ಯಾತ್ರೆ!
ಯಾತ್ರೆ!
ಒಂದು ಪ್ರಯಾಣ ಹೊರಟಿದ್ದೆ. ಎಲ್ಲಿಗೆಂದು ತಿಳಿಯದ ಪ್ರಯಾಣ. ಮಾರ್ಗಮಧ್ಯದಲ್ಲಿ ವ್ಯಕ್ತಿಯೊಬ್ಬ ಪರಿಚಯವಾದ! ಆಕರ್ಷಕವಾಗಿದ್ದ. ಒಂದು ಕಳೆ. ಅದು ನಗುವೋ- ಅಲ್ಲವೋ ಅನ್ನುವ ಭ್ರಮೆ ಹುಟ್ಟಿಸುವ- ನಗುತ್ತಿರುವಂತಿರುವ ಮುಖ! ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಕಣ್ಣಿನಾಳದಲ್ಲಿ…, ಕ್ರೌರ್ಯ…?!
ಅದನ್ನು ಲೋಕದಮೇಲಿನ ದ್ವೇಶ ಅಂದುಕೊಳ್ಳಬಹುದೇ? ಅಥವಾ…,
ಇಬ್ಬರಿಗೂ ಅದು ಆಕಸ್ಮಿಕ ಭೇಟಿಯಲ್ಲ! ನನ್ನ ಪ್ರಯಾಣದ ಉದ್ದೇಶ, ಆತ ನನ್ನನ್ನು ಹಿಂಬಾಲಿಸಬೇಕು ಅನ್ನುವುದಾದರೆ…, ಆತನ ಪ್ರಯಾಣದ ಉದ್ದೇಶ, ನಾನೇ!
“ಎಲ್ಲಿಗೆ ಪ್ರಯಾಣ?” ಕೇಳಿದರು.
“ತಿಳಿಯದು!” ಎಂದೆ.
“ಜೊತೆಗಾರನಿದ್ದರೆ ಸಮಸ್ಯೆಯೇ?” ಎಂದರು.
“ಜೊತೆಗಾತಿಯಾದರಷ್ಟೇ ಕಷ್ಟ!” ಎಂದೆ.
“ಕನ್ಯಾಕುಮಾರಿಗೆ ಹೊರಟಿದ್ದೇನೆ… ಒಬ್ಬನೇ ಬೋರು!” ಎಂದರು.
“ಸರಿ…, ಅಲ್ಲಿಯವರೆಗಿನ ಯಾತ್ರೆ ನಿಮ್ಮೊಂದಿಗಾಗಲಿ!” ಎಂದೆ.
ಒಟ್ಟಿಗೆ ಹೆಜ್ಜೆ ಹಾಕಿದೆವು!
ನಿಜ..., ಪ್ರಯಾಣ- ಕಾಲು ನಡಿಗೆಯಲ್ಲಿ!
*
“ಹೇಳಿ…, ನಿಮ್ಮ ಬಗ್ಗೆ!” ಎಂದರು.
“ಹೇಳುವಂತದ್ದೇನಿಲ್ಲ! ಹುಟ್ಟಿದೆ! ಅಂದಿನಿಂದ ಒಬ್ಬನೇ!” ಎಂದೆ.
“ಅರ್ಥವಾಗಲಿಲ್ಲ!” ಎಂದರು.
“ಅನಾಥ!” ಎಂದೆ.
ಆತನ ಮುಖದಲ್ಲಿ ಗೊಂದಲ ಸ್ಪಷ್ಟವಾಗಿತ್ತು! ಅನಾಥನಂತೆ ಕಾಣಲಿಲ್ಲವೇನೋ…!
ಸ್ವಲ್ಪ ಸಮಯ ಮೌನ!
“ನಿಮ್ಮಬಗ್ಗೆ ಹೇಳಿ!” ಎಂದೆ.
“ನಾನೊಬ್ಬ ಶಿಕ್ಷಕ!” ಎಂದು ಹೇಳಿ ನನ್ನ ಮುಖವನ್ನು ನೋಡಿ…,
“ಪಿಯು ಕಾಲೇಜ್!” ಎಂದು ಹೇಳಿ ನಿಲ್ಲಿಸಿದರು.
ಯಾಕೆ ನಿಲ್ಲಿಸಿದಿರಿ ಅನ್ನುವಂತೆ ನೋಡಿದೆ. ಒಂದು ನಿಟ್ಟುಸಿರಿನ ನಂತರ ಮುಂದುವರೆಸಿದರು…,
“ನನ್ನ ಮಗಳೂ ಅದೇ ಕಾಲೇಜ್! ಆಕಸ್ಮಿಕವಾಗಿ ತೀರಿಕೊಂಡಳು!” ಎಂದರು.
“ಹೇಗೆ?”
“ನಾಲಕ್ಕನೇ ಮಹಡಿಯ ಮೇಲಿನಿಂದ ಬಿದ್ದಳು!” ಎಂದರು.
“ಕಾಲೇಜಿನಲ್ಲೇ?” ಎಂದೆ.
“ಹೌದು! ಕ್ಲಾಸಿನಲ್ಲಿ ಗಲಾಟೆ ಮಾಡುತ್ತಿದ್ದಾಳೆಂದು ಹೊರಗೆ ಕಳಿಸಿದೆ! ಅಪಮಾನ ಅನ್ನಿಸಿರಬೇಕು!” ಎಂದರು.
“ಓಹೋ…, ಆತ್ಮಹತ್ಯೆ!” ಎಂದೆ.
“ಅಲ್ಲ ಕೊಲೆ!” ಎಂದರು.
“ಯಾವಾಗ?” ಎಂದೆ.
“ಹನ್ನೆರಡು ವರ್ಷವಾಯಿತು!” ಎಂದರು.
*
ಇಬ್ಬರದ್ದೂ ನಾಟಕವೇ! ಇಬ್ಬರಿಗೂ ಪರಸ್ಪರ ಅರಿವಿದೆ! ಇಬ್ಬರಿಗೂ ಸ್ವಸಾಮರ್ಥ್ಯದಮೇಲೆ ಅಷ್ಟು ನಂಬಿಕೆ!
ಕಾವೇರಿ ನದಿಯೇ ಇರಬೇಕು! ಜುಳುಜುಳು ಹರಿಯುತ್ತಿದೆ. ನಾನು ನದಿಗಿಳಿದು ಮನದಣಿಯೆ ಈಜಾಡಿದೆ. ಕೊನೆಗೆ ದಡಕ್ಕೆ ಬಂದು ಮೈಕೈಯೆಲ್ಲಾ ಒರೆಸಿ ಲುಂಗಿಯೊಂದನ್ನು ಉಟ್ಟುಕೊಂಡು ತಲೆ ಒರೆಸುತ್ತಾ ನಿಂತಿದ್ದಾಗ ಅವರು ನದಿಯಕಡೆ ಬಂದರು. ಮುಗುಳುನಕ್ಕು ನದಿಗಿಳಿದರು.
ನಾನು ಮಲಗಲು ತೀರ್ಮಾನಿಸಿದ ಜಾಗಕ್ಕೆ ಬಂದೆ. ಬೇಸಿಗೆಯಾದ್ದರಿಂದ ಟೆಂಟ್ ಅಂತದ್ದೇನೂ ಇಲ್ಲ.
ಪಂಚೆಯೊಂದನ್ನು ಹಾಸಿ ಇದ್ದ ಪುಟ್ಟ ಬ್ಯಾಗ್‌ಅನ್ನೇ ದಿಂಬನ್ನಾಗಿ ಇಟ್ಟು ಆತನಿಗಾಗಿ ಕಾಯತೊಡಗಿದೆ!
ಯಾಕೋ ನನ್ನರಿವಿಲ್ಲದೆ ಮೃತ್ಯುಂಜಯ ಮಂತ್ರವನ್ನು ಪಠಿಸುತ್ತಿದ್ದೆ.
*
ಜೀವನ ಒಂದು ಯಾತ್ರೆ! ಸಮಯ ಹಿಂದಕ್ಕೆ ಹೋಗುತ್ತಲೇ ಇರುತ್ತದೆ! ಪ್ರತಿ ಕ್ಷಣ ಇತಿಹಾಸ!
ಪ್ರಯಾಣ ಪ್ರಾರಂಭಿಸಿ ದಿನಗಳೆಷ್ಟಾಯಿತೋ ತಿಳಿಯದು.
ಕನ್ಯಾಕುಮಾರಿಯನ್ನು ತಲುಪಿದ್ದೆ- ಒಬ್ಬನೇ!
ಕನ್ಯಾಕುಮಾರಿ!
ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಶುದ್ಧಿಯಾಗಿ…, ಕುಳಿತೆ!
ಉದಿಸುವ ಸೂರ್ಯನನ್ನು ಅಸ್ತಮಿಸುವವರೆಗೆ ನೋಡಬೇಕೆಂಬ ಹಠ!
ಗಾಯತ್ರೀಮಂತ್ರ ಮನದಲ್ಲಿ ಉರು ಹೊಡೆಯುತ್ತಲೇ ಇತ್ತು!
ವಿಶಾಲವಾಗಿ ಹರಡಿರುವ ಹಿಂದೂ ಮಹಾಸಾಗರ! ಮೇಲೆ ನೀಲಿ ಆಕಾಶ! ಪ್ರಖರವಾಗಿ ಹೊಳೆಯುತ್ತಿರುವ ಸೂರ್ಯ! ನೀರಿನಲ್ಲಿ ಕಣ್ಣು ಕೋರೈಸುವ ಪ್ರತಿಫಲನ! ಶೆಕೆ! ಬೆವರು! ಬಿಳಿಯ ಚರ್ಮ ಕಪ್ಪಾಗಿ ಬದಲಾಗುವುದು ಅನುಭವಕ್ಕೆ ಬರುವಷ್ಟು ವೇಗದಲ್ಲಿ- ಬದಲಾತ್ತಿತ್ತು! ಏಳಲಿಲ್ಲ! ಸೂರ್ಯಾಸ್ತಮುಗಿದು- ಬೆಳಕು ಪೂರ್ಣವಾಗಿ ಮರೆಯಾದಮೇಲೆ ಎದ್ದೆ!
*
ಮುಂದೆ?
ಯಾಕೋ ಮತ್ತೊಮ್ಮೆ ಕೊಲ್ಲೂರಿಗೆ ಹೋಗಿ ಮೂಕಾಂಬಿಕೆಯನ್ನು ನೋಡಬೇಕೆನ್ನಿಸಿತು!
ಹೊರಟೆ!
*
ಮನುಷ್ಯನ ಮನಸ್ಸು ಎಷ್ಟು ವಿಚಿತ್ರ- ಜೀವನವೂ!
ಹುಟ್ಟುವುದು ಹೇಗೆ- ಎಲ್ಲಿ? ಸಾಯುವುದು ಹೇಗೆ- ಎಲ್ಲಿ? ಇದೆರಡರ ನಡುವಿನ ಜೀವನ ಹೇಗೆ- ಎಲ್ಲಿ?
ಬ್ರಹ್ಮಾಂಡದ ವಿಸ್ತಾರದಲ್ಲಿ ಭೂಮಿಯೂ…, ಭೂಮಿಯ ವಿಸ್ತಾರದಲ್ಲಿ ಮನುಷ್ಯನೂ…
ಎಷ್ಟರ ಜೀವನ!
ಆದರೂ… ಯಾಕೆ ಹೀಗೆ?
ನಾನು, ನನ್ನದು ಅನ್ನುವುದು ನಾನೇ, ನನ್ನದೇ… ಅನ್ನುವಲ್ಲಿಗೆ!
ಬಹುದೂರ ಕ್ರಮಿಸಬೇಕಾಗಿದೆ! ನೆನಪುದಿಸಿದಾಗಿನಿಂದ ಇಂದಿನವರೆಗಿನ ಜೀವನವನ್ನೊಮ್ಮೆ ಮೆಲುಕು ಹಾಕಿದರೆ…,
ಎಷ್ಟೆಷ್ಟು ಅನುಭವಗಳು!
*
ನನಗಾಗ ಹನ್ನೆರಡು ವರ್ಷ ವಯಸ್ಸು! ನನ್ನರಿವಿಲ್ಲದೆಯೋ- ಒಳಗಿನಿಂದ ಒದ್ದುಕೊಂಡು ಬಂದ ಉತ್ತೇಜನವೋ…, ಒಂದು ಘಟನೆ ನಡೆದಿತ್ತು!
ನನ್ನ ಹುಟ್ಟಿನ ರಹಸ್ಯ ನನಗೆ ತಿಳಿಯದು! ಹೆತ್ತವರು ಸತ್ತರೋ…, ಬಿಟ್ಟು ಹೋದರೋ…, ನನ್ನನ್ನು ಇವರು ಕದ್ದರೋ…!
ನೆನಪುದಿಸಿದಾಗ ವ್ಯಕ್ತಿಯೊಬ್ಬ ನನ್ನನ್ನು ಭಿಕ್ಷೆಗೆ ಕಳಿಸುತ್ತಿದ್ದ! ನನ್ನಂತೆ ಸುಮಾರು ಮಕ್ಕಳಿದ್ದರು!
ಹೆಣ್ಣು ಮಕ್ಕಳು ಭಿಕ್ಷೆಗೆ ಹೋಗಬೇಕಿರಲಿಲ್ಲ!!
ಭಿಕ್ಷೆ ಕಡಿಮೆಯಾಗಿದ್ದ ದಿನ ನರಕ!
ಹೆಚ್ಚಿದ್ದರೆ…?
ಅಂಥಾ ವ್ಯತ್ಯಾಸವೇನೂ ಇಲ್ಲ!
ಮನಸ್ಸು ರೊಚ್ಚಿಗೇಳುತ್ತಲೇ ಇತ್ತು! ಆದರೆ ತಪ್ಪಿಸಿಕೊಳ್ಳಲು ಹೆದರಿಕೆ!
ತಪ್ಪಿಸಿಕೊಳ್ಳಲು ಶ್ರಮಿಸಿದರೆ ಕೈಕಾಲು ಮುರಿಯುತ್ತಾರೆ!
ಕಣ್ಣಮುಂದೆಯೇ ಹಲವರು ಮುರಿಸಿಕೊಂಡಿದ್ದಾರೆ ಕೂಡ!
ಆದರೂ…!
ಆ ಯೋಚನೆ ಮನದಲ್ಲಿ ತುಂಬಿ ಗಟ್ಟಿಗೊಂಡು…,
ಕೊನೆಗೊಂದು ದಿನ ನಡೆದಿತ್ತು ಆ ಘಟನೆ!
ಟ್ರೈನ್ ಒಂದರಲ್ಲಿ ಭಿಕ್ಷೆ ಬೇಡುತ್ತಿದ್ದೆ. ನಿರ್ದಿಷ್ಟ ಪ್ರದೇಶ ತಲುಪಿದಾಗ ನಾನು ಇಳಿಯಬೇಕು! ಅಂದು ಇಳಿಯಲಿಲ್ಲ!
ಅವರ ಊಹೆಗೂ ನಿಲುಕದ್ದು… ಅಥವಾ…, ತುಂಬಾ ಹುಡುಕಿರುತ್ತಾರೆ!
ಗೋಕರ್ಣ ತಲುಪಿದ್ದೆ!
*
ಹೋಟೆಲ್ ಒಂದರಮುಂದೆ ಆಸೆಯ ಕಂಗಳಿಂದ ನಿಂತೆ! ಎರಡುಮೂರು ಸಾರಿ ಓಡಿಸಿದರು! ನಂತರ ಏನನ್ನಿಸಿತೋ ಏನೋ…, ಕೆಲಸದವರನ್ನು ಕರೆದು ಒಂದು ಪಾರ್ಸೆಲ್ ತಂದು ಕೈಗಿತ್ತರು! ಎರಡುಮೂರು ದಿನ ನಡೆಯಿತು! ನಂತರ ನಾನೂ ಆ ಹೋಟೆಲಿನಲ್ಲಿ ಕೆಲಸಗಾರನಾದೆ!
ಸುಮಾರು ಮೂರುವರ್ಷ ಅಲ್ಲಿದ್ದೆ. ಅಲ್ಪಸ್ವಲ್ಪ ಅಕ್ಷರಾಭ್ಯಾಸವೂ ಆಯಿತು… ಹೋಟೆಲ್ ಮುಚ್ಚಲ್ಪಟ್ಟಿದ್ದರಿಂದ ಒಡೆಯನಿಗೆ ಗೌರವವನ್ನರ್ಪಿಸಿ ಹೊಸ ಜೀವನಕ್ಕೆ ದಾರಿ ಹುಡುಕಿದೆ.
ಹಳೆಯ- ತಪ್ಪಿಸಿಕೊಂಡುಬಂದ 'ಒಡೆಯ'ನನ್ನೊಮ್ಮೆ ಭೇಟಿ ಮಾಡಲೇ ಅನ್ನಿಸಿತು! ಸಮಯವಾಗಿಲ್ಲ!
ಅಲ್ಲಿಂದ ಕೊಲ್ಲೂರಿಗೆ ಹೋದೆ! ಮೂಕಾಂಬಿಕೆಯ ದರ್ಶನ ಹೊಸ ಜೀವನೋತ್ಸಾಹವನ್ನು ಮೂಡಿಸಿತು!
ಕೊಡಚಾದ್ರಿ ಬೆಟ್ಟದಮೇಲೆ ಶಂಕರರ ಭೇಟಿ!
ಸೌಪರ್ಣಿಕಾಮೃತದ ಪಾನ!
ಕೊನೆಗೆ ಉಡುಪಿಯನ್ನು ಸೇರಿದೆ!
*
ಹಿರಿಯರೊಬ್ಬರ ಪರಿಚಾರಕನಾದೆ! ಅವರೊಂದಿಗೆ ಎಷ್ಟೆಷ್ಟು ಹಿರಿಯರ ಭೇಟಿ! ಅರಿವು! ಪುರಾಣಗಳ ಪರಿಚಯ! ಯಾವುದೋ ಜನ್ಮದಲ್ಲಿ ನಾನೇನೋ ಭಾರಿ ಪುಣ್ಯ ಮಾಡಿರಬೇಕು!
ಎಷ್ಟು ಚಂದ- ಪಾಪ ಪುಣ್ಯಗಳ ಲೆಕ್ಕಾಚಾರ!
ಅನಾಥ ಅನ್ನುವುದರಲ್ಲೇ…, ನಿರಾಶಾವಾದಿಯಾಗಿದ್ದರೆ…, ಅದೆಷ್ಟು ಪಾಪ ಮಾಡಿದ್ದೆನೋ ಅಂದುಕೊಳ್ಳಬೇಕಿತ್ತು!
ನನಗೆ ಹಾಗೆ ಅನ್ನಿಸಲೇ ಇಲ್ಲ!
ಒಂದು ಹಂತದವರೆಗೆ ನರಕವೇ…! ನಂತರ ನಮ್ಮ ಜೀವನ ನಮ್ಮ ಕೈಗೆ ಬಂದಮೇಲೆ…. ನಮ್ಮ ಜೀವನಕ್ಕೆ ನಾವೇ ಪರಿಪೂರ್ಣ ಹೊಣೆಗಾರರು!
ಕೆಲವೊಮ್ಮೆ- ಒಬ್ಬನೇ ಸಾಧಿಸುವುದನ್ನು ಒಟ್ಟಾಗಿ ಸಾಧಿಸುವುದು ಕಷ್ಟ!
ಒಬ್ಬೊಬ್ಬರಿಗೆ ಒಂದೊಂದು ಮೈಲುಗಲ್ಲು- ಸಾಧನೆ!
ಪ್ರಪಂಚದ ಮುಂದೆ ತಾನೆಷ್ಟು ದೊಡ್ಡವನೆಂದು ತೋರಿಸುವುದು….
ಹಣ ಮಾಡುವುದು…,
ಹೆಸರು ಮಾಡುವುದು…!
ನನಗೋ…?
ಮನಸ್ಸನ್ನು ನನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವುದೇ ಸಾಧನೆ!
*
ಮುಂಜಾನೆ- ಬ್ರಾಹ್ಮೀಮುಹೂರ್ತದಲ್ಲಿಯೇ ಏಳುತ್ತಿದ್ದೆ.
ಯಾರೋ ಪುಣ್ಯಾತ್ಮರು ಹೇಳಿಕೊಟ್ಟ ಶ್ಲೋಕಗಳನ್ನು ಪಠಿಸುತ್ತಿದ್ದೆ.
ಅಲ್ಲಿ- ಇಲ್ಲಿಂದ ಹುಡುಕಿತಂದ ಪುಸ್ತಕಗಳನ್ನು ಓದುತ್ತಿದ್ದೆ. ಇತಿಹಾಸ- ಪುರಾಣ- ಅರ್ಥಶಾಸ್ತ್ರ- ಮನಃಶ್ಶಾಸ್ತ್ರ ಹೆಚ್ಚು ಆಸಕ್ತಿ ಹುಟ್ಟಿಸುತ್ತಿತ್ತು!
ದಿನಗಳು ಉಪಯುಕ್ತಕರವಾಗಿ ಮುಗಿಯುತ್ತಿತ್ತು…!
ಹೀಗಿರುವಾಗ… ಹುಡುಗಿಯೊಬ್ಬಳನ್ನು ನನಗೆ ಪರಿಚಯಮಾಡಿದರು. ಆಗ ನನಗೆ ಇಪ್ಪತ್ತ ನಾಲ್ಕು ವರ್ಷ ವಯಸ್ಸು! ಅವಳಿಗೆ ಹದಿನಾರೋ ಹದಿನೇಳೋ!
*
ಗಂಡು ಹೆಣ್ಣಿನ ಸಂಬಂಧದಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ! ಕಂಡು ಕೇಳಿದಲ್ಲೆಲ್ಲಾ ಅಸಹ್ಯವೇ! ಪ್ರಪಂಚದ ಅತಿದೊಡ್ಡ ಸಮಸ್ಯೆಗಳ ಮೂಲ!
ಹಾಗೊಂದು ಜೀವನ ನನಗೆ ಅಂಟಬಾರದೆನ್ನುವುದೂ ನನ್ನ ಬದುಕಿನ ನಿಯಮ! ಮನಸ್ಸಿನ ನಿಯಂತ್ರಣ ಅಂದರೆ ಅದೂಕೂಡ! ಆಜನ್ಮ ಬ್ರಹ್ಮಚಾರಿಗಳಾಗಿದ್ದ ಶಂಕರರೂ ವಿವೇಕಾನಂದರೂ ನನಗೆ ಯಾವತ್ತಿಗೂ ಆಶ್ಚರ್ಯವೇ…!
ಈಗಲೂ ಅದೆಷ್ಟು ಮಹಾನುಭಾವರು ಮನಸ್ಸನ್ನು ತಮ್ಮ ಇಚ್ಛೆಗೆ ಅನುಗುಣವಾಗಿ ಹಿಡಿತದಲ್ಲಿಟ್ಟುಕೊಂಡಿದ್ದಾರೋ…!
“ಇವಳು ನನ್ನ ಮಗಳು!” ಎಂದರು ಆತ.
“ಹುಡುಗ ತುಂಬಾ ಚೆನ್ನಾಗಿ ಡ್ರೈವ್ ಮಡುತ್ತಾನೆ!” ಎಂದು ಹೇಳಿ -ನಾನು ಯಾರ ಮನೆಯಲ್ಲಿ ಪರಿಚಾರಕನಾಗಿದ್ದೆನೋ ಆ ಹಿರಿಯರು- ಆ ವ್ಯಕ್ತಿಗೆ ನನ್ನ ಪರಿಚಯ ಮಾಡಿಸಿದ್ದರು!
ಡ್ರೈವಿಂಗ್ ನನಗೆ ಜೀವನ ಮಾರ್ಗವಲ್ಲ! ಹವ್ಯಾಸ! ಕೆಲವರು ದೂರ ಯಾತ್ರೆಗೆ ನನ್ನನ್ನು ಕರೆದೊಯ್ಯುತ್ತಿದ್ದರು. ಸುತ್ತಾಟ ನನ್ನ ಪ್ರಿಯ ವಿಷಯ! ಉಳಿದ ಸಮಯದಲ್ಲಿ ಆ ಹಿರಿಯರಿಗೆ ಪುಸ್ತಕ ಓದಿ ಹೇಳುವುದು- ಹೊಸಹೊಸ ವಿಷಯಗಳನ್ನು ಚರ್ಚಿಸುವುದು- ಅವರು ಬಾಯಲ್ಲಿ ಹೇಳಿದ್ದನ್ನು ಬರೆಯುವುದು- ಅವರೊಂದಿಗೆ ಊರು ಸುತ್ತುವುದು- ತೀರಾ ಅಪರೂಪಕ್ಕೆ ಆಹಾರವನ್ನು ತಯಾರಿಸಿ ಕೊಡುವುದು- ಮಾಡುತ್ತಿದ್ದೆ.
ಒಂದು ರೀತಿಯಲ್ಲಿ ಹಿಂದಿನ ಕಾಲದ ಗುರುಕುಲದ ನೆನಪು ಬರುತ್ತಿತ್ತು!
ಕೆಲವೊಮ್ಮೆ ಆ ಹಿರಿಯರ ಪರಿಚಯದವರು, ಅವರ ಅನುಮತಿಯನ್ನು ಪಡೆದು, ನನ್ನನ್ನು ಡ್ರೈವರಾಗಿ ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು!
ಹಾಗೆ- ನನ್ನ ಜೀವನಕ್ಕೆ ಬೇಕಾದ ಸಂಪಾದನೆಯಾಗುವುದರೊಂದಿಗೆ ದೇಶ ಸುತ್ತುವ ಇಷ್ಟವೂ ನೆರವೇರುತ್ತಿತ್ತು!
ಈ ಉಡುಪಿ ಅನ್ನುವುದು ಎಷ್ಟು ಸುಂದರವೋ… ಅದಕ್ಕೆ ಮತ್ತೊಂದು ಮುಖವೂ ಇದೆ!
ಆ ಮುಖದ ಪರಿಚಯ- ಹಿರಿಯರು ಪರಿಚಯಿಸಿದ ಈ ವ್ಯಕ್ತಿಯಿಂದಾಯಿತು- ಆತನ ಮಗಳ ಮೂಲಕ!
“ಇನ್ನುಮುಂದೆ ನನ್ನ ಮಗಳನ್ನು ನೀನೇ ಕರೆದುಕೊಂಡು ಹೋಗಬೇಕು- ಜೋಪಾನ!” ಎಂದರು ಆ ವ್ಯಕ್ತಿ. ನಾನು ಹಿರಯರ ಮುಖವನ್ನು ನೋಡಿದೆ. ಒಪ್ಪಿಕೋ ಅನ್ನುವಂತೆ ಕಣ್ಣುಮಿಟುಕಿಸಿದರು.
ಹನ್ನೆರಡನೆಯ ವಯಸ್ಸಿನಲ್ಲಿ ಯಾವ ಮಾಫಿಯಾದಿಂದ ತಪ್ಪಿಸಿಕೊಂಡಿದ್ದೆನೋ ಇಪ್ಪತ್ತನಾಲ್ಕನೇಯ ವಯಸ್ಸಿನಲ್ಲಿ ಅದೇ ಮಾಫಿಯಾದೊಳಗೆ ಮತ್ತೊಮ್ಮೆ ಪ್ರವೇಶಿಸಿದೆ!
*
ಮನಸ್ಸಿನ ಶಕ್ತಿಗೆ ಮಿತಿಯಿದೆಯೇ…?
ಇಚ್ಛಾಶಕ್ತಿ ಪ್ರಭಲವಾದಷ್ಟೂ…, ಬ್ರಹ್ಮಾಂಡದ ಶಕ್ತಿಯ ಅರಿವಾಗುತ್ತದೆ!
ಭೇಟಿಯಾಗಬೇಕು ಅಂದುಕೊಂಡಿದ್ದವ…,
ಆತ ನನ್ನನ್ನು ಗುರುತಿಸುವ ಯಾವ ಅವಕಾಶವೂ ಇರಲಿಲ್ಲ! ಹನ್ನೆರಡು ವರ್ಷದಲ್ಲಿ ಅಜಗಜಾಂತರ ಬದಲಾಗಿದ್ದೆ!
ಆದರೆ ಆತ…?
ಅದೇ ಆತ- ನನ್ನನ್ನು ಭಿಕ್ಷೆಗೆ ಕಳಿಸುತ್ತಿದ್ದವ! ಗಡ್ಡ- ಕೂದಲು- ಅರ್ಧ ಬೆಳ್ಳಗಾಗಿದೆ ಅನ್ನುವುದು ಬಿಟ್ಟರೆ… ಯಾವ ಬದಲಾವಣೆಯೂ ಆತನಲ್ಲಿಲ್ಲ!
ಅದೇ ಕ್ರೌರ್ಯ! ‘ತನ್ನ' ಹುಡುಗಿಯೊಂದಿಗಿರುವ 'ನನ್ನನ್ನು' ನೋಡಿ…, ಹುಬ್ಬು ಕುಣಿಸಿದ!
“ಅವರು ಕಳಿಸಿದ್ದು! ಅಪ್ಪನಿಗೆ ಬರಲಾಗಲಿಲ್ಲ- ಅದಕ್ಕೆ! ಇನ್ನುಮುಂದೆ ಅಪ್ಪನ ಬದಲು ಇವರೇ ಬರುತ್ತಾರೆ!” ಎಂದಳು.
ಈ…, ಅವರು ಯಾರು? ಆ ನನ್ನ ಹಿರಿಯರೇ…? ಯೋಚನೆಯಲ್ಲಿರುವಾಗ ಆತ…,
“ಅವಳೆಲ್ಲಿ?” ಎಂದು ಹುಡುಗಿಯನ್ನು ಕೇಳಿದ.
“ಅ…. ಅ…. ಅವಳು ಸತ್ತು ಹೋದಳು!” ಎಂದಳು.
ಆವೇಶದಿಂದ ಅವಳೆಡೆಗೆ ನುಗ್ಗಿದ ಆತ…! ನಾನು ಚಲಿಸಲಿಲ್ಲ! ಆತನ ಪೆಟ್ಟು ಅವಳ ಕೆನ್ನೆಗೆ ಬೀಳುವಷ್ಟರಲ್ಲಿ…,
“ದೊಡ್ಡಪ್ಪನೇ ಕೊಂದಿದ್ದು!” ಎಂದಳು.
ಗಕ್ಕನೆ ನಿಂತ.
“ಒಂದು ಕೋಟಿ…! ಅಂಥಾ ಹುಡುಗಿ…! ನಿನ್ನನ್ನು ನಂಬಿ!” ಎಂದು ಬುಸುಗುಡುತ್ತಾ ನಿಂತ.
“ಏ…, ಏನು ಮಾಡಲಿ? ನನ್ನೊಂದಿಗೆ ಬರಲು ಒಪ್ಪಿಕೊಂಡಿದ್ದಳು- ನಾನು ಹೇಗೋ ಒಪ್ಪಿಸಿದ್ದೆ! ಆದರೆ ಕೊನೆಯ ಕ್ಷಣದಲ್ಲಿ ಅವಳಿಗೆ ಗೊತ್ತಾಗಿ ವಿರೋಧಿಸಿದ್ದರಿಂದ ಅವಳಪ್ಪ ಕೊಂದುಬಿಟ್ಟರು!” ಎಂದಳು.
“ಅದೆಲ್ಲಾ ನನಗೆ ಬೇಕಾಗಿಲ್ಲ! ಅವಳಷ್ಟೇ ಸುಂದರಿಯಾದ ಬೇರೆ ಹೆಣ್ಣು ಬೇಕು- ಹೇಳಿದ ಸಮಯಕ್ಕೆ!” ಎಂದ.
ನಿಧಾನವಾಗಿ ಅಲ್ಲಿಂದ ಹೊರಡುವಾಗ…,
“ಓಯ್… ನೀನು… ನಂಬಬಹುದು ಅಂದಿದ್ದಾರಂತೆ… ಜೋಪಾನ!” ಎಂದ ನನಗೆ.
ಮು-ಗು-ಳು-ನ-ಕ್ಕು ಹೊರಡುವಾಗ ನನ್ನ ಮನದಲ್ಲಿ ಆ ಹಿರಿಯನೇ ತುಂಬಿಕೊಂಡಿದ್ದ!
ನನ್ನ ಅರಿವಿಲ್ಲದೆಯೇ ನನ್ನನ್ನು ತಮ್ಮ ಸಾಮ್ರಾಜ್ಯದ ಭಾಗವನ್ನಾಗಿ ಮಾಡುವ ಮಸಲತ್ತು!!
ಮತ್ತೊಮ್ಮೆ ತಿರುಗಿ ನೋಡಿದೆ- ಈತನನ್ನು ಕೊಲ್ಲಬೇಕು!
*
ಜಗತ್ತಿನ ಅರ್ಧದಷ್ಟು- ಸ್ವಾರ್ಥವೇ ತುಂಬಿದೆ! ಈ ಅರ್ಧಭಾಗವೇ ಕಾಣಲು ತೊಡಗಿದಮೇಲೆ ಒಳ್ಳೆಯದೆನ್ನುವುದು ಮರೀಚಿಕೆಯೇನೋ ಅನ್ನಿಸುವಂತಾಗುತ್ತದೆ! ಯಾರನ್ನು ನಂಬುವುದು ಯಾರನ್ನು ಬಿಡುವುದು…?
“ನನ್ನಮೇಲೆಯೇ ಕೈಮಾಡೋಕೆ ಬರ್ತಾನೆ! ಆದರೂ ತಗ್ಗಿಬಗ್ಗಿ ನಡೆಯಬೇಕು ಹೊರತು ಏನೂ ಮಾಡುವ ಹಾಗಿಲ್ಲ!” ಎಂದಳು ಹುಡುಗಿ!
“ನಿಮ್ಮ ತಂದೆಗೂ ಈತನಿಗೂ ನನ್ನನ್ನು ನಿಮಗೆ ಪರಿಚಯಿಸಿದ ಹಿರಿಯರಿಗೂ ಏನು ಸಂಬಂಧ?” ಎಂದು ಕೇಳಿದೆ.
ಅವಳಿಗೆ ಅದು ಕೇಳಿಸಲೇ ಇಲ್ಲವೆನ್ನುವಂತೆ…,
“ನನಗಿದು ಇಷ್ಟವಿಲ್ಲ! ಅಪ್ಪನಿಗೆ ಹೇಳಿದರೆ…, ಹಾಗೆಲ್ಲಾ ಇಷ್ಟವಿಲ್ಲ ಅನ್ನುವ ಹಾಗಿಲ್ಲ ಅನ್ನುತ್ತಾರೆ! ನಾನಾದರೂ ಏನು ಮಾಡಲಿ? ಹೆಣ್ಣುಹುಡುಗಿ!” ಎಂದಳು.
“ಸತ್ತ ಹುಡುಗಿ ಯಾರು?” ಎಂದು ಕೇಳಿದೆ.
“ನನ್ನ ಅಕ್ಕ! ದೊಡ್ಡಪ್ಪನ ಮಗಳು! ದೊಡ್ಡಪ್ಪ ಅಂದರೆ ಅಪ್ಪನ ದೊಡ್ಡಪ್ಪನ ಮಗ- ಪಿಯು ಕಾಲೇಜ್ ಒಂದರಲ್ಲಿ ಶಿಕ್ಷಕ!” ಎಂದು ಹೇಳಿ ನಿಲ್ಲಿಸಿ ನನ್ನ ಕಡೆ ತಿರುಗಿ…,
“ನನ್ನನ್ನು ಈ ಸಿಕ್ಕಿನಿಂದ ಬಿಡಿಸುತ್ತೀಯ…, ಪ್ಲೀಸ್!” ಎಂದಳು.
ನಾನು ಮಾತನಾಡಲಿಲ್ಲ. ನನ್ನ ತಲೆಯಲ್ಲಿ ಸಣ್ಣ ಯೋಜನೆಯೊಂದು ರೂಪುಗೊಳ್ಳುತ್ತಿತ್ತು!
ಹೆಣ್ಣು ಇಲ್ಲಿ ದಾಳ ಮಾತ್ರ!
*
ಪ್ರಪಂಚ ನಿಂತಿರುವುದೇ ಕೊಡು- ಕೊಳ್ಳು ಮೇಲೆ! ಅದು ಪ್ರೇಮದ ವಿಷಯವಾದರೂ ಸರಿ!
“ಅವಳನ್ನು ಅಷ್ಟು ಸುಲಭದಲ್ಲಿ ನಂಬಬೇಡ!” ಎಂದರು ಹಿರಿಯರು!
ನಿಮ್ಮನ್ನೂ ನಂಬುವುದಿಲ್ಲ ಅಂದಿತು ಮನ!
ಕತ್ತಲ ಪ್ರಪಂಚದ ನಿಯಮಗಳೇ ಹಾಗೆ! ಅಲ್ಲಿ ಏನೂ ನಡೆಯುತ್ತದೆ! ಅಲ್ಲಿನ ತಪ್ಪು ಒಪ್ಪುಗಳೇ ಬೇರೆ!!
ಅದನ್ನೇ ಬೆಳಕಿನಲ್ಲಿ ಮಾಡಿದರೆ ಕಾನೂನು!
ದುಡ್ಡು ಮತ್ತು ಹೆದರಿಕೆ ಹುಟ್ಟಿಸುವ ವ್ಯಕ್ತಿತ್ವವಿದ್ದರೆ ಈ ಪ್ರಪಂಚದಲ್ಲಿ ಏನುಬೇಕಿದ್ದರೂ ಸಾಧ್ಯ!
ಅದೆರಡೂ ನನಗಿದೆ- ಆದರೆ ನನಗದು ಬೇಡ!
ನನಗೆ ನೆಮ್ಮದಿ ಬೇಕು- ಹೇಗೆ?
ಭಗವಂತ ಹೇಳಿದ್ದಾನೆ…, ಕೆಲವೊಂದು ಕರ್ತವ್ಯಗಳನ್ನು ನೀನು ನೆರವೇರಿಸಲೇ ಬೇಕು! ಏಕೆಂದರೆ, ನಿನ್ನಿಂದ ಸಾಧ್ಯ ಅದಕ್ಕೆ- ಎಂದು!
“ಅವಳನ್ನೇ ಅವರಿಗೆ ಮಾರೋಣ ಅಂದುಕೊಂಡಿದ್ದೇನೆ!” ಎಂದೆ.
ಆಶ್ಚರ್ಯದಿಂದ ನನ್ನ ಮುಖವನ್ನು ನೋಡಿದರು.
“ಹೆಣ್ಣುಮಕ್ಕಳನ್ನು ಅರೇಂಜ್ ಮಾಡುವ ಅವಳ ಸ್ಥಾನವನ್ನು ನಾನು ತುಂಬುತ್ತೇನೆ!” ಎಂದೆ.
“ಅರ್ಥವಾಗಲಿಲ್ಲ!” ಎಂದರು.
“ಮತ್ತೊಮ್ಮೆ ಆತನನ್ನು ಭೇಟಿಯಾಗಬೇಕು- ಇದೇ ಹುಡುಗಿಯೊಂದಿಗೆ! ದೊಡ್ಡಪ್ಪನ ಮಗಳನ್ನು ಮಾರಬಹುದಾದರೆ...” ಎಂದು ನಿಲ್ಲಿಸಿ ಆತನ ಮುಖವನ್ನು ನೋಡಿ…,
“ಅರೇಂಜ್ ಮಾಡಿ!” ಎಂದೆ.
ಅರ್ಥವಾದಂತೆ ನಕ್ಕ!
*
“ಅಷ್ಟುಬೇಗ ಎಲ್ಲಿ ಸಿಕ್ಕಳು?” ಎಂದು ಕೇಳಿದೆ.
ಪೈಶಾಚಿಕವಾಗಿ ನಕ್ಕಳು!
“ಏನಂದುಕೊಂಡಿದ್ದೀಯ? ಆಗಾಗ ಇದರಿಂದ ಹೊರಬರಬೇಕು ಅನ್ನಿಸಿದರೂ ಹೊರಬಂದು ಏನು ಮಾಡಲಿ ಅನ್ನುವ ಚಿಂತೆ ಬಂದಾಗ...” ಎಂದು ನಿಲ್ಲಿಸಿ ನನ್ನ ಮುಖವನ್ನು ನೋಡಿ…,
“ನೀನೂ ಇದರಲ್ಲಿ ಒಂದು ಭಾಗವಾದೆಯಂತೆ?” ಎಂದಳು.
ಹೇಗಾದರೂ ಈ ಸಿಕ್ಕಿನಿಂದ ಬಿಡಿಸು ಅಂದವಳು ಇವಳೇನ?
ಎಷ್ಟು ಬೇಗ ಮತ್ತೊಬ್ಬಳು ಮುಗ್ಧ ಹುಡುಗಿಯ ಬ್ರೈನ್‌ವಾಷ್ ಮಾಡಿದ್ದಾಳೆ!
ಇವಳಿಗಾದರೂ ಏನು ಗೊತ್ತು…, ಇವಳೂ ಆ ಹೆಣ್ಣು ಮಕ್ಕಳಂತೆ ಒಬ್ಬಳಾದಳೆಂದು?!
“ಅಪ್ಪ ನಿನ್ನನ್ನು ಕರೆದುಕೊಂಡು ಪುನಃ ಹೋಗಲು ಹೇಳಿದರು! ಆ ಹುಡುಗಿಯನ್ನು ಕರೆತರಬೇಕೆ?” ಎಂದಳು.
“ಈಸಾರಿ ಬೇಡ!” ಎಂದೆ- ಸಂಕ್ಷಿಪ್ತವಾಗಿ.
*
“ಮುದ್ಕ ಏನೋ ಹೇಳ್ತಿದ್ದ? ಇವಳ ಸ್ಥಾನಕ್ಕೆ ನೀನು ಬರ್ತೀಯಂತೆ?” ಎಂದ ಆತ- ಅವಳ ಮುಂದೆಯೇ!
ಹುಡುಗಿ ಆಶ್ಚರ್ಯದಿಂದ ನನ್ನ ಮುಖವನ್ನು ನೋಡಿದಳು.
ಮುಗುಳುನಕ್ಕು…, ಅವಳನ್ನು ಕಡೆಗಣಿಸಿ…, ಆತನನ್ನು ಕೇಳಿದೆ…,
“ನಿನಗೆ ರುದ್ರ ಅನ್ನುವ ಹೆಸರು ನೆನಪಿದೆಯೇ…?”
ಸಂಶಯದಿಂದ ನೋಡಿದ. ನೆನಪಾಗಲಿಲ್ಲ ಅನ್ನಿಸಿತು.
“ಹತ್ತು ಹನ್ನೆರಡು ವರ್ಷ ಮುಂಚೆ ನಿನ್ನ ಕೈಯಿಂದ ತಪ್ಪಿಸಿಕೊಂಡು ಹೋದ ಹುಡುಗ- ರುದ್ರ!” ಎಂದೆ.
ಅದೆಷ್ಟು ಮಕ್ಕಳ ಜೀವನವನ್ನು ಹಾಳುಮಾಡಿದ್ದಾನೋ…., ಅದೆಷ್ಟುಜನ ತಪ್ಪಿಸಿಕೊಂಡು ಹೋಗಿದ್ದಾರೋ…! ಆದರೂ ನಾನು ನೆನಪಾಗುತ್ತಿದ್ದೆನೋ ಏನೋ…, ಮುಂದಕ್ಕೆ ನುಗ್ಗಿ ಆತನ ಕಿವಿಗೆ ಅಪ್ಪಳಿಸಿದೆ!
ತೂರಾಡಿ ಕೆಳಕ್ಕೆ ಬಿದ್ದ.
ಮೂಗು ಬಾಯಿಯನ್ನು ಅದುಮಿ ಹಿಡಿದೆ. ಸ್ವಲ್ಪ ಸಮಯ ಕೈಕಾಲು ಬಡಿದು ನಿಶ್ಚಲನಾದ!
ಕಣ್ಣರಳಿಸಿ ನೋಡುತ್ತಿದ್ದಳು ಹುಡುಗಿ!
“ನೀನಿಲ್ಲೇ ನಿಂತಿರು… ಐದು ನಿಮಿಷದಲ್ಲಿ ಬರುತ್ತೇನೆ!” ಎಂದು ಹೇಳಿ ಹೊರಟೆ.
ಐದು ನಿಮಿಷವಲ್ಲ- ಎಂಟು ವರ್ಷವಾದರೂ ತಿರುಗಿ ನೋಡಲಿಲ್ಲ! ಮಾಯವಾದೆ!
ಅವಳು- ಅವಳಪ್ಪ- ಅವಳ ದೊಡ್ಡಪ್ಪ ಮತ್ತು ಆ ಹಿರಿಯನ ವಿಷಯವನ್ನು ಮಾಫಿಯಾ ನೋಡಿಕೊಳ್ಳುತ್ತದೆ!
*
ತಿರುವನಂತಪುರ, ಮಧುರೈ, ತಿರುಪತಿ, ಕಾಶಿ…!
ಎಂಟು ವರ್ಷಗಳು!
ಅದೆಷ್ಟು ಅನುಭವಗಳು!
ಕೊನೆಗೆ ಮೈಸೂರಿಗೆ ಬಂದೆ!
ಟ್ರಾವಲ್ ಏಜನ್ಸಿಯೊಂದರಲ್ಲಿ ಡ್ರೈವರ್! ನೈಟ್ ಬಸ್! ಮೈಸೂರಿನಿಂದ ಉಡುಪಿ!
ಮತ್ತೆ ನಾಲಕ್ಕು ವರ್ಷಗಳು!
ಜೀವನ ನಾವು ಅಂದುಕೊಂಡಂತೆಯೇ ನಡೆಯಬೇಕೆಂದಿಲ್ಲ! ಕೆಲವೊಂದು ಊಹೆಗಳು ಊಹೆಗಳಾಗಿಯೇ ಉಳಿದುಬಿಡುತ್ತದೆ! ನಾನಂದುಕೊಂಡಂತೆ ಆ ಹಿರಿಯನಿಗೋ ಆ ಹುಡುಗಿಗೋ ಅವಳಪ್ಪನಿಗೋ ದೊಡ್ಡಪ್ಪನಿಗೋ ತೊಂದರೆಯೇನೂ ಆಗಿರಲಿಲ್ಲ! ಯಾಕೆಂದರೆ…, ಅವರೆಲ್ಲರ ನಾಯಕ- ಅವಳ ದೊಡ್ಡಪ್ಪನೇ ಆಗಿದ್ದ- ಆ ಹಿರಿಯನ ಮಗ!
ಅಂದೇ ಗೊತ್ತಿದ್ದಿದ್ದರೆ ಅಂದೇ ಎಲ್ಲರನ್ನೂ ಒಟ್ಟಾಗಿ ಇಲ್ಲವಾಗಿಸಬಹುದಿತ್ತು!
ಹಿರಿಯ ವೃದ್ಧಾಪ್ಯದಿಂದ ತೀರಿಕೊಂಡಿದ್ದ- ಅಷ್ಟೆ!
ಯಾವಾಗ ತನ್ನನ್ನು ಯಾರಿಗೋ ಉಡುಗೋರೆ ನೀಡಲು ಶ್ರಮಿಸುತ್ತಿರುವುದು ತನ್ನ ಅಪ್ಪನೇ ಅನ್ನುವ ಅರಿವು ಮಗಳಿಗೆ ಉಂಟಾಯಿತೋ…, ತಂದೆಯನ್ನು ವಿರೋಧಿಸಿದಳೋ…, ಆತ ಅವಳನ್ನು ಕಾಲೇಜಿನ ನಾಲಕ್ಕನೇ ಮಾಳಿಗೆಯಿಂದ ಕೆಳಕ್ಕೆ ಹಾಕಿದ್ದ!
ವಿಷಯ ಅದಲ್ಲ!
ಈ ನಾಲಕ್ಕು ವರ್ಷದ ನನ್ನ ಮೈಸೂರು ಉಡುಪಿ ಓಡಾಟದಲ್ಲಿ ಆತನೂ ಆತನ ತಮ್ಮನೂ ತಮ್ಮನ ಮಗಳೂ ನನ್ನನ್ನು ಗಮನಿಸಿದ್ದಾರೆ!
ನನ್ನನ್ನು ಅವರು ಗುರುತಿಸಿದರು ಅನ್ನುವ ಅರಿವು… ನನ್ನನ್ನು ಯಾತ್ರೆಯೊಂದಕ್ಕೆ ಪ್ರೇರೇಪಿಸಿತು!
ಆತನನ್ನೂ!
*
ಮೊದಲು ಕೊಡಚಾದ್ರಿ! ನಂತರ ಸೌಪರ್ಣಿಕ! ಕೊನೆಗೆ ಕೊಲ್ಲೂರು!
ನನ್ನಮ್ಮನ ಸನ್ನಿಧಿ!
ಇಲ್ಲಿಂದ ಎಲ್ಲಿಗೂ ಇಲ್ಲ!
ನನ್ನೊಬ್ಬನ ಬದುಕು ನೋಡಿಕೊಳ್ಳುವುದು ಅಷ್ಟು ಕಷ್ಟವೇ?
Comments
Post a Comment