ವಾಲ್ಮೀಕೀವೇದಾಂತ!
ವಾಲ್ಮೀಕೀ ವೇದಾಂತ!
*
ಶೃಂಗಾರದಲ್ಲಿದ್ದ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಹೊಡೆದುರುಳಿಸಿದ ವ್ಯಾಧ!
ಅವನಿಗೆ ಮುಖ್ಯ- ಬೇಟೆ! ಬೇಟೆ ಅವನ- ಧರ್ಮ!
ಪಕ್ಷಿಗಳ ಆನಂದವನ್ನು ತನ್ನದೇ ಆನಂದವೆಂಬಂತೆ ಅನುಭಾವಿಸುತ್ತಿದ್ದ ಕವಿ ಹೃದಯ ಮರುಗಿತು- ಅಯ್ಯೋ ಎಂದಿತು.
ಸತ್ತ ಪಕ್ಷಿಯನ್ನು ಸುಟ್ಟು ತಿನ್ನಲು ತೆಗೆದುಕೊಂಡು ಹೋದ ವ್ಯಾಧ!
ಕ್ರೋಧಗೊಂಡ ಕವಿ ವ್ಯಾಧನನ್ನು ಶಪಿಸಿದ- ಎಂದು ಯಾರೋ ಭಾವುಕ ಜೀವಿ ಹೇಳಿದ್ದಾನೆ! ಅದು ಆ ಹೇಳಿದವನ ಭಾವವೇ ಹೊರತು- ಕವಿ ಶಪಿಸಲಾರ!
ಪಕ್ಷಿಯ ಸಾವಿಗೆ ದುಃಖವಿದೆ! ಸತ್ತ ಪಕ್ಷಿಯ ಸಂಗಾತಿಯ ದುಃಖಕ್ಕೆ ವಿಷಾದವಿದೆ! ಹಾಗೆಂದು ತನ್ನ ಧರ್ಮವನ್ನು ತಾನು ನೆರವೇರಿಸಿದ ವ್ಯಾಧನನ್ನು ಶಪಿಸುವಷ್ಟು ಅವಿವೇಕಿಯೋ ಕಠಿಣ ಹೃದಯನೋ ಅಲ್ಲ- ಕವಿ!
ಸಂಗಾತಿಯನ್ನು ಕಳೆದುಕೊಂಡ ಕ್ರೌಂಚದ ದುಃಖ… ಕವಿ ಹೃದಯದಲ್ಲಿ ಮಹಾಕಾವ್ಯವನ್ನೇ ಹುಟ್ಟಿಸಿತು!
ಮಹಾಕಾವ್ಯ!
ಕರುಣರಸ ಪ್ರೇರಿತವಾದರೂ… ಕರುಣರಸವೇ ಪ್ರಧಾನವಾದರೂ… ನವರಸಗಳಲ್ಲಿ ಯಾವೊಂದಕ್ಕೂ ಕೊರತೆಯಾಗದೆ- ಪ್ರತಿ ರಸದ ಪರಾಕಾಷ್ಠೆಯನ್ನು ತಲುಪಿದ- ಮಹಾಕಾವ್ಯ!
ಅಲ್ಲವೇ…?
ಒಂದು ವಿಷಾದಮೂಲ ಘಟನೆಯೇ ಕಾರಣವಾಗಿ ಮಹಾಕಾವ್ಯವೊಂದು ಸೃಷ್ಟಿಯಾಯಿತು!
ಅಂದಮೇಲೆ…,
ದುಃಖ- ಕೆಟ್ಟದ್ದೇ?
*
“ನಾನೂ ನಿಮ್ಮ ಮಗಳೇ! ಸ್ವಲ್ಪದಿನ ನನ್ನೊಂದಿಗೆ ಬಂದು ಇರಲಾಗದೆ?” ಎಂದರು ಅಕ್ಕ.
“ವಾಲ್ಮೀಕಿ ಒಬ್ಬನೇ ಆಗುತ್ತಾನಲ್ಲ?” ಎಂದರು ಅಮ್ಮ!
“ಅವನೇನು ಚಿಕ್ಕ ಹುಡುಗನೇ?…” ಎಂದು ಏನೋ ಹೇಳ ಹೋದರು ಅಕ್ಕ!
“ನಾನು ಬರುವುದಿಲ್ಲ!” ಎಂದರು ಅಮ್ಮ.
ನನ್ನ ಮುಖವನ್ನು ನೋಡಿದರು ಅಕ್ಕ.
ಅಪ್ಪಿ ತಪ್ಪಿಯೂ ಹೋಗಿಬನ್ನಿ ಎಂದು ನಾನು ಹೇಳುವುದಿಲ್ಲ.
ಹೋಗುವುದು ಅಮ್ಮನಿಗೆ ಇಷ್ಟವಿಲ್ಲ- ನನಗೂ ಅಮ್ಮನಿಲ್ಲದೆ ಆಗುವುದಿಲ್ಲ!
ಒಂದು ದಿನವೂ ಬಿಟ್ಟಿರಲಾಗದಷ್ಟು ಅಮ್ಮನನ್ನು ಅವಲಂಬಿಸಿರುವ ಮಗ ನಾನು!
*
“ಯಾವಾಗಲೂ ನಗುನಗುತ್ತಾ ಖುಷಿಯಾಗಿರುತ್ತೀಯಲ್ಲ? ನಿನಗೆ ದುಃಖವೇ ಆಗುವುದಿಲ್ಲವಾ- ವಾಲ್ಮೀಕಿ? ನಿನ್ನ ಜೀವನದಲ್ಲಿ ದುಃಖಕ್ಕೆ ಕಾರಣಗಳೇ ಇಲ್ಲವೇ?” ಎಂದ ಗೆಳೆಯ.
ದುಃಖ ಆಗುವುದಿಲ್ಲ! ಹಾಗೆಂದು- ಕಾರಣಗಳಿಲ್ಲವೇ?
“ಇವತ್ತೇ ಯಾಕೆ ಕೇಳಿದೆ?” ಎಂದೆ.
ನೋಡಿ ನಕ್ಕ! ನನ್ನಿಂದ ಉತ್ತರ ಸಿಗಬೇಕೆಂದರೆ ಇವತ್ತೇ ಕೇಳಬೇಕು!
ಇವತ್ತು- ನಾನು ಅಪ್ಪನಾಗಿ ಬಡ್ತಿ ಪಡೆದ ದಿನ!
ಮಗಳು ಹುಟ್ಟಿ ಮೂರು ವರ್ಷ!
ಹೆತ್ತಮ್ಮನನ್ನೇ ಒಂದು ದಿನವೂ ಬಿಟ್ಟಿರಲಾಗದ ನಾನು- ಅಹಂ ಅನ್ನುವ ಒಂದೇ ಒಂದು ಕಾರಣಕ್ಕಾಗಿ- ಮಗಳನ್ನಗಲಿ ಮೂರು ವರ್ಷ!
ಮಗಳು- ಅವಳಮ್ಮನೊಂದಿಗೆ ಸಂತೋಷದಿಂದ ಬದುಕುತ್ತಿದ್ದಾಳೆ! ಆ ಸಂತೋಷವೇ ನನಗೂ ಬೇಕಾಗಿರುವುದು!
ಆದರೆ… ಆದರೆ…,
ಇದು ದುಃಖವೇ…?
ವೇದನೆ!
*
ಯಾರೋ ಪುಣ್ಯಾತ್ಮ ಹೇಳಿದ್ದಾರೆ- ಗುರಿಯ ಕಡೆ ಪ್ರಯಾಣವಾ…? ಒಬ್ಬನೇ ಪ್ರಯಾಣಿಸು! ವಿಹಾರಾರ್ಥವಾಗಿ ಲೋಕ ಸಂಚಾರವಾ? ಜೊತೆಗೊಬ್ಬರಿರಲಿ- ಎಂದು!
ನನ್ನದೇ ಆದ ಸಿದ್ಧಾಂತಕ್ಕೆ ಅನ್ವಯವಾಗಿ ನನ್ನ ಜೀವನ! ಜೊತೆಗೆ…,
ನನ್ನ ಸಾಮರ್ಥ್ಯದ ಅಳತೆಯಲ್ಲಿ…ನನ್ನ ಸೃಜನಶೀಲತೆಯ ಪರಿಧಿಯಲ್ಲಿ- ಗುರಿಯೊಂದನ್ನು ನಿಶ್ಚಯಿಸಿಕೊಂಡೆ!
ನಾನು ಮಾಡಿದ ತಪ್ಪು- ಗುರಿ ನನ್ನೊಬ್ಬನ ಗುರಿ, ಸಿದ್ಧಾಂತ ನನ್ನೊಬ್ಬನ ಸಿದ್ಧಾಂತ ಎಂದು ಮರೆತಿದ್ದು- ನಿನ್ನ ಗುರಿ ನನ್ನದು- ನಿನ್ನ ಸಿದ್ಧಾಂತ ನನ್ನದು… ಗೆಲ್ಲುವವರೆಗೂ ಜೊತೆಗಿರುತ್ತೇನೆ ಎಂದು ಹೇಳಿದ ಅವಳ ಮಾತನ್ನು ನಂಬಿದ್ದು- ನಂಬಿ ಜೊತೆ ಸೇರಿಸಿದ್ದು!
ಪಾಪ! ಹೇಳುವಾಗ ಅವಳೂ ಪ್ರಾಮಾಣಿಕವಾಗಿಯೇ ಇದ್ದಳು…! ನಂತರವಲ್ಲವೇ ತಿಳಿದಿದ್ದು- ಗುರಿ ಸಾಧಿಸುವುದೆಂದರೆ- ಸಿದ್ಧಾಂತಕ್ಕೆ ಅನುಸಾರವಾಗಿ ಬದುಕುವುದೆಂದರೆ- ಕಡಲೆಕಾಯಿ ತಿಂದಷ್ಟು ಸುಲಭವಲ್ಲವೆಂದು!
ಗುರಿಯಿಂದ ಹಿಂದೆ ಸರಿಯುವುದು ಎಷ್ಟು ಸುಲಭ!
ಆದರೇ…,
ಗುರಿ ನಿಶ್ಚಯಿಸಿದ್ದು ನಾನು- ವಾಲ್ಮೀಕಿ!
ಗುರಿ ನಿಶ್ಚಿಯಿಸಿದ ನಂತರ ಬಂದವಳು ಅವಳು! ಅವಳು ಹೇಳಿದಳೆಂದು ಗುರಿಯಿಂದ ಹಿಂದೆ ಸರಿಯಬಹುದೆ?
ಹೇಳಿದ್ದೇನೆ... ಗುರಿ ನನ್ನೊಬ್ಬನ ಗುರಿ! ಪ್ರಯತ್ನ ನನ್ನೊಬ್ಬನ ಪ್ರಯತ್ನ! ಗುರಿ ಸೇರುವೆನೆಂಬ ನಂಬಿಕೆ ನನ್ನೊಬ್ಬನ ನಂಬಿಕೆ!
ಗುರಿ ಸಾಧಿಸಿದರೂ ಇಲ್ಲದಿದ್ದರೂ ಅದಕ್ಕೆ ನಾನೊಬ್ಬನೇ ಹೊಣೆಗಾರ!
ನನ್ನ ಬದುಕಿಗಂಟಿಕೊಂಡ ಯಾರೊಬ್ಬರಿಗೂ... ನನ್ನಮೇಲೋ ನಾನು ಸಾಧಿಸುವ ಗುರಿಯಮೇಲೋ- ಗುರಿ ಸಾಧಿಸುತ್ತೇನೆ ಅನ್ನುವುದರಮೇಲೋ ನಂಬಿಕೆಯಿಲ್ಲ! ಆ ನಂಬಿಕೆ ಇಲ್ಲದಿರುವಿಕೆಯೇ ಕ್ರಮೇಣ ನನ್ನವಳಿಗೂ!
ನನ್ನ ಮಿತಿ ನನಗೆ ತಿಳಿಯದೆ?
ನನ್ನ ಸಾಮರ್ಥ್ಯ ನನಗೆ ತಿಳಿಯದೆ?
ನಾನು ಏನನ್ನು ಸಾಧಿಸಬಲ್ಲೆನೆಂದು ನಿಶ್ಚಯಿಸುವುದು ನಾನಲ್ಲದೆ- ಪ್ರಪಂಚವೇ…?
ನಾನು ಕಂಡುಕೊಂಡಂತೆ ಪ್ರಪಂಚದ ನೀತಿ- ಒಂದನೇ ತರಗತಿಯಲ್ಲಿ ಓದುವಾಗಲೇ ಎಂಎ ಸರ್ಟಿಫಿಕೇಟ್ ಬೇಕೆನ್ನುವುದು!
ಎಲ್ಲರಿಗೂ ಫಲಿತಾಂಶ ಬೇಕು! ಪ್ರಯತ್ನ ಕಾಣುವುದಿಲ್ಲ! ಕಂಡರೂ… ಅವರಿಗದು ಅಸಾಧ್ಯ ಅನ್ನಿಸಿದರೆ ಪ್ರಯತ್ನಿಸುತ್ತಿರುವವನಿಗೂ ಸಾಧ್ಯವಿಲ್ಲವೆಂದು ಅವರ ನಂಬಿಕೆ!
ಗುರಿ ಸ್ಪಷ್ಟವಾಗಿದೆ! ದಾರಿ ತಿಳಿದಿದೆ! ಪ್ರತಿ ಹೆಜ್ಜೆಯ ಅರಿವು ನನಗಿದೆ!
ಮತ್ತೇನು ಸಮಸ್ಯೆ?
ಜೊತೆ ನಿಲ್ಲದಿದ್ದರೂ ಹಿಂದಕ್ಕೆ ಎಳೆಯುವ ನನ್ನವರು!
ಗುರಿಯೆಡೆಗಿನ ಪ್ರಯಾಣದಲ್ಲಿ ನಾನನುಭವಿಸಿದ ಕಷ್ಟ ನಷ್ಟಗಳು- ನೋವು ದುಮ್ಮಾನಗಳು… ನನಗೆ ಮಾತ್ರ ಗೊತ್ತು!
ಈಗ… ಗುರಿ ಸೇರುವ ಹಂತದಲ್ಲಿ… ಗುರಿ ಬಿಡು ಎಂದರೆ ಸಾಧ್ಯವೇ?
ಇಲ್ಲೇ ತತ್ತ್ವದ ಅನ್ವಯ!
ನನ್ನ ಜೀವನ ಒಂದು ಸ್ಪಷ್ಟ ತತ್ತ್ವದಮೇಲೆ ನಿಂತಿದೆ- ನಾನೇ ರೂಪಿಸಿಕೊಂಡ ಸಿದ್ಧಾಂತ!
ನಾನು ಬದುಕುವುದು ಹೀಗೆಯೇ ಅಂದಮೇಲೆ ಹೀಗೆಯೇ ಬದುಕುವುದು!
ಅದರ ಸ್ಷಷ್ಟ ಅರಿವಿದ್ದು ನನ್ನ ಜೀವನವನ್ನು ಪ್ರವೇಶಿಸಿ ಈಗ ಸಿದ್ಧಾಂತವನ್ನು ಬಿಡಬೇಕೆಂದರೆ…?
ಆಯ್ಕೆಯನ್ನು ನನಗೆ ಬಿಟ್ಟಳು!
“ನಿನ್ನ ಪ್ರಾಣ- ಮಗಳು- ಬೇಕೆಂದರೆ ನೀನು ಗುರಿಯನ್ನು- ಸಿದ್ಧಾಂತವನ್ನು ಬಿಡಬೇಕು! ಸಿದ್ಧಾಂತವೇ ಮುಖ್ಯವಾದರೆ- ಮಗಳನ್ನು!”
*
“ವಾಲ್ಮೀಕೀ…!” ಎಂದು ಕರೆದ ಗೆಳೆಯ… ಉತ್ತರಕ್ಕಾಗಿ ಕಾಯುತ್ತಿದ್ದ!
ಅವನನ್ನು ನೋಡಿ ಮುಗುಳುನಕ್ಕೆ..,
“ವಾಲ್ಮೀಕಿ ಅಂದರೇನು ಗೊತ್ತೆ?” ಎಂದೆ.
“ವಲ್ಮೀಕ ಎಂದರೆ ಹುತ್ತ! ಹುತ್ತದಿಂದ ಹುಟ್ಟಿದವನು ವಾಲ್ಮೀಕಿ!” ಎಂದ ಗೆಳೆಯ.
“ಅದೊಂದು ಅರ್ಥ! ಆದರೆ ನನ್ನಪ್ರಕಾರ- ಹುತ್ತದಿಂದ ಕಳಚಿಕೊಂಡವನು- ವಲ್ಮೀಕದಿಂದ ಮುಕ್ತನಾದವನು ವಾಲ್ಮೀಕಿ!” ಎಂದೆ.
ಅರ್ಥವಾಗದೆ ನೋಡಿದ.
*
ವಾಲ್ಮೀಕಿ... ವ್ಯಾಧನೊಬ್ಬ- ಕ್ರೀಡಿಸುತ್ತಿದ್ದ ಕ್ರೌಂಚ ಪಕ್ಷಿಯನ್ನು ಕೊಂದಾಗ ಮರುಕಗೊಂಡ ಕವಿಹೃದಯ!
ವ್ಯಾಧನನ್ನು ಶಪಿಸಲಿಲ್ಲ ಯಾಕೆ?
ಯಾಕೆಂದರೆ…,
ತಾನೂ ಒಬ್ಬ ವ್ಯಾಧನೇ ಆಗಿದ್ದ!
ರತ್ನಾಕರನೆಂಬ ಮೃಗ ಸದೃಶ- ವ್ಯಾಧ!
ಈ ರತ್ನಾಕರನಿಗೆ- ಕೆಲವರು ಹೇಳುತ್ತಾರೆ ನಾರದರೆಂದು, ಕೆಲವರು ಹೇಳುತ್ತಾರೆ ಸಪ್ತರ್ಷಿಗಳೆಂದು- ಯಾರೇ ಆಗಿರಲಿ- ತನ್ನ ಪಾಪ ಕೃತ್ಯಗಳಬಗ್ಗೆ ಅರಿವು ಮೂಡಿಸಿದರಂತೆ!
ಅದರಿಂದ ಮುಕ್ತನಾಗಬೇಕಾದರೆ ಏನು ಮಾಡಬೇಕು?
ತಪಸ್ಸು!
ಮಾಡಿದ!
ತನ್ನನ್ನು ಸುತ್ತಿಕೊಂಡಿದ್ದ ಪಾಪವೆಂಬ ವಲ್ಮೀಕದಿಂದ ಮುಕ್ತಿ ಹೊಂದಿ- ವಾಲ್ಮೀಕಿಯಾದ!
ಹಾಗೆಯೇ ನಾನು! ನನಗೆ ದುಃಖವಾಗುವುದಿಲ್ಲ! ಕಾರಣವಿಲ್ಲದೇ ಅಲ್ಲ! ನಾನದರಿಂದ ಹೊರಬಂದಿದ್ದೇನೆ!
ಮಗಳೆಂಬ ಮಮಕಾರವಿದೆ- ವ್ಯಾಮೋಹವಿಲ್ಲ! ಆದರೆ… ಅವಳೊಬ್ಬಳಿಗೆ ಸೀಮಿತವಾಗುತ್ತಿದ್ದ ನನ್ನ ಪ್ರೇಮ ಪ್ರಪಂಚವನ್ನೇ ಆವರಿಸುವಷ್ಟು ವಿಶಾಲವಾಗಲು ನನ್ನವಳು ದಾರಿ ಒದಗಿಸಿದ್ದಾಳೆ- ಅವಳಮೇಲೆ ಕೃತಾರ್ಥತೆಯಿದೆ- ದ್ವೇಷವಿಲ್ಲ!
ಅತಿ ಮುಖ್ಯವಾಗಿ… ನನ್ನ ಪ್ರೇಮ ಮೂಲ- ಅಮ್ಮ- ನನ್ನೊಂದಿಗಿದ್ದಾರೆ! ಆ ಬಲದಲ್ಲಿ…, ವಿಷಾದ- ದುಃಖ- ದುಮ್ಮಾನಗಳೆಂಬ ವಲ್ಮೀಕವನ್ನು ಕಳಚಿ ವಾಲ್ಮೀಕಿಯಾಗಿದ್ದೇನೆ!
ದುಃಖ ಅಂತ್ಯವನ್ನು ತಲುಪಿದಾಗ ವಿಷಾದವಂತೆ! ವಿಷಾದದಿಂದ- ಮಹಾಕಾವ್ಯ!
ವೇದನೆಯ ಅಂತ್ಯವೇ ವೇದಾಂತವಂತೆ! ವೇದಾಂತದಿಂದ- ವಿಶ್ವಜನೀಯ ಪ್ರೇಮ…!
ವೆದನೆಯ ಅಂತ್ಯವು ವೆದಾನ್ತವಲ್ಲ , ಗೆಲುವಿನ ಬಲ. vedaanta ಎಂಬುದು ಸುಳ್ಳುನಡೆಯದೆ ಇರುವ ಕತೆ. ಹಾಗೆ ಮನಿಷಾದ ಎಂಬ ಮಾತು ಮಹಾಕಾವ್ಯ ದಲ್ಲಿ ಬರುತ್ತದೆ ಅಂದರೆ ಘನಘೊರ ಪಾಪ, ನಿಮ್ಮ ಗುರಿ ಮುಖ್ಯ ಅಂದರೆ ಯಾಕೆ ವಯಕ್ತಿಕ ವಿಚಾರವನ್ನು ಕತೆ ಮಾಡುತ್ತೀರಾ ಬೇರೆ ವಿಷಯಕ್ಕೆ ನಿಮ್ಮ ಪ್ರತಿಭೆ ಮೀಸಲಾಗಬೆಕು
ReplyDeleteದುಃಖಾಂತ ವಿಷಾದವೂ ಅಲ್ಲ! ಕಥೆಗಾರನಾನು! ವಯಕ್ತಿಕ ಅನುಭವದ ಪ್ರೇರಣೆಯಿಲ್ಲದೆ ಕಥೆ ಬರೆಯುವುದು ಅಪರೂಪ! ಹಾಗೆಂದು ಕಥೆಯಲ್ಲಿ ಕೇವಲ ವಯಕ್ತಿಕವಿಲ್ಲ! ಬೇರೆಯೂ ವಿಷಯವಿದೆ! ಕಥೆಯಂತೆ ಆಸ್ವದಿಸಿದರಾಯಿತು! ಮಾಹಿತಿಗೆ ಧನ್ಯವಾದಗಳು...
Delete