ವಿರಾಗಿ!
ವಿರಾಗಿ!
“ದೇವೀ…, ಕಥೆಗಾರನೊಬ್ಬ ಕಥೆ ಹೇಳತೊಡಗಿದನೆಂದರೆ ಅದೊಂದು ಓಘ- ಜರಿ! ಆದರೂ ಕೆಲವೊಮ್ಮೆ ಕಥೆ ಅವನ ಕೈಬಿಟ್ಟು ಹೋಗುತ್ತದೆ! ಏಕೆ?”
“ಯಾವಾಗ ಹೇಳುತ್ತಿರುವ ಕಥೆ- ಕಥೆಗಾರನ ತೀರಾ ವೈಯುಕ್ತಿಕ ಜೀವನವಾಗುತ್ತದೋ… ಅವನರಿವಿಲ್ಲದೆ ಕಥೆ ಅವನ ಕೈಬಿಟ್ಟು ಹೋಗುತ್ತದೆ! ನಿನ್ನ ಅತಿದೊಡ್ಡ ಸಮಸ್ಯೆ!”
“ಏನು ಮಾಡಲಿ ದೇವಿ? ಜೀವನಕ್ಕೆ ಹತ್ತಿರವಾದ, ವಾಸ್ತವಕ್ಕೆ ಹತ್ತಿರವಾದ ಕಥೆ ಹೇಳಬೇಕೆಂದರೆ ಹಾಗಾಗುವುದು ಸಹಜವಲ್ಲವೇ?”
“ನಾನು ಹೇಳಿದ್ದು ಅರಿವಾಗದಿರುವಷ್ಟು ಮುಗ್ಧನಲ್ಲ ನೀನು! ಜೀವನಕ್ಕೆ ಹತ್ತಿರವಾದ ಕಥೆ ಬೇರೆ! ವೈಯಕ್ತಿಕ ಕಥೆ ಬೇರೆ!”
“ಈಗೇನು ಮಾಡಲಿ?”
“ಏನು ಮಾಡಲಿ ಅಂದರೆ? ಯಾರಿಂದಲೂ ಊಹಿಸಲಾಗದ, ವಾಸ್ತವಕ್ಕೆ ತೀರಾ ಹತ್ತಿರವಾದ, ನಿನ್ನ ಬದುಕಿಗೆ ಸಂಬಂಧಪಡದ ವಿಷಯವನ್ನು ಬೆರೆಸಿ ನಿನ್ನ ಕಥೆ ಹೇಳು! ನೀನು ಹೇಳಿರುವುದರಲ್ಲಿ ಯಾವುದು ಸುಳ್ಳು ಅಥವಾ ಕಲ್ಪನೆ ಅನ್ನುವುದು ಯಾರೊಬ್ಬರಿಗೂ ಅರಿವಾಗದಿರುವಂತೆ ಹೇಳು!”
“ದೇವೀ…, ದಯವಿಟ್ಟು ಇದೊಂದು ವರವನ್ನು ನೀಡಿ…, ಕೈಬಿಟ್ಟುಹೋಗುವ- ನಾನು ಹೇಳುವ ಕಥೆಗಳಲ್ಲಿ ಇದೇ ನನ್ನ ಕೊನೆಯ ಕಥೆಯಾಗಲಿ!”
“ತಥಾಸ್ತು!”
೧
ನಮಸ್ತೇ…!
ನಾನು…, ದೇವೀಪುತ್ರ!
ಗೊತ್ತೇ..?
ನಾನೊಬ್ಬ ಕೋಮುವಾದಿ!
ನಿಜ!! ನಿನ್ನೆ- ಮೊನ್ನೆ ನನ್ನ ಗೆಳೆಯರು ಅದನ್ನು ಸಾಬೀತು ಮಾಡಿದ್ದಾರೆ!
ಕ್ರಿಸ್ತಶಕ ಏಳುನೂರರಲ್ಲಿ ವ್ಯಕ್ತಿಯೊಬ್ಬನಿಂದ ರೂಪುಗೊಂಡು- ಅದೇ ವ್ಯಕ್ತಿಯಿಂದ ರಚಿಸಲ್ಪಟ್ಟ- ಏಕೈಕ ಕೃತಿಯನ್ನವಲಂಬಿಸಿದ ಮತವೊಂದಿದೆ- ಆ ಪುಸ್ತಕವನ್ನು ಓದಿದೆ!
ಅದಕ್ಕಿಂತಲೂ ಏಳುನೂರು ವರ್ಷ ಮುಂಚೆ- ಅಂದರೆ ಕ್ರಿಸ್ತಶಕ ಪ್ರಾರಂಭವಾದ ಸಮಯದಲ್ಲಿ ವ್ಯಕ್ತಿಯೊಬ್ಬನಿಂದ ಮತವೊಂದು ಸೃಷ್ಟಿಸಲ್ಪಟ್ಟಿತ್ತು- ಆತನಿಂದ ರೂಪುಗೊಂಡ ಕೃತಿಯನ್ನೂ ಓದಿದೆ!
ಅದಕ್ಕಿಂತಲೂ ಮೂರು- ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದಾಗಿದ್ದು, ಯಾವೊಬ್ಬ ವ್ಯಕ್ತಿಯನ್ನೂ ಕೇಂದ್ರೀಕರಿಸದ, ಸಾವಿರಾರು ಗ್ರಂಥಗಳನ್ನು ಹೊಂದಿದ್ದರೂ ಯಾವುದೇ ಮತವೆಂದು ನಿರ್ದೇಶಿಸಲಾಗದ ಸಂಸ್ಕಾರವೊಂದರ- ಕೆಲವಾದರೂ ಗ್ರಂಥಗಳನ್ನು ಓದಿದೆ!
ಆದರೂ ನಾನೊಬ್ಬ ಕೋಮುವಾದಿ!
ಮಾಂಸಹಾರಿಯೊಂದಿಗೂ- ಅದು ಕೋಣದ ಮಾಂಸವಾದರೂ ಸರಿ, ಹಂದಿಯ ಮಾಂಸವಾದರೂ ಸರಿ…, ಸಸ್ಯಹಾರಿಯೊಂದಿಗೂ ಒಂದೇ ತಟ್ಟೆಯಲ್ಲಿ ಊಟ ಮಾಡಿರುವವನು ನಾನು!
ನಮ್ಮ ಮನೆಗೆ ಬರುವವರು- ಯಾವ ಮತಭೇದವಿಲ್ಲದೆ, ಮೇಲು ಕೀಳುಗಳಿಲ್ಲದೆ- ಬರುವವರೆಲ್ಲರೂ ಒಂದೇ ರೀತಿಯಲ್ಲಿ ಅಡಿಗೆಯ ಮನೆಯವರೆಗೂ ಬರುವ ಸಲಿಗೆ ಹೊಂದಿರುವವರೇ… ಎಲ್ಲರಿಗೂ ಒಂದೇ ತಟ್ಟೆ, ಒಂದೇ ಲೋಟ! ಏನು ಬೇಕು ತೆಗೆದುಕೊಳ್ಳುವ, ಕೇಳುವ, ಪಡೆದುಕೊಳ್ಳುವ ಸ್ವಾತಂತ್ರ್ಯವಿದ್ದರೂ…,
ನಾನೊಬ್ಬ ಕೋಮುವಾದಿ!
ದಲಿತ- ಬ್ರಾಹ್ಮಣ ಬೇಧವಿಲ್ಲದೆ, ಮುಸಲ್ಮಾನ- ಕ್ರೈಸ್ತನೆಂಬ ತಾರತಮ್ಯವಿಲ್ಲದೆ ಎಲ್ಲರೊಂದಿಗೂ ಒಂದೇ ಹಾಸಿಗೆಯಲ್ಲಿ ಒಬ್ಬರಮೇಲೆ ಒಬ್ಬರು ಕಾಲು ಹಾಕಿ ಮಲಗಿದ್ದರೂ…,
ನಾನೊಬ್ಬ ಕೋಮುವಾದಿ!
“ತುಂಬಾ ಒಳ್ಳೆಯವನಾಗಲು ಶ್ರಮಿಸದೆ- ವಿಷಯವೇನೋ ಹೇಳು ಪುತ್ರ!”
“ನಿಮಗೇ ಇಷ್ಟೊಂದು ಆತುರವೇ ದೇವಿ?”
“ನಿನ್ನ ತಲೆ! ನಿನ್ನ ಅಗತ್ಯಕ್ಕೆ- ಕಥೆಯೊಳಕ್ಕೆ- ನನ್ನನ್ನು ಎಳೆದು ತಂದದ್ದೂ ಅಲ್ಲದೆ… ನನಗೇ ಹೇಳುತ್ತೀಯ?”
“ಹೋಗಲಿ ಬಿಡಿ… ಒಂದು ಕೊಂಡಿ ಬೇಕಿತ್ತು…!”
*
ಮೊನ್ನೆ ನನ್ನ ಗೆಳೆಯನೊಬ್ಬ ಹೇಳಿದ…,
“ನೀವು ಸನಾತನಿಗಳು ನಮ್ಮನ್ನು ತುಳಿಯುತ್ತಿದ್ದೀರ!”
“ಹಾಗಿದ್ರೆ ನೀನು ಸನಾತನಿಯಲ್ಲವೋ?”
ನನ್ನ ಪ್ರಕಾರ…, ಕಾಲ ನಿರ್ಣಯಕ್ಕೆ ಎಟುಕದ ಇತಿಹಾಸವುಳ್ಳ ಭಾರತದ ಸಂಸ್ಕಾರ- ಜನಜೀವನ- ಪೂರ್ತಿಯಾಗಿ ಸನಾತನ ಧರ್ಮದೊಳಗೆ ಬರುತ್ತದೆ!
“ಅಲ್ಲ! ನಾವು ಬೌಧದಮ್ಮೀಯರು!” ಎಂದ.
“ಬೌಧಧರ್ಮ ಸನಾತನ ಧರ್ಮದಿಂದ ಹೊರಗೆ ಎಂದು ಹೇಳಿದವರಾರು?” ಎಂದೆ.
“ತಪ್ಪು ಉಚ್ಚಾರ ನಿನ್ನದು! ಬೌಧಧರ್ಮ ಅಲ್ಲ! ಬೌಧಧಮ್ಮ-ಧಮ್ಮ!” ಎಂದು ತಿದ್ದಿದ!
ನನ್ನ ತಲೆ ಕೆಟ್ಟಿತು! ಇದೇನು ಹೊಸ ಬೆಳವಣಿಗೆ!? ನಂತರ…, ಏನನ್ನೂ ತಮಗಿಷ್ಟವಾದ ರೀತಿಯಲ್ಲಿ ತಿರುಚುವ ಅಧಿಕಾರ ಪ್ರತಿಯೊಬ್ಬರಿಗೂ ಇದ್ದೇ ಇದೆ ಅನ್ನಿಸಿತು- ನಾನು ಹೇಳುವ ಕಥೆಗಳಂತೆ!
“ಬೌಧಮತವನ್ನು ಸೀಮಿತ ಮಾಡುತ್ತಿದ್ದೀಯಲ್ಲ ಗೆಳೆಯ..? ತಪ್ಪಲ್ಲವಾ? ಬೌಧಮತ ಅಂದರೇನೇ ಕೀಳು ಜನರ ಮತ ಅನ್ನುವಂತಾಗಿದೆ!”
“ಯಾವ ತಪ್ಪೂ ಇಲ್ಲ! ನೀವು- ಸನಾತನಿಗಳ ತುಳಿತಕ್ಕೊಳಗಾದವರು ನಾವು…, ನಮ್ಮದೇ ಧಮ್ಮ ರೂಪಿಸಿಕೊಂಡರೆ ನಿಮಗೇನು?” ಎಂದ.
“ನೀನು ಸನಾತನ ಧರ್ಮಕ್ಕೆ ಸೇರದವನು ಎಂದು ಹೇಳು! ಒಪ್ಪಿಕೊಳ್ಳುತ್ತೇನೆ! ಆದರೆ…, ಸನಾತನ ಧರ್ಮದಲ್ಲಿ ಹುಟ್ಟಿ, ಸನಾತನ ಧರ್ಮದ ಸಾರವನ್ನು ಹೀರಿ, ಅದರಲ್ಲಿ ಕೇವಲ ಸೋಮಾರಿತನವನ್ನು ಮಾತ್ರ ಹರಡಿದವನನ್ನು ಯಾಕೆ ಸುಮ್ಮನೆ ನಿಮ್ಮ ಮತದವನು ಅನ್ನುತ್ತೀಯ? ನಿಮ್ಮ ಮತಕ್ಕೆ ಮೂಲ ಅನ್ನುತ್ತೀಯ?- ಎಳೆದು ತರುತ್ತೀಯ?” ಎಂದೆ.
ಅವನಿಗೆ ಅರ್ಥವಾಗಲಿಲ್ಲ! ಅರ್ಥವಾಗುವುದು ನನಗೂ ಬೇಕಿರಲಿಲ್ಲ! ಮುಂದುವರೆಸಿ ಹೇಳಿದೆ…,
“ಲೋ… ನೀವು ನೀವು ಅಂತ ನನ್ನನ್ನು ಹೊರಗಡೆ ಇಡುತ್ತಿರುವವನು ನೀನು! ನಿನಗೆ ನಾನೇನು ದ್ರೋಹ ಮಾಡಿದೆ? ಯಾವತ್ತಾದ್ರೂ ನಿನ್ನನ್ನು ಕೀಳಾಗಿ ಕಂಡಿದ್ದೀನ?”
“ಮೇಲ್ವರ್ಗದ ಹುಡುಗಿಯೊಬ್ಬಳನ್ನು ನನಗೆ ಮದುವೆ ಮಾಡಿ ಕೊಡು ನೋಡೋಣ!” ಎಂದ.
“ಆಹಾ ಆಸೆ ನೋಡು! ನಿನ್ನ ವರ್ಗದ ಹುಡುಗಿಗೇ ನಾನು ನಿನ್ನನ್ನು ಸಜೆಸ್ಟ್ ಮಾಡುವುದಿಲ್ಲ! ನಿನ್ನಲ್ಲಿ ಏನಿದೆಯೆಂದು ನಾನು ನಿನಗೆ ಮದುವೆ ಮಾಡಿಸಲಿ? ಯಾವ ವರ್ಗದ ಹುಡುಗಿಯಾದರೂ? ಮೊದಲು ನಿನ್ನ ಯೋಗ್ಯತೆಯನ್ನು ಬೆಳೆಸಿಕೋ- ಮೇಲ್ಜಾತಿ, ಕೆಳಜಾತಿ ಎಂದು ಹೇಳುವುದನ್ನು 'ನೀನು' ನಿಲ್ಲಿಸು! ನಿನ್ನ ಕೀಳರಿಮೆಗೆ ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡಬೇಡ! ನಿನಗಿರುವ ಯೋಗ್ಯತೆಗೆ ನಿಮ್ಮ ಜಾತಿಯಲ್ಲೇ ನಿನಗೆ ಹೆಣ್ಣು ಕೊಡುವುದಿಲ್ಲ! ಎಲ್ಲವೂ ನಿನಗೆ ಫ್ರೀಯಾಗಿ ಬೇಕೇನು? ಹಿಂದೆ ಇತ್ತೇನೋ…, ವರ್ತಮಾನ ಕಾಲದಲ್ಲಂತೂ- ನಿಜಕ್ಕೂ ನಿನ್ನ ಯೋಗ್ಯತೆ ನಿನ್ನ ಜಾತಿಯನ್ನು ಅವಲಂಭಿಸಿಲ್ಲ! ಮೊದಲು ನೀನು- ನಾನು ಕೀಳು, ಇನ್ನೊಬ್ಬರು ಮೇಲು ಅನ್ನುವುದನ್ನು ಬಿಡು! ನಂತರ ನೀನು ಕೀಳೋ- ಮೇಲೋ ಎಂದು ಗುರುತಿಸಲಾರದ ಹಂತಕ್ಕೆ ಬೆಳಿ! ಆನಂತರ ನಿನ್ನಪ್ರಕಾರ ಮೇಲ್ವರ್ಗದ ಹುಡುಗಿಯೊಬ್ಬಳನ್ನು ಪ್ರೀತಿಸು! ಅವಳೂ ನಿನ್ನನ್ನು ಪ್ರೀತಿಸುವಂತೆ ಮಾಡು! ನಿನ್ನ ಹೊರತು ಯಾರನ್ನೂ ಮದುವೆಯಾಗದ ಹಂತಕ್ಕೆ ಅವಳನ್ನು ತಲುಪಿಸು! ಕಷ್ಟಪಡು! ಏನಂದುಕೊಂಡಿದ್ದೀಯ ಹೆಣ್ಣು ಅಂದರೆ? ಯಾವುದೋ ವಸ್ತುವನ್ನು ಬಿಕ್ಷೆ ಬೇಡುವಂತೆ ಕೇಳುತ್ತಿದ್ದೀಯ? ಮೇಲ್ವರ್ಗದ ಹೆಣ್ಣಿರಲಿ- ನಿನ್ನ ವ್ಯಕ್ತಿತ್ವವನ್ನು ಅರಿತ ಯಾವೊಬ್ಬಳೂ ನಿನ್ನನ್ನು ಪ್ರೇಮಿಸುವುದಿಲ್ಲ- ಯಾರೊಬ್ಬರೂ ನಿನಗೆ ಹೆಣ್ಣು ಕೊಡುವುದಿಲ್ಲ! ಮೇಲ್ವರ್ಗದ ಹೆಣ್ಣನ್ನು ಮದುವೆ ಮಾಡಿಕೊಡಬೇಕಂತೆ! ಎಲ್ಲರೂ ಇವನನ್ನು ತುಳೀತಾ ಇದ್ದಾರಂತೆ! ನೋಡು ಗೆಳೆಯ…, ಈ ಪ್ರಪಂಚದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ! ಇಲ್ಲಿ ಯಾರೂ ಯಾರನ್ನೂ ತುಳಿಯೋಕೆ ಆಗಲ್ಲ…! ನನ್ನನ್ನು ಸನಾತನಿ ಅನ್ನುತ್ತಿದ್ದೀಯ! ಅದಕ್ಕೆ ಆಧಾರವೇನು? ನಾನು ಯಾವ ವರ್ಗಕ್ಕೆ ಸೇರಿದವನೆಂದು ನಿನಗೆ ಗೊತ್ತೆ? ನಿನಗೆಂದಲ್ಲ- ಯಾರಿಗೂ ಗೊತ್ತಿಲ್ಲ! ಯಾಕೆ ಹೇಳು…?”
“ನನಗೆಲ್ಲಾ ಗೊತ್ತು…! ನೀವು ಸನಾತನಿಗಳೇ ಹೀಗೆ…! ಕೆಳವರ್ಗದವರಿಗಾಗಿ ಏನೂ ಮಾಡುವುದಿಲ್ಲ! ವಿತಂಡವಾದ ಮಾತ್ರ ಚೆನ್ನಾಗಿ ಮಾಡುತ್ತೀರ!” ಎಂದು ಹೇಳಿ ಹೊರಟು ಹೋದ!
ಹಾಗೆ ನಾನು- ನೀವು ಸನಾತನಿಗಳು- ಅನ್ನಿಸಿಕೊಂಡು ಕೋಮುವಾದಿಯಾದೆ!
“ಪುತ್ರಾ…! ಇನ್ನೊಂದು ಉದಾಹರಣೆಯನ್ನು ಹೇಳುವಾಗ ಜೋಪಾನ! ನಿನ್ನ ತಲೆ ಹೋಗುವ ಅವಕಾಶವಿದೆ! ಕಥೆ ಕೈಬಿಟ್ಟು ಹೋಗದಿರಲಿ- ಎಂದು ಹೇಳಿದೆ!”
“ನಿಜ ದೇವಿ! ನೆನಪಿಸಿದ್ದು ಒಳ್ಳೆಯದಾಯಿತು! ನಡೆದ ಘಟನೆಯಾದ್ದರಿಂದ ನೇರವಾಗಿ ಹೇಳಿಬಿಡುತ್ತಿದ್ದೆ! ಇದನ್ನು ಹೇಳಿದರೆ ನನ್ನ ತಲೆ ಹೋಗುತ್ತದೆ ಹೊರತು ಅವನಿಗೆ ರಕ್ಷೆ ಇದ್ದೇ ಇರುತ್ತದೆ!”
*
ನನ್ನ ಗೆಳೆಯನೊಬ್ಬನಿದ್ದಾನೆ. ಬಾಲ್ಯದ ಗೆಳೆಯ…! ಸುಮಾರು ವರ್ಷಗಳ ನಂತರದ ಭೇಟಿಯಲ್ಲಿ..,
ಮುಂಚೆಯೇ ಹೇಳಿದ- ಏಳನೇ ಶತಮಾನದ ವ್ಯಕ್ತಿಯೊಬ್ಬನಬಗ್ಗೆಯೂ ಅವನ ಮತದ ಬಗ್ಗೆಯೂ ನನಗೆ ಉಪದೇಶವನ್ನು ಕೊಡಲು ಬಂದಾಗ ಯಾಕೋ ಸಂದರ್ಭ ಕೈಬಿಟ್ಟು ಹೋಗುತ್ತದೆ ಅನ್ನಿಸಿ ಕೇಳಿದೆ…,
“ಗೆಳೆಯ, ಒಂದೇ ತಟ್ಟೆಯಲ್ಲಿ ಊಟಮಾಡಿ ಬೆಳೆದವರು ನಾವು! ಕೇಳು- ನಾನು ಹಿಂದುವಲ್ಲ, ಕ್ರಿಶ್ಚಿಯನ್ ಅಲ್ಲ, ಮುಸ್ಲೀಮನಲ್ಲ! ನಾನೊಬ್ಬ ಭಾರತೀಯ! ನನಗೆ ಯಾವುದೇ ಮತಗಳಿಗಿಂತ ನನ್ನ ದೇಶ ಮುಖ್ಯ! ಭಾರತೀಯರು ನಾವೆಲ್ಲಾ ಒಂದೇ ಅನ್ನುವುದು ನನ್ನ ನಂಬಿಕೆ! ನೀನು? ನಿನ್ನ ಮತವೋ- ಭಾರತೀಯನೋ…?”
ಅದಕ್ಕವನು ಕೊಟ್ಟ ಉತ್ತರ…
“ಅದನ್ನು ನಿನಗೆ ಹೇಳಬೇಕಾಗಿಲ್ಲ!”
*
ಕಾಲಗಣನೆ ಅಸಾಧ್ಯವಾಗಿರುವ ಭಾರತೀಯ ಸಂಸ್ಕಾರವನ್ನೂ- ಇತಿಹಾಸದ ಪ್ರಕಾರ ವಿದೇಶದಿಂದ ಬಂದ, ಕಾಲಗಣನೆಯಲ್ಲಿ ಅತಿ ಚಿಕ್ಕ ಇತಿಹಾಸವನ್ನು ಹೊಂದಿರುವ ಮತಗಳನ್ನೂ ತಿಳಿದುಕೊಳ್ಳುವ ಶ್ರಮದಲ್ಲಿ.., ಕೆಲವೊಂದು ತತ್ತ್ವಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ! ಆ ರೀತಿ ಪ್ರಭಾವ ಬೀರಿದ ಅಂಶಗಳನ್ನಿಟ್ಟುಕೊಂಡು ನಾನು ಬರೆದ ಕೆಲವು ಕಥೆಗಳು ಭಾರತೀಯ ಸಂಸ್ಕಾರಕ್ಕೆ ಅನುಗುಣವಾಗಿತ್ತು ಅನ್ನುವುದು ನನ್ನನ್ನು ಪೂರ್ತಿಯಾಗಿ ಕೋಮುವಾದಿಯಾಗಿಸಿತು- ಅದೊಂದು ಜೀವನ ರೀತಿ, ಯಾವ ಕಟ್ಟುಪಾಡುಗಳೂ ಇಲ್ಲದ ಒಂದು ಹರಿತ ಎಂದು ಒಪ್ಪಲು ಯಾರೂ ತಯಾರಾಗಲಿಲ್ಲ! ಗಮನಿಸಿದರೆ ತಿಳಿಯುತ್ತದೆ… ವಿದೇಶದಿಂದ ಆಗಮನವಾದ ಆ ಮತಗಳು ಹುಟ್ಟಿಕೊಂಡಾಗ ಹೇಗಿತ್ತೋ ಈಗಲೂ ಹಾಗೆಯೇ ಇದೆ! ಆದರೆ ಭಾರತೀಯ ಸಂಸ್ಕಾರ ಬದಲಾವಣೆಯಿಂದ ಬದಲಾವಣೆಗೆ ಒಳಗಾಗಿ ಹೊಸ ಹೊಸ ರೂಪದಲ್ಲಿ ಪುರೋಗಮನ ಹೊಂದುತ್ತಿದೆ! ಅದನ್ನು ಹೇಳಿದರೆ…, ನಾನೊಬ್ಬ ಕೋಮುವಾದಿ! ಈ ಅರಿವು- ಒಂದು ರೀತಿಯಲ್ಲಿ…, ಮತ ಅನ್ನುವ ಕಾನ್ಸೆಪ್ಟ್ ಬಗ್ಗೆಯೇ ವೈರಾಗ್ಯ ಮೂಡಿಸಿತು!
೨
ಪ್ರೇಮ! ಅನಿರ್ವಚನೀಯ ಆನಂದವನ್ನು ನೀಡುವ ಅನುಭಾವ- ಅನುಭೂತಿ!
“ಇರು ಪುತ್ರ! ಯೋಚನೆ ಮಾಡು! ಇದನ್ನು ನೀನು ಹೇಳಲೇ ಬೇಕೆ? ನಿನ್ನ ವ್ಯಕ್ತಿತ್ವವನ್ನು ನಿರ್ಧರಿಸುವ ಅಂಶ ಇದು!”
“ಇದನ್ನು ನಾನು ಹೇಳದಿದ್ದರೆ…, ನನ್ನ ಜೀವನವೊಂದು ತೆರೆದಿಟ್ಟ ಪುಸ್ತಕ ಅನ್ನುವುದು ಸುಳ್ಳಾಗುವುದಿಲ್ಲವೇ ದೇವಿ?”
“ಸುಮ್ಮನಿರು! ಬಾರಿ ತೆರೆದ ಪುಸ್ತಕ! ನಿನ್ನಷ್ಟು ರಹಸ್ಯಮಯ ಜೀವನ ಈ ಪ್ರಪಂಚದಲ್ಲಿ ಯಾರಿಗಿದೆ?”
“ಈಗ ನಿಮ್ಮ ಸಲಹೆಯೇನು?”
“ಈ ಕಥೆಯಲ್ಲಿ ನೀನು ಹೇಳಿರುವ ಸುಳ್ಳು ಇದೇ ಆಗಿರಬಹುದು! ಆದರೂ…, ವಿಷಯದಿಂದಾಗಿ- ಇದರ ಹೊರತು ನೀನು ಹೇಳಿದ್ದೆಲ್ಲವೂ ಸುಳ್ಳು ಎಂದು ಬಿಂಬಿಸಲ್ಪಡಬಹುದು!”
“ಸಮಸ್ಯೆಯಿಲ್ಲ! ಅನುಭವಿಸುತ್ತೇನೆ! ಉಳಿಯುವವರು ಉಳಿಯಲಿ!”
“ನಂಬುವವರು ನಂಬಲಿ- ಎಂದು…? ಸರಿ- ನಿನ್ನಿಷ್ಟ!”
*
ಪ್ರೇಮದ ಪರಾಕಾಷ್ಠೆ ಕಾಮವಂತೆ!
ಆರುಜನ ಹೆಣ್ಣಿನೊಂದಿಗೆ ಕಾಮಿಸಿದೆ!
ಉದ್ದೇಶ ಕಾಮವಾಗಿತ್ತೆ?
ಇಲ್ಲ! ಆದರೂ ಕಾಮಿಸಿದ್ದೇನೆ…!
ಏಕೆ?
ಪ್ರೇಮದ ಪರಾಕಾಷ್ಠೆ ಕಾಮ- ಅದಕ್ಕೆ!
ಏಕಕಾಲದಲ್ಲಿ ಆರು ಜನ ಹೆಣ್ಣಿನೊಂದಿಗೆ ಪ್ರೇಮ ಸಾಧ್ಯವೇ? ಎಲ್ಲರೊಂದಿಗೂ ಪ್ರೇಮವೇ ಅಂದಮೇಲೆ ಸಮಸ್ಯೆಯೇನು?
ಕಟ್ಟುಪಾಡುಗಳನ್ನು ಹೊರಗಿಟ್ಟು ನೋಡಿದರೆ- ಪ್ರೇಮಕ್ಕೆ ಮಿತಿಯಿಲ್ಲ!
ಪ್ರೇಮ ಯಾರಿಗೂ ಯಾರೊಂದಿಗೂ ಸಾಧ್ಯ!
ಸಮಸ್ಯೆ ಪ್ರಪಂಚ!
ಒಬ್ಬರಿಗಿಂತಲೂ ಹೆಚ್ಚು ಹೆಣ್ಣಿನೊಂದಿಗಿನ- ಗಂಡಿಗೂ ಅನ್ವಯ- ಪ್ರೇಮವನ್ನು ಪ್ರಪಂಚ ಒಪ್ಪುವುದಿಲ್ಲ!
ಹಾಗಾದಾಗ, ಅಲ್ಲಿ ಕಾಮವೇ ವಿಜೃಂಭಿಸುತ್ತದೆ! ಎಲ್ಲರ ಕಣ್ಣಿಗೂ ಕಾಮ ಕಾಣಿಸುತ್ತದೆ ಹೊರತು ಪ್ರೇಮ ಕಾಂತಿಯನ್ನು ಕಳೆದುಕೊಳ್ಳುತ್ತದೆ!
ಪ್ರಾಕೃತಿಕ ಅನ್ನುವುದನ್ನು ಅಧಿಗಮಿಸಿ ಪ್ರಾಪಂಚಿಕ ವಿಜೃಂಭಿಸಿದಾಗ- ಕಾಮ ಪ್ರೇಮದ ಪರಾಕಾಷ್ಠೆ ಅನ್ನಿಸದೆ ಒಂದು ಬಂಧನವಾಗುತ್ತದೆ!
ಪ್ರತಿ ಹೆಣ್ಣಿಗೂ ಗಂಡು ತಾನೇ ಅವಳ ಎಲ್ಲವೂ ಆಗಬೇಕೆಂಬುದು ಆಸೆ ಮಾತ್ರವಲ್ಲ- ಅಧಿಕಾರ ಕೂಡ! ಇದು ಗಂಡಿಗೂ ಅನ್ವಯ!
ಯಾವಾಗ ಆ ಅಧಿಕಾರಕ್ಕೆ ಚ್ಯುತಿ ಬರುತ್ತದೋ…, ಸಮಸ್ಯೆಯ ಉಗಮವಾಗುತ್ತದೆ!
ಪ್ರತಿಯೊಬ್ಬರೊಂದಿಗಿನ ಪ್ರೇಮವೂ ಶ್ರೇಷ್ಠವೇ ಅನ್ನುವುದನ್ನು ಅದುಮಿ…, ಪ್ರತಿಯೊಬ್ಬರಿಗೂ ಅವರೊಂದಿಗಿನ ಪ್ರೇಮವೇ ಶ್ರೇಷ್ಠ ಎಂದು ಬಿಂಬಿಸಬೇಕಾಗುತ್ತದೆ!
ಇದು ಆತ್ಮಾಭಿಮಾನದ ಪ್ರಶ್ನೆ! ಅಸ್ಮಿತೆಯ ವಿಷಯ!
ನನಗೆ ಎಲ್ಲರೂ ಸಮ ಅನ್ನುವುದನ್ನು ಅಹಂ ಒಪ್ಪುವುದಿಲ್ಲ! ಇತರರಿಗಿಂತ ನಾನೇ ಶ್ರೇಷ್ಠ ಎಂದೇ ನಮ್ಮ ನಂಬಿಕೆ! ಅದನ್ನು ಹೇರತೊಡಗಿದಾಗ ಶುರುವಾಗುತ್ತದೆ- ನರಕ!
ನನಗಿಂತ ಅವನೇ…? ಅಥವಾ ನನಗಿಂತ ಅವಳೇ…?
ವಿವರಣೆಗಳು, ನಿರೂಪಣೆಗಳು…!
ಹೆಣ್ಣೆಂದರೆ ನನಗೆ ಪ್ರಾಣ! ಅದೇ ಕಾರಣವಾಗಿ ಅವಲಂಬಿತನಾದೆ- ಪ್ರತಿ ಹೆಣ್ಣಿಗೂ!
ಪರಿಣಾಮ?
ನರಕ- ಅಸಹನೆ- ವಿಷಾದ- ಕೋಪ!
ಕಾಮ ಎಂದರೆ- ಆಸೆ!
ಆಸೆಯೇ ದುಃಖಕ್ಕೆ ಮೂಲ!
ಮತ್ತೆ?
ದೇವಿಯ ದಯೆ!
ವಾಂಛೆ ಎಂದರೇನೆಂದೇ ತಿಳಿಯದ ಹೆಣ್ಣೊಬ್ಬಳನ್ನು ಪರಿಚಯವಾದೆ!
*
“ಯಾಕೆ ಪುತ್ರ ಅಳ್ತಾ ಇದ್ದೀಯ?!” ಎಂದಳು ಅವಳು- ಬೊಗಸೆಯಲ್ಲಿ ನನ್ನ ಮುಖವನ್ನು ಹಿಡಿದು!
ಅವಳಾಗಿ ಆನಿಸಿದಳೋ ನಾನೇ ಒರಗಿದೆನೋ… ಪ್ರಪಂಚದಲ್ಲಿಯೇ ಅತಿ ನೆಮ್ಮದಿಯ ತಾಣ- ಹೆಣ್ಣಿನ ಎದೆ!
ನಡುಗುತ್ತಿದ್ದೆ! ಜೀವನದಲ್ಲಿ ಮೊದಲಬಾರಿ ಮನಸ್ಸಿನ ನಿಯಂತ್ರಣವನ್ನು ಕಳೆದುಕೊಂಡಿದ್ದೆ!
ಸೌಂಧರ್ಯ! ಸಾತ್ವಿಕ ಸೌಂಧರ್ಯದ ಅಗಾಧತೆ! ಮುಗ್ಧ ಹೃದಯದ ದರ್ಶನ!
ನಾನೇನು ಮಾಡಿದೆ? ಯಾಕೆ?
ತಿಳಿಯದು!
ಹೆಣ್ಣು ಅನ್ನುವ ಅನುಭವ ನನಗೆ ಹೊಸದಲ್ಲ!
ಆದರೆ ಅವಳು…,
ಅರಿವಿನಿಂದ ಅವಳ ಬಟ್ಟೆ ಸರಿಸಿದೆನೇ?
ಅವಳೂ ತಡೆಯಲಿಲ್ಲ!
ಯಾಕೆ?
ಅವಳಿಗೂ ತಿಳಿಯದು!
ಬಟ್ಟೆ ಮೇಲಕ್ಕೆ ಸರಿಸಿದಷ್ಟೂ ನನ್ನೊಳಗೊಂದು ನಡುಕ!
ಆ ಸೌಂಧರ್ಯ… ಆ ಅನುಭವ- ಅನುಭಾವವಲ್ಲ- ಅನುಭವ!
ಕೆಲವೊಮ್ಮೆ ನಮ್ಮ ಮನಸ್ಸಿಗೆ ಅರಿಯದ ರೀತಿಯಲ್ಲಿ ದೇಹ ಸ್ಪಂದಿಸುತ್ತದೆ! ಆ ಸ್ಪಂದನೆಯ ಅರಿವು ಇಂದ್ರಿಯಾತೀತವಾಗಿ ಅನುಭವಕ್ಕೆ ಬರುತ್ತದೆ…! ಆಗ…,
ಕಿಬ್ಬೊಟ್ಟೆಯಿಂದ ಪ್ರಾರಂಭವಾದ ನಡುಕ… ನಡುಕ…? ನಡುಕವಲ್ಲ- ಕಂಪನ... ಕಣ್ಣೀರಾಗಿ ಹರಿಯುವವರೆಗೆ… ತಡೆದುಕೊಳ್ಳಲಾರದಾದೆ!
ನನ್ನ ಆನಂದಾತಿರೇಕ ಅವಳು ಅರಿಯಬಾರದೆಂದು- ಅವಳ ಹೊಟ್ಟೆಯಲ್ಲಿ ಮುಖ ಹುದುಗಿಸಿದಾಗ- ಅರಿತಳು- ಕಣ್ಣೀರು- ಕಂಪನ- ನಡುಕ!
ಗಾಬರಿಯಿಂದ ನನ್ನ ಮುಖವನ್ನು ಹಿಡಿದೆತ್ತಿದಳು…,
“ಏನಾಯಿತು ಪುತ್ರ…? ಏನಾಯಿತು ಪುತ್ರ…?”
ಅವಳ ಕಣ್ಣುಗಳನ್ನು ನೋಡಿದೆ. ನಿಶ್ಕಳಂಕವಾಗಿ ಹೊಳೆಯುತ್ತಿತ್ತು…!
ಅವಳನ್ನು ನಾನು ಬೆತ್ತಲೆಗೊಳಿಸುತ್ತಿದ್ದೆ ಅನ್ನುವ ಚಿಂತೆಯೇನೂ ಅವಳಿಗಿಲ್ಲ!
ಪ್ರೇಮಕ್ಕಾಗಿ ಅವಳು ಯಾವ ತ್ಯಾಗಕ್ಕೂ ಸಿದ್ದಳಿದ್ದಳು! ಅದು ತ್ಯಾಗವೇ?
ಅಲ್ಲ! ಅದು ತ್ಯಾಗವೂ ಅಲ್ಲ… ಅಥವಾ ವಾಂಛೆಯೂ ಅಲ್ಲ! ಅವಳಿಗದರಬಗ್ಗೆ ಅರಿವೇ ಇಲ್ಲ- ಅವಳಿಂದ ಅನುಭವಿಸಿದ ಆ ಕಂಪನದ ಅರಿವು ನನಗೂ!
ಏನೋಪ್ಪ! ನಮ್ಮ ಅರಿವಿಗೆ ಎಟುಕದ- ವಿವರಣೆಗೆ ನಿಲುಕದ ಏನೋ ಒಂದು…!
ಅರ್ಥವಾಗದ ಅವಳ ದೇಹ ಸ್ಪಂದನೆಯಿಂದಾಗಿ…,
ಮೊದಲು ನಡುಗಲಾರಂಬಿಸಿದೆ! ನಿಯಂತ್ರಣಕ್ಕೆ ಸಿಗದ ಕಂಪನ!
ನಂತರ…,
ದುಮ್ಮಿಕ್ಕಿ ಹರಿಯುತ್ತಿದ್ದ ನನ್ನೊಳಗಿನ ಭಾವ ಜರಿಯನ್ನು ತಡೆಯಲು ಬೇರೆ ದಾರಿ ಕಾಣಿಸದೆ…, ಅವಳ ಮುಖವನ್ನು ಬಲವಾಗಿ ಬೊಗಸೆಯೊಳಗೆ ತೆಗೆದುಕೊಂಡು ತುಟಿಯನ್ನು ಚುಂಬಿಸಿದೆ- ನೋವಾಗುವಂತೆ!
ಕಣ್ಣು ಮುಚ್ಚಿ ತಡೆದುಕೊಂಡಳು- ನಿಷೇಧಿಸದೆ!
ದೇಹ- ಬಾರವನ್ನು ಕಳೆದುಕೊಂಡಂತೆನ್ನಿಸಿತು! ಅದು ಅವಳ ಅರಿವಿಗೂ ಬಂತೇನೋ… ಕುಸಿಯುತ್ತಿದ್ದ ನನ್ನೊಂದಿಗೆ ತಾನೂ ಮಂಡಿಯೂರಿ ಕುಳಿತುಕೊಳ್ಳುತ್ತಾ ನನ್ನ ಮುಖವನ್ನು ತನ್ನ ಬೊಗಸೆಯಲ್ಲಿ ಹಿಡಿದು ಕೇಳಿದಳು…,
“ಯಾಕೆ ಪುತ್ರ ಅಳ್ತಾ ಇದ್ದೀಯ?!”
ಕಾಮದಬಗ್ಗೆ ವೈರಾಗ್ಯ ಮೂಡಿದ ಕ್ಷಣ…!
೩
ನನಗೊಂದು ಅಹಂಕಾರವಿತ್ತು! ನನ್ನನ್ನು ಯಾರೂ ದ್ವೇಶಿಸುವುದಿಲ್ಲವೆನ್ನುವ ಅಹಂಕಾರ! ಯಾರನ್ನೇ ಆದರೂ ನನ್ನ ವ್ಯಕ್ತಿತ್ವದಿಂದಾಗಿ ಹಿಡಿದಿಟ್ಟುಕೊಳ್ಳುತ್ತೇನೆನ್ನುವ ಅಂಧವಾದ ವಿಶ್ವಾಸ!
ಆದರೆ ಆ ವಿಶ್ವಾಸಕ್ಕೆ ಪೆಟ್ಟು ಕೊಡುವಂತೆ…, ನನ್ನ ಬದುಕಿನಲ್ಲೂ ನಡೆಯಿತು…,
ವಿವಾಹ ವಿಚ್ಛೇದನ!
ನ-ನ್ನ ಬದುಕಿನಲ್ಲಿ ವಿವಾಹ ವಿಚ್ಛೇದನ!
ಕಾರಣವೇನೇ ಇರಲಿ!
ಹೆಣ್ಣೆಂದರೆ ಪ್ರಾಣ ಅನ್ನುವವನು- ಆ ಪ್ರಾಣವೇ ಮಗಳಾಗಿ ಹುಟ್ಟಿದರೂ… ವಿವಾಹ ವಿಚ್ಛೇದನಕ್ಕೆ ಸುಲಭವಾಗಿ ಒಪ್ಪಿಕೊಂಡೆನಲ್ಲ… ಯಾಕೆ?
ಒಪ್ಪದಿದ್ದರೆ ಜೀವನ ನರಕ ಅನ್ನುವ ಅರಿವು!
ಅವಳಾದರೂ ನೆಮ್ಮದಿಯಾಗಿರಲಿ!
ಮ-ಗ-ಳು…!
ಕುಟುಂಬ ಜೀವನದಬಗ್ಗೆ ವೈರಾಗ್ಯ ಹುಟ್ಟಿದ ಕ್ಷಣ!
೪
“ದೇವೀ…, ನಿಜಕ್ಕೂ ವೈರಾಗ್ಯ ಅಂದರೇನು? ಆ ಪದ ನಕಾರಾತ್ಮಕ ಭಾವವನ್ನೇ ತುಂಬುತ್ತದಲ್ಲ ಏಕೆ?”
“ಮೊದಲು ಮತದ ಬಗ್ಗೆ ವೈರಾಗ್ಯ ಹುಟ್ಟಿತು ಎಂದೆ! ನಂತರ ಕಾಮದಮೇಲೆ! ಈಗ ಕುಟುಂಬ ಜೀವನದಬಗ್ಗೆ ಅಂದೆ…, ಇನ್ನೂ ಅರ್ಥವಾಗಲಿಲ್ಲವೇ ಪುತ್ರ?”
“ಊಹೆಯಿದೆ ದೇವಿ! ಸ್ಪಷ್ಟಪಡಿಸಿ!”
“ನಾನು- ನನ್ನದು ಅನ್ನುವ ಭಾವ ಬಿಟ್ಟು ಹೋಗುವುದೇ- ವೈರಾಗ್ಯ!”
“ಅರ್ಥವಾಗಲಿಲ್ಲ! ನಾನೇನೋ ಸನ್ಯಾಸಕ್ಕಿರುವ ಮೊದಲ ಮೆಟ್ಟಿಲು ಅಂದುಕೊಂಡಿದ್ದೆ!”
“ಒಂದುರೀತಿಯಲ್ಲಿ ಹಾಗೇ ಅಂದುಕೋ! ಮೊದಲು ಮತದ ಮೇಲಿನ ಆಸಕ್ತಿ ಹೋಯಿತು! ನಂತರ ಕಾಮದ ಮೇಲಿನ ಆಸಕ್ತಿ- ಅಂದರೆ ಕಾಮ ರಹಿತ ಪ್ರೇಮ! ಈಗ, ನನ್ನ ಅಪ್ಪ, ನನ್ನ ಅಮ್ಮ, ನನ್ನ ಹೆಂಡತಿ, ನನ್ನ ಮಗಳು- ಅಂದರೆ ನನ್ನ ಅನ್ನುವ ಭಾವದಿಂದ ವಿಮುಖನಾದೆ! ಇದು ವೈರಾಗ್ಯ! ಈ ವೈರಾಗ್ಯದ ನಂತರದ ಹಂತ- ಸನ್ಯಾಸ! ಅಂದರೆ ವ್ಯಕ್ತಿಗತ ಆಸಕ್ತಿಯಿಂದ ಹೊರಬಂದು ವಿಶ್ವಜನೀಯ ಪ್ರೇಮದ ಅಧಿಕಾರಿಯಾಗುವುದು- ತನ್ನ ಪ್ರೇಮದ ಪರಿಧಿಯನ್ನು ವಿಶ್ವಾತೀತ ಮಾಡುವುದೆಂದರ್ಥ!”
“ಹಹ್ಹಾ…! ಹಾಗಿದ್ದರೆ ನಿಮ್ಮ ಮಗ ಸನ್ಯಾಸಿಯಾಗುತ್ತಿದ್ದೇನೆ ಅನ್ನುತ್ತಿದ್ದೀರೋ…?”
“ಯಾವ ಕಾರಣಕ್ಕೂ ಇಲ್ಲ! ಈ ವೈರಾಗ್ಯದ ಹಂತವನ್ನು ಉಳಿಸಿ- ಅದನ್ನು ಅಧಿಗಮಿಸಿ ಹೋಗುವುದು ಕಷ್ಟ- ಸಾಧ್ಯ! ನಿನ್ನ ಜೀವನಾನುಭವ ಸಾಲದು! ಇನ್ನೂ ವರ್ಷಗಳಿದೆ…! ಸದ್ಯಕ್ಕೆ… ಪ್ರೇಮಪ್ರಪಂಚ ಅನ್ನುವ ನಿನ್ನ ಗುರಿಯೆಡೆಗೆ ನುಗ್ಗು! ಇದು ಸಕಾಲ!”
“ಸಕಾಲ?”
“ಹಾ…! ಯಾವ ಕಟ್ಟುಪ್ಪಾಡುಗಳೂ ಇಲ್ಲದೆ…, ನಿನ್ನಿಚ್ಛೆಯಂತೆ…!”
“ಈ ವೈರಾಗ್ಯ ಒಂದುರೀತಿಯಲ್ಲಿ ಚೆನ್ನಾಗಿದೆ ದೇವಿ! ಪ್ರಪಂಚಕ್ಕೆ ಒಳಿತಾಗುವುದಾದರೆ, ಹುಟ್ಟಿನ ರಹಸ್ಯ ಇದೇ ಆದರೆ…, ಜೀವನೋದ್ದೇಶ ನೆರವೇರಲು ವಿರಾಗಿಯೇ ಆಗಬೇಕಾದರೆ…. ನನ್ನಂತಾ ವಿರಾಗಿ ಯಾರಿದ್ದಾರೆ?! ಅದರಲ್ಲೂ ದೇವೀಪುತ್ರ ನಾನು! ಕೈಬಿಡಬೇಡಿ!”
“ಪುತ್ರನ ಕೈಬಿಡುವ ದೇವಿ- ದೇವಿಯೇ…, ವಿರಾಗಿ?!”
ಭೂತ ವರ್ತಮಾನ ಭವಿಷ್ಯ 🤔.. ಹ್ಮ್ಮ್ ಜೋರು... ಕಥೆ ಕ್ರಮವಾಗಿದೆ, ಯಾರ್ಯಾರಿಗೆ ಏನೇನು ಸಂದೇಶಸಬೇಕೋ, ಕರಾರುವಾಕ್ಕೂ ತಿಳಿಸಿದೆ.. ಆದ್ರೆ ಸದ್ಯ ಈ ನಿಮ್ಮ ಬರಹದ ರಹಸ್ಯ ಮಾತ್ರ ಗುಟ್ಟಾಗಿಯೇ ಉಳಿಯಲಿ 🙏🏻🙏🏻.. ಗೊಜಲು ಗೊಜಲು ಅರ್ಥವಾಗದೆ ಹೋಗಿದ್ದು ಎಷ್ಟೋ ನಿರಾಳ ನಂಗಂತೂ.. ಧನ್ಯವಾದಗಳು ಕಥೆಗಾರರಿಗೆ..
ReplyDelete