ಉಷೆಗೊಂದು ಪತ್ರ
ಉಷಾನಿರುದ್ಧ!
ಒಂದು:- ಉಷೆಗೊಂದು ಪತ್ರ!
*
ಉಷೆ....,
ಐ ಲವ್ ಯು!
ನಿನಗೆ ಗೊತ್ತು ನಾನು ನಿನ್ನನ್ನೆಷ್ಟು ಪ್ರೇಮಿಸುತ್ತೇನೆಂದು- ನನಗೂ ಗೊತ್ತು- ನೀನು ನನ್ನನ್ನೆಷ್ಟು ಪ್ರೇಮಿಸುತ್ತಿದ್ದೀಯೆಂದು!
ಈ ಪ್ರೇಮ ಅನ್ನುವುದು ಅನಿರ್ವಚನೀಯ- ಅದ್ಭುತ!
ನಾವು ಪರಸ್ಪರರಿಗಾಗಿ!
ಸಮಾಜ- ಕಟ್ಟುಪ್ಪಾಡುಗಳು- ಕರ್ತವ್ಯಗಳು ಅನ್ನುವುದು ಇಲ್ಲದಿದ್ದರೆ ನಿನ್ನ ಉಡಿಯೊಳಗೆ ಹುದುಗಿಬಿಡುತ್ತಿದ್ದೆ.
ಈಗೇನಾಯಿತು?
ತಿಳಿಯದ್ದೇನು ಅಲ್ಲ!
ಪ್ರೇಮ ಒಂದು ಆನಂದ! ಪ್ರೇಮ ಒಂದು ಸಂತೃಪ್ತಿ! ಪ್ರೇಮ ಒಂದು ಉನ್ಮಾದ! ಪ್ರೇಮ ಒಂದು ನಶೆ! ಹಾಗಿದ್ದೂ ಪ್ರೇಮದಲ್ಲಿ ದುಃಖವಿಲ್ಲ- ಅನ್ನುವ ನಂಬಿಕೆಯವನು!
ಪ್ರೇಮವೇ ಪರಮಪದ!
ಆದರೂ ಉಷೆ- ಎಷ್ಟೇ ಆನಂದದಲ್ಲಿದ್ದರೂ ಪ್ರೇಮದಲ್ಲಿ ದುಃಖವಿಲ್ಲ ಅನ್ನುವ ನಂಬಿಕೆಯವನಾದರೂ- ನಾನು ನೆಮ್ಮದಿ ಕಳೆದುಕೊಂಡಿದ್ದೇನೆ!
ಯಾಕೆ?
ನೀನು ನನ್ನ ಭ್ರಮೆ! ನೀನು ನನ್ನ ಕಲ್ಪನೆ! ನೀನು ನನ್ನ ಕನಸು!
ಈ 'ಅವಾಸ್ತವದಿಂದ' ಹೊರಬಂದಾಗ- ನಾನು ಬೇರೆ!!
ಅದೇ ಸಮಸ್ಯೆಯಾಗುತ್ತಿರುವುದು!
ಪ್ರೇಮ ಹೇಗೆ ಅನಿರ್ವಚನೀಯವೋ ಹಾಗೇ ಅವ್ಯಾಹತ ಕೂಡ!
ನನಗೆ ಯಾವ ಸಮಯದಲ್ಲಿ ಯಾರಮೇಲೆ ಪ್ರೇಮ ಉಂಟಾಗುತ್ತದೋ ನನಗೇ ತಿಳಿಯುವುದಿಲ್ಲ!
ಗೊತ್ತಲ್ಲವೇ.... ಅನಿರುದ್ಧ ನಾನು- ಕಾಮನ ಮಗ! ಕೃಷ್ಣನ ಮೊಮ್ಮಗ!
ಎಷ್ಟೇ ನಿನ್ನಲ್ಲಿ- ಭ್ರಮೆಯಲ್ಲಿ ಮುಳುಗಬೇಕೆಂದುಕೊಂಡರೂ.... ನಿನ್ನ ಸಾನ್ನಿಧ್ಯವಿಲ್ಲದ ಸಮಯದಲ್ಲಿ.... ನಾನು ನಾನಾಗಿರುವುದಿಲ್ಲ!
ನಿಯಂತ್ರಣವಿಲ್ಲದ ಮನಸ್ಸು ನನ್ನದು!
ಗೊತ್ತು- ನಾನೇ ಸಮಸ್ಯೆ!
ನನ್ನ ಪ್ರಪಂಚ ವಿಶಾಲವಾಗುತ್ತಿದೆ. ದಿನದ ಪ್ರತಿ ಕ್ಷಣ ನಿನ್ನೊಂದಿಗೆ ಕಳೆಯಬೇಕೆನ್ನುವ ನನ್ನ ಆಸೆ- ನೆರವೇರದ್ದು!
ಹಾಗೆಯೇ....,
ನಿನಗೆ ಬೇಕೆಂದಾಗಲೆಲ್ಲಾ ಸಿಗಬೇಕೆಂದುಕೊಳ್ಳುವ ನಾನು ಕೂಡ- ಮರೀಚಿಕೆ!
ಅದು ಮತ್ತೊಂದು ಸಮಸ್ಯೆ!
ದಿನದ ಮುಕ್ಕಾಲು ಭಾಗ ನಿನಗೆ ಸಿಗುತ್ತಿದ್ದೆ- ನಿನ್ನ ಸಮಯದಲ್ಲಿ! ಆ ಸಮಯದಲ್ಲಿ- ಯಾವಾಗಲೋ ಒಂದು ಕ್ಷಣ ನಾನು ಸಿಗದಿದ್ದರೆ- ದುಃಖ- ನಿನಗೆ!
ಯಾಕೆ?
ಹೇಳಿದ್ದೇನೆ- ಪ್ರೇಮ ನಾನು! ಪ್ರೇಮಿಸುವುದು ನನ್ನ ಕರ್ತವ್ಯ- ಹಕ್ಕು! ನಾನೇ ಪ್ರೇಮಿಸಬಾರದು ಅಂದುಕೊಂಡರೂ- ನನ್ನ ಪ್ರಮೇಯವಿಲ್ಲದೆ ಅದಾಗಿಯೇ ಆಗಿ ಹೋಗುತ್ತದೆ! ಯಾರ ಮೇಲೆ ಅನ್ನುವುದಕ್ಕೆ ನಿಯಮವೇನೂ ಇಲ್ಲ! ಯಾರು ಉಳಿದರೂ ಉಳಿಯದಿದ್ದರೂ- ಅವರಮೇಲೆ ಪ್ರೇಮ ಅನ್ನುವುದು ಇದ್ದೇ ಇರುತ್ತದೆ!
ಮತ್ತೊಬ್ಬರ ಮೇಲಿನ ನನ್ನ ಪ್ರೇಮ- ನಿನ್ನನ್ನು ಕಳೆದುಕೊಳ್ಳಲು ಕಾರಣವಾಗುವುದು- ಅಸಹನೀಯ ವೇದನೆ!
ಕಾರಣ- ನೀನು ಉಷೆ! ಅನಿರುದ್ಧನ ಉಷೆ!
ಕ್ಷಣ ಕಳೆದಂತೆ- ದಿನ ಕಳೆದಂತೆ ಅರಿವಿಗೆ ಬರುತ್ತಿದೆ! ಪ್ರತಿ ಕ್ಷಣ ನಾವು ಸಿಗಬೇಕು ಅಂದುಕೊಳ್ಳುವುದೇ ನಮ್ಮ ದುಃಖಕ್ಕೆ ಕಾರಣ! ಜೊತೆಗೆ- ಸಿಗುವ ಕ್ಷಣದಲ್ಲಿ ಸಿಗದಂತಾ ಸಂದರ್ಭ ಒದಗುವುದು!
ಮತ್ತೊಂದು ಕಾರಣ- ನೀ ನನಗೆ ಸಿಗದ ಸಮಯದಲ್ಲಿ ನನಗೆ ಇನ್ನೊಬ್ಬರ ಮೇಲೆ ಏರ್ಪಡುವ ಪ್ರೇಮ!
ನೀ ಸಿಗುವ ಸಮಯದಲ್ಲೇ ಅವರೂ ನನಗಾಗಿ ಪ್ರಯತ್ನಿಸುವುದು- ನರಕ!
ಸಮಯವನ್ನೆಲ್ಲಾ ನಿನಗಾಗಿ ಮೀಸಲಿಟ್ಟಿರುವಾಗ- ಹೊಸ ಪ್ರವೇಶಕ್ಕೆ ಅವಕಾಶ ನೀಡಿದ ನನ್ನದೇ ತಪ್ಪು!
ಆದರೇನು ಮಾಡಲಿ?
ನನ್ನ ಹಿಡಿತದಲ್ಲಿಲ್ಲದ್ದು- ಪ್ರೇಮ!
ಕರ್ತವ್ಯ ನಿರತ ಹೆಣ್ಣು ನೀನು..., ನೀನು ಫ್ರೀ ಆದ ಸಮಯದಲ್ಲಿ- ಕಂಫರ್ಟ್ ಆದ ಸಮಯದಲ್ಲೇ ನಾನು ಸಿಗಬೇಕು! ಕೆಲವೊಮ್ಮೆ ಸಂದರ್ಭಗಳಿಂದಾಗಿ ಸಿಗದೇ ಹೋದರೆ ನನಗೆ ನಿನ್ನ ಮೇಲಿನ ಪ್ರೇಮ ಕಡಿಮೆಯಾಯಿತೇ?
ಇಲ್ಲ ಅನ್ನುವುದು ನನ್ನ ಉತ್ತರ- ನೀನು ಒಪ್ಪದ- ಉತ್ತರ!
ನೆನಪಿರಲಿ- ನನ್ನ ಸಮಯಕ್ಕೆ ನೀನು ಸಿಗುವುದು ಅನ್ನುವುದು ಇಲ್ಲ! ನಿನ್ನ ಸಮಯಕ್ಕೇ ಸಿಗಬೇಕು ನಾನು!
ಆ ಸಮಯದಲ್ಲಿ ಸಿಗಲಾಗದಿದ್ದರೆ- ದುಃಖ!
ಅದಕ್ಕೇ....,
ನಿಯಮಗಳನ್ನು ಬಿಟ್ಟು ಬಿಡೋಣ- ಅಥವಾ- ಹೊಸ ನಿಯಮಗಳನ್ನು ರೂಪಿಸಿಕೊಳ್ಳೋಣ!
ನಿನ್ನನ್ನು ಕಳೆದುಕೊಳ್ಳುವುದು ನನಗೆ ತಾಳಲಾಗದ ವಿಷಯ!
ಬೇಕು ನೀನು!
ಹಾಗೆಂದು ನಿನ್ನನ್ನು ಉಳಿಸಿಕೊಳ್ಳಲು ಬೇರೆ ಯಾರನ್ನೂ ನಾನು ಇಷ್ಟಪಡಬಾರದೆಂದರೆ- ಅದೇ ನಿಯಮವೆಂದರೆ- ಅದು ನನ್ನ ಕೈಯ್ಯಲ್ಲಿಲ್ಲ!
ಅದಕ್ಕೇ.....,
ಪ್ರತಿ ಕ್ಷಣ ಸಿಗಬೇಕು ಅನ್ನುವ ನಿಯಮವನ್ನು ಬಿಟ್ಟು-
ದಿನದ ಅಥವಾ ವಾರದ ನಿರ್ದಿಷ್ಟ ಸಮಯವನ್ನು ನಮಗಾಗಿ ಮೀಸಲಿಡೋಣ!
ಆಗಾಗ ಭೇಟಿಯಾಗೋಣ- ಬೆರೆಯೋಣ- ಮನಸ್ಸು ತೆರೆಯೋಣ!
ನಿನ್ನ ಸಮಯ ನಿನ್ನದು- ನನ್ನ ಸಮಯ ನನ್ನದು- ನಮ್ಮ ಸಮಯ ನಮ್ಮದು- ಅನ್ನುವಂತೆ!
ಉಳಿಯಬೇಕಾದ ಪ್ರೇಮ ನಮ್ಮದು!
ನಿಷ್ಟುರವಾಗಿ ಬೇರೆಯಾಗುವುದಕ್ಕಿಂತ- ಪ್ರೇಮವನ್ನು ಉಳಿಸಿಕೊಳ್ಳುವುದು ಒಳ್ಳೆಯದು!
ನಿನ್ನ ಸಂಪೂರ್ಣ ಸ್ವಾತಂತ್ರ್ಯ ನಿನಗಿರುತ್ತದೆ- ಹಾಗೆಯೇ ನಾನೂ ಸ್ವತಂತ್ರ!
ಆದರೂ ನಾವು ಬಂಧಿಸಿಕೊಂಡಿರುವಂತೆ!!
ಕಳೆದುಕೊಳ್ಳಲಾರೆ ನಿನ್ನ! ಇರು! ಇದು ಬೇಡಿಕೆ- ಆಜ್ಞೆಯಲ್ಲ, ಅಧಿಕಾರವಲ್ಲ! ಕಾರಣ- ಸಮಸ್ಯೆ ನಾನೆ...
ನಾನು- ಅನಿರುದ್ಧ- ಪ್ರೇಮ- ಕಾಮಗಳ ಸಮ್ಮಿಶ್ರಣ!
ನೀನು ನನ್ನ ಉಷೆ! ಅರಿತು ಉಳಿಯಬೇಕಾದ್ದು ನಿನ್ನ ಕರ್ತವ್ಯ! ನಿರ್ಬಂಧವಿಲ್ಲದ ಕರ್ತವ್ಯ!
ಇಂತಿ,
ಉಷೆಯ- ಅನಿರುದ್ಧ!
ಉಳಿದವರ- ಪ್ರೇಮ!!
***
ಎರಡು:- ಉಷಾಹೃದಯ!
*
ನಮಸ್ತೇ....,ನಾನು ಉಷೆ- ಅನಿರುದ್ಧನ ಉಷೆ!
ಎಷ್ಟು ಕೊಬ್ಬು ಅವನಿಗೆ! ಅವನಿಗೇನು ಗೊತ್ತು ಹೆಣ್ಣು ಹೃದಯ! ಇಲ್ಲ.... ಹೀಗನ್ನಲಾಗುವುದಿಲ್ಲ- ಹೆಣ್ಣು ಹೃದಯ ಅವನಿಗೆ ಸ್ಪಷ್ಟವಾಗಿ ಗೊತ್ತು! ಅದೇ ಸಮಸ್ಯೆ...!
ಅನಿರುದ್ಧನಲ್ಲವೇ...? ಕಾಮನ ಮಗ! ಕೃಷ್ಣನ ಮೊಮ್ಮಗ! ಕೇಳಬೇಕೆ- ಗೋಳು!!
ಏನು ಮಾಡಲಿ? ಎಲ್ಲಾ ನನ್ನ ವಿಧಿ! ಅನುಭವಿಸುವುದಷ್ಟೆ!
ನಿಜವೇ...! ಆಗಾಗ ಯೋಚನೆಗೆ ಬರುತ್ತದೆ! ನಾನೇಕೆ ಇವನನ್ನೇ ಅಂಟಿಕೊಂಡಿದ್ದೇನೆ?
ಕಾರಣ- ಅವನು ಅನಿರುದ್ಧ!
ಏನಿದೆ ಮಹತ್ವ?
ನೀನೇ ಸರ್ವಸ್ವ ಅನ್ನುತ್ತಾನೆ- ಬೇರೆ ಹೆಣ್ಣಿನೊಂದಿಗೂ ಸೇರುತ್ತೇನೆ ಅನ್ನುತ್ತಾನೆ- ಕರ್ಮ!
ಅದೇ ಸಮಸ್ಯೆ! ಅದೇ ಅನಿರುದ್ಧನಿಗೂ ಇತರ ಗಂಡಸರಿಗೂ ಇರುವ ವ್ಯತ್ಯಾಸ!
ನಿಜಾಯಿತಿ!
ಇಲ್ಲೇ... ಅನಿರುದ್ಧನಿಗೆ ಹೆಣ್ಣಿನ ಹೃದಯ ಸ್ಪಷ್ಟವಾಗಿ ಗೊತ್ತು- ಅನ್ನುವುದು!
ಗಮನಿಸಿದ್ದೇನೆ.... ಎಷ್ಟೋ ಗಂಡಸರನ್ನು- ಅವರ ಹೆಂಗಸರನ್ನು!
ನೀನೇ ನನ್ನ ಸರ್ವಸ್ವ! ನೀನು ಬಿಟ್ಟರೆ ಬೇರೆ ಯಾರೂ ಇಲ್ಲ! ನೀನೇ ರಾಣಿ! ನೀನು ಅದು- ನೀನು ಇದು!
ಹೆಣ್ಣನ್ನು ಆಕಾಶದೆತ್ತರಕ್ಕೆ ಏರಿಸುವುದು- ನಂತರ?
ಹೆಣ್ಣು ಅವನ ನಿಜವನ್ನು ತಾನಾಗಿ ಕಂಡು ಹಿಡಿದಾಗ....,
“ಹಾಗಲ್ಲ- ಹೀಗೆ! ಅವಳೇ ಸೆಳೆದಿದ್ದು! ಯಾವುದೋ ಅರಿಯದ ಸಮಯದಲ್ಲಿ! ಇದು ನೀನಂದುಕೊಂಡ ರಿಲೇಷನ್ ಅಲ್ಲ....”
ಎಷ್ಟೆಷ್ಟು ಸುಳ್ಳುಗಳು- ಹೆಣ್ಣು ಗಂಡನ್ನು ಬಿಟ್ಟು ಹೋಗಲು ಬೇರೆ ಕಾರಣ ಬೇಕೆ?
ನಿಜಯಾಯಿತಿಯಿಲ್ಲದ ಗಂಡನ್ನು ಹೆಣ್ಣು 'ನಿರ್ದಾಕ್ಷಿಣ್ಯವಾಗಿ' ಬಿಟ್ಟು ಹೋಗಬಲ್ಲಳು!
ಆದರೆ ಇವನೋ....?
“ಒಬ್ಬರಲ್ಲಿ ಪ್ರೇಮ ಹುಟ್ಟುವುದು ಅಥವಾ ಪ್ರೇಮಿಸುವುದು ತಪ್ಪಾ...?” ಅನ್ನುತ್ತಾನೆ!
“ಕಾಮ ಪ್ರಕೃತಿ ನಿಯಮವಲ್ಲವಾ...?” ಅನ್ನುತ್ತಾನೆ!
“ಗಂಡು- ಹೆಣ್ಣು ಅನ್ನುವ ಪ್ರಕೃತಿ ನಿಯಮ... ಪುರುಷ- ಪ್ರಕೃತಿ ಅನ್ನುವ ವಿಶ್ವ ನಿಯಮ... ಒಂದು ಗಂಡಿಗೆ ಒಂದು ಹೆಣ್ಣು ಅನ್ನುವ ನಿಯಮವಾಗಿ ಹೇಗೆ ಬದಲಾಯಿತು?” ಅನ್ನುತ್ತಾನೆ!
ಏನು ಹೇಳುವುದು?
ಸಾವು!
“ನಾನು ನಿನ್ನೊಬ್ಬನನ್ನೇ ಪ್ರೇಮಿಸುತ್ತಿಲ್ಲವೇ...?” ಎಂದು ವಾದಿಸಲು ಶ್ರಮಿಸುತ್ತೇನೆ.
“ಅದೇ.... ಯಾಕೆ? ನೀನೂ ನನ್ನಂತೆಯೇ ಇದ್ದುಬಿಡು!” ಅನ್ನುತ್ತಾನೆ!
ಆಗ ಬರುತ್ತದಲ್ಲಾ ಕೋಪ... ಉಫ್... ಆ ಕೋಪ ನೋಡಿ ನಗುತ್ತಾನೆ! ಹತ್ತಿರ ಬರುತ್ತಾನೆ! ಹೃದಯದಲ್ಲಿ ಮುಖ ಹುದುಗಿಸುತ್ತಾನೆ!
ಹೇಳಿದೆನಲ್ಲಾ....?
ಅವನಿಗೆ ಗೊತ್ತು- ಹೆಣ್ಣು ಹೃದಯ!
ಏನು ಮಾಡಿದರೆ ಕರಗುತ್ತಾಳೆ.... ಏನು ಮಾಡಿದರೆ ಉಳಿಯುತ್ತಾಳೆ- ಎಂದು!
ಹೆಣ್ಣಿನ ಈ ಶಕ್ತಿಯನ್ನು ಅಥವಾ ದೌರ್ಬಲ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾನೆ!
ಹೇಗೆ ಹೋಗುವುದು ದೂರ....?
ಶ್ರಮಿಸಿದೆ ಒಮ್ಮೆ....
ನಾಚಿಕೆ ಬಿಟ್ಟು ಅಳುತ್ತಾನೆ!
ಉಷೆಯಲ್ಲಿ ಅವನಿಗೆ ಅಷ್ಟು ಪ್ರೇಮ!
ಅವನ ಪ್ರೇಮದಲ್ಲಿನ ನಿಜಾಯಿತಿಯನ್ನು ಹೇಗೆ ಕಡೆಗಣಿಸಲಿ...?
ಅವನೇ ಒಪ್ಪಿಕೊಂಡಿದ್ದಾನೆ....,
“ಹೌದು- ಹೆಣ್ಣಿನಲ್ಲಿ ನನಗೆ ಪ್ರೇಮವುಂಟಾಗುತ್ತದೆ! ಅದು ನನ್ನ ದೌರ್ಬಲ್ಯವೇ ಅಂದುಕೋ... ಇಲ್ಲ ಅದು ಕಾಮ ಎಂದೇ ಅಂದುಕೊಳ್ಳೋಣ... ಉಂಟಾದರೂ ಇಲ್ಲ ಎಂದು ಹೇಗೆ ಹೇಳಲಿ? ನಿಜಕ್ಕೂ ಅದು ತಪ್ಪಾ....? ಪ್ರಪಂಚದಲ್ಲಿರುವ ಹೆಣ್ಣು ಹೃದಯವೆಲ್ಲಾ ಒಂದೇ...! ಹೆಣ್ಣು ಹೃದಯದ ಮೂಲ ಭಾವ- ಹೆಚ್ಚೂ ಕಡಿಮೆ ಒಂದೇ!” (ಇದನ್ನವನು ಹೇಳುವಾಗ- ಅಸೂಯೆಯ ಎಳೆಯೊಂದು ನನ್ನ ಹೃದಯದಲ್ಲಿ ಹಾದು ಹೋಗುತ್ತದೆ! ಅದೂ ಅವನಿಗೆ ಗೊತ್ತು- ಕರ್ಮ- ನಗುತ್ತಾನೆ)
ಕೆಲವೊಮ್ಮೆ ಅನ್ನಿಸುತ್ತದೆ- ಪ್ರತಿ ಹೆಣ್ಣಿನಲ್ಲಿ ಅನಿರುದ್ಧನಿಗೆ ಮೂಡುವ ಪ್ರೇಮ ಪ್ರತಿ ಗಂಡಿನಲ್ಲಿ ಉಷೆಗೆ ಯಾಕೆ ಮೂಡುವುದಿಲ್ಲ?
ಇಲ್ಲ- ನನಗೆ ಉತ್ತರವಿಲ್ಲದ ಪ್ರಶ್ನೆ!
ಅವನು ಅನಿರುದ್ಧ- ಗಂಡು- ಅಂದುಕೊಳ್ಳೋಣವೆಂದರೆ ಅದರಲ್ಲೇನಿದೆ ಹೆಚ್ಚುಗಾರಿಕೆ?
ಅವನಿಗಿದೆ ಉತ್ತರ....!
“ಉಷೆ, ನಿನ್ನ- ಹೆಣ್ಣಿನ- ಹೃದಯ ಪವಿತ್ರ! ಗಂಡು ಸುಲಭವಾಗಿ ಪ್ರೇಮಿಸಬಲ್ಲ! ಗಂಡು ಹೃದಯವನ್ನು ನಂಬಲಾಗುವುದಿಲ್ಲ! ಅದಕ್ಕೇ ಹೆಣ್ಣು ಹಿಂದೆಮುಂದೆ ನೋಡುತ್ತಾಳೆ! ಕೆಲವೇ ಕೆಲವು ಗಂಡಿನ ಹೃದಯದಲ್ಲಿ ನಿಯತ್ತು ಇರುತ್ತದೆ! ಅವನನ್ನು ಹೆಣ್ಣು ಬಿಡಲಾರಳು! ಅರ್ಥವಾಯಿತೆ? ಉಷೆ ಅನಿರುದ್ಧನನ್ನು ಬಿಡದಿರಲು ಕಾರಣ? ಇದು- ಅನಿರುದ್ಧನ ಅಹಂಕಾರ! ಉಷೆಯ ಪ್ರೇಮಕ್ಕೆ ಭಾಜನನಾಗುವುದು ಸಾಮಾನ್ಯ ಅಂದುಕೊಂಡೆಯಾ....? ಉಷೆಯಲ್ಲಿನ ಅವನ ಪ್ರೇಮ- ನಿಜ!”
ಏನು ಹೇಳಲಿ?
ಅವನೊಂದು ನೋವು- ನರಕ!
ಆದರೂ....
ಅವನು ಪ್ರೇಮ!
ಅದಕ್ಕಿಂತ ಹೆಚ್ಚಾಗಿ (ಅವನ ಪ್ರಕಾರ) ನಾನೂ ಪ್ರೇಮದ ಪರ್ಯಾಯ!
ಉಷೆ ಯಾವತ್ತಿಗೂ ಅನಿರುದ್ಧನ ಉಷೆ! ಅನಿರುದ್ಧ ಉಷೆಯ ಕರ್ತವ್ಯ!! ಉಷೆ- ಅನಿರುದ್ಧನ....!
***
ಮೂರು:- ಸ್ವಸ್ತಿಗೀತ!
*
ಅನಿರುದ್ಧ ಗಂಡಿನ ಸಂಕೇತ! ಉಷೆ ಹೆಣ್ಣಿನ ಸಂಕೇತ! ಕೆಲವೊಮ್ಮೆ ಗಂಡು ಹೆಣ್ಣಿನಿಂದ ಹೊರಬರದೆ ಗುರಿ ಸಾಧಿಸಲಾಗುವುದಿಲ್ಲ! ಅದನ್ನು ಹೆಣ್ಣು ಅರ್ಥ ಮಾಡಿಕೊಂಡರೆ ಗಂಡು ಗೆಲ್ಲುತ್ತಾನೆ! ಇಲ್ಲದಿದ್ದರೆ ಪ್ರೇಮವೇ ಅವರಿಗೆ ನರಕ! ಅನಿರುದ್ಧ ಅನ್ನುವಲ್ಲಿ ಗಂಡು ಎಂದೂ, ಉಷೆ ಅನ್ನುವಲ್ಲಿ ಹೆಣ್ಣು ಎಂದೂ ಕಲ್ಪಿಸಿಕೊಂಡರೆ ವಿಷಯ ಸ್ಪಷ್ಟವಾಗುತ್ತದೆ!
ಕೆಲವೊಂದು ಕಥೆಗಳು, ಪಾತ್ರಗಳು.... ಕಥೆಗಾರನಿಗಿಂತಲೂ ಓದುಗರನ್ನು ಬಹಳವಾಗಿ ಕಾಡುತ್ತದೆ! ಬಿಟ್ಟು ಹೋಗುವುದೇ ಇಲ್ಲ! ಹಾಗೆಂದು ಕಥೆಗಾರ ಸ್ವಸ್ಥನೇ...? ಬರೆಯುವ ಮೂಲಕ ನನ್ನ ಹೊರೆ ಇಳಿಸಿದ್ದೇನೆ- ಓದುವ ಕಷ್ಟ ನಿಮ್ಮದು ಎಂದು ಎಷ್ಟೇ ಹೇಳಿದರೂ..., ತಾನೇ ಪ್ರತಿ ಪಾತ್ರವೂ- ಆದರೂ.... ಕೆಲವೊಂದು ಪಾತ್ರದಿಂದ ಹೊರಬರುವುದು ಕಷ್ಟ! ತಡಕಾಡುತ್ತಾನೆ, ಮಿಡುಕಾಡುತ್ತಾನೆ, ಸಿಟ್ಟುಗೊಳ್ಳುತ್ತಾನೆ, ಅಸಹನೆ ಹೊಂದುತ್ತಾನೆ, ಯೋಚಿಸುತ್ತಾನೆ, ವಿಷಾದಕ್ಕೂ ಜಾರುತ್ತಾನೆ! ಆದರೂ ಪಾತ್ರ ಬಿಡುವುದಿಲ್ಲ- ಬಿಟ್ಟುಹೋಗುವುದಿಲ್ಲ!
ಹೀಗಿರುವಾಗ ಕಾಲವೂ ಸಂದರ್ಭವೂ ತಾನೇ ತಾನಾಗಿ ಒದಗಿ- ಅವನನ್ನು ಜಾಡಿಸಿ- ಅವನೇ ಬೇಡವೆಂದುಕೊಂಡರೂ ಅದರಿಂದ ಹೊರಬರುವಂತೆ ಮಾಡುತ್ತದೆ! ಹಾಗೆ ಅವನು ಆ ಕಥೆಗೆ ಅಥವಾ ಪಾತ್ರಕ್ಕೆ- ಸ್ವಸ್ತಿಗೀತವನ್ನು ಹಾಡುತ್ತಾನೆ! ಹಾಗೊಂದು ಸ್ವಸ್ತಿಗೀತ- ಉಷಾನಿರುದ್ಧ ಸ್ವಸ್ತಿಗೀತ!
ಅನಿರುದ್ಧನೊಬ್ಬ ಪ್ರೇಮಿ! ಅಸಾಮಾನ್ಯ ಪ್ರೇಮಿ! ಅವನಿಗೆ ಯಾವಾಗ ಯಾರಮೇಲೆ ಪ್ರೇಮವುಂಟಾಗುತ್ತದೋ ಅವನಿಗೇ ತಿಳಿಯುವುದಿಲ್ಲ! ಅವನ ಹೃದಯಪೂರ್ತಿ ಪ್ರೇಮವೇ....!
ಹಾಗಿದ್ದರೆ... ಉಷೆ?
ಅವನಿಗಿಂತಲೂ ಪ್ರೇಮಮಯಿ! ಅನಿರುದ್ಧನಿಗೆ- ಪ್ರೇಮದ ಪರ್ಯಾಯ ಅವಳು!
ಉಷೆ ಅನಿರುದ್ಧನ ಶಕ್ತಿ- ದೌರ್ಬಲ್ಯ ಎರಡೂ...!
ಉಷೆಯಿಲ್ಲದ ಅನಿರುದ್ಧನಿಲ್ಲ!
ಇಲ್ಲಿ ಅನಿರುದ್ಧನದೊಂದು ಸಂದಿಗ್ಧವಿದೆ- ಕಳ್ಳತನವಿದೆ!
ಪ್ರತಿ ಹೆಣ್ಣಿನಲ್ಲೂ ತಾನೇ ಇವನ ಉಷೆಯಿರಬಹುದೇ ಎಂಬ ಗೊಂದಲವನ್ನು ಮೂಡಿಸುತ್ತಾನೆ!
ನೀನೇ- ಇವಳೇ- ನನ್ನ ಉಷೆ ಎಂದು ಅವನು ಸ್ಪಷ್ಟವಾಗಿ ಹೇಳಲಾರ!
ಎರಡು ಕಾರಣವಿದೆ!
ಒಂದು..., ಉಷೆಗಾದರೂ ಅನಿರುದ್ಧನಿಗಾದರೂ ತಮ್ಮ ಪ್ರೇಮವನ್ನು ಪ್ರಪಂಚದ ಮುಂದೆ ಜಾಹೀರು ಪಡಿಸುವ ಇಚ್ಛೆಯಿಲ್ಲ!
ಎರಡು...., ಪ್ರಮುಖಕಾರಣ... ಇಬ್ಬರೂ ಸಮಾಜದ ಕಟ್ಟುಪ್ಪಾಡುಗಳಿಗೆ ಬದ್ದರು!!
ಮತ್ತೆ ಹೇಗೆ?
ಪ್ರತಿ ಹೆಣ್ಣನ್ನೂ ಗೊಂದಲದಲ್ಲಿಡುವುದು ಸರಿಯೇ....?
ಉಷಾನಿರುದ್ಧರು ತಮ್ಮ ಪ್ರೇಮವನ್ನು ಪ್ರಪಂಚದ ಮುಂದೆ ಒಪ್ಪಿಕೊಂಡಂದು- ಅವರಿಬ್ಬರೂ ಪ್ರಪಂಚದಿಂದ ಬೇರೆಯಾಗಬೇಕಾಗುತ್ತದೆ! ಅಥವಾ ಅವರಿಬ್ಬರು ಪರಸ್ಪರ ಬೇರೆಯಾಗಬೇಕಾಗುತ್ತದೆ!
ಅದು ಅಸಾಧ್ಯ!
ಉಷೆ ಇಲ್ಲದಂದು ಅನಿರುದ್ಧನ ಅಂತ್ಯ!
ಆದರೆ ಇಲ್ಲಿ ಉಷೆ ಪ್ರತಿ ಹೆಣ್ಣಿನ ಸಂಕೇತ ಕೂಡ! ಅನಿರುದ್ಧನ ಸ್ವೇಚ್ಛೆಯನ್ನು ಒಪ್ಪಲಾರಳು! ಗತ್ಯಂತರವಿಲ್ಲದೆ ಜೊತೆಗಿದ್ದಾಳೆ ಅನ್ನುವುದು ಬಿಟ್ಟರೆ- ಅವನ ತರಲೆಗಳನ್ನು ತಡೆದುಕೊಳ್ಳುವುದು ಕಷ್ಟವೇ...!
ಮತ್ತೆ ಹೇಗೆ- ಸ್ವಸ್ತಿಗೀತವನ್ನು ಹಾಡುವುದು ಹೇಗೆ?
ಆದ್ದರಿಂದ....,
ಅನಿರುದ್ಧ ಪ್ರತಿ ಹೆಣ್ಣಿಗೂ ಹೇಳುತ್ತಿದ್ದಾನೆ!
“ಹೆಣ್ಣೇ..., ಗೊಂದಲ ಬೇಡ! ಉಷೆ ಉಷೆಯೇ! ಅವಳಿಲ್ಲದೆ ಅನಿರುದ್ಧನಿಲ್ಲ! ಉಷೆಗೆ ಸ್ಪಷ್ಟವಾಗಿ ಗೊತ್ತು- ನಾನೇ ಇವನ ಉಷೆ ಎಂದು! ಅನಿರುದ್ಧ ಉಷೆಯನ್ನು ಕರೆಯುವುದೇ ಉಷೆ ಎಂದು!”
ಉಷೆ- ಅನಿರುದ್ಧ...., ಅವರ ಮಾತ್ರ ಪರಮ ರಹಸ್ಯ!
ಗೊಂದಲದಲ್ಲಿ ಇಟ್ಟಿದ್ದಾನೆಂದರೆ..., ಹೆಣ್ಣೇ..., ನಂಬಿ- ನೀವವನ ಉಷೆಯಲ್ಲ!!
ಗೊಂದಲವಿಲ್ಲದೆ ನಾನೇ ಇವನ ಉಷೆ ಎಂದು ಹೇಳಬಲ್ಲಿರಾದರೆ..., ಖಂಡಿತಾ ಅನಿರುದ್ಧ ನಿಮ್ಮವ!
ಸದ್ಯಕ್ಕೆ ಉಷೆ ಅನಿರುದ್ಧನೊಂದಿಗೆ ಮುನಿಸಿಕೊಂಡಿದ್ದಾಳೆ! ಕಾರಣ ಹೇಳಬೇಕೆ...,
ಅನಿರುದ್ಧನ ಕಾಮುಕತನ!
ಅನಿರುದ್ಧನೂ ಸದ್ಯಕ್ಕೆ ಅವಳನ್ನು ರಮಿಸಲು ಹೋಗುತ್ತಿಲ್ಲ! ಕಾರಣ..., ಅವನು ಕರ್ತವ್ಯದತ್ತ ಮುಖಿಯಾಗಿದ್ದಾನೆ! ಅವಳನ್ನು ರಮಿಸಿ- ತೃಪ್ತಿಪಡಿಸಿದರೆ..., ಅವನಿಗೆ ಗೊತ್ತು ಅವಳಿಂದ ಹೊರಬರಲಾರ! ಅವಳಲ್ಲಿಯೇ ಮುಳುಗಿಹೋಗುತ್ತಾನೆ!
ಆದರೂ ಹೆಣ್ಣಿನ ಸಾನ್ನಿಧ್ಯವಿಲ್ಲದೆ ಅನಿರುದ್ಧನಿರಲಾರ ಅನ್ನುವುದು- ವಿಪರ್ಯಾಸ!
ತನ್ನ ಮನಸ್ಸಾಕ್ಷಿಗೆ- ಆತ್ಮಸಾಕ್ಷಿಗೆ ಹೆಣ್ಣಿನ ರೂಪವನ್ನು ಕೊಟ್ಟುಬಿಟ್ಟಿದ್ದಾನೆ!
ಇನ್ನು- ತನ್ನ ಪ್ರತಿ ಹೆಣ್ಣಿಗೆ ಅನಿರುದ್ಧನದೊಂದು ಸಲಹೆಯಿದೆ!
ದೂರವಿರಿ! ಅನಿರುದ್ಧ ಬೆಂಕಿ- ಕಾಮನನ್ನು ಸುಟ್ಟ ಬೆಂಕಿ!
ಆಕರ್ಷಿಸುತ್ತಾನೆ! ಸೆಳೆಯುತ್ತಾನೆ! ಅದಕ್ಕಾಗಿ ಯಾವ ಹಂತಕ್ಕೂ ಹೋಗುತ್ತಾನೆ!
ನಂಬದಿರಿ!
ಅನಿರುದ್ಧ- ಕಳ್ಳ ಕಾಮುಕ!!
ಅಷ್ಟೇ...!
ಸದ್ಯಕ್ಕೆ..., ಕರ್ತವ್ಯವೋ ಉಷೆಯೋ ಕರ್ತವ್ಯವೋ ಉಷೆಯೋ ಅನ್ನುವ ಸಂದಿಗ್ಧದಲ್ಲಿರುವ ಅನಿರುದ್ಧನ ವಿಷಯದಲ್ಲಿ ಕಾಲವೇ ತೀರ್ಮಾನವನ್ನು ತೆಗೆದುಕೊಂಡಿದೆ!
ಅನಿರುದ್ಧನಿಂದ ಉಷೆಯನ್ನು ತಾತ್ಕಾಲಿಕವಾಗಿ ದೂರವಿಟ್ಟಿದೆ!
ಆದರೆ ಕಾಲಕ್ಕೂ ಗೊತ್ತು....,
ಹೃದಯದಲ್ಲಿ ಉಷೆ ಇಲ್ಲವಾದ ದಿನ....,
ಅನಿರುದ್ಧನಿರುವುದಿಲ್ಲ!
ಆದ್ದರಿಂದ ನಿಮ್ಮ ನಿಮ್ಮ ಅನಿರುದ್ಧನನ್ನು ಕಾಪಿಟ್ಟುಕೊಳ್ಳಿ! ಅವನನ್ನು ಅವನ ಪಾಡಿಗೆ ಬಿಡಿ! ಬರುತ್ತಾನೆ!
ಸ್ವಸ್ತಿ!
Comments
Post a Comment