ಭ್ರಮೆ- ಭಾವ- ಏಕಾಂತ!
ಭ್ರಮೆ- ಭಾವ- ಏಕಾಂತ!
೧
ಪಾಪ ನನ್ನ ಉಷೆ!
ನನ್ನ ಭ್ರಮೆಗೆ ಅವಳ ರೂಪ ಕೊಟ್ಟು ನಾನವಳಿಗೆ ಕೊಟ್ಟ ಹಿಂಸೆ…!
ಎಷ್ಟು ಬೇಡಿದಳು- ಗೋಗರೆದಳು…, ನಾನಲ್ಲವೋ ನಿನ್ನ ಉಷೆ- ಬಿಟ್ಟುಬಿಡು ನನ್ನ!
ಬಿಡಲಿಲ್ಲ ನಾನು!
ಕಾಡಿದೆ…, ಅವಳಿಗಿಂತ ಬೇಡಿದೆ- ಗೋಗರೆದೆ!
ಆದರದು ಅವಳೇ ನನ್ನ ಉಷೆಯೆಂಬ ನಂಬಿಕೆಯಿಂದಲೇ ಹೊರತು…!
ಏನೋಪ್ಪ!
ಪ್ರೇಮಿಯಿಂದ ತಾಯಿಗೆ ಎಷ್ಟು ಚಂದದಲ್ಲಿ ಬಡ್ತಿ ಹೊಂದಿದಳು!
ನನ್ನ ಸಹಕಾರವಿರಲಿಲ್ಲವೇ…?
ಇತ್ತು!
ಯಾಕೆ?
ಅವಳು ಉಷೆ- ಪ್ರೇಮ...!
ನಾನು ಅನಿರುದ್ಧನಲ್ಲ- ಭ್ರಮೆ!
೨
ಸಿಗಬಾರದಿತ್ತು- ಹಂಸ!
ನೋವು ನೋವು ನೋವು…, ನೋವು ಮಾತ್ರ- ನನ್ನಿಂದ…, ನಾನು ಅತಿ ಹೆಚ್ಚು ಪ್ರೀತಿಸುವವರಿಗೆ!!
ಆದರೆ…, ಅವರ ನೋವಿಗೆ ಕಾರಣ- ನನಗೆ ಕಾರಣವೇ ಅಲ್ಲ ಅನ್ನುವ ವಿಪರ್ಯಾಸದಲ್ಲಿ ನನ್ನ ನೋವಿದೆ!
ನನ್ನ ಜೀವನವೇ ಹೀಗೆಯೇ ಏನೋ!
ಹುಡುಕಾಟ ನಿಲ್ಲುವುದಿಲ್ಲ!
ಇವಳೇ ಕೊನೆ ಎಂದು ಅದೆಷ್ಟು ಕೊನೆಗಳು!
ಅಂತ್ಯವಿಲ್ಲದ ಕೊನೆಗಳಿಗೊಂದು ಅಂತ್ಯ- ಹಂಸ!
ಹಂಸ! ನನ್ನ ಮುಗ್ಧ ಪ್ರೇಮ!
ನನ್ನ ಮನಸ್ಸನ್ನು ಅರಿಯುವವಳೊಬ್ಬಳು ಬೇಕೆನ್ನುವ ನನ್ನ ಹುಡುಕಾಟ!
ಮುಗ್ಧತೆಯೇ ವಿಜೃಂಭಿಸಿ…, ಇನ್ನು ಮುಂದೆ ಯಾರೊಬ್ಬರೂ ಹತ್ತಿರವೇ ಬರದಂತೆ- ತಾನೂ ದೂರವಾಗಿ ಹೋದಳು- ದೂರ ಹೋಗುವುದೆಂದರೆ…, ಬಿಟ್ಟು ಹೋಗುವುದಲ್ಲ- ಮನಸ್ಸು ಅರ್ಥವಾಗದೆ ಒಂದು ಅಂತರ ರೂಪುಗೊಳ್ಳುವುದು!
ನನ್ನ ಮನಸ್ಸು…, ನನ್ನೊಬ್ಬನಿಗೆ ಸ್ವಂತ!
ಯಾರೊಬ್ಬರ ಅಭಿಪ್ರಾಯವನ್ನೂ ಬದಲಿಸಲು ಪ್ರಯತ್ನಿಸದ ನನ್ನ ಹುಡುಕಾಟದ ಅಂತ್ಯ…,
ಏಕಾಂಗಿ ನಾನೆಂಬ ಅರಿವು- ಎಲ್ಲರೂ ಇದ್ದೂ!!
ಈಗ…,
ನೆಮ್ಮದಿ!
೩
ಕನಸು ಕಣ್ಣಿನ ಹುಡುಗ ನಾನು- ಈಗ ಹುಡುಗನೆನ್ನಲಾಗುವುದಿಲ್ಲ- ಐವತ್ತರ ಮಧ್ಯವಯಸ್ಕ! ವಾಸ್ತವಕ್ಕಿಂತ ಭ್ರಮೆಯೇ ನನಗಿಷ್ಟ! ವಾಸ್ತವದ ಪರಿಚಯ ಇಲ್ಲದವನಲ್ಲ! ವಾಸ್ತವ ಇಷ್ಟವಿಲ್ಲವಷ್ಟೆ!
ಪ್ರತಿಯೊಬ್ಬರ ಅನುಭವ, ದೃಷ್ಟಿಕೋನಗಳು ಅವರವರದ್ದು! ಅದನ್ನು ಬದಲಿಸುವುದು ಅಸಾಧ್ಯ- ಪ್ರಯತ್ನಿಸದಿರುವುದು ಒಳ್ಳೆಯದು! ಅವರನ್ನು ಅವರಾಗಿಯೇ ಒಪ್ಪಿಕೊಳ್ಳುವುದು ಅನ್ನುವುದು ಮರೀಚಿಕೆ!
ಉಷೆಯಿಂದ ಪ್ರಾರಂಭವಾಗಿ ಹಂಸದಲ್ಲಿ ಕೊನೆಯಾಗುವ ಕಥೆ ನನ್ನದು! ಹಾಗೆಂದು ಇವರಿಬ್ಬರ ಮಧ್ಯೆ ಬರುವವರಿಗೆ ಮಹತ್ವವಿಲ್ಲವೆ? ಇವರಷ್ಟೇ ಪ್ರಾಮುಖ್ಯತೆಯಿದೆ! ಆರಂಭ- ಕೊನೆ ಇವರಾದ್ದರಿಂದ ಉಳಿದವರು ತೆರೆಮರೆಯಲ್ಲಿರುವಂತೆ ಕಾಣಿಸುತ್ತಾರೆ!
ಅತಿ ಮುಖ್ಯ ವಿಷಯವೆಂದರೆ…,
ಉಷೆಯಿಂದ ಹಂಸದವರೆಗೆ ಯಾರೊಬ್ಬರೂ ನನ್ನನ್ನು ಬಿಟ್ಟು ಹೋದವರಲ್ಲ- ಆಗುವುದಿಲ್ಲ!
ಹೋಗಲೂ ಆಗದೆ…, ಅರಿಯಲೂ ಆಗದೆ…,
ಅದೇ ನಾನು…,
ಭಾವ- ಭ್ರಮೆ!
೪
ಎಷ್ಟು ಚಂದ ಅವಳು! ಪೂರ್ಣಚಂದ್ರನ ಮುಖ! ಪ್ರೇಮ ಹುಟ್ಟದಿರುವುದು ಹೇಗೆ?
ನಿಜ! ಪ್ರೇಮ ಹುಟ್ಟದಿರುವುದು ಹೇಗೆ?
ಹುಟ್ಟಿತು!
ನಿವೇದಿಸಿದೆ!
ನಿಷೇಧಿಸಿದಳು!
ಕಾರಣ…?
ಯಾಕೆ ಒಪ್ಪಬೇಕು?
ಅವಳೇನೋ ಪೂರ್ಣಚಂದ್ರ!
ನಾನು?
ಕವಿಯಾದೆ!
ಅವಳನ್ನು ನೋಡುವಾಗ, ಅವಳೊಂದಿಗೆ ಒಡನಾಡುವಾಗ ಅದ್ಭುತ ಕವಿ ನಾನು- ಮನಸ್ಸಿನಿಂದ!
೫
ಹುಣ್ಣಿಮೆಯಂತೆಯೇ ಅಮವಾಸ್ಯೆ!
ರಾತ್ರಿ…, ನಗರದಿಂದ ಬೇರೆಯಾಗಿ…, ಅಂಗಳದಲ್ಲಿ…, ಅಂಗಾತನೆ ಮಲಗಿ ಆಕಾಶವನ್ನು ನೋಡುತ್ತಾ ಮಲಗುವುದರಲ್ಲಿರುವ ಆನಂದ- ಅವಳು!
ನನ್ನ ಕಪ್ಪು ಸುಂದರಿ!
ಅಚ್ಚೋ…! ಎಷ್ಟು ಚಂದ!
ಅವಳು ಕವಿತೆ! ನಾನು ಆಸ್ವಾದಕ!
೬
“ಒಂದಿಷ್ಟು ಪ್ರೇಮ… ಬೇರೇನೂ ಬೇಡ ನನಗೆ!” ಎಂದಳು.
“ಅದರ ಹೊರತು ನನ್ನಲ್ಲಿ ಏನೆಂದರೆ ಏನೂ ಇಲ್ಲ!” ಎಂದೆ.
೭
“ಮದುವೆಯಲ್ಲಿ ನವ ದಂಪತಿಗಳಿಗೆ ತೋರಿಸುವ ನಕ್ಷತ್ರ ನಾನು!” ಎಂದಳು.
“ನಾನು ವಸಿಷ್ಠ!” ಎಂದೆ.
೮
ಹೃದಯದತುಂಬ ಪ್ರೇಮ!
ಪರಸ್ಪರ ಆಕರ್ಷಣೆ!
ಬದುಕಲ್ಲಿ ಅಂತಾ ಕೊರತೆಯೇನೂ ಇಲ್ಲದಿದ್ದರೂ…,
ಒಬ್ಬರಲ್ಲಿ ತೆರೆದುಕೊಳ್ಳಬೇಕೆಂಬ ಆಸೆ ಅವಳಿಗೆ!
ನಾನು ನಂಬಿಕೆಯಾದೆ!
೯
ಇವಳದೊಂದು ವಿಚಿತ್ರ ಪ್ರೇಮ!
ನಾನು ಪ್ರೇಮಿಸುವವರು ಬೇರೆ ಯಾರನ್ನು ಬೇಕಿದ್ದರೂ ಪ್ರೇಮಿಸಬಹುದು ಅನ್ನುವುದು ನನ್ನ ಭಾವವಾದರೆ…, ತಾನು ಯಾರನ್ನು ಬೇಕಿದ್ದರೂ ಪ್ರೇಮಿಸಬಹುದು ಆದರೆ ತನ್ನನ್ನು ಪ್ರೇಮಿಸುವವನು ತನ್ನನ್ನು ಮಾತ್ರ ಪ್ರೇಮಿಸಬೇಕು ಅನ್ನುವುದು ಅವಳ ಭಾವ!
ಬಂಧನ- ನನಗಿಷ್ಟವಿಲ್ಲ!
೧೦
ಅವಳಲ್ಲಿನ ವಿಶಾದದ ಮೂಲಕ ನಾನವಳನ್ನು ಪ್ರವೇಶಿಸಿದೆ!
ನನ್ನಲ್ಲಿ ನೆಮ್ಮದಿ ಕಂಡಳು!
ಬದುಕಿನ ಅನುಭವಗಳಲ್ಲಿಯೂ…, ಯೋಚನಾ ಪಥದಲ್ಲಿಯೂ ಸಾಮ್ಯತೆ ಇರುವುದರಿಂದ ಯಾವ ಕಾರಣಕ್ಕೂ ಅಂತರಕ್ಕೆ ಎಡೆಯಿಲ್ಲದವಳು!
ನನ್ನನ್ನು ಸ್ವಲ್ಪವಾದರೂ ಸರಿಯಾದ ರೀತಿಯಲ್ಲಿ ಊಹಿಸಬಲ್ಲವಳು…, ಪ್ರತಿ ಭಾವಾಂತವೂ ಕಣ್ಣೀರು- ಇವಳು ನನ್ನ ಹೊರತಲ್ಲ!
೧೧
ಎಲ್ಲೋ ಕಳೆದು ಹೋಗಿದ್ದ ಹೃದಯ ಬಿದ್ದು ಸಿಕ್ಕ ಅನುಭವ- ಇವಳು- ನನ್ನ ಮುಗ್ಧ ಪ್ರೇಮ!
ಪ್ರಪಂಚದಲ್ಲಿಯೇ ಎಲ್ಲೂ ಸಿಗದ ಅಪರೂಪದ ಸೃಷ್ಟಿ!
ನಿನ್ನ ಮನಸ್ಸು ನಾನು ಎಂದಳು! ನಿನ್ನ ಬದುಕಿಗೆ ಸಂಬಂಧಪಟ್ಟ ಎಲ್ಲವೂ ನನಗೆ ತಿಳಿಯಬೇಕು ಅಂದಳು!
ನನ್ನ ಪರಿಚಯವನ್ನು ಮಾಡಿಕೊಡುತ್ತೇನೆ…, ಆದರೆ ನನ್ನ ಬದುಕಿಗಂಟಿದ ಹೆಣ್ಣಿನಬಗ್ಗೆ ತಿಳಿಸುವುದಿಲ್ಲ ಎಂದೆ!
ಹೆಣ್ಣಿನ ವಿಷಯದಲ್ಲಿ ನಾನೇನೋ ಅದನ್ನೂ ಪರಿಚಯಿಸುತ್ತೇನೆ- ವೈಯುಕ್ತಿಕವಾಗಿ ಹೆಣ್ಣಿನ ಕಡೆಯಿಂದ ಹೇಳುವುದಿಲ್ಲ- ತಿಳಿಸುವುದಿಲ್ಲ- ಹೆಣ್ಣಿನೊಂದಿಗಿನ ನನ್ನ ನಿಯತ್ತನ್ನು ಪರೀಕ್ಷಿಸದಿರು ಅನ್ನುವ ಕರಾರು!
ಒಪ್ಪಿದಳು!
ಆದರೆ…, ಹೆಣ್ಣು ಹೃದಯ!
ಯಾರೊಂದಿಗೆ ಹೇಗೆ ಅನ್ನುವುದೇ ಬೇಕು!
ನನ್ನ ಮನಸ್ಸಿನ ಕಡೆಯಿಂದ ಅವಳು ಯೋಚಿಸಲೇ ಇಲ್ಲ!
ಅವಳೆಷ್ಟು ಮುಗ್ಧೆಯೆಂದರೆ…,
ಪ್ರತಿ ಹೆಣ್ಣಿನ ವಿಷಯದಲ್ಲಿ ನಾನೇ ಹೊಣೆಗಾರ ಅನ್ನುವುದನ್ನು ಒಪ್ಪಲು ಅವಳು ತಯಾರಿಲ್ಲ!
ತನ್ನನ್ನೂ ಸೇರಿ ಎಲ್ಲಾ ಹೆಣ್ಣನ್ನೂ ಒಂದೇ ರೀತಿಯಲ್ಲಿ ತೀರ್ಮಾನಿಸಿದಳು!
ನನ್ನ ಹೃದಯಕ್ಕೆ ವಿರುದ್ಧ ಅದು!
ನನ್ನ ಬದುಕಿಗಂಟಿದ ಪ್ರತಿ ಹೆಣ್ಣೂ ಅಪರಂಜಿ…, ಅಷ್ಟು ಪರಿಶುದ್ಧ!
ಅವರ ಬದುಕಿಗೆ ಕಳಂಕ ಅಂಟುವುದು ನನಗಿಷ್ಟವಿಲ್ಲ!
೧೨
ಹೆಣ್ಣು ಹೃದಯಕ್ಕೆ ನನ್ನ ಗೌರವವಿದೆ.
ತಮ್ಮೊಂದಿಗಿನ ನನ್ನನ್ನು ಯಾವ ಹೆಣ್ಣೂ ನಿಷೇಧಿಸಲಾರಳು!
ಹಾಗೆಯೇ…,
ಇತರರೊಂದಿಗಿನ ನನ್ನನ್ನು ಯಾವ ಹೆಣ್ಣೂ ಒಪ್ಪಲಾರಳು!
ಪ್ರೇಮ ಎಷ್ಟುಕಡೆಯಿಂದ ಬರುತ್ತದೋ ಬರಲಿ…, ಅನ್ನುವವ ನಾನು!
ಹಾಗೆಯೇ…,
ನನ್ನ ಪ್ರೇಮಕ್ಕೆ ಎಲ್ಲೆಯಿಲ್ಲ!
ಯಾರೊಬ್ಬರಿಗೂ ನೀನೊಬ್ಬಳೇ ನನ್ನ ಪ್ರೇಮ ಎಂದೋ…,
ಯಾರೊಬ್ಬರಿಗೂ ನಿನ್ನೊಬ್ಬಳ ಪ್ರೇಮ ಮಾತ್ರ ಶ್ರೇಷ್ಠ ಎಂದೋ…,
ಯೋರೊಬ್ಬರಿಗೂ ನಿನ್ನೊಬ್ಬಳ ಮೇಲಿನ ನನ್ನ ಪ್ರೇಮ ಮಾತ್ರ ನಿಜ ಎಂದೋ ಹೇಳಲಾರೆ ಅನ್ನುವುದರ ಫಲಿತಾಂಶ…,
ನಾನೊಬ್ಬ ಏಕಾಂಗಿ!
ಹಾಗೆಯೇ…,
ಪ್ರತಿಯೊಬ್ಬರಲ್ಲಿಯೂ ನಾನಿದ್ದೇನೆ ಅನ್ನುವ ಸಾರ್ಥಕತೆಯೂ!
ನನ್ನ ಪ್ರೇಮ- ಹೆಣ್ಣಿನ ನೋವು!
ಹೆಣ್ಣಿನ ಪ್ರೇಮ- ನನ್ನ ಸಂರಕ್ಷಣೆ!
…., ನನ್ನ ಬದುಕಿನ ವಿರೋಧಾಭಾಸ!
ಈಗ...,
ಹುಟ್ಟಿದ ಪ್ರೇಮವನ್ನು ನಾನು ಪ್ರಕಟಿಸುವುದಿಲ್ಲ- ಅವರೂ!
👌👌👌
ReplyDeleteಅಬ್ಬಾ ಎಷ್ಟುದಿವಸಕ್ಕೆ ಒಂದು ಕಥೆ ಬರೆದರಪ್ಪ ಕಥೆಗಾರರೇ ಕಥಾಲೋಕಕ್ಕೆ ತುಪ್ಪ ಸುರಿದಹಾಗೆ ಆಯಿತು.ಏನು ಬರೀತಿರಪ್ಪಾ ಹೃದಯಗಳ ಮೆದ್ದು ಅದರ ಸ್ವಾದ ಈ ನಿಮ್ಮ ಕಥಾಲೋಕ.ಹೀಗೆ ವಾರಕ್ಕೆ ಒಂದಾದರು ಬರೀರಿ ಕಥೆಗರಾರರೆ ಇಲ್ಲ ಕಥೆಗಾರನೆ ಮಾಯಾ ಆದರೆ ತುಂಬಾ ನಷ್ಟ ಕಥಾಜಗತ್ತಿಗೆ ತುಂಬಾ ಧನ್ಯವಾದಗಳು ಈ ನಿಮ್ಮ ಬರಹಕ್ಕೆ ಹೆಣ್ಣಿನ ಮೇಲಿನ ನಿಮಗಿರುವ ಅಪಾರ ಗೌರವಕ್ಕೂ ಇನ್ನಷ್ಟು ಬರೆಯಿರಿ ಹಾಗೆ ಬೇಗ ಬನ್ನಿ fb ಪ್ರಪಂಚಕ್ಕೆ😊🌷🙏ಧನೋಸ್ಮಿ 🌷🌷🙏ತುಂಬಾ ಖುಷಿ ಆಯಿತು ನಿಮ್ಮ ತುಂಬಾ ದಿವಸಕ್ಕೆ ನಿಮ್ಮ ಬರಹ ಓದಿ 😊😊🙏
ReplyDeleteಮೆಸೇಜ್ bosster ಖಾಲಿ ಶುಭಸಂಜೆ ಮಿತ್ರ 🌷
ReplyDelete