ಸೋಲು ಗೆಲುವಿನ ಲೆಕ್ಕಾಚಾರದಲ್ಲಿ!

ಸೋಲು ಗೆಲುವಿನ ಲೆಕ್ಕಾಚಾರದಲ್ಲಿ!

ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಏನೋ ನೋವು!

ಅಂದುಕೊಂಡದ್ದನ್ನು ಸಾಧಿಸುವುದು ಗೆಲುವೆ, ಅಥವಾ…, ಅಂದುಕೊಂಡದ್ದನ್ನು ಸಾಧಿಸಲು ಕಳೆದುಕೊಳ್ಳಬೇಕಾಗಿ ಬಂದದ್ದನ್ನು ಉಳಿಸಿಕೊಂಡಿದ್ದರೆ ಅದು ಗೆಲುವೆ?

ಎರಡೂ ನಡೆದರೆ ಗೆಲುವು ಅನ್ನುವಂತಿಲ್ಲ!

ಯಾಕೆಂದರೆ…,

ಜೀವನದಲ್ಲಿ ಪ್ರತಿಯೊಂದೂ ಆಯ್ಕೆ!!

ಒಂದೋ ಅದು ಅಥವಾ ಇದು!

ಕಠಿಣವಾದ ಆತ್ಮವಿಮರ್ಶೆಗೆ ಒಳಗಾಗಲ್ಪಡುತ್ತಿದ್ದೇನೆ!

ಯಾವುದು ಅಹಂ- ಯಾವುದು ಹೆಮ್ಮೆ?

ಕಳೆದುಕೊಂಡದ್ದು ಏನು- ಗಳಿಸಿದ್ದು ಏನು?

ಇದುವರೆಗಿನ ಜೀವನದಲ್ಲಿ "ಆತ್ಮತೃಪ್ತಿ"ಯಾದರೂ ಉಳಿದಿದೆಯೇ ಅನ್ನುವುದು ಪ್ರಶ್ನೆ!

ನಿಮ್ಮ ಪುಸ್ತಕ ಯಾಕೋ ಹಿಡಿಸಲಿಲ್ಲ! ಬಾಲಿಶವಾಗಿದೆ!” ಅಂದೆ!

ಹೇಳಿದ ನಂತರ ಹೇಳಬಾರದಿತ್ತೇನೋ ಅನ್ನಿಸಿತು!

ಆದರೆ…, ಇರುವುದನ್ನು ಹೇಳಿದರೆ ತಪ್ಪೇನು?

ಅಥವಾ…, ಅದು ನನ್ನ ಸ್ಪಷ್ಟ ಅಭಿಪ್ರಾಯ!

ಭೀಭತ್ಸವಾಗಿರುವ ಕಥಾಹಂದರ ಹೊಂದಿರುವ ಭ್ರಮೆ ಮೂಡಿಸುವ ಹೆಸರಿನ ಪುಸ್ತಕ! ಓದಿ ಮುಗಿಸಿದಾಗ ಚಂದಾಮಾಮ ಓದಿದ ಅನುಭವ! ಆದರೆ ತಾನು ಪಕ್ವವಾದವನು ಎಂದು ಬಿಂಬಿಸಲು ಕೆಲವೊಂದು ಪದಗಳನ್ನು ನೇರವಾಗಿ ಬಳಸಿದ್ದ! ಹೆಂಗಸರ ಅಂಗಾಂಗದ ಪದ…! ಅದು ಮತ್ತಷ್ಟು ಅಸಹನೆ ಹುಟ್ಟಿಸಿತು!

ಆ ಅಸಹನೆ ಮುಖ ಮೂತಿ ನೋಡದೆ ಅಭಿಪ್ರಾಯ ಹೇಳುವಂತೆ ಮಾಡಿತ್ತು!

ನಾನು ಹೇಳಿದ್ದನ್ನು ಆತ ಹೇಗೆ ತೆಗೆದುಕೊಳ್ಳುತ್ತಾನೆ ಅನ್ನುವುದು ಆತನ ಪ್ರಬುದ್ಧತೆಯನ್ನು ಅವಲಂಬಿಸಿದೆ!

ನಿಜವೇ…, ಇತ್ತೀಚಿನ ನವ ಸಾಹಿತಿಗಳು ಬರೆದದ್ದನ್ನು ಓದಿ ನಿರಾಶನಾಗಿದ್ದೇನೆ! ಹಾಗೆಂದು ಓದಿದ ಪುಸ್ತಕಗಳೆಲ್ಲಾ ನಿರಾಸೆ ಹುಟ್ಟಿಸಿತು ಅನ್ನಲಾರೆ! ಕೆಲವರು ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಪ್ರಕಟಿಸಿದ್ದಾರೆ! ಆದರೂ ಬರಹ ಮನಸ್ಸಿಗೆ ತಟ್ಟುವುದಿಲ್ಲ!

ಯಾಕೆ?

ಎಲ್ಲರೂ ಬರೆಯುವವರೇ ಆಗಿ…, ಓದುವವರ ಸಂಖ್ಯೆ ಕಡಿಮೆಯಾಗಿದೆ! ಓದುವವರೂ ಕೂಡ ತಮ್ಮ ನೇರವಾದ ಅಭಿಪ್ರಾಯವನ್ನು ತಿಳಿಸಲು ಮುಜುಗರವಾಗಿ ಚೆನ್ನಾಗಿದೆ ಅನ್ನುತ್ತಾರೆ!

ಮತ್ತಷ್ಟು ಅದೇ ಬಾಲಿಶವಾದ ಪುಸ್ತಕಗಳು- ಬರಹಗಳು!

ಪ್ರೋತ್ಸಾಹಿಸೋಣವೆಂದರೆ ಅವರಿಗೆ ತಾವು ಬರೆದದ್ದೇ ಅದ್ಭುತ! ಕಲಿಕೆಗೆ ಯಾರೂ ತಯಾರಲ್ಲ!

ಅಧ್ಯಯನವಿಲ್ಲದ ಬರಹವನ್ನು ಹೇಗೆ ಒಪ್ಪುವುದು?

ಹಾಗಿದ್ದರೆ ನನ್ನ ವಿಷಯವೇನು?

ನಾನೂ ಕೂಡ ಕಥೆಗಾರ!

ಕಥೆಗಾರನಾಗಿದ್ದು ಇನ್ನೊಬ್ಬರ ಕಥೆಯನ್ನು ಚೆನ್ನಾಗಿಲ್ಲ ಅನ್ನುವುದು ಅಹಂಕಾರವೇ ಅನ್ನುವುದು ಪ್ರಶ್ನೆ!

ಬರೆಯುವಾಗ ನಾನೊಬ್ಬ ಕಥೆಗಾರನೆ ಹೊರತು ಓದುವಾಗ ಅಲ್ಲ!

ಮತ್ತೊಬ್ಬರ ಕಥೆಯನ್ನು ಓದಿ ನಿಜವಾದ ಅಭಿಪ್ರಾಯವನ್ನು ಹೇಳುವ ನಾನು ನನ್ನ ಕಥೆಗೆ ಬರುವ ಅಭಿಪ್ರಾಯನ್ನು ಹೇಗೆ ತೆಗೆದುಕೊಳ್ಳುತ್ತೇನೆ ಅನ್ನುವುದರಮೇಲೆ ನನ್ನ ಗೆಲುವು ನಿಂತಿದೆ!

ಎಷ್ಟು ಅಧ್ಯಯನ ಮಾಡಿದರೇನು…, ಎಷ್ಟು ದೇಶ ಸುತ್ತಿದರೇನು…, ಎಷ್ಟು ಹಿರಿಯರೊಂದಿಗೆ ಸಂವಾದ ಮಾಡಿದರೇನು…, ಪ್ರತಿ ಕ್ಷಣದ ಜೀವನಾನುಭವವನ್ನು ಒಳಗೊಳ್ಳದಿದ್ದರೆ?

ಇಂದಿನ ಅಭಿಪ್ರಾಯ ನಾಳೆಗೆ ಇರಬೇಕೆಂದಿಲ್ಲ! ಜೀವನಾನುಭವಕ್ಕೆ ತಕ್ಕಂತೆ ನಮ್ಮ ವ್ಯಕ್ತಿತ್ವವೂ ಬೆಳವಣಿಗೆಯನ್ನು ಹೊಂದುತ್ತದೆ! ಉತ್ತರ ಸಿಗುವವರೆಗೆ ಪ್ರಶ್ನೆಯ ಬೆನ್ನು ಹತ್ತುವುದು ಮಾನವ ಸಹಜ ಗುಣ! ಕೆಲವು ಪ್ರಶ್ನೆಗಳು ಗೊಂದಲಗೊಳಿಸುತ್ತದೆ! ಕೆಲವು ತಪ್ಪಾದ ಉತ್ತರವನ್ನು ಕೊಡುತ್ತದೆ! ಸರಿಯಾದ ಉತ್ತರ ದೊರಕುವ ಸಮಯದಲ್ಲಿ ನಮ್ಮೊಂದಿಗೆ ಯಾರು ಉಳಿದಿರುತ್ತಾರೆ ಅನ್ನುವುದರ ಮೇಲೆ ಅವರೊಂದಿಗಿನ ನಮ್ಮ ಸಂಬಧದ ಗಾಢತೆಯಿರುತ್ತದೆ!!!

ಗುರಿ ನಿಶ್ಚಯಿಸಿದ್ದು ನಾನು! ಅಂದಮೇಲೆ ಅದರ ಸಾಧ್ಯಾಸಾಧ್ಯತೆಯ ಸಂಪೂರ್ಣ ಹೊಣೆಗಾರನೂ ನಾನೇ! ಅವರಿದ್ದಿದ್ದರೆ, ಇವರಿದ್ದಿದ್ದರೆ, ಹಾಗಾಗಿದ್ದರೆ, ಹೀಗಾಗಿದ್ದರೆ…, ನೆಪಗಳಿಗೆ ಇಲ್ಲಿ ಅವಕಾಶವಿಲ್ಲ!

ಒಂದೋ ನೆಪೋಟಿಸಂನಿಂದ ಅಥವಾ ಹಣದ ಬಲದಲ್ಲಲ್ಲದೆ ನಿನಗೀ ಗುರಿ ಸಾಧಿಸಲಾಗುವುದಿಲ್ಲ!” ಎಂದ ಗೆಳೆಯ!

ಒಂದುಕ್ಷಣ ಪಿಚ್ ಅನ್ನಿಸಿತು!

ಯಾಕೆ ಸಾಧಿಸಲಾಗುವುದಿಲ್ಲ?

ಪ್ರಶ್ನೆ ನನ್ನದು! ಉತ್ತರ ಕಂಡುಕೊಳ್ಳಬೇಕಾದವನೂ ನಾನೇ!

ಗೆಳೆಯನಿಗೆ ಪ್ರತಿಯಾಗಿ ಏನೂ ಹೇಳಲಿಲ್ಲ! ಹೇಳಿ ಪ್ರಯೋಜನವಿಲ್ಲ!

ಗೆಳೆಯನ ನಂತರ ಗೆಳೆಯರು, ಅಪ್ಪ- ಅಮ್ಮ, ಬಂಧು- ಬಳಗ…, ಎಲ್ಲರೂ ಹೇಳಿದರು…,

ನಿನ್ನಿಂದ ಈ ಗುರಿ ಸೇರಲು ಸಾಧ್ಯವಿಲ್ಲ! ಬೇರೆ ಏನಾದರೂ ಕೆಲಸಕ್ಕೆ ಸೇರು! ದುಡ್ಡು ಮಾಡು! ನಂತರ ಗುರಿಯೆಡೆಗೆ ನಡೆ!”

ಗುರಿಯಿಂದ ಪಕ್ಕಕ್ಕೆ ಸರಿಯುವ ಯಾವೊಂದು ಪ್ರಕ್ರಿಯೆಗೂ ನಾನು ತಯಾರಿರಲಿಲ್ಲ!

ಒಂದೇ ಪ್ರಶ್ನೆ…,

ಯಾಕೆ ಸಾಧ್ಯವಿಲ್ಲ???

ಅಂತರಿಕ್ಷ ನನ್ನ ಗುರಿಯಾದರೆ ಪಾತಾಳದಿಂದ ಶ್ರಮವಾರಂಭಿಸಿದೆ!

ಒಬ್ಬನೇ…!

ಶ್ರಮ, ಕಾಯುವಿಕೆ, ಅಪಮಾನಗಳು...,

ಹೀಗಿರುವಾಗ ಅವಳು ನನ್ನ ಬದುಕನ್ನು ಪ್ರವೇಶಿಸಿದಳು!

ನಿನ್ನ ಜೊತೆ ನಾನಿರುತ್ತೇನೆ…!”

ಬೆರೆತಳು. ನನ್ನಲ್ಲಿ ನಾನಾಗಿ ಲೀನವಾದಳು! ಅದೊಂದು ಅದ್ಭುತ ಭಾವ!

ನನಗಾಗಿ ತುಡಿಯು ಹೃದಯವೊಂದಿದೆಯೆಂಬ ಅರಿವು!

ಇಲ್ಲಿ ತಪ್ಪು ಒಪ್ಪುಗಳಿಲ್ಲ! ಪರಸ್ಪರ ದೂಷಣೆಯಿಲ್ಲ…,

ಯಾಕೋ ನಮ್ಮಿಂದ ಈ ಗುರಿ ಸಾಧ್ಯವಿಲ್ಲ ಅನ್ನಿಸುತ್ತಿದೆ!” ಎಂದಳು.

ಭೂಮಿಯವರೆಗೆ ತಲುಪಿದ್ದವನು ಮತ್ತೊಮ್ಮೆ ಪಾತಾಳಕ್ಕೆ ಬಿದ್ದ ಅನುಭವ!

ಮಾತನಾಡಲು ಸ್ವರ ಹೊರಡಲಿಲ್ಲ! ಎದೆ ಧಗ್ ಅಂದ ರಭಸಕ್ಕೆ ಗಂಟಲು ಕಟ್ಟಿ…,

ನನ್ನನ್ನೇ ನೋಡುತ್ತಿದ್ದ ಅವಳು…,

ಭವಿಷ್ಯದಬಗ್ಗೆ ಭಯವಾಗುತ್ತಿದೆ!” ಎಂದಳು.

ಏನು ಹೇಳಲಿ?

ಈ ಘಟ್ಟದಲ್ಲಿ?

ಮಾನಸಿಕ ತುಮುಲಕ್ಕೆ ಒಳಗಾದೆ!

ಇಮೋಷನಲ್ ಬ್ಲಾಕ್‌ಮೇಲ್! ಅವಳರಿವಿಲ್ಲದೆಯೇ…!

ನಮ್ಮ ನಡುವೆ ದೈಹಿಕ ಸಂಪರ್ಕವೇನೂ ನಡೆಯಲಿಲ್ಲ! ಆದರೆ…, ಒಂದು ಕಂಪನ!

ಅವಳ ಎದೆಯೊಳಗೆ ಮುಖ ಹುದುಗಿಸಿದಾಗ…, ಅವಳ ಸೌಂಧರ್ಯವನ್ನು ಕಂಡಾಗ…,

ಒಂದು ನಡುಕ! ನನ್ನರಿವಿಲ್ಲದೆ ಸುರಿದ ಕಣ್ಣೀರು…!

ಕೊನೆಗೆ…, ನನ್ನ ಪ್ರೇಮದ ಉತ್ತುಂಗದಂತೆ ಒಂದು ಮುತ್ತು!

ನನಗಾಗಿ ಯಾವ ತ್ಯಾಗಕ್ಕೂ ಅವಳು ಸಿದ್ಧಳಿದ್ದಳು! ಹೆಣ್ಣಿನ ಅತಿ ಪವಿತ್ರವಾದ ಶೀಲವನ್ನು ಸಮರ್ಪಿಸಲೂ…!

ಇಲ್ಲಿಯೇ ನನ್ನ ತಕರಾರು!

ಸಮರ್ಪಿಸಿದ ಶೀಲ ನನಗೆ ಬೇಡ! ಅದೊಂದು ಗಂಟು! ಬಂಧನ!”

ಓಹೋ…! ಬಂಧನವಾಗದಿದ್ದರೆ ಹೆಣ್ಣಿನ ಶೀಲ ನಿನಗೆ ಬೇಕೋ?” ಎಂದಳು.

ಮೌನನಾದೆ. ನಾನು ಹೇಳಿದ್ದರ ಉದ್ದೇಶ ಅದಲ್ಲ! ಹಾಗದರೆ ಹೇಗೆ ವಿವರಿಸುವುದು?

ಪ್ರಪಂಚದಲ್ಲಿ ಏನಾಗಿದೆಯೆಂದರೆ…,

ಗಂಡು ಯಾವಾಗಲೂ ಹೆಣ್ಣಿನಿಂದ ದೈಹಿಕ ಸುಖವನ್ನು ಮಾತ್ರ ಬಯಸುತ್ತಾನೆ ಅನ್ನುವಂತೆ!

ಆದರೆ ವಾಸ್ತವ ಅದಲ್ಲ!

ನನಗದು ಬೇಡ! ಅದರಲ್ಲೂ ಈಗ…, ನನ್ನ ಗುರಿ ಸೇರುವವರೆಗೆ! ಅಥವಾ ನಡೆಯಿತೋ…, ಅದಕ್ಕಾಗಿ ನಾನು ನನ್ನ ಗುರಿಯನ್ನೂ ಬಿಡಬೇಕಾದ ಅವಸ್ತೆ ಬರುತ್ತದೆ!

ಯಾಕೆಂದರೆ…,

ನಿನಗಾಗಿ ನಾನು…!” ಎನ್ನುವಲ್ಲಿಂದ ಶುರುವಾಗುವ ಹೆಣ್ಣಿನ ಮಾತು!

ಇಲ್ಲ ಹಾಗೆ ಹೇಳುವುದಿಲ್ಲ!” ಎಂದು ಯಾವ ಹೆಣ್ಣಿಗೂ ಹೇಳಲಾಗುವುದಿಲ್ಲ! ಯಾಕೆಂದರೆ…, ಅದು ಹೆಣ್ಣಿನ ಭಾವನಾತ್ಮಕತೆಯ ಉತ್ತುಂಗ!

ಅದಕ್ಕೆ ನಾನು ಗೌರವವನ್ನು ಕೊಡಲೇ ಬೇಕು!

ಗಂಡಿಗೆ ಭಾವನೆಗಳಿಲ್ಲವೇ? ಗಂಡೂ ಕೂಡ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಾನೆ! ಆದರದಕ್ಕೆ ಯಾವುದೇ ನಿಯಮದ ಅಗತ್ಯವಿಲ್ಲ! ಈ ಅಗತ್ಯವಿಲ್ಲದಿರುವಿಕೆಯಿಂದಾಗಿ ತನ್ನ ಭಾವನಾತ್ಮಕತೆಯ ಉತ್ತುಂಗವನ್ನು ಗಂಡು ಸಾಬೀತು ಪಡಿಸಲಾರ!

ಗುರಿ ತಲುಪುತ್ತಿರುವ ಈ ಸಂದರ್ಭದಲ್ಲಿ…,

ಕಥೆಗಾರನಾಗಿ ಹಲವರಿಂದ ಬೆನ್ನು ತಟ್ಟಿಸಿಕೊಂಡಿದ್ದೇನೆ…, ಕೆಲವರಿಂದ ಬೈಯಿಸಿ ಕೊಂಡಿದ್ದೇನೆ…!

ಕುಟುಂಬವೂ ಸೇರಿ- ನಿನ್ನಿಂದ ಸಾಧ್ಯವಿಲ್ಲ ಅಂದವರೊಂದಿಗೆ ಕೂದಲೆಳೆಯ ಅಂತರವಾದರೂ ಉಳಿದುಬಿಟ್ಟಿದೆ…!

ಇನ್ನು…, ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವಲ್ಲಿ ಯಾರೆಂದರೆ ಯಾರೊಬ್ಬರೂ ಉಳಿದಿಲ್ಲವಾದ್ದರಿಂದ ಮನುಷ್ಯರೊಂದಿಗಿನ ಸಂಬಂಧದ ಗಾಢತೆ ನಿಶ್ಚಯವಾಗಿದೆ!

ನನ್ನ ಸರ್ವಸ್ವವನ್ನೇ ನೀಡಿದರೂ ನನಗಿಂತ...” ಅನ್ನುವಲ್ಲಿ ಹೆಣ್ಣೂ ಹತ್ತಿರ ಸೇರದವಳಾಗಿದ್ದಾಳೆ!

ಇಷ್ಟು ವರ್ಷಗಳ ಪ್ರಯತ್ನದಲ್ಲಿ…, “ನಾನು" ನಿಶ್ಚಯಿಸಿದ ಗುರಿಯನ್ನು ಸೇರುತ್ತಿರುವ ಈ ಸಂದರ್ಭದಲ್ಲಿ...ಯಾರೆಂದರೆ ಯಾರೂ ನನಗಾಗಿ ಉಳಿದಿಲ್ಲ ಅನ್ನುವುದು ವಾಸ್ತವವಾಗಿರುವಾಗ…

ಇದು ಗೆಲುವೆ?

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!