ಬ್ರೇಕ್!

ಹಾಗೆ..., ಒಂದು ಎರ (era)- ಅಥವಾ ಕಾಲಘಟ್ಟ ಮುಗಿಯಿತು! ಮನು ಬರೆದ ಅಷ್ಟೂ ಕಥೆಗಳು ಖಾಲಿಯಾದವು! ನೂರಾ ಐವತ್ತೈದು ಕಥೆಗಳು, ಎರಡು ಕಾದಂಬರಿಗಳು, ಮೂರು ಸಿನೆಮಾಗಾಗಿನ ಸ್ಕ್ರಿಪ್ಟ್- ಸದ್ಯಕ್ಕೆ ಮನುವಿನ ಸಾಧನೆ!! ವೀರಪುತ್ರ, ನಚಿಕೇತ, ಚಾರುದತ್ತದಲ್ಲಿ ನೀವು ಯಾರು? ಆ ಕೊಲೆಗಳನ್ನು ನೀವೇ ಯಾಕೆ ಮಾಡಿರಬಾರದು? ಅನ್ನುವ ಪ್ರಶ್ನೆಗಳೊಂದಿಗೆ..., ಮನಶ್ಶಾಸ್ತ್ರದಲ್ಲಿ ಡಾಕ್ಟರೇಟ್‌ಗೆ ಯೋಗ್ಯವಾದ ಪುಸ್ತಕ- ಕಾಸನೋವ- ಇಷ್ಟವಾಯಿತು ಅಂದವರು ಕೆಲವರು, ಮದುವೆಯಾಗುವವರೆಗೂ ಮನು ಪಕ್ಕಾ ಬ್ರಹ್ಮಚಾರಿಯೆಂದು ಆಣೆಮಾಡಿ ಹೇಳಿದರೂ ನಂಬದೇ, ಆ ಇಬ್ಬರು ಮಕ್ಕಳು ಈಗ ಎಲ್ಲಿದ್ದಾರೆ ಎಂದು ಕೇಳುವಷ್ಟು ಕಾಡಿದ ಪುಸ್ತಕ- ಭಾಮೆ- ಇಷ್ಟವಾಯಿತು ಅಂದವರು ಕೆಲವರು! ಇನ್ನು ಕಥೆಗಳು..., ಹತ್ತು ಹದಿನೈದು ವರ್ಷ ಮುಂಚೆ ಬರೆದ ಕಥೆಗಳು ಸುಲಭವಾಗಿ ಅರ್ಥವಾಗುವಂತಿದ್ದು..., ಇತ್ತೀಚಿನ ಬರಹಗಳು ಕಠಿಣ ಅನ್ನಿಸುತ್ತಿದೆ ಅಂದವರು ಕೆಲವರಾದರೆ ನಿಮ್ಮ ಕಥೆಗಳನ್ನು ಅರಗಿಸಿಕೊಳ್ಳುವುದು ಕಷ್ಟ ಅಂದವರು ಕೆಲವರು! ಕಥೆಗಳಲ್ಲಿ ಕಥೆಗಾರನನ್ನು ಕಂಡು, ಅವನೇ ಎಂದು ನಿಶ್ಚಯಿಸಿ, ಒಂದೊಂದು ಕಥೆಯಲ್ಲಿ ಒಂದೊಂದು ಬಗೆಯಾದ್ದರಿಂದ ಕಥೆಗಾರನಬಗ್ಗೆ ಊಹೆ ಸಿಗದಂತಾಗುವುದು ಕಥೆಗಾರನ ಗೆಲುವು! ಕಥೆಗಾರನಬಗ್ಗೆ- ಕಥೆಗಾರನೊಂದಿಗೆ ವೈಯಕ್ತಿಕ ಒಡನಾಟ ಇಟ್ಟುಕೊಂಡವರದ್ದು ಒಂದು ಅಭಿಪ್ರಾಯವಾದರೆ ಕೇವಲ ಕಥೆಗಳನ್ನು ಓದಿ ಅದರಲ್ಲಿ ಕಥೆಗಾರನನ್ನು ಕಂಡುಕೊಂಡವರದ್ದು ಒಂದು ಅಭಿಪ್ರಾಯ! ಏನೇ ಆದರೂ ಕಥೆಗಾರನಿಗೆ ಹೊಗಳಿಕೆಯೂಬೇಕು- ನಿಜ ಅಭಿಪ್ರಾಯವೂ ಬೇಕು- ತೆಗಳಿಕೆಯೂ ಬೇಕು! ಎಲ್ಲರೂ ಆತ್ಮೀಯರೇ ಆದ್ದರಿಂದ ಮನುವಿಗೆ- ದೇವೀಪುತ್ರನಿಗೆ- ಅಭಿಪ್ರಾಯಗಳು, ಬೈಗುಳಗಳು, ಹೊಗಳಿಕೆಗಳೆಲ್ಲವೂ ಧಾರಾಳವಾಗಿ ಸಿಕ್ಕಿದೆ! ಇನ್ನು ಭವಿಷ್ಯದಲ್ಲಿ ಒಂದೇ ಒಂದು ಕಾದಂಬರಿ ಬರೆಯಬೇಕೆಂಬ ಆಸೆಯಿದೆ..., ಕಡಿಮೆಯೆಂದರೂ ಐದಾರು ವರ್ಷವಾದರೂ ಬೇಕಾಗಬಹುದು ಅದನ್ನು ಬರೆಯಲು! ಅದರ ಹೊರತು ಬೇರೆ ಏನಾದರೂ ಬರೆಯುತ್ತೇನೋ ಇಲ್ಲವೋ ತಿಳಿಯದು...! ಬರೆಯಬಾರದೆಂಬ ನಿಯಮವಿಲ್ಲವಾದರೂ ಸದ್ಯಕ್ಕೆ ಬರೆಯಲಾರೆ ಅನ್ನಿಸುತ್ತಿದೆ! ಪರಿಪೂರ್ಣವಾಗಿ ಗುರಿಯ ಹಿಂದೆ ಬೀಳಬೇಕಾದ ಸಮಯವಾಗಿದೆ! ಸಿನೆಮಾ ನಿರ್ದೇಶಕನಾಗುವುದು ಮನುವಿನ ಗುರಿಯಲ್ಲ- ದಾರಿಮಾತ್ರ! ಅವನ ಗುರಿ ಬೇರೆಯೇ ಇದೆ! ಮನುವಿಗಾಗಿ..., ಪ್ರತಿ ಹೆಣ್ಣು ಅವನ ದೇವಿ ಅನ್ನುವಲ್ಲಿ..., ದೇವೀಪುತ್ರನಿಗಾಗಿ ಪ್ರೇಮವಿರಲಿ, ವಾತ್ಸಲ್ಯವಿರಲಿ, ಪ್ರಾರ್ಥನೆಯಿರಲಿ, ಆಶೀರ್ವಾದವಿರಲಿ..., ಹಾಗೆಂದು ಪೂರ್ತಿಯಾಗಿ ದೂರವಂತೂ ಹೋಗುವುದಿಲ್ಲ! ಆಗಾಗ ಇಣುಕುತ್ತೇನೆ, ಕಾಲು ಕೆರೆದು ಜಗಳಕ್ಕೆ ಬರುತ್ತೇನೆ! ಮನುವಿನ ಹೊಸ ಕಥೆಗಳಿರುವುದಿಲ್ಲವಷ್ಟೆ! ಮನು ಬರೆದದ್ದೂ ಓದುತ್ತಾರೆ, ಮನುವೂ ಒಬ್ಬ ಕಥೆಗಾರ, ಅನ್ನುವ ಧೈರ್ಯ ನೀಡಿದ ಓದುಗರನ್ನು ಪಡೆದ ಮನು ಧನ್ಯ! ಮನುವಿನ ಯಾವೊಬ್ಬ ಓದುಗರೂ ಕೇವಲ ಓದುಗರಲ್ಲ..., ಅವನ ಆತ್ಮಕ್ಕೆ ಅಂಟಿಕೊಂಡವರು- ಅವನ ಸ್ವಂತದವರು!

ಧನ್ಯೋಸ್ಮಿ....

ಸದ್ಯಕ್ಕೆ- ಕೊನೆಯ ಕಥೆ...,

ಕಥೆ ನಂ:- ೧೫೫

ಬ್ರೇಕ್!

*

ನ್ತ ಸಾವ!”

ಕೆಟ್ಟ ಸಾವು!”

ಮೈಸೂರಿಗ ಅಂತ ಕೊಬ್ಬು ನಿನಗೆ!”

ಇರಬೇಕಲ್ಲಾ!”

ಸರೀ.... ಎಲ್ಲಿಗೆ ಕರ್ಕೊಂಡು ಹೋಗ್ತೀಯ ಈಗ?”

ಬೆಟ್ಟ!”

ಸಾವು! ಮೊನ್ನೆ ನೀನು ಬರೆದ ಕಥೆ ಓದಿ ಬೆಟ್ಟ ಅಂದ್ರೇನೆ ಹೆದರಿಕೆ ಹುಟ್ಟೋ ಹಾಗಾಗಿದೆ ಮಾರಾಯ!”

ನಾನಿರ್ತೀನಲ್ಲ ಜೊತೆಗೆ...?”

ಅದೇ ಹೆದರಿಕೆ!”

ಯಾಕೆ?”

ಬೆಟ್ಟ ತಲುಪಿದಮೇಲೆ ನೀನೇ ದೆವ್ವ ಗಿವ್ವ ಆಗಿಬಿಟ್ರೆ?”

ಕರ್ಮಕಾಂಡ! ನೆಮ್ಮದಿಯಿಂದ ಒಂದು ಕಥೆ ಬರೆಯೋಕೂ ಬಿಡಲ್ವಲ್ಲ ನೀನು!”

ನಿನ್ತಲೆ! ಕಥೆಬರೆದು ಓದುಗರ ನೆಮ್ಮದಿ ಹಾಳು ಮಾಡ್ತಿರೋನು ನೀನು!”

ಒದ್ದುಕೊಂಡು ಬರುತ್ತೆ- ಬರೀತೀನಿ! ಅದ್ರಲ್ಲಿ ನೆಮ್ಮದಿ ಹಾಳಾಗೋಕೆ ಏನಿದೆ?”

ಅದ್ರಲ್ಲೇನಿಲ್ಲ!”

ಮತ್ತೆ?”

ನೀನು ಕಥೆ ಬರೆಯೋದೇ ನೆಮ್ಮದಿ ಭಂಗ!”

ಹಾಗಂತೀಯ! ಈಥರ ನಿಜಗಳನ್ನೆಲ್ಲಾ ಇಷ್ಟು ನಿಷ್ಠುರವಾಗಿ ಹೇಳಿದರೆ ಹೇಗೆ?”

ನಾನು ಹೇಳಿದ ತಕ್ಷಣ ನೀನು ಕಥೆ ಬರೆಯೋದು ನಿಲ್ಲಿಸಿ ಬಿಡ್ತೀಯ?”

ಅದಿಲ್ಲ!”

ಸರಿ, ಅದುಬಿಡು...! ನಾನು..., ನೀನು ಬರೆದ ದೆವ್ವದ ಕಥೆಯಬಗ್ಗೆ ಹೇಳಲಿಲ್ಲ!”

ಮತ್ತೆ?”

ಅದೇ... ಓಯಾಸಿಸ್ಸಿನಷ್ಟು ಕೂಡ ಪ್ರೇಮವಿಲ್ಲದ ಮರುಳುಗಾಡು ನಿನ್ನ ಬದುಕು ಅನ್ನೋಥರ! ಏನೋ ಭಾರಿ ಬರಗೆಟ್ಟವನಂತೆ ಬರೆದಿದ್ದೆ?”

ಹಿಹ್ಹಿ!”

ನಿನ್ನ ತಲೆ! ಗಂಡು- ಹೆಣ್ಣು- ಪ್ರೇಮ! ಸಾಕ??”

ಸಾಕ ಅನ್ನುತ್ತೀಯಲ್ಲ? ಅದರ ಹೊರತೇನಿದೆ ಹೇಳು...? ಸಾಹಿತ್ಯ ಉದಿಸಿದಾಗಿನಿಂದ ಕಾವ್ಯ ಮಹಾಕಾವ್ಯಗಳು ಯಾವುದರಬಗ್ಗೆ ಇರುವುದು??”

ಅದೂ ನಿಜಾ ಅನ್ನು! ಪ್ರೇಮದ ಹೊರತೂ ಬರೆದಿದ್ದೀಯ ಅನ್ನುವಲ್ಲಿ ನೀನೇ ಪರವಾಗಿಲ್ಲ! ಇನ್ಯಾವಾಗ ಹೊಸ ಕಥೆ?!”

ಅದನ್ನೇ ಹೇಳೋಣ ಅಂದುಕೊಂಡಿದ್ದೆ! ಪರಿಚಯವೇ ಇರದಿದ್ದ ಅದೆಷ್ಟು ಜನ ಓದುಗರು, ಹಿರಿಯರು, ಗೆಳೆ(ತಿ)ಯರು! ಎಷ್ಟೊಂದು ಕಮೆಂಟುಗಳು- ಆತ್ಮೀಯತೆ! ಕೆಲವರು ನನಗೆಲ್ಲಿ ನೋವಾಗುತ್ತದೋ ಎಂದು ಎಷ್ಟು ನಾಜೂಕಾಗಿ ಅಭಿಪ್ರಾಯ ಹೇಳಿದರು! ಕೆಲವರು ಇನ್‌ಬಾಕ್ಸಿನಲ್ಲಿ...! ಎಲ್ಲರನ್ನೂ ಮಿಸ್‌ ಮಾಡ್ಕೋತೀನಿ!”

ಮಿಸ್‌ ಯಾಕೆ ಮಾಡ್ಕೋತೀಯ? ಎಲ್ಲರೂ ನಿನ್ನ ಅಷ್ಟು ಇಷ್ಟ ಪಡುತ್ತಿರುವಾಗ?”

ಅದಕ್ಕೇ ಮಿಸ್‌ಮಾಡ್ಕೋತಿರೋದು! ಅವರು ತೋರಿಸಿದ ಅಭಿಮಾನವೇ ನಾನೊಬ್ಬ ಕಥೆಗಾರ ಅನ್ನುವ ಧನ್ಯತೆಯನ್ನು ತಂದಿದ್ದು! ನಾನು ಬರೆದದ್ದೂ ಓದುವವರಿಗೆ ಇಷ್ಟವಾಗುತ್ತದೆ ಅನ್ನುವ ನಂಬಿಕೆ ಹುಟ್ಟಿಸಿದ್ದು! ಈಗ....!”

ಈಗೆಂತ?!”

ಇಷ್ಟು ವರ್ಷದ ತಾಳ್ಮೆ- ಶ್ರಮ- ತಪಸ್ಸು..., ಫಲಿಸುವ ಸಮಯ ಬಂದಿದೆ! ನಿಜವಾದ ಕರ್ತವ್ಯ! ಸಿನೆಮಾ ನಿರ್ದೇಶನ! ಆದ್ದರಿಂದ ಕಥೆ ಬರೆಯುವುದಕ್ಕೆ ಒಂದು ಗ್ಯಾಪ್! ಸ್ವಲ್ಪ ಸಮಯಕ್ಕೆ ಮನಸ್ಸಿಗೆ ಹತ್ತಿರವಾದವರನ್ನು ಗಮನಿಸಲು ಸಾಧ್ಯವಾಗುವುದಿಲ್ಲವೇನೋ...? ಆಗಾಗ ಇಣುಕಬಹುದು... ಆದರೂ...!”

ಅವರೆಲ್ಲರ ಪ್ರಾರ್ಥನೆ- ಆಶೀರ್ವಾದ ನಿನಗಿದೆ! ಚಿಂತೆ ಬಿಟ್ಟು ಗುರಿಯೆಡೆಗೆ ಮುನ್ನಡೆ! ನೀನು ಯಾವಾಗ ಬಂದರೂ ಅವರು ನಿನ್ನೊಂದಿಗಿರುತ್ತಾರೆ! ನಾನೇ ಅವರೆಲ್ಲರ ಪ್ರತಿನಿಧಿ! ಇನ್ನು ನಿನಗೆ ಗೆಲುವುಮಾತ್ರ!”

ಉತ್ಪ್ರೇಕ್ಷೆಯೇ ಆದರೂ ಕೇಳೋಕೆ ಚೆನ್ನಾಗಿದೆ! ಥ್ಯಾಂಕ್ಯೂ...!”

ಉತ್ಪ್ರೇಕ್ಷೆ? ನಾನು ಯಾರಂದುಕೊಂಡಿದ್ದೀಯ?”

ಯಾರು?”

ಹುಟ್ಟಿನಿಂದ ಇದುವರೆಗೆ ಒಂದೊಂದು- ಒಬ್ಬೊಬ್ಬರ ರೂಪದಲ್ಲಿ ನಿನ್ನೊಂದಿಗಿದ್ದು ಸಲಹಿದ....” ಮಾತು ಮುಗಿಯಲಿಲ್ಲ...,

ಯಾರೊಂದಿಗೆ ಮಾತನಾಡುತ್ತಿದ್ದೀಯೋ...?” ಎಂದು ಕೇಳುತ್ತಾ ಬಂದಳು- ಇಷ್ಟು ಹೊತ್ತು ಮಾತನಾಡುತ್ತಿದ್ದ ಗೆಳತಿ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!