ಅಬ್ಧಿ!
ಅಬ್ಧಿ!
ಮೊರೆತ ಸಮುದ್ರದ್ದೋ ಮನಸ್ಸಿನದ್ದೋ!
ಕಿವಿಗೊಟ್ಟು ಕೇಳಿದೆ…,
“ಹೇಳು!” ಎಂದಿತು ಅಬ್ಧಿ!
ಮುಗುಳುನಗುವಿನ ಹೊರತು ನನಗೇನಿದೆ ಉತ್ತರ?
“ಮುಷ್ಠಿ ಸಡಿಲಿಸು! ಮನಸ್ಸನ್ನು ಹರಡಲು ಬಿಡು- ನನ್ನಂತೆ!” ಎಂದಿತು.
ಶಾಂತವಾಗಿ- ವಿಶಾಲವಾಗಿ ಹರಡಿದೆ ಸಾಗರ! ಉರುಳುರುಳಿ ಬಂದು ಕಾಲನ್ನು ತೋಯಿಸುತ್ತಿದೆ ಅಲೆಗಳು.
ಸಮುದ್ರವೇ ನನ್ನಲ್ಲಿಗೆ ಬಂದು ಕಾಲು ಹಿಡಿಯುತ್ತಿದೆಯೆಂದು ಅಹಂಕರಿಸಲೇ…?
ಸವರಿ ಸಾಂತ್ವಾನ ನೀಡುತ್ತಿದೆಯೆಂದು ಅಧೀರನಾಗಲೇ?
ಅಬ್ಧಿ! ಸಮುದ್ರ! ಪುಲ್ಲಿಂಗವೆನ್ನಿಸಿದರೂ…,
ನನಗೆ ತಾಯಿ!
ಮನಸ್ಸಿನ ಬಿಗಿತ ಸಡಿಲಗೊಂಡಿತು!
ಏನೋ ಆನಂದ!
“ಸರಿ ಹಾಗಿದ್ದರೆ ಕೇಳು…!” ಎಂದೆ.
*
“ಪಾಪ ಅವನಿಗೆ ಗಲ್ಲು ಶಿಕ್ಷೆಯಂತೆ?”
“ಪಾಪಾನ? ಒಬ್ಬ ವ್ಯಕ್ತಿಯನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದಾನೆ ಮಾರಾಯ!”
“ಯಾರು ಹೇಳಿದ್ದು?”
“ಸಾಬೀತಾಗಿದೆ!”
“ಆದರೆ ಅವರೇನೂ ಅವನನ್ನು ಕಷ್ಟಪಟ್ಟು ಹುಡುಕಿ ಅರೆಸ್ಟ್ ಮಾಡಲಿಲ್ಲವಲ್ಲ!?”
“ಮತ್ತೆ?”
“ಹೆಣವನ್ನು ಕಂಡವ ಪೋಲೀಸರಿಗೆ ಮಾಹಿತಿ ಕೊಡಲು ಹೋದ! ಪಾಪ- ಅವನೇ ಅಪರಾಧಿಯಾದ!”
“ಅವನೇಕೆ ಹೆಣ ಇರುವಲ್ಲಿಗೆ ಹೋದ? ಅವನೇ ಕೊಂದು ಯಾಕೆ ನಾಟಕ ಮಾಡಿರಬಾರದು? ಸಾಬೀತಾಗಿದೆ ಅಂದಮೇಲೆ ಅವನೇ ಮಾಡಿರಬೇಕು!”
“ಏನೋಪ್ಪ!”
ಇದು ಘಟನೆ!
*
“ಹೇಳು ಪುಟ್ಟ!” ಎಂದೆ.
“ತಮ್ಮ ಎಲ್ಲಿ?” ಎಂದಳು.
“ಗೆಳೆಯನೊಂದಿಗೆ ಎಲ್ಲಿಗೋ ಹೋದ!” ಎಂದೆ.
“ಗೆಳೆಯನೊಂದಿಗೆ ಜಗಳವಾಗಿದೆ!” ಎಂದಳು.
“ಯಾಕೆ?”
“ಕಾರಣ ನಾನೇ! ನನ್ನಮೇಲೆ ಇಬ್ಬರಿಗೂ ಪ್ರೇಮವಾಗಿದೆ!” ಎಂದಳು.
ಒಂದು ಕ್ಷಣ ಮೌನ.
“ನಿನಗೆ?” ಎಂದೆ.
“ಇಬ್ಬರೂ ಬೇಡ! ನೀವು ಸಾಕು!” ಎಂದಳು.
ಅವಳ ಕಣ್ಣುಗಳನ್ನು ದೃಷ್ಟಿಸಿ ನೋಡಿದೆ. ತಲೆ ತಗ್ಗಿಸಿದಳು.
“ನನ್ನ ಮಗಳ ವಯಸ್ಸೂ ಇಲ್ಲ ನಿನಗೆ! ಯಾಕೆ ಈ ಯೋಚನೆ ಬಂತು?” ಕೇಳಿದೆ.
“ಪ್ರಪಂಚದಲ್ಲಿ ಎಷ್ಟೋ ಮದುವೆಗಳಾಗಿದೆ ಹೀಗೆ! ಏನೀಗ? ನನಗೆ ಇಪ್ಪತ್ತು ನಿಮಗೆ ನಲವತ್ತೈದು- ಅಷ್ಟೆತಾನೆ?” ಎಂದಳು.
“ತಪ್ಪು ಪುಟ್ಟ…, ಒಬ್ಬಳು ಮಗಳು ಅನ್ನುವುದಕ್ಕಿಂತ ನಿನ್ನಮೇಲೆ ನನಗೆ ಬೇರೆ ಭಾವನೆ ಬರುವುದಿಲ್ಲ!” ಎಂದೆ.
“ಸುಳ್ಳು! ನಿಮಗೂ ನಾನಂದ್ರೆ ಇಷ್ಟ!” ಎಂದಳು.
“ಇಷ್ಟವೇ! ಇಲ್ಲವೆಂದವರಾರು? ಮಗಳಂತೆ! ಪುಟಾಣಿ ಪಾಪುವಿನಂತೆ!” ಎಂದೆ.
ಮೌನವಾಗಿ- ತಲೆತಗ್ಗಿಸಿ ಹೊರಟು ಹೋದಳು. ಅವಳು ಹೋಗುವ ಸಮಯಕ್ಕೆ ಸರಿಯಾಗಿ ಫೋನ್ ರಿಂಗಾಯಿತು.
“ಹೇಳೋ!” ಎಂದೆ.
“ವಾಟ್ಸಪ್‌ಲಿ ಒಂದು ವೀಡಿಯೋ ಬಂದಿದೆ ನೋಡು!” ಎಂದ ಗೆಳೆಯ.
ತೆಗೆದು ನೋಡಿದೆ.
ತಮ್ಮ ಮತ್ತು ಅವನ ಗೆಳೆಯನ ನಡುವೆ ಜಗಳ- ಪಬ್ಲಿಕ್ ಆಗಿ! ಯುದ್ಧದ ಕೊನೆಯಲ್ಲಿ ತಮ್ಮನ ಮುಖವನ್ನು ಪಚಡಿ ಮಾಡಿ ಹೊರಟು ಹೋಗಿದ್ದಾನೆ ಗೆಳೆಯ!
ಸರಿಯಾಗಿ ಒಂದು ತಿಂಗಳ ನಂತರ ತಮ್ಮನ ಗೆಳೆಯನ ಕೊಲೆಯಾಗಿದೆ!
*
ಏನು ಮಾಡಲಿ?
ಒಂದು ಕಡೆ ತಮ್ಮ! ಒಂದು ಕಡೆ ವಾಸ್ತವ!
“ಹೇಳಿ! ನಿಮ್ಮ ತಮ್ಮನೇ ಈ ಕೊಲೆ ಮಾಡಿದ್ದಾನೆ ಅನ್ನುತ್ತೀರ?” ಎಂದು ಕೇಳಿತು ಕೋರ್ಟ್!
“ಮಾಡಿದ್ದಾನೋ ಇಲ್ಲವೋ ತಿಳಿಯದು! ಅವರ ನಡುವಿನ ಜಗಳದ ನಂತರ ಅವನನ್ನು ಕೊಲ್ಲುವುದಾಗಿ ಹಲವುಬಾರಿ ಹೇಳಿದ್ದ!” ಎಂದೆ.
“ಅದಕ್ಕೆ ಏನಾದರೂ ಸಾಕ್ಷಿಗಳಿದೆಯೇ?”
“ಇಲ್ಲ! ಬಾಯಿಮಾತಲ್ಲಿ ಹೇಳಿದ್ದ ಅಷ್ಟೆ! ಏಟು ತಿಂದು ಬಂದ ದಿನ ಒಂದು ಮೆಸೇಜ್ ಮಾಡಿದ್ದ! ಅಣ್ಣಾ…, ಅವನು ಮೇಲೇಳದಂತೆ ಒಂದು ಏಟು ಕೊಡಲಿದ್ದೇನೆ- ಎಂದು! ಆ ರೀತಿಯ ಏಟು ಕೊಡಲು ಹೋಗಿ ಏನಾದರೂ ಆಗಿದೆಯಾ ತಿಳಿಯದು!” ಎಂದೆ.
“ಅಪರಾಧಿ ಸ್ಥಾನದಲ್ಲಿರುವುದು ನಿಮ್ಮ ತಮ್ಮ ತಾನೆ?!”
“ಹೌದು! ನಾವಿಬ್ಬರು ಸ್ವಂತ ಅಣ್ಣ ತಮ್ಮಂದಿರು!”
“ನಿಮ್ಮ ಸಾಕ್ಷಿ ತಮ್ಮನ ನೇಣು ಶಿಕ್ಷೆಗೂ ಕಾರಣವಾಗಬಹುದು- ಗೊತ್ತೇ?”
“ಗೊತ್ತು! ತಪ್ಪು ಮಾಡಿದ್ದರೆ ಅವನಿಗೆ ಶಿಕ್ಷೆ ಆಗಲೇ ಬೇಕು!” ಎಂದೆ.
ಯಾಕೋ ಏನೋ ನನ್ನ ಕಣ್ಣು ತುಂಬಿತು!
ಕೊಲೆಯಾದ ಗೆಳೆಯನ ಶವದ ಆಸು ಪಾಸಿನಲ್ಲಿ- ನನ್ನ ತಮ್ಮನ ವಾಚ್, ಟೂರ್ ಹೋಗುವಾಗ ಹಾಕುವ ಗ್ಲೌಸ್, ಮತ್ತು ರಕ್ತದ ಕಲೆಗಳಿದ್ದ ಟಿಷರ್ಟ್ ಸಿಕ್ಕಿತ್ತು! ರಕ್ತ ಸತ್ತವನದ್ದೇ ಎಂದು ಸಾಬೀತಾಗಿತ್ತು! ಅದನ್ನು ಸಾಕ್ಷಿಗಳಾಗಿ ಪ್ರೊಡ್ಯೂಸ್ ಮಾಡಿದ್ದರು!
ಹಾಗೆ ತಮ್ಮನಿಗೆ ನೇಣು ಶಿಕ್ಷೆ ವಿಧಿಸಿದ್ದರು!
*
ಅಬ್ಧಿ! ಶಾಂತಗಂಭೀರವಾಗಿ…,
“ಇದರಲ್ಲಿ ನೀನು ಮಾಡುವುದು ಏನಿತ್ತು? ಆ ಕೊಲೆಯನ್ನು ಅವನೇ ಮಾಡಿರಬಹುದು! ಕೊಲೆ ಮಾಡಿದ ಅವನ ಮೇಲೆ ನಿನಗೆ ಮರುಕದ ಅಗತ್ಯವಿಲ್ಲ! ನೀನೇ ಸರಿ!” ಎಂದು ಹೇಳಿತು!
ಅದೇ ಸಮಯಕ್ಕೆ…,
“ಇಲ್ಲಿ ನಿಂತಿದ್ದೀರ…? ಎಷ್ಟು ಹುಡುಕಿದೆ ಗೊತ್ತಾ?” ಎನ್ನುತ್ತಾ ಬಂದಳು ನನ್ನ ಮಾನಸ ಪುತ್ರಿ!
ಅವಳು ನನ್ನನ್ನು ಅಪ್ಪನ ಸ್ಥಾನದಲ್ಲಿ ಒಪ್ಪಿಕೊಂಡಿದ್ದಳು!
ಅದಕ್ಕೆ ಕಾರಣ ವಯಸ್ಸಿನ ಅಂತರ ಮಾತ್ರವಲ್ಲ- ಅಪ್ಪ ಮಾಡಬೇಕಾದ ಕರ್ತವ್ಯವನ್ನು ನಾನು ಮಾಡಿದ್ದು!
“ಒಬ್ಬಳು ಹುಡುಗಿಗೋಸ್ಕರ ಈ ರೀತಿ ಕಚ್ಚಾಡುವವರ ವ್ಯಕ್ತಿತ್ವ ಎಷ್ಟು ಕೆಟ್ಟದ್ದಾಗಿರುತ್ತದೆ! ನೀವಿಬ್ಬರೆಂದರೆ ನನಗೆ ಅಸಹ್ಯ! ನೀವು ಎಷ್ಟೇ ಕಚ್ಚಾಡಿಕೊಂಡರೂ ನಿಮ್ಮಲ್ಲಿ ಯಾರೊಬ್ಬರಿಗೂ ನಾನು ದೊರಕುವುದಿಲ್ಲ!” ಎಂದಿದ್ದಳು.
ಯಾವುದು ಸರಿ? ಯಾವುದು ನ್ಯಾಯ?
ಅವರಿಬ್ಬರು ಒಂದಾಗಿದ್ದರು…. ಒಂದಾಗಿ ಅವಳನ್ನು….!
ಒಂದುಸಾರಿ…, ಎರಡುಸಾರಿ…, ಮೂರನೇಯ ಸಾರಿಗೆ ತಮ್ಮನ ಗೆಳೆಯ ಇಲ್ಲವಾಗಿದ್ದ!
ತಮ್ಮನ ಬಟ್ಟೆ, ವಾಚ್, ಗ್ಲೌಸ್‌ಗಳು ಹೇಗೆ ಅಲ್ಲಿಗೆ ಬಂತೋ ನನಗೆ ಮಾತ್ರ ಗೊತ್ತು!
*
“ಈ ಅಬ್ಧಿಯನ್ನು ನೋಡು! ಅಬ್ಧಿಯ ಆಚೆಗಿನ ಆಕಾಶವನ್ನು ನೋಡು…, ಆಕಾಶದಾಚೆಗಿನ ಬ್ರಹ್ಮಾಂಡವನ್ನು ನೋಡು!” ಎಂದು ಹೇಳಿ ಅವಳನ್ನು ಬಳಸಿ ತಲೆಗೊಂದು ಮುತ್ತು ಕೊಟ್ಟು ಹೇಳಿದೆ…,
“ಮರೆವು ಅನ್ನುವುದು ಇರುವುದು- ಕೆಟ್ಟದ್ದನ್ನು ಮರೆಯಲು!”
ಅದು ನಿಜ ಅನ್ನುವಂತೆ…,
ಮತ್ತಷ್ಟು ಶಾಂತವಾಗಿ…,
ಇಬ್ಬರ ಕಾಲನ್ನೂ ತೋಯಿಸಿ…,
ಉರುಳುರುಳಿ ಸಾಗಿತು…,
ಅಬ್ಧಿ!
Comments
Post a Comment