಮ ಗೆಳೆಯ ಗೆಳತಿಯರು- ಪರಿಚಿತರು.... ನಾನು ಹೇಳುತ್ತಿರುವ ಅಭಿಮಾನ ಇದಲ್ಲ... ನಟರಿರಬಹುದು- ಸಂಪನ್ನರಿರಬಹದು- ಬರಹಗಾರರೇ ಇರಬಹದು- ಇನ್ನೂ ಹೇಳಬೇಕೆಂದರೆ... ಸೆಲಬ್ರಿಟಿಗಳು! ವಿಐಪಿಗಳು! ಪ್ರಖ್ಯಾತರು ಅನ್ನುವವರ ಬಗ್ಗೆ ನನಗೇನೂ ಅಂತಹ ಉತ್ಸಾಹವಿಲ್ಲ- ಅಭಿಪ್ರಾಯವಿಲ್ಲ! ಅವರೂ ಮನುಷ್ಯರೇ... ಕೆಲವರು ಕುಟುಂಬ ಮಹಿಮೆಯಿಂದ ಕೆಲವರು ಸ್ವ ಸಾಮರ್ಥ್ಯದಿಂದ ಆ ಹಂತಕ್ಕೆ ಬಂದಿರಬಹುದು! ಹಾಗೆಂದು ಹೆಚ್ಚುಗಾರಿಕೆಯೇನು? ಅವರಿಗಿರುವುದೂ ರಕ್ತವೇ.... ಪ್ರಾಣವೇ....
ಆದರೂ ಒಬ್ಬ ಲೇಖಕರಮೇಲೆ ಅಕಾರಣ ಅಭಿಮಾನ ಉಂಟಾಯಿತಲ್ಲಾ... ಯಾಕೆ?
ಹೌದು! ಹೀಗೆ- ಇರಬಹದು!
ನಾನೂ ಒಬ್ಬ ಕಥೆಗಾರ! ನಾನು ಬರೆಯುವ ಕಥೆಗಳಲ್ಲಿನ ಪಾತ್ರಗಳಾಗಲಿ- ಘಟನೆಗಳಾಗಲಿ- ವಸ್ತುಗಳಾಗಲಿ- ವಿವರಿಸುವ ಏನೇ ಆಗಲಿ- ಕಥೆಯಲ್ಲಿ "ನಾನೇ" ಆಗುತ್ತೇನೆ! ಅದು ನನ್ನ ಉತ್ಪತ್ತಿ! ಪ್ರತಿಯೊಂದರಲ್ಲೂ ನಾನಿರುತ್ತೇನೆ! ನಾನಿಲ್ಲದೆ ನನ್ನ ಕಥೆಯಿಲ್ಲ!! ನಾನು ಬರೆದ ಕಥೆಯನ್ನು ನಾನೇ ಓದುವಾಗ ಒಂದು ತೃಪ್ತಿ! ಅದು ನನ್ನ ಸೃಷ್ಟಿಯಾದ್ದರಿಂದ ಅಣುಅಣುವಿನಲ್ಲೂ ನಾನೇ...!
ಸರಿ... ನಾನು ಮತ್ತೊಬ್ಬರ ಕಥೆಯನ್ನು ಓದುತ್ತೇನೆ- ಆಗ??
ಹೌದು ರೂಪಗೊತ್ತಿಲ್ಲದಿದ್ದರೂ ಕಥೆ ಪೂರ್ತಿ ಆ ಬರಹಗಾರರೇ ಕಾಣಿಸುತ್ತಾರೆ! ಅದು ಆ ಬರೆದವರ ಪ್ರತಿಬಿಂಬ!
ಈಗ... ಬೇರೊಬ್ಬರು ಬರೆದ ಕಥೆಯನ್ನು ನಾನು ಓದುವಾಗ ಆ ಬರಹಗಾರನಲ್ಲದೆ ನಾನೇ ಕಾಣಿಸಿದರೆ??
ಅಲ್ಲವಾ... ಅವರಬಗ್ಗೆ ಅಭಿಮಾನ ಹುಟ್ಟುತ್ತದೆ!! ಅದು ಅಕಾರಣ ಅಭಿಮಾನವಲ್ಲ- ಸಕಾರಣ ಅಭಿಮಾನ! ಆಗ ನಮಗದು ಹೊಳೆಯುವುದಿಲ್ಲ!
ನನಗೆ ಸಂಭವಿಸಿದ್ದೂ ಅದೇ.... ಅವರು ಬರೆದ ಪುಸ್ತಕವನ್ನು ಓದಿದಾಗ ಅದು ಬೇರೆ ಯಾರೋ ಬರೆದ ಪುಸ್ತಕ ಅನ್ನಿಸದೆ ನಾನೇ ಬರೆದೆನೇನೋ ಅನ್ನುವ ತೃಪ್ತಿ! ಆ ತೃಪ್ತಿ ಆ ಲೇಖಕನಮೇಲೆ ಅಭಿಮಾನ ಹುಟ್ಟಿಸಿತು- ಆದರೆ ಆ ಅಭಿಮಾನಕ್ಕೆ ಕಾರಣ ಆ ಭಾವ ಅನ್ನುವುದು ಆಗ ಅರಿವಾಗಲಿಲ್ಲ! ಮತ್ತೆ ಹೇಗೆ ಅರಿವಾಯಿತು....?
ಅವರನ್ನು ಭೇಟಿಯಾದಾಗ! ವ್ಯಕ್ತಿತ್ವದ ಪರಿಚಯವೂ ಆದಾಗ! ಭೇಟಿಯಾಗಿ- ಅವರಿಂದ ರಚಿತವಾದ ಎಲ್ಲಾ ಪುಸ್ತಕಗಳನ್ನು ತಂದು ಓದತೊಡಗಿದಾಗ ಅರಿತೆ.... ಅವರ ಪ್ರತಿ ಬರಹದಲ್ಲಿ ನಾನೇ ಇದ್ದೇನೆ....
ವಯಸ್ಸು- ಅನುಭವ- ವಿದ್ವತ್ತು.... ನನಗಿಂತ ಎಷ್ಟೋ ಸಾವಿರಪಟ್ಟು (ವಯಸ್ಸು ಸಾವಿರಪಟ್ಟು ಅಲ್ಲ! ಇಪ್ಪತ್ತೈದು ವರ್ಷ!) ಅವರಿಗೆ ಅಧಿಕವಿರಬಹುದು- ಬಹದು ಅಲ್ಲ- ಇದೆ... ಆದರೂ ಮೂಲದಲ್ಲೆಲ್ಲೋ ಅವರಲ್ಲಿ ನನಗೆ ನನ್ನ ಪ್ರತಿಬಿಂಬ ಕಾಣಿಸಿತು! ನನ್ನನ್ನು ಅವರೊಂದಿಗೆ ಖಂಡಿತಾ ಹೋಲಿಸಬಲ್ಲೆ!! ಹಾಗೆಂದು ಅವರನ್ನು ನನ್ನೊಂದಿಗೆ ಹೋಲಿಸಲೇ....?
ಅದು ಅಸಾಧ್ಯ! ಯಾಕೆ ಅಸಾಧ್ಯ ಅನ್ನುವುದೇ ನನ್ನ ಮೊದಲ ಸಮಸ್ಯೆಗೆ ಪರಿಹಾರ!!
೨
ನಾನು ಹೇಗೆ ಬರಹಗಾರನಾದೆ?
ಹೌದು! ಹೀಗೆ- ಇರಬಹುದು!
ನನಗೇನೂ ಅಂಥಾ ಪ್ರಪಂಚಜ್ಞಾನವಿಲ್ಲ! ಅಪ್ಪ ಅಮ್ಮನ ನೆರಳಿನಿಂದ ಯಾವತ್ತಿಗೂ ಹೊರ ಬಂದವನಲ್ಲ! ಈಗಲೂ ಅಮ್ಮನ ನೆರಳಿನಲ್ಲೇ ಬದುಕುತ್ತಿರುವವನು! ಆದರೂ ನನಗೆಲ್ಲಾ ಗೊತ್ತು ಅನ್ನುವಂತೆ ಕಥೆಗಳನ್ನು ಬರೆಯುತ್ತೇನೆ! ತರ್ಕಕ್ಕೆ ಹತ್ತಿರವಾದ ವಿವರಣೆಗಳನ್ನು ನೀಡುತ್ತೇನೆ! ಹೇಗೆ?
ನಾನು ನನ್ನ ಅಪ್ಪ ಅಮ್ಮನ ರಕ್ತ- ಜೀನ್!
ಹೌದು... ಅಪ್ಪನ ಮರಣದ ನಂತರ ನನಗೆ ಈ ವಾಸ್ತವದ ಅರಿವಾಗುತ್ತಿದೆ!
ನನ್ನ ಅಪ್ಪನಲ್ಲಿ ನಾನು ನನ್ನ ಪ್ರತಿಬಿಂಬವನ್ನು ಕಾಣುತ್ತಿದ್ದೇನೆ!
ನನ್ನ ಜ್ಞಾನದ ಮೂಲ- ಅಪ್ಪನಲ್ಲಿದೆ.
ಎಪ್ಪತ್ತಮೂರು ವರ್ಷಗಳ ಬದುಕಿನಲ್ಲಿ- ಅವರ ವಿದ್ವತ್ತು ವ್ಯರ್ಥವಾಗುತ್ತಿದೆಯೇ ಅನ್ನುವ ಚಿಂತೆ ಬಂದಿತ್ತು ನನಗೆ! ವ್ಯಕ್ತಿಗಳನ್ನು ಅಳೆಯುವುದರಲ್ಲಿ ಅವರಿಗಿದ್ದ ಸಾಮರ್ಥ್ಯ... ಭವಿಷ್ಯವನ್ನು ಊಹಿಸುವುದರಲ್ಲಿ ಅವರಿಗಿದ್ದ ಸಾಮರ್ಥ್ಯ... ಅದ್ಭುತ! ಹೇಳಿದ್ದೆ ಕೂಡ! ಅಪ್ಪಾ... ನಿಮ್ಮ ಜೀವನಾನುಭವ ನನಗೆ ಬೇಕು- ಬರೆಯಿರಿ ಎಂದು! ಬರೆಯಲಿಲ್ಲ.... ಅಮ್ಮ ಹೇಳಿದರು- ಡೈರಿಯಲ್ಲಿ ಬರೆದಿದ್ದಾರಂತೆ- “ಮಗ ಹೇಳಿದ- ನಿಮ್ಮ ಮುಂಬೈ ಜೀವನದಬಗ್ಗೆ ಬರೆಯಿರಿ- ಭೂತಕಾಲದಬಗ್ಗೆ ಬರೆಯಿರಿ ಎಂದು! ಒಮ್ಮೆ ಅನ್ನಿಸಿದರೂ- ನನ್ನ ಭೂತಕಾಲ ನನ್ನೊಂದಿಗೇ ಇಲ್ಲವಾಗಲಿ ಎಂದು ತೀರ್ಮಾನಿಸಿದೆ!” ಎಂದು!
ಅಮ್ಮನಿಗೆ ಮೂವತ್ತು- ಅಪ್ಪನಿಗೆ ಮೂವತ್ತೊಂಬತ್ತು ವರ್ಷ ವಯಸ್ಸಿದ್ದಾಗ ಹುಟ್ಟಿದವನು ನಾನು...! ನಾನು ಹುಟ್ಟಿದ ನಂತರ ನನ್ನ ಅಪ್ಪನಿಗೆ ಅಮ್ಮ ಮತ್ತು ನಾವೇ- ಇಬ್ಬರು ಅಕ್ಕಂದಿರು- ಪ್ರಪಂಚ! ನಮ್ಮನ್ನು ಬಿಟ್ಟು ದೂರ ಹೋದವರೇ ಅಲ್ಲ!
ಅದುವರೆಗೆ...?
ಭಾರತ ದೇಶದಲ್ಲಿ ಅವರು ಹೋಗದ ಪ್ರದೇಶಗಳಿಲ್ಲ! ವಿಹಾರಾರ್ಥವಾಗಿಯಲ್ಲ- ಹೊಟ್ಟೆಪಾಡಿಗಾಗಿ! ಹದಿಮೂರು ಭಾಷೆಗಳಿಗೆ ಒಡೆಯ ಅವರು! ಅವರಿಗೆ ಯಾವ ಯಾವ ಭಾಷೆಗಳು ಗೊತ್ತು ಅನ್ನುವುದೇ ನಮಗೆ ತಿಳಿಯದು!
ಕೊನೆಗೆ ಮುಂಬೈನಲ್ಲಿ ಅಂಗಡಿಯೊಂದನ್ನು ಇಟ್ಟು ವ್ಯವಹಾರ ಶುರುಮಾಡಿದಾಗ ಎರಡು ಘಟನೆಗಳು ನಡೆದವು!
ಒಂದು- ಅಮ್ಮನಿಗೆ ಡಿಪ್ರೆಷನ್... ಅಸಾಧ್ಯ ಪ್ರೇಮ ಅವರದ್ದು! ಪ್ರೇಮ ಒಂದುಗೂಡಿಯೂ ಒಟ್ಟಿಗೆ ಬದುಕಲಾಗದ ಅವಸ್ಥೆ ಅಮ್ಮನನ್ನು ಡಿಪ್ರೆಷನ್‌ಗೆ ತಳ್ಳಿತು... ಜೊತೆಗೆ ಹಾಳು ಪುರುಷರ ಪ್ರಪಂಚ!
ಎರಡು- ಅಮ್ಮನಿಗೆ ಟೀಚರ್ ಕೆಲಸ ಸಿಕ್ಕಿತು!!
ಅಮ್ಮನನ್ನು ಮುಂಬೈಗೆ ಕರೆದುಕೊಂಡುಹೋಗುವ ಯೋಚನೆಯಲ್ಲಿದ್ದ ಅಪ್ಪ- ಯೋಚಿಸಬೇಕಾದ ಅವಸ್ಥೆ!
ಎಲ್ಲವನ್ನೂ ಬಿಟ್ಟು ಬಂದರು! ಹೆಂಡತಿ ಮಕ್ಕಳಿಗಾಗಿ- ಹೆಚ್ಚೂಕಡಿಮೆ ತಮ್ಮತನವನ್ನೇ ಕಳೆದುಕೊಂಡರು!! ಆದರೆ ಅದುವರೆಗಿನ ಅವರ ಜೀವನಾನುಭವ ಮತ್ತು ವಿದ್ವತ್ತು... ಕಂಡಿದ್ದೇನೆ- ಆಗಾಗ! ಆಶ್ಚರ್ಯಗೊಂಡಿದ್ದೇನೆ...
ಅವರ ಆ ಅರಿವು- ವಿದ್ವತ್ತು ವ್ಯರ್ಥವಾಗುತ್ತಿದೆಯಲ್ಲಾ ಅನ್ನುವ ಚಿಂತೆಯೂ ಬಂದಿದೆ... ಆದರೂ ಅವರಿಗೆ ತಾವು ತೆಗೆದುಕೊಂಡ ತೀರ್ಮಾನದಲ್ಲಿ ಆತ್ಮತೃಪ್ತಿಯಿತ್ತು....!
ಆ ವಿದ್ವತ್ತಿನ ಪ್ರತಿಫಲನವಲ್ಲವೇ ನಾನು ಈ ಲೇಖಕರಲ್ಲಿ ಕಂಡಿದ್ದು....?
ಅವರಿಬ್ಬರನ್ನು ನಾನು ಹೋಲಿಸಬಹುದು! ಅವರಲ್ಲಿನ ವಿದ್ವತ್ತಿನ ಸಾಮ್ಯತೆಯನ್ನು ಅರಿಯಬಹುದು- ತುಲನೆ ಮಾಡುವುದಿಲ್ಲ!!
ಯಾರ್ಯಾರ ಜೀವನ ಸಂದರ್ಭಗಳು ಹೇಗೆಹೇಗೋ.... ದೃಷ್ಟಿಕೋನಗಳು ಹೇಗೆಹೇಗೋ... ಸಾಮ್ಯತೆ ಇರಬಹದಾಗಲಿ- ತುಲನೆ ಅಸಾಧ್ಯ!
ಈಗರ್ಥವಾಯಿತೇ...?
ಜೀವನದಲ್ಲಿ ನಡೆಯುವ ಪ್ರತಿಯೊಂದಕ್ಕೂ ಕಾರಣ- ಪರಿಣಾಮಗಳಿರುತ್ತದೆ!
ಇದೇ ಆಗಬೇಕೆಂದಿಲ್ಲ- ಹೀಗೂ ಆಗಬಹದು!
ಕೆಲವೊಂದು ನಮ್ಮ ಅರಿವಿಗೆ ಎಟುಕಬಹುದು- ಕೆಲವು ಎಟುಕುವುದಿಲ್ಲ...!
ನಾನು ನನ್ನ ಅಪ್ಪ ಅಮ್ಮನ ಮಗ! ಅಮ್ಮನ ಪ್ರೇಮ- ಅಪ್ಪನ ವಿದ್ವತ್ತು- ಖಂಡಿತಾ ಆ ಪ್ರಮಾಣದಲ್ಲಿ ಅಲ್ಲವಾದರೂ ನನ್ನಲ್ಲಿ ಪ್ರತಿಫಲಿಸುತ್ತಿದೆ... ನಾನು- ನಾನು ಬರೆವ ಕಥೆಗಳಲ್ಲಿ ನನ್ನನ್ನು ಕಾಣುವಂತೆ- ಅಪ್ಪ ಅಮ್ಮನ ಪ್ರತಿಬಿಂಬ! ನನ್ನ ದೊಡ್ಡಸ್ತಿಕೆಯೇನೂ ಇಲ್ಲ- ಅದು ನನ್ನ ಅಹಂಕಾರ- ಆತ್ಮತೃಪ್ತಿ...!
ಉತ್ತರ ಸಿಕ್ಕಿದಮೇಲೆ ಇನ್ನು- ನೆಮ್ಮದಿ!!
(ಇದು ಅಪ್ಪನ ಮರಣದ ನಂತರ ಪರಿಚಿತರಾದ ಲೇಖಕರು- ಪಿತೃಸಮಾನರು- ಭಾರದ್ವಾಜ ಕೆ. ಆನಂದತೀರ್ಥರ ಬರಹದಲ್ಲಿ ನಾನೂ, ಅವರ ವ್ಯಕ್ತಿತ್ವದಲ್ಲಿ ಅಪ್ಪನೂ ಕಾಣಿಸಿದ ಸಂದರ್ಭದಲ್ಲಿ ಬರೆದದ್ದು!)
Comments
Post a Comment