ಸಾವಿತ್ರಿ
ಸಾವಿತ್ರಿ
ನಮಸ್ತೇ...., ನಾನು ಸಾವಿತ್ರಿ.
ಸತ್ಯವಾನನ ಸಾವಿತ್ರಿಯಲ್ಲ- ಕಲಿಯುಗದ ಸಾವಿತ್ರಿ.
ನಾನೊಂದು ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದಿದ್ದೇನೆ.
ಎಷ್ಟು ಜನ ಅದನ್ನು ಒಪ್ಪುವಿರೋ- ವಿರೋಧಿಸುವಿರೋ ತಿಳಿಯಬೇಕಿದೆ- ಅಥವಾ...., ನಿಮ್ಮ ಅಭಿಪ್ರಾಯ ಬೇಕಿದೆ!
ಯಾಕೆ ಆ ತೀರ್ಮಾನಕ್ಕೆ ಬಂದೆ ಅನ್ನುವುದನ್ನು ಹೇಳಿ- ತೀರ್ಮಾನವನ್ನು ಹೇಳುತ್ತೇನೆ!
ಇದು ಒಂದು ದಿನದ ಕಥೆಯಲ್ಲ! ಮದುವೆ ಆದಾಗಿನಿಂದ ಇಂದಿನವರೆಗಿನ ಕಥೆ!
ಒಂದೇ ದಿನದ ಕಥೆಯಂತೆ ತೋರುತ್ತದೆ! ಅಲ್ಲ!
ಹೇಳಲು ಬೇರೇನೂ ಇಲ್ಲ ಅಂದಮೇಲೆ....,
ಅರ್ಥವಾಗುತ್ತದೆ ಅಂದುಕೊಳ್ಳುತ್ತೇನೆ!
1
ಕಣ್ಣು ಮುಚ್ಚಿ ಐದು ನಿಮಿಷವಾಗಿರಲಿಲ್ಲ- ತಲೆ ಸಿಡಿಯುವಷ್ಟು ಶಬ್ದ!
ಹತ್ತು ಸೆಕೆಂಡ್ ಬೇಕಾಯಿತು ಅರಿವಾಗಲು- ಅಲರಾಂ!
ತೆಗೆದು ದೂರಕ್ಕೆ ಎಸೆಯಬೇಕೆನ್ನಿಸುವಷ್ಟು ಕೋಪ!
ಎದ್ದೆ!
ಗಂಡ, ಮಕ್ಕಳು, ಅತ್ತೆ, ಮಾವ...!
ಎಂದಿನಂತೆ... ಸ್ನಾನವನ್ನು ಮುಗಿಸಿ ಕಾಫಿ ಟೀ ಇಡುವ ಮೂಲಕ ಶರುವಾಯಿತು ದಿನಚರಿ!
ಬೆಳಗಿನ ತಿಂಡಿ ಮಾಡಿ, ಮಕ್ಕಳನ್ನು ರೆಡಿಮಾಡಿ, ಗಂಡನನ್ನು ಆಫೀಸಿಗೆ ಕಳುಹಿಸುವಷ್ಟರಲ್ಲಿ ಸಾಕುಸಾಕಾಯಿತು!
ಮತ್ತೆ ಮನೆ ಒರೆಸುವುದು, ಪಾತ್ರೆಗಳನ್ನು ತೊಳೆದಿಡುವುದು, ಬಟ್ಟೆಗಳನ್ನು ಒಗೆಯುವಷ್ಟರಲ್ಲಿ... ಮಧ್ಯಾಹ್ನಕ್ಕೆ ಊಟದ ತಯಾರಿಗೆ ಸಮಯವಾಗಿರುತ್ತದೆ!
ಊಟವನ್ನೆಲ್ಲಾ ಪ್ರಿಪೇರ್‌ಮಾಡಿ, ಅತ್ತೆಮಾವಂದಿರಿಗೆ ಬಡಿಸಿ ನಾನೂ ಊಟಮಾಡಿ ಪುನಃ ಪಾತ್ರೆಗಳನ್ನೆಲ್ಲಾ ತೊಳೆದಿಟ್ಟು ಉಸ್ಸಪ್ಪ ಎಂದು ಕುಳಿತುಕೊಳ್ಳಬೇಕು...., ಮನೆಗೆ ಬೇಕಾದ ದಿನಸಿ, ವಗೈರಿ ತರಬೇಕೆಂಬ ನೆನಪು!
ಮಾರ್ಕೆಟ್ಟಿಗೆ ಹೋಗಿ ಎಲ್ಲವನ್ನೂ ಹೊತ್ತುಕೊಂಡು ಬರುವಷ್ಟರಲ್ಲಿ ಮಕ್ಕಳು ತಲುಪಿರುತ್ತಾರೆ! ಅವರಿಗೆ ಸ್ನಾನ, ತಿಂಡಿ ತೀರ್ಥ...! ಅಷ್ಟರಲ್ಲಿ ಗಂಡನ ಆಗಮನ!
ಕರ್ತವ್ಯಗಳನ್ನೆಲ್ಲಾ ಮುಗಿಸಿ ಒಂದು ಕ್ಷಣ ಫೋನ್ ತೆಗೆದುಕೊಂಡರೆ ಶುರು ಗೊಣಗಾಟ!
“ಯಾವಾಗ ನೋಡು ಫೋನ್ ಫೋನ್! ಇದೇ ನಿನ್ನನ್ನು ಹಾಳು ಮಾಡುತ್ತಿರುವುದು!”
ದಹಿಸಿ ಹೋಗುತ್ತೇನೆ!
ಏನು ಜನ್ಮ ನನ್ನದು? ಯಾಕೆ ಈ ಜನ್ಮ?
ನಿಮಗೆ ಗೊತ್ತೇ?
ಕಥೆ- ಕವನಗಳನ್ನು ಬರೆಯುತ್ತೇನೆ ನಾನು!
ಸಾವಿರಾರು ಓದುಗರಿದ್ದಾರೆ ನನಗೆ!
ಎಷ್ಟು ಅಭಿಮಾನ ಅವರಿಗೆ...!
ಮನೆಯವರು?
“ಈ ಕಥೆಯೇ ನಿನ್ನನ್ನು ಕೆಡಿಸುತ್ತಿರುವುದು! ತಲೆ ಬುಡವಿಲ್ಲದ ಬರಹ! ಮೊದಲು ಆ ಫೋನ್ ಕಿತ್ತು ಬಿಸಾಕಬೇಕು!”
ಯಾಕೆ?
ಯಾಕೆ?
ಯಾಕೆ?
ನಾನು ಕಥೆ ಬರೆಯುವುದಾದರೂ ಯಾವಾಗ?
2
ಸುಮಾರು ದಿನದಿಂದ ಇದೆ- ಕಿಬ್ಬೊಟ್ಟೆಯಲ್ಲಿ ನೋವು!
ಹೇಳಲು ಹೆದರಿಕೆ!
ನಾಟಕ ಅನ್ನುತ್ತಾರೆ! ಕೆಲಸ ಮಾಡದಿರಲು!
ಇಂದೇಕೋ ತುಂಬಾ ನೋವೆನ್ನಿಸಿತು.
ಆತುರವಾಗಿ ನಡೆಯುವಾಗ ಕಾಲಿನ ಕಿರುಬೆರಳು ಗೋಡೆಯ ತುದಿಗೆ ಬಡಿದಾಗ ಉಂಟಾಗುತ್ತದಲ್ಲ ಒಂದು ನೋವು- ಅದರ ಸಾವಿರದಷ್ಟು!
ಗಂಡನಿಗೋ... ನನ್ನ "ಅಗತ್ಯ" ಯಾವಾಗ ಬರುತ್ತದೋ ತಿಳಿಯುವುದಿಲ್ಲ!
ಅವರಿಗೆ ಬೇಕೆಂದಾಗ ಮಾತ್ರ ಅನ್ನುವುದು ವಿಷಯವಲ್ಲ- ಬೇಕೆಂದಾಗ.... ಬೇಕೇ ಬೇಕು!
ದೇವರೇ.... ಇವತ್ತೊಂದುದಿನ ಕಾಪಾಡು...
ಇಲ್ಲ! ದೇವರಿಗೆ ಕೇಳುವುದಿಲ್ಲ!
ಹತ್ತಿರಕ್ಕೆ ಎಳೆದುಕೊಂಡಾಗ ಹಿಂಜರಿಯುತ್ತಾ ಹೇಳಿದೆ....,
“ಪ್ಲೀಸ್... ಹೊಟ್ಟೆನೋವು...!”
ಆತನ ಕಣ್ಣಿನಲ್ಲಿ ಪೈಶಾಚಿಕ ಭಾವ!
ಪ್ರಾಣವಾದರೂ ಹೋಗಬಾರದೇ...!
ಇದು ರೇಪ್ ಅಲ್ಲದೆ ಮತ್ತೇನು?
ಅಸಹ್ಯವೆನ್ನಿಸಿತು! ಆತನಬಗ್ಗೆಯೂ ನನ್ನ ಬದುಕಿನಬಗ್ಗೆಯೂ!
ಆತ ಮಲಗಿ ನಿದ್ರಿಸಿದಮೇಲೆ.... ಫೋನ್ ತೆಗೆದುಕೊಂಡು ಕವಿತೆ ಬರೆಯುತ್ತೇನೆ!
ಕೆಲವೊಮ್ಮೆ- ಕಥೆ!
3
ಇಂದು ತೀರ್ಮಾನಿಸಿದ್ದೆ!
ಸ್ವಲ್ಪವಾದರೂ ಎದುರುತಿರುಗಬೇಕು...!
ಬೇಗ ಏಳಲಿಲ್ಲ!
ಶರುವಾಯಿತು ಸಹಸ್ರನಾಮ!
ತಲೆ ಕೆಡಿಸಿಕೊಳ್ಳಲಿಲ್ಲ...!
ಮಕ್ಕಳು ಶಾಲೆಗೆ ಹೋಗಲಿಲ್ಲ!
ತಿಂಡಿ- ಪಾರ್ಸಲ್ ತಂದರು- ನನ್ನ ಹೊರತು ಉಳಿದವರಿಗೆ!
ತಯಾರಾಗಿ ಗಂಡ ಹೊರಟು ಹೋದರು!
ನಾನು ಎದ್ದು ತಾಯಾರಾಗಿ ನನಗೆ ಬೇಕಾದ ತಿಂಡಿಮಾಡಿ ತಿಂದು- ಫೋನ್ ಹಿಡಿದು ಕುಳಿತೆ!
4
ಸಂಜೆ....,
ಅಪ್ಪ, ಅಮ್ಮ, ಅಣ್ಣನನ್ನು ಕರೆಸಿದ್ದರು ಗಂಡ!
ನ-ನ್ನ-ನ್ನು ಉಪದೇಶಿಸಲು!
ಅವರೊಂದಿಗೆ ಅತ್ತೆ, ಮಾವನೂ ಸೇರಿ....,
ವೇದನೆ!
ನಿಮಗೆ ಗೊತ್ತೆ ನೋವಿಗೂ ವೇದನೆಗೂ ಅರ್ಥ?
ಮಗುವನ್ನು ಹೆರುವಾಗ- ನೋವು!
ಹೆತ್ತ ಮಗು ಸತ್ತರೆ- ವೇದನೆ!
“ಇನ್ನಾದರೂ ಗಂಡನಿಗೆ ತಕ್ಕ ಹೆಂಡತಿಯಾಗಿರು!” ಎಂದು ಕೊನೆಯ ಮಾತನ್ನು ಹೇಳಿದ ಅಣ್ಣನ ಮುಖವನ್ನು ನೊಡಿದೆ.
ಆತ್ಮವಂಚನೆ!
“ಅರ್ಥವಾಯಿತಾ? ಇನ್ನುಮುಂದೆ ನಮ್ಮನ್ನು ಕರೆಸುವ ಸಂದರ್ಭವನ್ನು ಒದಗಿಸಬೇಡ! ಹೆಣ್ಣು ಹೆಣ್ಣಿನಂತಿರಬೇಕು!” ಎಂದರು -ಅಮ್ಮ!
ತಾಳ್ಮೆಗೂ ಒಂದು ಮಿತಿಯಿದೆ!
ಪಾತಾಳದವರೆಗೆ ಇಳಿಯಬಹುದು- ಅಲ್ಲಿಂದ?
ಎದ್ದು ಒಳಕ್ಕೆ ಹೋದೆ.
ಮೊದಲು- ಇವರ ಏನೆಂದರೆ ಏನೂ ಬೇಡ ಹಾಗೆಯೇ ಹೋಗಿಬಿಡೋಣ ಅನ್ನಿಸಿತು!
ಆದರೆ....,
ಇಷ್ಟು ವರ್ಷದ ಗುಲಾಮತನಕ್ಕೆ ಕೂಲಿಯಾಗಿ ತಿಳಿದುಕೊಂಡು ಕೆಲವು ಬಟ್ಟೆಗಳನ್ನೂ ಕಷ್ಟಪಟ್ಟು ಸಂಗ್ರಹಿಸಿದ್ದ ಕೆಲವು ಪುಸ್ತಕಗಳನ್ನೂ ತೆಗೆದುಕೊಂಡು ಹೊರಟೆ!
ಎಲ್ಲರ ಕಣ್ಣಿನಲ್ಲಿ ಅಚ್ಚರಿ!
“ಎಲ್ಲಿಗೆ ಹೋಗ್ತೀಯ? ನಮ್ಮ ಮಾನ ಮರ್ಯಾದಿ ಬೀದೀಗೆ ಹಾಕ್ತೀಯ? ನಡಿಯೇ ಒಳಕ್ಕೆ!” ಎಂದು ಆವೇಶದಿಂದ ನುಗ್ಗಿ ಬಂದರು ಅಪ್ಪ!
“ಕೊಂದುಬಿಡಿ!” ಎಂದೆ.
ಒಂದುಕ್ಷಣ- ಸ್ಮಶಾನ ಮೌನ!
ಅವರ ಮಾನ ಮರ್ಯಾದಿ ಉಳಿಸಲು ನಾನು ಮನೆಯಲ್ಲಿರಬೇಕಂತೆ!
ಇಲ್ಲ- ಈ ವಾಕ್ಯ ಸರಿಯಲ್ಲ! ಹೀಗೆ ಹೇಳಬಹುದೇ...?
ನಾನು ಮನೆಬಿಟ್ಟು ಹೋಗುವುದು ಅವರ ಮರ್ಯಾದಿಯ ಪ್ರಶ್ನೆಯಂತೆ!
ಅಷ್ಟೆ ಹೊರತು ಏಕೆ ಹೋಗುತ್ತಿದ್ದೇನೆ ಅನ್ನುವ ಚಿಂತೆ ಯಾರಿಗೂ ಇಲ್ಲ- ಬೇಕೂ ಇಲ್ಲ!
ಈಗ ಹೇಳಿ...,
ಹೆಣ್ಣು.... ಪ್ರಪಂಚದಲ್ಲಿ ಸ್ವತಂತ್ರಳಾಗಿ ಬದುಕಲಾರಳೆ?
ಬದುಕಬಾರದೆ?
This comment has been removed by the author.
ReplyDeleteಹಾಗೆ ಇರಬೇಕು ಒಳ್ಳೆ ಕೆಲಸ ಮಾಡಿದಳು ಈಗಿನ ಆದುನಿಕ ಸಾವಿತ್ರಿ 😊🙏
ReplyDelete