ಹೆಣ್ಣೇ…, ಕೇಳು!
೧
ಹೆಣ್ಣೇ….,
ಗೊತ್ತೇನು?
ಆಗ ನನಗೆ ವಯಸ್ಸು ಇಪ್ಪತ್ತೋ ಇಪ್ಪತ್ತ ಎರಡೋ ಇರಬಹುದು!
ಅಫಿಶಿಯಲ್ ಆಗಿ- ಓದು ಮುಗಿಸಿ ಕೆಲಸಕ್ಕೆ ಸೇರಬೇಕಾದ ವಯಸ್ಸು!
ನಾನೊಂದು ಗುರಿ ನಿಶ್ಚಯಿಸಿ ಅದರ ಹಿಂದೆ ಬಿದ್ದ ಸಮಯ!
ಗುರಿ ಯಾರಿಗೆ ಬೇಕು…,
“ಎಲ್ಲಿ ಕೆಲಸ? ಎಷ್ಟಿದೆ ಸಂಪಾದನೆ?” ಎಂದರು ಹಿರಿಯರೊಬ್ಬರು!
“ಸಂಪಾದನೆಗೇನು? ಹೇಗೆ ಬೇಕಿದ್ದರೂ ಸಂಪಾದಿಸಬಹುದು! ಗುರಿ ಸಾಧಿಸಬೇಕೆಂದರೆ ಕಷ್ಟ!” ಎಂದೆ.
“ಹಾಗನ್ನಲಾಗುವುದಿಲ್ಲ! ಗುರಿ ಸಾಧಿಸುವುದೇನೋ ಬೇಕು! ಹಾಗೆಂದು ಹೊಟ್ಟೆಪಾಡು?” ಎಂದರು.
“ನನಗಾಗಿ ಒಬ್ಬರು ಪ್ರತ್ಯೇಕವಾಗಿ ಕಷ್ಟಪಡುವ ಅವಸ್ಥೆ ತರುವುದಿಲ್ಲ ಅಷ್ಟೆ ಹೊರತು- ಸಂಪಾದನೆ ನಗಣ್ಯ!” ಎಂದೆ.
ಸ್ವಲ್ಪ ಸಮಯ ಯೋಚಿಸಿ ಅವರೆಂದರು…,
“ಹೇಗೆಬೇಕಿದ್ದರೂ ಸಂಪಾದಿಸಬಹುದು ಎಂದೆ…! ಹಾಗಾಗುವುದಿಲ್ಲ! ಸಂಪಾದನೆಗೂ ಅದರದೇ ಆದ ಘನತೆ ಇರಬೇಕು!”
“ಅದು…, ಗುರಿ ಸೇರದಿದ್ದರೆ ಹೊರತು- ನನ್ನ ಸಂಪಾದನೆಯೇ ಗುರಿಗಾಗಿ!”
ಗೊಂದಲಗೊಂಡರು!
“ಏನು ನಿನ್ನ ಗುರಿ?”
“ನನ್ನದೇ ಆದ ಪ್ರೇಮ ಪ್ರಪಂಚ!”
ಹದಿನೈದು ಹದಿನಾರು ವರ್ಷವಾದರೂ…., ಆ ನನ್ನ ಪ್ರೇಮ ಪ್ರಪಂಚದೆಡೆಗಿನ ಪ್ರಯಾಣದಲ್ಲಿ ನೂರಕ್ಕೆ ಹತ್ತು ಭಾಗವೂ ಕ್ರಮಿಸಲಾಗಿಲ್ಲ! ಕಾರಣ…,
ಹೆಣ್ಣೇ…, ನೀನು- ನಿನ್ನಲ್ಲಿ ಕೇಂದ್ರೀಕರಿಸಿದ ನನ್ನ ಪ್ರೇಮ!
೨
ಹೆಣ್ಣೇ…!
ಅದೇನೋ…, ಭಾರತವೆಂದರೆ ಒಂದು ಮಿಡಿತ!
ಇಸ್ಲಾಂಮತ ಭಾರತಕ್ಕೆ ಹೊರಗಿನಿಂದ ಬಂತು! ಕ್ರೈಸ್ತಮತವೂ ಹೊರಗಿನಿಂದ ಬಂತು! ಅದಕ್ಕೆ ಸಾಕ್ಷಿ- ಅದೆರಡೂ ಈಗಲೂ ಅದರ ಮೂಲ ಸ್ಥಾನಗಳಲ್ಲಿ ಪ್ರಜ್ವಲಿಸುತ್ತಿದೆ!
ಆದರೆ ಭಾರತ- ಸನಾತನ "ಧರ್ಮ" ಮೂಲವಾದದ್ದು- ಅದು ಮತವಲ್ಲ-ಸಂಸ್ಕಾರ!
ಭಾರತೀಯ- ಯಾವ ಒಂದು ಪುಸ್ತಕವನ್ನು ಅವಲಂಬಿಸಿದವನಲ್ಲ! ಯಾವೊಬ್ಬ ವ್ಯಕ್ತಿಯನ್ನು ಅವಲಂಬಿಸಿದವನಲ್ಲ!
ಹಾಗಿದ್ದರೆ ಭಾರತೀಯರನ್ನು ಯಾಕೆ "ಹಿಂದು"ಗಳೆಂದು ಕರೆಯುತ್ತಾರೆ?
ಹೊರಗಿನಿಂದ ಬಂದ ಇಸ್ಲಾಮೀಯರಿಗೆ ಭಾರತೀಯರು- ಸಿಂಧೂ ನದಿ ಮೂಲ-ವಾಗಿರುವವರು!
ಸಿಂಧೂ ಎಂದು ಕೂಡ ಉಚ್ಚರಿಸಿಲು ಸಾಧ್ಯವಾಗದ ಅವರು ಭಾರತವನ್ನು ಹಿಂದೂ ನದಿ ತೀರದಲ್ಲಿರುವವರು- ಹಿಂದೂ ನದಿಯೇ ಸ್ಥಾನವಾಗಿರುವವರು- ಹಿಂದೂ ಸ್ಥಾನೀಯರು- ಎಂದು ಕರೆದರು!
ಭಾರತೀಯ ಸಂಸ್ಕಾರಕ್ಕೆ ಒಂದು ಹೊಸ ಹೆಸರು ಸಿಕ್ಕಿತು!
ಹಿಂದೂ(ಸಿಂಧೂ) ಸ್ಥಾನಿಗಳು-ಹಿಂದೂಗಳು!
ಇಸ್ಲಾಮಿನ ನಂತರ ಬಂದ ಕ್ರೈಸ್ತಮತ- ಇಸ್ಲಾಮಿನ ಹಿಂದೂವನ್ನು ಇಂಡಸ್ ಎಂದು ಕರೆದರು!
ಇಂಡಸ್ ನದಿಯೇ ಮೂಲವಾಗಿರುವವರು ಇಂಡಿಯನ್ನರು!
ಅರ್ಥವಾಯಿತೇ….?
ಭಾರತದಲ್ಲಿರುವವರೆಲ್ಲರೂ ಹಿಂದೂಗಳೇ!!!
ಭಾರತೀಯರು ಅನ್ನುವುದರ ಮತ್ತೊಂದು ಹೆಸರು- ಹಿಂದೂಗಳು!
ನಾನು ಹಿಂದೂವಲ್ಲ ಅನ್ನುವವನು ನನ್ನ ಅಭಿಪ್ರಾಯದಲ್ಲಿ ಭಾರತೀಯನಲ್ಲ!
ಹಿಂದು- ಹೊರಗಿನಿಂದ ಬಂದ ಇಸ್ಲಾಂ ಕ್ರೈಸ್ತರನ್ನೊಳಗೊಂಡ ಭಾರತ!
ನಾವೆಲ್ಲರೂ ಒಂದೇ!
ಈ ಅರಿವು ನಿನ್ನಲ್ಲಿ ಕೇಂದ್ರೀಕರಿಸಿದ ನನ್ನ ಪ್ರೇಮವನ್ನು- ವಿಶಾಲವಾಗಿಸುತ್ತಿದೆ- ಕರ್ತವ್ಯವನ್ನು ನೆನಪಿಸುತ್ತಿದೆ!
೩
ಹೆಣ್ಣೇ…!
ಪ್ರತಿ ಮನುಷ್ಯನ ಹುಟ್ಟಿಗೂ ಒಂದು ರಹಸ್ಯವಿದೆ!
ಶೇಕಡಾ ತೊಂಬತ್ತರಷ್ಟು ಜನಕ್ಕೆ ತಮ್ಮ ಹುಟ್ಟಿನ ರಹಸ್ಯದ ಅರಿವಿರುವುದಿಲ್ಲ- ಅರಿವಾಗುವುದಿಲ್ಲ! ಉಳಿದ ಹತ್ತರಲ್ಲಿ ಐದು ಭಾಗಕ್ಕೆ ರಹಸ್ಯದ ಅರಿವಾಗುವಷ್ಟರಲ್ಲಿ ಆಯುಸ್ಸು ಮುಗಿದಿರುತ್ತದೆ!
ಉಳಿದ ಐದು- ಸಾಧಕರು!
ನಾನು ಸಾಧಕನಾಗಬೇಕು!
೪
ಹೆಣ್ಣೇ…!
ಗೊತ್ತು ನಿನ್ನ ಮನಸ್ಸು!
ಗೊತ್ತೆ ನನ್ನ ಮನಸ್ಸು?
ಜೀವನ…, ಕಳೆದು ಹೋದ ಪ್ರತಿ ಕ್ಷಣದ ಅನುಭವ!
ನಿನ್ನೆಯ ನನ್ನ ಸರಿ ಇಂದಿಗೆ ಬೇರೊಂದು!
ಸರಿ ತಪ್ಪುಗಳು ಆ ಕ್ಷಣಕ್ಕೆ ಮಾತ್ರ ಅನ್ವಯ!
ನನಗನ್ನಿಸುವುದು….,
ಹದಿನೆಂಟು ಇಪ್ಪತ್ತರ ಹರೆಯದಲ್ಲಿ ಯುವ ಮನಸ್ಸು ತುಡಿಯುವ ಯಾವುದೋ ಒಂದಕ್ಕೆ- ನನ್ನ ಮನಸ್ಸು ಹತ್ತು ಹನ್ನೆರಡರ ಕೌಮಾರ್ಯದಲ್ಲಿ ತುಡಿಯಿತು!
ಮೂವತ್ತರ ಪ್ರೌಢಾವಸ್ಥೆಯಲ್ಲಿನ ತುಡಿತ- ಹರೆಯದಲ್ಲಿ!
ಈಗ….,
ಮುಂದಿನ…, ಹತ್ತು ಹದಿನೈದು ವರ್ಷದ ನಂತರದ ಅವಸ್ಥೆಗೆ ತುಡಿಯುತ್ತಿದೆ!
ಅರ್ಥವಾಯಿತೇ…?
ದಕ್ಕಬೇಕಾಗಿರುವುದು ನನಗೆ ದಕ್ಕಬೇಕಾದ ಸಮಯದಲ್ಲಿ ದಕ್ಕುವುದಿಲ್ಲ!
ಅದಕ್ಕೇ ಇರಬೇಕು….,
ನನಗಿಂತ ಹಿರಿಯರು ನನ್ನ ಪ್ರಾಯಕ್ಕೆ ಅನುಗುಣವಾಗಿ ನನ್ನೊಡನೆ ಒಡನಾಡುವುದರಿಂದ ಅವರಿಗೆ ನಾನು ಅರ್ಥವಾಗುವುದಿಲ್ಲ!
ಸಮವಯಸ್ಕರು- ಅವರಿಗನುಗುಣವಾಗಿ ನೋಡುವುದರಿಂದ- ಅರ್ಥವಾಗುವುದಿಲ್ಲ!
ಕಿರಿಯರಿಗೆ…., ಅರ್ಥವೇ ಆಗುವುದಿಲ್ಲ!
ಒಟ್ಟಿನಲ್ಲಿ- ನಾನೊಂದು ಸಮಸ್ಯೆ- ಕಂಡುಕೊಳ್ಳಲಾಗದ ರಹಸ್ಯ!
೫
ಹೆಣ್ಣೇ…!
ಏನು ಹೇಳಲಿ ನಿನ್ನ ಹೃದಯಭಾವಕ್ಕೆ?
ನಿನ್ನ ಪಡೆದ ನಾನು ಧನ್ಯ!
ಆದರೆ ಆ ಧನ್ಯತೆಯನ್ನು ಅನುಭಾವಿಸುವ ಅವಕಾಶವೂ ನನಗಿಲ್ಲ!
ನೀನು- ನಿನಗೇನು ಬೇಕೋ ಅದನ್ನು ನನ್ನಲ್ಲಿ ಹುಡುಕುತ್ತೀಯೆ!
ನಾನೋ… ಅದನ್ನು ಮೀರಿ ಹೋದವನು!
ನಿನ್ನ ಸಣ್ಣಪುಟ್ಟ ಸಂತೋಷಗಳು- ನನಗೆ ನಿಸ್ಸಾರವಾದ ವಿಷಯಗಳು!
ಆಹ್ಲಾದದಿಂದ ಹಾರಾಡಿ ಆರ್ಮಾದಿಸುವ ನಿನ್ನ ಸಂತೋಷ- ನನ್ನ ಕ್ಷಣದ ಮುಗುಳುನಗುವಿಗೆ ಸೀಮಿತ!
ಹಾಗೆಯೇ ಕೋಪದ ನಿನ್ನ ಅರಚಾಟ- ವಾದ ವಿವಾದಗಳು ನನಗೆ ಕಾರಣವಲ್ಲದ ಪ್ರಲಾಪ!
ವಾರಗಳು ಅನುಭವಿಸುವ ನಿನ್ನ ದುಃಖ ನನಗೆ ಕ್ಷಣಗಳಲ್ಲಿ ದಾಟಿ ಹೋಗುವ ಅರ್ಥವಿಲ್ಲದ ಭಾವ!
ಅರ್ಥವಾಯಿತೆ?
ನೀನಿನ್ನೂ ದುಃಖದಲ್ಲಿರುವಾಗ ನಾನು ಎಂದಿನಂತೆ ಲವಲವಿಕೆಗೆ ಮರಳಬಲ್ಲೆ!
ನೀನಿನ್ನೂ ಕೋಪದಿಂದ ನನ್ನೆದೆಗೆ ಬಡಿಯುವಾಗ- ಮುಗುಳುನಕ್ಕು…, ಅದು ನಿನ್ನ ಕೋಪವನ್ನು ಹೆಚ್ಚಿಸುತ್ತದೆಂದು ಗೊತ್ತಿದ್ದರೂ…, ಅದರಿಂದ ಹೊರಬರಬಲ್ಲೆ!
ನಾನೇನು ಮಾಡಲಿ?
ಅದಕ್ಕೇ…,
ನನಗೆ ಯಾರೂ ಉಳಿಯುವುದಿಲ್ಲ!
೬
ಹೆಣ್ಣೇ…!
ನಾನೊಂದು ರಹಸ್ಯವೇ ಆಗಿ ಉಳಿಯಬೇಕೆಂದುಕೊಂಡಿದ್ದೇನೆ!
ಅರಿತುಕೊಳ್ಳಲು ಶ್ರಮಿಸಿದಷ್ಟೂ ನಿನ್ನ ನೆಮ್ಮದಿಭಂಗ!
ಯಾವ ಕಟ್ಟುಪ್ಪಾಡುಗಳು ನನಗಿಲ್ಲ! ಯಾವೊಂದು ಬಂಧನಕ್ಕೆ ಒಳಪಡುವವನಲ್ಲ!
ಭಾವನೆಗಳನ್ನು ಅಧಿಗಮಿಸುವುದು ನನ್ನ ತಪಸ್ಸು!
ನನಗೆ ನಿನ್ನಲ್ಲಿ ಪ್ರೇಮವಿದೆ!
ಹೌದು….!
ನಿನ್ನನ್ನು ಒಳಗೊಂಡ ಪ್ರಪಂಚದ ಮೇಲಿನ ನನ್ನ ಪ್ರೇಮವನ್ನು ನಿನ್ನಲ್ಲಿ ಕೇಂದ್ರೀಕರಿಸು ಅನ್ನುತ್ತೀಯ ನೀನು!
ಪ್ರಪಂಚದ ಮೇಲಿನ ನನ್ನ ಪ್ರೇಮ ನಿನ್ನನ್ನೂ ಒಳಗೊಂಡದ್ದು ಎಂದು ಹೇಳುತ್ತೇನೆ ನಾನು!
ಓಹೋ… ಎಂದು ನನ್ನಿಂದ ದೂರಕ್ಕೆ ಹೋಗಲು ಶ್ರಮಿಸುತ್ತೀಯ ನೀನು!
ಆದರೆ…,
ಇದು ಪ್ರೇಮ!
ನಿಜ!
ಪ್ರಪಂಚದ ಮೇಲೆ ನನಗೆ ಪ್ರೇಮವೆಂದಮೇಲೆ ನಿನ್ನಮೇಲೂ ನನಗೆ ಪ್ರೇಮವೇ…!
ಪ್ರಪಂಚದಂತೆಯೇ…, ನೀನೂ ನನ್ನ ಪ್ರೇಮದಿಂದ ಹೊರ ಬರಲಾರೆ!
ನಿಷೇಧಿಸಿ ದೂರ ಹೋಗಲು ಶ್ರಮಿಸಿದಷ್ಟೂ ಸೆಳೆಯುವ ಅಯಸ್ಕಾಂತ- ನನ್ನ ಪ್ರೇಮ- ಹೊರಹೋದೆ ಅನ್ನುವ ನಿನ್ನ ನಂಬಿಕೆಯನ್ನೂ ಒಳಗೊಂಡದ್ದು!!
೮
ಹೆಣ್ಣೇ…!
ಪ್ರೇಮ ಅದ್ವಿತೀಯವಾದುದು!
ಮೊದಲೇ ಹೇಳಿದೆ- ನನ್ನ ಗುರಿ ಪ್ರೇಮಪ್ರಪಂಚವೆಂದು!
ಕೇಳು…!
“ಪ್ರೇಮ ಪ್ರಪಂಚ!”
ಪ್ರೆಮದ ಹೊರತು ಅಲ್ಲೇನೂ ಇಲ್ಲವೆಂದಮೇಲೆ ನೀನು ಹೇಗೆ ಅದರಿಂದ ಹೊರತಾಗುವೆ?
ಎಲ್ಲಿಂದಲಾದರೂ ಬರಲಿ- ನನ್ನದು ತುಂಬದ ಪ್ರೇಮ- ಕೊಡ!
ಇನ್ನು…,
೯
ಹೆಣ್ಣೇ…!
ಹೆಣ್ಣೇ ಹೆಣ್ಣೇ ಎಂದೇ ಏಕೆ ವಷಯಗಳನ್ನು ಹೇಳುತ್ತಿದ್ದೀಯೆನ್ನುವ ಗೊಂದಲವೇ…?!
ಪ್ರೇಮ ಪ್ರಪಂಚ ಎಂದೆ! ಭಾರತ ಎಂದೆ!
ಜನನಿ ಜನ್ಮ ಭೂಮಿಶ್ಚ- ಸ್ವರ್ಗಾದಪಿ ಗರೀಯಸೀ….!
ಹೆತ್ತಮ್ಮನೂ ಜನ್ಮಭೂಮಿಯೂ ನನಗೆ ಮುಖ್ಯ!
ಹಾಗೆಯೇ….,
ಹೆಣ್ಣು ಹೆತ್ತು ಪ್ರಪಂಚ ಕಂಡ ಜೀವವಾದರೂ…, ಗಂಡು ನಾನು!
ಆದ್ದರಿಂದ…,
ಹೆಣ್ಣು- ನೀನು ನನ್ನ ಆತ್ಮ!
ನೀನಿಲ್ಲದೆ ನಾನಿಲ್ಲ! ನನ್ನ ಅಸ್ತಿತ್ವವೂ ಇಲ್ಲ!
ಹಾಗೆಯೇ…, ನೀನೂ!
ದೂರ ಹೋಗಲು ಶ್ರಮಿಸಿದಷ್ಟೂ ಸಿಕ್ಕಿಕೊಳ್ಳುವ ವಲಯ ನನ್ನ ಪ್ರೇಮ!
೧೦
ಹೆಣ್ಣೇ…!
ಕೊನೆಯದಾಗಿ…,
ಮಾತೃಪ್ರೇಮ- ದೇಶಪ್ರೇಮ- ನನ್ನ ಹೃದಯಲ್ಲಿರುವುದಾದರೆ…,
ನಿನಗೆ ನನ್ನಲ್ಲಿ ಪ್ರೇಮವೇ ಇಲ್ಲವೆನ್ನುವ ನಿನ್ನ ದೂಷಣೆ…,
ಆಧಾರ ರಹಿತ!
ಇದ್ದುಬಿಡು ಸುಮ್ಮನೆ ತಕರಾರು ಮಾಡದೆ- ಹೇಳಿದ ನನ್ನೆರಡು ಕರ್ತವ್ಯಗಳಿಗೆ ಜೊತೆಯಾಗಿ!!
ಇಲ್ಲದಿದ್ದರೆ…,
ನಿರೀಕ್ಷೆಗಳಿಲ್ಲವಾದ್ದರಿಂದಲೂ…., ನಿನ್ನ ಮೇಲಿನ ನನ್ನ ಪ್ರೇಮ ಸ್ಥಿರವಾದ್ದರಿಂದಲೂ…, ನಿನ್ನ ಮೇಲಿನ ನನ್ನ ಪ್ರೇಮದಮೇಲೆ ನನಗೆ ಅಪಾರ ನಂಬಿಕೆ ಇರುವುದರಿಂದಲೂ…., ಮುಖ್ಯವಾಗಿ…, ಭಾವನೆಗಳನ್ನು ಅಧಿಗಮಿಸಲು ತಪಸ್ಸು ಮಾಡುತ್ತಿರುವುದರಿಂದಲೂ…,
ದುಃಖ ಉಳಿಯುವುದು ನಿನಗೆ ಮಾತ್ರ!
Comments
Post a Comment