ಬಿಂಬ, ಭ್ರಮೆ, ಮಾಯೆ ಮತ್ತು ಆತ್ಮಾನಂದ!

ಬಿಂಬ, ಭ್ರಮೆ, ಮಾಯೆ ಮತ್ತು ಆತ್ಮಾನಂದ!

ಜುಳುಜುಳುಜುಳು ಹರಿಯುತ್ತಿರುವ ನದಿಯಲ್ಲಿ ಮುಖವನ್ನು ನೋಡಿಕೊಂಡರೆ ಹೇಗಿರುತ್ತದೆ?

ನದಿಯ ತರಂಗಗಳಂತೆ- ಅಂಕುಡೊಂಕು…!

ತರಂಗದಲ್ಲಿ ಕಂಡ ಮುಖವನ್ನು ಕೈಗಳಿಂದ ಅದ್ದಿ, ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡು, ನಿಶ್ಚಲ ನೀರಿನಲ್ಲಿ ಮುಖವನ್ನೊಮ್ಮೆ ನೋಡಿಕೊಂಡರೆ…,

ಎಷ್ಟು ವ್ಯತ್ಯಾಸ…!

ನಾನು ಏನೆಂಬ ಅರಿವು- ನನಗೆ ಮಾತ್ರ!

ಹರಿಯುವ ನದಿ ಪ್ರಪಂಚವಾದರೆ…,

ಬೊಗಸೆಯ ನೀರು- ನಾನು!

ನನ್ನನ್ನು ಹೇಗೆ ದ್ವೇಶಿಸುವಂತಾದರು? ನನ್ನಿಂದ ಹೇಗೆ ದೂರ ಹೋದರು?

ನನ್ನ ಮುಖವನ್ನು ನೇರವಾಗಿ ನೋಡಲು ಮುಜುಗರವಾದರೆ…, ಬೊಗಸೆಯ ನೀರಿನಲ್ಲಾದರೂ ನೋಡಬೇಕು-ಹರಿಯುವ ನದಿಯಲ್ಲೇ ನೋಡುತ್ತೇನೆಂದರೆ ನಾನೇನು ಮಾಡಲಿ?

ನೇರವಾಗಿ ನಮ್ಮ ಹೃದಯವನ್ನು ಅನುಭಾವಿಸಿದ ಯಾರೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ! ಹಾಗೆ ಹೋದರೆ ಅದಕ್ಕೆ ಏನೋ ಕಾರಣ ಇರಲೇ ಬೇಕು- ಅಥವಾ ಅದು ಯಾವುದಕ್ಕೋ ನಿಮಿತ್ತವಾದರೂ ಆಗಿರಬೇಕು!

ಅದನ್ನು ಹೀಗೆ ಹೇಳಬಹುದೇನೋ…

ಅದೊಂದು ದೈವಿಕ ಅನುಭವ ನನಗೆ. ಜನಸಂಚಾರ ಶುರುವಾಗುವ ಮುಂಚಿನ ಕಾಲದಿಂದಲೂ ಆ ಸ್ಥಳದಬಗ್ಗೆ ನನಗೆ ತಿಳಿದಿತ್ತು. ನಿರ್ಜನ ಪ್ರದೇಶದಲ್ಲಿ ತಿರುಗಾಡುವುದರಲ್ಲಿರುವ ಮಜವೇ ಬೇರೆ! ಬೆಟ್ಟದ ತಪ್ಪಲಿನಲ್ಲಿರುವ ದೇವೀಪಾದ! ಪುರಾತನ ಕಾಲಕ್ಕೆ ಹೋದ ಅನುಭವವಾಗುತ್ತದೆ! ದಿನಕ್ಕೆ ಒಬ್ಬರಾದರೂ ಸುಳಿಯುತ್ತಿದ್ದರೋ ಇಲ್ಲವೋ- ಅಷ್ಟು ನಿರ್ಜನತೆ! ಯಾವ ಪುಣ್ಯಾತ್ಮ ಆ ಪಾದಗಳನ್ನು ಅಲ್ಲಿ ಸ್ಥಾಪಿಸಿದನೋ… ಬೆಳಗ್ಗೆ ಹೋಗಿ ಸಂಜೆಯವರೆಗೂ ಅಲ್ಲಿಯೇ ಕುಳಿತಿದ್ದು ಬಂದ ದಿನಗಳೂ ಇದೆ.

ಮನಸ್ಸು ಚಂಚಲಗೊಂಡಾಗಲೆಲ್ಲಾ ಆ ಸ್ಥಳವೇ ನನ್ನ ಶ್ರೀರಕ್ಷೆ…

ದಿನಗಳು ವಾರಗಳು ತಿಂಗಳುಗಳು ವರ್ಷಗಳು ಕಳೆದಂತೆ ಜನಸಂಚಾರ ಹೆಚ್ಚಾಗುತ್ತಾ ಹೋಯಿತು… ನಾನೂ ಕೂಡ ಅಲ್ಲಿಗೆ ಹೋಗುವುದು ಕಡಿಮೆಯಾಗುತ್ತಾ ಬಂತು…

ಸಮಯದ ಅಭಾವ ಮತ್ತು ಅಲ್ಲಿನ ಏಕಾಂತತೆಯ ಭಂಗದಿಂದಾಗಿ ಹೋಗುವುದು ಕಡಿಮೆಯಾಯಿತೇ ಹೊರತು- ನಂಬಿಕೆ ಕಳೆದುಕೊಂಡಿದ್ದರಿಂದಲ್ಲ!

ಈಗಲೂ ವಾರಕ್ಕೊಮ್ಮೆಯೋ, ತಿಂಗಳಿಗಾದರೂ ಒಮ್ಮೆಯೋ ಹೋಗದಿದ್ದರೆ ಏನೋ ಕೊರತೆ…

ಆದಷ್ಟೂ ನಡು ಮಧ್ಯಾಹ್ನವೇ ಹೋಗುತ್ತೇನೆ- ಜನ ಅತ್ಯಂತ ಕಡಿಮೆ ಇರುವ ಸಮಯ!

ಹಾಗೆ…, ಒಂದುದಿನ…, ಆ ಸನ್ನಿಧಿಯಲ್ಲಿ ಕುಳಿತಿದ್ದಾಗ…, ದಾರಿಯಲ್ಲಿ ಹೋಗುತ್ತಿದ್ದ ಒಬ್ಬರು ಕರೆದು ಹೇಳಿದರು…,

ಸಾರ್… ಈಕಡೆ ಬನ್ನಿ! ಅಲ್ಲಿ ಕುಳಿತುಕೊಳ್ಳಬೇಡಿ! ಏನೋ ಕೆಟ್ಟ ಗಾಳಿ ಬೀಸುತ್ತದಂತೆ!”

ಪರವಾಗಿಲ್ಲ!” ಎಂದೆ.

ನಿಮ್ಗೆ ಅರ್ಥ ಆಗಲ್ಲ ಸಾರ್… ಮೊನ್ನೆ ಯಾರೋ ರಕ್ತ ಕಾರ್ಕೊಂಡು ಬಿದ್ರಂತೆ!” ಎಂದ.

ನಿಮಗೇನಾದರೂ ಆ ಅನುಭವ ಆಗಿದೆಯಾ?” ಎಂದೆ.

ಸರಿ- ನಿಮ್ಮಿಷ್ಟ!” ಎಂದು ಹೇಳಿ ಹೊರಟು ಹೋದ!

ಇದು ಹೇಗೆ ಸಾಧ್ಯ? ದೇವರು ಕೆಟ್ಟದ್ದು ಮಾಡುತ್ತಾರೆಯೇ? ದೇವೀ ಸನ್ನಿಧಿಯಲ್ಲಿ ಕೆಟ್ಟದ್ದು ಅಂದರೆ ಏನು…? ನನಗರ್ಥವಾಗಲಿಲ್ಲ! ಯೋಚನೆಯಲ್ಲಿರುವಾಗ…,

ಇಲ್ಲಿಗೆಲ್ಲಾ ಒಬ್ಬರೇ ಬರಬೇಡಿ ಇವ್ರೇ…! ಈ ಪ್ಲೇಸ್ ಅಷ್ಟು ಒಳ್ಳೆಯದಲ್ಲ!” ಎಂದರು ಯಾರೋ.

ಆದರೆ ನನ್ನ ಅನುಭವ ನನ್ನದು- ನನಗಿಂತಲೂ ಈ ಸ್ಥಳದ ಅರಿವು ಯಾರಿಗಿದೆ?

ಎರಡು ಮೂರು ಸಾರಿ ಬಂದಾಗಲೂ ಇದೇ ಅನುಭವವಾಗಿ- ಯಾರೂ ಅಲ್ಲಿಗೆ ಬರದಂತೆ ಮಾಡಲು ವ್ಯವಸ್ತಿತವಾಗಿ ಯೋಜನೆಯೊಂದನ್ನು ನಿರ್ಮಿಸಿದ್ದಾರೆಯೇ ಅನ್ನಿಸಿತು!

ಅವರು ಹೇಳಿದ್ದರಿಂದ ನನಗಾದ ಅನುಭವಕ್ಕೆ ವಿರುದ್ಧವಾಗಿ ನಂಬಲೇ?

ಬರುವುದನ್ನು ಮತ್ತಷ್ಟು ಹೆಚ್ಚು ಮಾಡಿದೆ!

ನನ್ನ ಸಂಶಯ ನಿಜವಾಯಿತು… ದಿನದಿಂದ ದಿನಕ್ಕೆ ಜನಸಂಚಾರ ಕಡಿಮೆಯಾಗುತ್ತಾ ಹೋಯಿತು!

ನಾನಂತೂ ಹೆಚ್ಚು ಹೆಚ್ಚಾಗಿ ಬರತೊಡಗಿದೆ! ಅದಕ್ಕನುಗುಣವಾಗಿ…,

ನನ್ನ ಬದುಕಿನ ಒಳಿತುಗಳು ಹೆಚ್ಚುತ್ತಾ ಹೋಯಿತು!

ಉಪಮೆ ಅರ್ಥವಾಯಿತೇ…?

ನನ್ನ ಹೃದಯದಲ್ಲಿ ನಾನು ಸ್ಥಾಪಿಸಿದವರು, ನನ್ನ ಆತ್ಮೀಯರು, ನಾನು ನಂಬಿದ್ದವರು ನನ್ನಿಂದ ದೂರ ಹೋಗಲು ಕಾರಣವೇನು ಅನ್ನುವ ಪ್ರಶ್ನೆಗೆ ಉತ್ತರ- ಈ ಸನ್ನಿಧಿಗೆ ಬರುವವರ ಸಂಖ್ಯೆ ಯಾಕೆ ಕಡಿಮೆಯಾಯಿತು ಅನ್ನುವುದರಲ್ಲಿದೆ!

ನನ್ನ ಬಿಂಬ!

ವೈಯುಕ್ತಿಕವಾಗಿ ನನ್ನ ಅರಿವಿರುವವರು ಇತರರ ಮಾತು ಕೇಳಿ…!

ಹಾಗಿದ್ದರೇ…,

ನನ್ನ ಹೃದಯದ ಅರಿವು ನನ್ನವರಿಗಾಗಲಿಲ್ಲವೇ?

ಆಗಿದ್ದರೂ ಅದರ ಬಿಂಬ- ಇತರರಿಂದಾಗಿ ಗೊಂದಲಗೊಂಡಿತೆ- ಗೊಂದಲಗೊಳ್ಳಬಹುದೆ?

ಹೀಗೆ ದೂರ ಹೋಗುವಂತಾಗಿದ್ದಕ್ಕೂ ಒಂದು ಕಾರಣವಿರಬಹದು…,

ಈ ಪ್ರಪಂಚದಲ್ಲಿಯೇ ಯಾರೂ ಕೆಟ್ಟವರಿಲ್ಲ! ಆದರೂ ಎಲ್ಲರೂ ಕೆಟ್ಟವರಂತೆಯೇ ಕಾಣಿಸುತ್ತಾರಲ್ಲಾ ಯಾಕೆ?

ಬಿಂಬ!

ಕೊಂದದ್ದು ತಪ್ಪು!

ಕೊಂದವನು ಹೇಳುವ ಕಾರಣ ಕೇಳಿದರೆ….?

ಅದವನ ಸರಿ!

ಹಾಗೆಯೇ ಪ್ರತಿಯೊಬ್ಬರ ವಿಷಯವೂ…!

ಪ್ರಪಂಚದಲ್ಲಿ ಎಷ್ಟು ಜನರಿದ್ದಾರೋ- ಅಷ್ಟು ಮನಸ್ತಿತಿಯಿದೆಯೆಂದಮೇಲೆ…, ಅರ್ಥವಾಗುತ್ತದೆ!

ನನ್ನ ಸರಿ ಎಲ್ಲರಿಗೂ ಸರಿಯಾಗಬೇಕೆಂದಿಲ್ಲ! ಅಥವಾ ನನ್ನ ಸರಿ ಇನ್ನೊಬ್ಬರ ತಪ್ಪಾಗಬಹುದು!

ನನ್ನ ಜೀವನಕ್ಕೆ ನಾನೇ ಹೊಣೆಗಾರ!

ಅವರವರ ದೃಷ್ಟಿಕೋನ ಅವರವರಿಗೆ ಎಂದಿರುವಾಗ…,

ಅಯ್ಯೋ ಹಾಗಲ್ಲ ಹೀಗೆ- ಎಂದು ಎಷ್ಟು ಬಿಂಬಿಸಲು ಪ್ರಯತ್ನಿಸಿದರೂ ಕಾಣುವುದು ಅವರ ದೃಷ್ಟಿಕೋನಕ್ಕೆ ಅನುಗುಣವಾದ ಬಿಂಬವೇ ಹೊರತು- ನಮ್ಮ ನಿಜ ಬಿಂಬ ಅಲ್ಲ!

ಸಮಸ್ಯೆಯೊಂದು ಎದುರಾದಾಗ ಅದಕ್ಕೆ ಪರಿಹಾರವನ್ನು ಯೋಚಿಸಬೇಕು ಹೊರತು- ಸಮಸ್ಯೆಯನ್ನೇ ಹಿಡಿದು ಕೂರುವುದಲ್ಲ! ಹಾಗೆಯೇ…,

ಜೀವನದಲ್ಲಿ ಘಟನೆಯೊಂದು ನಡೆದಾಗ- ನಡೆದು ಹೋಗಿದೆಯಾದ್ದರಿಂದ- ಅದರ ಪರಿಣಾಮವನ್ನು ಸಕಾರಾತ್ಮಕವಾಗಿ ಹೇಗೆ ಬದಲಿಸಬಹುದು ಎಂದು ಯೋಚಿಸಬೇಕು ಹೊರತು- ಘಟನೆಯನ್ನೇ ಹಿಡಿದು ಕೂರುವುದಲ್ಲ!

ನನ್ನವರೆಂದು ನಾನು ನಂಬಿದರವರು ದೂರ ಹೋಗಿದ್ದಾರೆ…, ಯಾಕಿರಬಹುದು? ಇದನ್ನು ಹೇಗೆ ಸಕಾರಾತ್ಮಕವಾಗಿ ತೆಗೆದುಕೊಳ್ಳುವುದು?

ಆದ್ಯತೆ!

ಪ್ರತಿ ಹುಟ್ಟಿನ ಹಿಂದೆ ಒಂದು ರಹಸ್ಯ ಅಥವಾ ಉದ್ದೇಶವಿರುತ್ತದೆ- ಇದ್ದೇ ಇರುತ್ತದೆ- ಇರಬೇಕು!

ಕೆಲವೊಮ್ಮೆ ನಮಗೆ ಹುಟ್ಟಿನ ರಹಸ್ಯದ ಅರಿವಾಗುವುದಿಲ್ಲ! ಕೆಲವೊಮ್ಮೆ ಅರಿವಾದರೂ ನಿರ್ಲಕ್ಷಿಸುತ್ತೇವೆ! ಮತ್ತೂ ಕೆಲವೊಮ್ಮೆ ಅರಿವಾದರೂ ಅದನ್ನು ಅಳವಡಿಸಿಕೊಳ್ಳಲು ಎಡವುತ್ತೇವೆ!

ಅಪರೂಪಕ್ಕೊಮ್ಮೆ- ಹುಟ್ಟಿನ ರಹಸ್ಯದ ಅರಿವಾದರೂ ಅದಕ್ಕಿಂತ ಹೆಚ್ಚಿನ ಆದ್ಯತೆ ಬೇರೆ ವಿಷಯಕ್ಕೆ ಕೊಡುತ್ತೇವೆ!

ಆ ಹೆಚ್ಚಿನ ಆದ್ಯತೆಯೇ... ನಾನು, ನನ್ನದು, ನನ್ನವರೆಂಬ ಸ್ವಾರ್ಥ- ಕಟ್ಟುಪಾಡು!

ಈ ಕಟ್ಟುಪಾಡುಗಳಿಂದ ಹೊರಬರದ ಹೊರತು ಮುಕ್ತಿಯಿಲ್ಲ!

ಈ ಕಟ್ಟುಪಾಡುಗಳಿಗೆ ನಾವು ಪ್ರೇಮವೆಂಬ ಮುಖವಾಡವನ್ನು ಹೊದಿಸುತ್ತೇವೆ- ಯಾವುದು ಕಟ್ಟುಪಾಡುಗಳಿಗೆ ಒಳಪಡುವುದಿಲ್ಲವೋ ಅದಕ್ಕೆ!

ನಿಜವಾದ ಪ್ರೇಮ ಏನು ಅನ್ನುವುದರ ಅರಿವಿಲ್ಲದಿರುವುದೇ, ಅದರ ಬಗೆಗಿನ ನಮ್ಮ ಭ್ರಮೆಯೇ, ನಮ್ಮ ಬದುಕಿನ ಮೊದಲ ಆದ್ಯತೆ- ಹುಟ್ಟಿನ ರಹಸ್ಯವನ್ನು ಮರೆಮಾಚುವ ಮರೀಚಿಕೆ!

ಪ್ರೇಮ ಕೇವಲ ಯಾವ ಒಬ್ಬ ವ್ಯಕ್ತಿಗೆ- ಅಥವಾ ನಮ್ಮ ಅನುಭವದ ಮಿತಿಯೊಳಗೆ ಬರುವ ಯಾವೊಂದಕ್ಕೂ ಸೀಮಿತವಾದುದಲ್ಲ! ಹಾಗೆಯೇ ಅದು ಯಾವೊಂದನ್ನೂ ಅವಲಂಬಿಸಿದ್ದಲ್ಲ! ಅದು ವಿಶ್ವ ಬ್ರಹ್ಮಾಂಡವನ್ನೂ ಮೀರಿಸುವಷ್ಟು ವಿಶಾಲವಾದುದು!

ಈ ಅರಿವೇ- ನಿಜವಾದ ಆದ್ಯತೆ- ಹುಟ್ಟಿನ ರಹಸ್ಯ!

ಇನ್ನು…,

ಈ ರಹಸ್ಯವನ್ನು ಅರಿತಿದ್ದೂ ನಾವು ಅದನ್ನು ಜೀವನಕ್ಕೆ ಅನ್ವಯಿಸದೇ ಹೋಗುವಾಗ ದೇವರ ಅದೃಶ್ಯವಾದ ಕೈ ತನ್ನ ಕರ್ತವ್ಯವನ್ನು ನಿರ್ವಹಿಸುತ್ತದೆ!

ನಮ್ಮ ಹೃದಯಕ್ಕೆ ಹತ್ತಿರವಾದವರು ಎಂದು ನಾವು ನಂಬಿದವರು ಯಾವುದೋ ಕಾರಣದಿಂದ ದೂರ ಹೋಗುತ್ತಾರೆ!

ಅದರ ಉದ್ದೇಶವಿಷ್ಟೇ…,

ನಮ್ಮ ಪ್ರೇಮ ಯಾರೊಬ್ಬರಿಗೂ ಸೀಮಿತವಾಗದೆ ವಿಸ್ತರಿಸಬೇಕೆನ್ನುವುದು- ನಮ್ಮ ಹುಟ್ಟಿನ ರಹಸ್ಯವನ್ನು ಆಚರಣೆಗೆ ತರಬೇಕೆನ್ನುವುದು!

ಗುರಿಯೋ- ವೈಯಕ್ತಿಕ ಆಸಕ್ತಿಯೋ ಅನ್ನುವ ಗೊಂದಲವೇರ್ಪಟ್ಟಾಗ- ತೀರ್ಮಾನವನ್ನು ತೆಗೆದುಕೊಳ್ಳಲಾಗದೆ ಚಡಪಡಿಸುವಾಗ…,

ಪ್ರಕೃತಿ ನಮ್ಮನ್ನು ನಯಿಸುತ್ತದೆ- ಆ ದಾರಿಯಲ್ಲಿ ಹೋಗಿಬಿಡುವುದಷ್ಟೇ!

ವೈಯುಕ್ತಿಕಾಸಕ್ತಿಗೆ ಒತ್ತುಕೊಟ್ಟು, ಪ್ರಕೃತಿ ನಯಿಸಿದ ದಾರಿಯಲ್ಲಿ ನಡೆಯದೆ, ಕರ್ತವ್ಯ ವಿಮುಖನಾದವನನ್ನು ಪ್ರಕೃತಿ ಕೈಬಿಡುತ್ತದೆ- ಅದೇ ದುಃಖಮೂಲ!

ಪ್ರಕೃತಿಯ ಇಚ್ಛೆಯರಿತು ಜೀವನೋದ್ದೇಶವನ್ನು ಸಾಧಿಸಿದೆವೋ.. ಅಲ್ಲಿ ಕಳೆದುಕೊಳ್ಳುವುದೆನ್ನುವುದಿಲ್ಲ!

ಬಿಟ್ಟು ಹೋದವರನ್ನೂ ಮೀರಿ, ಅಥವಾ ಬಿಟ್ಟು ಹೋದವರನ್ನೂ ಒಳಗೊಂಡು- ಪ್ರಪಂಚ ಆತ್ಮೀಯವಾಗುತ್ತದೆ!

ಯಾವ 'ಕಾರಣ'ಕ್ಕೆ ಬಿಟ್ಟು ಹೋದರೂ…, ನಮ್ಮವರು ಬಿಟ್ಟು ಹೋಗಲು 'ಕಾರಣ'…, ಅವರಿಂದ ಆಚೆಗೆ ನಮ್ಮ ಪ್ರೇಮ ವಿಶಾಲವಾಗಬೇಕೆಂಬುದು!

ನಾವು ಹೀಗೆಯೇ ಎಂದು ಅರಿವಿದ್ದೂ…, ಇನ್ನೊಬ್ಬರು ಹೇಳಿದ್ದನ್ನು ಕೇಳಿ ತಮ್ಮ ದೃಷ್ಟಿಕೋನವನ್ನು ಬದಲಿಸುವುದೇ- ಬಿಂಬ!

ನಮ್ಮ ಬಿಂಬ ಇರುವಂತೆಯೇ ಪ್ರಪಂಚಕ್ಕೆ ಕಾಣುತ್ತದೆ ಎಂದು ನಾವು ನಂಬುವುದೇ- ಭ್ರಮೆ!

ನಮ್ಮ ಭ್ರಮೆಯಿಂದ ಹೊರಬರಲು ಶ್ರಮಿಸದೇ ಇರುವುದೇ- ಮಾಯೆ!

ಮಾಯೆಯಿಂದ ಹೊರಬಂದೆವೋ- ಆತ್ಮಾನಂದ!

Comments

  1. ತನ್ನತನವನ್ನು ತನ್ನoತೆ ಸ್ವೀಕರಿಸಾಲಾಗದ ಮನಸತ್ವಗಳಿಗೆ ತನ್ನನ್ನು ಬದಲಿಸಲಾಗದ ಮನಸ್ಥಿತಿ. ಅರ್ಥಮಾಡಿಕೊಳ್ಳುವ ಜ್ಞಾನಬಂದಾಗ ಬಿಂಬಗಳು ಒಂದೇ ಆಗಬಹುದು.ಬಿಂಬಗಳಿಗೆ ಮಾಯೆ ಅವರಿಸಿಕೊಂಡಾಗ ಭ್ರಮೆ ಅನಿಸುತ್ತದೆ.ಭ್ರಮೆ ತೋಳಗಿದಾಗ ಆತ್ಮಾನಂದವೆ 🌷

    ReplyDelete

Post a Comment

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!