ಕಥೆಗಾರನೂ ಅವನ ಕಥೆಯೂ!
ಕಥೆಗಾರನೂ ಅವನ ಕಥೆಯೂ ! ೧ ಎಂದಿನಂತೆ ಬೆಳಗ್ಗೆ ಬೇಗನೆ ಎದ್ದು ಬೆಟ್ಟಕ್ಕೆ ಹೊರಟೆ ! ನನ್ನ ಬೆಟ್ಟ ! ಹದಿಮೂರು ವರ್ಷದಿಂದ ಹತ್ತುತ್ತಿದ್ದೇನೆಂಬ ಅಹಂಕಾರದ - ನನ್ನ ಬೆಟ್ಟ ! ಇನ್ನೂ ಬೆಳಗ್ಗಿನ ನಾಲಕ್ಕೂ ಮುಕ್ಕಾಲು - ಆಗುತ್ತಿದೆ . ಇವತ್ತು ಅಮವಾಸ್ಯೆಯಂತೆ ! ಕತ್ತಲ ಮಜ ! ಕತ್ತಲನ್ನು ಅನುಭಾವಿಸಬೇಕೆ ? ಅಮವಾಸ್ಯೆಯಂದು ಈ ಸಮಯದಲ್ಲಿ ಬೆಟ್ಟಕ್ಕೆ ಬರಬೇಕು ! ಗಾಡಿಯನ್ನು ನಿಲ್ಲಿಸಿ ಮೆಟ್ಟಲಿನ ಕಡೆಗೆ ಜಾಗಿಂಗ್ ಶುರು ಮಾಡಿದಾಗ ಕಣ್ಣ ಮುಂದೆ - ಎಡದಿಂದ ಬಲಕ್ಕೆ - ಏನೋ ಚಲಿಸಿದಂತಾಯಿತು ! ನಿಂತೆ , ನೋಡಿದೆ… ಬಲದಿಂದ ಎಡಕ್ಕೆ ತಿರುಗುವಾಗ ಕಾಣಿಸಿತು - ಅರಿತೆ - ನನ್ನ ಕೂದಲು ! ಛೀ ..! ಇದೊಂದು ! ಕಾಡುಕುರುಬರಂತೆ ! ಛೆ… , ಕಾಡುಕುರಬರಿಗೇಕೆ ಅವಮಾನ ಮಾಡಲಿ… ? ಹಿಪ್ಪಿಗಳಂತೆ ! ಅದಕ್ಕೂ ಮೀರಿ… , ಹುಚ್ಚರಂತೆ - ಜಡೆಕಟ್ಟಿ ! ಜಡೆ ಅಂದರೆ ಜಡೆ ಅಲ್ಲ - ಜಟೆ - ಬಿಡಿಸಲಾಗದ ಸಿಕ್ಕಿನಿಂದಾದ ಜಟೆ ! ಕೂದಲನ್ನು ಹಿಂದಕ್ಕೆ ಬಿಗಿದು ಕಟ್ಟಿ ಪುನಃ ಓಟ ಶುರು ಮಾಡಿದೆ . ಯಾರೆಂದರೆ ಯಾರೂ ಇಲ್ಲ ! ಇರಬಾರದೆಂದೇ ಅಲ್ಲವೇ ಈ ಸಮಯಕ್ಕೆ ಬರುವುದು ? ಮೆಟ್ಟಿಲು ಹತ್ತಲು ಶುರು ಮಾಡಿದೆ . ಎಂದಿನಂತಲ್ಲದೆ ತಣ್ಣನೆಯ ಗಾಳಿ ಬೀಸುತ್ತಿತ್ತು . ಈ ಗಾಳಿ ನನಗೆ ಕುಟ್ಟಿಚ್ಚಾತ್ತನನ್ನು ನೆನಪಿಗೆ ತರುತ್ತದೆ - ನನ್ನ ಪ್ರತಿಬಿಂಬ ! ಕುಟ್ಟಿಚ್ಚಾತ್ತನ ನೆನಪಾದಾಗಲೇ ಕೇಳಿಸಬೇಕೆ - ಏದುಸಿರು ? ನನ್ನ ವೇಗವನ್ನು ಮೀರಿಸಿ ಬೆಟ್...