ಸೀತಾಹೃದಯ!
ಸೀತಾಹೃದಯ ! ರಾಮಾಯಣ - ಮಹಾಭಾರತ ! ಭಾರತದ ಸಾಹಿತ್ಯದ , ಸಂಸ್ಕಾರದ ತಾಯಿಬೇರು ! ಒಂದು ಆದಿಕಾವ್ಯವಾದರೆ ಮತ್ತೊಂದು ಮಹಾಕಾವ್ಯ ! ಅದೆಷ್ಟು ಸಾವಿರ - ಲಕ್ಷ… , ಕವಿಗಳು , ಸಾಹಿತಿಗಳು , ಬರಹಗಾರರು , ವಿಮರ್ಶಕರು ಇದರ " ಬಗ್ಗೆ " ಬರೆದಿದ್ದಾರೋ , " ಇದನ್ನೇ " ತಮ್ಮ ದೃಷ್ಟಿಕೋನದಲ್ಲಿ ಬರೆದಿದ್ದಾರೋ… ಅದೆಷ್ಟು ಕಲ್ಪನೆಗಳಿಗೆ ಈ ಕಾವ್ಯಗಳು ಮೂಲವೋ… ಈಗ ಇವನೂ… , ನನ್ನ ಮೂಲಕ ತನ್ನದೊಂದು ದೃಷ್ಟಿಕೋನವನ್ನು ಸೇರಿಸುತ್ತಿದ್ದಾನೆ ! ಕಾರಣವೇನು… ? ರಾಮಾಯಣ ಮಹಾಭಾರತದಬಗ್ಗೆ ಯಾರು ಬೇಕಾದರೂ ಬರೆಯಲಿ… , ಆದರೆ ಅದರ ಮಹತ್ವವನ್ನು ಅರಿತು ಬರೆಯಲಿ ಅನ್ನುವುದು ಅವನ ತುಡಿತ ! ನಾನು - ಸೀತೆ ! ನನ್ನ ಮೂಲಕ ಮಾತನಾಡುತ್ತಿರುವವನು ನನ್ನನ್ನೇ ತಾಯಿಯೆಂದು ಪೂಜಿಸುವ ದೇವೀಪುತ್ರ ! ಅವನ ಹೆಸರಿನ ಮೂಲ ನಾನೇ ! ನನ್ನ ಹೃದಯವನ್ನು ಅರಿತವನು ಅವನು ! ಯಾರೋ ಒಬ್ಬರು ನನ್ನಬಗ್ಗೆ ಆಧುನಿಕ ಧಾರವಾಹಿಯಲ್ಲಿ ಬರುವ ಅಳುಮುಂಜಿ ನಾಯಕಿಯರ ಮಟ್ಟದಲ್ಲಿ ಬರೆದಾಗ ಅವನಿಗೆ ಸಹಿಸಲಿಲ್ಲ ! ಅದೆಷ್ಟು ಜನ ಬರೆದಿದ್ದಾರೋ… ಅದೆಷ್ಟು ಜನ ಕಲ್ಪನೆಯನ್ನು ಹರಿಯಬಿಟ್ಟಿದ್ದಾರೋ… ಆದರೆ ಈಗ… , ಪಾಪ ಯಾರೋ ಆತ - ಬರೆದ ಬರಹವೊಂದು ಇವನ ದೃಷ್ಟಿಗೇ ಬೀಳಬೇಕೆ… ? ಅದೂ ಅಷ್ಟು ಜನರ ಮನ್ನಣೆಯನ್ನು ಪಡೆದ ಬರಹ ! ಮನ್ನಣೆಯನ್ನು ಯಾಕೆ ಪಡೆಯಿತು… ? ಈ ರೀತಿಯ ಕಪೋಲ ಕಲ್ಪಿತ ಬರಹಗಳಿಂದಾಗಿ ! ಅದೇ ನಿಜವೆಂದು ಬಿಂಬಿತವಾಗಿದ್ದರಿಂದಾಗಿ ! ...