ಜೀವನ ಜಂಜಾಟ!
ಜೀವನ ಜಂಜಾಟ!
೧
“ಇನ್ನೂ ಎಷ್ಟು ದಿನ ಹೀಗೆ ಮನೆಯಲ್ಲೇ ಕುಳಿತಿರುತ್ತೀಯ?” ಅಮ್ಮ ಕೇಳಿದಾಗ…,
“ಸಮಸ್ಯೆಯೇನು?” ಎಂದೆ.
“ಸಮಸ್ಯೆಯೇನು ಅಂದರೆ? ಬದುಕು ನಡೆಯುವುದು ಹೇಗೆ?”
“ನಡೆಯುತ್ತಿದೆಯಲ್ಲಾ?”
“ಇದೊಂದು ಬದುಕಾ?”
“ಮತ್ತೇನು?”
“ನಾಲ್ಕು ಜನರಂತೆ…!”
ಮುಂದುವರೆಸಲು ಬಿಡಲಿಲ್ಲ! ಎದ್ದು ಹೋದೆ.
೨
ಬದುಕು ಅಷ್ಟು ಕಷ್ಟವೇ?
ಇದೇ ಮರ! ನಿನ್ನೆ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡ!
ಕುಟುಂಬದಲ್ಲಿ ನೆಮ್ಮದಿ ಇಲ್ಲವೆನ್ನುವುದೇ ಸಮಸ್ಯೆ!
ಎಷ್ಟೊಂದು ಆತ್ಮಹತ್ಯೆಗಳು- ಹತ್ಯೆಗಳು!
ಯಾಕೆ?
೩
ಜನಸಂದಣಿ! ಗದ್ದಲ, ಗಡಿಬಿಡಿ! ಪ್ರತಿಯೊಬ್ಬರ ಮುಖದಲ್ಲೂ ದುಗುಡ, ದುಮ್ಮಾನ, ಅಸ್ವಸ್ತತೆ- ಯಾಕೆ?
ಅಭದ್ರತೆ, ಹೆದರಿಕೆ, ಗೊಂದಲ… ಜೀವನದಲ್ಲಿ ಕಟ್ಟುಪ್ಪಾಡುಗಳು ಏರ್ಪಡಲು ಎಷ್ಟೆಷ್ಟು ಕಾರಣಗಳು!
ಇದೇ ಜೀವನ!
೪
ಯೋಚನೆಯೇನೂ ಇಲ್ಲ! ಪಾಪ ಅಮ್ಮ, ಮಗನ ಬಗೆಗಿನ ಅವರ ದುಗುಡವನ್ನು ಹೇಳಿದ್ದಾರೆ! ಎದ್ದುಬಂದೆನೆಂದರೆ ಅರ್ಥ ಕೋಪಿಸಿಕೊಂಡು ಬಂದೆನೆಂದಲ್ಲ! ಅಮ್ಮನಲ್ಲವಾ…? ಪ್ರತ್ಯುತ್ತರ ಅವರಿಗೆ ನೋವು ನೀಡಬಾರದು- ಆದರೆ ಹೇಳದೆಯೂ ಇರಲಾರೆ! ಆ ಕ್ಷಣ ಹೇಳುವುದಕ್ಕಿಂತ, ಇಬ್ಬರ ಭಾವನೆಗಳನ್ನು ನಿಯಂತ್ರಿಸಲು ಸಮಯಕ್ಕೆ ಸ್ವಲ್ಪ ಅವಕಾಶವನ್ನು ಕೊಡುವುದು ಒಳ್ಳೆಯದು!
೫
ಜೀವನವೊಂದು ಮೂಟೆ! ಅನಗತ್ಯ ಯೋಚನೆಗಳಿಂದ ತುಂಬಿದ ಮೂಟೆ! ಇಷ್ಟು ವಿಶಾಲ ಪ್ರಪಂಚದಲ್ಲಿ ಬದುಕುವುದು ಅಷ್ಟು ಕಷ್ಟವೆ?
ಬಡವ ಶ್ರೀಮಂತ!
ಬುದ್ಧಿವಂತ- ದಡ್ಡ!
ಈ ಹೋಲಿಕೆ ಸರಿಯೇ?
ನಾಯಿ ಬೆಕ್ಕು ಹುಲಿ ಸಿಂಹಗಳಿಂದ ಹಿಡಿದು ಹೆಸರುಗೊತ್ತಿಲ್ಲದ ಲಕ್ಷಾನುಲಕ್ಷ ಪ್ರಾಣಿಗಳೊಂದಿಗೆ ಹೋಲಿಸಿದರೆ…,
ಬದುಕು ಅಷ್ಟು ಕಷ್ಟವೇ?
೬
“ಅಮ್ಮಾ…, ಜೀವನವೆನ್ನುವುದೊಂದು ವಾಸ್ತವ! ನನ್ನ ಬದುಕು ನನ್ನದು! ಹೆತ್ತಿದ್ದೀರಿ! ನಾನು ನಿಮಗೊಂದು ಹೊಣೆಯಾಗಿದ್ದೆ- ನೆರವೇರಿಸಿದ್ದೀರಿ! ನಿಮ್ಮಿಂದ ಹೆರಲ್ಪಟ್ಟಿದ್ದೇನೆ! ನೀವು ನನ್ನ ಕರ್ತವ್ಯ! ನೀವು ಬದುಕಿರುವವರೆಗೆ- ಅಥವಾ ನಾನೇ ಮೊದಲು ಹೋಗುವವನಾದರೆ- ನಾನು ಬದುಕಿರುವವರೆಗೆ ನಿಮ್ಮೊಂದಿಗೆ ಇರಬೇಕು- ನಿಮ್ಮನ್ನು ನೋಡಿಕೊಳ್ಳಬೇಕು! ನಂತರದ ನನ್ನ ಬದುಕಿಗೆ ಯಾರೂ ಹೊಣೆಗಾರರಲ್ಲ! ಕರ್ತವ್ಯದಚಿಂತೆಯೂ ನನಗಿಲ್ಲ!”
ಅಮ್ಮ ಏನೂ ಮಾತನಾಡಲಿಲ್ಲ! ಗಂಟಲಲ್ಲಿ ಏನೋ ಸಿಕ್ಕಿಕೊಂಡಂತೆ ನನ್ನನ್ನೊಮ್ಮೆ ನೋಡಿದರು! ಅವರಿಗೆ ಏನೋ ಹೇಳುವುದಿತ್ತು! ಹೇಳಲಿಲ್ಲ!
ನನ್ನ ಅಮ್ಮನಲ್ಲವಾ?
ಈ ಹೊಣೆ ಕರ್ತವ್ಯಗಳು ಅಮ್ಮ ಮಗನಿಗೆ ಸೀಮಿತ ಅಲ್ಲವಾದಾಗಲೇ ಜೀವನದ ಜಂಜಾಟಗಳು!
ಅಪ್ಪ, ಅಮ್ಮ, ಮಕ್ಕಳು, ಸಹೋದ(ರ)ರಿಯರು, ಗೆಳೆಯರು, ಬಂಧು ಬಳಗ- ಸಮಾಜ…!
ಯಾರನ್ನು ಮೆಚ್ಚಿಸಲು ಈ ಜೀವನ?
ಈ ಚಿಂತೆ ನನಗಿಲ್ಲ ಅನ್ನುವ ಅರಿವಿನಿಂದ…, ಮುಂದೆಂದೂ ಅಮ್ಮ ನನ್ನಲ್ಲಿ ಭವಿಷ್ಯದಬಗ್ಗೆ ಕೇಳಲಿಲ್ಲ!
Comments
Post a Comment