ಮಾಂಧಾತ ಪ್ರೇಮ!

ಮಾಂಧಾತ ಪ್ರೇಮ!

ನಮಸ್ತೇ...., ನಾನು...., ಮಾಂಧಾತ!

ಕಳೆದು ಹೋದ ಬದುಕಿನ ಅನುಭವದಮೇಲೆ ಭವಿಷ್ಯದ ಯೋಜನೆಯನ್ನು ರೂಪಿಸಿ ವರ್ತಮಾನದಲ್ಲಿ ಬದುಕುವುದನ್ನು ರೂಢಿಸಿಕೊಂಡವನು ನಾನು!

ಗುರಿ ಇದ್ದಮೇಲೆ ಉಳಿದ ಎಲ್ಲಾ ಕಷ್ಟ ನಷ್ಟಗಳು- ಗುರಿ ಸೇರಲು ಬಂಡವಾಳ!

ಹೌದು! ಗುರಿ- ಸೇರುವ ಹಠ- ಜೀವನದಲ್ಲಿ ಹಲವು ಪಾಠಗಳನ್ನು ಕಲಿಸಿದೆ! ಅನುಭವಗಳನ್ನು ನೀಡಿದೆ! ಕೆಲವೊಮ್ಮೆ ಸಂಬಂಧಗಳನ್ನು ತೀರ್ಮಾನಿಸಲು ಒತ್ತಡವನ್ನು ಹೇರಿದೆ!

ನಿನಗಿಂತಲೂ ನನಗೆ ಗುರಿಯೇ ಹೆಚ್ಚು...!” ಎಂದು ಪ್ರಾಣದಂತೆ ಪ್ರೇಮಿಸಿದ ಹೆಣ್ಣಿಗೆ ಹೇಳಲು ಒತ್ತಡ ಹೇರಿದ ಅದೇ ಗುರಿ.... “ಬ್ರಹ್ಮಾಂಡವೂ ನಿನ್ನ ಪ್ರೇಮದ ಮುಂದೆ ಚಿಕ್ಕದು!” ಎಂದು ನನಗೆ- ಮಾಂಧಾತನಿಗೆ- ನಿರೂಪಿಸಿದೆ!

ನಿಜ...., ಪ್ರೇಮ ಒಂದು ಅದ್ಭುತ!

ಎಷ್ಟು ಮಹಾಕಾವ್ಯಗಳು? ಎಷ್ಟೆಷ್ಟು ವ್ಯಾಖ್ಯಾನಗಳು?

ಕೆಲವರ ಪ್ರಕಾರ ಪ್ರೇಮ ವಿಷಾದದ ಅಂತ್ಯ!

ಕೆಲವರ ಪ್ರಕಾರ ಪ್ರೇಮ ಕಣ್ಣೀರು ಬರಿಸುವ ಆನಂದ!

ಪ್ರೇಮ- ಮಹಾಸಾಗರ!

ಪ್ರೇಮ- ಬ್ರಹ್ಮಾಂಡ!

ಪ್ರೇಮ- ಅಂತ್ಯವಿಲ್ಲದ ಅನಂತ...?

ಅನಂತ! ಅಷ್ಟೆ...!

ಕಥೆಗಾರ ನಾನು! ಆಗಾಗ- ತೋಚಿದ್ದು ಬರೆಯುತ್ತೇನೆ!

ಹಾಗೇ.... ನಾನೊಂದು ಕಥೆ ಬರೆದೆ!

ಅನಿರುದ್ಧ ಉಷೆಗೆ ಬರೆದ ಪತ್ರ ರೂಪದ ಕಥೆ!

ಏನಿತ್ತು ಕಥೆಯಲ್ಲಿ?

ಸಹಜವಾದದ್ದೇ....!

ಪ್ರೇಮದ ವಿಷಯದಲ್ಲಿ ಅನಿರುದ್ಧ ಉಷೆಗೆ ಬೇಡಿಕೆಯ ರೂಪದಲ್ಲಿ- ಆದರೆ ಖಂಡಿತವಾಗಿ ಹೇಳುತ್ತಿದ್ದಾನೆ...,

ಉಷೆ...., ನೀನು ನನ್ನ ಆತ್ಮವನ್ನಾಕ್ರಮಿಸಿಕೊಂಡ ಪ್ರೇಮಿ! ಆದರೆ ನನ್ನ ವಿಷಯದಲ್ಲಿ ಪ್ರೇಮ- ಕಡಿವಾಣವಿಲ್ಲದ ಕುದುರೆ! ಕಾರಣವಿದೆ ಕೇಳು- ಪ್ರೇಮ ಹೇಗೆ ಅನಿರ್ವಚನೀಯವೋ ಹಾಗೇ ಅವ್ಯಾಹತ ಕೂಡ! ನನ್ನ ಪ್ರೇಮ ಯಾರೊಬ್ಬರಲ್ಲಿ ಸೀಮಿತವಾಗುವುದಿಲ್ಲ! ನನ್ನ ಪ್ರಮೇಯವಿಲ್ಲದೆ- ನಿಯಂತ್ರಣಕ್ಕೆ ಸಿಗದೆ- ಯಾರೆಂದರೆ ಅವರಲ್ಲಿ ಪ್ರಕಟವಾಗುತ್ತದೆ! ಏನು ಮಾಡಲಿ? ನಾನೇ ಹಾಗೆ! ಹಾಗೆಂದು- ಈ ಒಂದು ಕಾರಣದಿಂದ ನೀನು ನನ್ನ ಬಿಟ್ಟು ದೂರ ಹೋಗದಿರು!”

ಇಷ್ಟೆ ಸಾರಾಂಶ! ಬರೆಯುವಾಗ ಯೋಚಿಸಲಿಲ್ಲ! ಆಯಾಚಿತವಾಗಿ ಬರೆದೆ! ನನ್ನ ಮನಸ್ಸು ಹಾಗೆಯೇ ಇತ್ತೇನೋ...!

ಓದಿದ ಪ್ರತಿ ಹೆಣ್ಣಿಗೆ ಇದು ಉಷೆಯ ಅಸ್ಮಿತೆಯ ಪ್ರಶ್ನೆಯಂತೆ ಕಾಣಿಸಿತು!

ಅಲ್ಲವೇ ಮತ್ತೆ...? ನೀನೇ ನನ್ನ ಪ್ರಾಣವಾಯು ಅನ್ನುತ್ತಿದ್ದಾನೆ! ಮತ್ತೊಂದು ಹೆಣ್ಣಿನಲ್ಲೂ ನನಗೆ ಪ್ರೇಮವುಂಟಾಗುತ್ತದೆ ಅನ್ನುತ್ತಿದ್ದಾನೆ! ಹೇಗೆ ನಂಬುವುದು....?

ನನ್ನ ಈ "ಕಾಮುಕತೆಯೇ" ನನ್ನ ಹೆಂಡತಿ ನನ್ನನ್ನು ಬಿಟ್ಟು ಹೋಗಲು ಕಾರಣವೇನೋ ಅನ್ನಿಸಿರಲಿಕ್ಕೂ ಸಾಕು!

ಹಲವಾರು ಹೆಣ್ಣು ಹೃದಯಗಳ ಪ್ರಶ್ನೆಗಳು- ಗೊಂದಲಗಳು- ವಿವರಣೆಗಳನ್ನು ಒಂದೇ ಹೆಣ್ಣಿನಲ್ಲಿ ಆರೋಪಿಸಿ- ಉತ್ತರವನ್ನು ಕೊಡಲು ಶ್ರಮಿಸುತ್ತೇನೆ!

ಇದು- ಮಾಂಧಾತನ ಪ್ರೇಮ! ಮಾಂಧಾತ ದೇವಿಯ ಮಗ!!

ಪ್ರೇಮದಲ್ಲಿ ದುಃಖವಿಲ್ಲ!” ಎಂದೆ.

ಅಸಾಧ್ಯ!” ಎಂದಳು.

ಯಾಕೆ ಹಾಗೆ ಹೇಳುತ್ತೀಯೆ?” ಎಂದೆ.

ನೀನು ನಿನ್ನ ಭಾವವನ್ನು ಹೇಳುತ್ತಿದ್ದೀಯ- ಸ್ವಾರ್ಥಿ! ಉಷೆಯ ದುಃಖದ ಬಗ್ಗೆ ಯೋಚಿಸು!” ಎಂದಳು.

ಕಥೆಯೊಂದರ ಪಾತ್ರವನ್ನು ನನ್ನ ಬದುಕಿಗೆ ಅನ್ವಯಿಸಿ ಕೇಳುವುದು ಕಂಡು ನಗು ಬಂತು! ಆದರೂ ಅವಳ ಮುಖಭಾವ ಕಂಡು- ತಡೆದೆ...,

ಅವಳಿಗಾದರೂ ಯಾಕೆ ದುಃಖವೇ...?” ಎಂದೆ.

ಇದಕ್ಕಿಂತ ನಗುವಿನಲ್ಲಿ ಮುಗಿಸಿದ್ದರೆ ಚೆನ್ನಾಗಿತ್ತು!

ನಿನ್ನ ತಲೆ! ಹೆಣ್ಣು ಅಂದ್ರೆ ಏನನ್ಕೊಂಡಿದ್ದೀಯ? ಇಷ್ಟ ಬಂದಾಗ ನೋಯಿಸೋಕೆ ಒಂದು ಯಂತ್ರ ಅಂತಾನ? ಹೆಣ್ಣಿಗೂ ಹೃದಯವಿದೆ! ಭಾವನೆಗಳಿವೆ!” ಎಂದಳು.

ನಾನೆಲ್ಲೆ ನೋಯಿಸಿದೆ?”

ಮತ್ತೆ? ಉಷೆ ನಿನ್ನ ಪ್ರೇಮಿ ಅಂದಮೇಲೆ ಉಳಿದವರೊಂದಿಗಿನ ಚಕ್ಕಂದ ಯಾಕೆ?”

ಅದು ಪಾತ್ರಕಣೆ! ಕಥೆ! ಕಥೆಯಲ್ಲಿ ಅನಿರುದ್ಧನ ಪ್ರೇಮಿಯೇ ಹೊರತು.... ಚಕ್ಕಂದವೇನು?!” ಎಂದೆ.

ಮನದಲ್ಲಿರುವುದೇ ಪಾತ್ರವಾಗಿ ಹೊರಬರುವುದು!” ಎಂದಳು.

ಒಂದು ಕ್ಷಣ ಏನು ಮಾತನಾಡಬೇಕೋ ತಿಳಿಯಲಿಲ್ಲ! ಅವಳೇ ಕೇಳಿದಳು...,

ಹೇಳು ಮಾಂಧಾತ! ನಿನ್ನ ಹೆಂಡತಿಗೂ ನೀನು ಹೀಗೆಯೇ ಹೇಳುತ್ತೀಯ? ಎಲ್ಲರನ್ನೂ ಪ್ರೇಮಿಸು, ಕಾಮಿಸು ಅಂತ?”

ನನ್ನ ಮುಖದಲ್ಲಿ ನಗು ಕಂಡಳೇನೋ...,

ಸಾವು..! ಅವಳಿಗೆ ಪ್ರೇಮಿಸಬೇಕೆನ್ನಿಸಿದರೆ ಪ್ರೇಮಿಸಲಿ- ಅಂದರೂ ಅನ್ನುತ್ತೀಯ- ಕರ್ಮದವ! ಅದಲ್ಲ ವಿಷಯ! ನಿನ್ನ ಹೆಂಡತಿ ಇನ್ನೊಬ್ಬನೊಡನೆ ಕಾಮದಲ್ಲಿರುವಾಗ ನೋಡುತ್ತಾ ಕೂತಿರುತ್ತೀಯ? ಸಾಧ್ಯಾವಾ ನಿನಗೆ?” ಎಂದಳು.

ಕಾಮದಲ್ಲಿರುವಾಗ ಯಾಕೆ ನೋಡುತ್ತಾ ಕೂರಲಿ? ಅದವರ ಪ್ರೈವಸಿ!” ಎಂದೆ.

ಗಲಿಬಿಲಿಯಿಂದ ನೋಡಿದಳು!

ಕಾಮ ಮೂರು ರೀತಿಯಲ್ಲಿ ಘಟಿಸುತ್ತದೆ! ಒಂದು..., ಗಂಡು ಹೆಣ್ಣಿನ ವಾಂಛೆಯಿಂದ! ಇದು ಸಾಮಾನ್ಯವಾಗಿ ನಡೆಯುವುದು! ಇಲ್ಲಿ ನಂಬಿಕೆಯೇ ಅಡಿಪಾಯ! ಹೆಣ್ಣಿಗೆ ವಾಂಛೆಯೇ ಬರುವುದಿಲ್ಲ ಅನ್ನಬೇಡ! ಎರಡು- ಪ್ರೇಮದ ಪರಾಕಾಷ್ಠೆಯಾಗಿ- ಕಾಮ! ಮೂರು- ಕಾಮ ಒಂದು ಪ್ರಾಕೃತಿಕ ಅಗತ್ಯವಾದಾಗ! ಸಮಾಜ ಅನ್ನುವ ನಿಬಂಧನೆ- ಕುಟುಂಬ ಅನ್ನುವ ಕಟ್ಟುಪ್ಪಾಡುಗಳು ಇಲ್ಲದಿದ್ದರೆ ಕಾಮ ಒಂದು ಸಹಜ ಕ್ರಿಯೆಯಾಗುತ್ತಿತ್ತು!” ಎಂದೆ.

ಪಾದ ತೋರಿಸು- ಪುಣ್ಯಾತ್ಮ!” ಎಂದು ನಿಲ್ಲಿಸಿ ಉಸಿರೆಳೆದು...,

ನಿನ್ನ ಹೆಂಡತಿ ಇನ್ನೊಬ್ಬರೊಂದಿಗೆ ಕಾಮದಲ್ಲಿರುವಾಗ ನೋಡಲು ನಿನ್ನಿಂದ ಸಾಧ್ಯವಾ ಅನ್ನೋದು ಪ್ರಶ್ನೆ! ದುಃಖವಾಗುವುದಿಲ್ಲವಾ...?” ಎಂದಳು.

ಅವಳ ಬದುಕು ಅವಳದ್ದು! ದುಃಖವೇಕೆ? ಒಂದು ರಹಸ್ಯ ಹೇಳಲ? ಯಾರಿಗೂ ಹೇಳಬಾರದು...! ಮಾಂಧಾತ ಅವನ ಹೆಂಡತಿಗೆ ಹೇಳಿದ್ದ- ಅವಳು ಪ್ರೇಮಿಗಾಗಿ ತಪಿಸೋದು ಕಂಡು! ಬೇಕಿದ್ದರೆ ಸೇರಿ- ಯಾಕೆ ಮಿಸ್‌ಮಾಡ್ಕೋತೀರ- ಅಂತ!” ಎಂದೆ.

ಎದ್ದುಬಂದು ಮುಖಕ್ಕೆ ಬಾರಿಸಬೇಕೆನ್ನುವ ಕೋಪವನ್ನು ಹಲ್ಲುಕಚ್ಚಿ ತಡೆದುಕೊಂಡಳು! ಅವಳ ಕೋಪ ಆರುವ ಮುನ್ನವೇ ಹೇಳಿದೆ...,

ಮಾಂಧಾತನಿಗೆ ಗೊತ್ತು ಪ್ರೇಮದ ಬೆಲೆ! ಅವಳ ಪ್ರೇಮ ಅವಳ ಪ್ರೇಮಿಯಮೇಲೆ ಅಂತಿರುವಾಗ- ಅವಳ ಆನಂದವನ್ನು ನಾನೇಕೆ ಇಲ್ಲವಾಗಿಸಲಿ?” ಎಂದೆ.

ಮತ್ತೆ ಅವಳನ್ನು ಯಾಕೆ ಮದುವೆಯಾದೆ?” ಬುಲೆಟ್‌ನಂತೆ ತೂರಿ ಬಂತು ಪ್ರಶ್ನೆ!

ಕಾಲ ಸ್ಥಂಭಿಸಿತು!

ಐ ಲವ್‌ ಯು!” ಎಂದೆ.

ತಟ್ಟನೆ ಮುಖವನ್ನು ನೋಡಿದಳು.

ನಿಜ! ಮೊದಲಬಾರಿ ಒಬ್ಬರಿಗೆ ಐ ಲವ್ ಯು ಹೇಳುತ್ತಿರುವುದು!” ಎಂದೆ.

ಅವಳ ಮುಖದಲ್ಲಿ ಗೊಂದಲವೋ....? ಅಥವಾ...? ಏನೋ...., ಅರ್ಥವಾಗಲಿಲ್ಲ!

ಇನ್ನೂ...., ಡಿಗ್ರಿಯೇ ಮುಗಿದಿಲ್ಲಾ...” ಏನು ಹೇಳಬೇಕೋ ತಿಳಿಯದೆ ಪರದಾಡುತ್ತಿದ್ದಾಳೆ ಅನ್ನಿಸಿ...,

ನೋಡೂ... ನಾನು ನನ್ನ ಪ್ರೇಮವನ್ನು ಈಗಲೇ ತಿಳಿಸಿದ್ದಕ್ಕೆ ಒಂದುಉದ್ದೇಶವಿದೆ!” ಎಂದೆ.

ಅವಳ ಕಣ್ಣಿನಲ್ಲಿ ಕುತೂಹಲ!

ಭವಿಷ್ಯದಲ್ಲಿ ನನಗೆ ಅನ್ನಿಸಬಾರದು! ಮುಂಚೆಯೇ ಹೇಳಿದ್ದರೆ ಸಿಗುತ್ತಿದ್ದಳೇನೋ ಎಂದು! ಅಷ್ಟೇ ಹೊರತು ಈಗಲೇ ಮದುವೆಯಾಗುವ ಉದ್ದೇಶ ನನಗೂ ಇಲ್ಲ!” ಎಂದೆ.

ನಕ್ಕಳು. ನಗುವಿನಲ್ಲಿ ನೆಮ್ಮದಿಯೋ...? ಗೊಂದಲವೋ...? ತಿಳಿಯಲಿಲ್ಲ!

ಮೊದಲು ಓದು ಮುಗಿಸಿ! ನೋಡೋಣ!” ಎಂದಳು.

ಮೂರು ವರ್ಷ ಹೇಗೆ ಕಳೆಯಿತೋ ತಿಳಿಯಲಿಲ್ಲ. ಮನಸ್ಸಿನಲ್ಲಿ ಅವಳೇ!

ಮದುವೆಯಾದಮೇಲೆ ಹೇಗೆ? ಯಾವ ಉದ್ಯೋಗ ಹಿಡಿದರೆ ಒಳ್ಳೆಯದು? ಅಥವಾ ಬ್ಯುಸಿನೆಸ್ ಮಾಡಲೋ...?

ಇದೇ ಯೋಚನೆ! ನನ್ನ ಬದುಕಿಗೆ ಬರುವ "ಅವಳು" ನೆಮ್ಮದಿಯಾಗಿರಬೇಕು- ನನ್ನ ಜೀವನದ ಉದ್ದೇಶವೇ ಅದು! ಅಷ್ಟು ಇಷ್ಟ ಅವಳು!

ಒಟ್ಟಿಗೆ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾದರೆ....?

ಅವಳನ್ನು ಭೇಟಿಯಾದೆ. ಮತ್ತೊಮ್ಮೆ ನನ್ನ ಪ್ರೇಮ ನಿವೇದನೆಯನ್ನು ಮಾಡಿದೆ. ಅಂದರೆ..., ನೆನಪಿಸಿದೆ!

ಮಾಂಧಾತ...” ಎಂದು ತಣ್ಣನೆಯ ಸ್ವರದಲ್ಲಿ ಕರೆದು ನನ್ನ ಮುಖವನ್ನು ನೋಡಿದಳು. ನಂತರ ನನ್ನ ಕಣ್ಣು ದಿಟ್ಟಿಸಲಾಗದೆ ತಲೆತಗ್ಗಿಸಿ....,

ಕ್ಷಮೆಯಿರಲಿ...! ಒಂದು- ಒಂದೂವರೆ ವರ್ಷ ಮುಂಚೆ ನನಗೊಬ್ಬ ಹುಡುಗ ಪರಿಚಯವಾದ- ಶ್ಯಾಂ! ಯಾಕೋ..., ಅವರೇ ನನಗೆ ಸರಿಯಾದ ಜೋಡಿ ಅನ್ನಿಸಿತು! ಪ್ರೇಮಿಸುತ್ತಿದ್ದೇವೆ!” ಎಂದಳು.

ತಲೆಕೊಡವಿದೆ! ಒಂದೂವರೆ ವರ್ಷ ಮುಂಚೆ! ಅಂದರೆ ನಾನು ಪ್ರೇಮವನ್ನು ಹೇಳಿ ಒಂದೂವರೆ ವರ್ಷದ ನಂತರ ಪರಿಚಯವಾದವನು! ನಂತರದ ಒಂದೂವರೆ ವರ್ಷ ಕಳೆದಮೇಲೆ ಹೇಳುತ್ತಿದ್ದಾಳೆ!

ಯಾಕೆ?

ನನ್ನ ಆಗಿನ ಭಾವವನ್ನು ಹೇಗೆ ವರ್ಣಿಸುವುದು?

ಆದರೆ..., ಮಾಂಧಾತ ನಾನು! ದೇವಿಯ ಮಗ!

ಮನಸ್ಸನ್ನು ನನ್ನ ನಿಯಂತ್ರಣಕ್ಕೆ ತಂದುಕೊಂಡು ಹೇಳಿದೆ....,

ಇರಲಿ...! ನನ್ನ ಪ್ರೇಮಿ ನೀನು! ನಿನ್ನ ಸಂತೋಷವೇ ನನಗೆ ಮುಖ್ಯ! ಪ್ರೇಮ ಯಾರಿಗೆ ಯಾರಲ್ಲಿ ಮೂಡಬೇಕು ಅನ್ನುವುದು ದೈವ ನಿಶ್ಚಿತ! ನೀನು ನನ್ನನ್ನೇ ಪ್ರೇಮಿಸಬೇಕು ಎಂದು ಹೇಳಲು ನಾನು ಯಾರು? ಆದರೂ ನನ್ನ ಪ್ರೇಮ ನಿಜ! ಒಳ್ಳೆಯದಾಗಲಿ! ನಿನ್ನನ್ನಾದರೆ ಮದುವೆ ನನ್ನ ಬದುಕಿನಲ್ಲಿ! ಅದು ನಿಜ...! ಯಾವ ಸಮಯದಲ್ಲೇ ಆದರೂ ಮಾಂಧಾತನಿಂದ ನಿನಗೆ ಒಳಿತಾಗುತ್ತದೆ ಅನ್ನಿಸಿದರೆ.... ಇರುತ್ತಾನೆ!” ಎಂದು ಹೇಳಿ ಹೊರಟುಬಂದೆ!

ಅದರಬಗ್ಗೆ ಹೆಚ್ಚು ಯೋಚಿಸಲಿಲ್ಲ! ಯೋಚಿಸಲು ಏನೂ ಇರಲಿಲ್ಲ!

ಯೋಚನೆ ಗುರಿಯಕಡೆಗೆ ತಿರುಗಿತು!

ಏನು ಮಾಡಿದರೆ ನನ್ನ ಮನಸ್ಸಿಗೆ ಅನುಗುಣವಾಗಿರುತ್ತದೆ?

ಕಥೆಗಾರ ನಾನು! ಅದೇ ನನ್ನ ಬಂಡವಾಳ! ನನ್ನ ಯೋಚನೆಗಳು- ತತ್ತ್ವಗಳನ್ನು ಹೆಚ್ಚು ಜನರಿಗೆ ತಲುಪಿಸಬೇಕೆಂದರೆ- ಸಿನೆಮಾ ಒಳ್ಳೆಯ ಮಾಧ್ಯಮ! ಜೊತೆಗೆ... ಈ ಜೊತೆಗೆ ಅನ್ನುವುದೇ ಇಲ್ಲಿ ತುಂಬಾ ಮುಖ್ಯವಾದುದು!

ಮದುವೆ ಅನ್ನುವುದು ಬಿಟ್ಟು ಹೋಯಿತು! ಆಗಲಾರೆ! ಮತ್ತೆ...? ಹೆಣ್ಣೇ ಬೇಡವೆಂದೆ?

ಅಲ್ಲ...! ಹೆಣ್ಣೂ ಬೇಕು ಬದುಕಿಗೆ! ಹೆಣ್ಣು ಪ್ರೇಮದ ಪರ್ಯಾಯ! ಆದರೆ ಮದುವೆಯಾಗಲಾರೆ!

ಸುಳ್ಳುಗಳನ್ನು ಹೇಳಿಯೋ, ನಂಬಿಸಿಯೋ ಹೆಣ್ಣನ್ನು ಬಳಸಿಕೊಳ್ಳಲಾರೆ- ಇದು ನಿಯಮ!

ನಿಜ- ಹೆಣ್ಣು, ದುಡ್ಡು, ಸುತ್ತಾಟ- ಸಿನೆಮಾದಲ್ಲಿ ಸುಲಭ!

ಹೆಣ್ಣೂ ಕಾರಣವಾಗಿ ನಿರ್ದೇಶಕನಾಗಬೇಕೆಂಬ ಗುರಿಯನ್ನು ನಿರ್ಧರಿಸಿದರೂ "ಅವಳ" ಮದುವೆಯಾಗುವವರೆಗೆ ನಾನು ಬ್ರಹ್ಮಚಾರಿಯಾಗಿಯೇ ಉಳಿಯಲು ತೀರ್ಮಾನಿಸಿದೆ! ಇರಬಹುದು- ಒಳಗೊಂದು ಆಸೆ! ಸಿಕ್ಕಿದರೇ....!

ಸಿನೆಮಾ ಜಗತ್ತು ಹೊಸದು ನನಗೆ! ಹೇಗೆ ಎಂಟರ್ ಆಗಬೇಕೆನ್ನುವ ಹುಡುಕಾಟ! ಅವಕಾಶಗಳಿಗಾಗಿ ಕಾಯುವಿಕೆ! ಸಿಗದ ನಿರಾಸೆ! ಎರಡು ವರ್ಷಗಳು ಉರುಳಿದವು!

ನಾವು ಓಡಿ ಹೋಗೋಣವೇ...?” ಅನ್ನುವ ಸಂದೇಶ- ಅವಳಿಂದ!

ನಾನು ಮಾಂಧಾತ! ಶ್ಯಾಂ ಅಲ್ಲ!” ಎಂದೆ.

ಮಾಂಧಾತನನ್ನೇ ಕೇಳುತ್ತಿರುವುದು!” ಎಂದಳು.

ಏನೋ ಸಮಸ್ಯೆಯಿದೆ- ಅವಳನ್ನು ಭೇಟಿಯಾದೆ.

ಪ್ರೇಮಿ ಕೈಕೊಟ್ಟಿದ್ದ. ಕೈಕೊಟ್ಟಿದ್ದ ಎಂದರೆ... ಅವಳನ್ನು ಬಿಟ್ಟುಬಿಟ್ಟ ಅನ್ನಲಾಗುವುದಿಲ್ಲ. ಆದರೆ ವದುವೆಯ ವಿಷಯವೆತ್ತಿದರೆ- ಎಷ್ಟು ದಿನ ಕಾಯಬೇಕೆಂದು ಸ್ಪಷ್ಟವಾಗಿ ಹೇಳಲಾರದೆ ಹೋದ! ಮನೆಯಲ್ಲಿ ಅಪ್ಪ ಅಮ್ಮನ ಒತ್ತಡ! ಅವನೊಂದಿಗೇ ಮದುವೆಮಾಡಲು ಅವರು ತಯಾರಿದ್ದರು! ಆದರೆ ಅವನು ಮುಂದೆ ಬರಬೇಕಲ್ಲಾ...?

ಕೊನೆಗೆ ಅಪ್ಪ ಅಮ್ಮನ ಸಹನೆಯ ಕಟ್ಟೆ ಒಡೆಯಿತು! ಹುಡುಗನೊಬ್ಬನನ್ನು ಹುಡುಕಿ ಅವನೊಂದಿಗೆ ನಿಶ್ಚಿತಾರ್ಥವನ್ನು ಮಾಡಿದರು.

ಈಗೇನು ಮಾಡಲಿ?” ಎಂದಳು.

ಏನು ಮಾಡಲಿ ಅಂದರೆ?” ಎಂದೆ

ಈ ಮದುವೆ ನನಗೆ ಇಷ್ಟವಿಲ್ಲ...! ಆತನಿಗೆ ಹೇಳಿದೆ! ಮುರಿದುಬಿತ್ತು!” ಎಂದಳು.

ಇಷ್ಟವಿಲ್ಲದಿದ್ದರೆ ಯಾಕೆ ನಿಶ್ಚಿತಾರ್ಥಕ್ಕೆ ಒಪ್ಪಿದೆ? ಈಗ ಹೇಳಿದ್ದು ಮುಂಚೆಯೇ ಹೇಳಬಹುದಿತ್ತಲ್ಲ?” ಎಂದೆ.

ಆಗಿ ಹೋಗಿದೆ! ಈಗ ಏನು ಮಾಡಲಿ ಹೇಳು!?” ಎಂದಳು.

ಶ್ಯಾಂನನ್ನು ನನಗೆ ಪರಿಚಯಿಸು... ಬಾಕಿ ನಾನು ನೋಡಿಕೊಳ್ಳುತ್ತೇನೆ!” ಎಂದೆ.

ಯಾಕೋ ಆತ ಮುಂದೆ ಬರುತ್ತಿಲ್ಲ! ನೀನು ಅವರ ಕಾಲು ಹಿಡಿಯೋದು ನನಗಿಷ್ಟವಿಲ್ಲ!” ಎಂದಳು.

ಇದರಲ್ಲಿ ಕಾಲು ಹಿಡಿಯೋದೇನು ಬಂತು? ಆತನ ನಿಲುವು ತಿಳಿಯುವುದಷ್ಟೆ! ಪಾಪ... ಆತನ ಸಮಸ್ಯೆಗಳೇನೋ...!” ಎಂದೆ.

ಅದನ್ನು ನನಗೆ ಹೇಳಬಹುದಲ್ಲಾ...?” ಎಂದಳು.

ಒಂದು ಕ್ಷಣ ಮೌನ.

ಈಗ ಏನು ಮಾಡಬೇಕು ಅಂದುಕೊಂಡಿದ್ದೀಯ?” ಎಂದೆ.

ನೀನು ಮದುವೆಯಾಗುತ್ತೀಯ?” ಎಂದಳು.

ಮನಸ್ಸು ಗೊಂದಲಕ್ಕೆ ಬಿತ್ತು!

ಸ್ವಲ್ಪ ಸಮಯ ಕೊಡು!” ಎಂದೆ.

ಇಲ್ಲ! ಈಗಾಗಲೇ ಅಪ್ಪ ಅಮ್ಮನ ಮಾನ ಹರಾಜಾಗಿದೆ! ಫಿಕ್ಸ್ ಆಗಿರೋ ಡೇಟಲ್ಲೇ ಮದುವೆ ಆಗಬೇಕು!” ಎಂದಳು.

ಚಂಚಲಗೊಂಡೆ! ಮದುವೆಗೆ ಒಂದು ವಾರವಿದೆ! ಏನು ಮಾಡುವುದು?

ಅವಳಿಗೆ ಸ್ಪಷ್ಟವಾಗಿ ಹೇಳಿದೆ....,

ನೋಡೂ..., ಈ ಸಂದರ್ಭದಿಂದ ಹೊರಬರಲು ನನ್ನನ್ನು ಮದುವೆಯಾಗದಿರು! ಜನಕ್ಕೆ ಏನು...? ಸ್ವಲ್ಪದಿನ ಆಡಿಕೊಳ್ಳುತ್ತಾರೆ! ನಂತರ ಎಲ್ಲವೂ ಸರಿಹೋಗುತ್ತದೆ! ಅಲ್ಲದೆ- ಸದ್ಯಕ್ಕೆ ನನಗೆ ಯಾವ ಕೆಲಸವೂ ಇಲ್ಲ! ಯಾವ ಉದ್ದೇಶದಲ್ಲಿ ತೀರ್ಮಾನಿಸಿದೆನೋ- ನಿರ್ದೇಶಕನಾಗಬೇಕೆಂಬುದು ನನ್ನ ಕನಸು! ಗುರಿ! ಆಂಬಿಷನ್! ಈ ಗುರಿ ನನ್ನ ನರವನ್ನು ಪ್ರವೇಶಿಸಿದೆ! ಅದಕ್ಕಾಗಿ ತಾಳ್ಮೆಯಿಂದ ಶ್ರಮಿಸುತ್ತಿದ್ದೇನೆ! ಯಾವ ಕಾಲಕ್ಕೆ ಗುರಿ ಸೇರುತ್ತೇನೋ ತಿಳಿಯದು! ಯೋಚಿಸು!” ಎಂದೆ.

ಪೋಸ್ಟ್‌ ಗ್ರಾಜುಯೇಟ್ ನಾನು! ಕೆಲಸಕ್ಕೆ ಹೋಗುತ್ತೇನೆ! ನೀನು ಗುರಿ ಸೇರುವವರೆಗೆ ನಿನ್ನೊಂದಿಗಿರುತ್ತೇನೆ!”

ಆಮೇಲೆ?” ಎಂದೆ.

ನಕ್ಕಳು!

ಹಾಗೆ ನಮ್ಮ ಮದುವೆಯಾಯಿತು!

ನನ್ನನ್ನೇ ನೋಡುತ್ತಾ ಕುಳಿತಿದ್ದಳು "ಹೆಣ್ಣು"! ದೀರ್ಘವಾದ ಉಸಿರೆಳೆದುಕೊಂಡು ಕೇಳಿದಳು....,

ಇಷ್ಟು ಪವಿತ್ರವಾಗಿ ಒಬ್ಬರನ್ನು ಪ್ರೇಮಿಸಬಲ್ಲ ಮಾಂಧಾತ- ಬೇರೆ ಹೆಣ್ಣಿನಲ್ಲೂ ಪ್ರೇಮ ಉಂಟಾಗುತ್ತದೆ ಅನ್ನಲು ಕಾರಣವೇನು?” ಎಂದಳು.

ಅದು ನನ್ನ ಸಹಜ ಗುಣ!” ಎಂದೆ.

ಅರ್ಥವಾಗಲಿಲ್ಲ!” ಎಂದಳು.

ಪ್ರೇಮಿಸುವುದು ನನ್ನ ಸಹಜ ಗುಣ! ಆದರೆ ಹೆಂಡತಿ ಮತ್ತು ಅವಳ ಮನೆಯವರು ಅಪಮಾನಿಸಿ ಕಳಿಸುವವರೆಗೆ ಮಾಂಧಾತ ಏಕಪತ್ನೀ ವ್ರತಸ್ಥ! ಬೇರೆಯವರಲ್ಲಿ ಪ್ರೇಮ ಉದಿಸಿದರೂ ಪ್ರಕಟಪಡಿಸದೆ ನೋಡಿಕೊಂಡ!” ಎಂದೆ.

ದೊಡ್ಡದಾಗಿ ಕಣ್ಣರಳಿಸಿ ಹೇಳಿದಳು...,

ನನಗೆ ಪ್ರಶ್ನೆಯಮೇಲೆ ಪ್ರಶ್ನೆ ಉದ್ಭವಿಸುತ್ತಿದೆ! ಮಾಂಧಾತ- ಹೆಂಡತಿ ಮತ್ತು ಅವರ ಮನೆಯವರಿಂದ ಅಪಮಾನಿತನಾದನೆ? ಯಾಕೆ? ಆ ಅಪಮಾನವೇ ಮಾಂಧಾತ ಹೀಗೆ ಬದಲಾಗಲು ಕಾರಣವಾಯಿತೆ? ಹಾಗಿದ್ದರೆ ಮಾಂಧಾತ ಪ್ರೇಮವನ್ನು ಕಂಡಿರುವವನೇ...! ನಡೆದ ಘಟನೆ ಅವನನ್ನು ಹೀಗೆ ಬದಲಿಸಿತು! ಇದು ತಪ್ಪಲ್ಲವೇ ಮಾಂಧಾತ? ಹೆಂಡತಿ ಜೊತೆಗಿದ್ದಾಗ ಯಾಕೆ ಏಕಪತ್ನೀ ವ್ರತಸ್ಥನಾಗಬೇಕಿತ್ತು? ಈಗ ಇಷ್ಟು ನಿಯಮವಿಲ್ಲದ ಮಾಂಧಾತ ಆಗಲೂ ಯಾಕೆ ಈಗಿರುವಂತೆ ಇರಲಿಲ್ಲ?”

ಅವಳ ಆವೇಶವನ್ನು ಕಂಡು ನಗುಬಂತು.

ಮಾಂಧಾತ ಪ್ರೇಮವನ್ನು ಕಂಡಿದ್ದನೇ? ಹೆಂಡತಿಗೆ ಒಂದಿಂಚಿನ ಪ್ರೇಮ- ನಂಬಿಕೆ ಮಾಂಧಾತನಲ್ಲಿದ್ದಿದ್ದರೆ ಅವನ ವೈವಾಹಿಕ ಜೀವನ ಸ್ವರ್ಗವಾಗಿರುತ್ತಿತ್ತು!” ಎಂದು ನಿಲ್ಲಿಸಿ ಅವಳ ಮುಖವನ್ನು ನೋಡಿ...,

ಪ್ರೇಮ ಮಾಂಧಾತನ ಸಹಜ ಗುಣ! ಆದರೆ...., ಗೆಳತಿಯೊಬ್ಬಳ "ಹೇಗಿದ್ದೀಯ" ಅನ್ನುವ ಮೆಸೇಜ್ ನೋಡಿ- ಅವಳೇಕೆ ಮೆಸೇಜ್ ಮಾಡಿದ್ದಾಳೆ ಎಂದು ಜಗಳಕ್ಕೆ ಬರುವ ಹೆಂಡತಿಯಬಗ್ಗೆ ಹೆಚ್ಚು ವಿವರಣೆ ಬೇಕೆ? ಮಾಂಧಾತನಿಗೆ ನರಕ ಬೇಕಿರಲಿಲ್ಲ! ಜೊತೆಗೆ ಆಗ ಸಮಾಜದಬಗ್ಗೆ ಒಂದು ಹೆದರಿಕೆಯಿತ್ತು! ಕಾಲ ಬದಲಾದಂತೆ ಆ ಹೆದರಿಕೆ ಹೋಯಿತು ಅಂದುಕೋ... ಆದರೂ ಮುಖ್ಯವಾಗಿ ಹೆಂಡತಿಯೊಂದಿಗಿನ ಕಲಹ ನನಗೆ ಬೇಕಿರಲಿಲ್ಲ!” ಎಂದೆ.

ಅಷ್ಟು ಮಟ್ಟಿನ ಪಾಸೆಸಿವ್‌ನೆಸ್ ಇಲ್ಲದಿದ್ದರೆ ಅವಳೇಕೆ ಹೆಣ್ಣು- ಹೆಂಡತಿ?” ಎಂದಳು ನಗುತ್ತಾ.

ಅಲ್ಲವಾ...! ಇದೇ ಪಾಸೆಸಿವ್‌ನೆಸ್ ಆಗಿದ್ದಿದ್ದರೆ- ಇಡೀ ಬ್ರಹ್ಮಾಂಡಕ್ಕೆ ಹಂಚಬಹುದಾಗಿದ್ದ ಮಾಂಧಾತನ ಪ್ರೇಮವನ್ನು ಅವಳೊಬ್ಬಳಲ್ಲಿ ಕೇಂದ್ರೀಕರಿಸುತ್ತಿದ್ದೆ!” ಎಂದು ಅವಳ ಮುಖವನ್ನು ನೋಡಿದೆ. ಮುಂದುವರೆಸಿ ಅನ್ನುವಂತೆ ನೋಡಿದಳು.

ಇದೇ ಹೆಂಡತಿಗೆ ಅವಳ ಪ್ರೇಮಿಯೊಂದಿಗೆ ಕಾಂಟಾಕ್ಟ್ ಇದ್ದು ಗಂಡನಬಗ್ಗೆಯೇ ಹೇಳುವಷ್ಟು ಸಲಿಗೆ ಇದ್ದರೆ ಏನು ಮಾಡಬೇಕು?”

ಅವಳಿಂದ ಮೌನ!

"ಪ್ರೇಮಿಯಲ್ಲದೆ ಹೆಂಡತಿಯ ಬೇರೊಬ್ಬ ಗೆಳೆಯ ಹೆಣ್ಣು- ಗಂಡಿನ ರಹಸ್ಯ ಭಾಗಗಳ ಪಟವನ್ನು ಹೆಂಡತಿಗೆ ಕಳಿಸಿದರೆ ಏನು ಮಾಡಬೇಕು?”

ಆ ಕ್ಷಣದ ಅವಳ ಮೌನ..., ಮುಖಭಾವ- ಯಾವ ಗಂಡು ತಾನೆ ಹೆಣ್ಣನ್ನು ಪ್ರೇಮಿಸದೇ ಇರುತ್ತಾನೆ?

ನಗುತ್ತಾ ಹೇಳಿದೆ...,

ಹೆಂಡತಿ- 'ಅವನು ಒಳ್ಳೆಯವನು, ಎಲ್ಲರೊಂದಿಗೂ ಹಾಗೇ... ಕೆಟ್ಟ ಉದ್ದೇಶವೇನೂ ಇಲ್ಲ!’ ಎಂದು ಸಮರ್ಥಿಸಿಕೊಳ್ಳ ತೊಡಗಿದರೆ.... ಹೆಣ್ಣೇ... ಅದನ್ನು ನೀನು ಹೇಗೆ ಸಮರ್ಥಿಸುತ್ತೀಯ? ಗೆಳತಿಯೊಬ್ಬಳು ಹೇಗಿದ್ದೀಯ ಎಂದು ಕೇಳಿದರೆ ಪಾಸೆಸ್ಸೀವ್ ಹೆಂಡತಿ ಕೆರಳುತ್ತಾಳೆ! ಅದೇ ಹೆಂಡತಿ ಅವನ ಪ್ರಿಯಕರನೊಂದಿಗೆ ಗಂಡನಬಗ್ಗೆಯೇ ಮಾತಾಡುವಷ್ಟು ಸಲಿಗೆಯಿಂದಿದ್ದರೆ, ಬೇರೆ ಗೆಳೆಯ ಹೆಣ್ಣು ಗಂಡಿನ ರಹಸ್ಯಭಾಗಗಳ ಪಟವನ್ನು ಕಳಿಸುವಷ್ಟು ಸಲಿಗೆಯಿಂದಿದ್ದರೆ ಪ್ರಶ್ನೆಮಾಡುವ ಗಂಡ ತಪ್ಪುಗಾರ! ಕೇಳಿದರಾದರೂ ತಪ್ಪುಗಾರ ಅನ್ನಬಹುದು- ಮಾಂಧಾತ ಅದನ್ನೂ ಕೇಳಿದವನಲ್ಲ!”

ಗಾಢ ಮೌನ! ಒಂದು ಕ್ಷಣದ ನಂತರ...,

ಸೋ..., ನೀವು ಹೆಣ್ಣಿನ ಭಾವನೆಗಳೊಂದಿಗೆ ಆಟವಾಡಬೇಕು ಅಂತ ತೀರ್ಮಾನ ಮಾಡಿದಿರಿ!” ಎಂದಳು.

ಮನದಲ್ಲಿ ಹಾದು ಹೋದ ಭಾವವೇನು?

ವೇದನೆ!

ಇಲ್ಲವೇ....! ಮಾಂಧಾತನ ಪ್ರೇಮ ಅವ್ಯಾಹತ- ಅನಿರ್ಭಂದಿತ! ತನಗೆ ಒಂದು ಗುಟುಕು ದೊರಕದಿದ್ದರೂ ಮತ್ತೊಬ್ಬರ ಹೊಟ್ಟೆ ತುಂಬಿಸುವಷ್ಟು ಪ್ರೇಮ ಅವನಲ್ಲಿದೆ! ಬ್ರಹ್ಮಾಂಡಕ್ಕೇ ಹಂಚಿದರೂ ಮುಗಿಯದ ಪ್ರೇಮವನ್ನು ಯೋಗ್ಯಳಲ್ಲದ ಒಬ್ಬಳಲ್ಲಿ ಕೇಂದ್ರೀಕರಿಸುವುದಕ್ಕಿಂತ- ಬ್ರಹ್ಮಾಂಡಕ್ಕೇ ಹಂಚಿಬಿಡೋಣ- ಅಂತ!” ಎಂದು ನಿಲ್ಲಿಸಿ....,

ನಿನ್ನಿಂದ ನನಗೆ ಏನೂ ಬೇಕಾಗಿಲ್ಲ! ಆದರೂ ನಾನು ನಿನ್ನನ್ನು ಪ್ರೇಮಿಸುತ್ತೇನೆ! ನಿನಗದರ ಅಗತ್ಯವಿಲ್ಲವಾ- ಕಡೆಗಣಿಸು! ಅಗತ್ಯವಿದೆಯಾ...? ಅಂತ್ಯವಿಲ್ಲದಷ್ಟು ಮಾಂಧಾತನಲ್ಲಿದೆ- ಕೊಡಬಲ್ಲ! ನೀನೂ ಪ್ರೇಮಿಸಿದೆಯಾ..., ಸಂತೋಷ! ಅಷ್ಟೇ ಹೊರತು...!” ನಿಲ್ಲಿಸಿದೆ.

ಮಾತನಾಡಲು ಗಂಟಲು ಒಪ್ಪಲಿಲ್ಲ. ಕಣ್ಣಿನಲ್ಲಿ ನೀರ ಪರದೆ!

ಮನಸ್ಸಿನ ಭೋರ್ಗರೆತವನ್ನು ಮಾತುಗಳಲ್ಲಿ ಹೇಗೆ ಹೇಳಲಿ?

ಹೆಣ್ಣೇ...!

ಅರ್ಥವಾಗುವುದಿಲ್ಲ ನಾನು- ಯಾರಿಗೂ...,

ಎಟುಕುವುದಿಲ್ಲ!

ನನ್ನ ಪ್ರೇಮ...,

ದುಮ್ಮಿಕ್ಕುವ ಜಲಧಾರೆ!

ಬೊಗಸೆ ತುಂಬಿಕೊಳ್ಳುತ್ತೀಯೋ,

ಹೃದಯಕ್ಕೆ ಆನಿಸುತ್ತೀಯೋ...,

ಇಚ್ಛೆ ನಿನ್ನದು- ನನ್ನದೇನಿಲ್ಲ!

ಇರುವುದೊಂದೇ- ಪ್ರೇಮ...!

ಕೊಡಬಲ್ಲೆನೆ ಹೊರತು-

ನಿರೀಕ್ಷೆಯಿಲ್ಲ!!

ಕಾಮ...?

ಅನ್ನುವೆಯಾ...?

ಮೃಷ್ಟಾನ್ನ ಭೋಜನದಲ್ಲಿ

ಬೆರಳ ತುದಿಯಿಂದ ಮುಟ್ಟಿ

ನಾಲಿಗೆಗಿಡುವ

ಉಪ್ಪಿನ ಕಾಯಿ ರಸ- ಕಾಮ!

ಎಲೆಯಲ್ಲಿರಲಿ....,

ನಿರ್ಬಂಧವಿಲ್ಲ!

ಅಷ್ಟೆ ಹೊರತು....

ಅರ್ಥವಾಯಿತೇ....?

ಪ್ರೇಮಿಸುತ್ತಿರುವವನು ನೀನು- ನಾನಲ್ಲ! ನೀನು ನನ್ನನ್ನು ಪ್ರೇಮಿಸುತ್ತಿರುವುದು ನಿಜವೇ ಆದರೆ ನಾನು ಹೇಳಿದಂತೆ ಕೇಳಬೇಕು!” ಎಂದಳು ಹೆಂಡತಿ.

ನಡೆಯದ ಕನಸ್ಸನ್ನು ಹಿಡಿದು ಕುಳಿತಿರುವ ಕೈಯ್ಯಲ್ಲಾಗದವನಿಗೆ ನನ್ನ ಮಗಳನ್ನು ಕೊಟ್ಟು ತಪ್ಪು ಮಾಡಿದೆ!” ಎಂದರು ಮಾವ.

ಆಗ... ಅನಿರುದ್ಧನಾದೆ!

ಒಂದಿಷ್ಟು ತುಡಿತಕ್ಕಾಗಿ ಹಾತೊರೆದೆ!

ಕಲ್ಪನೆಯೋ...., ವಾಸ್ತವವೋ...!

ಎದೆಗಾನಿಸಿಕೊಂಡಳು...., ಉಷೆ!

ಅದೇ ಅವಳ ಮಹತ್ವ!

ಹಾಗೆಂದು....,

ದುಮ್ಮಿಕ್ಕುವ ಜಲಧಾರೆ ನನ್ನೊಬ್ಬಳಿಗೆ ಮೀಸಲು ಅನ್ನಬಹುದೇ...?

ಹರಿವು ನಿಲ್ಲಿಸುತ್ತೇನೆಂಬ ಮಾತನ್ನು ನಾನಾದರೂ ಕೊಡಬಲ್ಲೆನೆ?

ನನ್ನ ನಿಯಂತ್ರಣದಲ್ಲಿಲ್ಲದ ನಿಜವನ್ನು ಅವಳಿಗೆ ತಿಳಿಸುವುದಷ್ಟೆ- ಕರ್ತವ್ಯ!

ಮಾಂಧಾತನನ್ನು ನಂಬಿದ ಯಾರಿಗೂ ಕೆಡುಕಾಗಬಾರದು- ದುಃಖವೂ!

ಹೆಂಡತಿ ಒಂದು ಕ್ಷಣವೂ ಅವನನ್ನು ನಂಬಿದವಳಲ್ಲ! ಆದ್ದರಿಂದ ಅವಳ ದುಃಖಕ್ಕೆ ಅವನು ಹೊಣೆಯಲ್ಲ!

ಹೆಣ್ಣೇ...,

ಕಾಮ ಆಗಲಿ ಬಿಡಲಿ, ಮಾಂಧಾತ ನಿನ್ನನ್ನು ಪ್ರೇಮಿಸುತ್ತಾನೆ! ನಿನ್ನ ಹೃದಯವನ್ನು ಸುಲಭವಾಗಿ ಅನುಭಾವಿಸುತ್ತಾನೆ! ಪ್ರೇಮ ಅನ್ನುವುದು ಒಂದು ನಿಶ್ಚಲ ಭಾವ- ಬದಲಾಗುವುದಿಲ್ಲ! ಅದು ಶಾಶ್ವತ! ವರ್ತನೆ ಬೇರೆ- ಪ್ರೇಮ ಬೇರೆ! ಇದೆರಡನ್ನೂ ಬೆರೆಸದಿರು! ಇದು ಅರ್ಥವಾದಂದು ಮಾಂಧಾತ ನಿನಗೆ ಅರ್ಥವಾಗುತ್ತಾನೆ! ನೀನೂ ಮಾಂಧಾತನ ಹೃದಯವನ್ನು ಅನುಭಾವಿಸಿದಂದು- ಪ್ರೇಮ ಅನುಭವವಾಗುತ್ತದೆ!

ಯಾರ ಹೃದಯ ಎಷ್ಟು- ಹೇಗೆ- ಸ್ಪಂದಿಸುತ್ತದೆ ಅನ್ನುವುದರಮೇಲೆ- ಅವರವರ "ಪರಸ್ಪರ ಇರುವಿಕೆ" ನೆಲೆನಿಂತಿದೆ!

ಇದೇ....,

ಮಾಂಧಾತ ಪ್ರೇಮ!

ಮಾಂಧಾತನ- ಪ್ರಶ್ನಾತೀತ ಪ್ರೇಮ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!