ಸೀತಾಹೃದಯ!

ಸೀತಾಹೃದಯ!

ರಾಮಾಯಣ- ಮಹಾಭಾರತ!

ಭಾರತದ ಸಾಹಿತ್ಯದ, ಸಂಸ್ಕಾರದ ತಾಯಿಬೇರು!

ಒಂದು ಆದಿಕಾವ್ಯವಾದರೆ ಮತ್ತೊಂದು ಮಹಾಕಾವ್ಯ!

ಅದೆಷ್ಟು ಸಾವಿರ- ಲಕ್ಷ…, ಕವಿಗಳು, ಸಾಹಿತಿಗಳು, ಬರಹಗಾರರು, ವಿಮರ್ಶಕರು ಇದರ "ಬಗ್ಗೆ" ಬರೆದಿದ್ದಾರೋ, "ಇದನ್ನೇ" ತಮ್ಮ ದೃಷ್ಟಿಕೋನದಲ್ಲಿ ಬರೆದಿದ್ದಾರೋ… ಅದೆಷ್ಟು ಕಲ್ಪನೆಗಳಿಗೆ ಈ ಕಾವ್ಯಗಳು ಮೂಲವೋ…

ಈಗ ಇವನೂ…, ನನ್ನ ಮೂಲಕ ತನ್ನದೊಂದು ದೃಷ್ಟಿಕೋನವನ್ನು ಸೇರಿಸುತ್ತಿದ್ದಾನೆ!

ಕಾರಣವೇನು…?

ರಾಮಾಯಣ ಮಹಾಭಾರತದಬಗ್ಗೆ ಯಾರು ಬೇಕಾದರೂ ಬರೆಯಲಿ…, ಆದರೆ ಅದರ ಮಹತ್ವವನ್ನು ಅರಿತು ಬರೆಯಲಿ ಅನ್ನುವುದು ಅವನ ತುಡಿತ!

ನಾನು- ಸೀತೆ! ನನ್ನ ಮೂಲಕ ಮಾತನಾಡುತ್ತಿರುವವನು ನನ್ನನ್ನೇ ತಾಯಿಯೆಂದು ಪೂಜಿಸುವ ದೇವೀಪುತ್ರ! ಅವನ ಹೆಸರಿನ ಮೂಲ ನಾನೇ! ನನ್ನ ಹೃದಯವನ್ನು ಅರಿತವನು ಅವನು! ಯಾರೋ ಒಬ್ಬರು ನನ್ನಬಗ್ಗೆ ಆಧುನಿಕ ಧಾರವಾಹಿಯಲ್ಲಿ ಬರುವ ಅಳುಮುಂಜಿ ನಾಯಕಿಯರ ಮಟ್ಟದಲ್ಲಿ ಬರೆದಾಗ ಅವನಿಗೆ ಸಹಿಸಲಿಲ್ಲ!

ಅದೆಷ್ಟು ಜನ ಬರೆದಿದ್ದಾರೋ… ಅದೆಷ್ಟು ಜನ ಕಲ್ಪನೆಯನ್ನು ಹರಿಯಬಿಟ್ಟಿದ್ದಾರೋ… ಆದರೆ ಈಗ…, ಪಾಪ ಯಾರೋ ಆತ- ಬರೆದ ಬರಹವೊಂದು ಇವನ ದೃಷ್ಟಿಗೇ ಬೀಳಬೇಕೆ…?

ಅದೂ ಅಷ್ಟು ಜನರ ಮನ್ನಣೆಯನ್ನು ಪಡೆದ ಬರಹ!

ಮನ್ನಣೆಯನ್ನು ಯಾಕೆ ಪಡೆಯಿತು…?

ಈ ರೀತಿಯ ಕಪೋಲ ಕಲ್ಪಿತ ಬರಹಗಳಿಂದಾಗಿ! ಅದೇ ನಿಜವೆಂದು ಬಿಂಬಿತವಾಗಿದ್ದರಿಂದಾಗಿ! ಅದು ನಿಲ್ಲಬೇಕು!

ಅದಕ್ಕೇ…, ಕೇಳದೆ ಮೌನವಾಗಿ ಇದ್ದುಬಿಡಬಹುದಾಗಿದ್ದರೂ ಅವನಿಂದ ಸಾಧ್ಯವಾಗಲಿಲ್ಲ…! ನನ್ನ ಹೃದಯವನ್ನು ಅರಿತವನಾಗಿ ಅದನ್ನು ಒಪ್ಪಲು ಅವನು ತಯಾರಿರಲಿಲ್ಲ!

ಕಾರಣ…,

ಎಲ್ಲರೂ ನನ್ನನ್ನು ದುಃಖಪುತ್ರಿಯನ್ನಾಗಿ ಚಿತ್ರಿಸಿ ದುಃಖದ ಪ್ರತೀಕ- ದುಃಖದ ಸಂಕೇತವನ್ನಾಗಿ ಮಾಡಿದ್ದಾರೆ ಹೊರತು ನಿಜವಾದ ಸ್ತ್ರೀತ್ವದ ಸಂಕೇತವನ್ನಾಗಿ ಅಲ್ಲ!”

ಜನಕ ರಾಜರ್ಷಿಯ ಪುತ್ರಿನಾನು- ಶ್ರೀರಾಮ ಚಕ್ರವರ್ತಿಯ ವಲ್ಲಭೆ!

ಈಗಿನವರಿಗೆ ಏನು ಗೊತ್ತು ಸ್ತ್ರೀಧರ್ಮ, ರಾಜಧರ್ಮಗಳಬಗ್ಗೆ?

ತಿಳಿಸಿಕೊಡಬೇಕಾದವರು ತಲೆತಿರುಗಿಸಿ ಕೊಡುತ್ತಿದ್ದಾರೆ! ಅದೇ ಇವನ ಸಮಸ್ಯೆ!

ಭಾವನೆಗಳಿಗೆ ಧಕ್ಕೆ ಬರುವುದು ಅಂದರೆ ಏನು?

ತಂದೆಯಿಲ್ಲದೆ ಮಗನನ್ನು ಹೆರಬೇಕಾಗಿ ಬಂದ ಮೇರಿಯ ದುಃಖದಬಗ್ಗೆ ಯಾರೂ ಹೇಳುವುದಿಲ್ಲ! ಅದನ್ನೇ ಹೈಲೈಟ್ ಮಾಡುವುದಿಲ್ಲ- ಯಾಕೆ?

ಅದೊಂದು ಕಮ್ಯುನಿಟಿಯವರ ಭಾವನೆಗೆ ಧಕ್ಕೆ ತರುತ್ತದೆ!

ಹಾಗೆಯೇ…,

ಗಂಡಿನ ಕಾಮದ ದೃಷ್ಟಿಗೆ ಒಳಗಾಗಬಾರದೆಂದು ಅವನ ಮನಸ್ಸನ್ನು ನಿಯಂತ್ರಿಸುವುದು ಬಿಟ್ಟು ಕಪ್ಪು ಪರದೆಯೊಳಗೆ ಸೇರಬೇಕಾಗಿ ಬಂದ ಫಾತೀಮಾಳ ದುಃಖದಬಗ್ಗೆ ಯಾರೂ ಬರೆಯುವುದಿಲ್ಲ- ಯಾಕೆ?

ಆ ಮತದವರ ಭಾವನೆಗೆ ಅದು ಧಕ್ಕೆ ತರುತ್ತದೆ!

ಹಾಗೆಯೇ ನನ್ನ ವಿಷಯ ಅನ್ನುವುದು ಇವನ ಭಾವ!

ಹೃದಯದಲ್ಲಿಟ್ಟು- ಪೂಜ್ಯಭಾವನೆಯಿಂದ ಆರಾಧಿಸಿ ನನ್ನ ಹೃದಯವನ್ನೇ ಅರಿತುಕೊಂಡವನು…, ನನ್ನಬಗ್ಗೆ ಯಾರೋ ಸಣ್ಣದಾಗಿ ಯೋಚಿಸಿದಾಗ ಸಹಿಸದಾದ! ಬೇರೆ ಎಷ್ಟೋ ಜನ ಹಾಗೆ ಬರೆದಿರುವುದನ್ನು ಓದಿದ್ದ, ನಿಸ್ಸಹಾಯಕನಾಗಿದ್ದ!

ಮೊದಲಬಾರಿ ಪ್ರತಿಕ್ರಿಯಿಸುವ ಅವಕಾಶ ಬಂತು- ಅದರ ಪರಿಣಾಮವೇ ಇದು- ನಿಜ ಮೌಲ್ಯವನ್ನು ಹೇಳಲು ಹೋದರೆ ಯಾರಿಗೂ ಅರ್ಥವಾಗದಿರುವುದು!

ಇನ್ನು ಮುಂದೆಯೂ ಹಾಗೆಯೇ ಆಗಿ ನನ್ನ ಮಹತ್ವ ಮತ್ತಷ್ಟು ಕಡಿಮೆಯಾದರೇ…, ಮಹತ್ವವೇ ಇಲ್ಲವಾದರೇ…, ಅನ್ನುವುದು ಅವನ ಹೆದರಿಕೆ!

ಆ ಹೆದರಿಕೆ ಯಾರಿಗೂ ಅರ್ಥವಾಗುತ್ತಿಲ್ಲ!

ಇನ್ನೊಬ್ಬರ ಬರಹವನ್ನು ನಿಷೇಧಿಸಿದ ಅಪರಾಧಿ ಅನ್ನುವಂತೆ ನೋಡುತ್ತಿದ್ದಾರೆ ಹೊರತು ಯಾಕೆ ನಿಷೇಧಿಸಿದ ಅನ್ನುವ "ಅರಿವು" ಅವರಿಗಾಗುತ್ತಿಲ್ಲ!

ಯಾಕೆ ನಿಷೇಧಿಸಿದ?

ನನ್ನ ಬಗೆಗಿನ ಅವನ ಭಾವಕ್ಕೆ ಧಕ್ಕೆಯಾಗಿದೆ ಅದಕ್ಕೆ!

ಎಲ್ಲರೂ ಅವನಂತೆ ನನಗೆ ಬೆಲೆ ಕೊಡಬೇಕು ಅನ್ನುವುದು ಅವನ ಭಾವ! ಆ ಅರಿವು ಅವರಿಗೆ ಬರಬೇಕು!

ಯಾರು ಬೇಕಿದ್ದರೂ ತಮ್ಮ ಇಷ್ಟಕ್ಕೆ ಮೆರೆದಾಡುವಂತಾ ವಿಷಯವಲ್ಲ ಧಾರ್ಮಿಕ ನಂಬಿಕೆಗಳು!!

ನಿನ್ನ ಭಾವ ಯಾರಿಗೆ ಬೇಕು! ನಮಗೆ ನಮ್ಮ ಥ್ರಿಲ್ ಮುಖ್ಯ ಅಂದರೆ ಏನು ಮಾಡುವುದು?

ರಾಮಾಯಣ ಮಹಾಭಾರತಗಳ ಮೂಲ ಉದ್ದೇಶವನ್ನು, ಭಾರತೀಯ ಸಂಸ್ಕಾರವನ್ನು ಆದಷ್ಟೂ ತನ್ನ ಸಾಮರ್ಥ್ಯದ ಮಿತಿಯಲ್ಲಿ ಸಾರುವುದು!

ಮೇರಿ, ಫಾತಿಮಾರಬಗ್ಗೆ ಹೇಳದಿರುವಂತೆಯೇ ಸೀತೆಯಬಗ್ಗೆಯೂ ಹೇಳದಿರಿ ಅನ್ನುವುದು ಒಂದು ಭಾವ!

ನಿಜವನ್ನು ಹೇಳಿ…, ಅದು ಸೀತೆಯಬಗ್ಗೆಯಾದರೂ ಸರಿ- ಮೇರಿ, ಫಾತಿಮಾರಬಗ್ಗೆಯಾದರೂ ಸರಿ ಅನ್ನುವುದು ಇನ್ನೊಂದು!

ಇನ್ನು…,

ಸೀತಾಹೃದಯ ಅಂದರೆ ಏನು?

ಸೀತೆಯ ಹೃದಯ ರಾಮ ಅನ್ನುವುದು!

ಇತ್ತೀಚಿನ ದಿನಗಳಲ್ಲಿ ಹೇಗೆ ಬಿಂಬಿತವಾಗುತ್ತಿದೆ ಅಂದರೆ…,

ರಾಮ ಸೀತೆಯ ವಿಲನ್ ಅನ್ನುವಂತೆ! ಸೀತೆಗೆ ಕೇವಲ ದುಃಖವನ್ನು ಕೊಟ್ಟ ಕಟುಕನಂತೆ! ರಾಮನನ್ನು ಕಟ್ಟಿಕೊಳ್ಳುವ ಮೂಲಕ ಸೀತೆ ನರಕವನ್ನು ಪ್ರವೇಶಿಸಿದಂತೆ!

ಹಾಗಲ್ಲ!

ಸೀತಾರಾಮ ಅನ್ನುವ ಹೆಸರಿನಲ್ಲೇ ಇದೆ "ನಾವು" ಏನೆಂದು!

ಅದರ ಮಹತ್ವವನ್ನು ಅರಿಯಬೇಕಾದರೆ ಮೂಲ ರಾಮಾಯಣದ ಆಳಕ್ಕೆ ಇಳಿಯಬೇಕು- ರಾಮಾಯಣದಲ್ಲಿ ಮುಳುಗಬೇಕು- ಈಜಬೇಕು!

ಅದನ್ನು ಅರಿತವರು ಯಾರೂ ಸಾಮಾನ್ಯ ಹೆಣ್ಣಿನ ಚಂಚಲತೆಗೆ ನನ್ನನ್ನು ಹೋಲಿಸಲಾರರು!

ಕೌಮಾರ್ಯದಲ್ಲಿ ನಡೆದ ಮದುವೆ ನನ್ನದು! ವಿಶ್ವಾಮಿತ್ರರೊಂದಿಗೆ ಮಿಥಿಲೆಗೆ ಬಂದ ರಾಮ ಶೈವಚಾಪದ ಹೆದೆಯೇರಿಸಿ ಅಂದಿನ ಸ್ವಯಂವರ ಸಂಪ್ರದಾಯದಂತೆ ನನ್ನನ್ನು ಗೆದ್ದು ಮದುವೆಯಾದಾಗ ಎಷ್ಟು ಹರ್ಷಿತಳಾಗಿದ್ದೆ.

ಮಿಥಿಲೆಯಿಂದ ಕೋಸಲಕ್ಕೆ ಬರುವಾಗ ಭಾರ್ಗವರಾಮನಿಂದ ಆಶೀರ್ವಾದವನ್ನೂ ವೈಶ್ಣವ ಚಾಪವನ್ನೂ ಹೊಂದಿದ್ದು ಸಾಮಾನ್ಯ ವಿಷಯವೇ?

ಅಲ್ಲಿಂದ ವನವಾಸ ಹೋಗಬೇಕಾಗಿ ಬಂದ ಸಂದರ್ಭದವರೆಗಿನ ಸಮಯ ಎಷ್ಟು ಚಂದ!

ಆ ಒಂದು ತಾತ್ಕಾಲಿಕ ಸಂದರ್ಭದ ಹೊರತು…, ಹದಿನಾಲ್ಕು ವರ್ಷದ ವನವಾಸದಲ್ಲಿ ಹದಿಮೂರು ವರ್ಷ ಎಷ್ಟು ಚಂದ!

ಇಲ್ಲಿ ಊರ್ಮಿಳೆಗೆ ನಾನು ಧನ್ಯತೆಯನ್ನು ಅರ್ಪಿಸಲೇಬೇಕು! ತಾನೂ ಗಂಡನೊಂದಿಗೆ ಬಂದರೆ ನನಗೂ ರಾಮನಿಗೂ ಆಗುವ ಕಷ್ಟದ ಅರಿವಿನಿಂದ ಗಂಡ ಮರಳಿ ಬರುವವರೆಗೆ ತಪಸ್ವಿನಿಯಾಗಿ ಕಳೆದ ಅವಳನ್ನು ಪಡೆದ ಲಕ್ಷ್ಮಣನೆಷ್ಟು ಧನ್ಯ! ಲಕ್ಷ್ಮಣನನ್ನು ಪಡೆದ ನಾವೆಷ್ಟು ಧನ್ಯ!

ನನ್ನ ನಿಜವಾದ ದುಃಖ ವನವಾಸದ ಕೊನೆಯ ಒಂದು ವರ್ಷ ಮಾತ್ರ!

ಇಚ್ಛೆಯಿಲ್ಲದ ಹೆಣ್ಣನ್ನು ಸಂಭೋಗಿಸಿದರೆ ತಲೆಛಿದ್ರವಾಗುವ ಶಾಪ ರಾವಣನಿಗೆ ಇಲ್ಲದೆ ಇದ್ದಿದ್ದರೆ ನನ್ನ ಅವಸ್ಥೆಯೇನೋ?

ಎಷ್ಟೇ ವೇದಪಾರಂಗತನಾದರೂ ಶಿವಭಕ್ತನಾದರೂ ಸಕಲಲೋಕ ಜ್ಞಾನಿಯಾದರೂ ಅಹಂಕಾರವೆನ್ನುವುದು ತಲೆಯನ್ನು ಹೊಕ್ಕರೆ ಮನುಷ್ಯ ಎಷ್ಟು ನೀಚ ಅವಸ್ತೆಗೆ ಹೋಗುತ್ತಾನೆನ್ನುವುದಕ್ಕೆ ರಾವಣನೇ ಉದಾಹರಣೆ!

ಹೆಣ್ಣಿನ ವಿಷಯದಲ್ಲಿ ಪ್ರಪಂಚದ ಯಾರೊಬ್ಬರೂ ಅವನನ್ನು ಒಪ್ಪಲಾರರು!

ಇತ್ತೀಚಿನ ದಿನಗಳಲ್ಲಿ ರಾವಣನನ್ನು ಒಳ್ಳೆಯವನನ್ನಾಗಿಯೂ ರಾಮನನ್ನು ಕೆಟ್ಟವನನ್ನಾಗಿಯೂ ಬಿಂಬಿಸುವ ಯತ್ನವಾಗುತ್ತಿರುವುದೂ ಒಂದು ದೊಡ್ಡ ಸಮಸ್ಯೆಯಾಗಿದೆ!

ಅದೆಷ್ಟು ರೀತಿಯಲ್ಲಿ ಪ್ರಲೋಭನೆಯನ್ನು ಒಡ್ಡಿದ…, ಕೊನೆಗೆ ತನ್ನ ಹೆಂಡತಿ ಮಂಡೋದರಿಯನ್ನೂ ಕಳಿಸಿದ- ನನ್ನ ಮನವೊಲಿಸಲು!

ಆ ಸಾಧ್ವಿ ನನಗೆ ಧೈರ್ಯವನ್ನು ತುಂಬಿದಳು ಹೊರತು ಯಾವತ್ತಿಗೂ ನನ್ನನ್ನು ಪ್ರಲೋಭಿಸಲಿಲ್ಲ!

ರಾಮ ಬಂದ, ಯುದ್ಧದಲ್ಲಿ ರಾವಣನನ್ನು ಕೊಂದ!

ಇಲ್ಲಿಯೇ ಆಧೂನಿಕರ ಮತ್ತೊಂದು ತಕರಾರು!

ನಾನೇನೋ ಹೆಣ್ಣು ಹೃದಯದಂತೆ ರಾಮ ಅಶೋಕವನಕ್ಕೆ ಬಂದು ನನ್ನನ್ನು ಕರೆದೊಯ್ಯುತ್ತಾನೆಂದು ಕಾಯುತ್ತಿದ್ದೆ. ಆದರೆ ರಾಮನಿಗೆ ಗೊತ್ತು…, ಆ ಸಂದರ್ಭದ- ಆ ಕಾಲದ ರಾಜನಾಗಲಿರುವವನ ಧರ್ಮ!

ಒಂದು ವರ್ಷ ರಾವಣನ ಬಂಧೀಖಾನೆಯಲ್ಲಿದ್ದ ನನ್ನ ಪರಿಶುದ್ಧತೆಯನ್ನು ಪ್ರಮಾಣೀಕರಿಸಬೇಕೆಂದು ಹೇಳಿದ!

ರಾಮ ಒಬ್ಬ ಸಾಧಾರಣ ಮನುಷ್ಯನಲ್ಲ! ರಾಜಕುಮಾರ! ಅಂದಿನ ಕಾಲದಲ್ಲಿ ರಾಜಧರ್ಮ ಅನ್ನುವುದೊಂದಿತ್ತು. ಅದರ ಪ್ರಕಾರ ದೊರೆಯಾಗಲು ಬೇಕಾದ ತನ್ನ ಅರ್ಹತೆಯನ್ನು ಅವನು ಸಾಬೀತು ಪಡಿಸಬೇಕಿತ್ತು. ಕಳಂಕ ರಹಿತಳಾಗಲು ನನಗೂ ಅದೊಂದು ಮಾರ್ಗ! ರಾವಣನಂತಹ ಹೆಣ್ಣು ಹಿಡುಕನ ಬಂಧನದಲ್ಲಿದ್ದೂ ಸ್ತ್ರೀಯೊಬ್ಬಳು ಪರಿಶುದ್ಧಳಾಗಿದ್ದಳೆಂದರೆ ನಂಬುವುದು ಹೇಗೆ?

ಅಷ್ಟೇ…!

ಅಂದಿನ ಕಾಲವನ್ನು, ಕಾಲದ ನಿಯಮಗಳನ್ನು ಈಗಿನ ನಿಯಮಗಳೊಂದಿಗೆ ಹೋಲಿಸಬಹುದೆ?

ಸಂವಿಧಾನ ರೂಪುಗೊಂಡ ಈ ಸಣ್ಣ ಕಾಲದಲ್ಲಿಯೇ ಅದೆಷ್ಟು ಬದಲಾವಣೆಗಳನ್ನು ಹೊಂದಿದೆಯೋ… ಇನ್ನು ಯುಗಗಳ ಹಿಂದಿನ ಕಾನೂನು ವ್ಯವಸ್ತೆಯನ್ನು ಈಗಿನ ಕಾಲದೊಂದಿಗೆ ತುಲನೆ ಮಾಡುವುದು ಸರಿಯೇ…?

ಇರಲಿ…,

ಅಲ್ಲಿಂದ ಅಯೋಧ್ಯೆಗೆ ಬಂದು ಅಗಸನೊಬ್ಬ ರಾಜನನ್ನು ದೂಷಿಸುವವರೆಗೆ ನನ್ನ ಜೀವನ ಎಷ್ಟು ಚಂದ!

ಆ ಒಂದು ಸಂದರ್ಭ! ದುಃಖವೇ…! ಯಾರಿಗಿಲ್ಲ ದುಃಖ!

ನಿನ್ನನ್ನು ಕಾಡಿಗಟ್ಟುತ್ತೇನೆಂದು ನೇರವಾಗಿ ಹೇಳಲಾಗದ ಸಾಮಾನ್ಯ ಗಂಡ ರಾಮನ ದುಃಖವನ್ನು ನನಗಿಂತ ಚೆನ್ನಾಗಿ ಊಹಿಸುವವರಾರು?

ವ್ಯಕ್ತಿಯಾಗಿ ಹೆಂಡತಿಯನ್ನು ಕಾಡಿಗಟ್ಟಲಾಗದ ರಾಮನ ನೋವು…, ಆದರೆ ರಾಜನಾಗಿ ಅವಳನ್ನು ಕಾಡಿಗಟ್ಟಲೇ ಬೇಕಾದ ಅವನ ಮನಶ್ಶಕ್ತಿ…!

ಯಾರಿಗೆ ಅರ್ಥವಾಗುತ್ತದೆ?

ಆ ಸಂದರ್ಭ ಮುಗಿದು ವಾಲ್ಮೀಕಿ ಆಶ್ರಮದಲ್ಲಿ ನನಗೇನಿತ್ತು ಕೊರತೆ?

ರಾಮನಿಲ್ಲವೆಂಬ ವಿರಹ!

ರಾಮನಿಗಿರಲಿಲ್ಲವೇ ವಿರಹ?

ಆತನೇನೂ ಬೇರೆ ಹೆಣ್ಣಿನ ಹಿಂದೆ ಹೋದವನಲ್ಲ! ತನ್ನ ಹೆಂಡತಿಯ ಪಾವಿತ್ರ್ಯತೆಯ ಅರಿವಿದ್ದೂ ಅವಳಿಂದ ಅಗಲಿ ಇರಬೇಕಾದ ನೋವಿನಬಗ್ಗೆ ಯಾವ ಮಹಾಕವಿ ಬರೆದಿದ್ದಾನೆ?

ಎಲ್ಲರಿಗೂ ನನ್ನನ್ನು ದುಃಖಪುತ್ರಿಯನ್ನಾಗಿ ಮಾಡುವುದರಲ್ಲಿಯೇ ಒಲವು- ಅದೂ ರಾಮ ಮಾಡಿದ ದ್ರೋಹ ಅನ್ನುವಂತೆ!!

ಇಲ್ಲೇ ನಾವು ಕಲಿಯಬೇಕಾದ ವಿಷಯಗಳಿರುವುದು!

ಧರ್ಮ ಎಂದರೇನು?

ಇತ್ತೀಚಿನ ದಿನಗಳಲ್ಲಿ ಏಕ ವ್ಯಕ್ತಿಗಳಿಂದ ರೂಪಿತವಾದ "ಮತ"ಗಳನ್ನೇ ಧರ್ಮ ಎಂದು ಹೇಳುವ ಪರಿಪಾಠ ಬೆಳೆದಿದೆ!

ಮಾನವನು ಸಂದರ್ಭಕ್ಕೆ ತಕ್ಕಂತೆ ಪಾಲಿಸಬೇಕಾದ "ಧರ್ಮಗಳು" ಬೇರೆ…, ನಂಬಿ ಆಚರಿಸುವ ಮತಗಳು ಬೇರೆ!

ಇದೊಂದು ರೀತಿಯಲ್ಲಿ ಕರ್ತವ್ಯ ಮತ್ತು ಹಕ್ಕುಗಳಂತೆ! ಅದೆರಡೂ ಒಂದೇ ಅನ್ನಬಹುದೇ?!

ಮನುಷ್ಯನು ಜೀವನದಲ್ಲಿ ಆಚರಿಸಬೇಕಾದ "ಒಟ್ಟು ಧರ್ಮಗಳನ್ನು" ನಾವು ಸನಾತನಧರ್ಮ- ಅಂದರೆ ಸನಾತನ ಕಾಲದಿಂದ ನಡೆದುಕೊಂಡು ಬಂದಿರುವ ಧರ್ಮಗಳು ಎಂದು ಕರೆಯುತ್ತೇವೆಯೇ ಹೊರತು ಆಚಾರವಿಚಾರಗಳನ್ನಲ್ಲ!

ಸರಿ…,

ಲವ ಕುಶರೆಂಬ ಅವಳಿ ಮಕ್ಕಳಾದರು…, ರಾಮ ಬಂದ…!

ಅಗಸನೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ…!

ಮತ್ತೊಮ್ಮೆ ನನ್ನ ಪಾವಿತ್ರ್ಯತೆಯನ್ನು ಸಾಬೀತು ಪಡಿಸುವ ಪರೀಕ್ಷೆ!

ಸ್ತ್ರೀಯಾಗಿ- ರಾಜನ ಹೆಂಡತಿಯಾಗಿ ಅದು ಅಂದಿನ ನನ್ನ ಧರ್ಮ!

ಆದರೆ ಅದು ನನ್ನ ಅವತಾರದ ಉದ್ದೇಶವನ್ನು ಮುಗಿಸುವ ಕಾಲವೂ ಕೂಡ!

ನಾನು ಪರಿಶುದ್ಧಳಾದರೆ ಭೂಮಿಯೇ ಬಾಯಿಬಿಟ್ಟು ನನ್ನನ್ನು ತನ್ನೊಳಗೆ ಸೇರಿಸಿಕೊಳ್ಳಲಿ ಎಂದು ಕಲ್ಪಿಸಿದೆ!

ನನ್ನ ಪರಿಶುದ್ಧತೆಯೊಂದಿಗೆ ನನ್ನ ಮನಶ್ಶಕ್ತಿಯನ್ನೂ ಬಿಂಬಿಸುವ ಸಂದರ್ಭ!

ಏನಿದ್ದರೂ ಸೀತೆ ನಾನು- ಮಣ್ಣಿನ ಮಗಳು!

ಯಾವ ಅಂಶದಿಂದ ಸೀತೆಯಾಗಿ ಹುಟ್ಟಿದ್ದೆನೋ ಆ ಅಂಶವಾದ ಲಕ್ಷ್ಮಿಯಲ್ಲಿ ಲೀನಳಾದೆ!

ರಾಮನಿಗೆಷ್ಟು ದುಃಖವಾಗಿರಬಹುದೆನ್ನುವ ಚಿಂತೆ ಯಾರಿಗೂ ಇಲ್ಲ! ಅವತಾರ ಮುಗಿಸಿದ ನನ್ನ ದುಃಖವನ್ನು ಬಗೆಯುವುದರಲ್ಲಿಯೇ ಎಲ್ಲರಿಗೂ ಆಸಕ್ತಿ!

ಈಗಿನ ಹೆಣ್ಣೂ ಹಾಗೆಯೇ! ಸೀತೆಯ ಕಾಲದಿಂದಲೂ ಹೆಣ್ಣು ತುಳಿತಕ್ಕೊಳಗಾದವಳೆಂದು ನಂಬುವುದೂ ತಾನೊಂದು ವಿಷಾದ ರೋಗಿಯಾಗಿರುವುದರಲ್ಲಿ ನೆಮ್ಮದಿ ಕಾಣುವುದೂ ಅವಳಿಗೊಂದು ಸಂತೋಷ!

ಯಾಕೆ?

ಸೀತೆಯ ದುಃಖದಬಗ್ಗೆ ಅತಿಯಾದ ಕಲ್ಪನೆ! ಕಥೆಗಳು! ಬಿಂಬಗಳು!

ಅದು ನಿಲ್ಲಬೇಕು ಅನ್ನುವುದೇ ಈ ಕಥೆ ಹೇಳುತ್ತಿರುವುದರ ಉದ್ದೇಶ!

ಯಾರಿಗೂ ಬೇಡದ ನನ್ನ ಇಚ್ಛಾಶಕ್ತಿ, ಸ್ತ್ರೀಧರ್ಮಪಾಲನೆ, ರಾಜಪತ್ನೀಧರ್ಮಪಾಲನೆಯನ್ನು ಎಲ್ಲರೂ ಅರಿಯಬೇಕು! ಅನುಸರಿಸದಿದ್ದರೂ…, ತಿಳಿದಿರಲೇ ಬೇಕು!

ರಾಜಧರ್ಮವನ್ನು ಪ್ರಜಾಜೀವನಕ್ಕೆ ಹೋಲಿಸಬಹುದೆ?

ಹಾಗಿಲ್ಲ!

ರಾಮಾಯಣ ಆದಿಕಾವ್ಯ- ಮಹಾಭಾರತ ಮಹಾಕಾವ್ಯದ ಉದ್ದೇಶ…, ಒಳಿತು ಕೆಡುಕುಗಳ ವಿಭಜನೆ! ಯಾವುದು ಸರಿ ಯಾವುದು ತಪ್ಪು ಅನ್ನುವುದರ ಅರಿವು ನೀಡುವುದು! ಅಂದಿನ ಕಾಲದಲ್ಲಿದ್ದ ವರ್ಣಾಶ್ರಮ- ಸ್ತ್ರೀ- ರಾಜಧರ್ಮಗಳನ್ನು ಸಾರುವುದು!

ಆದರೆ…, ಆಧುನಿಕ ಬುದ್ದಿಜೀವಿಗಳಿಂದಾಗಿ, ಸ್ತ್ರೀವಾದಿಗಳಿಂದಾಗಿ, ಪ್ರಗತಿಪರರಿಂದಾಗಿ…, ಅಂದಿನ ಕಾಲದಬಗ್ಗೆ ಆಧುನಿಕರ ಇಂದಿನ ಕಲ್ಪನೆಗಳೇ ನಿಜ ಅನ್ನುವಂತಾಗಿದೆ! ಅದು ನಿಲ್ಲಬೇಕು! ಮಹಾಕಾವ್ಯದ ಸತ್ಯಾಸತ್ಯತೆಗಳು ಬೆಳಕಿಗೆ ಬರಬೇಕು! ಅದರ ಪರಿಶುದ್ಧತೆ ಉಳಿಯಬೇಕು!

ಅದಕ್ಕಾಗಿ…, ಇಲ್ಲಸಲ್ಲದ ಕಲ್ಪನೆಗಳಿಗೆ ಹೋಗದೆ…, ಇರುವುದನ್ನು ಹೇಳಬೇಕು- ಯಾವ ರೂಪದಲ್ಲಾದರೂ!!

ಕಾಲ ಬದಲಾಗಿದೆ… ಈಗ ಪ್ರತಿಯೊಬ್ಬರಿಗೂ ಪ್ರತಿಯೊಂದಕ್ಕೂ ಅವಕಾಶಗಳಿದೆ!

ಇಂದಿನ ಹೆಣ್ಣು ಅಂದಿನ ಸೀತೆಯಾಗಲಾರಳು!

ಆಗುವ ಹಾಗಿದ್ದರೆ…,

ಅಂದಿನ ಸೀತೆಯ ಧರ್ಮವನ್ನು ಅರಿತುಕೊಳ್ಳಬೇಕು! ಅದನ್ನು ಕಲ್ಪಿಸಲೂ ಆಚರಿಸಲೂ ಸಾಧ್ಯವಿಲ್ಲದಿರುವ ತನಕ…,

ಸೀತೆಯ ದುಃಖಮಾತ್ರ ಯಾಕೆ?

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!