ಬೆಟ್ಟದಲ್ಲಿನ ಗೊಂದಲ!
ಬೆಟ್ಟದಲ್ಲಿನ ಗೊಂದಲ
*
ಇಂದೇಕೆ ಹೀಗೆ? ಎಚ್ಚರವಾದಾಗಿನಿಂದ ಏನೋ ಗೊಂದಲ! ಸೋಮಾರಿತನ! ಬೆಟ್ಟಕ್ಕೆ ಹೋಗಬೇಕೋ ಬೇಡವೋ…?
ಇಂದು ಹೋಗದಿದ್ದರೆ ಈ ವಾರ ಪೂರ್ತಿ ಹಾಳು!
ಹನ್ನೆರಡು ವರ್ಷದಿಂದ ಸ್ಟೆಪ್ ಹತ್ತುತ್ತಿದ್ದೇನೆ! ನನ್ನ ದೈಹಿಕ- ಮಾನಸಿಕ ದೃಢತೆಗೆ ಬೆಟ್ಟದ ಪಾತ್ರ ಅಷ್ಟಿಷ್ಟಲ್ಲ! ಎಂದಿರುವಾಗ ಸೋಮಾರಿಯಾಗಬಹುದೇ?
ಎದ್ದೆ. ತಯಾರಾದೆ.
ಬೆಟ್ಟದ ತಪ್ಪಲು ತಲುಪಿದಾಗ… ಗೊಂದಲಕ್ಕೆ ಪುಷ್ಟಿ ಕೊಡುವಂತೆ… ಪ್ರತಿ ದಿನವೂ ಜೊತೆಗೆ ಹತ್ತುತ್ತಿದ್ದ ಐದಾರು ನಾಯಿಗಳಲ್ಲಿ ಒಂದೇ ಒಂದು ನಾಯಿ ನನಗಾಗಿ ಕಾಯುತ್ತಿದೆ..!
“ಉಳಿದವರು ಎಲ್ಲೋ?” ಎಂದೆ.
“ಭೌ!” ಎಂದಿತು.
ಯಾರಿಗ್ಗೊತ್ತು ಎಂದಿರಬಹುದು!
ಅಥವಾ…,
ಬೆಟ್ಟ ಹತ್ತಬೇಡ ಎಂದೇನಾದರೂ ಸೂಚನೆ ಕೊಡುತ್ತಿದೆಯೋ?
ಏಳುವಾಗಿನ ಸೋಮಾರಿತನಕ್ಕೆ ಪುಷ್ಟಿಕೊಡುತ್ತಿದ್ದೇನೆ ಅನ್ನಿಸಿತು… ಅಲ್ಲದೆ…,
ಹೆಜ್ಜೆ ಮುಂದಿಟ್ಟಾಗಿದೆ!
ಹತ್ತಲು ಶುರು ಮಾಡಿದಾಗಲೂ ಎರಡುಮೂರುಬಾರಿ..,
“ಭೌ, ಭೌ, ಭೌ!” ಎಂದಿತು.
ಯಾಕೋ ಇಂದು ಮಹಾಪ್ರಾಣದಲ್ಲಿ ಬೊಗಳುತ್ತಿದೆ ಅನ್ನಿಸಿ ನಗುಬಂತು!
ಇವ ನಿಲ್ಲುವುದಿಲ್ಲ- ನನ್ನ ಮಾತು ಕೇಳುವುದಿಲ್ಲ- ಅನ್ನಿಸಿತೋ ಏನೋ… ಎಂದಿನಂತೆ ಹಿಂದೆ ಮುಂದೆ ಅಕ್ಕ ಪಕ್ಕ ಸುಳಿಯುತ್ತಾ ಕಾವಲುಗಾರನಂತೆ ಜೊತೆಬಿಡದೆ ನಡೆಯಿತು!
ನನ್ನ ಗೊಂದಲಕ್ಕೆ ಚಿಗುರುಗಳು ಮೊಳೆಯಲಾರಂಭಿಸಿತು!
ಅಲ್ಲಾ…, ಹಾರರ್ ಕಥೆಗಳನ್ನು ಬರೆದೂ ಬರೆದೂ… ಎಷ್ಟು ಮಟ್ಟಿನ ಭ್ರಮೆಗೆ ಒಳಗಾದೆನೆಂದರೆ…,
ನಾನು ಮುಂಚೆಯೇ ಸತ್ತು- ನನಗೇ ಗೊತ್ತಿಲ್ಲದೆ… ಈಗ ಬದುಕಿದ್ದೇನೆ ಎನ್ನುವ ಭ್ರಮೆಯಲ್ಲಿ ಬೆಟ್ಟ ಹತ್ತುತ್ತಿದ್ದೇನೆಯೇ ಅನ್ನುವಷ್ಟು!
“ಛೆ!” ಎಂದು ತಲೆ ಕೊಡವುವಷ್ಟರಲ್ಲಿ ಮತ್ತೊಂದು ಗೊಂದಲ… ಪ್ರಾಣಿಗಳಿಗೆ ದೆವ್ವದ ಅರಿವು ಹೆಚ್ಚಂತೆ! ಈ ನಾಯಿ ದೆವ್ವವನ್ನು ಕಂಡು ಬೊಗಳುತ್ತಿದೆಯೋ ಏನೋ..!
ಅಥವಾ ನನ್ನ ಭ್ರಮೆಯೇ ನಿಜವಾಗಿದ್ದು- ನನ್ನನ್ನೇ ನೋಡಿ ಬೊಗಳುತ್ತಿದೆಯೋ?
ಬೆಳಗ್ಗೆ ನಾಲಕ್ಕೂವರೆ ಗಂಟೆಯ ಕತ್ತಲು! ಕಾಡಿನ ನಡುವಿನ ಮೆಟ್ಟಿಲು! ಈ ಗೊಂದಲ ಇಲ್ಲೇ ಹುಟ್ಟಬೇಕೆ?
ಮತ್ತೊಮ್ಮೆ ತಲೆ ಕೊಡವಿದೆ! ಪಕ್ಕದಲ್ಲಿ ಏನೋ ಚಲಿಸಿದಂತಾಯಿತು! ನಾಯಿಯೂ ಭೌ ಎಂದಿತು! ಟಕ್ಕನೆ ನೋಡಿದೆ… ಏನೂ ಇಲ್ಲ!
ಚಾಮುಂಡಿ ಬೆಟ್ಟದಲ್ಲಿ ಚಿರತೆಯಿದೆಯಂತೆ! ಈ ದೆವ್ವ ಭೂತಗಳ ನೆನಕೆಯಲ್ಲಿ ಅದನ್ನು ಮರೆತೆನೆ?
ಚಿರತೆಯ ಸಾನ್ನಿಧ್ಯದ ಅರಿವಾದಾಗ ನಾಯಿ ನಿಲ್ಲುತ್ತಿದೆಯಾ? ಭೌ ಅನ್ನುತ್ತಿದೆಯಾ...
ಅಲ್ಲಾ… ಮುನ್ನೂರನೇ ಮೆಟ್ಟಿಲ ಬಳಿ ಬರುವಾಗ ಏದುಸಿರು ಶುರವಾಗಬೇಕು! ಇಂದು ಬೇಗ ಶುರುವಾಗಿದೆಯಲ್ಲಾ..! ಅಥವಾ ಅದೂ ಭ್ರಮೆಯೋ? ಮುಂಚೆ ಗಮನಿಸದೆ ಇಂದು ಗಮನಿಸುತ್ತಿದ್ದೇನೆಯೋ…?
ಅಥವಾ ಏದುಸಿರಿಗೆ ಕಾರಣ... ಹೆದ... ಛೆ! ಅಹಂ ಒಪ್ಪದು!!
ಏನೋಪ್ಪ!
ಈ ನಾಯಿಯೋ… ಮುಂದೆ ಹೋಗು, ಏನೋ ಕಂಡಂತೆ ನಿಲ್ಲು, ಭೌ ಅನ್ನು!
ಹೆದರದವನ ಮನಸ್ಸಿಗೂ ಹೆದರಿಕೆ ಹುಟ್ಟಿಸುತ್ತೆ!
ಅಕ್ಕ ಪಕ್ಕದ ಗಿಡಗಳು ಅಲ್ಲಾಡಿದಂತೆ! ಗಾಳಿ ಬೀಸಿದರೆ ಅಲ್ಲಾಡಲೇ ಬೇಕು!
ಎರಡು ಗಿಡಗಳ ನಡುವಿನ ಕಪ್ಪು ಕತ್ತಲೆಗೆ ಏನೇನೋ ಆಕಾರಗಳು!
ಇಷ್ಟು ದಿನ ಗಮನಿಸುತ್ತಿರಲಿಲ್ಲವೇನೋ- ಒಂದೇ ಉಸಿರಿಗೆ ಮುಂದಿನ ಮೆಟ್ಟಿಲು ಮಾತ್ರ ಗಮನಿಸುತ್ತಾ ಹತ್ತುತ್ತಿದ್ದೆ- ಅನ್ನಿಸುತ್ತದೆ! ಇಂದು ಸ್ವಲ್ಪ ಕ್ಯೂರಿಯಾಸಿಟಿ ಹೆಚ್ಚಾಗಿದೆ!
ಕೊನೆಗೂ ಬಿಡಲಿಲ್ಲ! ಹತ್ತಿದೆ! ಜೂನ್ ಆದ್ದರಿಂದ- ಹಗಲು ಹೆಚ್ಚು ರಾತ್ರಿ ಕಡಿಮೆಯಾದ್ದರಿಂದ- ಐದು ಗಂಟೆ ಆಗುವಷ್ಟರಲ್ಲಿ ಪೂರ್ವದಂಚಿನಲ್ಲಿ ಬೆಳ್ಳಿ ರೇಖೆಗಳು ಕಾಣಿಸತೊಡಗಿತು!
ಕಳೆದ ತಿಂಗಳು- ಕಳೆದ ಅಲ್ಲ ಏಪ್ರಿಲ್‌ನಲ್ಲಿ- ಬಿಡದೆ ಒಂದುವಾರ ಮಳೆ ಬಂದಾಗ ಹ(ಅ)ವಮಾನ ಇಲಾಖೆ ಹೇಳಿತು… ಈಭಾರಿ ಮಳೆ ಬೇಗ ಶುರುವಾಗುತ್ತದೆ- ಜೂನ್‌ನಲ್ಲಿ ಭಾರಿ ಮಳೆ ಬರುತ್ತದೆ ಎಂದು!
ಒಂದು ಹನಿಯೂ ಇಲ್ಲ! ಆಕಾಶವೋ ಶುಭ್ರ!
ದೇವಸ್ಥಾನದ ಬಳಿ ತಲುಪಿದಾಗ… ನನ್ನೊಂದಿಗೆ ಹತ್ತುವ ಎಲ್ಲಾ ನಾಯಿಗಳೂ ಬಾಲ ಅಲ್ಲಾಡಿಸುತ್ತಾ ಬಂದವು!
“ವಾ…! ನನಗಿಂತ ಮುಂಚೆ ಹತ್ತಿದ್ರೇನ್ರೋ ನಾಯಿಗಳ!” ಎನ್ನುತ್ತಾ ಎಂದಿನ ಜಾಗಿಂಗ್ ಶುರು ಮಾಡಿದೆ!
ಮನದಲ್ಲಿ ಕ್ಲೈಮಾಕ್ಸ್ ಗೊಂದಲ!
ಅಲ್ಲಾ…, ಈ ದೆವ್ವ ಅನ್ನುವ ಕಾನ್ಸೆಪ್ಟ್ ಮನುಷ್ಯರಿಗೆ ಮಾತ್ರವೋ- ಪ್ರಾಣಿಗಳೂ ದೆವ್ವಗಳಾಗುತ್ತವೋ…!
ಅಲ್ಲಿ ಇಲ್ಲಿ ಚದುರಿ ಓಡುತ್ತಿರುವ ನಾಯಿಗಳನ್ನು ಪರಿಶೀಲಿಸುವಂತೆ ನೋಡಿದೆ!
ನನ್ನೊಂದಿಗೆ ಹತ್ತಿದ ನಾಯಿ- ಇಲ್ಲ!
super
ReplyDelete