ಗಂಡ
ಇಬ್ಬರು ಮಕ್ಕಳ ಕೈ ಹಿಡಿದು ರಸ್ತೆ ದಾಟಲು ಶ್ರಮಿಸುತ್ತಿದ್ದರು ಆ ತಾಯಿ. ಕನಿಕರಗೊಂಡು ಬಳಿಗೆ ಹೋದೆ.
ಮಗುವೊಂದನ್ನು ಎತ್ತಿಕೊಂಡು,
“ಅದನ್ನು ನೀವು ಎತ್ತಿಕ್ಕೊಳ್ಳಿ”ಎಂದೆ.
ಮತ್ತೊಂದು ಮಗುವನ್ನು ಅವರು ಎತ್ತಿಕೊಂಡರು.
ರಸ್ತೆ ದಾಟಿಸಿ ನನ್ನ ಪಾಡಿಗೆ ನಾನು ಹೊರಡುವಾಗ ಕೇಳಿಸಿತು..., ಮೊದಲೇ ರಸ್ತೆ ದಾಟಿ ನಿಂತಿದ್ದ ಅವರ ಗಂಡ ಕೇಳುತ್ತಿದ್ದ...,
“ಯಾರೆ ಅವನು ನಿನ್ನ...(ಅವಾಚ್ಯ ಶಬ್ದ!)”
ಆಕೆಯೂ ಬಿಟ್ಟುಕೊಡಲಿಲ್ಲ...
“ಕಷ್ಟಕ್ಕಾಗುವ ದೇವರು!” ಎಂದರು.
“ದಿನಾ ಕೆಲಸದಿಂದ ಬರುವಾಗ ಲೇಟಾಗೋದು ಇದಕ್ಕೇನಾ?” ಎಂದ.
ಆಕೆಯೇನೂ ಮಾತನಾಡಲಿಲ್ಲ.
“ಹೇಳೇ..., ಹೇಳೇ...!” ಎಂದು ಕೆನ್ನೆಗೆ ಬಾರಿಸಿದ.
ತಲೆ ತಿರುಗಿದಂತಾಗಿ ಬಿದ್ದು ಹೋದರು. ಮಕ್ಕಳು ಅಳುತ್ತಿದ್ದರು. ಜನ ನೋಡುತ್ತಿದ್ದರು. ಆ ಕ್ಷಣದಲ್ಲಿ ಏನು ಮಾಡಬೇಕೋ ತಿಳಿಯದೇ ಹೋಗುವುದು ಜನರ ತಪ್ಪಲ್ಲ!
ಆಕೆಯ ಕೈಯ್ಯಲ್ಲಿದ್ದ ಬ್ಯಾಗಿನಿಂದ ಹಣವನ್ನು ತೆಗೆದುಕೊಂಡು ಆತ ಬಾರ್‌ಗೆ ಹೋದ.
ಆಕೆಯನ್ನು ಅವರ ಮನೆ ತಲುಪಿಸಿದೆ. ಪಾಪ ಆಕೆ. ಬಾಡಿಗೆ ಮನೆ. ಗಂಡ ಕೆಲಸಕ್ಕೆ ಹೋಗುವುದಿಲ್ಲ. ಡಿವೋರ್ಸ್‌ಕೊಡೆಂದರೆ ಕೊಡುವುದೂ ಇಲ್ಲ. ಹೆದರಿಸಿ- ಬೆದರಿಸಿ..., ಯಾವಾಗಲೂ ಕುಡಿದುಬಂದು ಹೆಂಡತಿ ಮಕ್ಕಳನ್ನು ಬಡಿದು...!
ಕಷ್ಟಕ್ಕಾಗುವ ದೇವರು ಮತ್ತೆ ಎಂದೂ ಅವಳನ್ನು ಭೇಟಿಯಾಗಲಿಲ್ಲ...,
ಗಂಡನೂ!
👌👌
ReplyDeleteಸೂಪರ್ ಒಳ್ಳೆ ಉತ್ತರ 😊
ReplyDelete