ಉಷಾಹೃದಯ
ಉಷಾಹೃದಯ!
ನಮಸ್ತೇ....,ನಾನು ಉಷೆ- ಅನಿರುದ್ಧನ ಉಷೆ!
ಎಷ್ಟು ಕೊಬ್ಬು ಅವನಿಗೆ! ಅವನಿಗೇನು ಗೊತ್ತು ಹೆಣ್ಣು ಹೃದಯ! ಇಲ್ಲ.... ಹೀಗನ್ನಲಾಗುವುದಿಲ್ಲ- ಹೆಣ್ಣು ಹೃದಯ ಅವನಿಗೆ ಸ್ಪಷ್ಟವಾಗಿ ಗೊತ್ತು! ಅದೇ ಸಮಸ್ಯೆ...!
ಅನಿರುದ್ಧನಲ್ಲವೇ...? ಕಾಮನ ಮಗ! ಕೃಷ್ಣನ ಮೊಮ್ಮಗ! ಕೇಳಬೇಕೆ- ಗೋಳು!!
ಏನು ಮಾಡಲಿ? ಎಲ್ಲಾ ನನ್ನ ವಿಧಿ! ಅನುಭವಿಸುವುದಷ್ಟೆ!
ನಿಜವೇ...! ಆಗಾಗ ಯೋಚನೆಗೆ ಬರುತ್ತದೆ! ನಾನೇಕೆ ಇವನನ್ನೇ ಅಂಟಿಕೊಂಡಿದ್ದೇನೆ?
ಕಾರಣ- ಅವನು ಅನಿರುದ್ಧ!
ಏನಿದೆ ಮಹತ್ವ?
ನೀನೇ ಸರ್ವಸ್ವ ಅನ್ನುತ್ತಾನೆ- ಬೇರೆ ಹೆಣ್ಣಿನೊಂದಿಗೂ ಸೇರುತ್ತೇನೆ ಅನ್ನುತ್ತಾನೆ- ಕರ್ಮ!
ಅದೇ ಸಮಸ್ಯೆ! ಅದೇ ಅನಿರುದ್ಧನಿಗೂ ಇತರ ಗಂಡಸರಿಗೂ ಇರುವ ವ್ಯತ್ಯಾಸ!
ನಿಜಾಯಿತಿ!
ಇಲ್ಲೇ... ಅನಿರುದ್ಧನಿಗೆ ಹೆಣ್ಣಿನ ಹೃದಯ ಸ್ಪಷ್ಟವಾಗಿ ಗೊತ್ತು- ಅನ್ನುವುದು!
ಗಮನಿಸಿದ್ದೇನೆ.... ಎಷ್ಟೋ ಗಂಡಸರನ್ನು- ಅವರ ಹೆಂಗಸರನ್ನು!
ನೀನೇ ನನ್ನ ಸರ್ವಸ್ವ! ನೀನು ಬಿಟ್ಟರೆ ಬೇರೆ ಯಾರೂ ಇಲ್ಲ! ನೀನೇ ರಾಣಿ! ನೀನು ಅದು- ನೀನು ಇದು!
ಹೆಣ್ಣನ್ನು ಆಕಾಶದೆತ್ತರಕ್ಕೆ ಏರಿಸುವುದು- ನಂತರ?
ಹೆಣ್ಣು ಅವನ ನಿಜವನ್ನು ತಾನಾಗಿ ಕಂಡು ಹಿಡಿದಾಗ....,
“ಹಾಗಲ್ಲ- ಹೀಗೆ! ಅವಳೇ ಸೆಳೆದಿದ್ದು! ಯಾವುದೋ ಅರಿಯದ ಸಮಯದಲ್ಲಿ! ಇದು ನೀನಂದುಕೊಂಡ ರಿಲೇಷನ್ ಅಲ್ಲ....”
ಎಷ್ಟೆಷ್ಟು ಸುಳ್ಳುಗಳು- ಹೆಣ್ಣು ಗಂಡನ್ನು ಬಿಟ್ಟು ಹೋಗಲು ಬೇರೆ ಕಾರಣ ಬೇಕೆ?
ನಿಜಯಾಯಿತಿಯಿಲ್ಲದ ಗಂಡನ್ನು ಹೆಣ್ಣು 'ನಿರ್ದಾಕ್ಷಿಣ್ಯವಾಗಿ' ಬಿಟ್ಟು ಹೋಗಬಲ್ಲಳು!
ಆದರೆ ಇವನೋ....?
“ಒಬ್ಬರಲ್ಲಿ ಪ್ರೇಮ ಹುಟ್ಟುವುದು ಅಥವಾ ಪ್ರೇಮಿಸುವುದು ತಪ್ಪಾ...?” ಅನ್ನುತ್ತಾನೆ!
“ಕಾಮ ಪ್ರಕೃತಿ ನಿಯಮವಲ್ಲವಾ...?” ಅನ್ನುತ್ತಾನೆ!
“ಗಂಡು- ಹೆಣ್ಣು ಅನ್ನುವ ಪ್ರಕೃತಿ ನಿಯಮ... ಪುರುಷ- ಪ್ರಕೃತಿ ಅನ್ನುವ ವಿಶ್ವ ನಿಯಮ... ಒಂದು ಗಂಡಿಗೆ ಒಂದು ಹೆಣ್ಣು ಅನ್ನುವ ನಿಯಮವಾಗಿ ಹೇಗೆ ಬದಲಾಯಿತು?” ಅನ್ನುತ್ತಾನೆ!
ಏನು ಹೇಳುವುದು?
ಸಾವು!
“ನಾನು ನಿನ್ನೊಬ್ಬನನ್ನೇ ಪ್ರೇಮಿಸುತ್ತಿಲ್ಲವೇ...?” ಎಂದು ವಾದಿಸಲು ಶ್ರಮಿಸುತ್ತೇನೆ.
“ಅದೇ.... ಯಾಕೆ? ನೀನೂ ನನ್ನಂತೆಯೇ ಇದ್ದುಬಿಡು!” ಅನ್ನುತ್ತಾನೆ!
ಆಗ ಬರುತ್ತದಲ್ಲಾ ಕೋಪ... ಉಫ್... ಆ ಕೋಪ ನೋಡಿ ನಗುತ್ತಾನೆ! ಹತ್ತಿರ ಬರುತ್ತಾನೆ! ಹೃದಯದಲ್ಲಿ ಮುಖ ಹುದುಗಿಸುತ್ತಾನೆ!
ಹೇಳಿದೆನಲ್ಲಾ....?
ಅವನಿಗೆ ಗೊತ್ತು- ಹೆಣ್ಣು ಹೃದಯ!
ಏನು ಮಾಡಿದರೆ ಕರಗುತ್ತಾಳೆ.... ಏನು ಮಾಡಿದರೆ ಉಳಿಯುತ್ತಾಳೆ- ಎಂದು!
ಹೆಣ್ಣಿನ ಈ ಶಕ್ತಿಯನ್ನು ಅಥವಾ ದೌರ್ಬಲ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾನೆ!
ಹೇಗೆ ಹೋಗುವುದು ದೂರ....?
ಶ್ರಮಿಸಿದೆ ಒಮ್ಮೆ....
ನಾಚಿಕೆ ಬಿಟ್ಟು ಅಳುತ್ತಾನೆ!
ಉಷೆಯಲ್ಲಿ ಅವನಿಗೆ ಅಷ್ಟು ಪ್ರೇಮ!
ಅವನ ಪ್ರೇಮದಲ್ಲಿನ ನಿಜಾಯಿತಿಯನ್ನು ಹೇಗೆ ಕಡೆಗಣಿಸಲಿ...?
ಅವನೇ ಒಪ್ಪಿಕೊಂಡಿದ್ದಾನೆ....,
“ಹೌದು- ಹೆಣ್ಣಿನಲ್ಲಿ ನನಗೆ ಪ್ರೇಮವುಂಟಾಗುತ್ತದೆ! ಅದು ನನ್ನ ದೌರ್ಬಲ್ಯವೇ ಅಂದುಕೋ... ಇಲ್ಲ ಅದು ಕಾಮ ಎಂದೇ ಅಂದುಕೊಳ್ಳೋಣ... ಉಂಟಾದರೂ ಇಲ್ಲ ಎಂದು ಹೇಗೆ ಹೇಳಲಿ? ನಿಜಕ್ಕೂ ಅದು ತಪ್ಪಾ....? ಪ್ರಪಂಚದಲ್ಲಿರುವ ಹೆಣ್ಣು ಹೃದಯವೆಲ್ಲಾ ಒಂದೇ...! ಹೆಣ್ಣು ಹೃದಯದ ಮೂಲ ಭಾವ- ಹೆಚ್ಚೂ ಕಡಿಮೆ ಒಂದೇ!” (ಇದನ್ನವನು ಹೇಳುವಾಗ- ಅಸೂಯೆಯ ಎಳೆಯೊಂದು ನನ್ನ ಹೃದಯದಲ್ಲಿ ಹಾದು ಹೋಗುತ್ತದೆ! ಅದೂ ಅವನಿಗೆ ಗೊತ್ತು- ಕರ್ಮ- ನಗುತ್ತಾನೆ)
ಕೆಲವೊಮ್ಮೆ ಅನ್ನಿಸುತ್ತದೆ- ಪ್ರತಿ ಹೆಣ್ಣಿನಲ್ಲಿ ಅನಿರುದ್ಧನಿಗೆ ಮೂಡುವ ಪ್ರೇಮ ಪ್ರತಿ ಗಂಡಿನಲ್ಲಿ ಉಷೆಗೆ ಯಾಕೆ ಮೂಡುವುದಿಲ್ಲ?
ಇಲ್ಲ- ನನಗೆ ಉತ್ತರವಿಲ್ಲದ ಪ್ರಶ್ನೆ!
ಅವನು ಅನಿರುದ್ಧ- ಗಂಡು- ಅಂದುಕೊಳ್ಳೋಣವೆಂದರೆ ಅದರಲ್ಲೇನಿದೆ ಹೆಚ್ಚುಗಾರಿಕೆ?
ಅವನಿಗಿದೆ ಉತ್ತರ....!
“ಉಷೆ, ನಿನ್ನ- ಹೆಣ್ಣಿನ- ಹೃದಯ ಪವಿತ್ರ! ಗಂಡು ಸುಲಭವಾಗಿ ಪ್ರೇಮಿಸಬಲ್ಲ! ಗಂಡು ಹೃದಯವನ್ನು ನಂಬಲಾಗುವುದಿಲ್ಲ! ಅದಕ್ಕೇ ಹೆಣ್ಣು ಹಿಂದೆಮುಂದೆ ನೋಡುತ್ತಾಳೆ! ಕೆಲವೇ ಕೆಲವು ಗಂಡಿನ ಹೃದಯದಲ್ಲಿ ನಿಯತ್ತು ಇರುತ್ತದೆ! ಅವನನ್ನು ಹೆಣ್ಣು ಬಿಡಲಾರಳು! ಅರ್ಥವಾಯಿತೆ? ಉಷೆ ಅನಿರುದ್ಧನನ್ನು ಬಿಡದಿರಲು ಕಾರಣ? ಇದು- ಅನಿರುದ್ಧನ ಅಹಂಕಾರ! ಉಷೆಯ ಪ್ರೇಮಕ್ಕೆ ಭಾಜನನಾಗುವುದು ಸಾಮಾನ್ಯ ಅಂದುಕೊಂಡೆಯಾ....? ಉಷೆಯಲ್ಲಿನ ಅವನ ಪ್ರೇಮ- ನಿಜ!”
ಏನು ಹೇಳಲಿ?
ಅವನೊಂದು ನೋವು- ನರಕ!
ಆದರೂ....
ಅವನು ಪ್ರೇಮ!
ಅದಕ್ಕಿಂತ ಹೆಚ್ಚಾಗಿ (ಅವನ ಪ್ರಕಾರ) ನಾನೂ ಪ್ರೇಮದ ಪರ್ಯಾಯ!
ಉಷೆ ಯಾವತ್ತಿಗೂ ಅನಿರುದ್ಧನ ಉಷೆ!
ಯಾರೊಂದಿಗೆ ಹೇಗೇ ಇದ್ದರೂ- ಉಷೆಯೂ (ಇರಲಾರಳು- ಇದ್ದರೂ ಅವನಿಗೆ ಸಮಸ್ಯೆ ಇಲ್ಲವಂತೆ!) ಅನಿರುದ್ಧನೂ- ಅನಿರುದ್ಧ ಉಷೆಯ ಕರ್ತವ್ಯ!! ಉಷೆ- ಅನಿರುದ್ಧನ....!
Comments
Post a Comment