ಚಿಟ್ಟೆ
ಚಿಟ್ಟೆ
ನಿನ್ನೆ ಮೊಗ್ಗಾಗಿದ್ದ ನೀನು ಇಂದು ಎಲ್ಲಿ ಹೋದೆ?
ಹಾಳು ಮನುಷ್ಯ ನಿನ್ನನ್ನು ಕಿತ್ತುಕೊಂಡು ಹೋದನೆ?
ಅಯ್ಯೋ...
ನಿನ್ನಮೇಲೆ ನಾನೆಷ್ಟು ಆಸೆಯಿಟ್ಟುಕೊಂಡಿದ್ದೆ?
ಇಂದಿಗೆ ನೀನು ಅರಳುತ್ತೀಯ, ನಿನ್ನ ಮಧುವನ್ನು ನಾನು ಹೀರುತ್ತೇನೆ, ನನ್ನ ಪರಾಗ ಸ್ಪರ್ಷದಿಂದ ನೀನು ಕಾಯಾಗಿ ನಿನ್ನ ಸಂಕುಲವನ್ನು ಬೆಳೆಸುತ್ತೀಯಾ......
ಏಕೆ ಹೀಗಾಯಿತು?
ಮನುಷ್ಯನಿಗೆ ಅಷ್ಟೂ ತಿಳಿಯದೆ?
ಅವನೇಕೆ ಹೀಗೆ?
ಒಂದು ಹೂವನ್ನು ಕಿತ್ತರೆ ನಮ್ಮಂತಾ ಚಿಟ್ಟೆಗಳು, ದುಂಬಿಗಳು, ಸಣ್ಣಪುಟ್ಟ ಪಕ್ಷಿಗಳು ಉಪವಾಸ ಬೀಳುತ್ತವೆ. ನಾವು ಹೂವಿನಿಂದ ಹೂವಿಗೆ ಪರಾಗವನ್ನು ಹರಡಿ ಕಾಯಿಯಾಗುವುದು ತಪ್ಪುತ್ತದೆ.
ಒಂದು ಹೂ ಒಂದು ಮಗುವಿಗೆ ಸಮ. ಹೂವನ್ನು ಕಿತ್ತರೆ ಮಗುವನ್ನು ಕೊಂದಂತೆ..!
ಮನುಷ್ಯ ಏಕೆ ಇಂತಹ ಸಣ್ಣಪುಟ್ಟ (ಅವನ ಪ್ರಕಾರ!!) ತಪ್ಪುಗಳನ್ನೆಸಗುತ್ತಾ ಪ್ರಕೃತಿ ನಿಯಮವನ್ನುತಪ್ಪಿಸುತ್ತಿದ್ದಾನೆ?
ಆ ಗಿಡವನ್ನೇ ಆಶ್ರಯಿಸಿಕೊಂಡಿದ್ದ ನಾನು ಇಂದು ಉಪವಾಸ ಬಿದ್ದಿದ್ದೇನೆ.
ಎಲ್ಲಾ ಗಿಡಗಳಲ್ಲೂ ಇದೇ ಸ್ಥಿತಿಯಾದರೆ ನನ್ನ ಗತಿಯೇನು?
ನಾವು ಚಿಟ್ಟೆಗಳು, ನಮಗೂ ಜೀವವಿದೆ, ನಾವೂ ಈ ಪ್ರಪಂಚದಲ್ಲಿ ಬದುಕಬೇಕಾದವರು, ಈ ವಿಷಯ ಮನುಷ್ಯನಿಗೇಕೆ ತಿಳಿಯುತ್ತಿಲ್ಲ?
ಮನುಷ್ಯ ಬುದ್ದಿಜೀವಿಯಂತೆ!! ಯಾರು ಹೇಳಿದರೋ ಏನೋ...! ಅವನೇ ಹೇಳಿಕೊಂಡಿರಬೇಕು.
ನನ್ನ ಪ್ರಕಾರ ಈ ಮನುಷ್ಯನಷ್ಟು ಅವಿವೇಕಿಯೂ, ಬುದ್ಧಿಹೀನನೂ ಬೇರೊಬ್ಬನಿಲ್ಲ! ವೈಜ್ಞಾನಿಕವಾಗಿ ಬೆಳೆಯುತ್ತಿದ್ದೇನೆಂಬ ನೆಪದಲ್ಲಿ ತನ್ನನ್ನು ತಾನು ಕೊಂದುಕೊಳ್ಳುತ್ತಿರುವ ಮೂರ್ಖ!
ದೇವರೇ...
ನಾವೂ ಮನುಷ್ಯನಂತೆ ಜೀವವಿರುವ, ಈ ಪ್ರಪಂಚದಲ್ಲಿ ಬದುಕಲು ಹಕ್ಕಿರುವ ಜೀವಿಗಳೆಂದು ಅವನಿಗೆ ತಿಳಿಸು. ನಮ್ಮನ್ನು ಬದುಕದಂತೆಮಾಡಲು ಅವನಿಗೆ ಅಧಿಕಾರವಿಲ್ಲವೆಂದು ತಿಳಿಸು...
ಮನುಷ್ಯನ ಬದಲಾವಣೆಗಾಗಿ ಪ್ರಾರ್ಥಿಸುತ್ತಿದ್ದ ಚಿಟ್ಟೆಯನ್ನು ಹಿಡಿದ ಹುಡುಗನೊಬ್ಬ ಅದರ ಕಾಲುಗಳನ್ನೂ, ರೆಕ್ಕೆಗಳನ್ನೂ, ಉಳಿದ ಅಂಗಾಂಗಗಳನ್ನೂ ಒಂದೊಂದೇ ಕಿತ್ತು ಗುಟಕು ಜೀವದೊಂದಿಗೆ ನರಳುತ್ತಿರುವ ಅದನ್ನು ನೋಡಿ ಆನಂದಗೊಂಡ!!
ಅದೇ ಮೊಗ್ಗುಗಳು ಹೂವರಲಿ ದೇವರ ಪಾದಕ್ಕೆ ಸಮರ್ಪಿತಾವಾದರೆ ಆಗ ಏನು ಹೇಳುತ್ತವೆ 😊
ReplyDelete