ಲೀನ!
ಲೀನ!
೧
ಪುರಾತನ ಕಾಲ!
ಕಾಡು!
ಜನಸಂಚಾರವಿಲ್ಲ!
ದಿಕ್ಕುತಪ್ಪಿ ಎರಡು ಮೂರು ದಿನದಿಂದ ಅಲೆಯುತ್ತಿದ್ದೇನೆ!
ದಿಕ್ಕುತಪ್ಪಿ ಅನ್ನಲಾಗದು! ಹೊರಟಿದ್ದೇ ದಿಕ್ಕು ದೆಸೆ ಇಲ್ಲದೆ- ಗುರಿಯಿಲ್ಲದೆ!
ಕಾಡು ಮೃಗಗಳಿಗಾದರೂ ಆಹಾರವಾದರೆ ಒಂದು ಸಾರ್ಥಕತೆ!
ಆದರೆ ಯಾಕೋ… ಎಲ್ಲರೂ- ಎಲ್ಲವೂ ಮುನಿಸಿಕೊಂಡ ಭಾವ!
ಕುರುಚಲು ಗಿಡಗಳನ್ನು ಸರಿಸಿ ಮತ್ತಷ್ಟು ಮುಂದಕ್ಕೆ ಹೋದಾಗ..,
ಒಂದು ಗುಡಿ- ಪಾಳು ಗುಡಿ!
ದಟ್ಟಾರಣ್ಯದ ನಡುವೆ ಪಾಳು ಗುಡಿ!
ಎಲ್ಲಿ ಅಗೆದರೆ ಏನು ರಹಸ್ಯವಿದೆಯೋ ಈ ಭೂಮಿಯಲ್ಲಿ!
ಕಳೆದು ಹೋದ- ಗತ- ಕಾಲಕ್ಕೆ ಹೋಲಿಸಿದರೆ… ದಟ್ಟಾರಣ್ಯವಿದ್ದಕಡೆ ಮಹಾ ಸಾಮ್ರಾಜ್ಯವಿದ್ದಿರಲಿಕ್ಕೂ ಸಾಕು!
ಎಷ್ಟೆಷ್ಟು ನಾಗರೀಕತೆಗಳು…
ಮನುಷ್ಯನ ಅರಿವಿನ ಮಿತಿ ಅವನಿಗಿಲ್ಲ!
ಎಲ್ಲವೂ ತಿಳಿದುಕೊಂಡವನೆಂಬ ಅಹಂಕಾರ!
ಆಶ್ಚರ್ಯವೇನೂ ಆಗಲಿಲ್ಲ- ಗುಡಿಯ ಸಮೀಪಕ್ಕೆ ಬಂದೆ.
ಅದೆಷ್ಟು ಸಾವಿರ ವರ್ಷ ಹಳೆಯದೋ…!
ಆದರೂ ಸ್ವಚ್ಛವಾಗಿದೆ- ಯಾರೋ ಇರುವ ಸೂಚನೆ!
ಪಾವಿತ್ರ್ಯ ಅಂದರೇನು?
ಇದೇ!
ಪೂರ್ತಿಯಾಗಿ ಕಲ್ಲಿನಿಂದ- ಕೆತ್ತನೆಗಳಿಂದ ಕೂಡಿದ ದೇವಸ್ಥಾನ!
ಇದು ಮಾನವ ನಿರ್ಮಿತವಾ?
ಒಳಕ್ಕೆ ನಡೆದೆ!
ಹೊರಗಿನಿಂದ ಗುಡಿಯಂತೆ ಕಂಡರೂ ಒಳಗೆ- ಗುಹೆ!
ಕಣ್ಣು ಕತ್ತಲೆಗೆ ಹೊಂದಿಕೊಂಡಾಗ ತಿಳಿಯಿತು..,
ಗರ್ಭಗುಡಿಯ ಬಾಗಿಲು ಹಾಕಿದೆ!
ಅಲ್ಲಿಯೇ ಕುಳಿತೆ.
ಯಾರಾದರೂ ಬರಬಹುದೆ?
ಅಸಾಧ್ಯ ಅನ್ನಿಸಿತು!
ಆಯಾಸದಿಂದ ನಿದ್ರೆಗೆ ಜಾರಿದೆ.
ಘಲ್ ಘಲ್ ಶಬ್ಧ!
ಎಚ್ಚರಗೊಂಡವನಿಗೆ ವರ್ತಮಾನದ ಅರಿವಾಗಲು ಸ್ವಲ್ಪ ಸಮಯ ಹಿಡಿಸಿತು!
ಸುತ್ತಲೂ ನೋಡಿದೆ.
ಯಾರೂ ಇಲ್ಲ.
ಒಳಕ್ಕೆ ಬಂದ ದ್ವಾರದಲ್ಲೂ ಕತ್ತಲಾವರಿಸುತ್ತಿತ್ತು!
ಹೊರಬಂದೆ.
ಸಂಧ್ಯಾಸಮಯ.
ಪೂರ್ವದಂಚಿನಲ್ಲಿ ಸೂರ್ಯ ಮುಳುಗಿದ ಸೂಚನೆಯಾಗಿ ಕೆಂಪು ಹೊದಿಕೆ!
ಕತ್ತಲು ಬೆಳಕಿನ ಆಟದಲ್ಲಿ ದಟ್ಟಾರಣ್ಯದ ಮಧ್ಯೆ- ಕಲ್ಪನೆಯಲ್ಲಿ ಕುಳಿತಿದ್ದೇನೆ!
ಪುನಹ ಘಲ್ ಘಲ್ ಶಬ್ಧ!
ಗುಡಿಯನ್ನೊಮ್ಮೆ ಸುತ್ತಿ ಬಂದೆ.
ಯಾರೂ ಕಾಣಿಸಲಿಲ್ಲ!
ಅಸ್ಪಷ್ಟವಾಗಿ ಶಬ್ದವಂತೂ ಕೇಳಿಸುತ್ತಿದೆ!
ಸೂಕ್ಷ್ಮವಾಗಿ ಆಲಿಸಿದೆ.
ಶಬ್ದ- ಗರ್ಭಗುಡಿಯಿಂದ ಬರುತ್ತಿದೆ!
ಒಳಕ್ಕೆ ಬಂದು- ಬಾಗಿಲನ್ನು ತಳ್ಳಿದೆ.
“ಇರು ಪುತ್ರ- ಬಂದೆ!” ಎಂದರು ದೇವಿ!
ಬಾಗಿಲು ತೆರದುಕೊಂಡಿತು.
ಅದ್ಭುತ ಕಾಂತಿ- ಗರ್ಭಗುಡಿಯಲ್ಲಿ!
ಇರುವ ಒಂದೇ ವಿಗ್ರಹದಿಂದ ಒಬ್ಬೊಬ್ಬರಾಗಿ ಇಳಿದುಬಂದರು ದೇವಿ!
ನನಗೆ ತಿಳಿಯದ ಅದೆಷ್ಟು ಪುಣ್ಯ ಕ್ಷೇತ್ರಗಳಿವೆಯೋ…?!
ಯಾವ ದೇವೀಕ್ಷೇತ್ರಕ್ಕೆ ಹೋದರೂ ನನ್ನ ಕಣ್ಣಿಗೆ ವ್ಯತ್ಯಾಸ ಕಾಣಿಸುವುದಿಲ್ಲ!
ಹಾಗೆಯೇ ಆಯಿತು!
ವಿಗ್ರಹದಿಂದ ಇಳಿದುಬಂದ ಪ್ರತಿಯೊಬ್ಬರೂ ಮುಗುಳುನಗುತ್ತಾ ನನ್ನೆದುರು ನಿಂತಿರುವ ದೇವಿಯಲ್ಲಿ ಲೀನವಾದರು!
ನಾನು- ಧನ್ಯನಾದೆ!
೨
“ಒಂದೇ ಜನ್ಮದಲ್ಲಿ ಸಾಧಿಸಬಹುದಾದ ಗುರಿ- ಗುರಿಯಲ್ಲ!” ಎಂದರು ದೇವಿ.
“ನನ್ನ ಗುರಿ ಈ ಜನ್ಮದಲ್ಲಿ ಸಾಧ್ಯವೇ ದೇವಿ?”
“ಗುರಿಯ ಅಡಿಪಾಯವೂ ಸಾಧ್ಯವಿಲ್ಲ! ಒಂದು ಕಲ್ಪನೆಯನ್ನಷ್ಟೇ ಪ್ರಪಂಚಕ್ಕೆ ಕೊಡಬಲ್ಲೆ ನೀನು!”
“ಆ ಗುರಿಯನ್ನು ಸಾಧಿಸುವಷ್ಟು ಜನ್ಮಗಳು ನನಗೆ ಬೇಡ ತಾಯಿ!”
“ಏನಂದುಕೊಂಡಿದ್ದೀಯ? ನೀನು ಮಾತ್ರ ನನ್ನ ಮಗ- ಈ ಗುರಿ ನಿನಗೆ ಮಾತ್ರ ಎಂದೇ?”
ಚಂಚಲಗೊಂಡೆ! ಒಂದಿಷ್ಟು ಅಸೂಯೆ ಮನವನ್ನು ಹಾದು ಹೋಗಿದ್ದು ನಿಜ!
ಆದರೆ… ದೇವಿಯ ಮಾತಿನಲ್ಲಿ- ಗುರಿ ಸಾಧಿಸುವವರೆಗೆ ಜನ್ಮವೆತ್ತಬೇಕಿಲ್ಲ ಅನ್ನುವ ಸೂಚನೆ ಕಾಣಿಸಿತು! ಅದು ನೆಮ್ಮದಿ!
ಅಲ್ಲವಾ…? ನಾನು ಮಾತ್ರ ದೇವೀಪುತ್ರ ಅಂದುಕೊಂಡರೆ ಪ್ರಪಂಚದಲ್ಲಿರುವ ಉಳಿದ ಜೀವ-ನಿರ್ಜೀವಜಾಲ ಏನು? ಅನ್ನಿಸಿತು.
ಮುಗುಳುನಕ್ಕರು ದೇವಿ!
“ಪುತ್ರಾ..! ನಿನ್ನ ವ್ಯಥೆಗೆ ಕಾರಣವಿಲ್ಲ! ಹೇಗೆ ಪ್ರತಿಯೊಬ್ಬರಲ್ಲಿ ನನ್ನನ್ನು ಕಾಣುತ್ತೀಯೋ ಹಾಗೆಯೇ ನನಗೆ ಪ್ರತಿಯೊಬ್ಬರೂ!”
“ಮತ್ತೆ ಏಕೆ ದೇವಿ ಇಷ್ಟು ತಾರತಮ್ಯ?”
“ಅದು ನಿಯಮ! ಮನುಷ್ಯ ತನ್ನ ಮಿದುಳನ್ನು ಹೇಗೆ ಬಳಸುತ್ತಾನೆ ಅನ್ನುವುದರಮೇಲೆ ಈ ತಾರತಮ್ಯವಿದೆ!”
“ತಾರತಮ್ಯವಿಲ್ಲದಂತೆ ಮಿದುಳನ್ನು ಬಳಸುವಂತೆ ನೀವೇ ಮಾಡಬಹುದಲ್ಲವೇ ದೇವಿ?”
“ಅದು ಹೇಗೆ ಸಾಧ್ಯ? ಪ್ರಪಂಚದ ಪ್ರತಿಯೊಂದೂ ನಿಯಮಕ್ಕೆ ಬದ್ಧವಾಗಿರುವಂತೆ- ಮನುಷ್ಯ ಜೀವನವೂ ನಿಯಮಕ್ಕೆ ಬದ್ದವಾಗಿದೆ! ಅಲ್ಲೋ ಇಲ್ಲೋ ಕೆಲವು ಮಹಾನುಭಾವರು ತಾರತಮ್ಯ ಇಲ್ಲದಂತೆ ಬದುಕಲು ದಾರಿದೀಪವಾಗುತ್ತಾರೆ! ಆದರೆ… ಅದು ತಾತ್ಕಾಲಿಕ! ಮನುಷ್ಯ ತನ್ನ ಅಂಗಾಂಗಳನ್ನು ಆಯಾಚಿತವಾಗಿ ಬಳಸಿಕೊಳ್ಳುವಂತೆ- ಮಿದುಳನ್ನೂ ಹೇಗೆ ಬಳಸಬೇಕೆನ್ನುವುದು ಅವನ ವಿವೇಚನೆಗೆ ಬಿಟ್ಟಿದ್ದು!”
“ಏನೋ ಗೊಂದಲ ದೇವಿ!”
“ದೇವರೇ ಮನುಷ್ಯನ ಮಿದುಳನ್ನು ನಿಯಂತ್ರಿಸಬೇಕು ಅನ್ನುವುದರಲ್ಲಿ ಅರ್ಥವಿಲ್ಲವೆಂದೆ! ಅಂದರೆ- ದೇವರೇ ಬಂದು ನನ್ನ ಕೈ ಕೆಲಸ ಮಾಡುವಂತೆ ಮಾಡಬೇಕು! ಕಾಲು ನಡೆಯುವಂತೆ ಮಾಡಬೇಕು ಅನ್ನುವುದರಲ್ಲಿ ಹೇಗೆ ಅರ್ಥವಿಲ್ಲವೋ… ಹಾಗೆಯೇ… ದೇವರೇ ಪ್ರತಿಯೊಬ್ಬರ ಮಿದುಳು ವರ್ತಿಸುವಂತೆ ಮಾಡಬೇಕು ಅನ್ನುವುದರಲ್ಲಿ ಅರ್ಥವಿಲ್ಲ! ಮನುಷ್ಯನನ್ನು ಸೃಷ್ಟಿಸುವುದಷ್ಟೇ ದೇವರ ಕೆಲಸ! ಹೇಗೆ ಬದುಕಬೇಕು- ಮಿದುಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತೀರ್ಮಾನಿಸುವವನು ಮನುಷ್ಯನೇ..!”
“ಹಾಗಿದ್ದರೆ ನನ್ನ ಧರ್ಮವೇನು ದೇವಿ? ನಾನು ಸರಿಯಾದ ದಾರಿಯಲ್ಲಿದ್ದೇನೆಯೇ? ನನ್ನ ಗುರಿ ಸರಿಯಿದೆಯೇ…?”
“ನಿನ್ನ ಮುಂದಿನ ಪ್ರಶ್ನೆ ನನಗೆ ತಿಳಿಯಿತು…! ಪ್ರಪಂಚವನ್ನೇ ಪ್ರೇಮಿಸಬೇಕು- ಒಂದು ಪ್ರೇಮ ಪ್ರಪಂಚವನ್ನೇ ಸೃಷ್ಟಿಸಬೇಕು ಅಂದುಕೊಂಡಿದ್ದರೂ ಯಾರೊಬ್ಬರೂ ನಿನ್ನೊಂದಿಗೆ ಯಾಕೆ ಉಳಿಯುತ್ತಿಲ್ಲ ಅನ್ನುವ ಚಿಂತೆ- ಅಲ್ಲವೇ?”
“ಹೌದು! ಅದರಲ್ಲೂ ಹೆಚ್ಚಾಗಿ- ಹೆಣ್ಣು!”
“ಯಾಕೆ?”
“ಅದು ನನ್ನ ಪ್ರಶ್ನೆ ದೇವಿ!”
“ಇದು ವ್ಯಕ್ತಿಗತ! ಪುರಾತನ ಕಾಲದಿಂದಲೂ ಗಂಡು ಹೆಣ್ಣಿನ ದೈಹಿಕ ಮತ್ತು ಮಾನಸಿಕ ರಚನೆಯಲ್ಲಿ ವ್ಯತ್ಯಾಸವಿದೆ- ವೈರುಧ್ಯವಿದೆ! ಇಡೀ ಪ್ರಪಂಚವೇ ತನ್ನ ಸ್ವಂತ ಅಂದುಕೊಳ್ಳುತ್ತಾನೆ ಗಂಡು! ಆ ಗಂಡು ತನ್ನೊಬ್ಬನ ಸ್ವಂತ ಅಂದುಕೊಳ್ಳುತ್ತಾಳೆ ಹೆಣ್ಣು!”
“ಅರ್ಥವಾಯಿತು! ಹಾಗಿದ್ದರೆ ಪ್ರಪಂಚ ಒಂದು ನಾಟಕಶಾಲೆ ಅಲ್ಲವೇ ದೇವಿ?”
“ಹೌದು! ಪ್ರತಿಯೊಬ್ಬರೂ ಎರಡು!”
“ಯಾಕೆ ಹಾಗೆ? ನಿಜಕ್ಕೂ ನನ್ನ ಕಲ್ಪನೆಯನ್ನಾದರೂ ಪ್ರಪಂಚಕ್ಕೆ ಕೊಡಬಲ್ಲೆನೇ ಅನ್ನಿಸುತ್ತಿದೆ!”
“ಪುನಹ ನಿನ್ನ ಚಿಂತನೆಯ ದಿಕ್ಕು ತಪ್ಪುತ್ತಿದೆ! ಬಿಟ್ಟು ಹೋಗುತ್ತಿರುವವರು ಯಾರು? ಯಾಕೆ? ಇದಕ್ಕೆ ಉತ್ತರ ಬೇಕೆಂದರೆ… ಒಂದೇ ವಿಗ್ರಹದಿಂದ ಹೊರಬಂದ ಹಲವು ನನ್ನನ್ನು ನೆನೆಪಿಸಿಕೋ! ಏನು ನಿನ್ನ ಪ್ರೇಮ ಅನ್ನುವುದನ್ನು ಗೊಂದಲವಿಲ್ಲದೆ ವ್ಯಕ್ತಪಡಿಸುವವನಾಗಬಲ್ಲೆ!”
ಕಣ್ಣು ಮುಚ್ಚಿದೆ!
ನಿದ್ದೆ!
ನಿದ್ದೆಯೇ?
ಚಿಂತನೆ!!
೩
ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಮೂಲ ವ್ಯಕ್ತಿತ್ವವಿರುತ್ತದೆ! ವ್ಯಕ್ತಿಗಳಿಗೆ ಅನುಸಾರವಾಗಿ ಅದು ಬದಲಾದಾಗ- ಎರಡು ನಾವು ರೂಪುಗೊಳ್ಳುತ್ತೇವೆ!
ನನ್ನ ತಪ್ಪು ಅರಿವಾಗಲು ನನಗೆ ಇಷ್ಟು ಕಾಲ ಬೇಕಾಯಿತು!
ಎಲ್ಲರನ್ನೂ ಇಷ್ಟಪಡುವುದು ನನ್ನ ಮೂಲ ವ್ಯಕ್ತಿತ್ವ!
ಯಾರೂ ನನಗೆ ಹೆಚ್ಚಲ್ಲ ಕಡಿಯಮೆಯಲ್ಲ!
ಮತ್ತೇನು ಸಮಸ್ಯೆ?
ಒಟ್ಟಿಗೆ ಇದ್ದು ಒಡನಾಟ ಹೆಚ್ಚಿರುವ ಗೆಳೆಯನಿಗೆ ನಾನು ಹೇಳುತ್ತೇನೆ..,
“ಗೆಳೆಯ… ನೀನೇ ನನ್ನ ಅತ್ಯುತ್ತಮ ಗೆಳೆಯ!”
ಹಾಗಿದ್ದರೆ ಉಳಿದವರು?
ಗೆಳೆಯರೇ…
ಇಲ್ಲಿಯೇ- ಒಂದೇ ವಿಗ್ರಹದಿಂದ ಇಳಿದುಬಂದ ಹಲವು ದೇವಿಯ ಅನ್ವಯ!
ಯಾವ ದೇವಸ್ಥಾನಕ್ಕೆ ಹೋದರೂ ನನಗೆ ದೇವಿ ಒಂದೇ ರೀತಿಯಲ್ಲಿ ಕಾಣುತ್ತಾರೆ!
ಎಂಟು ಕಿಲೋಮೀಟರ್ ದೂರವಿರುವ ಚಾಮುಂಡಿ ದೇವಸ್ಥಾನಕ್ಕೆ ಪದೇ ಪದೇ ಹೋಗುತ್ತೇನೆ! ನಾನೂರು ಕಿಲೋಮೀಟರ್ ದೂರವಿರುವ ಮೂಕಾಂಬಿಕ ದೇವಸ್ಥಾನಕ್ಕೆ ಹೋಗಬಲ್ಲೆನೆ?!
ಹಾಗೆಂದು ಚಾಮುಂಡಿ ನನಗೆ ಶ್ರೇಷ್ಠ- ಮೂಕಾಂಬಿಕ ಅಲ್ಲ- ಅನ್ನಬಹುದೇ?
ಗೆಳೆತನದಲ್ಲಾದರೂ ಅಷ್ಟೇ…!
ಇನ್ನು ಇದನ್ನು ಹೆಣ್ಣಿಗೆ ಅನ್ವಯಿಸಿದರೆ..!
ಪ್ರತಿ ಹೆಣ್ಣಿನಲ್ಲೂ ನನಗೆ ದೇವಿ ಕಾಣಿಸುತ್ತಾರೆ!
ಆದರೆ ಆ ಹೆಣ್ಣಿಗೋ…?
ಅಲ್ಲೇ ಸಮಸ್ಯೆ..! ಪ್ರತಿಯೊಬ್ಬರ ಮಿದುಳು- ವೈಯಕ್ತಿಕ!
ಹೆಣ್ಣಿನೊಂದಿಗೆ ನಾನು ಒಡನಾಡುವಾಗ ಅವಳ ನಂಬಿಕೆ- ಅವಳೊಂದಿಗೆ ಮಾತ್ರ ನಾನು ಹಾಗೆ- ಎಂದು!
ಒಂದು ಹಂತದವರೆಗೆ ಅದು ನಿಜ ಕೂಡ! ಅವಳೂ ನನ್ನೊಂದಿಗೆ ಹೇಗೆ ಒಡನಾಡುತ್ತಾಳೆ ಅನ್ನುವುದರಮೇಲೆ ಅವಳೊಂದಿಗಿನ ನನ್ನ ಭಾವಾನುಭೂತಿಯಿದೆ!
ಆದರೆ ಮೂಲ ನಾನು ಅನ್ನುವುದು ಎಲ್ಲರೊಂದಿಗೂ ಹೀಗೆಯೇ ಅಲ್ಲವಾ?
ಪ್ರತಿಯೊಬ್ಬರೂ ವ್ಯಕ್ತಿಗತ!
ಪ್ರತಿಯೊಬ್ಬರೊಂದಿಗಿನ ನಾನು- ನಾನೇ!
ಪ್ರತಿಯೊಬ್ಬರಲ್ಲೂ ನನಗೆ ದೇವಿಯೇ…!
ಪದೇ ಪದೇ ಚಾಮುಂಡಿಯ ದರ್ಶನಕ್ಕೆ ಹೋಗುವುದರಿಂದ ಅವರೇ ನನಗೆ ಶ್ರೇಷ್ಠ ಅನ್ನುವ ಛಾಪು ಮೂಡುತ್ತದೆ!
ಮೂಕಾಂಬಿಕೆ ಚಾಮುಂಡಿಯಷ್ಟೇ ಹತ್ತಿರವಿದ್ದಿದ್ದರೆ?
ಅದನ್ನು ಚಾಮುಂಡಿ ಒಪ್ಪದಿದ್ದರೆ ಹೇಗೆ?
೪
“ಇನ್ನೊಂದು ತಪ್ಪೂ ಇದೆ ಪುತ್ರ!” ಎಂದರು ದೇವಿ.
ಕುತೂಹಲದಿಂದ ನೋಡಿದೆ.
“ಹೆಣ್ಣಿನೊಂದಿಗಿನ ನಿನ್ನ ಪ್ರೇಮವನ್ನು ವ್ಯಕ್ತಪಡಿಸುವಾಗ- ಅದು ಕಾಮಕ್ಕೆ ಹೊರತು ಅನ್ನುವುದನ್ನು ಸ್ಪಷ್ಟಪಡಿಸಬೇಕು!”
“ಅಲ್ಲವೇನು? ಯಾವ ಹೆಣ್ಣಿನೊಂದಿಗಿನ ನನ್ನ ಪ್ರೇಮ ಕಾಮ ಪ್ರೇರಿತ? ಕಾಮ- ವ್ಯಕ್ತಿಗತ! ಅಲ್ಲದೆ ನಾನು ಪ್ರೇಮವನ್ನು ವ್ಯಕ್ತಪಡಿಸುವುದಿಲ್ಲ! ಅದು ತಾನಾಗಿ ರೂಪುಗೊಳ್ಳುವುದು! ದೇವಿಯ ಕಾರಣವಾಗಿ!”
“ನಿನ್ನ ಪ್ರೇಮ ಕಾಮ ಪ್ರೇರಿತವಲ್ಲ! ಕಾಮ ವ್ಯಕ್ತಿಗತ- ನಿಜವೇ! ಪ್ರತಿಯೊಬ್ಬರಲ್ಲೂ ನೀನು ನನ್ನನ್ನೇ- ದೇವಿಯನ್ನೇ ಕಾಣುತ್ತೀಯ! ಆದರೆ ಅದನ್ನು ಹೆಣ್ಣು ಒಪ್ಪುವುದಿಲ್ಲ- ಸಮಾಜವೂ! ಅದು ಪ್ರತಿಯೊಬ್ಬರ ಅರಿವಿಗೆ ನಿಲುಕುವಂತೆ ಮಾಡುವುದು ನಿನ್ನ ಕರ್ತವ್ಯ!”
“ಅಲ್ಲ ದೇವಿ… ನನಗರ್ಥವಾಗದಿರುವುದು… ಯಾವೊಂದು ಹೆಣ್ಣನ್ನೂ ನಾನು ಕಾಮಕ್ಕೆ ಪ್ರೇರಿಸಿದವನಲ್ಲ! ಯಾರೊಬ್ಬರಿಗೂ ನಾನು ದ್ರೋಹ ಮಾಡಿಲ್ಲ! ಯಾವಾಗಲೂ ಒಂದು ಸಕಾರಾತ್ಮಕ ಬಲವಾಗಿ ಜೊತೆ ನಿಂತಿದ್ದೇನೆ! ಖುಷಿಯ ಹೊರತು ದುಃಖಕ್ಕೆ ಕಾರಣನಾದವನಲ್ಲ! ಅವರ ಒಳಿತಿಗೆ ಏನು ಬೇಕೋ ಅದನ್ನು ಮಾಡಿದ್ದೇನೆ! ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದೇನೆ… ಸರಿ ತಪ್ಪುಗಳ ವಿಶ್ಲೇಷಣೆ ಮಾಡಿದ್ದೇನೆ…ಯಾರಿಂದಲೂ ಯಾವ ನಿರೀಕ್ಷೆಯೂ ನನಗಿಲ್ಲ! ಆದರೆ…!”
“ಅರ್ಥವಾಯಿತು..! ಅವರಲ್ಲಿನ ನೀನು ಅವರಿಗೆ ಬೇಕಾಗಿಲ್ಲ! ಅವರು ನೋಡುವುದು ಮತ್ತೊಬ್ಬರಲ್ಲಿನ ನಿನ್ನನ್ನು!”
“ಯಾಕೆ? ಪ್ರತಿ ವ್ಯಕ್ತಿಗೂ ಅವರೊಂದಿಗಿನ ಒಡನಾಟಕ್ಕೆ ಅನುಸಾರವಾಗಿ ಸಮಾನ ಸ್ಥಾನವನ್ನು ನೀಡುವುದು ತಪ್ಪೇ?”
“ಅದು ನಿಯಮ! ಪ್ರಪಂಚ ನಿಯಮ! ನೀನು ಒಬ್ಬರಿಗೆ ಎಷ್ಟೇ ಒಳ್ಳೆಯದು ಮಾಡಿದ್ದರೂ ಆ ಒಳ್ಳೆಯದನ್ನು ಇನ್ನೊಬ್ಬರಿಗೂ ಮಾಡುತ್ತೀಯ ಅನ್ನುವ ಅರಿವು- ಮೊದಲನೆಯವರನ್ನು ನಿನ್ನಿಂದ ದೂರ ಮಾಡುತ್ತದೆ!”
“ಈಗ ನನ್ನ ಧರ್ಮವೇನು ದೇವಿ?”
“ನೀನು ಸರಿಯಾದ ದಾರಿಯಲ್ಲೇ ಇದ್ದೀಯ! ಪ್ರೇಮ ಪ್ರಪಂಚದ ಸೃಷ್ಟಿ ಅಷ್ಟು ಸುಲಭ ಅಂದುಕೊಂಡೆಯಾ? ಅಪೇಕ್ಷೆಯಿಲ್ಲದ ಪ್ರೇಮದಲ್ಲಿ ಕೆಲವೊಮ್ಮೆ ಒಡಕು ಮೂಡುವುದು ಸಹಜ! ಆದರೆ… ಅರ್ಥವಾಗುತ್ತದೆ! ಯಾರೊಬ್ಬರೂ ನಿನ್ನ ಬಿಟ್ಟು ಹೋಗುವುದಿಲ್ಲ! ಅವರ ಪ್ರೇಮ, ಅವರ ವಾತ್ಸಲ್ಯವೇ ನಿನ್ನ ಶ್ರೀರಕ್ಷೆ! ನನ್ನಂತೆಯೇ ಇನ್ನೊಬ್ಬರೂ ಪ್ರೇಮಕ್ಕೆ ಅರ್ಹರು- ಪ್ರತಿಯೊಬ್ಬರೂ ಸಮಾನರು- ಅನ್ನುವ ಅರಿವು ಬಂದಂದು ನಿನ್ನ ಕನಸಿನ ಸಾಕ್ಷಾತ್ಕಾರವಾಗುತ್ತದೆ!”
“ಹಾಗಿದ್ದರೆ… ಪ್ರಪಂಚದಮೇಲಿನ ನನ್ನ ಪ್ರೇಮವನ್ನು ಮುಚ್ಚಿಟ್ಟು ಯೋರೋ ಒಬ್ಬರಿಗೆ ಸೀಮಿತ ಎಂದು ಹೇಳುವುದು ಬೇಡ ಅಲ್ಲವೇ ದೇವಿ?”
“ನಾಲಕ್ಕು ಜನ ಮಕ್ಕಳು! ಅಪ್ಪ ಅಮ್ಮ ಒಂದೇ ರೀತಿಯ ಒಳಿತು ಮಾಡುವಾಗ- ಉಳಿದ ಮೂವರಿಗೆ ನೀವು ಒಳಿತು ಮಾಡುತ್ತಿದ್ದೀರಿ- ಆದ್ದರಿಂದ ನನಗೆ ಮಾಡಬೇಡಿ ಎಂದು ಪ್ರತಿ ಮಗುವೂ ಹೇಳಿದರೆ ಹೇಗೆ? ನನಗೆ ಹೇಳಿದ್ದೇ ಇನ್ನೊಬ್ಬರಿಗೆ ಹೇಳಿದೆ! ನನ್ನೊಂದಿಗೆ ವರ್ತಿಸಿದಂತೆಯೇ ಇನ್ನೊಬ್ಬರೊಂದಿಗೆ ವರ್ತಿಸಿದೆ! ಎಂದು ನಿನ್ನನ್ನು ದೂಷಿಸಿದರೆ ಹೇಗೆ? ನಿನ್ನ ಮೂಲ ಗುಣವಿರುವುದೆ ಅಲ್ಲಿ! ನೀನೇ ವಾಸ್ತವ! ಎಲ್ಲರೊಂದಿಗೂ ನೀನು ಏಕಪ್ರಕಾರ! ಅದು ನಿನ್ನ ಗೆಲುವು! ನಿನ್ನ ಪ್ರೇಮವನ್ನು ತಿರಸ್ಕರಿಸಿದರೆಂದು ಅದು- ಪ್ರೇಮ- ಸುಳ್ಳಲ್ಲ! ಮುಂದೆಯೂ ಪ್ರೇಮಿಸು! ಯಾವುದೋ ಒಂದು ಸಮಯದಲ್ಲಿ ಅರಿವಾಗುತ್ತದೆ! ಸರ್ವಂ ಪ್ರೇಮಮಯಂ!”
“ಧನ್ಯೋಸ್ಮಿ!” ಎಂದೆ.
“ಯಾವ ನಿರೀಕ್ಷೆಯೂ ಇಲ್ಲದೆ, ಯಾವ ಅಪೇಕ್ಷೆ- ಪ್ರತಿಫಲಾಪೇಕ್ಷೆಯೂ ಇಲ್ಲದೆ, ತಮಗೆ ಮಾಡಿದ ಒಳಿತಿಗಿಂತಲೂ, ತಮ್ಮ ಮೇಲಿನ ಪ್ರೇಮಕ್ಕಿಂತಲೂ, ಇತರರೊಂದಿಗಿನ ನಿನ್ನ ಒಡನಾಟವೇ ಕಾರಣವಾಗಿ ದೂರ ಹೋದವರಿಗೆ ನೀನು ವಿವರಣೆಯನ್ನು ನೀಡುವ ಅಗತ್ಯವಿಲ್ಲ! ಅವರ ಮೇಲಿನ ನಿನ್ನ ಪ್ರೇಮದಂತೆ ನಿನ್ನ ಮೇಲಿನ ಅವರ ಪ್ರೇಮವೂ ನಿಜವಾಗಿದ್ದರೆ… ಖಂಡಿತಾ ಮರಳಿ ಬರುತ್ತಾರೆ- ಗೆಳೆಯರಾದರೂ!” ಎಂದು ವಾತ್ಸಲ್ಯದಿಂದ ತಮ್ಮೆದೆಗೆ ನನ್ನನ್ನು ಒತ್ತಿಕೊಂಡರು ದೇವಿ! ಅವರ ಹೃದಯದಿಂದ ಜ್ಯೋತಿಯೊಂದು ನನ್ನ ಹೃದಯದಲ್ಲಿ ಲೀನವಾಯಿತು!
This comment has been removed by the author.
ReplyDeleteಅಪ್ಪೂ.....
ReplyDelete