ದಾರ್ಷ್ಟ್ಯ

ದಾರ್ಷ್ಟ್ಯ!

ಈಗ ನಾನು ಬರೆಯಲಿರುವ ವಿಷಯ ಓದುಗರಿಗೆ ಅರ್ಥವಾಗಲು ದಶಕಗಳು ಕಳೆಯಬೇಕು!

ಅರ್ಥವಾಗಲು?

ನಿಜಕ್ಕೂ ನಾನು ಬರೆದ ವಿಷಯವನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಕಷ್ಟವೆ? ಅಥವಾ ನನ್ನ ಬರವಣಿಗೆಯೇ ಅರ್ಥವಾಗದಂತೆ ಇದೆಯೇ? ಅಥವಾ ಓದುಗರು ಅಷ್ಟು ಮುಗ್ಧರೆ? ದಡ್ಡರೆ? ನಾನು ಭಾರಿ ಬುದ್ದಿವಂತನೇ...?

ಅಲ್ಲ! ಇದು ನನ್ನ ದಾರ್ಷ್ಟ್ಯವಲ್ಲ! ಅಹಂಕಾರದ ಪರಮಾವಧಿ!

ಹಾಗಿದ್ದರೆ ನನ್ನ ದಾರ್ಷ್ಟ್ಯವೇನು?

ಈಗ ನಾನು ಬರೆಯಲಿರುವ ವಿಷಯವನ್ನು ಅರಗಿಸಿಕೊಳ್ಳಲು ಅಥವಾ ಒಪ್ಪಿಕೊಳ್ಳಲು ದಶಕಗಳು ಕಳೆಯಬೇಕು!

ಯಾಕೆ ಒಪ್ಪಿಕೊಳ್ಳಬೇಕು- ಅವರವರ ದೃಷ್ಟಿಕೋನ ಅವರವರದ್ದು ಎಂದಿರುವಾಗ?

ಯಾರೂ ಒಪ್ಪಿಕೊಳ್ಳಬೇಕಿಲ್ಲ! ಒಪ್ಪಿಕೊಳ್ಳದಿದ್ದರೆ ನಿಜ ಸುಳ್ಳಾಗುವುದಿಲ್ಲ! ಒಪ್ಪಿಕೊಂಡರೆ ಸುಳ್ಳು ನಿಜವಾಗುವುದಿಲ್ಲ!

ನಿಜಕ್ಕೂ ನಾನೊಬ್ಬ ಭ್ರಮಾಜೀವಿ ಅಂದುಕೊಂಡಿದ್ದೆ! ವಾಸ್ತವ ಪ್ರಪಂಚದಿಂದ ಬೇರೆಯಾಗಿ ಬದುಕಲು ಇಷ್ಟ ಪಡುವ ಭ್ರಮಾಜೀವಿ! ಆದರೆ ಹಾಗಲ್ಲ! ನಾನೊಬ್ಬ ವಾಸ್ತವವಾದಿ- ಕಟು ವಾಸ್ತವವಾದಿ! ಪ್ರಪಂಚ ಭ್ರಮೆಯಲ್ಲಿದೆ! ವಾಸ್ತವವನ್ನು ಒಪ್ಪಲಾಗದ ಭ್ರಮೆಯಲ್ಲಿ! ಒಪ್ಪದಿದ್ದರೂ ನಿಷೇಧಿಸದಿರಿ! ಇದು ನಾನು ಕಂಡುಕೊಂಡಿರುವ ಪ್ರಪಂಚ! ನನ್ನ ಅನುಭವದ ಪ್ರಪಂಚ! ನನ್ನ ದೃಷ್ಟಿಕೋನದ ಪ್ರಪಂಚ!

ನಾನು ಕಾಣದ ಪ್ರಪಂಚವಿರಬಹದು... ನಾನು ಕಂಡ ಪ್ರಪಂಚ ನಿಮಗೆ ಕಾಣಿಸದೇ ಇರಬಹುದು!

ಹಾಗೆಂದು ನಾವು ಪರಸ್ಪರ ಸುಳ್ಳೇ?

ಅಲ್ಲ! ನಾನು ಸರಿ ನೀನು ತಪ್ಪು ಅಥವಾ ಇದು ಸರಿ ಇದು ತಪ್ಪು ಅನ್ನುವುದನ್ನು ಬಿಟ್ಟು- ನಾನು ತಪ್ಪಾದರೆ ನೀನೂ ತಪ್ಪು! ಇದು ಸರಿಯಾದರೆ ಅದೂ ಸರಿ ಅನ್ನುವಂತೆ ಒಮ್ಮೆ ಮನುಷ್ಯ ಮನಸ್ಸನ್ನು ಇಣುಕೋಣ!

*

ಸೈಕಾಲಜಿ ನನ್ನ ಇಷ್ಟವಿಷಯ! ಉತ್ತರ ದೊರಕುವವರೆಗೆ ಅತಿ ಸಣ್ಣವಿಷಯವಾದರೂ ಬಿಡದೆ- ಯೋಚಿಸುತ್ತಿರುತ್ತೇನೆ!

ಮನಸ್ಸಿನ ಸೂಕ್ಷ್ಮ! ಕೆಲವೊಂದು ವಾಸ್ತವಗಳು ಎದುರಾದಾಗ ಮನಸ್ಸು ಮುಂದಕ್ಕೆ ಯೋಚಿಸಲು ತಡೆಯೊಡ್ಡುತ್ತದೆ! ಅದರ ಫಲಿತಾಂಶ- ಕಟ್ಟುಪಾಡುಗಳು!!

ತನ್ನ ನಿಜವನ್ನು (ರಹಸ್ಯ!) ಮುಚ್ಚಿಟ್ಟು ಗಂಡಿನ ನಿಜವನ್ನು (ರಹಸ್ಯ) ಹೊರಗೆಡವಲು ತನಗೆ ಬೇಕಾದಂತೆ ಪ್ರಶ್ನೆಗಳನ್ನು ಕೇಳುತ್ತಾಳೆ- ಹೆಣ್ಣು! ಹೆಣ್ಣಿನ ಮನಸ್ಸಿಗೆ ಅನುಗುಣವಾಗಿ ಸಮರ್ಥನೆಯನ್ನು (ಸುಳ್ಳು!) ಹೆಣೆಯುತ್ತಾನೆ- ಗಂಡು!

ಇಬ್ಬರ ವಿಷಯದಲ್ಲೂ ಸತ್ಯ ಮರೀಚಿಕೆ!

ಇಬ್ಬರೂ ಒಮ್ಮೆ ಆತ್ಮ ಪರೀಕ್ಷೆ ಮಾಡಿಕೊಂಡರೆ ದೊರೆಯುವ ಉತ್ತರ- ಅರಗಿಸಿಕೊಳ್ಳಲಾಗದ ವಾಸ್ತವ!

*

ಎಷ್ಟು ಕಠೋರ ಹೃದಯಿ ನೀನು! ಅವಳ ಭಾವನೆಗೆ ಬೆಲೆಯೇ ಇಲ್ಲವೇ!?” ಎಂದಳು ಭಾಮೆ.

ಕಾರಣವನ್ನು ಹೇಳಿ ಪ್ರಶ್ನೆಯನ್ನು ಕೇಳು!” ಎಂದೆ.

ಏನೂ ಗೊತ್ತಿಲ್ಲದವನಂತೆ ನಾಟಕವಾಡಬೇಡ ಭದ್ರ! ಅವಳನ್ನು ಪ್ರೇಮಿಸುತ್ತೇನೆ ಅಂದೆಯಂತೆ?”

ಹೌದು! ನಿನಗೂ ಹೇಳಿದ್ದೆ!” ಎಂದೆ.

ಒಂದು ಕ್ಷಣ ಗೊಂದಲಗೊಂಡಳು!

ನನ್ನ ವಿಷಯ ಬೇರೆ! ನಾನು ನಿನ್ನನ್ನು ಒಪ್ಪಿಕೊಂಡಿದ್ದೇನೆ! ಅವಳು ಹಾಗಲ್ಲ!”

ನನ್ನನ್ನು ಒಪ್ಪಿಕೊಳ್ಳದ ಅವಳ ಭಾವನೆಗೆ ಬೆಲೆ ಕೊಡಬೇಕೆ?” ಎಂದೆ!

ಸ್ತಬ್ಧಳಾದಳು! ಏನು ಹೇಳಬೇಕೋ ಹೊಳೆಯದೆ...,

ನಾನು- ನಾವು ಸೇರಿದ ವಿಷಯವನ್ನು ಅವಳಿಗೆ ಹೇಳಿಬಿಟ್ಟಿದ್ದೇನೆ!” ಎಂದಳು.

ಯಾಕೆ? ನಿನ್ನೊಂದಿಗಿನ ನನ್ನ ರಹಸ್ಯವನ್ನು ನನ್ನ ಅನುಮತಿಯಿಲ್ಲದೆ ಇನ್ನೊಬ್ಬಳೊಂದಿಗೆ ಹೇಗೆ ಹೇಳಬಲ್ಲವಳಾದೆ ಭಾಮೆ?”

ಏನು ಮಾಡಲಿ? ಹಿಸ್ಟೀರಿಕ್ಕಾಗಿ ಕೇಳುತ್ತಿದ್ದಳು! ಗೋಳು ತಾಳಲಾರದೆ ಹೇಳಿಬಿಟ್ಟೆ! ಪಾಪ ಅವಳಾದರೂ ನಿನ್ನ ವಿಷಯದಲ್ಲಿ ಒಂದು ತೀರ್ಮಾನಕ್ಕೆ ಬರಲಿ!” ಎಂದಳು.

ನಿನಗೇ ಸಮಸ್ಯೆ ಇಲ್ಲದಿದ್ದಮೇಲೆ ನನಗೇನು? ಆದರೆ ಅವಳು ತೀರ್ಮಾನಕ್ಕೆ ಬರಲು ಈ ವಿಷಯವೇ ಬೇಕಿತ್ತೆ? ಇದಾದರೆ ನಾನೇ ಹೇಳಿದ್ದೆನಲ್ಲಾ? ಮುಂಚೆಯೂ ಸೇರಿದ್ದೇನೆ- ಇನ್ನೂ ಸೇರುತ್ತೇನೆ- ಎಂದು? ಅದುಸರಿ, ಅವಳು ಈ ವಿಷಯವನ್ನು ನನ್ನಲ್ಲಿ ಕೇಳದೆ ನಿನ್ನನ್ನೇ ಯಾಕೆ ಕೇಳಿದಳು?” ಎಂದೆ.

ಯಾಕೆಂದರೆ ನಿನ್ನನ್ನು ಅವಳಿಗೆ ಚೆನ್ನಾಗಿ ಗೊತ್ತು!” ಎಂದಳು. ಉಲ್ಲಸಿತನಾದೆ!

ಅಷ್ಟೇ...! ನನ್ನಬಗ್ಗೆ ಅವಳಿಗೆ ಚೆನ್ನಾಗಿ ಗೊತ್ತು! ಆದ್ದರಿಂದ ನನ್ನನ್ನು ಒಪ್ಪಲಾರಳು! ಅಂದಮೇಲೆ.... ಅವಳ ಭಾವನೆಗೆ ಬೆಲೆಯಿಲ್ಲವಾ ಅನ್ನುವ ನಿನ್ನ ಮಾತಿನ ಅರ್ಥವೇನು?” ಎಂದೆ.

ಕರ್ಮ! ಅವಳಪ್ರಕಾರ ಅವಳದ್ದು ಪವಿತ್ರವಾದ ಪ್ರೇಮ ನಿನ್ನೊಂದಿಗೆ!”

ನನ್ನದೇನು?” ಎಂದೆ- ತಟ್ಟನೆ!

ಅವಳ ಮೇಲಿನ ನಿನ್ನ ಭಾವ ನನ್ನಮೇಲೂ ಇದೆ ಅನ್ನುವುದನ್ನು ಅವಳಿಂದ ತಡೆದುಕೊಳ್ಳಲಾಗುತ್ತಿಲ್ಲ!” ಎಂದಳು.

ಎಂತ ಸಾವೆ! ಅದಕ್ಕೆ ನಾನೇನು ಮಾಡಲಿ? ಅವಳು ಬರುವುದಕ್ಕೆ ಮುಂಚೆ ನೀನು ನನ್ನ ಬದುಕಿನಲ್ಲಿದ್ದೆ! ಅದು ಅವಳಿಗೂ ಗೊತ್ತು! ನಿನ್ನನ್ನು ನಾನು ಪ್ರೇಮಿಸುತ್ತಿರುವುದೂ ಗೊತ್ತು! ಆದರೂ ನನ್ನ ಪ್ರೇಮವನ್ನು ಒಪ್ಪಿಕೊಂಡವಳು- ಈಗ ನಾನು ನಿನ್ನೊಂದಿಗೆ ದೈಹಿಕವಾಗಿ ಸೇರಿದೆ ಎಂದು ತಿಳಿದಾಗ- ಅವಳ ಪ್ರೇಮ ಪವಿತ್ರವಾಯಿತೆ? ನನ್ನ ಪ್ರೇಮ ಅಪವಿತ್ರವಾಯಿತೆ?” ಎಂದೆ.

ಯಪ್ಪ! ಎಷ್ಟು ಕಠಿನನೋ ನೀನು!” ಎಂದಳು.

ಇದರಲ್ಲಿ ಕಠಿಣತೆಯೇನು ಬಂತು? ಗಂಡ ಮಕ್ಕಳು ಅತ್ತೆ ಮಾವ ತಂಗಿ ತಮ್ಮ.... ಎಲ್ಲರೂ ಇರುವವಳು! ನನ್ನ ಬರಹಗಳನ್ನು ಓದಿ ಆಸಕ್ತಿ ಹೊಂದಿ ಸನಿಹವಾದವಳು! ಪ್ರೇಮದ ಕೊರತೆಯಿದೆ ಅಂದವಳು! ನಿನಗೂ ಗೊತ್ತು- ನನ್ನಲ್ಲಿ ಪ್ರೇಮಕ್ಕೆ ಕೊರತೆಯಿಲ್ಲ! ಅವಳಿಗೆ ಬೇಕಾದ ಪ್ರೇಮ ನನ್ನಲ್ಲಿ ಸಿಕ್ಕಿತು! ಈಗಲೂ ಅದೇ ಪ್ರೇಮವಿದೆ! ಆದರೆ ಅವಳ ಸಮಸ್ಯೆ- ಅವಳಲ್ಲಿ ನನಗಿರುವ ಪ್ರೇಮಕ್ಕಿಂತ ನಿನ್ನಲ್ಲಿ ನನಗಿರುವ ಪ್ರೇಮ! ಇದು ಅಸೂಯೆಯಲ್ಲವೆ? ಪ್ರೇಮ ಹೇಗಾಗುತ್ತೆ?!”

ಇದು ಸರಿಯಲ್ಲ ಭದ್ರ! ಅವಳು ನಿನ್ನನ್ನು ನಂಬಿದ್ದಾಳೆ!” ಎಂದಳು. ಗಹಗಹಿಸಿ ನಕ್ಕೆ!

ನಂಬಿದ್ದಾಳೆ! ಆದರೆ ಒಪ್ಪಲಾರಳು! ಅವಳದ್ದು ಪವಿತ್ರ ಪ್ರೇಮ! ನನ್ನದು ಅಪವಿತ್ರ! ನಾನು ಹೀಗೆಯೇ ಎಂದು ಗೊತ್ತಿದ್ದೂ ನನ್ನೊಂದಿಗೆ ಬೆರೆತು ಈಗ ನಾನು ದ್ರೋಹಿ ಅನ್ನುತ್ತಿದ್ದಾಳೆ! ಹೋಗಲಿ...., ನಾನು ಕರೆದರೆ ಎಲ್ಲರನ್ನೂ- ಎಲ್ಲವನ್ನೂ ತೊರೆದು ಬರಬಲ್ಲಳೇನು ನನ್ನೊಂದಿಗೆ?”

ಭಾಮೆ ಮೌನ! ಬರುವುದಿಲ್ಲವೆಂದು ಅವಳಿಗೆ ಗೊತ್ತು! ನನಗೂ ಗೊತ್ತು! ತನ್ನ ಪ್ರೇಮವನ್ನು ಅವಳು ಪ್ರಪಂಚದ ಮುಂದೆ ಒಪ್ಪಿಕೊಳ್ಳಲಾರಳು! ಒಪ್ಪಿಕೊಳ್ಳುವ ಭದ್ರ ದುಷ್ಟ!

ಹೊತ್ತುಕೊಳ್ಳಲಾಗದಷ್ಟು ಪ್ರೇಮವನ್ನು ಅರಸದಿರು ಭದ್ರ!” ಎಂದಳು.

ಅದೇನೋ ಬಿಡಿಸಿ ಹೇಳು!” ಎಂದೆ.

ತಲೆಯಮೇಲೆ ಐವತ್ತು ಕೇಜಿ ಭಾರವಿರುವ ಚೀಲವಿದ್ದರೆ ನೀನು ಸುಲಭವಾಗಿ ಹೊತ್ತುಕೊಳ್ಳಬಲ್ಲೆ! ಅದರಮೇಲೆ ಮತ್ತೊಂದು ಚೀಲವಿಟ್ಟರೆ?” ಎಂದಳು.

ನಿನ್ನಜ್ಜಿ! ನಾನೇ ಒಗಟು ಅಂದುಕೊಂಡರೆ ನೀನು ನನಗಿಂತಲೂ ಹೆಚ್ಚೋ?” ಎಂದೆ.

ಇದೇ... ಪುರುಷಾಹಂಕಾರ!” ಎಂದಳು.

ವಿಷಯ ಹೇಳು!” ಎಂದೆ.

ನಿನಗೆ ನನ್ನಮೇಲೆ- ನನ್ನನ್ನು ಬಿಟ್ಟಿರಲಾರದಷ್ಟು ಪ್ರೇಮ- ಐವತ್ತು ಕೇಜಿಯ ಪ್ರೇಮ! ಹಾಗೆಯೇ ಅವಳಮೇಲೂ! ಹೇಗೆ ತಡೆದುಕೊಳ್ಳುತ್ತೀಯ ಭದ್ರ?” ಎಂದಳು.

ನನಗರ್ಥವಾಗಲಿಲ್ಲ! ಉಲ್ಟ ಹೇಳುತ್ತಿದ್ದೀಯೇನೋ- ಒಂದು ರೀತಿಯಲ್ಲಿ ನನ್ನ ಉತ್ತರ! ನಿನಗೆ ಭದ್ರನಮೇಲೆ ಐವತ್ತು ಕೇಜಿಯ ಪ್ರೇಮ! ಹಾಗೆಯೇ ಅವಳಿಗೂ...! ಹೇಗೆ ತಡೆದುಕೊಳ್ಳುತ್ತೀಯ ಅನ್ನುವುದು ಪ್ರಶ್ನೆ! ಇದರಲ್ಲಿ ತಡೆದುಕೊಳ್ಳುವುದೇನು ಬಂತು? ನನಗೆ ನಿನ್ನಮೇಲೂ ಐವತ್ತು ಕೇಜಿಯ ಪ್ರೇಮ! ಅವಳ ಮೇಲೂ ಐವತ್ತು ಕೇಜಿಯ ಪ್ರೇಮ! ಹೊರೆ ಏನು?” ಎಂದೆ. ಗೊಂದಲಗೊಂಡಳು!

ಅಲ್ಲವೋ! ಪ್ರತಿಹೆಣ್ಣಿಗೂ ನೀನು ನನ್ನವಳು ಎಂದು ಹೇಗೆ ಹೆಳಬಲ್ಲವನಾದೆ?” ಎಂದಳು.

ಅದರಲ್ಲೇನು? ನಿನಗೂ ಗೊತ್ತು! ನನ್ನ ಅರಿವಿರುವ ಪ್ರತಿ ಹೆಣ್ಣಿಗೂ ಗೊತ್ತು! ಮುಂಚಿನಿಂದಲೂ ನಾನು ಹಾಗಯೇತಾನೆ?! ಹೆಣ್ಣು ನನ್ನ ಪ್ರಾಣ!” ಎಂದೆ.

ಅವಳು ನನ್ನನ್ನು ನೊಡಿದ ನೋಟಕ್ಕೆ ಅರ್ಥ ತಿಳಿಯಲಿಲ್ಲ!

*

ಇದನ್ನೂ ಎಲ್ಲರಿಗೂ ಸೇರಿ ಹೇಳಿದ್ದಾ? ನಾನು ನನಗೆ ಮಾತ್ರ ಅಂದುಕೊಂಡಿದ್ದೆ!” ಎಂದಳು- ಆತ್ಮಸಾಕ್ಷಿ!

ಯಾಕೆ ಹಾಗಂದುಕೊಂಡೆ?” ಎಂದೆ.

ಇಲ್ಲ- ಸುಮ್ಮನೆ ಅಂದುಕೊಳ್ಳಲಿಲ್ಲ! ನಿನ್ನನ್ನು ಗೊತ್ತಿರುವವಳಾದ್ದರಿಂದ ಸ್ಪಷ್ಟವಾಗಿ ಕೇಳಿ ಖಚಿತಪಡಿಸಿಕೊಂಡಿದ್ದೆ! ಈಗ ನೀನು ಸುಳ್ಳು ಹೇಳುತ್ತಿದ್ದೀಯ!” ಎಂದಳು.

ಗಂಭೀರವಾಗಿ ಅವಳ ಮುಖವನ್ನು ನೋಡಿದೆ. ಅವಳೇನೂ ಚಂಚಲಗೊಳ್ಳಲಿಲ್ಲ! ನನಗಿಂತ ಗಂಭೀರವಾಗಿ ನೋಡಿದಳು.

ನೀನು ಮುಟ್ಟಾದಾಗ ನಿನ್ನ ಆ ಭಾಗಕ್ಕೆ ಮುತ್ತುಕೊಡಬೇಕು ಎಂದೆ ನೀನು! ನಾನು ಸ್ಪಷ್ಟವಾಗಿ ಕೇಳಿದೆ! ಇದನ್ನಾದರೂ ನನಗೊಬ್ಬಳಿಗೇನಾ ಹೇಳುತ್ತಿರುವುದು- ಅಥವಾ....? ಎಂದು! ಇದನ್ನೆಲ್ಲಾ ಎಲ್ಲರಿಗೂ ಹೇಳಲಾಗುತ್ತದೆಯೇ? ಬೇರೆ ಹೆಣ್ಣಿನೊಂದಿಗೆ ಸೆಕ್ಸ್ ಮಾಡಬಹುದು- ಅಲ್ಲಿಗೆ ಮುತ್ತು ಕೊಡಬಹುದೇ? ಎಂದೆ ನೀನು! ಈಗ...., ನೀನು ಅನ್ನುವ ಜಾಗದಲ್ಲಿ ಹೆಣ್ಣು ಹಾಕಿಕೋ ಅನ್ನುತ್ತಿದ್ದೀಯ! ಮೋಸ!” ಎಂದಳು.

ನಿಜ! ನಾನು ಮೋಸ ಮಾಡಿದ- ಸುಳ್ಳು ಹೇಳಿದ- ಹೆಣ್ಣೊಬ್ಬಳು ನನ್ನ ಬದುಕಿನಲ್ಲಿದ್ದರೆ ಅದು ಇವಳು ಮಾತ್ರ! ನನ್ನ ಆತ್ಮಸಾಕ್ಷಿ! ಹೇಗೆ ಹೇಳಬಲ್ಲವನಾದೆ? ನಿನಗೆ ಮಾತ್ರ ಹಾಗೆ ಮಾಡುವೆನೆಂದು?

ಪ್ರತಿ ಹೆಣ್ಣಿಗೂ- ಐಲವ್‌ಯು, ನೀನು ನನ್ನ ಸ್ವಂತ, ನೀನು ನನ್ನವಳು ಎಂದು ಸುಲಭವಾಗಿ ಹೇಳುವ ನಾನು ಈ ವಿಷಯವನ್ನು ಹೇಳಲಾರೆನೆ?

*

ನಮಸ್ತೇ....! ನಾನು ಭದ್ರ! ಭದ್ರದೇವ! ವರ್ತಮಾನಕಾಲದ ಪುರುಷ ಪ್ರಪಂಚದ ಸಂಕೇತ! ಎಲ್ಲರೂ ಹೀಗೆಯೇ ಎಂದು ಹೇಳಲಾರೆ! ಹೀಗೆಯೂ ಇದ್ದಾರೆ ಎಂದು ಮಾತ್ರ ಹೇಳಬಲ್ಲೆ!

'ಭಾಮೆ' ಮತ್ತು 'ಆತ್ಮಸಾಕ್ಷಿ' ನಾನು ಪ್ರಸ್ತುತಪಡಿಸುತ್ತಿರುವ ವಿಷಯದಲ್ಲಿ ಸ್ತ್ರೀ ಸಂಕೇತಗಳು! ನನ್ನನ್ನು ನಾನಾಗಿ ಒಪ್ಪಿಕೊಂಡ ಸ್ತ್ರೀ ಸಂಕೇತಗಳು! ಒಪ್ಪಿಕೊಳ್ಳದ ಸ್ತ್ರೀ ಸಂಕೇತ- 'ಅವಳು’!

ನನ್ನನ್ನು ನಾನಾಗಿ ಒಪ್ಪಿಕೊಳ್ಳುವುದು! ಹಾಗಿದ್ದರೆ ಏನು ನಾನು?

*

ಇಂದ್ರ ಅನ್ನುವುದು ಒಂದು ಪದವಿಯಂತೆ! ಕಾಲಾಕಾಲಕ್ಕೆ- ನಹುಷ, ದಶರಥ, ಜನಕ, ಬಲಿ...., ಇನ್ನೂ ಎಷ್ಟೆಷ್ಟೋ ಪುಣ್ಯಾತ್ಮರು ಇಂದ್ರ ಪದವಿಯನ್ನು ಅಲಂಕರಿಸಿದ್ದರಂತೆ!

ಹಾಗೆ..., ನನ್ನ ವಿಷಯದಲ್ಲಿ ಹೆಣ್ಣು!

ಹೆಣ್ಣಿನ ಸ್ಥಾನದಲ್ಲಿ ಯಾರಿದ್ದಾರೆ ಅನ್ನುವಲ್ಲಿ ಭಾವನೆಗಳು- ಭಾವಗಳು ರೂಪುಗೊಳ್ಳುತ್ತದೆ!

ಮರೆಯದಿರಿ...., ನನ್ನ- ಭದ್ರದೇವನ ವಿಷಯದಲ್ಲಿ!

ಹೆಣ್ಣಿನ ಸ್ಥಾನದಲ್ಲಿ ಅಮ್ಮ ಇದ್ದು..., ಕೇವಲ ಹೆತ್ತಮ್ಮ ಮಾತ್ರ ನನಗೆ ಅಮ್ಮನೇ?

ಅಲ್ಲ...! ಅಮ್ಮನ ಸ್ಥಾನಕ್ಕೆ ಅರ್ಹರಾದವರೆಲ್ಲಾ ನನಗೆ ಅಮ್ಮನೇ! ಗೆಳೆಯರೆಲ್ಲರ ಅಮ್ಮಂದಿರನ್ನು ನಾನು ಯಾವ ಮುಜುಗರವೂ ಹಿಂಜರಿಕೆಯೂ ಇಲ್ಲದೆ- ಅಮ್ಮ ಅನ್ನುತ್ತೇನೆ! ಕೆಲವರೊಂದಿಗೆ ಅಕಾರಣವಾಗಿ ಅಮ್ಮನ ಬಾಂಧವ್ಯ ಬೆಳೆಯುತ್ತದೆ! ಅಲ್ಲಿ- ಭಾವ ಮುಖ್ಯ!

ಹೆಣ್ಣಿನ ಸ್ಥಾನದಲ್ಲಿ ಸಹೋದರಿ ಇದ್ದರೆ?

ಹೆಣ್ಣಿನ ಸ್ಥಾನದಲ್ಲಿ ಮಗಳು ಇದ್ದರೆ?

ಹೆಣ್ಣಿನ ಸ್ಥಾನದಲ್ಲಿ ಗೆಳತಿ ಇದ್ದರೆ?

ಆಯಾ ಭಾವಗಳು! ಯಾರಲ್ಲಿ ಬೇಕಿದ್ದರೂ ಸಹೋದರಿ ಅನ್ನುವ ಭಾವ ಬರಬಹುದು! ಮಗಳಂತೆ ಕಾಣಬಹುದು! ಎಷ್ಟು ಬೇಕಿದ್ದರೂ ಗೆಳತಿಯರು ಇರಬಹದು!

ಹೆಣ್ಣಿನ ಸ್ಥಾನದಲ್ಲಿ ಪ್ರೇ--ಸಿ ಇದ್ದರೆ?

ಶುರುವಾಯಿತು ಸಮಸ್ಯೆ!!

ಹಾಗೆಂದು ಕಂಡ ಕಂಡವರಲ್ಲಿ- ಪ್ರತಿಯೊಬ್ಬರಲ್ಲಿ ಆ ಭಾವ ಬರುತ್ತದೆಯೋ....?

ಇಲ್ಲ- ಹೇಗೆ ಒಡಹುಟ್ಟಿದವಳಲ್ಲದವಳಲ್ಲಿ ಸಹೋದರಿ ಅನ್ನುವ ಭಾವ ಬರುತ್ತದೋ- ಹೆತ್ತ ಮಗಳಲ್ಲದವಳಲ್ಲಿ ಮಗಳೂ ಅನ್ನುವ ಭಾವ ಬರುತ್ತದೋ- ಹೆತ್ತಮ್ಮನಲ್ಲದಿದ್ದರೂ ಹೇಗೆ ಅಮ್ಮನೆಂಬ ಭಾವ ಬರುತ್ತದೋ...., ಹಾಗೆ ಕೆಲವರಲ್ಲಿ ಪ್ರೇಮಿ- ಪ್ರೇಯಸಿ ಅನ್ನುವ ಭಾವ ಬರುತ್ತದೆ!

ನನಗಂತೂ ಬರುತ್ತದೆ!

ಮುಜುಗರದಿಂದಲೋ- ಸಮಾಜದ ಕಾರಣವಾಗಿಯೋ- ಹಿಂಜರಿಕೆ ಹೆದರಿಕೆಗಳಿಂದಲೋ ನಾವದನ್ನು ವ್ಯಕ್ತಪಡಿಸದೇ ಇರಬಹುದಾಗಲಿ- ನನ್ನ ಪ್ರಕಾರ ಪ್ರತಿಯೊಬ್ಬರಿಗೂ ಒಬ್ಬರಿಗಿಂತ ಹೆಚ್ಚು ಜನರಮೇಲೆ ಪ್ರೇಮ (ವಿಶ್ವಜನೀಯ ಪ್ರೇಮವನ್ನು ಬಿಡುತ್ತೇನೆ! ಸಾಮಾನ್ಯರ ಪ್ರೇಮ! ಗಂಡು ಹೆಣ್ಣು ಪ್ರೇಮ...!) ಉಂಟಾಗಿಯೇ ಇರುತ್ತದೆ!

ನನಗೆ ಯಾರಲ್ಲಿಯಾದರೂ ಆ ಭಾವ ಮೂಡಿದಾಗ ನಾನದನ್ನು ವ್ಯಕ್ತಪಡಿಸುತ್ತೇನೆ! ಎಲ್ಲರಂತೆ ಹಿಂಜರಿಯುವುದಿಲ್ಲ!

ಸಮಾಜದ ದೃಷ್ಟಿಯಲ್ಲಿ ಇದು ತಪ್ಪು! ಆದರೆ ನನಗೆ ಆ ಭಾವ ಮೂಡಿದ್ದು ನಿಜವಲ್ಲವಾ...?

ಯಾಕೆ ಮೂಡಬಾರದು? ನನಗರ್ಥವಾಗುವುದಿಲ್ಲ!

ಯಾರಲ್ಲಿ ಬೇಕಿದ್ದರೂ...,

ಅಮ್ಮನ ಭಾವ ಬರಬಹುದು!

ಅಕ್ಕ ತಂಗಿಯ ಭಾವ ಬರಬಹುದು!

ಮಗಳ ಭಾವ ಬರಬಹುದು!

ಗೆಳತಿಯ ಭಾವ ಬರಬಹುದು!

ಪ್ರೇಯಸಿಯ ಭಾವ ಬಂದರೆ ತಪ್ಪು!

ಹುಡುಗ ಹುಡುಗನ ಮಧ್ಯೆ ಗೆಳೆತನವಾಗುತ್ತದೆ! ಅದು- ಇಬ್ಬರೂ ಒಟ್ಟಿಗೆ ಅಪ್ಪಿ ಮಲಗುವವರೆಗೆ ಮುಂದುವರೆಯುತ್ತದೆ! ತಪ್ಪಲ್ಲ!

ಗಂಡು ಹೆಣ್ಣಿನ ಮಧ್ಯೆ ಆದರೆ ತಪ್ಪೇಕೆ?

ಇನ್ನೊಬ್ಬರ ಹೆಂಡತಿಯನ್ನೂ ನೀನು ಪ್ರೇಮಿಸಬಲ್ಲೆಯಾ...? ಅನ್ನುವ ಪ್ರಶ್ನೆ ಬರುತ್ತದೆ!

ಇಲ್ಲಿ- ಇನ್ನೊಬ್ಬರ ಹೆಂಡತಿಯಾದ್ದರಿಂದ ನನಗೆ ಪ್ರೇಮ ಮೂಡಿತೆ?

ಪ್ರತಿ ಹೆಣ್ಣು ನನಗೆ ವೈಯುಕ್ತಿಕ! ಅವರ ಗುರುತು ಅವರೇ ಹೊರತು- ಇನ್ನೊಬ್ಬರ ನೆರಳಲ್ಲ!

ಆ ಹೆಣ್ಣು ನನಗೆ ಸ್ಪಂದಿಸಿದಳು- ಅಥವಾ ನಾನು ಅವಳಿಗೆ ಸ್ಪಂದಿಸಿದೆ! ಪ್ರೇಮವಾಯಿತು- ಅಷ್ಟೆ!

ಅಲ್ಲದೆ ಪ್ರೇಮಿಸಬಲ್ಲೆಯಾ ಅನ್ನುವ ಪ್ರಶ್ನೆಗೆ ಪ್ರಸಕ್ತಿಯಿಲ್ಲ! ಕಾರಣ...., ಪ್ರೇಮ ಆದಾಗಿ ಆಗುವುದು ಹೊರತು- ಬಲವಂತದಿಂದ ಹೇರುವುದಲ್ಲ!

ಅವಳಿಗದು ಬೇಡದಿದ್ದರೆ ಬೇಡ!

ಅವಳಿಗೆ ಯಾಕೆ ಬೇಡ?

-ಮಾ-!

ನನ್ನಲ್ಲಿ ಪ್ರಪಂಚಕ್ಕೇ ಹಂಚಿದರೂ ಮುಗಿಯದ ಪ್ರೇಮವಿದೆ! ಅವಳಿಗೆ ಪ್ರೇಮದ ಅಗತ್ಯವಿದೆ! ನಮ್ಮರಿವಿಲ್ಲದೆ ನಮ್ಮಲ್ಲಿ ಪ್ರೇಮ ಮೂಡಿದೆ!

ಸಮಸ್ಯೆಯೇನು?

-ಮಾ-!

ಅಷ್ಟೆ ಹೊರತು ಆ ಭಾವ ಸುಳ್ಳಲ್ಲ!

ಇದು ಹೇಗೆಂದರೆ....,

ಏನು ಹಾಳು ಸೊಳ್ಳೆ...! ಕಿವಿಯಬಳಿಯೇ ಗುಯ್‌ಗುಡುತ್ತದಪ್ಪಾ- ಅನ್ನುತ್ತೇವೆ! ವಾಸ್ತವ ಅದಲ್ಲ! ಅದು ಎಲ್ಲಾ ಕಡೆಯು ಗುಯ್‌ಗುಡುತ್ತದೆ! ಕಿವಿಯ ಬಳಿ ಬಂದಾಗ ನಮಗೆ ಕೇಳಿಸುತ್ತದೆ!

ಹಾಗೆಯೇ ಬಂಧದ ವಿಷಯ!

ನಮಗೆ ಎಲ್ಲರಮೇಲೂ ಒಂದು ಪ್ರೇಮಭಾವ ಮೂಡುತ್ತದೆ! ಆದರೆ ಒಂದೇ ವಯಸ್ಸಿನ- ಗಂಡು ಹೆಣ್ಣಿನಲ್ಲಿ ಮೂಡಿದಾಗ- ಗಮನಿಸಲ್ಪಡುತ್ತದೆ!

ಇನ್ನು ವಾಸ್ತವಕ್ಕೆ ಬರುತ್ತೇನೆ!

ನಾನೊಬ್ಬ ಕಥೆಗಾರ! ಕಥೆಗಾರನ ಹೊರತಾಗಿಯೂ...., ನನಗೆ ಎಷ್ಟೋ ಗೆಳೆಯರಾಗಿದ್ದಾರೆ! ಅಮ್ಮಂದಿರಾಗಿದ್ದಾರೆ! ಗೆಳತಿಯರು- ಸಹೋದರಿಯರಾಗಿದ್ದಾರೆ! ಅಪ್ಪಂದಿರ ಸ್ಥಾನವನ್ನೂ ಕೆಲವರು ಪಡೆದುಕೊಂಡಿದ್ದಾರೆ! ಪರಸ್ಪರ ಸಹೋದರರು ಅನ್ನಿಸಿಕೊಂಡಿದ್ದೇವೆ....!

ಹಾಗೆಯೇ..., ಕೆಲವರೊಂದಿಗಿನ ಒಡನಾಟ ಪ್ರೇಮಕ್ಕೂ ತಿರುಗಿದೆ!

ಪ್ರತಿ ಹೆಣ್ಣಿಗೂ ನಾನು ನನ್ನ ದೃಷ್ಟಿಕೋನವನ್ನು ಸ್ಪಷ್ಟಪಡಿಸುತ್ತೇನೆ- ನಾನೊಬ್ಬಳೇನಾ ಅಥವಾ...? ಅನ್ನುವ ಅವಳ ಪ್ರಶ್ನೆಯಿಂದಲೇ....!

ನನಗೆ ಯಾವ ಸಮಯದಲ್ಲಿ ಯಾರಲ್ಲಿ ಪ್ರೇಮ ಮೂಡುತ್ತದೋ ನನಗೇ ತಿಳಿಯುವುದಿಲ್ಲ!

ಪ್ರತೀ ಹೆಣ್ಣು ಭದ್ರನಿಗೆ ಒಂದೇ...! ಆ ಸ್ಥಾನದಲ್ಲಿರುವವರ ಪ್ರತಿಸ್ಪಂದನೆಗೆ ಅನುಗುಣವಾಗಿ ನಮ್ಮ ನಡುವಿನ ಗಾಢತೆ ನಿಶ್ಚಯಿಸಲ್ಪಡುತ್ತದೆ!

ಕಾಮದ ವಾಸನೆಯೇ ಇಲ್ಲದ ಅನುಭಾವ- ಅನುಭೂತಿಗಳನ್ನೂ ಅನುಭವಿಸಿದ್ದೇನೆ...!

ಕೆಲವೊಮ್ಮೆ ಪ್ರೇಮ ಕಾಮಕ್ಕೂ ಹೋಗುತ್ತದೆ! ಪ್ರೇಮದೊಂದಿಗೆ..., ಪರಸ್ಪರ ಗಾಢವಾದ ನಂಬಿಕೆಯಿಲ್ಲದೆ ಕಾಮ ನಡೆಯುವುದಿಲ್ಲ- ಕಾಮವೇ ಅಗತ್ಯವಾದ ಹೊರತು!!

ಕೆಲವರಿಗೆ ಆಗ ಜ್ಞಾನೋದಯವಾಗುತ್ತದೆ!

ನೀನು ಬೇರೆ ಹೆಣ್ಣಿನೊಂದಿಗೂ ಕಾಮಿಸಬಲ್ಲೆಯಾ?” ಅನ್ನುವುದರಿಂದ ಪ್ರಾರಂಭವಾಗುತ್ತದೆ ಸಮಸ್ಯೆ!

ಹೌದು!” ಅನ್ನುತ್ತೇನೆ.

ನೀನು ನನಗೆ ಮೋಸ ಮಾಡಿದೆ!” ಅನ್ನುತ್ತಾಳೆ! ನಾನು ಕಣ್ಣು ಕಣ್ಣು ಬಿಡುತ್ತೇನೆ!

ಇಲ್ಲಿ ಸಮಸ್ಯೆ..., ನನ್ನ ಅವಳ ಪ್ರೇಮವಲ್ಲ! ಅವಳಮೇಲಿನ ನನ್ನ ಪ್ರೇಮ- ಇನ್ನೊಬ್ಬಳಮೇಲೂ ಅನ್ನುವುದು!

ಮುಂಚೆಯೇ ತಿಳಿದಿರಲಿಲ್ಲವೇ...?

ತಿಳಿದಿತ್ತು!

ಎಲ್ಲಾ ಹೆಣ್ಣೂ ಒಂದೇ ಅಂದಮೇಲೆ...., ನನ್ನ ಅಸ್ಮಿತೆಯೇನು?” ಅನ್ನುತ್ತಾಳೆ!

ನೀನು- ನೀನೇ...! ನಿನಗೆ ಪ್ರತ್ಯೇಕವಾದ ಹೃದಯವಿದೆ! ಮಿದುಳಿದೆ! ಭಾವನೆಗಳಿದೆ! ನನ್ನ ನಿನ್ನ ಮಧ್ಯೆ ನಾನು ನೀನಲ್ಲದೆ ಬೇರೆ ಯಾರೂ ಇಲ್ಲ! ಇದೊಂದು ಅನುಭೂತಿ! ನಿನ್ನಲ್ಲಿನ ನನ್ನ ಪ್ರೇಮ ಸುಳ್ಳೆ?” ಅನ್ನುತ್ತೇನೆ!

ಇದು ತಪ್ಪು!” ಅನ್ನುತ್ತಾಳೆ!

ಯಾಕೆ?”

ಯಾಕೆ ಅಂದರೆ....? ನಾನಿದ್ದೂ ನಿನಗೆ ಬೇರೊಬ್ಬರಲ್ಲಿ ಪ್ರೇಮ ಹುಟ್ಟುವುದೆಂದರೆ...?” ಅನ್ನುತ್ತಾಳೆ.

ರೂಕ್ಷವಾಗಿ ನನ್ನ ಪ್ರಶ್ನೆ ಚಿಮ್ಮುತ್ತದೆ....,

ಇಲ್ಲಿ ಸಮಸ್ಯೆ ಪ್ರೇಮವೋ ಕಾಮವೋ? ಹೋಗಲಿ..., ನಮ್ಮ ಪ್ರೇಮವನ್ನು ಪ್ರಪಂಚದ ಮುಂದೆ ಒಪ್ಪಿಕೊಳ್ಳಬಲ್ಲೆಯಾ?”

ಸ್ತಂಭಿಸುತ್ತಾಳೆ! ಗೊಂದಲಗೊಳ್ಳುತ್ತಾಳೆ! ಈ ವಾಸ್ತವವನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ! ಪ್ರಪಂಚದ ಮುಂದೆ ಒಪ್ಪಲಾಗದ ಅವಳ ಪ್ರೇಮ ಪ್ರೇಮವೇ....?

ಹೌದು.... ಅದು ಪ್ರೇಮವೇ...! ತನ್ನ ಮನಸ್ಸಿಗೆ ಅನುಗುಣವಾದ ವ್ಯಕ್ತಿಯೊಂದಿಗೆ ಮಾತ್ರ ಸಾಧ್ಯವಿರುವ ಪ್ರೇಮ! ಕಾಮ ನಡೆಯದೇ ಇದ್ದಿದ್ದರೂ ಆ ಭಾವ ಭಾವವೇ...! ಕಾಮ ನಡೆದ ನಂತರ- ಶುರುವಾಯಿತು ಸಮಸ್ಯೆ!

ಅಲ್ಲವಾ...? ಭದ್ರನ ಪ್ರೇಮ ಅವಳೊಬ್ಬಳಿಗೆ ಮೀಸಲಿರಬೇಕು! ಅವಳಿಗೆ ಅನುಗುಣವಾಗಿ!

ಬೇರೆಕಡೆಯೂ ಅದು ಪ್ರಕಟವಾಯಿತೋ... ಭದ್ರ ದುಷ್ಟಪಾತ್ರನಾಗುತ್ತಾನೆ!

ಇದು ಕಾಮ ನಡೆದವರ ಮಾತ್ರ ಸಮಸ್ಯೆಯಲ್ಲ.... ಭೇಟಿಯೇ ಆಗದವಳ ಸಮಸ್ಯೆ ಕೂಡ!

ಬರಹಗಳ ಮೂಲಕ ಪರಿಚಯವಾದವಳು 'ಅವಳು’!

ಅವಳ - ಬರಹ- ನನಗಿಷ್ಟವಾಗಿತ್ತು! ನನ್ನ ಬರಹ ಅವಳಿಗೆ! ಪರಿಚಯವಾಯಿತು! ಪರಿಚಯ ಪ್ರೇಮಕ್ಕೆ ತಿರುಗಿತು!

ಅನ್ನಿಸಿದ ಹೆಣ್ಣಿನಲ್ಲಿ ಭದ್ರ ಹೇಳುವ ಅತಿ ಸಾಮಾನ್ಯ ವಾಕ್ಯ- ಐ ಲವ್‌ಯು!” ಎಂದಿದ್ದೆ.

ಹೇಳಿಕೊ ಹೋಗು ಮಾರಾಯ! ಯಾರು ಬೇಡವೆನ್ನುತ್ತಾರೆ! ನನ್ನೊಂದಿಗೆ ಹೀಗೇ ಇರು ಸಾಕು!” ಎಂದಿದ್ದಳು.

ಅವಳನ್ನು ನೋಡಬೇಕೆನ್ನುವ ಆಸೆ ನನಗೆ! ಗಂಡ, ಮಕ್ಕಳು, ಅತ್ತೆ, ಮಾವ, ಗಂಡನ ತಮ್ಮ- ತಂಗಿ! ಸುಖೀ ಕುಟುಂಬ ಅವರದ್ದು!

ಯಾವಾಗ ಬರಲಿ?” ಎಂದೆ!

ಬೇಡವೋ....! ಭೇಟಿ ಸಾಧ್ಯವಿಲ್ಲ! ಪಂಜರದ ಗಿಳಿ ನಾನು!” ಎಂದಳು.

ಸರಿ! ಅವಳಿಗನುಸಾರವಾಗಿ- ಒಡನಾಡಿದೆ!

ಮರೆಯದಿರಿ.... ಕಥೆಗಾರ ನಾನು.... ಹೊಸಹೊಸ ಬರಹಗಳು, ಪರಿಚಯಗಳು, ಚರ್ಚೆಗಳು....!

ಅವಳಿಂದ ನಾನು ದೂರ ಹೋಗುತ್ತಿರುವ ಭಾವ ಅವಳಿಗೆ!

ಅದಕ್ಕೆ ಕಾರಣ....,

ಬೇರೆ ಹೆಣ್ಣಿನೊಂದಿಗಿನ ನನ್ನ ತೆರೆದ ಮನದ ಚರ್ಚೆಗಳು... ಬೇರೆ ಹೆಣ್ಣಿನೊಂದಿಗೆ ನಾನು ದೈಹಿಕವಾಗಿ ಸೇರಿರಬಹುದು ಅನ್ನುವ ಸಂದೇಹ!!

ಮತ್ತದೇ ಸಮಸ್ಯೆ!

ಶ್ರೇಷ್ಠತೆ...!

ನಾನಿದ್ದೂ...., ಅನ್ನುವುದು!

ಅವಳ ಬದುಕಿಗೆ ಸಂತೋಷವನ್ನು ನೀಡಿದ್ದೇನೆ! ಅವಳ ಬದುಕು ಮತ್ತಷ್ಟು ಸುಧಾರಿಸಲು ಬೇಕಾದ ಸಲಹೆಗಳನ್ನು ನೀಡಿದ್ದೇನೆ! ಪ್ರತಿ ಕ್ಷಣ ಹೀಗೆಯೇ ಇರುತ್ತೇನೆ ಅನ್ನುವ ನಂಬಿಕೆಯನ್ನೂ ಕೊಟ್ಟಿದ್ದೇನೆ- ಇರುತ್ತೇನೆ ಕೂಡ!

ಆದರೆ...,

ಇದು ಇಲ್ಲಿಗೆ ನಿಲ್ಲುವುದಿಲ್ಲ!

ಅವಳಿಗೆ ಅವಳೊಂದಿಗಿನ ನಾನು ಹೇಗೆ ಅನ್ನುವುದಕ್ಕಿಂತ ಇತರರೊಂದಿಗಿನ ನಾನು ಹೇಗೆ ಅನ್ನುವುದೇ ಮುಖ್ಯ!

ಅದಕ್ಕೇ..., ಪರಿಚಯವಾಗುವಾಗಲೇ ಪ್ರತಿ ಹೆಣ್ಣಿಗೂ- ದಯವಿಟ್ಟು ನನ್ನೊಂದಿಗೆ ಯಾರೂ ಸೇರಬೇಡಿ! ಕಳಂಕ ತಟ್ಟುತ್ತದೆ ಅನ್ನುತ್ತೇನೆ!

ಅದು ಹೆಣ್ಣಿನ ಮೇಲಿರುವ ನನ್ನ ಕನ್ಸರ್ನ್!

ಯಾರೂ ಸೇರದಿದ್ದಮೇಲೆ ಸಮಸ್ಯೆಯೇನು....?

ನಾನೂ ನೆಮ್ಮದಿ! ನನ್ನೊಂದಿಗೆ ನಾನು ಹೆಚ್ಚು ಸಮಯ ಕಳೆಯಬಹುದು...!

ಆದರೆ..., ಪ್ರತಿ ಹೆಣ್ಣಿನೊಂದಿಗಿನ ನನ್ನ ವ್ಯಕ್ತಿತ್ವ- ಅವರದನ್ನು ವೈಯಕ್ತಿಕವಾಗಿ ತೆಗೆದುಕೊಂಡಷ್ಟು ಕಾಲ- ನನ್ನಿಂದ ಬಿಟ್ಟು ಹೋಗದಿರುವಂತೆಯೇ ಮಾಡುತ್ತದೆ!

ಇಲ್ಲಿ..., ಹೆಣ್ಣು ಸರಿ ಅನ್ನುವುದಾದರೆ..., ನಾನೂ ಸರಿ! ನಾನು ತಪ್ಪು ಅನ್ನುವುದಾದರೆ...., ಹೆಣ್ಣೂ ತಪ್ಪು!

ನಾನು ಕೆಟ್ಟವನಲ್ಲ! ನನ್ನದೇ ಆದ ವ್ಯಕ್ತಿತ್ವವಿದೆ! ಆಕರ್ಷಕವಾದ ದೇಹಸೌಷ್ಟವವಿದೆ! ನಂಬಿಕೆಗೆ ಅರ್ಹವಾದ ಮನಸ್ಸಿದೆ! ಖಂಡಿತಾ ಹೆಣ್ಣು ನನ್ನ ಕಡೆ ಆಕರ್ಷಿತಳಾಗುತ್ತಾಳೆ- ನಾನು ಹೆಣ್ಣಿನಕಡೆ!

ಅತಿ ಮುಖ್ಯವಾಗಿ...., ಹೆಣ್ಣೆಂದರೆ ನನಗೆ ಪ್ರಾಣ!

*

ಓದುವುದು ಮುಗಿಸಿ ತಲೆಯೆತ್ತಿ ನೋಡಿದಳು ಭಾಮೆ. ಏನು ಅನ್ನುವಂತೆ ಹುಬ್ಬು ಕುಣಿಸಿದೆ!

ಐ ಲವ್‌ಯು!” ಎಂದಳು.

ಅರ್ಥವಾಯಿತಾ....? ಇಲ್ಲಿ- ಅವಳ ಮೇಲಿರುವ ನನ್ನ ಪ್ರೇಮಕ್ಕೆ ಯಾವುದೇ ಪ್ರಾಶಸ್ತ್ಯವನ್ನು ಅವಳು ಕೊಡುತ್ತಿಲ್ಲ! ನಿನ್ನ ಮೇಲಿನ ನನ್ನ ಪ್ರೇಮ ಅವಳಿಗೆ ಸಮಸ್ಯೆ! ಈಗ ನೀನೇ ಹೇಳು..., ನಿನ್ನಮೇಲಿನ ನನ್ನ ಪ್ರೇಮ ಸುಳ್ಳೇ?” ಎಂದೆ.

ಆದರೂ ಈ ತತ್ತ್ವನ್ನು ಅರಗಿಸಿಕೊಳ್ಳುವುದು ಕಷ್ಟ!” ಎಂದಳು.

ತತ್ತ್ವವಲ್ಲ! ವಾಸ್ತವ!” ಎಂದೆ.

ಆದರೂ.... ಅವಳ ಪ್ರೇಮ...!”

ನಿನ್ನದು ಪ್ರೇಮವಲ್ಲವೇನೇ ಭಾಮೆ? ನೀನೇಕೆ ನನ್ನ ಬಿಟ್ಟು ಹೋಗುವುದಿಲ್ಲ- ನಿನ್ನಮೇಲಿರುವ ಅದೇ ಪ್ರೇಮ ಇನ್ನೊಬ್ಬರ ಮೇಲಿದ್ದರೂ...? ಅವಳೇಕೆ ಹೋಗುತ್ತಾಳೆ?”

ಅರ್ಥವಾಯಿತು ಬಿಡು!” ಎಂದಳು.

*

ವಾ! ಹಾಗಿದ್ದರೆ ನೀನು ನನಗೆ ಹೇಳುವ ಮಾತುಗಳು ನನಗೊಬ್ಬಳಿಗೆ ಅನ್ವಯಿಸುವುದಿಲ್ಲ! ಹೆಣ್ಣು ವರ್ಗಕ್ಕೆ ಪೂರ್ತಿಯಾಗಿ ಹೇಳುವುದು ಅಂತಾಯಿತು! ಮತ್ತೆ ನನ್ನ ಅಸ್ಮಿತೆಯೇನು? ನನ್ನ ಸ್ಪೆಷಾಲಿಟಿಯೇನು?” ಎಂದಳು ಆತ್ಮಸಾಕ್ಷಿ!

ಯಾವ ಸ್ಪೆಷಾಲಿಟಿಯೂ ಇಲ್ಲ! ಇಲ್ಲಿ ನಿಯಮ ಮಾತ್ರ! ನೀನು ನನ್ನ ಆತ್ಮಸಾಕ್ಷಿ ಮಾತ್ರವಲ್ಲ- ಹೇಳಿದರೆ ಯಾರೆಂದರೆ ಯಾರೂ ಉಳಿಯುವುದಿಲ್ಲ ಎಂದು ಗೊತ್ತಿದ್ದೂ ನಿನ್ನಲ್ಲಿ ನಾನು ನಿಜವನ್ನು ಹೇಳುತ್ತಿದ್ದೇನೆಂದರೆ..., ಆ ನಿಜವನ್ನು ಒಪ್ಪಿಕೊಂಡು- ನನ್ನನ್ನು ಬಿಟ್ಟು ಹೋಗಲೇಬಾರದ...,” ಎಂದು ಅವಳ ಮುಖವನ್ನು ನೊಡಿದೆ.

ದಾರ್‌ಷ್‌ಟ್ಯ!” ಎಂದಳು!

ಅದೇ- ನಿಯಮ!” ಎಂದೆ.

Comments

  1. ಅರ್ಥವಾಗದ್ದು ಏನಿಲ್ಲ ಇದರಲ್ಲಿ.ಎಲ್ಲ ಗೊತ್ತಿದ್ದು ಪ್ರೇಮವನ್ನೋ ಕಾಮವನ್ನೊ ಆಶೀಸಿದರೆ ಅದು ಅವರ ಭಾವದ ಹೊಣೆ.ಕಾರಣ ಯಾರಾದರೂ ಆಗಬಹುದು ಆ ಸ್ಥಾನದಲ್ಲಿ. ಗೊತ್ತಿಲ್ಲದೇ ಸುಳ್ಳು ಹೇಳಿ ರಮಿಸುವುದು ತಪ್ಪು ಪ್ರೇಮವನ್ನಾಗಲಿ ಕಾಮವನ್ನಾಗಲಿ.ಆದರೆ ಕಾಮವಿಲ್ಲದ ಮೋಹವಿಲ್ಲದ ಪ್ರೇಮವೇ ವಿಶ್ವಜನನಿಯ ಪ್ರೇಮ ಕಾಮದಿಂದ ಕೂಡಿದ್ದು ಅಲ್ಲ.

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!