ಸ್ವಸ್ತಿಗೀತ!

 

ಸ್ವಸ್ತಿಗೀತ!

ಕೆಲವೊಂದು ಕಥೆಗಳು, ಪಾತ್ರಗಳು.... ಕಥೆಗಾರನಿಗಿಂತಲೂ ಓದುಗರನ್ನು ಬಹಳವಾಗಿ ಕಾಡುತ್ತದೆ! ಬಿಟ್ಟು ಹೋಗುವುದೇ ಇಲ್ಲ! ಹಾಗೆಂದು ಕಥೆಗಾರ ಸ್ವಸ್ಥನೇ...? ಬರೆಯುವ ಮೂಲಕ ನನ್ನ ಹೊರೆ ಇಳಿಸಿದ್ದೇನೆ- ಓದುವ ಕಷ್ಟ ನಿಮ್ಮದು ಎಂದು ಎಷ್ಟೇ ಹೇಳಿದರೂ..., ತಾನೇ ಪ್ರತಿ ಪಾತ್ರವೂ- ಆದರೂ.... ಕೆಲವೊಂದು ಪಾತ್ರದಿಂದ ಹೊರಬರುವುದು ಕಷ್ಟ! ತಡಕಾಡುತ್ತಾನೆ, ಮಿಡುಕಾಡುತ್ತಾನೆ, ಸಿಟ್ಟುಗೊಳ್ಳುತ್ತಾನೆ, ಅಸಹನೆ ಹೊಂದುತ್ತಾನೆ, ಯೋಚಿಸುತ್ತಾನೆ, ವಿಷಾದಕ್ಕೂ ಜಾರುತ್ತಾನೆ! ಆದರೂ ಪಾತ್ರ ಬಿಡುವುದಿಲ್ಲ- ಬಿಟ್ಟುಹೋಗುವುದಿಲ್ಲ!

ಹೀಗಿರುವಾಗ ಕಾಲವೂ ಸಂದರ್ಭವೂ ತಾನೇ ತಾನಾಗಿ ಒದಗಿ- ಅವನನ್ನು ಜಾಡಿಸಿ- ಅವನೇ ಬೇಡವೆಂದುಕೊಂಡರೂ ಅದರಿಂದ ಹೊರಬರುವಂತೆ ಮಾಡುತ್ತದೆ! ಹಾಗೆ ಅವನು ಆ ಕಥೆಗೆ ಅಥವಾ ಪಾತ್ರಕ್ಕೆ- ಸ್ವಸ್ತಿಗೀತವನ್ನು ಹಾಡುತ್ತಾನೆ! ಹಾಗೊಂದು ಸ್ವಸ್ತಿಗೀತ- ಉಷಾನಿರುದ್ಧ ಸ್ವಸ್ತಿಗೀತ!

ಅನಿರುದ್ಧನೊಬ್ಬ ಪ್ರೇಮಿ! ಅಸಾಮಾನ್ಯ ಪ್ರೇಮಿ! ಅವನಿಗೆ ಯಾವಾಗ ಯಾರಮೇಲೆ ಪ್ರೇಮವುಂಟಾಗುತ್ತದೋ ಅವನಿಗೇ ತಿಳಿಯುವುದಿಲ್ಲ! ಅವನ ಹೃದಯಪೂರ್ತಿ ಪ್ರೇಮವೇ....!

ಹಾಗಿದ್ದರೆ... ಉಷೆ?

ಅವನಿಗಿಂತಲೂ ಪ್ರೇಮಮಯಿ! ಅನಿರುದ್ಧನಿಗೆ- ಪ್ರೇಮದ ಪರ್ಯಾಯ ಅವಳು!

ಉಷೆ ಅನಿರುದ್ಧನ ಶಕ್ತಿ- ದೌರ್ಬಲ್ಯ ಎರಡೂ...!

ಉಷೆಯಿಲ್ಲದ ಅನಿರುದ್ಧನಿಲ್ಲ!

ಇಲ್ಲಿ ಅನಿರುದ್ಧನದೊಂದು ಸಂದಿಗ್ಧವಿದೆ- ಕಳ್ಳತನವಿದೆ!

ಪ್ರತಿ ಹೆಣ್ಣಿನಲ್ಲೂ ತಾನೇ ಇವನ ಉಷೆಯಿರಬಹುದೇ ಎಂಬ ಗೊಂದಲವನ್ನು ಮೂಡಿಸುತ್ತಾನೆ!

ನೀನೇ- ಇವಳೇ- ನನ್ನ ಉಷೆ ಎಂದು ಅವನು ಸ್ಪಷ್ಟವಾಗಿ ಹೇಳಲಾರ!

ಎರಡು ಕಾರಣವಿದೆ!

ಒಂದು..., ಉಷೆಗಾದರೂ ಅನಿರುದ್ಧನಿಗಾದರೂ ತಮ್ಮ ಪ್ರೇಮವನ್ನು ಪ್ರಪಂಚದ ಮುಂದೆ ಜಾಹೀರು ಪಡಿಸುವ ಇಚ್ಛೆಯಿಲ್ಲ!

ಎರಡು...., ಪ್ರಮುಖಕಾರಣ... ಇಬ್ಬರೂ ಸಮಾಜದ ಕಟ್ಟುಪ್ಪಾಡುಗಳಿಗೆ ಬದ್ದರು!!

ಮತ್ತೆ ಹೇಗೆ?

ಪ್ರತಿ ಹೆಣ್ಣನ್ನೂ ಗೊಂದಲದಲ್ಲಿಡುವುದು ಸರಿಯೇ....?

ಉಷಾನಿರುದ್ಧರು ತಮ್ಮ ಪ್ರೇಮವನ್ನು ಪ್ರಪಂಚದ ಮುಂದೆ ಒಪ್ಪಿಕೊಂಡಂದು- ಅವರಿಬ್ಬರೂ ಪ್ರಪಂಚದಿಂದ ಬೇರೆಯಾಗಬೇಕಾಗುತ್ತದೆ! ಅಥವಾ ಅವರಿಬ್ಬರು ಬೇರೆಯಾಗಬೇಕಾಗುತ್ತದೆ!

ಅದು ಅಸಾಧ್ಯ!

ಉಷೆ ಇಲ್ಲದಂದು ಅನಿರುದ್ಧನ ಅಂತ್ಯ!

ಆದರೆ ಇಲ್ಲಿ ಉಷೆ ಪ್ರತಿ ಹೆಣ್ಣಿನ ಸಂಕೇತ ಕೂಡ! ಅನಿರುದ್ಧನ ಸ್ವೇಚ್ಛೆಯನ್ನು ಒಪ್ಪಲಾರಳು! ಗತ್ಯಂತರವಿಲ್ಲದೆ ಜೊತೆಗಿದ್ದಾಳೆ ಅನ್ನುವುದು ಬಿಟ್ಟರೆ- ಅವನ ತರಲೆಗಳನ್ನು ತಡೆದುಕೊಳ್ಳುವುದು ಕಷ್ಟವೇ...!

ಮತ್ತೆ ಹೇಗೆ- ಸ್ವಸ್ತಿಗೀತವನ್ನು ಹಾಡುವುದು ಹೇಗೆ?

ಆದ್ದರಿಂದ....,

ಅನಿರುದ್ಧ ಪ್ರತಿ ಹೆಣ್ಣಿಗೂ ಹೇಳುತ್ತಿದ್ದಾನೆ!

ಹೆಣ್ಣೇ..., ಗೊಂದಲ ಬೇಡ! ಉಷೆ ಉಷೆಯೇ! ಅವಳಿಲ್ಲದೆ ಅನಿರುದ್ಧನಿಲ್ಲ! ಉಷೆಗೆ ಸ್ಪಷ್ಟವಾಗಿ ಗೊತ್ತು- ನಾನೇ ಇವನ ಉಷೆ ಎಂದು! ಅನಿರುದ್ಧ ಉಷೆಯನ್ನು ಕರೆಯುವುದೇ ಉಷೆ ಎಂದು!”

ಉಷೆ- ಅನಿರುದ್ಧ...., ಅವರ ಮಾತ್ರ ಪರಮ ರಹಸ್ಯ!

ಸದ್ಯಕ್ಕೆ ಉಷೆ ಅನಿರುದ್ಧನೊಂದಿಗೆ ಮುನಿಸಿಕೊಂಡಿದ್ದಾಳೆ! ಕಾರಣ ಹೇಳಬೇಕೆ...,

ಅನಿರುದ್ಧನ ಕಾಮುಕತನ!

ಅನಿರುದ್ಧನೂ ಸದ್ಯಕ್ಕೆ ಅವಳನ್ನು ರಮಿಸಲು ಹೋಗುತ್ತಿಲ್ಲ! ಕಾರಣ..., ಅವನು ಕರ್ತವ್ಯದತ್ತ ಮುಖಿಯಾಗಿದ್ದಾನೆ! ಅವಳನ್ನು ರಮಿಸಿ- ತೃಪ್ತಿಪಡಿಸಿದರೆ..., ಅವನಿಗೆ ಗೊತ್ತು ಅವಳಿಂದ ಹೊರಬರಲಾರ! ಅವಳಲ್ಲಿಯೇ ಮುಳುಗಿಹೋಗುತ್ತಾನೆ!

ಆದರೂ ಹೆಣ್ಣಿನ ಸಾನ್ನಿಧ್ಯವಿಲ್ಲದೆ ಅನಿರುದ್ಧನಿರಲಾರ ಅನ್ನುವುದು- ವಿಪರ್ಯಾಸ!

ತನ್ನ ಮನಸ್ಸಾಕ್ಷಿಗೆ- ಆತ್ಮಸಾಕ್ಷಿಗೆ ಹೆಣ್ಣಿನ ರೂಪವನ್ನು ಕೊಟ್ಟುಬಿಟ್ಟಿದ್ದಾನೆ!

ಇನ್ನು- ತನ್ನ ಪ್ರತಿ ಹೆಣ್ಣಿಗೆ ಅನಿರುದ್ಧನದೊಂದು ಸಲಹೆಯಿದೆ!

ದೂರವಿರಿ! ಅನಿರುದ್ಧ ಬೆಂಕಿ- ಕಾಮನನ್ನು ಸುಟ್ಟ ಬೆಂಕಿ!

ಆಕರ್ಷಿಸುತ್ತಾನೆ! ಸೆಳೆಯುತ್ತಾನೆ! ಅದಕ್ಕಾಗಿ ಯಾವ ಹಂತಕ್ಕೂ ಹೋಗುತ್ತಾನೆ!

ನಂಬದಿರಿ!

ಅನಿರುದ್ಧ- ಕಳ್ಳ ಕಾಮುಕ!!

ಅಷ್ಟೇ...!

ಸದ್ಯಕ್ಕೆ..., ಕರ್ತವ್ಯವೋ ಉಷೆಯೋ ಕರ್ತವ್ಯವೋ ಉಷೆಯೋ ಅನ್ನುವ ಸಂದಿಗ್ಧದಲ್ಲಿರುವ ಅನಿರುದ್ಧನ ವಿಷಯದಲ್ಲಿ ಕಾಲವೇ ತೀರ್ಮಾನವನ್ನು ತೆಗೆದುಕೊಂಡಿದೆ!

ಅನಿರುದ್ಧನಿಂದ ಉಷೆಯನ್ನು ತಾತ್ಕಾಲಿಕವಾಗಿ ದೂರವಿಟ್ಟಿದೆ!

ಆದರೆ ಕಾಲಕ್ಕೂ ಗೊತ್ತು....,

ಹೃದಯದಲ್ಲಿ ಉಷೆ ಇಲ್ಲವಾದ ದಿನ....,

ಅನಿರುದ್ಧನಿರುವುದಿಲ್ಲ!

ಸ್ವಸ್ತಿ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!