ಬ್ರಹ್ಮಚರ್ಯ!

ಬ್ರಹ್ಮಚರ್ಯ!

1

ಜೇಡನ್ ಸ್ಮಿತ್ ಅನ್ನುವ ವ್ಯಕ್ತಿ ತನ್ನ ಜನನಾಂಗವನ್ನು ಆಪರೇಷನ್ ಮೂಲಕ ತೆಗೆಸಿಬಿಟ್ಟನಂತೆ!”

ಯಾಕೆ?”

ಲೈಂಗಿಕತೆಯೇ ಜೀವನವಲ್ಲ ಎಂದು ಸಾಬೀತುಪಡಿಸಲು!”

ಅದನ್ನೇ ಜೀವನ ಅಂದವರಾರು!?”

ಇದು ನಿನಗೆ ತಕ್ಕ ಪ್ರಶ್ನೆಯಲ್ಲ!”

ಲೈಂಗಿಕತೆ ಜೀವನದ ಒಂದು ಭಾಗವೇ ಹೊರತು ಅದೇ ಜೀವನವಲ್ಲವಲ್ಲ?”

ಆತನಿಗೆ ಲೈಂಗಿಕತೆಯೇ ಬೇಡ ಅನ್ನಿಸಿರಬಹುದು!”

ಅದಕ್ಕೆ ಅದನ್ನು ಕತ್ತರಿಸಬೇಕಿತ್ತೆ?”

2

ಯೋಚನೆ!

ಸಾವಿರ ವರ್ಷದ ತಪಸ್ಸು ಕೌಶಿಕ ಅಥವಾ ವಿಶ್ವರಥನನ್ನು ವಿಶ್ವಾಮಿತ್ರನನ್ನಾಗಿಸಿತ್ತು!

ಒಂದು ಗಳಿಗೆಯ ಚಾಂಚಲ್ಯ...!

ಹಾಗೆಂದು ಬ್ರಹ್ಮಚಾರಿಗಳೇ ಇರಲಿಲ್ಲವೇ...?

ಪರಶುರಾಮನಿಂದ ಹಿಡಿದು ಶಂಕರ- ವಿವೇಕಾನಂದರವರೆಗೆ....

ಎಲ್ಲವೂ ಮನಸ್ಸನ್ನು ಅವಲಂಬಿಸಿದೆ!

3

ಬಲವಂತವಾಗಿ- ಪ್ರೇಮದ ಅಧಿಕಾರದಲ್ಲಿ- ಅವಳ ಇಚ್ಛೆಗೆ ವಿರುದ್ಧವಾಗಿ ಚುಂಬಿಸಿದ್ದೆ!

ಅವಳ ಭಾವ ಪ್ರಕಟಣೆ...!

ಎದೆ ಝಲ್ ಎಂದಿತು!

ಆ ಮುಗ್ದವಾದ ಅಳು....

ನಿನ್‌ಜೊತೆ ಎಷ್ಟು ಕಂಫರ್ಟಾಗಿದ್ದೆ... ನೀ ಹೀಗೆ ಮಾಡ್ತೀಯ ಅನ್ಕೋಳ್ಲಿಲ್ಲ....” ಎನ್ನುತ್ತಾ ನನ್ನಿಂದ ದೂರಕ್ಕೆ ನಡೆಯುವಾಗ....

ಹೊರಟೇ ಹೋದಳೇನೋ ಅನ್ನಿಸಿ- ಕುಸಿದೆ!

ಪ್ರೇಮ ನಿಧಿ ಅವಳು!

ಅವಳನ್ನು ಸಮಜಾಯಿಸುತ್ತಾ ನಾನು ಹಿಂದೆಯೇ ಹೋಗುತ್ತಿಲ್ಲ ಅನ್ನುವ ಅರಿವು ಬಂದು ತಿರುಗಿ ನೋಡಿದಳು.

ನಿಜ- ನನ್ನ ಭಾವ ತಾಕಿತು!

ಬಂದು, ಎದೆಗೊರಗಿಸಿಕೊಂಡು,

ಇನ್ನೆಂದೂ ಹಾಗೆ ಮಾಡಬೇಡ!” ಎಂದಳು.

4

ಅವಳೊಂದು ಅದ್ಭುತ ನನಗೆ. ಮನಸಾ ವಾಚಾ ಕರ್ಮಣಾ... ಇಷ್ಟೊಂದು ತೆರೆದ ಮನದ ಹುಡುಗಿ... ಹೃದಯ ಪೂರ್ತಿ ಪ್ರೇಮವೇ.... ಕಳಂಕವಿಲ್ಲದ ಪ್ರೇಮ....,

ಎಟುಕಿಸಿ ಮುತ್ತೊಂದು ಕೊಟ್ಟಳು!

ಆಶ್ಚರ್ಯಗೊಂಡೆ.

ನಿನಗದು ಬೇಕು! ಆದರೆ ನನ್ನ ಇಚ್ಛೆಗೆ ವಿರುದ್ಧವಾಗಿ ಕೊಡುವುದಿಲ್ಲ! ಅದಕ್ಕೆ ನಾನೇ ಕೊಟ್ಟೆ!” ಎಂದಳು.

ಗೊತ್ತು! ಮೊದಲಸಾರಿ ಅವಳ ಮನಸ್ಸಿಗೆ ವಿರುದ್ಧವಾಗಿ ಚುಂಬಿಸಿದಾಗಿನ ಅವಳ ಪ್ರತಿಕ್ರಿಯೆಯೇ ಸಾಕ್ಷಿ!

ಅವಳಿಗೆ ನಾನಷ್ಟು ಮುಖ್ಯ! ನನಗಾಗಿ ಏನೂ....!

ಈ ಪ್ರೇಮಕ್ಕೆ ಬದಲಾಗಿ ನಾನೇನು ಕೊಡಲಿ?

5

ಕಾಲ ಒಡ್ಡುವ ಪರೀಕ್ಷೆಗೆ ನಾವೇ ಪ್ರಶ್ನೆಗಳು- ಉತ್ತರವಿಲ್ಲದ ಪ್ರಶ್ನೆಗಳು!

ತೀರಾ ಆಕಸ್ಮಿಕವಾಗಿ ನಡೆದಿತ್ತು.

ಎಟಿಎಂನಿಂದ ಹಣವನ್ನು ವಿತ್‌ಡ್ರಾ ಮಾಡಿ ಹೊರಕ್ಕೆ ಬಂದಾಗ ಕಳ್ಳನೊಬ್ಬ ಅವಳ ವ್ಯಾನಿಟಿಬ್ಯಾಗನ್ನು ಕಿತ್ತು ಓಡಿದ!

ಅವನ ಹಿಂದೆಯೇ ಓಡಲು ಶ್ರಮಿಸಿದಾಗ ಮುಗ್ಗರಿಸಿ ಬಿದ್ದಳು.

ಬಿದ್ದ ರಭಸಕ್ಕೆ ತಲೆ ರಸ್ತೆಗೆ ಬಡಿದು ಎಡಗಿವಿಯ ಸ್ವಲ್ಪ ಮೇಲೆ ಕಲ್ಲೊಂದು ಚುಚ್ಚಿ- ಅವಳು ಮೇಲೇಳಲಿಲ್ಲ!

6

ಕಣ್ಣಿನಲ್ಲಿ ನಗು- ಆತ್ಮ ವಿಶ್ವಾಸ!

ತಲೆಯ ಹೊರತು ಶರೀರದ ಯಾವ ಭಾಗವೂ ಚಲಿಸುವುದಿಲ್ಲ! ಚಲಿಸುವುದಿಲ್ಲ ಅಲ್ಲ.... ಇದೆಯೆಂಬ ಅರಿವೂ ಅವಳಿಗಿಲ್ಲ!

ಜೀ---ಪೂ-ರ್ತಿ!

7

ದೀರ್ಘವಾದ ಇಪ್ಪತ್ತು ವರ್ಷಗಳು!

ಅವಳು ಮುತ್ತು ಕೊಡಲಾರಳು- ಇಚ್ಛೆ ಇದ್ದರೂ ಇಲ್ಲದಿದ್ದರೂ ಅವಳಿಗಾಗಿಯೂ ನನಗಾಗಿಯೂ....!

ನಾನೇ ಕೊಡಬೇಕು!

ಹಣೆಗೊಂದು ಮುತ್ತು ಕೊಟ್ಟೆ! ಅವಳ ಕಣ್ಣಿನಲ್ಲಿ ತುಂಟತನ ಮಿಂಚಿತು! ಅರ್ಥವಾಗಿ..., ಸ್ವಲ್ಪ ಕೆಳಕ್ಕೆ ಸರಿದು ತುಟಿಗೆ ತುಟಿಯೊತ್ತಿದೆ...

ಮತ್ತಷ್ಟು ಕೆಳಕ್ಕೆ ಸರಿಯೋಣವೆಂದರೆ- ಪ್ರಯೋಜನವಿಲ್ಲ!

ಸ್ಪರ್ಷದ ಅರಿವೂ ಅವಳಿಗಿಲ್ಲ.... ನೆನಪಾಯಿತೇನೋ...., ಮೊದಲಬಾರಿ.... ಹೇಳಲೋ ಬೇಡವೋ ಅನ್ನುವಂತೆ....,

ಇನ್ನೂ ಎಷ್ಟು ವರ್ಷ ಹೀಗೆ? ಪ್ಲೀಸ್... ಪ್ಲೀಸ್... ಮದುವೆಯಾಗು!” ಎಂದಳು.

ನಮಗೆ ಮದುವೆಯ ಅಗತ್ಯವಿದೆಯೇ...? ಸರಿ... ಯಾವಾಗ ಆಗಲಿ?” ಎಂದೆ.

ಒಂದುಕ್ಷಣ ಮೌನ!

ನಿನ್ನ ತಲೆ! ಈ ಹೆಣವನ್ನು ಇನ್ನೆಷ್ಟುದಿನ ಕಾಯುತ್ತೀಯ? ನಿನಗೇನೂ ಮದುವೆಯ ವಯಸ್ಸು ಮೀರಿಲ್ಲ... ಅನುರೂಪಳಾದ ಹೆಣ್ಣು ಖಂಡಿತಾ ದೊರಕುತ್ತಾಳೆ... ಮದುವೆಯಾಗು ಪ್ಲೀಸ್!” ಎಂದಳು.

ನನ್ನ ಕಣ್ಣು ತುಂಬಿತು... ಅವಳ ಕಣ್ಣಿನಲ್ಲಿ ಗೊಂದಲ...,

ಇಷ್ಟು ವರ್ಷ ನಾನು ನಿನಗೆ ನೀನು ಹೆಣ ಅನ್ನುವ ಭಾವವನ್ನು ಕೊಟ್ಟೆನೇ...?” ಎಂದೆ.

ಚಂಚಲಗೊಂಡಳು.... ಗಾಭರಿಯಾದಳು.... ಅಧೀರಳಾಗಿ ನನ್ನನ್ನು ನೋಡಿದಳು....

ಇದೇ ಕೊನೆ! ಇನ್ನೆಂದೂ ಹೀಗೆ ಹೇಳಬೇಡ! ಹೀಗೆಯೇ ನಿನ್ನ ಪ್ರೇಮಾನುಭಾವದಲ್ಲಿ ಬದುಕಲು ಬಿಡು!” ಎಂದೆ.

ನನ್ನನ್ನು ಅವಳ ಎದೆಗಾನಿಸಬೇಕು ಅನ್ನುವ ಅವಳ ಭಾವ ತಾಕಿ....,

ಅವಳ ಮುಖ ಬಾಗಿಸಿದರೆ ನನ್ನ ತಲೆ ಎಟುಕುವಂತೆ ಅವಳೆದೆಯಮೇಲೆ ತಲೆಯಿಟ್ಟೆ....

ಇದಕ್ಕಿಂತಲೂ ಇನ್ನೇನು ಬೇಕು?

8

ಬ್ರಹ್ಮಚರ್ಯ ಅಷ್ಟು ಕಷ್ಟವೇ? ಲೈಂಗಿಕತೆಯೇ ಜೀವನವೇ....?

ಏನೋಪ್ಪ!

Comments

  1. ಲೈಂಗಿಕ ಜೀವನದ ಒಂದು ಭಾಗ ಅಷ್ಟೇ ನೀವು ಹೇಳಿದಂತೆ ಮಿಕ್ಕಿದ್ದು ಬರೀ ಪ್ರೇಮ.

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!