ಪರೀಕ್ಷೆ!

ಪರೀಕ್ಷೆ!

ಗಾಢಾಂಧಕಾರ!

ಕಣ್ಣು ಕಳೆದುಕೊಂಡೆನೇನೋ ಅನ್ನಿಸುವಷ್ಟು ಕತ್ತಲು!

ಬಾಹ್ಯವೂ-ಕತ್ತಲು!

ಮನಸ್ಸೋ- ತಮಸ್ಸು!

ಯಾಕಾಗಿ ಹುಡುಕುತ್ತಿದ್ದೇನೋ ಎಲ್ಲಿಗೆ ಚಲಿಸುತ್ತಿದ್ದೇನೋ...,

ಧೈರ್ಯ ಪರೀಕ್ಷೆ!

*

ತಟ್ಟನೆ ಎಚ್ಚರಗೊಂಡೆ!

ದಿಗಿಲು!

ಧೈರ್ಯಪರೀಕ್ಷೆಗೆ ಇಳಿದವನಿಗೆ ದಿಗಿಲು!

ಪರೀಕ್ಷೆ ಕನಸ್ಸಿನಲ್ಲಿ!

ವಾಸ್ತವ- ಕಠಿಣ!

ಮರಣಕ್ಕಿಂತ ಹೆಚ್ಚೇನೂ ಇಲ್ಲದಿದ್ದರೂ- ಪ್ರತಿಯೊಂದಕ್ಕೂ ಭಯ! ಹೆದರಿಕೆ! ಪರಿಭ್ರಮ!

ಯಾಕೆ?

ಯೋಚನೆಯಲ್ಲಿದ್ದಾಗ ದಾರಿಹೋಕಳೊಬ್ಬಳು ಎಸೆದ ಒಂದು ರೂಪಾಯಿ ನಾಣ್ಯ ಉರುಳಿ ಬಂತು!

ಕನಸು! ಎಚ್ಚರಗೊಂಡರೆ ಯೋಚನೆ! ಯೋಚನೆಯಿಂದ ಎಚ್ಚರಗೊಂಡರೆ..., ವಾಸ್ತವ!

*

ನಿಜವೇ...!

ನಾವು ವಾಸ್ತವದಲ್ಲಿರುವುದು ಕಡಿಮೆಯೇ!

ಒಂದೋ...., ಭೂತಕಾಲದಲ್ಲಿರುತ್ತೇವೆ! ಇಲ್ಲವೇ ಭವಿಷ್ಯದಲ್ಲಿರುತ್ತೇವೆ! ಅಥವಾ ಕನಸಿನಲ್ಲಿ... ಅದೂ ಅಲ್ಲವಾ...? ಭ್ರಮೆ! ಮತ್ತೆ- ಯೋಚನೆ...!

ಹಾಗಿದ್ದರೆ ವರ್ತಮಾನಕಾಲ ಯಾವಾಗ?

ಇರುವುದಿಲ್ಲ!

*

ಕಣ್ಣು ಮಂಜಾಗತೊಡಗಿದೆ! ಏನೂ ಸ್ಪಷ್ಟವಾಗಿ ಕಾಣಿಸುವುದಿಲ್ಲ! ವಯಸ್ಸಾಯಿತಾ....?

ಇಲ್ಲ!

ಆದರೆ...., ಸಾವು ಯಾವ ಸಮಯದಲ್ಲಿ ಬರುತ್ತದೋ ಯಾರಿಗೆ ಗೊತ್ತು?!

ಈಗ...,

ವಯಸ್ಸಾಯಿತಾ...?

ನಾನಾಗಿ ಸಾಯದೆ ಈ ಮರಣವೂ ಹತ್ತಿರಬರುತ್ತಿಲ್ಲವೆನ್ನುವ ವ್ಯಥೆ ನನಗೆ!

ಮತ್ತೆ ಹೆದರಿಕೆಯೇನು?

*

ದೇವರ ಗುಡಿ! ಸಣ್ಣ ಗುಡಿಯಲ್ಲ- ದೊಡ್ಡ ದೇವಸ್ಥಾನ! ಅದ್ದೂರಿಯಾಗಿದೆ!

ಜನ! ತಾವು ಮಾಡಿದ ಪಾಪ, ತಪ್ಪುಗಳ ಒಪ್ಪಿಕೆಗೆ, ದರ್ಶನಕ್ಕೆ- ಮುಗಿಬಿದ್ದಿದ್ದಾರೆ!

ಭಯವಿಲ್ಲದ ಭಕ್ತಿಯಿಲ್ಲ!

ಜನರಿಗನುಸಾರವಾಗಿ ಕಾಲಿಗೊಬ್ಬರಂತೆ ನಾವು- ಭಿಕ್ಷುಕರು!

ಪಾಪದ ಹೊರೆ ಹೊರುವವರು!

ದೇವರಿಗೆ ಎಲ್ಲರೂ ಒಂದೇ ಅನ್ನುವ ನಂಬಿಕೆ!

ಮತ್ತೇಕೆ ನಾವು ಹೀಗೆ- ಅವರು ಹಾಗೆ?

*

ಮತ್ತೊಂದು ನಾಣ್ಯ!

ತಲೆಯೆತ್ತಿ ನೋಡಿದೆ.

ಮಸುಕು ಕಣ್ಣಿಗೆ ಮುಖ ಸ್ಪಷ್ಟವಾಗಲಿಲ್ಲ!

ಪ್ರತಿಯೊಬ್ಬರಿಗೂ ಒಂದೊಂದು ನಾಣ್ಯವನ್ನು ಎಸೆಯುತ್ತಾ ಹೋದರಾಕೆ!

ಸ್ವಲ್ಪ ಮುಂದೆ..., ಯಾರೋ ಹೊತ್ತಿಸಿಟ್ಟ ಕರ್ಪೂರದ ಬೆಂಕಿ, ರೇಷ್ಮೆ ಸೀರೆಯ ಸೆರಗಿಗೆ ಹೊತ್ತಿ...!

ಆಹಾಕಾರ!

ಪ್ರಾಣದ ಬೆಲೆ!

ಯಾರಿಗಿಲ್ಲ ಭಯ?

ಇದು- ಪರೀಕ್ಷೆ!

ಎದ್ದೆ...., ನುಗ್ಗಿದೆ...., ಒಂದೂವರೆ ಕಾಲು! ಒಂದು ಕೈ! ಯಾರಿಗಿಂತಲೂ ಬಲಶಾಲಿ..., ಅವಳನ್ನು ಹೆಗಲಮೇಲೆ ಹೊತ್ತಿದ್ದೇ ಸಾಕ್ಷಿ!

ಕಣ್ಣು ಮಂಜಾದರೇನು ನನಗೆ ಗೊತ್ತಿಲ್ಲದ ದಾರಿಯೆ?

ಆಕೆಯ ಬೆಂಕಿ ನನ್ನನ್ನೂ ಆವರಿಸುತ್ತಿದ್ದರೂ...., ಓಡಿದೆ!

ದೇವೀಕೆರೆಗೆ!

*

ತಮಸ್ಸು- ಹೊರಗೆ!

ಒಳಗೆ- ಜ್ಯೋತಿ!

ದೇವರಿಗೆ ಎಲ್ಲರೂ ಸಮಾನರೇ...!

ಸಮಾನತೆ ಅವರವರ ಮನಸ್ಸನ್ನು ಅವಲಂಬಿಸಿದೆ!

*

ಧೈರ್ಯ ಪರೀಕ್ಷೆಯಲ್ಲಿ ನಾನು ಗೆದ್ದೆ- ಯಾರಿಗಿಂತಲೂ!

ಪ್ರಾಣವನ್ನು ನೀಡುವುದು, ಪರಿಪಾಲಿಸುವುದು, ತೆಗೆಯುವುದು- ದೇವರು!

ಪ್ರಾಣ ರಕ್ಷಣೆ..., ಪರಿಪಾಲನೆಗೆ ಬರುತ್ತದೆ!

ನಾನು ದೇವರಾದೆ!

ಅಹಂಬ್ರಹ್ಮಾಸ್ಮಿ!

ಇನ್ನು ಹೆದರಿಕೆಯೇ? ಪರೀಕ್ಷೆಯೆ?

Comments

  1. ಕರುಣೆ ಧೈರ್ಯ ತ್ಯಾಗ ಸಹ್ಯತೆಯೇ ದೈವಿಕತೆಯನ್ನು ಬಿಂಬಿಸುತ್ತದೆ

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!