ಪ್ರೇಮ- ಧ್ಯಾನ- ದುಃಖ!
ಪ್ರೇಮ- ಧ್ಯಾನ- ದುಃಖ!
೧
“ಪ್ರೇಮ ದುಃಖ!” ಎಂದಳು.
“ಪ್ರೇಮ ಧ್ಯಾನ!” ಎಂದೆ.
“ಹೋಗುತ್ತಾ ಹೋಗುತ್ತಾ ನಿನಗೇ ಅರ್ಥವಾಗುತ್ತದೆ!” ಎಂದಳು.
“ನಿನಗೂ!” ಎಂದೆ.
೨
“ಏನಿವತ್ತು ಇಷ್ಟು ಖುಷಿಯಾಗಿದ್ದೀಯ?” ಎಂದಳು.
“ಅವಳು ಮತ್ತೊಬ್ಬನನ್ನು ಪ್ರೇಮಿಸುತ್ತಿದ್ದಾಳಂತೆ!” ಎಂದೆ.
“ನಿನ್ನ ತಲೆ! ನೀನು ಪ್ರಪೋಸ್ ಮಾಡಲಿಲ್ಲವಾ?” ಎಂದಳು.
“ಮಾಡಿದೆ! ಆದರೆ ಅವಳಿಗೆ ನನಗಿಂತಲೂ ಶ್ರೇಷ್ಠವಾದ ಪ್ರೇಮಾನುಭೂತಿ ಬೇಕಿತ್ತು!” ಎಂದೆ.
೩
“ಏನಾಯ್ತೆ?” ಎಂದೆ.
“ಅವನು ನೋಡು! ಯಾವಳೊಂದಿಗೋ ತಿರುಗುತ್ತಿದ್ದಾನೆ!” ಎಂದಳು.
“ಅದಕ್ಕೆ ನಿನಗೇನು?”
“ಎಷ್ಟು ಡೀಪ್ ಆಗಿ ಪ್ರೇಮಿಸಿದೆ!” ಎಂದಳು.
“ಅಷ್ಟೆ! ನಿನ್ನ ಪ್ರೇಮಕ್ಕೆ ಅವನು ಯೋಗ್ಯನಲ್ಲ ಅಂತ ಅರ್ಥ!” ಎಂದೆ.
“ನಿನಗರ್ಥವಾಗುವುದಿಲ್ಲ!” ಎಂದಳು.
೪
“ಐ ಲವ್ ಯು!” ಎಂದೆ.
“ಛೀ! ನಾಚಿಕೆಯಾಗುವುದಿಲ್ಲವಾ? ಎಷ್ಟು ರೆಸ್ಪೆಕ್ಟ್ ಕೊಟ್ಟಿದ್ದೆ! ಎಂತಾ ಸ್ಥಾನದಲ್ಲಿ ಇಟ್ಟಿದ್ದೆ! ಒಬ್ಬ ಒಳ್ಳೆಯ ಗೆಳೆಯನಾಗಿ…! ನೀನೂ ಎಲ್ಲರಂತೆ ಮಾಮೂಲಿ ಹುಡುಗನಾದೆ! ನಾನು ಅಂತವಳಲ್ಲ!” ಎಂದಳು.
“ನಿನಗೇನಾಯ್ತೆ? ನಾನೀಗ ಏನು ಹೇಳಿದೆ?”
“ಐ ಲವ್ ಯು ಅಂದ್ರೆ ಎಷ್ಟು ಗ್ರೇಟ್ ಇಮೋಷನ್ ಗೊತ್ತಾ…?” ಎಂದಳು.
೫
“ಏನಂತಾನೆ?” ಎಂದೆ.
“ಇಲ್ಲ! ನನ್ನ ಪ್ರೇಮ ಅವನಿಗೆ ತಾಗುತ್ತಲೇ ಇಲ್ಲ!” ಎಂದಳು.
೬
“ಎಷ್ಟು ಖುಷಿಯಾಗಿ…, ಎಷ್ಟು ನೆಮ್ಮದಿಯಾಗಿದ್ದೀಯೋ…! ನಾನೇಕೆ ಹೀಗೆ ಚಡಪಡಿಸುತ್ತಿದ್ದೇನೆ?” ಎಂದಳು.
“ನಿರೀಕ್ಷೆ ಕೊಲ್ಲುತ್ತದೆ!” ಎಂದೆ.
೭
“ಹೇಳೀಗ…! ನಾನೇನು ಮಾಡಲಿ?” ಎಂದಳು.
“ಪ್ರೇಮಿಸು!” ಎಂದೆ.
“ನಿನ್ನ ತಲೆ!” ಎಂದಳು.
“ಹೂಂನೆ! ನಿನ್ನ ಪಾಡಿಗೆ ನೀ ಪ್ರೇಮಿಸು! ಹಾಗೆಯೇ ನಿನ್ನನ್ನು ಪ್ರೇಮಿಸಬೇಕೆಂದು ನಿರೀಕ್ಷಿಸದಿರು!” ಎಂದೆ.
“ಅದಷ್ಟು ಸುಲಭವಾ?” ಎಂದಳು.
“ಗೊತ್ತಿಲ್ಲ! ಆದರೆ…, ನಾನು ಐ ಲವ್ ಯು ಹೇಳಿದವರಲ್ಲಿ ನೀನು ಕೊನೆಯವಳು!” ಎಂದೆ.
“ಏನು?” ಎಂದಳು.
“ಹೂ! ಎಲ್ಲರಿಗೂ ತಾವು ಯಾರನ್ನು ಪ್ರೇಮಿಸುತ್ತಾರೋ ಅವರೇ ಬೇಕು! ತಮ್ಮನ್ನು ಪ್ರೇಮಿಸುವವರ ಪ್ರೇಮ ಶ್ರೇಷ್ಠ ಅಲ್ಲವೇ ಅಲ್ಲ!” ಎಂದೆ.
೮
“ಅಲ್ಲವೋ…! ಹೇಗೆ ಅಷ್ಟು ಧೈರ್ಯವಾಗಿ- ಮುಜುಗರವಿಲ್ಲದೆ ಐ ಲವ್ ಯು ಹೇಳ್ತೀಯ ಅಂತ?!” ಎಂದಳು.
“ಐ ಲವ್ ಯು ಅಂದ್ರೆ ಎಷ್ಟು ಗ್ರೇಟ್ ಇಮೋಷನ್ ಗೊತ್ತಾ…?” ಎಂದೆ.
“ಏನು…? ನನ್ನ ಮಾತು ನನಗೇ ವಾಪಸ್ ಮಾಡ್ತಿದೀಯ?” ಎಂದಳು.
“ಆ ಒಂದು ಇಮೋಷನ್ ನಿನ್ನ ಮೇಲೆ ನನಗೆ ಬರಬೇಕಾದರೆ…, ನೀನೆಷ್ಟು ಗ್ರೇಟ್ ಇರಬೇಕು ಅಲ್ಲವಾ…?” ಎಂದೆ.
“ಅಂದರೆ…?” ಎಂದಳು.
“ನೀನೊಬ್ಬಳು ಅದ್ಭುತ ಪ್ರೇಮಿ! ನೀನೊಬ್ಬಳು ಅದ್ಭುತ ಅನುಭಾವಿ! ನೀನೊಬ್ಬಳು ಅದ್ಭುತ ಭಾವಜೀವಿ! ಆ ನಿನ್ನ ನನಗೆ ಇಷ್ಟ! ಅಷ್ಟೆ ಹೊರತು ನಿನ್ನಿಂದ ನನಗೆ ಯಾವ ನಿರೀಕ್ಷೆಯೂ ಇಲ್ಲ!” ಎಂದೆ.
“ಇನ್ನೂ ಸ್ವಲ್ಪ ಹೇಳು…, ಅಂದರೆ…., ಹೊಗಳು!” ಎಂದಳು.
“ಇಲ್ಲವೇ…, ನಿನ್ನ ಭಾವಾನುಭೂತಿ…, ಅದು ಯಾರ ಮೇಲೇ ಆಗಿರಲಿ…, ಎಷ್ಟು ಅದ್ಭುತ! ಆ ಅದ್ಭುತಕ್ಕೆ ನನ್ನ ಐ ಲವ್ ಯು! ಅಷ್ಟೆ ಹೊರತು…, ನಿನ್ನಿಂದ ಯಾವ ನಿರೀಕ್ಷೆಯೂ ನನಗಿಲ್ಲ!” ಎಂದೆ.
“ಮತ್ತೆ…, ನಿನ್ನ ಐ ಲವ್ ಯು ನನಗೆ ಯಾಕೆ ನೆಗೆಟಿವ್ ಇಮೋಷನ್ ಕೊಟ್ಟಿತು?” ಎಂದಳು.
“ಯಾಕೆಂದರೆ…, ಲವ್ ಅನ್ನುವ ಪದಕ್ಕೆ ನಿನ್ನ ನಿಘಂಟುವಿನಲ್ಲಿ ಅರ್ಥ ಬೇರೆಯಿದೆ! ಜೊತೆಗೆ…, ಪರಿಮಿತಿಯಿದೆ! ನನಗಿಲ್ಲ! ನನ್ನ ಪ್ರೇಮ ಅನಂತವಾದುದು!” ಎಂದೆ.
“ಪ್ರಣಾಮ ಗುರುದೇವ!” ಎಂದಳು.
೯
“ಏನೇ ಇವತ್ತು ಇಷ್ಟು ಖುಷಿಯಾಗಿದ್ದೀಯ?” ಎಂದೆ.
“ಐ ಲವ್ ಯು!” ಎಂದಳು.
“ಅಯ್ಯೋ…! ಕಥೆಯೊಂದಿಗೆ ನನ್ನ ಜೀವನವನ್ನೂ ಇಷ್ಟುಬೇಗ ಮುಗಿಸಿಬಿಟ್ಟೆಯಾ?” ಎಂದೆ.
“ಗೊತ್ತಾ…? ಹೆಣ್ಣು ಸ್ವಲ್ಪ ಪಾಸೆಸಿವ್!” ಎಂದಳು.
“ಅರ್ಥವಾಗಲಿಲ್ಲವೇ ಪ್ರೌಢ ಹೆಣ್ಣೇ…!” ಎಂದೆ.
“ನೀನು ಐ ಲವ್ ಯು ಹೇಳಿದವಳಲ್ಲಿ ನಾನೇ ಕೊನೆ ಅಂದೆ ಅಲ್ವಾ..?” ಎಂದಳು.
“ಇನ್ನು ಬೇರೆ ಮಾತಿಲ್ಲ- ಹೇಳು…, ಪ್ರೇಮ ದುಃಖವೋ ಧ್ಯಾನವೋ?” ಎಂದೆ.
“ಅದು ನಿನ್ನ ಕೈಯ್ಯಲ್ಲಿದೆ!” ಎಂದಳು.
Comments
Post a Comment