ಭ್ರಮೆ
ಭ್ರಮೆ!
1
“ರಂತಿದೇವ- ನಿಲ್ಲಿಸು! ಸ್ವಲ್ಪ ದಿನ ಮೌನವಾಗಿರು! ನೀನೊಂದು ಭ್ರಮೆಯಲ್ಲಿದ್ದೀಯ! ಅದೇ ಭ್ರಮೆಯನ್ನು ವಾಸ್ತವವೆಂದು ಬಿಂಬಿಸುತ್ತಿದ್ದೀಯ! ನಿರಂತರವಾಗಿ ಅದರಬಗ್ಗೆಯೇ ಯೋಚಿಸಿದರೆ.... ಹೀಗೆಯೇ! ಯಾರೂ ನಿನ್ನನ್ನು ಒಪ್ಪದೇ ಇದ್ದಾಗ- ಅರ್ಥಮಾಡಿಕೋ! ನಿನ್ನ ಪ್ರತಿಯೊಂದು ತತ್ತ್ವವೂ ಎಲ್ಲರೂ ಒಪ್ಪಬೇಕೆಂದಿಲ್ಲ- ಸಮಾನ ಶ್ರೇಷ್ಟತೆಯನ್ನು ಬಿಂಬಿಸಬೇಕೆಂದಿಲ್ಲ! ಒಂದೋ ಪೂರ್ತಿಯಾಗಿ ಭ್ರಮೆಯಲ್ಲಿ ಮುಳುಗು! ಅಥವಾ ಪೂರ್ತಿ ವಾಸ್ತವಕ್ಕೆ ಬಾ! ನಿನ್ನ ಭ್ರಮೆಯನ್ನು ವಾಸ್ತವ ಪ್ರಪಂಚಕ್ಕೆ ಹೇರಬೇಡ!” ಎಂದರು ಅಮ್ಮ.
ಹೆತ್ತಮ್ಮನಲ್ಲ!
ಹಾಗೆಂದು ಮಾತೃತ್ವಕ್ಕೆ ವ್ಯತ್ಯಾಸವೇ?
ಅದು ಅಸಾಧ್ಯ.
ನನಗೆ ಈ ರೀತಿಯ ಸಲಹೆಯನ್ನು ಕೊಡಬೇಕೆಂದರೆ ಅವರಿಗೆ ನನ್ನಮೇಲೆ ಅಧಿಕಾರವಿರಬೇಕು!
ಆ ಅಧಿಕಾರದ ಹೆಸರು...,
ವಾತ್ಸಲ್ಯ!
ಪ್ರೇಮವಿಲ್ಲದೆ- ವಾತ್ಸಲ್ಯವೇ?
ಅವರ ವಾತ್ಸಲ್ಯಕ್ಕೆ ನಾನು ಭಾಜನನಾಗಿದ್ದೇನೆಂದರೆ... ಅದಕ್ಕಿಂತಲೂ ಧನ್ಯತೆಯಿದೆಯೇ?
ವಾತ್ಸಲ್ಯದ ಅಧಿಕಾರದಿಂದ ಅವರು ಹೇಳಿದ ಮಾತನ್ನು ನಾನು ಧಿಕ್ಕರಿಸಲಾರೆ!
ಭ್ರಮೆಯಲ್ಲಿ ಮುಳುಗಲೋ...? ವಾಸ್ತವಕ್ಕೆ ಬರಲೋ....?
ತೀರ್ಮಾನಿಸಬೇಕೆಂದರೆ....,
ಕೊನೆಯದಾಗಿ ಮತ್ತೊಮ್ಮೆ ಆ ಭ್ರಮೆಯನ್ನು ವಿಶ್ಲೇಷಿಸಬೇಕು!
ಆ ಭ್ರಮೆಯೇ...,
ಪ್ರೇಮ!
2
ಅನಾದಿಕಾಲದಿಂದಲೂ ಎಷ್ಟೆಷ್ಟು ವಿವರಣೆಗಳು, ವಿಶ್ಲೇಷಣೆಗಳು, ವ್ಯಾಖ್ಯಾನಗಳು....!
ಇಂದಿಗೂ ಮುಗಿಯದಷ್ಟು, ಅರ್ಥವಾಗದಷ್ಟು ಘನ- ಪ್ರೇಮ!
ಪ್ರೇಮ- ಅದ್ಭುತ ಮಹಾಕಾವ್ಯ!
ಪ್ರೇಮ- ಆನಂದ ಸಾಗರ!
ಪ್ರೇಮ- ದುಮ್ಮಿಕ್ಕುವ ಜಲಪಾತ!
ಪ್ರೇಮ- ಬ್ರಹ್ಮಾಂಡವನ್ನು ಹಿಡಿದಿಟ್ಟಿರುವ ಅಯಸ್ಕಾಂತ- ಕೇಂದ್ರಬಿಂದು!
ಪ್ರೇಮ- ಅನುಭಾವಿಸಿದರೆ ನಮ್ಮರಿವಿಲ್ಲದಂತೆ ಕಣ್ಣೀರು ಸುರಿಸುವ ಭಾವಾತಿರೇಕ!
ಇಷ್ಟೆಲ್ಲಾ ಮಹತ್ವನ್ನು ಹೊಂದಿದ್ದರೂ- ವಿವರಣಾತೀತವಾದರೂ....,
ಈ ಪ್ರೇಮ....,
ನನ್ನ ಬದುಕಿಗಂಟಿದ ಅತಿದೊಡ್ಡ- ಕಳಂಕ!
3
“ಅವಳು ಯಾರು?” ಎಂದಳು.
“ನಿನ್ನಂತೆಯೇ ಒಬ್ಬಳು ಹೆಣ್ಣು!” ಎಂದೆ.
“ಅವಳೊಂದಿಗೆ ಏನು ಕೆಲಸ?” ಎಂದಳು.
ಮೌನ!
“ಹೇಳು! ಅವಳೊಂದಿಗೆ ಏನು ಕೆಲಸ?”
“ಏನೂ ಇಲ್ಲ!”
“ಏನೂ ಇಲ್ಲದೆ ಇಷ್ಟು ಮಾತೆ?”
“ಮಾತನಾಡಲು ಏನಿರಬೇಕು?” ಎಂದೆ.
“ನಾನಿರುವಾಗ ಅವಳೊಂದಿಗೆ ಏನು ಮಾತು?”
ಮೌನ!
“ಹೇಳು! ಏನು ಮಾತನಾಡಿದೆ?”
“ನೀನು ನನಗೆ ತುಂಬಾ ಇಷ್ಟವಾಗುತ್ತೀಯ ಎಂದೆ!” ಎಂದೆ.
“ಮತ್ತೆ ನಾನು?”
“ಮುಂಚೆಯೇ ಹೇಳಿದ್ದೆನಲ್ಲಾ....?”
“ಈಗ ಹೇಳು! ನಾನೇನು ನಿನಗೆ?”
“ಪ್ರೇಮಿ!”
“ಮತ್ತೆ ಅವಳು?”
“ಅವಳೂ!”
ಕೆನ್ನೆಯ ಮೇಲೆ ರಪ್ಪನೆ ಏಟು ಬಿತ್ತು!
“ಹೋಗು! ಅವಳನ್ನೇ ಇಟ್ಟುಕೋ ಹೋಗು!” ಎಂದು ಹೇಳಿ ಹೊರಟು ಹೋದಳು- ನನ್ನ ಜೀವನದಿಂದಲೇ!
4
“ನನಗೆ ಯಾವ ಸಮಯದಲ್ಲಿ ಯಾರಮೇಲೆ ಪ್ರೇಮವುಂಟಾಗುತ್ತದೋ ನನಗೇ ತಿಳಿಯುವುದಿಲ್ಲ!” ಎಂದೊಂದು ಪೋಸ್ಟ್ ಹಾಕಿದ್ದೆ!
“ನೀನು ನಿಜವಾದ ಪ್ರೇಮಕ್ಕೊಂದು ಕಪ್ಪು ಚುಕ್ಕೆ- ಕಳಂಕ!” ಎಂದು ಕಮೆಂಟ್ ಮಾಡಿದರು.
ಅವರು ಯಾರೋ ನನಗೆ ತಿಳಿಯದು!
ಅಮ್ಮ ಸಲಹೆ ಕೊಡಲು ಈ ಪೋಸ್ಟ್ ಮತ್ತು ಕಮೆಂಟ್ ಮಾಡಿದ ವ್ಯಕ್ತಿಯೊಂದಿಗಿನ ಸಂಭಾಷಣೆಯೂ ಒಂದು ಕಾರಣ!
ಒಂದು ಸಣ್ಣ ಸಂಶಯ ಮನವನ್ನು ಪ್ರವೇಶಿಸಿ, ಗೊಂದಲವಾಗಿ ನಂತರ ಚಿಂತೆಯಾಗಿ ಮಾರ್ಪಟ್ಟಾಗ ಉತ್ತರವನ್ನು ಹುಡುಕುವುದು ಶುರುವಾಗುತ್ತದೆ!
ಯಾಕೆ? ಯಾಕೆ? ಯಾಕೆ....?
ಇತ್ತೀಚಿನ ದಿನಗಳಲ್ಲಿ ಅಪರಿಚಿತರೂ ಪರಿಚಿತರಾಗುವ ತಾಣ- ಫೇಸ್‌ಬುಕ್!
ಬರೆದ ಬರಹಕ್ಕೆ ಪ್ರತಿಕ್ರಿಯೆಯಾಗಿ ಚರ್ಚೆ ನಡೆದು- ಅದು ಪರವೋ ವಿರೋಧವೋ- ಪರಿಚಯ ಪ್ರಾರಂಭವಾಗುತ್ತದೆ! ಈ ಪರಿಚಯ ಪರಸ್ಪರ ಕುತೂಹಲ ಮೂಡಿಸುತ್ತದೆ!
ಹಾಗೆ...., ಕಮೆಂಟ್ ಮಾಡಿದವರ ಮೇಲೆ ನನಗೆ ಕುತೂಹಲ ಮೂಡಿತ್ತು!
ನನ್ನ ಮತ್ತು ಅವರ ತತ್ತ್ವಗಳು ಬೇರೆಬೇರೆ! ಅವರ ಯಾವ ಮಾತನ್ನೂ ನಾನು ಒಪ್ಪುವವನಲ್ಲ! ಅಥವಾ- ಅವರ ಯಾವ ಮಾತೂ ನಾನು ಒಪ್ಪುವಂತೆ ಇರಲಿಲ್ಲ! ಆದರೂ ಅರವ ತತ್ತ್ವದಲ್ಲಿ ಕುತೂಹಲ ಮೂಡಿತ್ತು! ಆಸಕ್ತಿ ಮೂಡಿತ್ತು!
ಅರಿತುಕೊಳ್ಳಬೇಕೆನ್ನುವ ತವಕ! ಅವರೂ ಬರಹಗಾರರೆಂಬುದು ಚರ್ಚೆಯಲ್ಲಿ ಗೊತ್ತಾಗಿತ್ತು!
ಏನು ಬರೆದಿರುವರೋ ನೋಡೋಣವೆಂದರೆ- ಪ್ರೊಫೈಲ್ ಲಾಕ್!
ಫ್ರೆಂಡ್‌ರಿಕ್ವೆಸ್ಟ್ ಕಳಿಸಿದೆ!
ರಿಕ್ವೆಸ್ಟ್ ಕಳಿಸಿ ಒಂದುದಿನ ಕಾಯುವುದು ನನ್ನ ಹವ್ಯಾಸ! ಕಾದೆ! ಅವರು ಆಕ್ಸೆಪ್ಟ್ ಮಾಡಲಿಲ್ಲ! ಆದರೆ ಮ್ಯೂಚುವಲ್ ಫ್ರೆಂಡ್ಸ್ ಸಂಖ್ಯೆ ಅಧಿಕವಾಗಿತ್ತು!!
ಅಂದರೆ ನನ್ನ ರಿಕ್ವೆಸ್ಟ್ ನೋಡಿಯೂ ಆಕ್ಷೆಪ್ಟ್ ಮಾಡಿಲ್ಲ!
ರಿಕ್ವೆಸ್ಟ್ ಕ್ಯಾನ್ಸಲ್ ಮಾಡಿದೆ!
ಹಾಗೆ ಒಂದು ಸಣ್ಣ ಸಂಶಯ ಮನವನ್ನು ಹೊಕ್ಕಿತು!
ಯಾಕೆ? ಅವರೇಕೆ ನನ್ನ ಆಕ್ಸೆಪ್ಟ್ ಮಾಡಲಿಲ್ಲ? ಮ್ಯೂಚುವಲ್ ಗೆಳೆಯರಲ್ಲಿ ಹೆಚ್ಚುಜನ ಹೆಣ್ಣೇ ಇದ್ದಾರಲ್ಲಾ...?
ಒಬ್ಬ ಹುಡುಗನ ರಿಕ್ವೆಸ್ಟ್ ಇನ್ನೊಬ್ಬ ಹುಡುಗ ಆಕ್ಸೆಪ್ಟ್ ಮಾಡದಿರಲು ಕಾರಣವೇನು?
ಅದರಲ್ಲೂ ಇಬ್ಬರಮಧ್ಯೆಯೂ ಮಾತುಕತೆ ನಡೆದು- ಪರಿಚಿತರು ಅನ್ನಿಸಿಕೊಂಡಿದ್ದೂ ಕೂಡ....?
ಅವರ ಸ್ಟಾಂಡೇರ್ಡ್‌ಗೆ ನಾನು ತಕ್ಕವನಲ್ಲವೇನೋ? ಅಥವಾ....,
ಅವರ ಅಭಿಪ್ರಾಯಕ್ಕೆ ವಿರುದ್ಧ ಅಭಿಪ್ರಾಯವೆಲ್ಲಾ ತಪ್ಪೆಂದೋ? ಅಥವಾ....,
ಅವರ ತತ್ತ್ವ ಅರಿವಿಗೆ ಎಟುಕದವರು ಕೆಟ್ಟವರೆಂದೋ....? ಅಥವಾ...,
ಅವರ ತತ್ತ್ವವನ್ನು ಒಪ್ಪಿಕೊಂಡವರನ್ನು ಮಾತ್ರ ಆಕ್ಸೆಪ್ಟ್ ಮಾಡುತ್ತಾರೆಂದೋ...? ಅಥವಾ...,
ಅವರು ಭಾರಿ ಒಳ್ಳೆಯವರೇನೋ....!?
ಏನೋಪ್ಪ!
ಮುಂದೆಯೂ ಹಲವರ ಪೋಸ್ಟ್‌ಗೆ ಕಮೆಂಟ್‌ಗಳು- ಲೈಕುಗಳ ರೂಪದಲ್ಲಿ... ಅವರ ಭೇಟಿಯಾಗುತ್ತಿತ್ತು!
ಇಬ್ಬರಿಗೂ ಕಾಮನ್ ಗೆಳೆಯರಾದ- ಹೆಣ್ಣು ಬರೆದ ಪೋಸ್ಟ್‌ಗಳಲ್ಲಿ- ಬರೆದ ಹೆಣ್ಣು ಮತ್ತು ಅವರು ಪರಸ್ಪರ....,
ಅಕ್ಕ- ತಮ್ಮ, ಅಣ್ಣ- ತಂಗಿ...!
ನನ್ನ ದೃಷ್ಟಿಕೋನವೇ ಕೆಟ್ಟದ್ದಾಗಿದ್ದು- ಅವರನ್ನು ಕೆಟ್ಟವರನ್ನಾಗಿ ಮಾಡುವುದು ಬೇಡ!
ಅವರದ್ದು ಪವಿತ್ರವಾದ ಸಾಹೋದರ್ಯ ಬಂಧವೇ ಇರಬಹದು!
ಆದರೂ ಇಲ್ಲಿ ನಾನು ಸ್ಟ್ರೈಕ್ ಆಗುತ್ತೇನೆ!
ಯಾಕೆ? ಆ ಸಾಹೋದರ್ಯದ ಗೆರೆಯಿಲ್ಲದೆ ಮನಸ್ಸನ್ನು ನಿಯಂತ್ರಿಸಲಾಗದೆ...?
ಒಬ್ಬಳು ಹೆಣ್ಣು ನನ್ನಮೇಲಿನ ಅಪನಂಬಿಕೆಯಿಂದಲೋ ಅಥವಾ ಅವಳ ಸಂರಕ್ಷಣಾರ್ಥವಾಗಿಯೋ ನನ್ನನ್ನು ಅಣ್ಣ ಅಥವಾ ತಮ್ಮ ಎಂದು ಕರೆದರೆ ಅದನ್ನು ಒಪ್ಪಿ ಸುಮ್ಮನೆ ಇದ್ದುಬಿಡುತ್ತೇನೆ ಹೊರತು- ನಾನಾಗಿ ಯಾವೊಂದು ಹೆಣ್ಣನ್ನೂ ಅಕ್ಕ- ತಂಗಿ ಅಂದವನಲ್ಲ!
ವಿಚಿತ್ರವೆಂದರೆ ನನ್ನನ್ನು ಹಾಗೆ ಕರೆಯುವವರು ಕೂಡ ಯಾರೂ ಇಲ್ಲ!
ಪ್ರತಿಯೊಬ್ಬರೂ ನನ್ನ ಆತ್ಮೀಯರು!
ಅದೊಂದು ಆತ್ಮಬಂಧ!
ಈ ಪ್ರೇಮ ಅನಿರ್ವಚನೀಯ- ಅನಿರ್ಬಂಧಿತ- ಅವ್ಯಾಹತ ಅನ್ನುವುದು ನನ್ನ ನಂಬಿಕೆ!
ಅಂದರೆ ನನ್ನ ಪ್ರೇಮ ಯಾರೊಬ್ಬರನ್ನು ಕೇಂದ್ರೀಕರಿಸಿ- ಅಲ್ಲ!
ಎಲ್ಲಿ ಪ್ರೇಮದ ಅನುಭವವಾಗುತ್ತದೋ ನಾನು ಸ್ಪಂದಿಸುತ್ತೇನೆ- ಅದು ಒಬ್ಬರಲ್ಲಾದರೂ ಇಬ್ಬರಲ್ಲಾದರೂ ಸಂಖ್ಯೆಯಿಲ್ಲದಷ್ಟಾದರೂ....!
ಅಥವಾ....,
ಯಾರಲ್ಲೂ ನಮಗೆ ಪ್ರೇಮ ಮೂಡಲೇಬೇಕೆಂದಿಲ್ಲ ಅನ್ನುವುದೂ ವಾಸ್ತವವೇ...!
ಆದರೆ...,
ಒಬ್ಬರ ಪ್ರೇಮ ನಮ್ಮನ್ನು ತಾಕಿ- ಅದಕ್ಕೆ ನಾವು ಪ್ರತಿಸ್ಪಂದಿಸುವುದು ತಪ್ಪೇ- ಅನ್ನುವುದು ಪ್ರಶ್ನೆ!
ಒಬ್ಬಳು ಅದಮ್ಯವಾಗಿ ನಿನ್ನನ್ನು ಪ್ರೇಮಿಸುವಾಗ- ನೀನೂ ಅವಳನ್ನು ಪ್ರೇಮಿಸುತ್ತಿದ್ದು- ಇನ್ನೊಬ್ಬಳಮೇಲೆ ನಿನಗೆ ಪ್ರೇಮವುಂಟಾದರೆ ಅದು ತಪ್ಪು- ಕೆಟ್ಟದ್ದು- ಅನ್ನುವುದು ಅವರ ವಾದ!
ಅವರಿಗೆ ಅದು ತಪ್ಪಿರಬಹುದು! ಒಪ್ಪಿದೆ! ಆದರೆ ನನಗೆ ತಪ್ಪಲ್ಲವಲ್ಲಾ...?
ಅದಮ್ಯವಾಗಿ ನಿನ್ನನ್ನು ಪ್ರೇಮಿಸುವವಳೂ ನಿನ್ನಂತೆ ಇನ್ನೊಬ್ಬರನ್ನು ಪ್ರೇಮಿಸಿದರೆ ಒಪ್ಪುವೆಯಾ ಅನ್ನುವುದು ಅವರ ಪ್ರಶ್ನೆ!
ಅದು ಅವಳ ವೈಯಕ್ತಿಕ!
ನನ್ನನ್ನು ಪ್ರೇಮಿಸುತ್ತಿದ್ದಾಳ- ನನ್ನ ಭಾವಕ್ಕೆ ಸ್ಪಂದನೆ ಅವಳಲ್ಲಿ ಇದೆಯಾ- ಅನ್ನುವುದಷ್ಟೇ ನನಗೆ ಬೇಕಿರುವುದು!
ಹಾಗೆ ನಾನು ಕೆಟ್ಟವನಾದೆ!!
ಚಿಂತೆಗಿಟ್ಟುಕೊಂಡಿತು!
ಪ್ರೇಮಿಸುವುದು ತಪ್ಪೇ...?!
ನಿಜಕ್ಕೂ ಒಬ್ಬರಲ್ಲಿ ಪ್ರೇಮ ಮೂಡುವುದು ತಪ್ಪೇ...?!
ಒಬ್ಬರ ಸ್ಪಂದನೆಗೆ ನಾವು ಪ್ರತಿಸ್ಪಂದಿಸುವುದು ತಪ್ಪೇ...?!
ಪ್ರೇಮರಾಹಿತ್ಯವಿದ್ದಲ್ಲಿ ನಾವು ಪ್ರೇಮ ಪ್ರಕಟಪಡಿಸುವುದು ತಪ್ಪೇ...?!
ಒಬ್ಬರ ಅಭಿಪ್ರಾಯ ನಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದರೆ ಅವರು ಕೆಟ್ಟವರು ಅನ್ನುವುದು ತಪ್ಪಲ್ಲವೇ?!
ಏನಕ್ಕಾ? ಏನ್‌ತಮ್ಮಾ ಅನ್ನುವುದು ಸರಿ!
ಏನೇ? ಏನೋ ಅನ್ನುವುದು ತಪ್ಪು! ತಪ್ಪು ಮಾತ್ರವಲ್ಲ ಕೆಟ್ಟದ್ದು!
ನಮ್ಮ ಸುತ್ತ ನಾವೊಂದು ವೃತ್ತ ರಚಿಸಿ ನಾವೇ ಸರಿ ಅನ್ನುವುದು ನನ್ನ ಪ್ರಕಾರ- ತಪ್ಪು! ಆ ವೃತ್ತದಲ್ಲಿ ನಾವು ಸರಿಯಿರಬಹುದು ವೃತ್ತಕ್ಕೆ ಹೊರಗೂ ಪ್ರಪಂಚವಿದೆ!
ಪ್ರಕೃತಿ ಒಂದು ನಿಯಮಕ್ಕೆ ಬದ್ಧವಾಗಿದೆ.
ನಮ್ಮ ವರ್ತನೆಗೂ ನಮ್ಮ ಮನದಲ್ಲಿ ಮೂಡುವ ಭಾವಕ್ಕೂ ವ್ಯತ್ಯಾಸವಿದೆ.
ಭಾವ ಬೇರೆ ವರ್ತನೆ ಬೇರೆ!
5
ಸಂಧಿಘಟ್ಟ!
ಇರಬಹುದು ಪ್ರತಿಯೊಬ್ಬರ ಬಾಳಿನಲ್ಲಿ ಹೀಗೊಂದು ಘಟ್ಟ!
ಯಾರಿಗೂ ನನ್ನ ಮನಸ್ಸು ಅರ್ಥವಾಗುವುದಿಲ್ಲ ಅನ್ನುವ ಕೀಳರಿಮೆಯಿಂದಾಗಿ ಡೈರಿ ಬರೆಯುತ್ತಿದ್ದವನು ನಾನು- ನಿಲ್ಲಿಸಿದ್ದೆ!
ಅದು ನನ್ನದೇ ಆದ ಭ್ರಮಾಲೋಕವೊಂದನ್ನು ಸೃಷ್ಟಿಸುವಂತೆ ಮಾಡಿತ್ತು!
ಈಗ- ಯಾಕೆ ನನ್ನ ಮನಸ್ಸು ಯಾರಿಗೂ ಅರ್ಥವಾಗುವುದಿಲ್ಲ ಅನ್ನುವ ಸ್ಪಷ್ಟ ಅರಿವು ಮೂಡಿದೆ!
ಈ ಅರಿವು ಮೂಡುವುದಕ್ಕಾಗಿಯೇ ನಾನು ವಾಸ್ತವ ಪ್ರಪಂಚಕ್ಕೆ ಬಂದೆನೇನೋ...!
ಪುನಹ ಡೈರಿ ಬರೆಯಬೇಕು ಅಂದುಕೊಂಡಿದ್ದೇನೆ!
6
ಈ ಪ್ರಪಂಚದಲ್ಲಿ ಸಾಧನೆಯನ್ನು ಅಳೆಯುವುದು ದುಡ್ಡಿನ ಮಾನದಂಡದಿಂದಲೇ ಹೊರತು ನಾವೇನು- ನಮ್ಮ ವ್ಯಕ್ತಿತ್ವವೇನು- ಅನ್ನುವುದರಿಂದಲ್ಲ! ಇದು ನಿಜ! ಅಲ್ಲಾ ಅನ್ನುತ್ತಿದ್ದೆ- ಈಗ ಅನ್ನಲಾರೆ! ಯಾಕೆಂದು ವಾದಿಸಲೂ ನಾನು ತಯಾರಿಲ್ಲ! ಬೇಕಾದರೆ- ಇದು ನನ್ನ ವಿಷಯದಲ್ಲಿ ನಿಜ- ಎಂದು ತಿದ್ದಿಕೊಳ್ಳುತ್ತೇನೆ!
ಹಾಗಿದ್ದರೆ- ಪ್ರಪಂಚದ ದೃಷ್ಟಿಯಲ್ಲಲ್ಲದೆ- ನಾನು ಮಾಡಿದ ಸಾಧನೆಯೇನು?
ನನ್ನ ಮನಸ್ಸು ನನ್ನ ನಿಯಂತ್ರಣದಲ್ಲಿದೆ!
ಪ್ರತಿ ಕ್ಷಣವನ್ನು ನಾನು ಆನಂದದಿಂದ ಕಳೆಯಬಲ್ಲೆ!
ನನಗೆ ಕೋಪ ಬರುವುದಿಲ್ಲ- ಬೇಸರವೋ ದುಃಖವೋ ಉಂಟಾಗುವುದಿಲ್ಲ!
ಪ್ರತಿಯೊಂದರಲ್ಲೂ- ಪ್ರತಿಯೊಬ್ಬರಲ್ಲೂ ಕೇವಲ ಸಂತೋಷವನ್ನು ಮಾತ್ರ ಕಾಣುತ್ತೇನೆ!
ಅತಿ ಮುಖ್ಯವಾಗಿ..... ಪ್ರಪಂಚವನ್ನು ನಾನು ಯಾವುದೇ ಕಳಂಕವಿಲ್ಲದೆ- ತೆರೆದ ಮನದಿಂದ ಪ್ರೇಮಿಸಬಲ್ಲೆ!
ನಿಯಮವಿಲ್ಲದ ಪ್ರೇಮ! ಹೆತ್ತ ಅಮ್ಮನಿಂದಿ ಹಿಡಿದು ನನಗೆ ಹುಟ್ಟಿದ ಮಗಳ ವರೆಗೆ ಪ್ರಕಟವಾಗುವ ಪ್ರೇಮ!
ಎಷ್ಟು ವಿಧದ ಪ್ರೇಮ ಪ್ರಪಂಚದಲ್ಲಿ!
ಪ್ರಕೃತಿಪ್ರೇಮ.
ಮಾತೃಪ್ರೇಮ.
ಪಿತೃಪ್ರೇಮ.
ಭ್ರಾತೃಪ್ರೇಮ.
ಪುತ್ರಪ್ರೇಮ.
ಮಿತ್ರಪ್ರೇಮ.
ಹೇಳಿದ್ದೇನೆ- ಈ ಪ್ರೇಮ ನನ್ನ ಜೀವನಕ್ಕೆ ಅಂಟಿಕೊಂಡಿರುವ ಅತಿದೊಡ್ಡ ಕಳಂಕವೂ ಹೌದು!
ಯಾವಾಗ?
ಹೆಣ್ಣಿನಲ್ಲಿ ಪ್ರಕಟವಾದಾಗ!
7
ನಾನೊಬ್ಬ ಪ್ರೇಮಿ! ಅಪ್ಪ ಅಮ್ಮನ ಅದ್ಭುತ ಪ್ರೇಮದ ನೆರಳಿನಲ್ಲಿ ಬೆಳೆದು ಬಂದವನು.
ಪ್ರೇಮ ನನ್ನ ತಪನೆ!
ಪ್ರೇಮ ನನ್ನ ತಪಸ್ಸು!
ಎಲ್ಲಿ ಒಂದಿಂಚಿನ ಪ್ರೇಮ ಪ್ರಕಟವಾಗುವುದೋ ಅಲ್ಲಿಗೆ ನಾನು ವಾಲುತ್ತೇನೆ!
ಪ್ರೇಮ ಒಂದು ರೀತಿಯಲ್ಲಿ ನನ್ನ ದೌರ್ಬಲ್ಯ!
ಒಂದುಕಡೆ ಆಕಾಶದಷ್ಟು ಸಮಸ್ಯೆಗಳು ಮತ್ತೊಂದು ಕಡೆ ಇರುವೆಯಷ್ಟು ಪ್ರೇಮ- ನನಗೆ ಆಕಾಶ ಕಾಣುವುದಿಲ್ಲ!
ಇಲ್ಲೇ ಒಂದು ಸಣ್ಣ ಸಮಸ್ಯೆ- ತಕರಾರು!
ನಿಜಕ್ಕೂ ಗಂಡು ಹೆಣ್ಣು ಬೇಧವಿಲ್ಲದ ಪ್ರೇಮ ನನ್ನದು!
ನನ್ನ ಸ್ನೇಹಿತರು ನನಗೆ ಆತ್ಮೀಯ ಸ್ನೇಹಿತರಲ್ಲ- ಆತ್ಮ ಸ್ನೇಹಿತರು!
ಮತ್ತೇನು ತಕರಾರು?
ಇಲ್ಲಿಯೇ ನನಗೆ ಪ್ರಕೃತಿ ನಿಯಮದ ವೈಚಿತ್ರ್ಯದ ಅನುಭವ!
ಪುನಃ ಅಲ್ಲಿಗೇ ಬರುತ್ತದೆ!
ಗಂಡು- ಹೆಣ್ಣು!
ಯೋಚಿಸಿ ನೋಡಿ...,
ಗಂಡು ಗಂಡು..., ಅಯಸ್ಕಾಂತದ ಉತ್ತರ ಉತ್ತರ ದ್ರುವಗಳು...!
ಗಂಡು ಹೆಣ್ಣು.... ಅಯಸ್ಕಾಂತದ ಉತ್ತರ ದಕ್ಷಿಣ ದ್ರುವಗಳು- ಅದೇ ಸೆಳೆಯುವುದು- ಸೇರುವುದು!
ಇಲ್ಲೇ ಸಮಸ್ಯೆ!
ಗಂಡು ಹೆಣ್ಣು ಅಂದ ತಕ್ಷಣ.... ಪ್ರಪಂಚದ ದೃಷ್ಟಿಯಲ್ಲಿ ಪ್ರೇಮದ ಅರ್ಥ ಬದಲಾಗುತ್ತದೆ- ಕಾಮದೊಂದಿಗೆ ಗಂಟು ಹಾಕುತ್ತದೆ- ಅದೇ ವಿಜೃಂಭಿಸುತ್ತದೆ- ಕಾಮವೇ ನಡೆಯದಿದ್ದರೂ...!!
ನನ್ನ ಜೀವನದ ಅತಿದೊಡ್ಡ ಕಳಂಕ!
ಪ್ರತಿ ಹೆಣ್ಣಿನಲ್ಲಿ ನನಗೆ ಪ್ರೇಮ ಅಂದ ತಕ್ಷಣ.... ಮನೋಭಾವ ರೂಪುಗೊಳ್ಳುವುದೇ- “ಓಹೋ!” ಎಂದು.
ಈ 'ಪ್ರತಿ' ಅಂದರೆ ಎಷ್ಟು?
ಆತ್ಮ ಸ್ನೇಹಿತರಿರುವಷ್ಟು ಸಂಖ್ಯೆಯಲ್ಲಿ ನನಗೆ ಆತ್ಮ ಸ್ನೇಹಿತೆಯರಿಲ್ಲ!!
ಹೆಣ್ಣಿನೊಂದಿಗಿನ ಪ್ರೇಮವಾದರೂ ಹೇಗೆ ಪ್ರವರ್ತಿಸುತ್ತದೆ.....?
ನನ್ನ ಸ್ಪಂದನೆಗೆ ದಕ್ಕುವ ಅವರ ಪ್ರತಿಸ್ಪಂದನೆಯಿಂದ...!
ಪ್ರಕೃತಿಗೆ ಸ್ಪಂದಿಸುವ ಪುರಷನಂತೆ!
ಹೆಣ್ಣಿನ ಪ್ರೇಮ ಒಂದು ಅದ್ಭುತ! ಅದೇ ನನ್ನ ಶ್ರೀರಕ್ಷೆ!
ಆತ್ಮ ಸ್ನೇಹಿತ- ಆತ್ಮ ಸ್ನೇಹಿತೆ ಅನ್ನುವುದರ ಹೊರತಾಗಿಯೂ ಪ್ರತಿಯೊಬ್ಬರಲ್ಲೂ ನನಗೆ ಪ್ರೇಮವಿದೆ...! ಆದರೆ ಆ ಪ್ರೇಮದ ಗಾಢತೆ- ಅವರ ಸ್ಪಂದನೆಯನ್ನು ಅವಲಂಬಿಸಿದೆ!
ಹೇಗೆ ಗೆಳೆಯರೊಂದಿಗಿನ ನನ್ನ ಒಡನಾಟ ಯಾವುದೇ ಲಂಗುಲಗಾಮಿಲ್ಲದೆ ನಡೆಯುತ್ತದೋ ಹಾಗೆಯೇ ಗೆಳತಿಯರೊಂದಿಗೂ ನನಗೆ ಯಾವ ಹಿಂಜರಿಕೆಯೂ- ಮುಜುಗರವೂ ಇಲ್ಲ!
ಕಾರಣ- ಅದು ಮನಸಾ ವಾಚಾ ಕರ್ಮಣಾ ಶುದ್ಧವಾದದ್ದು!!
ಅದೇ- ನನ್ನ ನೆರಳು ಬಿದ್ದರೂ ಸಾಕು ಆ ಹೆಣ್ಣನ್ನು ಸಂಶಯದ ದೃಷ್ಟಿಯಿಂದ ನೋಡುವಷ್ಟು ಕಳಂಕವನ್ನು ನನಗೆ ನೀಡಿದೆ!
ಪ್ರತಿ ಹೆಣ್ಣನ್ನು ಅನುಭಾವಿಸಿದ ನನಗೆ ಗೊತ್ತು ಪ್ರೇಮದ ಮಹತ್ವ- ಹಾಗೆಯೇ ನನ್ನನ್ನು ಅನುಭಾವಿಸಿದ ಪ್ರತಿ ಹೆಣ್ಣಿಗೆ...!
ಕಳಂಕವಿಲ್ಲದ ಪ್ರೇಮ ನನ್ನದು ಅನ್ನುವ ಆತ್ಮತೃಪ್ತಿ ನನಗಿದೆ!
ಹಾಗಿದ್ದರೆ ಈ ಸಂಧಿಘಟ್ಟವೇನು?
8
ಜೀವನದಲ್ಲಿ ಸಾವಿರಾರು ಜನರನ್ನು ಸಂಧಿಸುತ್ತೇವೆ! ಅದರಲ್ಲಿ ಗಂಡು ಹೆಣ್ಣು- ಎಲ್ಲರೂ ಇರುತ್ತಾರೆ! ತೀರಾ ಕೆಲವರಲ್ಲಿ ನಮಗೆ ಅಕಾರಣವಾದ- ಅರಿಯದ ಭಾವ ಪ್ರಕಟವಾಗುತ್ತದೆ!
ನನ್ನ ಪ್ರಕಾರ ಆ ಭಾವ ಪ್ರೇಮ!
ಹೆಣ್ಣೊಬ್ಬಳು ನನ್ನಲ್ಲಿ ಪ್ರೇಮವನ್ನು ಪ್ರಕಟಿಸುತ್ತಾಳೆ- ನನ್ನ ಹೃದಯ ಪ್ರತಿಸ್ಪಂದಿಸುತ್ತದೆ!
ಅಥವಾ...,
ಹೆಣ್ಣೊಬ್ಬಳಲ್ಲಿ ನನಗೆ ಪ್ರೇಮವುಂಟಾಗುತ್ತದೆ- ಅವಳು ಸ್ಪಂದಿಸುತ್ತಾಳೆ!
ಇನ್ನೊಬ್ಬಳು ಹೆಣ್ಣು ನನ್ನಲ್ಲಿ ಕೇಳುತ್ತಾಳೆ...,
“ಅವಳಿಗೂ ನನಗೂ ವ್ಯತ್ಯಾಸವೇನು?” ಎಂದು.
ಗೊಂದಲಗೊಳ್ಳುತ್ತೇನೆ!
ಅವರಿಬ್ಬರಿಗೂ ನನ್ನಲ್ಲಿ ಪ್ರೇಮವೇ...!
ಹಾಗಿದ್ದರೆ ಅವರಲ್ಲಿ ನನ್ನದು?
ಅವರ ಪ್ರೇಮ ಸುಳ್ಳಾದರೆ ನನ್ನ ಪ್ರೇಮವೂ ಸುಳ್ಳು!
“ನಿನಗೆ ಪ್ರತಿ ಹೆಣ್ಣೂ ಒಂದೇ...!” ಅನ್ನುವಲ್ಲಿ...,
ಕೆಲವರನ್ನು ನಾನು ಕಳೆದುಕೊಳ್ಳುತ್ತೇನೆ!
9
ಜೀವನದಲ್ಲಿ ಇದುವರೆಗೆ ನಾನು ಯಾರನ್ನೂ ಕಡೆಗಣಿಸಿದವನಲ್ಲ! ಗುರಿ ನಿಶ್ಚಯಿಸಿ ಅದರೆಡೆಗೆ ನಡೆಯುವಾಗಲೂ ಪ್ರತಿಯೊಬ್ಬರ ಭಾವನೆಗಳಿಗೆ ಬೆಲೆಕೊಟ್ಟು- ಸ್ಪಂದಿಸುತ್ತಿದ್ದವ!
ನನ್ನ ಗುರಿ ನನ್ನೊಬ್ಬನ ಗುರಿ! ಅದರ ಹೊರೆಯನ್ನು ಯಾರೊಬ್ಬರಿಗೂ ಕೊಟ್ಟವನಲ್ಲ! ಯಾರೊಬ್ಬರನ್ನೂ ದೂಷಿಸಿದವನಲ್ಲ!
ಪ್ರೇಮ ನನ್ನ ದೌರ್ಬಲ್ಯ- ನಿಜ!
ಗುರಿ ಸೇರಲು ತಡವಾಗುತ್ತಿರುವುದಕ್ಕೆ ಈ ಪ್ರೇಮಾಕರ್ಷಣೆಯೂ ಒಂದು ಕಾರಣ! ಅದರೆಡೆಗಿನ ನನ್ನ ಸೆಳೆತ! ಅಪ್ಪ ಅಮ್ಮ ಗೆಳೆಯ ಗೆಳತಿ ಬಂಧು- ಬಳಗ..., ಅಷ್ಟು ಆಕರ್ಷಣೆ ನನಗೆ!
ಇಷ್ಟು ವರ್ಷ ಪ್ರೇಮಕ್ಕಾಗಿ ಪರಿತಪಿಸಿದೆ- ಪ್ರತಿಸ್ಪಂದಿಸಿದೆ...,
ಇನ್ನು ಗುರಿ- ನನಗೆ ಯಾವ ಗಾಡ್‌ಫಾದರ್ ಇಲ್ಲ! ಏನೇ ಮಾಡಿದರೂ ಒಬ್ಬನೇ ಮಾಡಬೇಕು! ಮಾಡಿದೆ ಕೂಡ....
ಅಪಮಾನಗಳು- ತಿರಸ್ಕಾರಗಳು- ಕಾಯುವಿಕೆ- ನಿರಾಸಕ್ತಿ.... ಎಲ್ಲವನ್ನೂ ಅಧಿಗಮಿಸಿದೆ!
ನಾನನುಭವಿಸಿದ ನರಕ ನನ್ನೊಬ್ಬನ ನರಕ! ಯಾರೆಂದರೆ ಯಾರಿಗೂ ತಿಳಿಯದಂತೆ ನೋಡಿಕೊಂಡೆ!
ನನ್ನ ಮನಸ್ಸು ನನ್ನದು! ನನ್ನ ನಗು ನನ್ನದು! ನನ್ನ ಗುರಿ ನನ್ನದು! ಹಾಗೆಯೇ....,
ನನ್ನ ಪ್ರೇಮ ನನ್ನದು...!
10
ಶ್ರೀಕೃಷ್ಣನಿಗೆ ರಾಧೆ, ಸತ್ಯಭಾಮೆ, ರುಕ್ಮಿಣಿ, ಜಾಂಬವತಿಯರಲ್ಲಿ ಸಮಾನ ಪ್ರೇಮವಂತೆ!
ಅರ್ಜುನನಿಗೋ...., ದ್ರೌಪದಿ, ಸುಭದ್ರೆ, ಉಲೂಪಿ, ಚಿತ್ರಾಂಗದೆಯರಲ್ಲಿ!
ಇನ್ನು ದ್ರೌಪದಿಯ ವಿಷಯಕ್ಕೆ ಬಂದರೆ... ಪಂಚಪಾಂಡವರಲ್ಲಿ ಅವಳಿಗೆ ಸಮಾನ ಪ್ರೇಮ!
ಗಂಡು ಹೆಣ್ಣಿಗೆ ಸಂಬಂಧಿಸಿಯೇ ಹೀಗೆ!
ಇನ್ನು ಅನುಭವಕ್ಕೆ ಬಂದ ಪ್ರತಿಯೊಂದರಲ್ಲೂ ಮೂಡುವ ಪ್ರೇಮ....?
ನನ್ನ ಪ್ರಕಾರ ಒಬ್ಬರಿಗಿಂತ ಹಚ್ಚು ಜನರಲ್ಲಿ ಪ್ರೇಮ ಮೂಡದ ಯಾರೊಬ್ಬರೂ ಈ ಪ್ರಪಂಚದಲ್ಲಿಲ್ಲ!
ಅಥವಾ.... ನನ್ನ ನಂಬಿಕೆಯೇ ಸುಳ್ಳಿರಬಹುದು!
ಪ್ರಸ್ತುತಾ ಪ್ರಪಂಚದಲ್ಲಿ- ಒಂದು ಹೆಣ್ಣನ್ನು ಪರಿಪೂರ್ಣವಾಗಿ ಪ್ರೇಮಿಸುವ ಗಂಡಿಗೆ ಇನ್ನೊಂದು ಹೆಣ್ಣಿನಲ್ಲಿ ಪ್ರೇಮವುಂಟಾಗಬಾರದು! ಅದು ಕೆಟ್ಟದ್ದು!
ಪರಿಪೂರ್ಣವಾಗಿ ಒಂದು ಗಂಡನ್ನು ಪ್ರೇಮಿಸುವ ಹೆಣ್ಣಿಗೆ ಮತ್ತೊಬ್ಬರಲ್ಲಿ ಪ್ರೇಮವುಂಟಾಗಬಾರದು! ಅದು ಕೆಟ್ಟದ್ದು!
ಹಾಗಿದ್ದರೇ....,
ಪ್ರೇಮಿಸುತ್ತಿರುವ ಇಬ್ಬರು ಹೆಣ್ಣು-ಗಂಡು ಬೇರೆಬೇರೆ ಮದುವೆಯಾಗಬೇಕಾಗಿ ಬರುವಲ್ಲಿ- ಪ್ರೇಮವಿಲ್ಲವೇ?
ಅಲ್ಲಿ ಪ್ರೇಮವಿಲ್ಲದಿದ್ದರೆ ಪ್ರಪಂಚದಲ್ಲಿ ಮುಕ್ಕಾಲುಭಾಗ ಯಾರೂ ಪರಿಪೂರ್ಣ ಪ್ರೇಮಿಗಳಲ್ಲ!
ಇನ್ನು....,
ಪ್ರೇಮಿಸುತ್ತಿರುವ ಗಂಡು ಹೆಣ್ಣು...., ಇಬ್ಬರಲ್ಲಿ ಒಬ್ಬರು ಮರಣಿಸಿದರೆ....?
ಮತ್ತೊಬ್ಬರು ತಾವೂ ಸಾಯುವರೆ?
ಹಾಗಿದ್ದರೆ ಈ ಪ್ರಪಂಚದಲ್ಲಿ ಅರ್ಧದಷ್ಟು ಜನಸಂಖ್ಯೆ ಅನಾಯಾಸವಾಗಿ ಕಡಿಮೆಯಾಗುತ್ತಿತ್ತು!
ಇದು ನನಗೆ ಅರ್ಥವಾಗುವುದಿಲ್ಲ!
ನಿನ್ನಿಂದ ನನಗೇನೂ ಬೇಡ! ಆದರೂ ನನಗೆ ನೀನು ಇಷ್ಟವಾಗುತ್ತೀಯ ಅನ್ನುವುದು ತಪ್ಪೇ?
ಪ್ರತಿ ಹೆಣ್ಣಿನಲ್ಲಿ ಪ್ರತಿ ಗಂಡಿನ ಪ್ರೇಮ ಏಕರೂಪವಾದುದು...., ಪ್ರತಿ ಗಂಡಿನಲ್ಲಿ ಪ್ರತಿ ಹೆಣ್ಣಿನ ಪ್ರೇಮ ಏಕರೂಪವಾದುದು- ಯಾರಲ್ಲಿ ಪ್ರಕಟವಾದರೂ!
ಅದು ಪ್ರಕೃತಿ ನಿಯಮ!
ಒಂದು ಹೆಣ್ಣಿಗೆ ಒಂದು ಗಂಡು ಅನ್ನುವುದು ನಾವು ರೂಪಿಸಿಕೊಂಡ ನಿಯಮ!
ಅದನ್ನು ಗೌರವಿಸುತ್ತೇನೆ!
ಹಾಗೆಂದು- ಒಬ್ಬರನ್ನು ಉಳಿಸಿಕೊಳ್ಳಲೋ- ಪ್ರಪಂಚದ ಮುಂದೆ "ಒಳ್ಳೆಯವನಾಗಲೋ" ನನಗೆ ಒಬ್ಬರಿಗಿಂತ ಹೆಚ್ಚು ಜನರಲ್ಲಿ ಮೂಡಿದ ಪ್ರೇಮವನ್ನು ಅಲ್ಲಗಳೆಯಲೇ....?
ಒಂದು ಹೆಣ್ಣಿಗೆ ಎರಡು ಗಂಡಿನಲ್ಲಿ ಅಥವಾ ಒಂದು ಗಂಡಿಗೆ ಎರಡು ಹೆಣ್ಣಿನಲ್ಲಿ ಮೂಡುವ ಪ್ರೇಮ ತಪ್ಪೇ...?
ಹೇಳಿದ್ದೇನೆ... ಮೂಡುವ ಪ್ರೇಮ- ಆ ಭಾವ- ಆ ಸ್ಪಂದನೆ ತಪ್ಪೇ ಅನ್ನುವುದಷ್ಟೇ ಪ್ರಶ್ನೆ!
ಈ ನನ್ನ ಭಾವ- ಪ್ರಶ್ನೆ- ಪ್ರಪಂಚಕ್ಕೆ ಅರ್ಥವಾಗುವುದಿಲ್ಲ! ಪ್ರಪಂಚದ ಭಾವ ನನಗೆ ಅರ್ಥವಾಗುವುದಿಲ್ಲ!
ಎರಡರಲ್ಲಿ ಒಂದು ಸಂಭವಿಸಿದ ದಿನ...., ಈ ಸಂಧಿಘಟ್ಟವನ್ನು ಅಧಿಗಮಿಸಿದ ದಿನ....,
ಮತ್ತೆ ಭ್ರಮೆಯಿಂದ ಹೊರಬರುತ್ತೇನೆ!
ಅದು ಮನುಷ್ಯನು ತನ್ನ ಸ್ಥಿರತೆಗಾಗಿ ನಿರ್ಮಿಸಿಕೊಂಡ ನಿಯಮ. ಆ ನಿಯಮಕ್ಕೆ ಬದ್ದನಾಗಿದ್ದಾನೆ.ಒಂದು ಹೆಣ್ಣು ಸುಖವೋ ಪ್ರೇಮಾವೋ ಇಷ್ಟಾ ಪಟ್ಟ ಗಂಡಸಿಗೆ ಹಂಚುತ್ತಾ ಹೋದರೆ. ಪ್ರೇಮಕ್ಕೆ ಸ್ಥಿರತೆ ಎಲ್ಲಿದೆ. ಅಲ್ಲಿ ಸೃಷ್ಟಿ ಇಲ್ಲ.ಸೃಷ್ಟಿ ನಿಯಮ ತಪ್ಪುತ್ತದೆ. ಇದು ಪ್ರಾಣಿ ಪಕ್ಷಿಗಳಲ್ಲಿಯೂ ಇದೆ. ಸೃಷ್ಟಿ ಬೇಕು ಅಂದರೆ ಮಕ್ಕಳು ಬೇಕಲ್ವಾ ಅದಕ್ಕೆ ಹೊಣೆ ಯಾರು. ಹೆಡೆದ ತಾಯಿಯೇ.ನನ್ನ ಸೃಷ್ಟಿಗೆ ಕಾರಣ ಯಾರೆಂದು ಕೇಳಿದಾಗ ಅವಳು ಏನು ಹೇಳಬಳ್ಳಲು.ನಾಲ್ಕು ಜನರ ಹತ್ತಿರ ಸುಖ ಮತ್ತು ಪ್ರೇಮವನ್ನು ಹಂಚಿಕೊಂಡಾಗ. ಯಾರನ್ನು ಕಾರಣವಾಗಿಸಿದರು ಯಾರು ಒಪ್ಪಲಾರರು.ಆಗ ಹೆಣ್ಣು ಧೂಷಿತಲಾಗುತ್ತಾಳೆ. ಹೊರೆ ಹೊಣೆ ಭಾಜ್ಯತೆ ಎಲ್ಲ ಅವಳದೇ. ಅದಕ್ಕೆ ಹೆಣ್ಣು ಒಂದು ಗಂಡನ್ನು ಗುರುತಿಸಿಕೊಳ್ಳುತ್ತಾಳೆ ಅವರನ್ನು ಸ್ಥಿರಗೊಳಿಸಿಕೊಳ್ಳುತ್ತಾಳೆ. ಅದಕ್ಕೆ ಹೆಣ್ಣು ಹೆಚ್ಚು ಜಾಗ್ರತೆಯಾಗಿರಬೇಕು ತಕ್ಕ ಪುರುಷನನ್ನೇ ಆಯ್ಕೆ ಮಾಡಿಕೊಬೇಕು. ಏನೇ ಆದರೂ ಎಲ್ಲದಕ್ಕೂ ಅವಳೇ ಹೊಣೆ. ಇಲ್ಲಿ ಎಲ್ಲ ಕಥೆಗಳಲ್ಲಿ ಕತೆಗಾರನು ಬಿಂಬಿಸುತ್ತಿರುವುದು ಅದೇ. ನನಗೆ ನಿಯಮಗಲ್ಲಿಲ್ಲ ಎಲ್ಲದಕ್ಕೂ ಹೊಣೆ ನೀನೇ ನಿನ್ನ ಇಚ್ಛೆಯಂತೆ ಎಲ್ಲ ಎಂದು.ಪ್ರೇಮ ಪ್ರೇಮ ಅನ್ನುತ್ತಾನೇ ಹೊರತು ಎಲ್ಲಿಯೂ ತನ್ನನ್ನು ಅಂಟಿಕೊಳ್ಳುತ್ತಿಲ್ಲ. ಅದಕ್ಕೆ ಅಲ್ಲಿ ಯಾವ ಹೆಣ್ಣು ಸ್ಥಿರವಾಗಿ ಉಳಿಯುತ್ತಿಲ್ಲ. 😊🙏
ReplyDelete