ಭಟ್ಟಿ!
ಭಟ್ಟಿ!
ಮನಸ್ಸೇ…,
ಅದೋ ಕಾಲಗರ್ಭ!
ಹೋಗೋಣವೇ ಹಿಂದಕ್ಕೆ?
ಈ ವಾಸ್ತವ- ವ್ಯಾವಹಾರಿಕ ಪ್ರಪಂಚದಿಂದ ಸ್ವಲ್ಪ ಹೊತ್ತಿನ ಮುಕ್ತಿಗಾಗಿ…,
ಹೋಗೋಣವೇ ಕಾಲ್ಪನಿಕ ಮಹಾ ಸಾಮ್ರಾಜ್ಯದೊಳಕ್ಕೆ?
ಇತಿಹಾಸವೋ ಐತೀಹ್ಯವೋ…., ಕೇಳದವರಾರು ವಿಕ್ರಮಾದಿತ್ಯನಬಗ್ಗೆ- ಬೇತಾಳದಬಗ್ಗೆ?
ಆದರೆ…,
ಗೊತ್ತೇನು…?
ಅವರೊಂದಿಗೇ ಇದ್ದು- ಅವರಿಬ್ಬರನ್ನು ಮೀರಿಸುವ ವ್ಯಕ್ತಿತ್ವದೊಡೆಯ- ಐಂದ್ರಜಾಲಿಕ ಭಟ್ಟಿಯಬಗ್ಗೆ?
ನೋಡು- ಓಡು…. ಕಾನನಾಂಧಕಾರದೊಳಕ್ಕೆ…, ಮನಸ್ಸೇ…, ಹರಿದುಬಿಡು!
*
ಸೂರ್ಯಕಿರಣವೂ ಭೂಮಿಯನ್ನು ತಾಕಲು ಹೆಣಗುವಷ್ಟು ವಿಸ್ತಾರವಾದ ಕಾಡು! ಹಾಗೆಂದು ಸೂರ್ಯನೇನೂ ನಡುನೆತ್ತಿಯಮೇಲಿಲ್ಲ! ಇನ್ನೇನು ಪೂರ್ವದಂಚಿನಲ್ಲಿ ಮುಳುಗುವ ಹಂತದಲ್ಲಿದ್ದಾನೆ!
ಆ ಕತ್ತಲು ಬೆಳಕಿನ ಆಟದಲ್ಲಿ- ಪ್ರಕೃತಿಯ ಅದ್ಭುತ- ರೌದ್ರ-ರಮಣೀಯ ಸೌಂಧರ್ಯವನ್ನು ಆಸ್ವಾದಿಸುತ್ತಾ…, ಕುರುಚಲು ಗಿಡಗಳನ್ನು ಲಾಘವವಾಗಿ ಸರಿಸುತ್ತಾ ಮುನ್ನಡೆಯುತ್ತಿದ್ದಾನೆ- ಭಟ್ಟಿ!
ಕತ್ತಲ ಕೀಟಗಳ ಗಿರ್‌ಗಿರ್ ನಾದದೊಂದಿಗೆ ನವಿಲುಗಳ ಕೂಗು, ನರಿ, ತೋಳ, ಆನೆಗಳ ಘೀಂಕಾರ, ಹುಲಿ ಸಿಂಹಗಳ ಘರ್ಜನೆ, ಕಾಡು ಪ್ರಾಣಿಗಳ ಓಡಾಟದ ಸದ್ದು…!
ಹೆದರಲು ಅವನೇನು ಸಾಮಾನ್ಯ ಮನುಷ್ಯನೇ…?
ಭಟ್ಟಿ- ಅವನು!
ಬಲಗೈಯ್ಯಲ್ಲಿ ಖಡ್ಗವನ್ನು ಹಿಡಿದು…, ಎಡಗೈಯಿಂದ ಗಿಡಗಳನ್ನು ಸರಿಸಿ…, ಸರಸರನೆ ನಡೆದ- ಯಾರದೋ ಕರೆಗೆ ಓಗೊಟ್ಟು!
ಅದೋ…, ಅಲ್ಲಿ…, ದೂರದಲ್ಲಿ ಒಂದು ಪಾಳು ಮಂಟಪ!
ಅದೆಷ್ಟು ಇತಿಹಾಸಗಳು ನಡೆದು ಹೋಗಿದೆಯೋ…!
ಅದೆಷ್ಟು ನಾಗರೀಕತೆಗಳು ಮುಳುಗಿ ಹೋಗಿವೆಯೋ!
ಇಡುವ ಒಂದೊಂದು ಹೆಜ್ಜೆಯೂ ಅದೆಷ್ಟು ಘಟನೆಗಳಿಗೆ ಸಾಕ್ಷಿಯಾಗಿತ್ತೋ…!
ಕಾಡು ಬಳ್ಳಿಗಳು, ಹುತ್ತಗಳು, ಜೇಡ- ಕ್ರಿಮಿ- ಕೀಟಗಳಿಂದ ಆವರಿಸಲ್ಪಟ್ಟ ಗುಡಿ!
ನಿಧಾನವಾಗಿ ಬಾಗಿಲು ತೆರೆದು ಒಳನುಗ್ಗಿದ ಭಟ್ಟಿ!
ಯಾವ ಶಿಲ್ಪಿ ಕಡೆದನೋ… ದೇವಿಯೇ ಬಂದು ನಿಂತು ಶಿಲೆಯಾದಳೋ… ಅದ್ಭುತವಾದ ವಿಗ್ರಹ!
ಹೃದಯದಲ್ಲಿ ಉಕ್ಕಿದ ಭಕ್ತಿ- ಸ್ತೋತ್ರಗಳಾಗಿ ಹೊರಹೊಮ್ಮಿದವು!
ಭಟ್ಟಿ…., ಅಸಾಮಾನ್ಯ ದೇವೀಭಕ್ತ!
ಈ ಸ್ಥಳದಲ್ಲೇನೋ ಮಹಿಮೆಯಿದೆ… ಒಳಮನಸ್ಸಿನ ಮಾತಿನಂತೆ ಗುಡಿಯ ಸುತ್ತಲೂ ಪರೀಕ್ಷಿಸಿ ನೊಡಿದ!
ಒಂದು ಪಾಳು ಬಾವಿ!
ಮೂರು ಕಂಬಗಳನ್ನು ಹೊಂದಿರುವ ಬಾವಿಯ ಸುತ್ತಲೂ ಬಳೆಯಾಕಾರದ ಕಬ್ಬಿಣದ ಕಂಬಿ! ಕಂಬಿಯಮೇಲೆ ಬೇರೆಬೇರೆಯಾಗಿ ಕಟ್ಟಲ್ಪಟ್ಟ- ನೇತಾಡುತ್ತಿರುವ ಏಳು ಹಗ್ಗಗಳು!
ಇಣುಕಿ ನೋಡಿದಾಗ ನೀರಿನ ಮಧ್ಯದಲ್ಲಿ ತ್ರಿಶೂಲ!
ಕುತೂಹಲದಿಂದ ಸುತ್ತಲೂ ಪರೀಕ್ಷಿಸಿದಾಗ…, ಕಪ್ಪು ಹಲಗೆಯಮೇಲೆ ಬರಹವೊಂದು ಕಾಣಿಸಿತು!
“ಬಾವಿಯನ್ನು ಸುತ್ತಿರುವ ಹಗ್ಗಗಳನ್ನು ಒಂದೇ ಏಟಿಗೆ ಕತ್ತರಿಸಿ- ಯಾರು ತ್ರಿಶೂಲಕ್ಕೆ ಶಿರವನ್ನು ಒಡ್ಡುತ್ತಾರೋ… ದೇವಿ ಪ್ರತ್ಯಕ್ಷಳಾಗುತ್ತಾಳೆ!”
ವಿಕ್ರಮಾದಿತ್ಯನಿಂದಲ್ಲದೆ ಯಾರಿಂದ ಸಾಧ್ಯ?
ಸಾಹಸಿಕ ಕೃತ್ಯಗಳಿಗೆ ಸಂದರ್ಭವನ್ನು ಒದಗಿಸುವವನು ಭಟ್ಟಿ! ಸಾಹಸಿಕ ಕಾರ್ಯಗಳನ್ನು ಮಾಡುವವನು ವಿಕ್ರಮಾದಿತ್ಯ!
ದೇವೀವಿಗ್ರಹದಮುಂದೆ ದೀರ್ಘದಂಡ ನಮಸ್ಕಾರ ಮಾಡಿ ಅಣ್ಣನನ್ನು ಕರೆತರಲು ಹೊರಟ ಭಟ್ಟಿ…,
ನಕ್ಕರು ದೇವಿ!
*
“ಬೇರೆಬೇರೆಯಾಗಿ ಸುತ್ತಲೂ ಹರಡಿರುವ ಹಗ್ಗವನ್ನು ಒಂದೇ ಏಟಿನಲ್ಲಿ ಹೇಗೆ ಕತ್ತರಿಸಲೋ ಭಟ್ಟಿ!” ಎಂದ ವಿಕ್ರಮಾದಿತ್ಯ!
“ಅದಕ್ಕಲ್ಲವೇ ನಾನಿಲ್ಲಿ…!” ಎಂದು ಹೇಳಿ ಏಳೂ ಹಗ್ಗಗಳನ್ನು ಜಡೆಯಂತೆ ಹೆಣೆದು- ಎಳೆದು ಹಿಡಿದ ಭಟ್ಟಿ!
ಅದೊಂದು ವಿಚಿತ್ರವಾದ ಚಾತುರ್ಯದಲ್ಲಿ ಖಡ್ಗವನ್ನು ಬೀಸಿ- ಒಂದೇ ಏಟಿಗೆ ಹಗ್ಗವನ್ನು ಕತ್ತರಿಸಿ, ಹಿಂದುಮುಂದು ಯೋಚಿಸದೆ ತ್ರಿಶೂಲಕ್ಕೆ ತಲೆಯನ್ನು ಒಡ್ಡಿ- ಹಾರಿದ ವಿಕ್ರಮಾದಿತ್ಯ!
ಎರಡು ಕರಗಳು ಅವನನ್ನು ಬಾಚಿ ದಡದಲ್ಲಿ ನಿಲ್ಲಿಸಿತು!
ಅದ್ಭುತಾನಂದದಲ್ಲಿ ತೇಲಾಡಿದರು ಅಣ್ಣ ತಮ್ಮಂದಿರು!
“ಹೇಳಿ! ನನ್ನನ್ನು ನಂಬಿ ನೀವು ಕೈಗೊಂಡ ಈ ಅತಿ ಸಾಹಸಕ್ಕೆ ಪ್ರತಿಫಲವಾಗಿ ನಿಮಗೇನು ಕೊಡಲಿ?” ಎಂದರು ದೇವಿ.
“ನೀವು ನಮ್ಮ ಪ್ರತ್ಯಕ್ಷ ದೇವತೆಯಾಗಿರಬೇಕು…, ಮನಸ್ಸಿನಲ್ಲಿ ನೆನೆದಾಗಲೆಲ್ಲಾ ಪ್ರತ್ಯಕ್ಷಳಾಗಿ ನಮ್ಮನ್ನು ಕಾಪಾಡುತ್ತಿರಬೇಕು!” ಎಂದರು.
“ತಥಾಸ್ತು!” ಎಂದರು ದೇವಿ.
*
ಕಾಲಚಕ್ರ ನಿಲ್ಲುವುದೇ…?
ಕ್ಷಣ ಕ್ಷಣವೂ ಇತಿಹಾಸ!
ಹೀಗಿರುವಾಗ…, ದೇವೇಂದ್ರನಿಂದ ವಿಕ್ರಮಾದಿತ್ಯನಿಗೊಂದು ಕರೆ ಬಂದಿತು!
ನಾಟ್ಯಕಲಾ ಚತುರರಾದ ಅಣ್ಣ ತಮ್ಮಂದಿರಿಬ್ಬರೂ ದೇವಲೋಕಕ್ಕೆ ಬರಬೇಕು! ನಾಟ್ಯಮಯೂರಿಯರಾದ ರಂಬೆ ಊರ್ವಶಿಯರಲ್ಲಿ ಯಾರು ಶ್ರೇಷ್ಟರೆಂದು ಸಾಬೀತು ಪಡಿಸಬೇಕು!
“ಅಣ್ಣಾ…! ಇದಕ್ಕೆ ಇಬ್ಬರ ಅಗತ್ಯವಿಲ್ಲ! ನೀನು ಹೋಗಿ ಬಾ!” ಎಂದ ಭಟ್ಟಿ!
ತಮ್ಮನಿಗೆ ಸಾಮ್ರಾಜ್ಯವನ್ನು ಒಪ್ಪಿಸಿ ದೇವಲೋಕಕ್ಕೆ ಹೋದ ವಿಕ್ರಮಾದಿತ್ಯ!
ರಂಭೆ ಊರ್ವಶಿಯರಿಬ್ಬರ ಕೈಗೂ ಹೂಗೊಂಚಲೊಂದನ್ನು ಕೊಟ್ಟು ನಾಟ್ಯ ಮಾಡಲು ಹೇಳಿದ!
ಸ್ವಲ್ಪ ಸಮಯದಲ್ಲಿಯೇ ಆ ಎಂದು ಚೀರುತ್ತಾ…, ರಕ್ತ ಒಸರುತ್ತಿರುವ ಬೆರಳನ್ನು ಚೀಪುತ್ತಾ ಓಡಿದಳು ಊರ್ವಶಿ!
ಇಬ್ಬರ ಹೂಗೊಂಚಲಲ್ಲೂ ಇರಿಸಲಾಗಿದ್ದ ಚೇಳು ಕುಟುಕಿದ್ದೋ…, ರಕ್ತ ಒಸರುತ್ತಿರುವುದೋ ಅರಿಯದೆ ತನ್ಮಯಳಾಗಿ ನಾಟ್ಯವನ್ನು ಮಾಡುತ್ತಿದ್ದಳು ರಂಭೆ!
ಅಸಾಮಾನ್ಯವಾದ ಸಮಸ್ಯೆಯೊಂದಕ್ಕೆ ಸುಲಭ ಪರಿಹಾರವನ್ನು ಕಂಡ ವಿಕ್ರಮಾದಿತ್ಯನಿಗೆ ಸಿಂಹಾಸನವೊಂದನ್ನು ನೀಡಿ…,
“ಸಾವಿರ ವರ್ಷ ಈ ಸಿಂಹಾಸನದಲ್ಲಿ ಕುಳಿತು ಸಾಮ್ರಾಜ್ಯವನ್ನು ಆಳುವವನಾಗು!” ಎಂದು ವರವನ್ನು ನೀಡಿದ ದೇವೇಂದ್ರ!
*
ದೇವಲೋಕದ ಸಮಾಚಾರವನ್ನು ಅಣ್ಣನಿಂದ ಕೇಳಿ ಸಂತೃಪ್ತಿಗೊಂಡ ಭಟ್ಟಿ…,
“ಅಣ್ಣಾ…! ಈ ಘನ ಸಿಂಹಾಸನದಮೇಲೆ ಕುಳಿತು ಸಾವಿರವರ್ಷ ಸಾಮ್ರಾಜ್ಯವನ್ನು ಆಳುವ ವರವನ್ನು ದೇವೇಂದ್ರನಿಂದ ಪಡೆದು ಬಂದ ನೀನು…, ಈ ತಮ್ಮನಿಗಾಗಿ ಯಾವ ವರವನ್ನು ಕೇಳಿದೆ?” ಎಂದು ಕೇಳಿದ!
ನಿರುತ್ತರನಾದ ವಿಕ್ರಮಾದಿತ್ಯ!
ಅಸಹನೆಗೊಂಡ ಭಟ್ಟಿ!
ಅಂದು ಸಂಜೆ ದೇವೀಸ್ಥಾನಕ್ಕೆ ಬಂದ!
ವಾಯುವಿಹಾರಕ್ಕೆ ಹೊರಟಿದ್ದ ದೇವಿ ವಿಶಾದ ಮುಖನಾದ ಭಟ್ಟಿಯನ್ನು ಕಂಡು…,
“ಅಲ್ಲ! ಯಾರಿದು? ಅತಿ ಚತುರನಾದ ಭಟ್ಟಿಯೋ? ಭಟ್ಟಿಯನ್ನು ಆವರಿಸಿದ ಮಾಯೆಯೋ?” ಎಂದರು.
“ಅಲ್ಲಯೋ ದೇವಿ! ದೇವೇಂದ್ರನಿಂದ ಸಾವಿರವರ್ಷ ಬದುಕುವ ವರವನ್ನು ಪಡೆದುಬಂದ ನನ್ನ ಅಣ್ಣ ನನಗಾಗಿ ಏನನ್ನೂ ಕೇಳಲಿಲ್ಲ!” ಎಂದ!
“ಅದಕ್ಕೆ?” ಎಂದರು ದೇವಿ.
“ನಾನು ಎರಡುಸಾವಿರ ವರ್ಷ ಬದುಕುವಂತೆ ವರವನ್ನು ಕೊಡು!” ಎಂದ.
“ಅಸಾಧ್ಯ!” ಎಂದರು ದೇವಿ.
ತಲೆಯೆತ್ತಿ ದೇವಿಯನ್ನು ದೃಢವಾಗಿ ನೋಡಿದ ಭಟ್ಟಿ..,
“ದೇವಿಗೂ ಅಸಾಧ್ಯವೇ?” ಎಂದ.
ಭಟ್ಟಿಯ ಉದ್ದೇಶವನ್ನು ಅರಿತ ದೇವಿ ಮುಗುಳುನಕ್ಕರು…,
“ಅಸಾಧ್ಯ ಅನ್ನುವುದು ಇಲ್ಲವಾದರೆ…, ನಿನ್ನ ಅಣ್ಣನ ತಲೆಯನ್ನು ಕಡಿದುಕೊಂಡು ಬಾ…, ನಿನಗೆ ಎರಡುಸಾವಿರ ವರ್ಷ ಬದುಕುವ ವರವನ್ನು ಕೊಡುತ್ತೇನೆ!” ಎಂದರು ದೇವಿ!
ಗಡಿಬಿಡಿಯಿಂದ ಹೊರಟ ಭಟ್ಟಿ!
*
ತಮ್ಮನನ್ನು ಹೇಗೆ ಸಂತೈಸಲಿ ಎನ್ನುವ ಚಿಂತೆಯಲ್ಲಿ ಕುಳಿತಿದ್ದ ವಿಕ್ರಮಾದಿತ್ಯ!
“ಅಣ್ಣಾ…! ನಿನ್ನ ತಲೆಯನ್ನು ಕೊಡು! ಬೇಗ!” ಎನ್ನುತ್ತಾ ಬಂದ ಭಟ್ಟಿ!
ಗೊಂದಲದಿಂದ ನೋಡಿದ ವಿಕ್ರಮಾದಿತ್ಯ!
“ನಿನ್ನ ತಲೆ ಕಡಿದುಕೊಂಡು ಹೋದರೆ ಎರಡುಸಾವಿರ ವರ್ಷ ಬದುಕುವ ವರವನ್ನು ದೇವಿ ನನಗೆ ಕರುಣಿಸಲಿದ್ದಾರೆ!” ಎಂದ.
ಪ್ರಾಯಶ್ಚಿತ್ತವಾಗಿ ಇದಕ್ಕಿಂತ ಉತ್ತಮವಾದುದೇನು- ಅಂದುಕೊಂಡನೋ…, ತಮ್ಮ ತಮಾಷೆಯಾಗಿ ಹೇಳುತ್ತಿದ್ದಾನೆ- ಅಂದುಕೊಂಡನೋ…,
“ಕಡಿದುಕೋ!” ಎಂದ ವಿಕ್ರಮಾದಿತ್ಯ!
ನಿರ್ದಾಕ್ಷಿಣ್ಯವಾಗಿ ಅಣ್ಣನ ತಲೆಯನ್ನು ಕಡಿದು- ತಲೆಯೊಂದಿಗೆ ದೇವೀಸ್ಥಾನಕ್ಕೆ ಓಡಿದ ಭಟ್ಟಿ!
*
ಎರಡುಸಾವಿರ ವರ್ಷ ಬದುಕುವ ವರವನ್ನು ಕೊಟ್ಟರೂ…, ತನ್ನನ್ನು ಗೇಲಿ ಮಾಡುವಂತೆ ಗಹಗಹಿಸಿ ನಗುತ್ತಿರುವ ಭಟ್ಟಿಯನ್ನು ಕಂಡು ಕ್ಷುಭಿತಗೊಂಡರು ದೇವಿ- ಅವನ ಅಪಾರ ಸಾಮರ್ಥ್ಯದ ಅರಿವಿರುವುದರಿಂದ ಒಳಗೆ ಮುಗುಳುನಕ್ಕರು!
“ಅಲ್ಲಯೋ ದೇವೀ…, ತಾನು ಕೊಟ್ಟ ಸಿಂಹಾಸನದಲ್ಲಿ ಕುಳಿತು ಸಾವಿರವರ್ಷ ಆಳ್ವಿಕೆ ನಡೆಸು ಎಂದು ನನ್ನಣ್ಣನಿಗೆ ವರವನ್ನು ಕೊಟ್ಟ ದೇವೇಂದ್ರ! ಒಂದು ದಿನವೂ ಆಗಿಲ್ಲ!” ಎಂದು ಅರ್ಥಗರ್ಭಿತವಾಗಿ ದೇವಿಯನ್ನು ನೋಡಿದ!
“ನಾನು ಕೊಟ್ಟ ವರದ ಮೇಲೆ ಸಂಶಯವೇ?” ಎಂದರು ದೇವಿ.
“ಇಲ್ಲದೇವಿ! ಖಂಡಿತಾ ಇಲ್ಲ! ಆದರೆ…!” ಎಂದು ಹೇಳಿ ನಿಲ್ಲಿಸಿದ!
“ಇದು ಹೀಗೆಯೇ ನಡೆಯುತ್ತದೆಂದು ನನಗೆ ತಿಳಿಯದೇ ಭಟ್ಟಿ? ಇದೆಲ್ಲವೂ ನಿಯಮ…! ಹೀಗೆಯೇ ನಡೆಯಬೇಕೆಂಬ ನಿಯಮ! ಇದನ್ನು ಅರಿತವರು ದೇವರ ನಿಯಮವನ್ನು ಪರೀಕ್ಷಿಸುವುದಿಲ್ಲ!” ಎಂದರು ದೇವಿ.
“ಹಾಗಿದ್ದರೆ…, ದೇವೇಂದ್ರನ ವರವೂ ಫಲಿಸಬೇಕೆಂಬುದು ನಿಯಮವಲ್ಲವೇ ದೇವಿ?”
“ಹೌದು…! ನೀನು ನಿನ್ನಣ್ಣನಿಗೆ ಕೊಡಲಿರುವ ವರವೂ…!” ಎಂದು ಹೇಳಿ ಭಟ್ಟಿಯನ್ನೊಮ್ಮೆ ಎದೆಗಾನಿಸಿಕೊಂಡು…,
“ಹೊರಡು!” ಎಂದರು ದೇವಿ.
ಅಣ್ಣನ ತಲೆಯೆಲ್ಲಿಯೆಂದು ನೋಡಿದ… ಕಾಣಲಿಲ್ಲ! ಅರ್ಥಗರ್ಭಿತವಾಗಿ ದೇವಿಯನ್ನು ನೋಡಿ ಮುಗುಳುನಕ್ಕ!
ಮಾಯೆ! ಮಹೇಂದ್ರಜಾಲದಲ್ಲಿ ಜಗತ್ವಿಕ್ಯಾತನಾದ ತಾನೇ ಇಷ್ಟುಮಟ್ಟಿನ ಮಾಯೆಗೆ ಒಳಗಾದೆನೆಂದರೆ…, ಸಾಮಾನ್ಯ ಜನರ ಪಾಡೇನು?
ದೇವೀಪಾದವನ್ನು ಹೃದಯದಲ್ಲಿ ಹೊತ್ತು ಮರಳಿದ!
*
“ಇದೆಲ್ಲಿಗೆ ಹೋಗಿದ್ದೆ ಭಟ್ಟಿ? ನಿನಗಾಗಿ ವರವನ್ನು ಕೇಳಲಿಲ್ಲ ಅನ್ನುವ ಸಿಟ್ಟು ಇನ್ನೂ ಹೋಗಿಲ್ಲವೇ?” ಎಂದ ವಿಕ್ರಮಾದಿತ್ಯ!
ತಮ್ಮ ತಲೆಕಡಿದುಕೊಂಡು ಹೋಗಿದ್ದೋ…, ತಮ್ಮನಿಗೆ ದೇವಿಕೊಟ್ಟ ವರದಬಗ್ಗೆಯೋ ವಿಕ್ರಮಾದಿತ್ಯ ಅರಿಯ!
“ನಿನಗೆ ದೇವೇಂದ್ರ ಕೊಟ್ಟ ವರವೇನು?” ಎಂದು ಕೇಳಿದ ಭಟ್ಟಿ!
“ಈ ಸಿಂಹಾಸನದಲ್ಲಿ ಕುಳಿತು ಸಾವಿರವರ್ಷ ಸಾಮ್ರಾಜ್ಯವನ್ನು ಆಳುವ ವರ!”
“ಹಾಗಿದ್ದರೆ…, ಇನ್ನೂ ಒಂದು ಸಾವಿರ ವರ್ಷ ಆಯುಸ್ಸನ್ನು ನಿನಗೆ ಈ ತಮ್ಮ ವರವಾಗಿ ಕೊಡುತ್ತಿದ್ದೇನೆ!” ಎಂದ ಭಟ್ಟಿ!
ಅರ್ಥವಾಗದವನಂತೆ ನೋಡಿದ ವಿಕ್ರಮಾದಿತ್ಯ!
“ಈ ಸಿಂಹಾಸನದಲ್ಲಿ ಕುಳಿತು ಸಾವಿರ ವರ್ಷ ಅಲ್ಲವೇ? ವರ್ಷದಲ್ಲಿ ಆರುತಿಂಗಳು ಈ ಸಿಂಹಾಸನದಲ್ಲಿ ಕುಳಿತು ಸಾಮ್ರಾಜ್ಯವನ್ನು ಆಳು! ಉಳಿದ ಆರುತಿಂಗಳು ಪ್ರಜೆಗಳೊಂದಿಗೆ ಬೆರೆತು- ಕಾಡು ಮೇಡು ಪ್ರಕೃತಿಯನ್ನು ಅನುಭಾವಿಸು!” ಎಂದ ಭಟ್ಟಿ!
*
ಇತಿಹಾಸವೋ ಐತಿಹ್ಯವೋ! ವಾಸ್ತವವೋ ಕಲ್ಪನೆಯೋ…!
ಓ ಮನಸ್ಸೇ…!
ಈ ಪ್ರಪಂಚವೆಷ್ಟು ಅದ್ಭುತ!
ಅಲ್ಲವೇ…, ಇಷ್ಟಕ್ಕೂ ಭಟ್ಟಿಯೇಕೆ ಹೀಗೆ ನೆನಪಾದ?
ಯಾರಿಗೆ ಗೊತ್ತು- ಕಲಿಗಾಲದಲ್ಲಿ ಭಟ್ಟಿ ಒಬ್ಬ ಕಥೆಗಾರನಾಗಿ ಹುಟ್ಟಲಿದ್ದಾನೆ ಅನ್ನುವ ಅರಿವು ಮಾಯೆಯಿಂದ ಮುಚ್ಚಲ್ಪಟ್ಟಿದೆಯೋ ಏನೋ!!
Comments
Post a Comment