ಹೋಲಿಕೆ
“ಅಜ್ಜೀ.... ಒಂದು ಕಥೆ ಹೇಳಿ!”
“ಏನು ಕಥೆ ಹೇಳಲೋ ಮಗ! ಈಗಿನ ಕಥೆಗಳೇನೂ ನನಗೆ ಗೊತ್ತಿಲ್ಲ!”
“ಈಗಿನ ಕಥೆ ನನಗೆ ಗೊತ್ತು! ಅದಕ್ಕೇ ನಿಮ್ಮನ್ನು ಕೇಳಿದ್ದು- ನನಗೆ ಗೊತ್ತಿಲ್ಲದ ಕಥೆಹೇಳಿ!”
“ನಮ್ಮ ಕಾಲವೇ ಚಂದಿವಿತ್ತೋ...! ಎಷ್ಟೇ ಕಷ್ಟ ಕಾರ್ಪಣ್ಯಗಳಿದ್ದರೂ ಬಾಂಧವ್ಯ ಅನ್ನುವುದು ಎಲ್ಲವನ್ನೂ ಮರೆಸುತ್ತಿತ್ತು! ಆಗಲೂ ಕೆಲವೊಮ್ಮೆ ಅನ್ನಿಸುತ್ತಿತ್ತು... ಯಾರಿಗೆ ಬೇಕಪ್ಪಾ ಈ ಜೀವನ ಎಂದು! ಆದರೆ ಈಗಿನ ಜೀವನ ರೀತಿ ನೊಡಿದರೆ... ಅಂದಿನ ಜೀವನ ಸ್ವರ್ಗ!”
“ಯಾಕಜ್ಜಿ ಹಾಗನ್ನುತ್ತೀರ? ಆಗ ಹೇಗಿತ್ತು? ಈಗೇನಾಗಿದೆ?”
“ಒಂದು ಸಣ್ಣ ಉದಾಹರಣೆ ಹೇಳುತ್ತೇನೆ ಕೇಳು! ಬುದ್ಧಿವಂತ ನೀನು- ಬೆರಳು ತೋರಿಸಿದರೆ ಹಸ್ತ ನುಂಗುವವನು! ಈ ಒಂದು ಉದಾಹರಣೆಯಿಂದಲೇ ಅಂದಿಗೂ ಇಂದಿಗೂ ಇರುವ ಪೂರ್ತಿ ವ್ಯತ್ಯಾಸ ತಿಳಿದುಕೊಳ್ಳುತ್ತೀಯ!”
“ಕೇಳೋಕೆ ಚೆನ್ನಾಗಿಲ್ಲ ಅಜ್ಜಿ! ಬೆರಳು ತೋರಿಸಿದರೆ ಹಸ್ತ ನುಂಗುವವನು! ನಕಾರಾತ್ಮಕ ಭಾವ ಬರುತ್ತದೆ! ನಿಮ್ಮ ಮೊಮ್ಮಗನಾದ್ದರಿಂದ- ಬುದ್ದಿವಂತ ಅಂದರೇ ಸಾಕು- ಉದ್ದೇಶ ಅರ್ಥವಾಗುತ್ತದೆ!”
“ಹೋಗಲಿ ಬಿಡು! ನನ್ನ ಬುಡಕ್ಕೇ ಬರ್ತೀಯ...! ಒಂದು ದಿನ ಏನಾಯ್ತು ಗೊತ್ತಾ? ಯಾವುದೋ ಊರಿಗೆ ಹೋಗಿದ್ದ ನಿನ್ನ ತಾತ ರಾತ್ರಿ ಮನೆಗೆ ಬರುವಾಗ ದಾರಿಯಲ್ಲಿ ಜನ ಸೇರಿದ್ದರು! ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿದ್ದ! ಪ್ರತಿಯೊಬ್ಬರಿಗೂ ಆತನನ್ನು ಉಳಿಸುವ ವ್ಯವಧಾನ! ಅತಿ ಹತ್ತಿರದ ಮನೆ ಯಾವುದೋ ಅಲ್ಲಿಗೆ ಕರೆದುಕೊಂಡು ಹೋಗುವ ತೀರ್ಮಾನ! ನಮ್ಮ ಮನೆ! ಸರಿ ಎಲ್ಲರೂ ಸೇರಿ ಆತನನ್ನು ನಮ್ಮ ಮನೆ ತಲುಪಿಸಿದರು. ಅಷ್ಟೇನಾ...? ಯಾರೋ ಓಡಿ ಹೋಗಿ ಡಾಕ್ಟರ್‌ರನ್ನು ಕರೆತಂದರು... ಸುಶ್ರೂಷೆಯಾಯಿತು! ಪ್ರತಿ ದಿನ ಜನ ಬಂದು ವಿಚಾರಿಸಿ ಹೋಗುತ್ತಿದ್ದರು.... ಅವರ ಮನೆಯಲ್ಲಿದ್ದರೆ ಹೇಗೋ ಹಾಗೆ ನೋಡಿಕೊಂಡರು! ಆತನೂ ಹುಷಾರಾದ! ಕೇಳಿದಾಗ ಹೇಳಿದ- ಅವನ ಊರು, ಇಲ್ಲಿಗೆ ಯಾಕೆ ಬಂದ, ಎನ್ನುವುದೆಲ್ಲಾ...! ದಾರಿಯಲ್ಲಿ ಬರುವಾಗ ಆನೆ ಅಟ್ಟಿಸಿಕೊಂಡು ಬಂತು! ತುಳಿತವೂ ಸಿಕ್ಕಿತು! ಬದುಕಿದ್ದೇ ಹೆಚ್ಚು!”
“ಭಾರಿ ಸಸ್ಪೆನ್ಸ್ ಅಜ್ಜಿ! ಆತ ಯಾವ ಊರವ? ಯಾಕೆ ಬಂದ?”
“ಕಥೆಗೆ ಸಂಬಂಧವಿಲ್ಲದ ವಿಷಯದಲ್ಲೇ ನಿನಗೆ ಕುತೂಹಲ! ನಾನು ಅಂದಿಗೂ ಇಂದಿಗೂ ವ್ಯತ್ಯಾಸ ಹೇಳ ಹೊರಟರೆ....!”
“ಆದರೂ ಹೇಳಿಬಿಡು! ಗೊಂದಲ ಬೇಡ!”
“ಯಾವ ಊರವನಾದರೇನು? ಹೆಣ್ಣು ನೋಡೋಕೆ ಬಂದಿದ್ದ- ಪಾಪ- ನಿನ್ನ ಅಪ್ಪ!”
“ಈಗರ್ಥವಾಯಿತು! ನಾನೇಕೆ ಹುಚ್ಚುಹುಚ್ಚಾಗಿ ಕಥೆ ಬರೀತೀನಿ ಅಂತ!”
“ಅದಕ್ಕೂ ನನ್ನನ್ನೇ ಕಾರಣ ಮಾಡಿದೆಯಾ?”
“ಇನ್ನೇನು? ತಲೆ ಬುಡ ಇಲ್ಲದೆ ಹೇಳಿದಿರಿ! ನೋಡಿದರೆ ನಮ್ಮಪ್ಪನ ಕಥೆ! ಅದಿರಲಿ..., ಹೋಲಿಕೆ ಹೇಳಿ!”
“ಅಂದು ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಸಾಯುತ್ತಾ ಮಲಗಿದ್ದಾಗ ಊರಿಗೆ ಊರೇ ಅವನನ್ನು ಬದುಕಿಸಲು ಪ್ರಯತ್ನಿಸಿತು! ಅಲ್ಲಿ ಮಾನವೀಯತೆಯೇ ಮೆರೆದಾಡಿತು! ಇಂದಾದರೆ ಏನು ಮಾಡುತ್ತಿದ್ದರು ಹೇಳು...!”
“ಅರ್ಥವಾಯಿತು ಬಿಡಿ!”
ಎಂದು ಹೇಳಿ... ಜೇಬಿನಿಂದ ಫೋನ್ ತೆಗೆದು ಅಜ್ಜಿ-ಮಗ ಸೆಲ್ಫಿ ತೆಗೆದುಕೊಂಡೆವು!
“ಕೊಲ್ಲುವ ಹಾಗಿದ್ದರೆ ಒಂದೇ ಸಾರಿ ಕೊಲ್ಲು! ಆಟವಾಡಿಸಬೇಡ!”
ಎಂದು ಕೂಗಿದ ಅಜ್ಜಿಯ ಮುಖವನ್ನು ಆಶ್ಚರ್ಯದಿಂದ ನೋಡಿದೆ! ಅವರ ನೋಟ ಬೇರೆ ದಿಕ್ಕಿನಲ್ಲಿತ್ತು!
ಬೆಕ್ಕೊಂದು ಇಲಿಯನ್ನು ಆಟವಾಡಿಸುತ್ತಿತ್ತು- ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ!
ವೀಡಿಯೋ ರೆಕಾರ್ಡರ್ ಆನ್ ಮಾಡಿದೆ- ನಾನು ಈ ಪೀಳಿಗೆಯವ!!
ಸಂಬಂಧಗಳ ಭಾಂದವ್ಯ ಮಾನವೀಯತೆ ಇತ್ತು ಆಗ ಅಪರಿಚತರನ್ನು ತನ್ನವರೇ ಎನ್ನುವಂತೆ ಅವರ ಆತ್ಮೀಯತೆಗೆ ಪ್ರಣಾಮಗಳು. ಹೇಗೂ ಬಂದವರು ಆ ಊರಿಗೆ ಪ್ರೀತಿಯ ಅಳಿಯನಾದರು.ಪಪ್ಪನ ಮದುವೆ ವ್ಯವಹಾರ ಮಗನಿಗೆ ಕತೆ ಆಯಿತು. 🙏❤
ReplyDelete