ತಾರತಮ್ಯ ರಹಸ್ಯ!
ತಾರತಮ್ಯ ರಹಸ್ಯ!
ಐತಿಹಾಸಿಕವಾದ ಒಂದು ಬಂಡೆಯನ್ನು ನೋಡಿದೆ.
ಕಡಲತೀರದ ಭಾರ್ಗವನ ಮೂಕಜ್ಜಿ ನೆನಪಾದಳು!
ಮೂಕಜ್ಜಿಯೊಳಕ್ಕೆ ಪರಾಕಾಯ ಪ್ರವೇಶ ಮಾಡಿದರೆ ಸಾಕು- ಇತಿಹಾಸ ಬಿಡಿಸಿಕೊಳ್ಳುತ್ತದೆ!
ಪ್ರವೇಶ ಮಾಡಿದೆ!
*
ಕಾಲಗರ್ಭ!
ಒಂದೊಂದು ಕ್ಷಣವೂ ಇತಿಹಾಸವಾಗುವ- ಕಾಲ!
ಕಳೆದುಹೋದ ಕಾಲವೆಷ್ಟೋ…, ಬರಲಿರುವ ಕಾಲವೆಷ್ಟೋ!
ಕಾಲಕ್ಕೆ ಹೋಲಿಸಿದರೆ ಮನುಷ್ಯನ ಜೀವಿತ ಕಾಲ- ಎಷ್ಟು ಚಿಕ್ಕದು!
ಆದರೂ…, ಮನುಷ್ಯ ಅಂದರೆ ಇತಿಹಾಸ ಅನ್ನುವಷ್ಟು ಆವರಿಸಿಕೊಂಡಿದ್ದಾನೆ ಮನುಷ್ಯ!
ಮನುಷ್ಯನಿಲ್ಲದ ಇತಿಹಾಸ- ಇತಿಹಾಸವಲ್ಲ!
ಎಷ್ಟು ಸಾವಿರ ವರ್ಷ ಹಿಂದಕ್ಕೆ ಕರೆದುಕೊಂಡು ಹೋಯಿತೋ- ಬಂಡೆ!
ಅಲ್ಲೊಂದು ಮನೆ!
ಗಂಡ ಹೆಂಡತಿ ಮಗಳು!
ಸುಖೀ ಕುಟುಂಬ!
ಚಾಪೆಯಮೇಲೆ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದಾರೆ.
“ಭವತಿ ಭಿಕ್ಷಾಂ ದೇಹಿ!” ಎಂಬ ಶಬ್ದ ಕೇಳಿ ಹೊರಬಂದರು.
ಅದ್ಭುತ ಕಾಂತಿಯ ಭಿಕ್ಷುಕ!
“ಏನು ಕೊಡಲಿ ಭಿಕ್ಷುವೇ…?” ಎಂದರು ಮನೆಯೊಡೆಯ.
“ನಿನ್ನಲ್ಲಿರುವ ಅತ್ಯಮೂಲ್ಯವಾದುದನ್ನು ಕೊಡು!” ಎಂದ ಭಿಕ್ಷು.
ಗೊಂದಲಕ್ಕೆ ಬಿದ್ದ ಮನೆಯೊಡೆಯ.
“ಯಾವುದು ಅಮೂಲ್ಯವೆಂದು ಹೇಗೆ ಅಳೆಯಲಿ ಭಿಕ್ಷುವೇ..! ಪ್ರಪಂಚದ ಅಣುಅಣುವೂ ನನಗೆ ಅತ್ಯಮೂಲ್ಯವೇ..!”
“ನಿನ್ನ ಮಗಳನ್ನು ನನಗೆ ಕೊಡು!” ಎಂದ ಭಿಕ್ಷು!
“ಮಗಳೇನು ವಸ್ತುವೇ…? ಸುಖದ ಪರಾಕಾಷ್ಠೆಯಲ್ಲಿ- ಹೆತ್ತಿದ್ದೇನೆ! ಹೆತ್ತ ಕರ್ತವ್ಯ ನಿರ್ವಹಣೆಗಾಗಿ ಪೋಷಿಸುತ್ತಿದ್ದೇನೆ… ಅಷ್ಟೇ ಹೊರತು- ದಾನವಾಗಿ ಮಗಳನ್ನು ನೀಡುವ ಅಧಿಕಾರ ನನಗೆಲ್ಲಿದೆ?” ಎಂದ ಒಡೆಯ.
ಈಗ ಭಿಕ್ಷು ಗೊಂದಲಗೊಂಡ! ಅವನ ಚಂಚಲತೆಯನ್ನು ಕಂಡು ಮನೆಯೊಡೆಯ…,
“ಬಾ ಭಿಕ್ಷುವೇ…. ನಮ್ಮೊಂದಿಗೆ ನಮ್ಮವನಾಗಿ ಉಂಡು ಹೋಗು!” ಎಂದ.
*
“ಅಪ್ಪಾ…, ಯಾರಿರಬಹುದು ಆ ಭಿಕ್ಷು? ಅದ್ಭುತ ಕಳೆ!” ಎಂದಳು ಮಗಳು.
“ಭಿಕ್ಷುಕರೆಲ್ಲಾ ಶಿವನ ಅಂಶದವರು!” ಎಂದ ಅಪ್ಪ.
“ಎಲ್ಲರೂ…?” ಎಂದಳು ಮಗಳು.
“ಅಲ್ಲೂ ಮರೀಚಿಕೆಯಿದೆ!” ಎಂದರು ಅಪ್ಪ.
“ಯಾಕೋ ಆತನೊಂದಿಗೆ ಹೋಗಬೇಕು ಅನ್ನಿಸುತ್ತಿದೆ!” ಎಂದಳು ಮಗಳು.
ಬಂಡೆ ಮುಗುಳುನಕ್ಕಂತಾಯಿತು! ಮೂಕಜ್ಜಿ ಹೊರತಳ್ಳಿ- ಇತಿಹಾಸ ಮಾಸಿತು!
*
“ಭವತಿ ಭಿಕ್ಷಾಂ ದೇಹಿ….”
ಬಾಗಿಲನ್ನು ತೆರೆದೆ!
ಅದ್ಭುತ ಕಾಂತಿಯ ಹೆಣ್ಣು!
ನನ್ನರಿವಿಲ್ಲದೆ ಮುಂದಕ್ಕೆ ಹೆಜ್ಜೆ ಹಾಕಿದೆ- ಅವಳನ್ನು ಅಪ್ಪಿಕೊಳ್ಳುವಂತೆ!
ಮುಗುಳುನಕ್ಕಳು. ಮುಂದಕ್ಕೆ ಹೆಜ್ಜೆ ಹಾಕಿದಷ್ಟೂ ಹಿಂದಕ್ಕೆ ಸರಿಯುತ್ತಿದ್ದಳು!
ಸರಿಯುತ್ತಿದ್ದಳು- ನಿಂತಂತೆಯೇ!
ಭ್ರಮೆ!
ಯಾವುದು?
ಅವಳು ಇರುವುದೋ? ಹಿಂದಕ್ಕೆ ಸರಿಯುತ್ತಿರುವುದೋ? ಈ ಪರಿಸ್ತಿತಿಯೋ?
“ಭಿಕ್ಷೆಗೆ ಬಂದೆ ದೈವವೇ!” ಎಂದಳು.
ನಿಂತೆ. ತಿರುಗಿ ನೋಡಿದೆ. ಮನೆಯ ದ್ವಾರದಲ್ಲಿಯೇ ನಿಂತಿದ್ದೇನೆ! ಅಂದರೆ…, ಮನೆಯೂ ನನ್ನೊಂದಿಗೆ ಚಲಿಸಿದೆ!
“ಬೇಕಾದ್ದು ತೆಗೆದುಕೊಳ್ಳಿ!” ಎಂದೆ.
ಆತ್ಮಕ್ಕೆ ಕೈ ಹಾಕಿದಳು!
ಎಚ್ಚರಗೊಂಡು ಬಂಡಯಬಳಿಗೆ ಹೋದೆ!
*
ಬಂಡೆಯಮೇಲೆ ಹತ್ತಿ ಕುಳಿತೆ. ಪದ್ಮಾಸನ ಹಾಕಿ ಕಣ್ಣು ಮುಚ್ಚಿದೆ.
ಮನಸ್ಸಿನ ಏಕಾಗ್ರತೆಯ ಪರೀಕ್ಷೆಯಾಗಿಬೇಕಿತ್ತು!
“ಓಂ!”
ಗಂಟಲಿನಿಂದ ಹೊರಟು ತುಟಿಯಂಚಿನಲ್ಲಿ ಕೊನೆಗೊಳ್ಳುವ- ಪ್ರಣವಾಕ್ಷರ!
ಅದರೊಂದಿಗೆ- ಅವರವರ ಭಕ್ತಿಗೆ ಅನುಸಾರವಾಗಿ ಓಂ ನಮಃಶಿವಾಯ ಎಂದೋ, ಓಂ ನಮೋ ನಾರಾಯಣಾಯ ಎಂದೋ, ಓಂ ನಮೋ ಬ್ರಹ್ಮದೇವಾಯ ಎಂದೋ… ಅಥವಾ…, ಓಂ ದೇವಿಯೇ ಎಂದೋ… ಉಚ್ಚರಿಸಬಹುದು!
ಆದರೂ… ಓಂ ಎನ್ನುವ ಬ್ರಹ್ಮಾಂಡದ ಸ್ಪಂದನೆಗೆ ತಕ್ಕ ಮಂತ್ರ ಏನಿದೆ?
ಸನಾತನ ಧರ್ಮದ ಮೂಲ!
ಸನಾತನಧರ್ಮದ ಬಗ್ಗೆಯೂ, ಸನಾತನ ಸಂಸ್ಕಾರದಬಗ್ಗೆಯೂ, ಸನಾತನ ಸಂಸ್ಕೃತಿ ಸಂಗಮದ ಬಗ್ಗೆಯೂ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯ!
ಎಲ್ಲರೂ ಮನುಷ್ಯ ಮನಸ್ಸಿಗೆ ಅನುಗುಣವಾಗಿ ಧರ್ಮವನ್ನು ವ್ಯಾಖ್ಯಾನಿಸುತ್ತಾರೆ ಹೊರತು- ಧರ್ಮ ಧರ್ಮವೇ!
“ಓಂ!” ಹೃದಯದಿಂದ ಹೊರಟ ಶಬ್ದ ಪ್ರಕೃತಿಯೊಂದಿಗೆ ಬೆರೆತು ಪ್ರತಿಸ್ಪಂದಿಸಿತು.
ಯೋಗ ನಿದ್ರೆಗೆ ಜಾರಿದೆ! ಕಾಲಗರ್ಭದಲ್ಲಿ ಹಿಂದಕ್ಕೆ….
*
“ಅಪ್ಪ ಒಪ್ಪಿದರು!” ಎಂದಳು.
ಊಟವನ್ನು ಮುಗಿಸಿ ಹೊರಡಲಿದ್ದವನನ್ನು ತಡೆದು ಒಂದೆರಡು ದಿನದ ಆತಿಥ್ಯವನ್ನು ಸ್ವೀಕರಿಸಲು ಹೇಳಿದ್ದರು!ಧ್ಯಾನದಲ್ಲಿದ್ದವನು ಕಣ್ಣು ತೆರೆದೆ.
“ಊರು ಸುತ್ತುವ ಬೈರಾಗಿ! ನನ್ನನ್ನೇಕೆ ಕೇಳಿದಿರಿ?” ಎಂದಳು.
“ಒಂದು ರಹಸ್ಯದ ಬೆನ್ನು ಹತ್ತಿದ್ದೇನೆ! ಕಾಲಭೈರವನಲ್ಲಿ ಕೇಳಿದಾಗ…, ಜೊತೆ ಹುಡುಕಿಕೋ ತಿಳಿಯುತ್ತದೆ- ಎಂದ!”
“ಆ ಜೊತೆ ನಾನೇ ಎಂದು ಹೇಗೆ ತೀರ್ಮಾನಿಸಿದೆ?”
“ಭೈರವನೇ ಹೇಳಿದ!”
“ಹುಡುಕುತ್ತಿರುವ ರಹಸ್ಯವೇನು?”
“ಕಲಿಯುಗದಲ್ಲಿನ ಮನುಷ್ಯ ಮನುಷ್ಯರ ನಡುವಿನ ತಾರತಮ್ಯ ಹಿಂದೆಯೂ ಇತ್ತೆ? ಅನ್ನುವುದು!”
“ನಿಜಕ್ಕೂ ಕಲಿಯುಗದಲ್ಲಿ ಮನುಷ್ಯ ಮನುಷ್ಯರ ನಡುವೆ ತಾರತಮ್ಯವಿದೆಯೇ?”
“ಇಲ್ಲವೇ…?”
“ಬೈರಾಗಿ…, ವಾಲ್ಮೀಕಿ ಯಾರು?”
“ಆದಿಕವಿ!”
“ವರ್ಣದಿಂದ..?”
“ರತ್ನಾಕರನೆಂಬ ಬೇಡ!”
“ರಾವಣ?”
“ರಾಕ್ಷಸ ರಾಜ!”
“ವರ್ಣದಿಂದ?”
“ಮಹಾಬ್ರಾಹ್ಮಣ!”
“ವಿಶ್ವಾಮಿತ್ರ?”
“ಬ್ರಹ್ಮರ್ಷಿ!”
“ವರ್ಣದಿಂದ?”
“ಮಹಾ ಕ್ಷತ್ರಿಯ!”
“ತಿಳಿದುಕೊಳ್ಳಲು ಇನ್ನೇನಿದೆ ಬೈರಾಗಿ?”
ಗೊಂದಲಗೊಂಡೆ!
ಯಾಕೋ…, ಕುಬೇರನೂ ಮನಸ್ಸಿನಲ್ಲಿ ಹಾದು ಹೋದ!
“ಮತ್ತೆ ಕಲಿಯುಗ ಯಾಕೆ ಹೀಗೆ?”
“ತಾರತಮ್ಯ ಅನ್ನುವುದು ಮನುಷ್ಯ ಮನಸ್ಸಿನಲ್ಲಿ ಇರುವುದು ಹೊರತು- ವ್ಯವಸ್ತೆಯಲ್ಲ!”
“ಬಿಡಿಸಿ ಹೇಳು!”
“ಬುದ್ದಿವಂತ ನಾನೇ ದೊಡ್ಡವ ಅನ್ನುತ್ತಾನೆ! ದಡ್ಡ ಒಪ್ಪುತ್ತಾನೆ! ಅದು ಪರಂಪರೆ ಪರಂಪರೆಯಾಗಿ ವ್ಯವಸ್ತೆಯಾಗಿ ರೂಪುಗೊಳ್ಳುತ್ತದೆ!”
“ಹೇಗೆ?”
“ಬುದ್ದಿವಂತ- ನೀನು ದಡ್ಡನಲ್ಲ! ನನಗೆ ಸಮ- ಎಂದರೂ, ದಡ್ಡ- ಇಲ್ಲ ನಾನು ಕೀಳು! ನೀನು ನನ್ನ ತುಳಿಯುತ್ತಿದ್ದೀಯ- ಅನ್ನುವಷ್ಟು! ನೋಡಿ- ಅವರು ಮೇಲಿನವರು! ನಿಮ್ಮನ್ನು ತುಳಿಯುತ್ತಿದ್ದಾರೆ ಅಂದರೆ ಒಪ್ಪುವಷ್ಟು!”
*
ಬ್ರಹ್ಮಾಂಡವೆಷ್ಟು ರಹಸ್ಯ!
ವಿಶ್ವ ರಹಸ್ಯವನ್ನು ಅರಿತುಕೊಂಡವರು ಯಾರು?
ಇದ್ದಾರೆಯೇ?
ಅದಲ್ಲ ಸಮಸ್ಯೆ!
ಬ್ರಹ್ಮಾಂಡದಲ್ಲಿ ಗ್ಯಾಲಕ್ಸಿಗಳೆಷ್ಟೋ! ಸೌರಮಂಡಲಗಳೆಷ್ಟೋ! ನಕ್ಷತ್ರಗಳೆಷ್ಟೋ!!
ಇರಲಿ!
ಸೂರ್ಯನೆಂಬ ಅತಿ ಚಿಕ್ಕ ನಕ್ಷತ್ರ!
ಆ ನಕ್ಷತ್ರವನ್ನು ಸುತ್ತುವ ಭೂಮಿ!
ಭೂಮಿಯ- ಶೇಖಡಾ ಎಪ್ಪತ್ತೊಂದು ಭಾಗ ನೀರು!
ಮನುಷ್ಯನಿಗಿಂತಲೂ ನೂರುಪಟ್ಟು ಅಧಿಕವಿರುವ ಪ್ರಾಣಿ-ಪಕ್ಷಿ, ಕ್ರಿಮಿ- ಕೀಟ ಸಂಕುಲ!
ಮನುಷ್ಯನ ಆಯುಸ್ಸೋ… ಹೆಚ್ಚೆಂದರೆ ನೂರು!
ಹಾಗಿರುವಾಗ…, ಮನುಷ್ಯರ ನಡುವಿನ ತಾರತಮ್ಯದ ಮೂಲ ಹುಡುಕುತ್ತಿದ್ದೇನೆ!
*
ಕಣ್ಣು ತೆರೆದೆ!
ವಿಶ್ವವೆಂಬ ಅದ್ಭುತ!
ಬಂಡೆಯಿಂದ ಇಳಿದು ಅದನ್ನೊಮ್ಮೆ ನೋಡಿದೆ!
ಒಬ್ಬನೇ ಶ್ರಮಿಸಿದರೆ ಅದರ ಸ್ಥಾನ ಪಲ್ಲಟ ಮಾಡಬಹುದೆ?
ಅಸಾಧ್ಯ!
ಹಾಗಿರುವಾಗ ಪ್ರಪಂಚವನ್ನು ಬದಲಿಸಬಲ್ಲೆನೆ?
ನಂಬಿಕೆ ಅಪನಂಬಿಕೆಗಳು ಅವರವರ ಮನಸ್ಸಿಗೆ ಅನುಗುಣವಾಗಿ!
ಮನಸ್ಸು ರೂಪುಗೊಳ್ಳುವುದೋ…?
ಅನುಭವಕ್ಕೆ ಅನುಗುಣವಾಗಿ!
ನನಗೆ ನಾನೇ ಸರಿ- ಹಾಗೆಯೇ ಪ್ರತಿಯೊಬ್ಬರಿಗೂ ಅವರವರು!
ನಾನು ನಾನಾಗಿದ್ದರಾಯಿತು- ಅದೇ ಪ್ರಪಂಚಕ್ಕೆ ನನ್ನ ಕೊಡುಗೆ!
“ಅದು ಹೇಗೆ? ಅರಿವಿಲ್ಲದವರಿಗೆ ಅರಿವು ನೀಡುವ ಧರ್ಮವಿಲ್ಲವೇ?” ಹೆಣ್ಣು ಶಬ್ದ!
ತಿರುಗಿ ನೋಡಿದೆ… ಅವಳೇ! ಎಲ್ಲವೂ ಒಂದು ಚಕ್ರ! ಮನಸ್ಸು, ದೇಶ, ಕಾಲ…!
“ಈ ಪ್ರಪಂಚದಲ್ಲಿ ಎಲ್ಲರೂ ಅರಿವು ನೀಡುವವರೇ!” ಎಂದೆ! ಮುಗುಳುನಕ್ಕಳು!
“ಹಾಗಿದ್ದರೆ ಈಗ ನಮ್ಮ ಧರ್ಮವೇನು?” ಎಂದಳು.
“ಉಪದೇಶ ಕೊಡುವುದನ್ನು ನಿಲ್ಲಿಸಿ- ಸತ್ಯಶೋಧನೆ ಮಾಡುವುದು- ಕಂಡುಕೊಳ್ಳುವುದು!- ಬ್ರಹ್ಮಾಂಡದ ರಹಸ್ಯ!”
ಚಲಿಸಿದಳು ಪ್ರಕೃತಿ ನನ್ನ- ಪುರುಷನ- ಆದೇಶದಂತೆ!!
Comments
Post a Comment