ಸಂಧಿಘಟ್ಟ

ಸಂಧಿಘಟ್ಟ

ಇದೊಂದು ತೆರೆದ ಪತ್ರ- ಅಥವಾ ಆತ್ಮಗತ! ಯಾವುದೇ ನಿಯಮಕ್ಕೋ- ಕಟ್ಟುಪಾಡುಗಳಿಗೋ ಒಳಪಡದ ಒಂದು ಬರಹ! ಸಂಚರಿಸಿ ಬಂದ ದಾರಿಯ ಇಣುಕು ನೋಟ!

ಯಾರಿಗೂ ನನ್ನ ಮನಸ್ಸು ಅರ್ಥವಾಗುವುದಿಲ್ಲ ಅನ್ನುವ ಕೀಳರಿಮೆಯಿಂದಾಗಿ ಡೈರಿ ಬರೆಯುತ್ತಿದ್ದವ ನಾನು!

ಈಗ- ಯಾಕೆ ಅರ್ಥವಾಗುವುದಿಲ್ಲ ಅನ್ನುವ ಸ್ಪಷ್ಟ ಅರಿವಿರುವುದರಿಂದ- ಡೈರಿ ಬರೆಯುತ್ತಿಲ್ಲ!

ಈ ಪ್ರಪಂಚದಲ್ಲಿ ಸಾಧನೆಯನ್ನು ಅಳೆಯುವುದು ದುಡ್ಡಿನ ಮಾನದಂಡದಿಂದಲೇ ಹೊರತು ನಾವೇನು- ಅನ್ನುವುದರಿಂದಲ್ಲ! ಇದು ನಿಜ! ಅಲ್ಲಾ ಅನ್ನುವಿರೋ? ನಾನೂ ಅನ್ನುತ್ತಿದ್ದೆ- ಈಗ ಅನ್ನಲಾರೆ! ಯಾಕೆಂದು ವಾದಿಸಲೂ ನಾನು ತಯಾರಿಲ್ಲ! ಬೇಕಾದರೆ- ಇದು ನನ್ನ ವಿಷಯದಲ್ಲಿ ನಿಜ- ಎಂದು ತಿದ್ದಿಕೊಳ್ಳುತ್ತೇನೆ!

ಹಾಗಿದ್ದರೆ- ಪ್ರಪಂಚದ ದೃಷ್ಟಿಯಲ್ಲಲ್ಲದೆ- ನೀನು ಮಾಡಿದ ಸಾಧನೆಯೇನು- ಅನ್ನುವಿರಾ?

ನನ್ನ ಮನಸ್ಸು ನನ್ನ ನಿಯಂತ್ರಣದಲ್ಲಿದೆ! ಪ್ರತಿ ಕ್ಷಣವನ್ನು ನಾನು ಆನಂದದಿಂದ ಕಳೆಯಬಲ್ಲೆ! ನನಗೆ ಕೋಪ ಬರುವುದಿಲ್ಲ! ಬೇಸರವೋ ದುಃಖವೋ ಉಂಟಾಗುವುದಿಲ್ಲ! ಪ್ರತಿಯೊಂದರಲ್ಲೂ- ಪ್ರತಿಯೊಬ್ಬರಲ್ಲೂ ಕೇವಲ ಸಂತೋಷವನ್ನು ಮಾತ್ರ ಕಾಣುವುದು ನನ್ನ ಹೆಚ್ಚುಗಾರಿಕೆ! ಅತಿ ಮುಖ್ಯವಾಗಿ..... ಪ್ರಪಂಚವನ್ನು ನಾನು ಯಾವುದೇ ಕಳಂಕವಿಲ್ಲದೆ- ತೆರೆದ ಮನದಿಂದ ಪ್ರೇಮಿಸಬಲ್ಲೆ!

ಇದು ನನ್ನ ಜೀವನಕ್ಕೆ ಅಂಟಿಕೊಂಡಿರುವ ಅತಿದೊಡ್ಡ ಕಳಂಕವೂ ಹೌದು!

ಇದೆಲ್ಲಾ ಒಂದು ಸಾಧನೆಯೇ?

ತೆಗೆದುಕೊಳ್ಳಿ....!

ನಾನೊಂದು ಕನಸು ಕಂಡೆ! ಆ ಕನಸನ್ನು ಸಾಧಿಸಲು ಪ್ರಯತ್ನಿಸಿದೆ- ಪ್ರಯತ್ನಿಸುತ್ತಿದ್ದೇನೆ! ಅದಕ್ಕಾಗಿ...,

ಕಥೆಗಳನ್ನು ಬರೆದೆ! ಕಾದಂಬರಿ- ಚಿತ್ರ ಕಥೆಗಳನ್ನು ಬರೆದೆ! ಪುಸ್ತಕಗಳನ್ನು ಪ್ರಕಟಿಸಿದೆ!

ಸರೀ.... ಎಷ್ಟು ಹಣ ಸಂಪಾದಿಸಿದೆ ಅನ್ನುವಲ್ಲಿ ಬಂದು ನಿಲ್ಲುತ್ತದೆ ಪ್ರಶ್ನೆ!

ಸೊನ್ನೆ!

ನಾನೊಬ್ಬ ಪ್ರೇಮಿ! ಅಪ್ಪ ಅಮ್ಮನ ಅದ್ಭುತ ಪ್ರೇಮದ ನೆರಳಲ್ಲಿ ಬೆಳೆದು ಬಂದವನು.

ಪ್ರೇಮ ನನ್ನ ತಪನೆ!

ಪ್ರೇಮ ನನ್ನ ತಪಸ್ಸು!

ಎಲ್ಲಿ ಒಂದಿಂಚಿನ ಪ್ರೇಮ ಪ್ರಕಟವಾಗುವುದೋ ಅಲ್ಲಿಗೆ ನಾನು ವಾಲುತ್ತೇನೆ!

ಪ್ರೇಮ ಒಂದು ರೀತಿಯಲ್ಲಿ ನನ್ನ ದೌರ್ಭಲ್ಯ!

ಒಂದುಕಡೆ ಆಕಾಶದಷ್ಟು ಸಮಸ್ಯೆಗಳು ಮತ್ತೊಂದು ಕಡೆ ಇರುವೆಯಷ್ಟು ಪ್ರೇಮ- ನನಗೆ ಆಕಾಶ ಕಾಣುವುದಿಲ್ಲ!

ಇಲ್ಲೇ ಒಂದು ಸಣ್ಣ ಸಮಸ್ಯೆ- ತಕರಾರು!

ನಿಜಕ್ಕೂ ಗಂಡು ಹೆಣ್ಣು ಬೇಧವಿಲ್ಲದ ಪ್ರೇಮ ನನ್ನದು!

ನನ್ನ ಸ್ನೇಹಿತರು ನನಗೆ ಆತ್ಮೀಯ ಸ್ನೇಹಿತರಲ್ಲ- ಆತ್ಮ ಸ್ನೇಹಿತರು!

ಮತ್ತೇನು ತಕರಾರು?

ಇಲ್ಲಿಯೇ ನನಗೆ ಪ್ರಕೃತಿ ನಿಯಮದ ವೈಚಿತ್ರ್ಯದ ಅನುಭವ!

ಪುನಃ ಅಲ್ಲಿಗೇ ಬರುತ್ತದೆ!

ಗಂಡು- ಹೆಣ್ಣು!

ಯೋಚಿಸಿ ನೋಡಿ...,

ಗಂಡು ಗಂಡು..., ಅಯಸ್ಕಾಂತದ ಉತ್ತರ ಉತ್ತರ ದ್ರುವಗಳು...!

ಗಂಡು ಹೆಣ್ಣು.... ಅಯಸ್ಕಾಂತದ ಉತ್ತರ ದಕ್ಷಿಣ ದ್ರುವಗಳು- ಅದೇ ಸೇರುವುದು!

ಇಲ್ಲೇ ಸಮಸ್ಯೆ!

ಗಂಡು ಹೆಣ್ಣು ಅಂದ ತಕ್ಷಣ.... ಪ್ರಪಂಚದ ದೃಷ್ಟಿಯಲ್ಲಿ ಪ್ರೇಮದ ಅರ್ಥ ಬದಲಾಗುತ್ತದೆ- ಕಾಮದೊಂದಿಗೆ ಗಂಟು ಹಾಕುತ್ತದೆ- ಅದೇ ವಿಜೃಂಭಿಸುತ್ತದೆ- ಕಾಮವೇ ನಡೆಯದಿದ್ದರೂ...!!

ನನ್ನ ಜೀವನದ ಅತಿದೊಡ್ಡ ಕಳಂಕ!

ಪ್ರತಿ ಹೆಣ್ಣಿನಲ್ಲಿ ನನಗೆ ಪ್ರೇಮ ಅಂದ ತಕ್ಷಣ.... ಮನೋಭಾವ ರೂಪುಗೊಳ್ಳುವುದೇ- “ಓಹೋ!” ಎಂದು.

'ಪ್ರತಿ' ಅಂದರೆ ಎಷ್ಟು?

ಆತ್ಮ ಸ್ನೇಹಿತರಿರುವಷ್ಟು ಸಂಖ್ಯೆಯಲ್ಲಿ ನನಗೆ ಆತ್ಮ ಸ್ನೇಹಿತೆಯರಿಲ್ಲ!!

ಹೆಣ್ಣಿನೊಂದಿಗಿನ ಪ್ರೇಮವಾದರೂ ಹೇಗೆ ಪ್ರವರ್ತಿಸುತ್ತದೆ.....?

ನನ್ನ ಸ್ಪಂದನೆಗೆ ದಕ್ಕುವ ಅವರ ಪ್ರತಿಸ್ಪಂದನೆಯಿಂದ...!

ಹೆಣ್ಣಿನ ಪ್ರೇಮ ಒಂದು ಅದ್ಭುತ! ಅದೇ ನನ್ನ ಶ್ರೀರಕ್ಷೆ!

ಆತ್ಮ ಸ್ನೇಹಿತ- ಆತ್ಮ ಸ್ನೇಹಿತೆ ಅನ್ನುವುದರ ಹೊರತಾಗಿಯೂ ಪ್ರತಿಯೊಬ್ಬರಲ್ಲೂ ನನಗೆ ಪ್ರೇಮವಿದೆ! ಆದರೆ ಈ ಸ್ಪಂದನೆ ಪ್ರತಿಸ್ಪಂದನೆಯ ಏರುಪೇರಿನಿಂದಾಗಿ ಅದಷ್ಟು ಪ್ರಕಾಶಿಸುವುದಿಲ್ಲ!!

ಹೇಗೆ ಗೆಳೆಯರೊಂದಿಗಿನ ನನ್ನ ಒಡನಾಟ ಯಾವುದೇ ಲಂಗುಲಗಾಮಿಲ್ಲದೆ ನಡೆಯುತ್ತದೋ ಹಾಗೆಯೇ ಗೆಳತಿಯರೊಂದಿಗೂ ನನಗೆ ಯಾವ ಹಿಂಜರಿಕೆಯೂ- ಮುಜುಗರವೂ ಇಲ್ಲ!

ಕಾರಣ- ಅದು ಮನಸಾ ವಾಚಾ ಕರ್ಮಣಾ ಶುದ್ಧವಾದದ್ದು!!

ಅದೇ- ನನ್ನ ನೆರಳು ಬಿದ್ದರೂ ಸಾಕು ಆ ಹೆಣ್ಣನ್ನು ಸಂಶಯದ ದೃಷ್ಟಿಯಿಂದ ನೋಡುವಷ್ಟು ಕಳಂಕವನ್ನು ನನಗೆ ನೀಡಿದೆ!

ಪ್ರತಿ ಹೆಣ್ಣನ್ನು ಅನುಭಾವಿಸಿದ ನನಗೆ ಗೊತ್ತು ಪ್ರೇಮದ ಮಹತ್ವ- ಹಾಗೆಯೇ ನನ್ನನ್ನು ಅನುಭಾವಿಸಿದ ಪ್ರತಿ ಹೆಣ್ಣಿಗೆ...!

ಕಳಂಕವಿಲ್ಲದ ಪ್ರೇಮ ನನ್ನದು ಅನ್ನುವ ಆತ್ಮತೃಪ್ತಿ ನನಗಿದೆ!

ನಾನು ಬರೆಯುವ ಕಥೆಗಳಲ್ಲಿ ನನ್ನನ್ನು ಹುಡುಕಿದರೆ ನಾನೊಬ್ಬ ಪ್ರಪಂಚ ಕಾಮುಕ! ಕಥೆ ಬರೆಯುವಾಗ ನನಗೆ ಯಾವ ಮುಜುಗರವೂ ಇರುವುದಿಲ್ಲ! ವಾಸ್ತವ ಕಟುವಾಗಿದ್ದರೂ- ಕ್ಷುಲ್ಲಕವಾಗಿದ್ದರೂ ನಾನು ನೇರವಾಗಿ ಹೇಳುವವ!

ಕೆಟ್ಟದ್ದೋ- ಒಳ್ಳೆಯದ್ದೋ.... ಓದುಗರಲ್ಲಿ ಒಂದು ಗೊಂದಲವನ್ನು ಸೃಷ್ಟಿಸಿ- ಕಥೆಯಬಗ್ಗೆ- ಕಥೆಗಾರನಬಗ್ಗೆ ಹೆಚ್ಚು ಯೋಚಿಸುವಂತೆ ಮಾಡಿದರೆ- ಕಥೆಗಾರನಾಗಿ ನಾನು ಗೆದ್ದೆ ಎಂದೇ ಅರ್ಥ!

ಹಾಗಿದ್ದರೆ ಈ ಸಂಧಿಘಟ್ಟವೇನು?

ಪ್ರತಿಯೊಬ್ಬರ ಬಾಳಿನಲ್ಲಿ ಹೀಗೊಂದು ಘಟ್ಟವಿರುತ್ತದೆ!

ಪ್ರೇಮ! ಅದಕ್ಕಾಗಿ ನಾವು ವ್ಯಯಿಸಿದ ಸಮಯ! ವ್ಯಯಿಸಿದ ಅಲ್ಲ- ಅನುಭಾವಕ್ಕಾಗಿ ಸ್ಪಂದಿಸಿದ ಸಮಯ!

ಹೌದು- ಸ್ಪಂದಿಸಿದ ಸಮಯ!

ಈ ಸ್ಪಂದನೆಯ ಸಮಯ ಇಳಿಮುಖವಾಗುವ ಘಟ್ಟ!!

ಪ್ರೇಮವೋ- ಗುರಿಯೋ?

ಸ್ಪಂದನೆಯ ಸಮಯ ಇಳಿಮುಖವಾಯಿತು ಎಂದರೆ ಪ್ರೇಮ ಇಲ್ಲವಾಯಿತು ಎಂದೇ?

ಗೆಳೆಯರು ಕೇಳುತ್ತಾರೆ....,

ಏನಪ್ಪಾ ಫುಲ್‌ ಬ್ಯುಸಿ ಅನ್ಸುತ್ತೆ! ಸಿಕ್ತಾನೇ ಇಲ್ಲ!”

ಅದೇ ಹೆಣ್ಣಿನ ವಿಷಯಕ್ಕೆ ಬಂದರೆ...,

ನೀ ಮುಂಚಿನಂತೆ ಇಲ್ಲ!”

ಹೌದು! ಇಲ್ಲ! ಯಾಕೆ?

ಪ್ರಪಂಚದ ದೃಷ್ಟಿಯ ಗೆಲುವು....!

ಇದುವರೆಗೆ ನಾನು ಯಾರನ್ನೂ ಕಡೆಗಣಿಸಿದವನಲ್ಲ! ಗುರಿ ನಿಶ್ಚಯಿಸಿ ಅದರೆಡೆಗೆ ನಡೆಯುವಾಗಲೂ ಪ್ರತಿಯೊಬ್ಬರ ಭಾವನೆಗಳಿಗೆ ಬೆಲೆಕೊಟ್ಟು- ಸ್ಪಂದಿಸುತ್ತಿದ್ದವ!

ನನ್ನ ಗುರಿ ನನ್ನೊಬ್ಬನ ಗುರಿ! ಅದರ ಹೊರೆಯನ್ನು ಯಾರೊಬ್ಬರಿಗೂ ಕೊಟ್ಟವನಲ್ಲ! ಯಾರೊಬ್ಬರನ್ನೂ ದೂಷಿಸಿದವನಲ್ಲ!

ಈಗ ನನ್ನ ಹೆಚ್ಚಿನ ಸಮಯವನ್ನು ಆ ಗುರಿಗಾಗಿ ವ್ಯಯಿಸಬೇಕಾಗಿದೆ!

ಪ್ರೇಮ ನನ್ನ ದೌರ್ಭಲ್ಯ- ನಿಜ! ಗುರಿ ಸೇರಲು ತಡವಾಗುತ್ತಿರುವುದಕ್ಕೆ ಈ ಪ್ರೇಮಾಕರ್ಷಣೆಯೂ ಒಂದು ಕಾರಣ! ಅದರೆಡೆಗಿನ ನನ್ನ ಸೆಳೆತ! ಅಪ್ಪ ಅಮ್ಮ ಗೆಳೆಯರು ಗೆಳತಿಯರು ಬಂಧು ಬಳಗ- ಅಷ್ಟು ಆಕರ್ಷಣೆ ನನಗೆ!

ಇಷ್ಟು ವರ್ಷ ಅದಕ್ಕಾಗಿ ಪರಿತಪಿಸಿದೆ- ಪ್ರತಿಸ್ಪಂದಿಸಿದೆ.... ಆದರೂ ಗುರಿಯನ್ನೂ ಬಿಡಲಾರದವನಾದೆ!

ಹೇಳಿದೆನಲ್ಲಾ....? ಹಣದ ವಿಷಯದಲ್ಲಿ ನಾನು ಯಾವತ್ತಿಗೂ ಸೊನ್ನೆಯೇ- ಜೊತೆಗೆ ಹಿನ್ನೆಲೆಯೂ!

ನನಗೆ ಯಾವ ಗಾಡ್‌ಫಾದರ್ ಇಲ್ಲ! ಏನೇ ಮಾಡಿದರೂ ಒಬ್ಬನೇ ಮಾಡಬೇಕು! ಮಾಡಿದೆ ಕೂಡ....

ಅಪಮಾನಗಳು- ತಿರಸ್ಕಾರಗಳು- ಕಾಯುವಿಕೆ- ನಿರಾಸಕ್ತಿ.... ಎಲ್ಲವನ್ನೂ ಅಧಿಗಮಿಸಿದ್ದು ಒಬ್ಬನೇ...!

ನಾನನುಭವಿಸಿದ ನರಕ ನನ್ನೊಬ್ಬನ ನರಕ! ಯಾರೆಂದರೆ ಯಾರಿಗೂ ತಿಳಿಯದಂತೆ ನೋಡಿಕೊಂಡದ್ದೂ ನನ್ನ ಹೆಚ್ಚುಗಾರಿಕೆ! ನನ್ನ ಮನಸ್ಸು ನನ್ನದು! ನನ್ನ ನಗು ನನ್ನದು ಎಂದು ನಂಬುವವ....

ಆದರೂ..., ನಾನೀಗ ಸಂಧಿಘಟ್ಟದಲ್ಲಿದ್ದೇನೆ!!

ಗುರಿಯೋ- ಹಣವೋ...?

ಪ್ರೇಮವೋ- ಹಣವೋ....?

ಕನಸೋ- ಹಣವೋ....?

ಭ್ರಮೆಯೋ- ಹಣವೋ....?

ಭಾವುಕತೆಯೋ- ಹಣವೋ....?

ಕೊನೆಗೆ....,

ಹಣವೋ- ನನ್ನ ಅಸ್ತಿತ್ವವೋ....?

ಈ ಪ್ರಶ್ನೆಗೆ ಪ್ರಸಕ್ತಿಯಿಲ್ಲವೇನೋ.... ಕಾರಣ- ಪ್ರಪಂಚದ ದೃಷ್ಟಿಯಲ್ಲಿ ನನ್ನ ಅಸ್ತಿತ್ವ ನಾನು ಸಂಪಾದಿಸುವ ಹಣವನ್ನು ಅವಲಂಬಿಸಿದೆ- ಜೊತೆಗೆ....,

ಅನುಕರಣೀಯವಲ್ಲದ ಬದುಕು ನನ್ನದು!”

ಇದು- ನನ್ನ ಜೀವನ- ನನ್ನ ಜೀವನ ನನ್ನ ಅಹಂಕಾರ!!!


Comments

  1. ಗುರಿಯಿಂದ ಹಣ,ಹಣದಿಂದ ಮದುವೆ,ಮದುವೆಯಿಂದ ಅಸ್ತಿತ್ವ.ಅಸ್ತಿತ್ವದಿಂದದಿಂದ ಕುಟ್ಟಿ ಚತಾನ್ ನಾ ಸಾರ್ಥಕತೆ.ಮತ್ತೆ ಕೈಲಾದಷ್ಟು ಲೋಕಕಲ್ಯಾಣ.ಅಷ್ಟೇ ಜೀವನ.ಇನ್ನೇನು ಮಾಡಕ್ಕೆ ಆಗೋದು ಅಷ್ಟೇ 😊ಅಷ್ಟು ಮಾಡಕ್ಕೂ ಎಷ್ಟೋ ಕಷ್ಟ ಪಡಬೇಕು😊ಸಾಧಿಸಬೇಕು ಅಷ್ಟೇ 😊

    ReplyDelete

Post a Comment

Popular posts from this blog

ಹಾರರ್ ಥೀಂ

ಕಡಲು ಬೆಟ್ಟ ಮತ್ತು ನಾನು!

ಆಕ್ಷೇಪಣಾ ಪತ್ರ!