ನೂರು
ನೂರು!
ಇದೊಂದು ಹುಚ್ಚು ನನಗೆ! ಒಬ್ಬನೇ ದ್ವಿಚಕ್ರ ವಾಹನದಲ್ಲಿ- ಸುತ್ತಾಟ!
ಎರಡು ಮೂರು ದಿನಗಳಿಗೆಂದು ಹೊರಟು ವಾರದ ನಂತರ ಬಂದದ್ದೂ ಇದೆ!
ಅದುವರೆಗೆ ಅಪ್ಪ ಅಮ್ಮನ ಎದೆಯಲ್ಲಿ ಬೆಂಕಿ!
ನಾ ಕಾಲ್ ಮಾಡುವುದಿಲ್ಲ! ಅವರೇ ಮಾಡಬೇಕು!
ಕೆಲವೊಮ್ಮೆ ಪಾಪ ಅವರು ಮಾಡುವಾಗಲೂ ನಾಟ್‌ರೀಚಬಲ್ ಬರುತ್ತದೆ!
ಇನ್ನು ಟೂರ್ ಹೊರಡುವುದೋ....?
ನವೆಂಬರ್ ಡಿಸೆಂಬರ್‌ನ ಚಳಿಯಲ್ಲಿ!
ಅದೊಂದು ಅಹಂಕಾರ- ಯಾವ ಚಳಿಮಳೆಬಿಸಿಲಾದರೂ ನನ್ನ ದೇಹ ತಡೆದುಕೊಳ್ಳುತ್ತದೆಂದು!
ಸುಮಾರು ವರ್ಷದಿಂದ ಪಾಲಿಸಿಕೊಂಡು ಬಂದ ವ್ರತ ಅದು- ಮುಂಜಾನೆಯ ವ್ಯಾಯಾಮ ಮತ್ತು ದಿನಕ್ಕೆರಡುಸಾರಿ ತಣ್ಣೀರ ಸ್ನಾನ- ಮೃತ್ಯುಂಜಯ ಮಂತ್ರದೊಂದಿಗೆ!
ಗಾಡಿಯಲ್ಲಿ ಸುತ್ತಾಡುವಾಗಲೇ ಸಾವು ನಿನಗೆ- ಎಂದು ಹಲವರು ಈಗಾಗಲೇ ಹೇಳಿ ಆಗಿದೆ!
ಆದರೂ ನಾ ಸುತ್ತಾಡದೆ ಇರಲಾರೆ!
“ಜೋಪಾನವೋ...!” ಎಂದು ಅಮ್ಮ ಎದೆಯಮೇಲೆ ಕೈಯ್ಯಿಟ್ಟು ಹೇಳುವಾಗ...,
“ನಿಜಕ್ಕೂ ಅತೀಂದ್ರಿಯ ಶಕ್ತಿಗಳು ಇವೆಯೇ..!?” ಅನ್ನುವ ಚಿಂತೆ ಮನದಲ್ಲಿ!
ಅಮ್ಮನ ಮಾತು ಕಿವಿಗೆಬಿತ್ತು- ಮಿದುಳಿಗೆ ತಲುಪಲಿಲ್ಲ!
ಹೊರಟೆ!
*
ಲಕ್ಷ್ಯ- ಕೊಲ್ಲೂರು!
ಅದೇನೋ.... ಮೂಕಾಂಬಿಕೆಯೊಂದಿಗೆ ಬಾರಿ ನಂಟು ನನಗೆ!
ಆಗಾಗ ನಮ್ಮ ಮಧ್ಯೆ ಜಗಳವಾಗುತ್ತಿರುತ್ತದೆ!
ನಾನೂರು ಕಿಲೋಮೀಟರ್ ದೂರ ಕ್ರಮಿಸಿ ಬಂದಿರುತ್ತೇನೆ! ನಾನು ತಲುಪುವ ಸಮಯಕ್ಕೆ ಸರಿಯಾಗಿ ಬಾಗಿಲು ಹಾಕಿದರೆ ಹೇಗಾಗಬೇಡ!
ನನಗೋ ರಾತ್ರಿ ತಲುಪುವಾಗೊಮ್ಮೆ- ಬೆಳಗೊಮ್ಮೆ- ಎರಡುಸಾರಿ ದರ್ಶನ ಆಗಲೇ ಬೇಕೆಂಬ ಹಠ!
ಒಮ್ಮೆ ಹಾಗೆಯೇ ಆಯಿತು!
ತಲುಪಿದ್ದು ತಡವಾಯಿತೆಂದು ರೂಂ ಕೂಡ ಬುಕ್ ಮಾಡದೆ ಓಡಿದೆ- ಮೊದಲು ದರ್ಶನ!
ನನ್ನ ಕಣ್ಣ ಮುಂದೆಯೇ ಬಾಗಿಲು ಹಾಕಿದರು!
ಹುಚ್ಚು ಕೋಪ ಬಂದಿತು!
“ಮತ್ತೆ ಯಾಕೆ ಕರೆಸಿಕೊಂಡಿರಿ?”
ದುಮುಗುಡುತ್ತಾ ಹೋಗಿ ರೂಂ ಬುಕ್ ಮಾಡಿದೆ.
ಮಾರನೆಯದಿನ ಬೆಳಿಗ್ಗೆ ಐದೂವರೇಗೇ ಹೋದೆ!
ಪ್ರಸನ್ನ ವದನಳಾಗಿ ಸ್ವಾಗತಿಸಿದರು ದೇವಿ!
ಕಳೆದು ಹೋದೆ!
ಪೂರ್ಣ ತೃಪ್ತಿಯಿಂದ ಹೊರಬಂದಾಗ ನೆನಪಾಯಿತು- ಈ ಪ್ರಯಾಣದಲ್ಲಿ ಒಂದೇ ಸಾರಿ ದರ್ಶನವೇ...?
ತಿಂಡಿ ಮುಗಿಸಿ ಮತ್ತೊಮ್ಮೆ ಬಂದರೆ ಅದು ಎರಡನೇಸಾರಿ ಅನ್ನುವ ಲೆಕ್ಕಕ್ಕೆ ಬರುವುದಿಲ್ಲ!
ಬೆಳಗ್ಗೆ- ರಾತ್ರಿ, ರಾತ್ರಿ- ಬೆಳಗ್ಗೆ ಅನ್ನುವುದು- ಎರಡುಸಾರಿ ಲೆಕ್ಕ!
ತಿಂಡಿತೀರ್ಥವೆಲ್ಲಾ ಮುಗಿಸಿದೆ. ಮತ್ತೊಮ್ಮೆ ದೇವಿಯ ದರ್ಶನವನ್ನು ಮಾಡಿ ಹೊರಡುತ್ತೇನೆಂದು ದೇವಸ್ಥಾನಕ್ಕೆ ಬಂದೆ.
ಪ್ರಕೃತಿಯಲ್ಲಾಗುತ್ತಿರುವ ಬದಲಾವಣೆ ಅರಿವಿಗೆ ಬರಲಿಲ್ಲ- ದೇವೀಸನ್ನಿಧಿಯಲ್ಲಿ ಮುಳುಗಿಹೋದೆ!
ಯಾವಾಗ ಒಟ್ಟುಗೂಡಿತೋ ಮೋಡ...., ಗುಡುಗು-ಸಿಡಿಲು.... ಮಳೆ- ಮಿಂಚು...!
ಹಗಲು ಅನ್ನುವುದು ಮರೀಚಿಕೆಯಾದ ಸಮಯ!
ಅರ್ಥವಾಯಿತು!
ಉಳಿಸಿಕೊಳ್ಳುತ್ತಿದ್ದಾರೆ- ದೇವಿ!
“ಎರಡಲ್ಲ- ಮೂರು ಸಾರಿ ದರ್ಶನ ಮಾಡಿ ಹೋಗು- ಪುತ್ರ!”
ಆ ರಾತ್ರಿ- ಮಾರನೆಯ ಬೆಳಿಗ್ಗೆ!
*
ಇದೊಂದು ಅದ್ಭುತ ನೆನಪು ನನಗೆ. ಹೋಗುವುದೇ ಅಪರೂಪ! ನನಗನುಗುಣವಾಗಿ ದರ್ಶನವನ್ನು ಕೊಡಬೇಕು ತಾಯಿ! ಇದು ದೇವೀಪುತ್ರನ ಹಕ್ಕು- ಅಹಂಕಾರ...!
ಕುಂದಾಪುರವನ್ನು ದಾಟುವಾಗಲೇ ಏಳೂವರೆ ಕಳೆದಿತ್ತು!
ಈಸಾರಿಯೂ ಅದೇ ಅನುಭವವೇ...?
ಒಂದೇ ಅನುಭವ ಎಷ್ಟು ಸಾರಿ ಸಾಧ್ಯ?
ನಿರ್ಜನ ಪ್ರದೇಶ.... ಒಬ್ಬನೇ.... ಅಪರೂಪಕ್ಕೂ ಗಾಡಿಗಳಿಲ್ಲ....!
ಹೆದರಿಕೆ ಇಲ್ಲವಾದರೂ ಅತೀಂದ್ರಿಯ ಶಕ್ತಿ ಮನವನ್ನು ತುಂಬಿತ್ತು!
ಎಂಟು ಗಂಟೆ!
ಇನ್ನೂ ಅರ್ಧ ಮುಕ್ಕಾಲು ಗಂಟೆಯ ಪ್ರಯಾಣ!
ಒಂದು ತಿರುವಿನಲ್ಲಿ- ಬಲಗಡೆಗೆ ತಿರುಗಿಸುವಾಗ- ತೀರಾ ಆಕಸ್ಮಿಕವಾಗಿ ರಸ್ತೆಯ ಬದಿಯಲ್ಲಿ ಯಾರೋ ನಿಂತಿರುವ ಭ್ರಮೆಯಾಯಿತು!
ಗಾಡಿ ನಿಲ್ಲಿಸಿ ತಿರುಗಿ ನೋಡಿದೆ- ಕತ್ತಲು!
ಯಾರಾದರೂ ಇದ್ದಿದ್ದರೆ ನಡೆದು ನನ್ನ ಬಳಿಗೆ ಬರಬೇಕಿತ್ತು! ನಿಜಕ್ಕೂ ಭ್ರಮೆ ಎಂದು ಮುಂದಕ್ಕೆ ತಿರುಗಿದಾಗ....,
ತೀರಾ ಸಮೀಪದಲ್ಲಿ ಆಕಾರ!
ಒಂದುಕ್ಷಣ ಹೃದಯ ತನ್ನ ಕೆಲಸ ನಿಲ್ಲಿಸಿತ್ತು!
ಅದನ್ನು ಹೆದರಿಕೆ ಅನ್ನಲಾಗುವುದಿಲ್ಲ- ಅನಿರೀಕ್ಷಿತವಾಗಿ ಅಷ್ಟು ಸಮೀಪದಲ್ಲಿ ಆಕಾರವೊಂದನ್ನು ಕಂಡಾಗಿನ ಆಯಾಚಿತ ಭಾವನೆ!
“ಕ್ಷಮಿಸಿ- ಹೆದರಿಸಿದೆ!” ಎಂದಿತು ಆಕಾರ.
“ಓಹ್! ಮನುಷ್ಯನೇನಾ...?” ಎಂದೆ.
“ಏನಂದುಕೊಂಡಿರಿ....?”
“ಗೊತ್ತಿಲ್ಲ!” ಎಂದು ಹೇಳಿ ಗಾಡಿಯಿಂದ ಇಳಿದು ಅವರ ಮುಖವನ್ನು ಸೂಕ್ಷ್ಮವಾಗಿ ನೋಡಿದೆ.
ಎಷ್ಟೇ ಕತ್ತಲಾದರೂ ಅಷ್ಟು ಹತ್ತಿರದಿಂದ ನೋಡುವಾಗ ಮುಖ ಕಾಣಿಸಬೇಕು! ಕಾಣಿಸಲಿಲ್ಲ!
ಎರಡು ಹೆಜ್ಜೆ ಹಿಂದಕ್ಕೆ ಸರಿದು ನೋಡಿದೆ.
ಚಿಕ್ಕವನಿದ್ದಾಗ ದೊಡ್ಡಮ್ಮ ಹೇಳಿದ್ದರು...,
“ದೆವ್ವಗಳಿಗೆ ಕಾಲಿರುವುದಿಲ್ಲ! ಗಾಳಿಯಲ್ಲಿ ತೇಲುತ್ತಿರುತ್ತವೆ!”
ನಿಜವೇ....,
ಕಾಲಿರಲಿಲ್ಲ!
ದೇವೀಪುತ್ರ ನಾನು...!
ನನ್ನ ಹಿಂದೆ ಗೆಜ್ಜೆಯ ಶಬ್ದ!
ಗೆಜ್ಜೆಯ ಶಬ್ದ ಹತ್ತಿರವಾಗುತ್ತಿರುವುದಕ್ಕೆ ಅನುಗುಣವಾಗಿ ಮುಂದೆ ನಿಂತಿದ್ದ ಆಕಾರ ದೂರವಾಗುತ್ತಾ ಹೋಯಿತು!
ಗೆಜ್ಜೆ ಶಬ್ದ ನಿಂತಿತು!
ನಾನು ತಿರುಗಿ ನೋಡಲಿಲ್ಲ!
ದೂರ ಹೋದರೆ ಕಷ್ಟ!
*
“ನಂಬಿಕೆ ಅಪನಂಬಿಕೆಗಳು ಅವರವರ ಮನವನ್ನು ಅವಲಂಬಿಸಿರುತ್ತದೆ! ಅತೀಂದ್ರಿಯ ಶಕ್ತಿ ಇದೆ ಎಂದು ನಂಬುವವರಿಗೆ ಅದಕ್ಕನುಗುಣವಾಗಿ ಪ್ರಪಂಚ ಕಾಣಿಸುತ್ತದೆ! ಇಲ್ಲ ಅನ್ನುವವರಿಗೆ ಅದಕ್ಕನುಗುಣವಾಗಿ...!” ಎಂದು ಏನೋ ಹೇಳುತ್ತಿದ್ದವನನ್ನು ತಡೆದು....,
“ಕಥೆ ಪೂರ್ತಿಮಾಡು! ನೂರು ಎಂದು ಹೆಸರುಕೊಟ್ಟು ಅದಕ್ಕೆ ಸಂಬಂಧವಿಲ್ಲದಂತೆ ಏನೇನೋ ಹೇಳಿ ಅರ್ಧಕ್ಕೆ ನಿಲ್ಲಿಸಿದರೆ ಹೇಗೆ....?” ಎಂದ ಓದುಗ!
“ಅರ್ಧಕ್ಕೆ ನಿಲ್ಲಿಸಿದೆನಾ...? ಅಪರೂಪಕ್ಕೊಮ್ಮೆ ಪೂರ್ತಿಯಾಗಿ ಬರೆಯುವ ಕಥೆಗಳಲ್ಲಿ ಇದೊಂದು!” ಎಂದೆ.
“ಆಮೇಲೇನಾಯಿತು? ದೇವಿ ನಿನ್ನಜೊತೆ ಗಾಡಿಯಲ್ಲಿ ಬಂದರಾ...?”
ಕಲ್ಪನೆಗೆ ಎಲ್ಲೆಯೆಲ್ಲಿ? ಪ್ರಪಂಚದಲ್ಲಿ ಎಷ್ಟು ಕೋಟಿ ಜನರಿದ್ದಾರೋ ಅಷ್ಟು ಕೋಟಿ ಕಲ್ಪನೆಯ- ಮೂಲವಿದೆ!
“ಮುಂದಕ್ಕೆ ನೀನೇ ಊಹಿಸಿಕೋ....! ಕೊಲ್ಲೂರು, ದೇವಿ, ದೇವೀಭಕ್ತ- ದೆವ್ವ....!” ಎಂದೆ.
“ನಿನ್ನ ತಲೆ! ಮತ್ತೆ ನೂರು ಅನ್ನುವ ಹೆಸರೇಕೆ- ದಿಕ್ಕುತಪ್ಪಿಸಲು?” ಎಂದ.
“ಇದು ದೇವೀಪುತ್ರ ಬರೆದ ನೂರನೇಯ ಕಥೆ!”
ಸೂಪರ್ ಸೆಂಚುರಿ💐💐
ReplyDelete