ಕುಟ್ಟಿಚ್ಚಾತ್ತನ್‌

ಕುಟ್ಟಿಚ್ಚಾತನ್!

ಹಾಗೆ… ಕೊನೆಗೂ ದಾರಿಗೆ ಬಂದೆ ಅನ್ನು!”

ನಾನೇಕೆ ದಾರಿಗೆ ಬರಲಿ? ನೀನು ನನ್ನ- ನಾನು ನಿನ್ನ- ಕರ್ತವ್ಯ! ಕಾಲಾಯ ತಸ್ಮೈ ನಮಃ!” ಎಂದೆ.

ಹೂಂ… ಇಷ್ಟು ಅಹಂಕಾರ ಇಲ್ಲದಿದ್ದರೆ ನಾವೇಕೆ ಒಂದು! ಕಾಲ… ಕಾಲವೂ ನಿಯಮಕ್ಕೆ ಬದ್ಧ! ಈಗ… ಕಾಲವಾಗಿದೆ! ಹೇಳು… ಏನುಮಾಡಲಿ? ಅದಕ್ಕೆ ಬದಲಾಗಿ ಏನು ಮಾಡುತ್ತೀಯ? ನನ್ನಿಂದ ಏನು ಬೇಕೋ ತೆಗೆದುಕೋ ಅನ್ನಬೇಡ! ಹಾಗೆ ಹೇಳಿದ್ದರಿಂದ- ನನ್ನನ್ನು ನಂಬಿದ್ದರಿಂದ- ಇಂದಿನವರೆಗೆ ನಿನ್ನನ್ನು ಸಂರಕ್ಷಿಸಿದ್ದೇನೆ! ಈಗ ನೀ ಪ್ರಾಪ್ತನಾಗಿದ್ದೀಯ! ಲೆಕ್ಕ ಲೆಕ್ಕವೇ..! ಹೇಳು- ಏನು ಕೊಡುತ್ತೀಯ?”

ನೀನು ನನ್ನನ್ನು ಅಧಿಗಮಿಸಿ ಮಾತನಾಡಬೇಡ! ನೀ ಹೇಳಿದಂತೆ ಲೆಕ್ಕ ಲೆಕ್ಕವೇ! ನನ್ನ ಗುರಿ ನಾನು ಸಾಧಿಸುವಂತಾದರೆ ನಿನ್ನ ಕೀರ್ತಿಯನ್ನು ಪ್ರಪಂಚಕ್ಕೆ ಹರಡುತ್ತೇನೆ! ಅದಕ್ಕಾಗಿ ನನ್ನ ಆದಾಯದ ನಾಲಕ್ಕರಲ್ಲಿ ಒಂದುಭಾಗ ನಿನಗಾಗಿ ಮೀಸಲಿಡುತ್ತೇನೆ!” ಎಂದೆ.

*

ಕುಟುಂಬ ಕ್ಷೇತ್ರ!

ಭಗವತಿ ಮತ್ತು ವಿಷ್ಣುಮಾಯ- ಪ್ರಧಾನ ಮೂರ್ತಿಗಳು.

ಅವರ ಗಣಗಳಾಗಿ- ದೊಡ್ಡ ಮುತ್ತಪ್ಪ, ಚಿಕ್ಕ ಮುತ್ತಪ್ಪ, ವೀರಭದ್ರ, ಬ್ರಹ್ಮರಕ್ಸಸ್ಸ್...

ಕುಟುಂಬದಲ್ಲಿ ಯಾರೇ ಮರಣಿಸಿದರೂ- ಅವರು ಈ ಗಣಗಳಲ್ಲಿ ಐಕ್ಯರಾಗುತ್ತಾರೆ… ಕ್ಷಣದಿಂದ ಕ್ಷಣಕ್ಕೆ ಮೂರ್ತಿಗಳ ಶಕ್ತಿ ವರ್ಧಿಸುತ್ತ ಹೋಗುತ್ತದೆ…

ಹನ್ನೆರಡು ವರ್ಷಗಳಿಗೊಮ್ಮೆ- ಪ್ರೇತಾಹ್ವಾನ ಅನ್ನುವ ಕರ್ಮವೊಂದು ನೆರವೇರಿಸಲ್ಪಡುತ್ತದೆ.

ಆ ಸಮಯದಲ್ಲಿ- ನಮ್ಮ ಅರಿವಿದ್ದು… ಅರಿವಿಗೆ ಬರದಿದ್ದು- ಮರಣಿಸಿರುವ ಎಲ್ಲ ಹಿರಿಯರನ್ನು ಮೂರ್ತಿಗಳಿಗೆ ಆವಾಹಿಸುತ್ತೇವೆ.

ಮರಣಿಸಿ ಒಂದು ವರ್ಷದ ನಂತರ… ಎಷ್ಟು ವರ್ಷ ಪ್ರೇತವಾಗಿ ಅಲೆಯಬೇಕಾಗಿ ಬರುತ್ತದೆ ಅನ್ನವುದು ಅವರವರ ಕರ್ಮಫಲವನ್ನು ಅವಲಂಬಿಸಿದೆ!

ತೀರಾ ಅತ್ಯಗತ್ಯದ ಹೊರತು ಹನ್ನೆರಡು ವರ್ಷಗಳಿಗೂ ಮುಂಚೆ ಈ ಕರ್ಮವನ್ನು ನೆರವೇರಿಸುವುದಿಲ್ಲ!

ಈ ಸಾರಿ… ಒಂದೂವರೆ ವರ್ಷ ಆಗುವಷ್ಟರಲ್ಲಿ ಮತ್ತೆ ಪ್ರೇತಾಹ್ವಾನ ಕರ್ಮವನ್ನು ನೆರವೇರಿಸಬೇಕಾಯಿತು!

ಹನ್ನೆರಡು ವರ್ಷ ಕಾಯಲು ತಾಳ್ಮೆಯಿಲ್ಲದ ಪುಣ್ಯಾತ್ಮವೊಂದು ಅತಿ ಶೀಘ್ರದಲ್ಲಿ ದೇವರಲ್ಲಿ ಐಕ್ಯವಾಗಬೇಕಿತ್ತು!

*

ನಿಜ!

ಎಲ್ಲವೂ ಮನಸ್ಸನ್ನು ಅವಲಂಬಿಸಿದೆ!

ನಂಬಿಕೆ- ಅಪನಂಬಿಕೆಗಳು… ಅದೃಷ್ಟ- ದುರಾದೃಷ್ಟಗಳು…

ದ್ವೈತವನ್ನು ಆಚರಿಸುವ ಅದ್ವೈತಿ ನಾನು!

ಅಹಂ ಬ್ರಹ್ಮಾಸ್ಮಿ!

ದೇವಿಯ ಮಗನಾದ್ದರಿಂದ ನಾನೂ ದೇವಾಂಶ ಸಂಭೂತನೇ ಅನ್ನುವಲ್ಲಿ- ಅದ್ವೈತಿ!

ದೇವಿಯನ್ನು ಪ್ರತ್ಯೇಕವಾಗಿ ಆರಾಧಿಸುವಲ್ಲಿ- ದ್ವೈತಿ!

ಇಷ್ಟುವರ್ಷವೂ ದೇವಿಯನ್ನು ಆರಾಧಿಸುತ್ತಿದ್ದೆ- ಮನದಲ್ಲಿಯೇ ಪೂಜಿಸುತ್ತಿದ್ದೆ…ಇದ್ದೆ ಅಲ್ಲ! ಈಗಲೂ…!- ಆದರೆ ಏನನ್ನೂ ಬೇಡಿಕೊಂಡವನಲ್ಲ!

ಯಾಕೆ ಬೇಡಲಿ? ಏನನ್ನೇ ಆದರೂ ನೆರವೇರಿಸಿಕೊಡಬೇಕಾಗಿರುವುದು- ಜೊತೆಗಿದ್ದು ಕಾಪಾಡಬೇಕಾಗಿರುವುದು- ದೇವಿಯ ಕರ್ತವ್ಯ!

ಇದುವರೆಗೆ ಕಾಪಾಡಿಕೊಂಡು ಬಂದಿದ್ದಾರೆ ಕೂಡ- ಇನ್ನು ಮುಂದೆಯೂ…!

ದೇವಿಯ ಶ್ರೀರಕ್ಷೆಯ ಅರಿವಿದ್ದೂ- ಇದುವರೆಗೆ ನಾನು ನನ್ನ ಕರ್ಮವನ್ನು- ಹುಟ್ಟಿನ ರಹಸ್ಯವನ್ನು- ನೆರವೇರಿಸಲು ಶ್ರಮಿಸಲಿಲ್ಲ- ಯಾಕೆ?

ಕಾಲಾಯ ತಸ್ಮೈ ನಮಃ!

ನಿಮಿತ್ತವೊಂದರ ಕೊರತೆಯಿತ್ತು!

ದೇವಿಗೆ ನಾನೊಬ್ಬನೇ ಮಗನಲ್ಲ ಅನ್ನುವ ಅರಿವು… ಗಣಗಳ- ಮೂರ್ತಿಗಳ- ಚಾತನ್‌ರ ಅಗತ್ಯ ನನಗೇಕೆ ಅನ್ನುವ ತಾತ್ಸರ ಹೋಗಿ- ಸನಾತನ ಧರ್ಮದ ಏಳಿಗೆಯಾಗಬೇಕಾದರೆ- ಪ್ರಕೃತಿಯ ಈ ಶಕ್ತಿಗಳ ಬಗೆಗಿನ ಅರಿವು ಜನರಿಗೆ ಮೂಡಬೇಕಾದರೆ- ಗಣಗಳಿಗೆ ನಾನು, ನನಗೆ ಅವರು ಅನ್ನುವ ವಾಸ್ತವವನ್ನು ಸ್ಥಿರೀಕರಿಸಲು ನಿಮಿತ್ತವೊಂದರ ಅಭಾವವಿತ್ತು!

ಆ ನಿಮಿತ್ತವೇ…,

ನನ್ನ ಅಪ್ಪನ ಮರಣ!

*

ನಂಬಿಕೆ ಅಂದರೆ ಏನು ಅನ್ನುವುದು ಅರಿವಿಗೆ ಬಂದದ್ದು ನನ್ನ ಆರನೇಯ ವಯಸ್ಸಿನಲ್ಲಿ!

ಅಪ್ಪನ ನಂಬಿಕೆ.

ಅಪ್ಪನ ಮನಸ್ಸು ಎಷ್ಟು ಪವಿತ್ರವೆಂದರೆ…,

ಮುತ್ತಪ್ಪ ಅಪ್ಪನ ಇಷ್ಟ ದೈವ- ಅಥವ- ಇಷ್ಟ ಮೂರ್ತಿ!

ಕೇರಳದ ಪರಶ್ಶಿನಿ ಕಡವು ಎನ್ನುವ ಮುತ್ತಪ್ಪನ ಮೂಲ ಸ್ಥಾನಕ್ಕೆ- ಚಾತನ್ ಸೇವೆಗಾಗಿ- ಅಪ್ಪ ಆರು ತಿಂಗಳಿಗೊಮ್ಮೆ ಹಣವನ್ನು ಕಳಿಸುತ್ತಿದ್ದರು.

ಈ ಚಾತನ್‌ರ ವಿಷಯ ಅಥವಾ ಮಹಿಮೆ ಅದ್ಭುತ…,

ನಂಬಿಕೆಯಿಂದ…, ನನ್ನ ಇಷ್ಟಾರ್ಥವನ್ನು ನೆರವೇರಿಸಿದರೆ ನಿನಗೆ 'ಇಂಥದ್ದನ್ನು' ಮಾಡುತ್ತೇನೆ ಎಂದು ಹರಕೆಯನ್ನು ಹೊತ್ತರೆ ಇಷ್ಟಾರ್ಥದ ಸಿದ್ಧಿಯಾಗುತ್ತದೆ- ಖಂಡಿತಾ ಆಗುತ್ತದೆ! ತಕ್ಷಣವೇ ನಾವು ಹೊತ್ತ ಹರಕೆಯನ್ನು ತೀರಿಸಿಬಿಡಬೇಕು! ಇಲ್ಲದಿದ್ದರೆ ಫಲ ಉಲ್ಟಾ ಹೊಡೆಯುತ್ತದೆ!

ಅಂತಹ ಮುತ್ತಪ್ಪನ ಭಕ್ತ ಅಪ್ಪ! ಯಾವುದೇ ಸಂದಿಗ್ಧ ಘಟ್ಟದಲ್ಲಿ ಮುತ್ತಪ್ಪಾ… ಎಂದು ಅಪ್ಪ ಮನಸ್ಸರಿತು ಕೂಗಿದರೆ ಮುತ್ತಪ್ಪ ಓಗೊಡುತ್ತಾನೆ. ಇದು ಹಲವುಭಾರಿ ನಮ್ಮ ಅನುಭವಕ್ಕೆ ಬಂದಿದೆ…

ಮುತ್ತಪ್ಪ ಅಪ್ಪನ ಕರೆಗೆ ಓಗುಡುತ್ತಾನೆ ಅನ್ನುವುದು ಅರಿವಿಗೆ ಬಂದ ಮೊದಲ ಮತ್ತು ಸಣ್ಣ ಉದಾಹರಣೆ…,

ನನಗಾಗ ಆರು ವಯಸ್ಸು!

ಕೊಡಗಿನ ಒಂದು ಮುತ್ತಪ್ಪ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಮುತ್ತಪ್ಪತ್ತೆರೆ ನಡೆಯುತ್ತದೆ. ಇದನ್ನು ಬಯಲಾಟಗಳಲ್ಲಿ ಕಟ್ಟುವ ಕೋಲಕ್ಕೆ ಹೋಲಿಸಬಹುದು!

ಮುತ್ತಪ್ಪನ ವೇಶಧಾರಿ ಆವೇಶದ ಕುಣಿತದ ಕೊನೆಗೆ ಜನರ ಕಷ್ಟ ಸುಖಗಳನ್ನು ವಿಚಾರಿಸುತ್ತಿದ್ದರು.

ಸ್ವಲ್ಪ ದೂರದಲ್ಲಿ, ಅಪ್ಪನ ಮಡಿಲಿನಲ್ಲಿ ಕುಳಿತು ಆಸಕ್ತಿ- ಹೆದರಿಕೆ- ಕುತೂಹಲಗಳಿಂದ ನೋಡುತ್ತಿದ್ದೆ.

ಅಪ್ಪನ ಗೆಳೆಯರೊಬ್ಬರು ಕೇಳಿದರು…,

ನೀವು ಹೋಗಿ ಕೇಳುವುದಿಲ್ಲವೇ…?”

ಅಪ್ಪನ ಉತ್ತರ…,

ವರ್ಷಕ್ಕೆರಡುಸಾರಿ ಕಳಿಸುತ್ತಿಲ್ಲವಾ…? ನನ್ನ ಬಳಿಗೆ ಬರಲಿ…!”

ಜನರೆಲ್ಲಾ ಚದುರಿದ ನಂತರ…, ಅಪ್ಪನ ಬಳಿಗೆ ನಡೆದು ಬಂದರು ಮುತ್ತಪ್ಪ…!

ಆಗಿನ ನನ್ನ ಮನಸ್ಸಿನ ಭಾವನೆಯನ್ನು ಏನೆಂದು ಹೇಳಲಿ?

ಅಪ್ಪನ ಮುಖದಲ್ಲಿನ ನಗು- ಮುತ್ತಪ್ಪನ ಮುಖದಲ್ಲಿನ ನಗು…!

ಸೌಖ್ಯವಾ…?” ಎಂದರು ಮುತ್ತಪ್ಪ.

ಹೂಂ!” ಎಂದರು ಅಪ್ಪ.

ಮಗನಾ…?”

ಹೂಂ!”

ನನ್ನ ಪುಟ್ಟ ಕೈಯ್ಯನ್ನು ಹಿಡಿದು- ಕೈಯ್ಯಲ್ಲಿದ್ದ ವಾಚನ್ನು ನೋಡಿ…,

ಗಡಿಯಾರ…! ಪ್ರವರ್ತಿಸುತ್ತಿದೆಯೇ..?” ಎಂದರು.

ನಾನೂ ಗಂಭೀರವಾಗಿ, “ಹೂಂ!” ಎಂದೆ. ನಕ್ಕರು.

ರಾತ್ರಿ ಹನ್ನೆರಡು ಗಂಟೆಗೆ ನನ್ನ ಕೊನೆಯ ಆಟವಿದೆ! ನಿದ್ದೆ ಮಾಡದೆ- ನೋಡಿಯೇ ಹೋಗಬೇಕು! ಒಂದು ಕೋಳಿ, ಒಂದು ಗಡಿಗೆ ಮದ್ಯ ಮರೆಯಬೇಡ!” ಎಂದರು.

ಅಪ್ಪನ ಮುಖವನ್ನು ನೋಡಿದೆ.

ಕಳ್ಳು ಅಥವಾ ನೀರಾ ಅಥವಾ ಮದ್ಯ… ಮುತ್ತಪ್ಪನ ಫೇವರಿಟ್!

ಅಪ್ಪ ಮುಗುಳುನಕ್ಕರು.

ಅದನ್ನು ನೆರವೇರಿಸಿದೆನೋ ಇಲ್ಲವೋ ತಿಳಿಯದು!

ನನ್ನ ಜೀವನದಲ್ಲಿ ಒಂದು ನಿಯಮವನ್ನು ಅಳವಡಿಸಿಕೊಂಡಿದ್ದೆ- ದ್ದೇನೆ!

ನಾನು ಕುಡಿಯುವುದಿಲ್ಲ! ಕುಡಿಯುವ ಯಾರೊಬ್ಬರಿಗೂ ಕೊಡಿಸುವುದೂ ಇಲ್ಲ! ಅಂದರೆ ಮದ್ಯಕ್ಕಾಗಿ ಹಣವನ್ನು ವ್ಯಯಿಸುವುದಿಲ್ಲ! ಯಾವ ದೊಡ್ಡ ಪಾರ್ಟಿಯೇ ಆಗಲಿ- ಮದ್ಯ, ಸಿಗರೇಟು ಯಾರಾದರೂ ಕೊಂಡುಕೊಂಡರೆ ದುಡ್ಡು ಅವರೇ ಕೊಡಬೇಕು… ಉಳಿದ ತಿನ್ನುವ- ನೆಂಜಿಕೊಳ್ಳುವ ಏನೇ ಆದರೂ ನಾನು ಖರ್ಚುಮಾಡುತ್ತೇನೆ! ಮದ್ಯಕ್ಕು ಸಿಗರೇಟಿಗೂ ಮಾಡುವುದಿಲ್ಲ.

ಇದು ನಿಯಮ!

ಅಪ್ಪ ಕೂಡ ಮದ್ಯವನ್ನು ತರಲು ನನ್ನನ್ನು ಕಳಿಸಿದವರಲ್ಲ. ಅವರಿಗೆ ಬೇಕೆನಿಸಿದರೆ ಜೊತೆ ಕರೆದುಕೊಂಡು ಹೋಗಿ- ಗಾಡಿ ನಾನೇ ಓಡಿಸಬೇಕಾದ್ದರಿಂದ- ಅವರೇ ಕೊಂಡು ಕುಡಿಯುತ್ತಿದ್ದರು ಹೊರತು- ತೆಗೆದುಕೊಂಡು ಬಾ ಅಂದವರಲ್ಲ.

ಆದರೆ…, ಒಂದು ವರ್ಷ ಮುಂಚೆ…,

ಅಪ್ಪನಿಗೆ ಸುಸ್ತು- ತಲೆಭಾರ- ಸಣ್ಣ ಜ್ವರ…

ಆದರೂ ಎದ್ದು ನಡೆಯುವುದು- ಅವರ ಕೆಲಸಗಳನ್ನು ಅವರು ಮಾಡುವುದು ಮಾಡುತ್ತಿದ್ದರು.

ಹೊರಕ್ಕೆ ಹೋಗುವ ಅವಸ್ಥೆಯಲ್ಲಿ ಇರಲಿಲ್ಲ! ಇದ್ದಿದ್ದರೆ ಹೋಗಿ ಒಂದು ಪೆಗ್ ಹಾಕಿ ಬರುತ್ತಿದ್ದರೇನೋ…!

ಜೀವನದಲ್ಲಿ ಮೊದಲಭಾರಿ ಅಪ್ಪನಿಗೆ ತಿಳಿಯದಂತೆ ಮದ್ಯದಂಗಡಿಗೆ ಹೋಗಿ ಅಪ್ಪನ ಬ್ರಾಂಡ್ ತಂದು ಮನೆಯಲ್ಲಿಟ್ಟೆ!

ಅಮ್ಮನಿಗೆ ಮಾತ್ರ ಹೇಳಿದೆ.

ಆಕಸ್ಮಾತ್ ಅಪ್ಪನಿಗೆ ಕುಡಿಯಲೇ ಬೇಕು ಅಂತ ಇದ್ರೆ ಕೊಡೋಣ!”

ಅಂದು ರಾತ್ರಿ ಅಪ್ಪ ಸ್ವಲ್ಪ ಡಿಸ್ಟರ್ಬ್ ಆದರು. ನಿದ್ದೆ ಬರುತ್ತಿಲ್ಲ. ಗೋಡೆಯಲ್ಲಿ ನೆರಳುಕಂಡು ಹೆದರುವುದು…, ಏನೇನೋ ಗೊಣಗುವುದು…

ಅಮ್ಮ ಕೇಳಿದಾಗ ಏನೂ ಸಮಸ್ಯೆ ಇಲ್ಲ ಎಂದರು… ನಂತರ ನಿದ್ರಿಸಲು ಶ್ರಮಿಸಿ ಸಾಧ್ಯವಾಗದೆ ಎದ್ದು ಕುಳಿತರು.

ರಾತ್ರಿ ಒಂದೂ ಮುಕ್ಕಾಲು! ಯಾವ ಕಾರಣಕ್ಕೂ ನಿದ್ರೆ ಬರಲಿಲ್ಲ!

ಏನಾಯ್ತು? ಸ್ವಲ್ಪ ಡ್ರಿಂಕ್ ಮಾಡ್ತೀರ?” ಎಂದರು ಅಮ್ಮ!

ಏನು ಗೇಲಿ ಮಾಡ್ತಿದೀಯ? ಇಷ್ಟು ಹೊತ್ತಿಗೆ ಎಲ್ಲಿಂದ?” ಎಂದರು ಅಪ್ಪ.

ಮಗ ತಂದಿಟ್ಟಿದ್ದಾನೆ!”

ಅಪ್ಪನ ಮುಖದಲ್ಲಿ ಆಶ್ಚರ್ಯ!

ಸರಿ ಕೊಡು… ನಿದ್ರೆ ಬರುತ್ತದ ನೋಡೋಣ!” ಎಂದರು.

ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಅಪ್ಪನಿಗೆ ಮದ್ಯವನ್ನು ಸುರಿದುಕೊಟ್ಟೆ!

ಅವರು ಹೇಳಿದಷ್ಟೇ- ಹೇಳಿದಷ್ಟೇ ನೀರಿನೊಂದಿಗೆ…!

ನೆಮ್ಮದಿಯಾಗಿ ನಿದ್ರೆ ಮಾಡಿದರು.

*

ಬೆಳಗ್ಗೆ ಎದ್ದಾಗಲೂ ಜ್ವರ ಬಿಟ್ಟಿರಲಿಲ್ಲ. ಡಾಕ್ಟರ್‌ಗೆ ಕಾಲ್ ಮಾಡಿದಾಗ..,

ನಾನು ಊರಿನಲ್ಲಿಲ್ಲ… ದಯವಿಟ್ಟು ಹಾಸ್ಪಿಟಲ್‌ಗೆ ಕರೆದುಕೊಂಡು ಹೋಗಿ… ಕೊರೋನ ಪೀಕ್ ಲೆವಲ್ ಇರುವುದರಿಂದ ಯಾರೂ ಅಡ್ಮಿಟ್ ಮಾಡಿಕೊಳ್ಳಬೇಕೆಂದಿಲ್ಲ… ಆದರೂ ಶ್ರಮಿಸಿನೋಡಿ!” ಎಂದರು.

ಒಂದು, ಎರಡು, ಮೂರು… ಹಾಸ್ಪಿಟಲ್‌ಗಳಿಗೆ ಹೋಗಿದ್ದಾಯಿತು…ಎಲ್ಲರಿಗೂ ಕೊರೋನ ಹೆದರಿಕೆ! ಬೆಡ್ ಇಲ್ಲವೆಂಬ ನೆಪ!

ನಿಮಿಷದಿಂದ ನಿಮಿಷಕ್ಕೆ ಅಪ್ಪನ ಸ್ತಿತಿ ಗಂಭೀರವಾಯಿತು. ಆಕ್ಸಿಜನ್ ಲೆವೆಲ್ ಇಳಿಯುತ್ತಾ ಹೋಯಿತು...

ಸಣ್ಣ ಸುಸ್ತು ಅಷ್ಟೆ- ಎಂದು ಹೊರಟವರು… ಅವರೇ ನಡೆದು ಆಟೋ ಹತ್ತಿದವರು… ಕುಳಿತುಕೊಳ್ಳಲೂ ಸಾಧ್ಯವಾಗದಂತೆ ಮಲಗಿಬಿಟ್ಟರು!

ಆಂಬ್ಯುಲನ್ಸ್‌ನಲ್ಲಿ ನಾಲಕ್ಕನೆಯ ಹಾಸ್ಪಿಟಲ್…

ಜನ ಜನ ಜನ!

ಗೆಳೆಯ ಬೆಡ್‌ಗಾಗಿ ಓಡಾಡುತ್ತಿದ್ದ.

ಅಪ್ಪನ ಕೈ ಹಿಡಿದು ನಾನು- ಚಲಿಸಲಾಗದೆ ಕುಳಿತಿದ್ದೆ!

ಕೈ ಬಿಡಿಸಿಕೊಳ್ಳಲು ನೋಡಿದರೆ ಹೆದರಿದಂತೆ ಕಾಣುತ್ತಿದ್ದರು…, ಅವರೇ ಬಲವಾಗಿ ಹಿಡಿದುಕೊಳ್ಳುತ್ತಿದ್ದರು.

ಮನಸ್ಸಿನಲ್ಲಿ ಅರಿಯದ ಭಾವ.

ಸಮಯವಾಯಿತಾ…?

ಅಪ್ಪನ ತೀರಾ ಸಮೀಪಕ್ಕೆ ಕುಳಿತೆ.

ಹೆದರಬೇಡಿ. ಮರಣವೇ ಬಂದಿದ್ದರೆ ನೆಮ್ಮದಿಯಾಗಿ ಹೋಗಿ ಬನ್ನಿ. ಮಗನ ಕೈ ಹಿಡಿದು ಹೋಗುತ್ತಿದ್ದೀರ. ನಿಮ್ಮ ಪರಿಪೂರ್ಣ ಕರ್ತವ್ಯವನ್ನು ಮುಗಿಸಿದ್ದೀರ. ಯಾವುದೇ ಗೊಂದಲ ಬೇಡ. ಅಮ್ಮನನ್ನು ನಾನು ನೋಡಿಕೊಳ್ಳುತ್ತೇನೆ. ಶಾಂತವಾಗಿರಿ. ಯಾವುದೇ ಚಿಂತೆ ಬೇಡ. ಜೀವನವನ್ನು ಸಂಪೂರ್ಣವಾಗಿ ಅನುಭವಿಸಿರುವವರು ನೀವು… ಮುತ್ತಪ್ಪನಲ್ಲಿ ನಿಮ್ಮ ಬೇಡಿಕೆಯೂ ಅದೇ ತಾನೆ? ಒಂದು ದಿನವೂ ಯಾರೊಬ್ಬರಿಗೂ ಹೊರೆಯಾಗದೆ ಹೋಗಬೇಕೆಂದು? ನಿಮ್ಮ ಜೀವನದಬಗ್ಗೆ ನಿಮಗೆ ತೃಪ್ತಿಯಿದ್ದರೆ- ನೆಮ್ಮದಿಯಾಗಿ ಹೋಗಿ ಬನ್ನಿ!” ಎಂದೆ.

ಎರಡು ನಿಮಿಷ… ನನ್ನ ಕೈಯನ್ನೊಮ್ಮೆ ಬಲವಾಗಿ ಅದುಮಿ ಹಿಡಿದು- ನಿಶ್ಚಲರಾದರು.

*

ಒಂದು ವರ್ಷ!

ಅಪ್ಪನ ವರ್ಷದ ಕಾರ್ಯವನ್ನು ಮುಗಿಸಿ ಮನೆಗೆ ಬಂದೆವು.

ಚಿಕ್ಕಪ್ಪನಿಂದ ಕರೆಬಂತು.

ನಮ್ಮ ದೇವಸ್ಥಾನದಲ್ಲಿ ಈ ವರ್ಷವೇ ಪ್ರೇತಾಹ್ವಾನದ ಕಾರ್ಯಕ್ರಮವಿದೆ!” ಎಂದರು.

ಹೇಗೆ ಸಾಧ್ಯ? ಕಳೆದ ವರ್ಷ ತಾನೆ ನಡೆದಿದ್ದು? ಇನ್ನೂ ಹನ್ನೊಂದು ವರ್ಷ ಕಳೆಯಬೇಕಲ್ಲವಾ?” ಎಂದೆ.

ನಿನ್ನ ಅಪ್ಪನಲ್ಲವಾ? ಸಾಧಿಸಿಕೊಳ್ಳುತ್ತಾರೆ!” ಎಂದರು.

ಕೊನೆಯ ಪ್ರೇತಾಹ್ವಾನ ಕಾರ್ಯ ನಡೆದ ಒಂದೂವರೆ ವರ್ಷದಲ್ಲಿ ಕುಟುಂಬದ ಆರು ಜನ ಹೋಗಿದ್ದರು! ಅದರಲ್ಲಿ ಇಬ್ಬರದ್ದು ಅಕಾಲಿಕ ಮರಣ. ಆ ಮನೆಯಲ್ಲಿ ಏನೇನೋ ದುಃಶಕುನಗಳು. ಅಡಚಣೆಗಳು. ಪ್ರಶ್ನೆ ಇಟ್ಟಾಗ ಆ ಪ್ರೇತಗಳಿಗೆ ಮುಕ್ತಿ ದೊರಕಿದ್ದಲ್ಲದೆ ಪರಿಹಾರವಿಲ್ಲ ಅಂದರು. ಅಪ್ಪನನ್ನು ಸೇರಿಸಬಹುದೆ ಅಂದಾಗ…,

ಮರಣಿಸಿ ಮೊದಲ ವರ್ಷದ ತಿಥಿ ಕಾರ್ಯಗಳು ಮುಗಿದಿರಬೇಕು! ಮುಗಿದ ತಕ್ಷಣವೇ ದೇವರಲ್ಲಿ ಲೀನವಾಗಲು ಅವರದೆಷ್ಟು ಪುಣ್ಯ ಮಾಡಿರಬೇಕೋ…!” ಎಂದರು.

*

ನೀನಿದನ್ನೆಲ್ಲಾ ನಂಬುತ್ತೀಯ?”

ನಿನ್ನೊಂದಿಗೆ ಮಾತನಾಡುತ್ತಿರುವುದೇ ಸಾಕ್ಷಿ!” ಎಂದೆ.

ಹೇಳು! ಇಷ್ಟು ವರ್ಷ ಇಲ್ಲದ್ದು- ಈಗ ಯಾಕೆ ಹರಕೆ ಹೊರಬೇಕೆಂಬ ಚಿಂತೆ?”

ಸನಾತನ ಧರ್ಮಕ್ಕಾಗಿ ನಾನೇನು ಮಾಡಿದೆ ಅನ್ನುವ ಒಂದು ಸಣ್ಣ ಕೀಳರಿಮೆ!” ಎಂದೆ.

ಅರ್ಥವಾದಂತೆ ನಕ್ಕ- ಚಾತನ್!

ಹೇಳು! ನಂಬಿಕೆ ಇಲ್ಲದವರಿಗೆ ನೀನೇನು ಹೇಳುತ್ತೀಯ?”

ನಮ್ಮ ಸನಾತನ ಧರ್ಮೀಯರು ಮುಗ್ಧರು ಚಾತ! ತತ್ತ್ವಗಳು- ಉಪದೇಶಗಳು ಅವರಿಗೆ ಅರ್ಥವಾಗುವುದಿಲ್ಲ! ಅವರಿಗೆ ನಂಬಿಕೆ ಬರಬೇಕೆಂದರೆ ಅದ್ಭುತಗಳು ನಡೆಯಬೇಕು! ನಾನು ದೇವಿಯ ಸಂರಕ್ಷಣ ವಲಯದಲ್ಲಿರುವವನು! ಯಾವ ಹರಕೆಯ ಅಗತ್ಯವೂ ನನಗಿಲ್ಲ! ಆದರೆ…, ನನ್ನ ಇಷ್ಟಾರ್ಥ ನೆರವೇರಿದರೆ ಪ್ರತಿ ವರ್ಷದ ನನ್ನ ಆದಾಯದ ನಾಲ್ಕರಲ್ಲಿ ಒಂದುಭಾಗ ನಿನ್ನ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ನಾನು ಹರಕೆ ಹೊತ್ತುಕೊಂಡೆ ಅಂದುಕೋ- ಹೊರದಿದ್ದರೂ ನಡೆಯುತ್ತದೆ! ನೀನು ಅಹಂಕರಿಸಬೇಡ- ಸುಮ್ಮನೆ ಅಂದುಕೋ…! ಅದು ನಡೆಯುತ್ತದೆ. ನಂತರ ನಾನು ನನ್ನ ಮಾತಿನಂತೆ ನಡೆದುಕೊಳ್ಳುತ್ತೇನೆ! ನನ್ನ ಆದಾಯದ ಒಂದು ಭಾಗ ನಿನ್ನ ಸೇವೆಗೆ ಅಂದರೆ ಅರ್ಥವೇನು ಚಾತ? ನನ್ನ ಸನಾತನ ಧರ್ಮದ ಏಳಿಗೆ! ಆಗ ನಾನು ನನ್ನ ಜನಕ್ಕೆ ಹೇಳಬಹುದು- ನೋಡಿದ್ರಾ ನಮ್ಮ ದೇವರು ಹೇಗೆ ಸಾಧಿಸಿಕೊಟ್ಟರೆಂದು! ಜನರಲ್ಲಿ ನಂಬಿಕೆ ಉದಿಸಲಾರಂಭಿಸುತ್ತದೆ! ನಂತರ ನಾನು ಅವರಿಗೆ ವಿವರಣೆ ಕೊಡಬಹುದು!”

ಏನೆಂದು?”

ಹರಕೆ ಹೇಗೆ ನಡೆಯುವುದೆಂದು!”

ಹೇಗೆ?”

ನಾನು ನಿನ್ನಲ್ಲಿ ಹರಕೆ ಹೊತ್ತೆ! ಅದೊಂದು ಸಕಾರಾತ್ಮಕ ಭಾವ! ಹೋ… ನಾನು ಹರಕೆ ಹೊತ್ತುಕೊಂಡುಬಿಟ್ಟಿದ್ದೇನೆ, ಇನ್ನೇನೂ ಚಿಂತೆಯಿಲ್ಲ! ಎಲ್ಲಾ ನಡೆಯುತ್ತದೆ- ಎಂದು. ಆ ಭಾವವೇ ಅಧಿಕವಾಗಿ ನಮ್ಮ ಕಾರ್ಯಗಳು ನಡೆಯಲು ಬೇಕಾದ ದಾರಿಗಳೇ ಕಾಣಿಸಲಾರಂಭಿಸುತ್ತವೆ. ನಡೆಯುತ್ತದೆ ಅನ್ನುವ ನಮ್ಮ ಮನದಲ್ಲಿನ ನಂಬಿಕೆ ಅದನ್ನು ನಡೆಸುತ್ತದೆ! ಆ ನಂಬಿಕೆಗೆ ಹೆಸರು ಚಾತನ್‌ ಆಗಬಹುದು..!”

ನಂಬಿಕೆಯೇ ಇಲ್ಲದವರಿಗೆ ನೀನು ಕೊಡವ ಸಲಹೆಯೇನು?”

ಮೃತ್ಯುಂಜಯ ಮಂತ್ರ! ಎಷ್ಟಿದೆ? ನಾಲ್ಕು ಪುಟ್ಟ ಸಾಲುಗಳು! ಅಯ್ಯೋ ಅದೆಲ್ಲಾ ನಮ್ಮ ಹಿರಿಯರ ಪುಂಡಾಟಗಳು ಅದರಲ್ಲೇನೂ ಇಲ್ಲ ಅನ್ನುವವರಿರುತ್ತಾರೆ! ಅವರಿಗೆ ನಾನು ಹೇಳುವುದು ಇಷ್ಟೆ…! ನಾಲಕ್ಕು ಸಾಲುಗಳನ್ನು ಅರ್ಥಸಹಿತ ಕಲಿತುಕೊಳ್ಳುವುದರಿಂದ ನಷ್ಟವೇನು? ಅದನ್ನು ಉಚ್ಚರಿಸಲು ಹತ್ತು ಸೆಕೆಂಡ್ ಕೂಡ ಬೇಡ! ಆಗಾಗ ಉಚ್ಚರಿಸುತ್ತಿದ್ದರೆ ಕಳೆದುಕೊಳ್ಳುವುದೇನು? ಒಳಿತಾಗುವ ಹಾಗಿದ್ದರೆ ಆಗಲಿ- ಆಗದಿದ್ದರೆ ಬೇಡ! ಪ್ರಯೋಗವನ್ನೇ ಮಾಡದೆ ಹಿರಿಯರ ಅನುಭವವನ್ನು ಅಲ್ಲಗಳೆಯುವುದು ಅವಿವೇಕಿತನ! ನಷ್ಟವಿಲ್ಲ ಅಂದಮೇಲೆ ಅದೇನೋ ಒಂದು ಕೈ ನೋಡಿಬಿಡುವುದು ಒಳ್ಳೆಯದು! ನನ್ನ ಜೀವನದ ಬಗ್ಗೆ ನನಗಿರುವ ತೃಪ್ತಿಗೆ, ನನ್ನೊಳಗಿನ ಆನಂದಕ್ಕೆ ಸನಾತನ ಧರ್ಮದಮೇಲಿನ ನನ್ನ ನಂಬಿಕೆಯೇ ಕಾರಣವೆಂದು ನಾನು ಅಧಿಕಾರಯುತವಾಗಿ ಹೇಳಬಲ್ಲೆ!” ಎಂದೆ.

ಚಾತನ್‌ನ ರೂಪದಲ್ಲಿ ಹೊರಗೆ ನಿಂತು ನನ್ನೊಳಗಿನ ಅರಿವಿಗೆ- ಅನುಭವಕ್ಕೆ ರೂಪ ಕೊಟ್ಟ ದೇವಿ ಮತ್ತೊಮ್ಮೆ ನನ್ನನ್ನು ಆವರಿಸಿಕೊಂಡರು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!