ಕಥೆಗಾರನೂ ಅವನ ಕಥೆಯೂ!

ಕಥೆಗಾರನೂ ಅವನ ಕಥೆಯೂ!

ಎಂದಿನಂತೆ ಬೆಳಗ್ಗೆ ಬೇಗನೆ ಎದ್ದು ಬೆಟ್ಟಕ್ಕೆ ಹೊರಟೆ!

ನನ್ನ ಬೆಟ್ಟ!

ಹದಿಮೂರು ವರ್ಷದಿಂದ ಹತ್ತುತ್ತಿದ್ದೇನೆಂಬ ಅಹಂಕಾರದ- ನನ್ನ ಬೆಟ್ಟ!

ಇನ್ನೂ ಬೆಳಗ್ಗಿನ ನಾಲಕ್ಕೂ ಮುಕ್ಕಾಲು- ಆಗುತ್ತಿದೆ.

ಇವತ್ತು ಅಮವಾಸ್ಯೆಯಂತೆ!

ಕತ್ತಲ ಮಜ!

ಕತ್ತಲನ್ನು ಅನುಭಾವಿಸಬೇಕೆ?

ಅಮವಾಸ್ಯೆಯಂದು ಈ ಸಮಯದಲ್ಲಿ ಬೆಟ್ಟಕ್ಕೆ ಬರಬೇಕು!

ಗಾಡಿಯನ್ನು ನಿಲ್ಲಿಸಿ ಮೆಟ್ಟಲಿನ ಕಡೆಗೆ ಜಾಗಿಂಗ್ ಶುರು ಮಾಡಿದಾಗ ಕಣ್ಣ ಮುಂದೆ- ಎಡದಿಂದ ಬಲಕ್ಕೆ- ಏನೋ ಚಲಿಸಿದಂತಾಯಿತು!

ನಿಂತೆ, ನೋಡಿದೆ… ಬಲದಿಂದ ಎಡಕ್ಕೆ ತಿರುಗುವಾಗ ಕಾಣಿಸಿತು- ಅರಿತೆ- ನನ್ನ ಕೂದಲು!

ಛೀ..! ಇದೊಂದು! ಕಾಡುಕುರುಬರಂತೆ!

ಛೆ…, ಕಾಡುಕುರಬರಿಗೇಕೆ ಅವಮಾನ ಮಾಡಲಿ…?

ಹಿಪ್ಪಿಗಳಂತೆ! ಅದಕ್ಕೂ ಮೀರಿ…,

ಹುಚ್ಚರಂತೆ- ಜಡೆಕಟ್ಟಿ!

ಜಡೆ ಅಂದರೆ ಜಡೆ ಅಲ್ಲ- ಜಟೆ- ಬಿಡಿಸಲಾಗದ ಸಿಕ್ಕಿನಿಂದಾದ ಜಟೆ!

ಕೂದಲನ್ನು ಹಿಂದಕ್ಕೆ ಬಿಗಿದು ಕಟ್ಟಿ ಪುನಃ ಓಟ ಶುರು ಮಾಡಿದೆ.

ಯಾರೆಂದರೆ ಯಾರೂ ಇಲ್ಲ!

ಇರಬಾರದೆಂದೇ ಅಲ್ಲವೇ ಈ ಸಮಯಕ್ಕೆ ಬರುವುದು?

ಮೆಟ್ಟಿಲು ಹತ್ತಲು ಶುರು ಮಾಡಿದೆ.

ಎಂದಿನಂತಲ್ಲದೆ ತಣ್ಣನೆಯ ಗಾಳಿ ಬೀಸುತ್ತಿತ್ತು.

ಈ ಗಾಳಿ ನನಗೆ ಕುಟ್ಟಿಚ್ಚಾತ್ತನನ್ನು ನೆನಪಿಗೆ ತರುತ್ತದೆ- ನನ್ನ ಪ್ರತಿಬಿಂಬ!

ಕುಟ್ಟಿಚ್ಚಾತ್ತನ ನೆನಪಾದಾಗಲೇ ಕೇಳಿಸಬೇಕೆ- ಏದುಸಿರು?

ನನ್ನ ವೇಗವನ್ನು ಮೀರಿಸಿ ಬೆಟ್ಟ ಹತ್ತುವವರಾರು ಇಲ್ಲವೆಂಬ ಅಹಂಕಾರವೂ ನನಗಿದೆ!

ಹಾಗಿದ್ದರೆ ಕೇಳಿಸುತ್ತಿರುವ ಏದುಸಿರು ಮುಂಚೆಯೇ ಹೋಗಿರುವವರದ್ದೋ…, ಅಥವಾ…?

ಮುನ್ನೂರನೇ ಮೆಟ್ಟಿಲನ್ನು ದಾಟಿ ಮುಂದಕ್ಕೆ ಹೋದರೆ ಯಾರೋ ಕುಳಿತಿರುವಂತೆ ಕಾಣುವ ಒಂದು ಡಸ್ಟ್‌ಬಿನ್ ಇದೆ!

ಇವತ್ತು ಅದು ನಿಜಕ್ಕೂ ಮನುಷ್ಯನೇ ಅನ್ನಿಸಿಬಿಟ್ಟಿತು!

ತೀರಾ ಹತ್ತಿರ ತಲುಪಿ ನೋಡಿದರೆ- ಅಲ್ಲ!

ಹಾಗಿದ್ದರೆ ಏದುಸಿರು ಯಾರದು?

ಸ್ವಲ್ಪ ಮುಂದಕ್ಕೆ ಹೋದಾಗ ಮರವೊಂದರ ಕಾಂಡ- ಸ್ಪಷ್ಟವಾಗಿ ಮನುಷ್ಯ ಆಕಾರದಲ್ಲಿಯೇ ಕಾಣಿಸಿತು!

ತೀರಾ ಸಮೀಪಕ್ಕೆ ಹೋಗಿ ದಿಟ್ಟಿಸಿ ನೋಡಿದೆ…, ನಿಜ…!

ಏದುಸಿರು ಬಿಡುತ್ತಾ ನಿಂತಿದ್ದಾನೆ- ಎರಡು ಅಡಿ ಉದ್ದದ ಕುಟ್ಟಿಚ್ಚಾತ್ತ!

ಇದೇನು ಇಲ್ಲಿ?” ಎಂದೆ.

ಏದುಸಿರು ಮತ್ತಷ್ಟು ಹೆಚ್ಚಿದಂತೆ ಉಸಿರನ್ನು ದೀರ್ಘವಾಗಿ ಎಳೆಯುತ್ತಾ- ಕುಳಿತುಕೊಳ್ಳುವಂತೆ ಸಂಜ್ಞೆ ತೋರಿಸಿದ!

ಬೇಕಿತ್ತಾ…?” ಎನ್ನುತ್ತಾ ಮೆಟ್ಟಿಲ ಮೇಲೆ ಕುಳಿತೆ.

ಕಾಂಡದಿಂದ ಹೊರಬಂದು- ರೂಪ ಮಾತ್ರ- ನನ್ನ ತೊಡೆಯಮೇಲೆ ಕುಳಿತು ಸುಧಾರಿಸಿಕೊಂಡು ಕೇಳಿದ…,

ಹೇಳು…, ಯಾಕೆ ಪುನಃ ಕತ್ತಲಿಗೆ ಸರಿದೆ?”

ಮುಂಚಿನಿಂದಲೂ ನಾನು ಕತ್ತಲಲ್ಲೇ ಇರುವವನಲ್ಲವಾ? ಅದರಲ್ಲೇನು ವಿಶೇಷ?” ಎಂದೆ.

ಮುಗುಳುನಕ್ಕ ಚಾತ. ತಲೆಯೆತ್ತಿ ನನ್ನ ಮುಖವನ್ನು ನೋಡಿ…,

ಅದನ್ನೇ ಕೇಳಿದ್ದು! ಕತ್ತಲಲ್ಲಿದ್ದವನು! ಈಗಲೂ ಕತ್ತಲಲ್ಲೇ ಇರುವವನು- ಮಧ್ಯೆ ಬೆಳಕಿಗೇಕೆ ಬಂದೆ?” ಎಂದ.

ನಾನೇನೂ ಮಾತನಾಡಲಿಲ್ಲ! ಚಾತನೇ…,

ಕುಟ್ಟಿ (ಅವನನ್ನು ನಾನು ಚಾತನೆಂದೂ ನನ್ನನ್ನು ಅವನು ಕುಟ್ಟಿಯೆಂದೂ ಕರೆಯುವುದು ವಾಡಿಕೆ!) ಈಗ ಅರ್ಥವಾಯಿತಾ…?” ಎಂದ.

ಈಗೇನಾಯಿತು?” ಎಂದೆ.

ಗೇಲಿಮಾಡುವ ಕನಿಕರದಿಂದ ನಕ್ಕ!

ದೂರದಲ್ಲಿ ಹರಿಯುತ್ತಿರುವ ನದಿ ಯಾವುದು?

ತಿಳಿಯದು.

ಪ್ರಯಾಣವೊಂದನ್ನು ಹೊರಟಿದ್ದೆ.

ಪೂರ್ವ ನಿಶ್ಚಯವಿಲ್ಲದ ಪ್ರಯಾಣ!

ಹೀಗೊಂದು ಪ್ರದೇಶವಿದೆ ಎಂದೇ ಯಾರಿಗೂ ಗೊತ್ತಿಲ್ಲವೇನೋ ಅನ್ನಿಸುವಷ್ಟು ನಿರ್ಜನತೆ!

ಕಟ್ಟಡಗಳು, ವಾಹನಗಳು, ಕೊಳೆ- ಕಸ- ಕಡ್ಡಿ- ಹೊಗೆ, ಶಬ್ದ…, ಇದರಿಂದೆಲ್ಲಾ ಹೊರತಾಗಿ ಒಂದು ಪ್ರದೇಶ!

ಪ್ರಕೃತಿ ಎಷ್ಟು ಚಂದ!

ನದಿಯ ನೀರು ಇಷ್ಟು ಶುದ್ಧವಾಗಿರುತ್ತದೆಯೇ…?

ಮೊದಲೆರಡು ಗುಟುಕು ಬೊಗಸೆಯಲ್ಲಿ ಕುಡಿದು- ನದಿಗೆ ಬಾಯಿ ಹಾಕಿದೆ!

ನೀರಿಗಿಳಿದು ದಣಿಯುವಷ್ಟು ಈಜಿದೆ- ಸ್ನಾನ ಮಾಡಿದೆ.

ಒಂದು ಚೂರೂ ಬಟ್ಟೆಯಿಲ್ಲದೆ ಪ್ರಕೃತಿಯೊಂದಿಗೆ ಪ್ರಕೃತಿಯಾಗಿ, ಹರಿಯುತ್ತಿರುವ ನದಿಯ ನಾದಕ್ಕೆ ಮನಸ್ಸು ನೆಟ್ಟು ಮಲಗಿದೆ!

ಅವಳ ಪಾದಕ್ಕೆ ತುಟಿಯೊತ್ತಿದೆ.

ಕನಿಕರದಿಂದ ನೋಡಿದಳು.

ನೀ ನನ್ನ ಅಧಿಕಾರ ಎಂದಿರುವಾಗ ನಿನಗೆ ನನ್ನಲ್ಲಿ ಕನಿಕರವೋ?” ಎಂದೆ.

ಇನ್ನೇನು? ಅಧಿಕಾರ ಅನ್ನುತ್ತೀಯ…, ಅಧೀರನಾಗಿ ಕಾಲು ಹಿಡಿಯುತ್ತೀಯ!” ಎಂದಳು.

ಇದು ಅಧೀರನಾಗುವುದೇ?”

ನನ್ನ ಮುಖವನ್ನು ಬೊಗಸೆಯಲ್ಲಿ ತೆಗೆದುಕೊಂಡು..,

ಗೊತ್ತೋ ನನ್ನ ಮನವೇ!” ಎಂದು ಹೇಳಿ ಹಣೆಗೊಂದು ಮುತ್ತುಕೊಟ್ಟಳು!

ಪ್ರಪಂಚವೆಷ್ಟು ವಿಶಾಲ!

ಎಷ್ಟೆಷ್ಟು ಅನುಭವಗಳು, ದೃಶ್ಯವೈವಿಧ್ಯಗಳು…!

ಮನುಷ್ಯನೆಷ್ಟು ಸ್ವಾರ್ಥಿ!

ಬ್ರಹ್ಮಾಂಡ ಜೀವನಕ್ಕೆ ಹೋಲಿಸಿದರೆ ಮನುಷ್ಯ ಜೀವನವೊಂದು ಹನಿಯೂ ಅಲ್ಲ!

ಮನುಷ್ಯ ಜೀವನ ಎಂದು ಮಾತ್ರವಲ್ಲ- ಹುಟ್ಟಿದ ಯಾವೊಂದು ಜೀವಿಯೂ ಶಾಶ್ವತವಲ್ಲ!

ಹಾಗಿದ್ದರೂ ಮನಸ್ತಾಪಕ್ಕಿರುವಷ್ಟು ನೆಪಗಳು ಹೊಂದಾಣಿಕೆಗಿಲ್ಲ!

ಯಾಕೆ?

ಒಂದಕ್ಕೊಂದು ಸಂಬಂಧವಿಲ್ಲದಂತೆ ಹೇಳಿದ ಈ ವಿಷಯಗಳನ್ನು ಹೇಗೆ ಒಟ್ಟುಗೂಡಿಸುತ್ತೀಯ ಕುಟ್ಟಿ!”

ಅದೇ ಅಲ್ಲವೇ ಸೃಷ್ಟಿಯ ವೈಚಿತ್ರ್ಯ! ಒಂದಕ್ಕೊಂದು ಸಂಬಂಧವಿಲ್ಲದಂತೆ ವೈವಿಧ್ಯಮಯವಾಗಿ ಹರಡಿರುವ ಈ ಜಗತ್ತು ಯಾವ ಒಂದು ಕೊಂಡಿಯಿಂದ ಬಂಧಿಸಲ್ಪಟ್ಟಿದೆ?”

ಮೊದಲು ಕತ್ತಲಲ್ಲಿದ್ದೆ!

ಅರಿತೋ ಅರಿಯದೆಯೋ ನನ್ನ ಪಾಡಿಗೆ ನಾನು ಜ್ಞಾನವನ್ನು ಗಳಿಸಲು ಯತ್ನಿಸುತ್ತಿದ್ದೆ! ಗಳಿಸಿದ ಜ್ಞಾನವನ್ನು ಪ್ರದರ್ಶಿಸುತ್ತಿರಲಿಲ್ಲ! ಅದು ನನ್ನೊಳಗೆ ಸುಪ್ತವಾಗಿರುತ್ತಿತ್ತು! ಇತರರಿಗೆ ಹಂಚಿದರೂ…, ಯಾರಿಂದಲೋ ಪಡೆದದ್ದು ಮತ್ತಾರಿಗೋ ಕೊಟ್ಟೆನೇ ಹೊರತು ಅದರಲ್ಲಿ ನನ್ನದೇನಿಲ್ಲ ಅನ್ನುವ ಭಾವವಿತ್ತು!

ಬೆಳಕಿಗೆ ಬಂದೆ!

ನಾನೇ ಸರಿ ಎಂಬ ಭಾವ- ಅಹಂ!

ಆ ಅಹಂ ಅನ್ನು ಬಡಿದಟ್ಟಿ ಮತ್ತೆ- ಕತ್ತಲು!

ನಕ್ಕ ಚಾತ…! ನಾನೂ ನಕ್ಕೆ!

ಶಾಸ್ತ್ರವನ್ನೇ ಮಗುಚಿ ಹಾಕಿದೆಯಲ್ಲ ಕುಟ್ಟಿ!?” ಎಂದ.

ನಿನ್ನ ಪ್ರಶ್ನೆ ಹಾಗಿತ್ತು!” ಎಂದೆ.

ಅರ್ಥವಾಗಲಿಲ್ಲವೋ ಅಥವಾ…?”

ಇಲ್ಲ… ಸರಿಯಾಗಿಯೇ ಇದೆ! ಹೇಳುವ ಧಾಟಿಯಲ್ಲಿ ಏನೋ ಗೊಂದಲ! ನಿನ್ನ ಕತ್ತಲನ್ನು ತಮಸ್ಸು ಅಂದುಕೊಳ್ಳಲಾಗದು ಅಲ್ಲವಾ… ನಿಜಕ್ಕೂ ಅದೇ ಬೆಳಕು! ಮೊದಲು ಬೆಳಕಿನಲ್ಲಿದ್ದೆ! ತಮಸ್ಸು ಆವರಿಸಿ ಕತ್ತಲಿಗೆ ಸರಿದೆ! ಈಗ ಪುನಃ ಮಾಯೆಯಿಂದ ಹೊರಬಂದೆ- ಬೆಳಕು!”

ನೀ ಹೀಗೆಲ್ಲಾ ಹೇಳಿದರೆ ಓದುವವರ ಪಾಡೇನು ಕುಟ್ಟಿ!?”

ಸರಿ ಹಾಗಿದ್ದರೆ…!”

ಭೂತ- ಕಾಲ!

ಕತ್ತಲು ಅಂದೆನಲ್ಲ?

ಅದನ್ನು ತಮಸ್ಸು ಅನ್ನಲಾಗದು!

ತಮಸ್ಸು ಅಂದರೆ ಅಜ್ಞಾನ!

ಜ್ಞಾನದ ಮಾರ್ಗ- ಅಂದರೆ ಜ್ಞಾನದೆಡೆಗಿನ ಪ್ರಯಾಣ- ತಮಸ್ಸಿಗೆ ಬರುವುದಿಲ್ಲ!

ಅಜ್ಞಾನ ಬೇರೆ- ಜ್ಞಾನವಿಲ್ಲದಿರುವುದು ಬೇರೆ!

ನಾನು ಕತ್ತಲಿನಲ್ಲಿದ್ದೆ! ಮುಗ್ಧನಾಗಿದ್ದೆ! ಪ್ರಪಂಚದ ಬಗ್ಗೆ ಅರಿವಿರಲಿಲ್ಲ ನನಗೆ! ಆದರೆ ಜ್ಞಾನದಾಹವಿತ್ತು!

ಕೆಲವೊಮ್ಮೆ ಕಲಿತ ವಿಷಯದಬಗ್ಗೆ ಗೊಂದಲವೇರ್ಪಡುತ್ತಿತ್ತು!

ಅಧ್ಯಯನ ಮಾಡುತ್ತಿದ್ದೆ. ಮನುಷ್ಯ ಮನಸ್ಸನ್ನು- ವರ್ತನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೆ, ಕಲಿಯುತ್ತಿದ್ದೆ!

ಬರುಬರುತ್ತಾ ನಾನು ಕಂಡ ಪ್ರಪಂಚವನ್ನು ಬರೆಯತೊಡಗಿದೆ. ಅದು ಕಥೆಗಳ ರೂಪವನ್ನು ಪಡೆಯುತ್ತಿತ್ತು.

ನಾನು ಬರೆದದ್ದನ್ನು ಯಾರಾದರೂ ಓದಬೇಕೆಂದೋ, ನಾನು ಬೆಳಕಿಗೆ ಬರಬೇಕೆಂದೋ ನನಗಿರಲಿಲ್ಲ!

ಬರೆಯುತ್ತಿದ್ದೆ- ಅಷ್ಟೆ!

ಜೊತೆಗೆ…,

ನನ್ನ ಕಥೆಗಳು ಬೆಳಕಿಗೆ ಬಂದರೂ ಬರೆದವರು- ನಾನು- ಅಜ್ಞಾತವಾಗಿರಬೇಕೆನ್ನುವ ಆಸೆಯಿತ್ತು!

*

ವರ್ತಮಾನ- ಕಾಲ!

ಬೆಳಕು ಅಂದೆನಲ್ಲಾ…?

ನನ್ನ ಕಥೆಗಳು ಓದಲ್ಪಟ್ಟವು- ವಿಮರ್ಶೆಗೆ ಒಳಪಟ್ಟವು!

ಬರೆದವರು ಯಾರು ಅನ್ನುವ ಪ್ರಶ್ನೆಬಂದಾಗ…, ನನ್ನ ಆಸೆಗೆ ವಿರುದ್ಧವಾಗಿ…,

ನಾನೇ…! ನಾನೇ…! ನಾನೇ…!” ಎಂದು ಬೆಳಕಿಗೆ ಬಂದೆ!

ಬೆಳಕು!

ನಿಜ ಅರ್ಥದಲ್ಲಿ- ತಮಸ್ಸು!

ಜ್ಞಾನಿ ನಾನೆಂದು ತೋರಿಸಿಕೊಳ್ಳುವ ತೊಳಲಾಟಕ್ಕಿಂತ ಅಜ್ಞಾನ ಯಾವುದಿದೆ?

ಅದೊಂದು ಸೀಮಿತ ಸಮಯ!

*

ಭವಿಷ್ಯತ್- ಕಾಲ!

ಪುನಃ ಕತ್ತಲು ಅಂದೆನಲ್ಲಾ…?

ಭೂತಕಾಲದ ಅನುಭವದಲ್ಲಿ ಭವಿಷ್ಯವನ್ನು ನಿರ್ಧರಿಸಿ ವರ್ತಮಾನಕಾಲದಲ್ಲಿ ಬದುಕಬೇಕಂತೆ!

ನನಗಾ ಚಿಂತೆಯೇ ಇರಲಿಲ್ಲ!

ನೀನು ಬರೆಯುವ ಕಥೆಗಳು ಒಂದು ರೀತಿಯ ಗೀಳಿನಂತೆ ಬದಲಾಗುತ್ತಿದೆ!” ಎಂದರೊಬ್ಬರು.

ಬರೆದ ಕಥೆಗಳಮೇಲೊಮ್ಮೆ ಕಣ್ಣಾಡಿಸಿದೆ!

ಗಂಡು- ಹೆಣ್ಣು!

ಕಥಾನಾಯಕ ನಿಯಮವಿಲ್ಲದವನು!

ವಾಸ್ತವ ಪ್ರಪಂಚದ ಯಥಾವತ್ ರೂಪವನ್ನು ಕಥೆಗಿಳಿಸುವವನು- ಕಥೆಗಾರ- ಓದುಗರಿಗೆ!

ಆದರೆ…,

ಕಲ್ಪನಾ ಪ್ರಪಂಚವನ್ನು ವಾಸ್ತವದಂತೆ ಬಿಂಬಿಸುವವನು ನಿಜವಾದ ಕಥೆಗಾರ!

ಗಂಡು ಹೆಣ್ಣಿಲ್ಲದ- ಅಥವಾ ಒಬ್ಬನೇ ಗಂಡು ಒಬ್ಬಳೇ ಹೆಣ್ಣು…, ಪವಿತ್ರ ಪ್ರೇಮ- ಅನ್ನುವ ಕಥೆಗಳಲ್ಲಿ ಕಥೆಗಾರನಿರಲಿಲ್ಲ- ಓದುಗರಿಗೆ!

ಒಂದು ಗಂಡು ಹಲವು ಹೆಣ್ಣು, ಒಂದು ಹೆಣ್ಣು ಹಲವು ಗಂಡು ಎಂದು ಬಂದಾಗ- ಕಥೆಗಾರನಲ್ಲೇ ಕಥಾನಾಯಕನನ್ನು ಕಂಡರು ಓದುಗರು!

ಅದು ಸಹಜ ಕೂಡ!

ಆದರೆ ಕಥೆಗಾರನಾಗಿ ನಾನು ಹೇಳುವುದು…,

ಬರೆದ ಕಥೆಗಳಲ್ಲಿ ಒಂದೊಂದು ಅಕ್ಷರವೂ ಕಥೆಗಾರನಿಗೆ ಸಂಬಂಧಪಟ್ಟದ್ದೇ- ಕಥೆಗಾರನೇ!

ಲೆಕ್ಕವಿಲ್ಲದಷ್ಟು ಹೆಣ್ಣಿನೊಂದಿಗೆ ಕಾಮಿಸುವ ಕಥಾನಾಯಕ ಖಂಡಿತವಾಗಿ ಕಥೆಗಾರನೇ…! ಹಾಗೆಯೇ…,

ಕಥಾನಾಯಕನೊಂದಿಗೆ ಕಾಮಿಸುವ ಪ್ರತಿ ಹೆಣ್ಣೂ- ಕಥೆಗಾರನೇ!

ಸಮಸ್ಯೆ ಬರುವುದು…, ಕಥಾನಾಯಕನನ್ನು ಕಥೆಗಾರನಿಗೆ ನೇರವಾಗಿ ಆರೋಪಿಸಿದಾಗ!

ಅಂದರೇ…,

ಕಥೆಗಾರ ಅಷ್ಟೂ ಹೆಣ್ಣಿನೊಂದಿಗೆ ಕಾಮಿಸಿ ಆ ಅನುಭವವನ್ನು ಬರೆದ- ಎಂದಾದಾಗ!

ವಾಸ್ತವ ವಾಸ್ತವವೇ!

ಒಬ್ಬಳು ಹೆಣ್ಣಿಗೆ ಹಲವು ಗಂಡಸರು, ಒಬ್ಬ ಗಂಡಿಗೆ ಹಲವು ಹೆಂಗಸರು ಇರಬಹುದು!

ಆದರೆ…,

ವಾಸ್ತವವನ್ನು ಹಾಗೆಯೇ ಬರೆಯಲು ಕಥೆಗಾರನ ಅಗತ್ಯವಿಲ್ಲ!

ಕಥೆಗಾರ ತಾನು ಕಂಡದ್ದನ್ನು, ಅನುಭವಿಸಿದ್ದನ್ನು ತನ್ನದೇ ಆದ ದೃಷ್ಟಿಕೋನದಲ್ಲಿ, ತನ್ನದೇ ಆದ ಕಲ್ಪನೆಗಳನ್ನು ಬೆರೆಸಿ, ಕ್ರಿಯಾತ್ಮಕವಾಗಿ ಬರೆಯುತ್ತಾನೆ!

ಆ ಬರೆದದ್ದರಲ್ಲಿ ತಮಗೆ ಅನ್ನಿಸಿದ ವಿಷಯಕ್ಕೆ ಮಾತ್ರ ಕಥೆಗಾರನನ್ನು ಆರೋಪಿಸುವುದು…?

ಸಹಜ!

ಏನೋಪ್ಪ!

*

ಹೀಗೆ…,

ಕತ್ತಲು- ಬೆಳಕು- ಕತ್ತಲು ಅನ್ನುವುದು ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆಗೆ ಒಳಪಟ್ಟಾಗ ನಿಜದರಿವಾಯಿತು!

ನಾನು ಮಾಡಿದ ತಪ್ಪು!

ನನ್ನ ದೃಷ್ಟಿಯಲ್ಲಿ ನಿಜವೇ ಇರಬಹುದು! ಆದರೆ ನನ್ನ ದೃಷ್ಟಿಯ ನಿಜ ಇತರರಿಗೆ ನಿಜವಾಗಬೇಕೆಂದಿಲ್ಲ!

ನನಗಿಂತ ಹಿರಿಯರು, ಬೇರೆಯೇ ದೃಷ್ಟಿಕೋನ ಹೊಂದಿದವರು ಕಥೆಗಳಬಗ್ಗೆ ಸಲಹೆ ಸೂಚನೆ ಕೊಟ್ಟಾಗ…,

ಸಮರ್ಥಿಸಲು ಹೋದೆ!

ಕಥೆ ಬರೆಯುವುದಷ್ಟೆ ನನ್ನ ಕೆಲಸ!

ವಿಮರ್ಶಿಸಿದವರ ಸಲಹೆ ಸೂಚನೆ ಸ್ವೀಕರಿಸಿ- ಅಳವಡಿಸಿಕೊಳ್ಳವುದು ಸೌಜನ್ಯ!

ಆದರೆ ಅವರ ವಿಮರ್ಶೆ ನನ್ನ ಮನಸ್ಸಿಗೆ- ತತ್ತ್ವಕ್ಕೆ ವಿರುದ್ಧವಾಗಿದ್ದರೆ….?

ವಾದಿಸದಿರುವುದು- ಮೌನವನ್ನವಲಂಬಿಸುವುದು!

ಈ ಅರಿವು ನಾನು ಮತ್ತೊಮ್ಮೆ ನೇಪಥ್ಯಕ್ಕೆ ಸರಿಯುವಂತೆ ಮಾಡಿದೆ!

ಈಗ ಹೇಳು…! ಕಥೆಗಾರನಾಗಿ ನಿನ್ನನ್ನು ಸಮರ್ಥಿಸಿಕೊಳ್ಳುವ ಮಾತನಾಡಲು ದೊಡ್ಡಮಟ್ಟದ ಪೀಠಿಕೆ ಹಾಕಿದೆಯಲ್ಲಾ…? ಹೆಸರು ತಿಳಿಯದ ನದಿಯನ್ನು ನೋಡಿದ್ದೀಯ? ಒಬ್ಬರೇ ಒಬ್ಬರಾದರೂ ಹೆಣ್ಣಿನ ಪಾದಕ್ಕೆ ಮುತ್ತು ಕೊಟ್ಟಿದ್ದೀಯ? ಸೀಮಿತ ಪ್ರದೇಶದ ಹೊರತು ಏನು ಭಾರಿ ಪ್ರಪಂಚವನ್ನು ನೋಡಿದ್ದೀಯ?”

ಅಲ್ಲವಾ…? ಸಾವಿರ ಪುಸ್ತಕಗಳನ್ನು ಓದಿದ್ದೇನೆ! ಪುಟಾಣಿ ಮಕ್ಕಳ ಪಾದಕ್ಕೆ ಮುತ್ತು ಕೊಟ್ಟಿದ್ದೇನೆ! ಪ್ರಪಂಚವನ್ನು ಕಂಡವರ ಅನುಭವವನ್ನು ಅವರಿಂದ ತಿಳಿದುಕೊಂಡಿದ್ದೇನೆ! ಕಲ್ಪನೆಗಳನ್ನು ಹೆಣೆಯುವುದರಲ್ಲಿ ಸಿದ್ಧಿ ಪಡೆದುಕೊಂಡಿದ್ದೇನೆ! ಮದುವೆ ಆದವನಾದ್ದರಿಂದ ಗಂಡು ಹೆಣ್ಣಿನ ಸಂಬಂಧದ ಸ್ಪಷ್ಟ ಅರಿವು ನನಗಿದೆ…! ನೀನು ಕೇಳಿದ ಪ್ರಶ್ನೆಗಳಿಗೆ ಉತ್ತರ ಇದಕ್ಕಿಂತ ಸ್ಪಷ್ಟವಾಗಿ ಹೇಳಲಾರೆ!!”

ಸಾಕು ಸಾಕು ನಿಲ್ಲಿಸು! ಇನ್ನುಮುಂದೆ ಕಥೆಗಾರನಾಗಿ ನಿನ್ನ ಕರ್ತವ್ಯವನ್ನು ಮಾಡು! ಮಾಡಿದೆ ಅನ್ನುವುದನ್ನು ಬಿಡು!” ಎಂದ ಕುಟ್ಟಿಚ್ಚಾತ್ತ!

ಕಥೆ ಬರೆಯುವುದು ಕರ್ತವ್ಯವೇ?” ಎಂದೆ.

ನೀನು ಏನು ಬರೆದರೆ ಪ್ರಪಂಚದಮೇಲೆ ಸತ್‌ಪರಿಣಾಮ ಬೀರುತ್ತದೋ…, ಅದನ್ನು ಬರೆಯುವುದು ಖಂಡಿತಾ ನಿನ್ನ ಕರ್ತವ್ಯ! ಏಕೆಂದರೆ…, ನೀನು ಬರೆಯಬಲ್ಲೆ!”

೧೦

ಏನಿವತ್ತು ಕುಳಿತುಕೊಂಡುಬಿಟ್ಟಿದ್ದೀರ?” ಎಂದರು ಪ್ರತಿದಿನ ನಾನು ಇಳಿಯುವಾಗ ಕಾಣಿಸಿಕೊಳ್ಳುತ್ತಿದ್ದ ಬೆಟ್ಟದ ಗೆಳೆಯರು!

ಕತ್ತಲಲ್ಲಿ ಒಬ್ಬನೇ ಧೈರ್ಯಪರೀಕ್ಷೆ ಮಾಡಿಕೊಳ್ಳುತ್ತಿದ್ದೆ!” ಎಂದೆ.

ಇಳಿಯುತ್ತಿದ್ದೀರೋ ಹತ್ತುತ್ತಿದ್ದೀರೋ?” ಎಂದರು.

ಮುಗುಳುನಕ್ಕೆ.

ಅವರು ಹೊರಟು ಹೋದರು.

ನಾನು…,

ಮರದ ಕಾಂಡದಲ್ಲಿ ಲೀನವಾದೆ!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!