ಅವನೊಬ್ಬ!

ಅವನೊಬ್ಬ!

ಅವನೊಬ್ಬನಿದ್ದ! ಕನಸು ಕಣ್ಣಿನ ಹುಡುಗ! ಹೃದಯದ ತುಂಬಾ ಪ್ರೇಮ- ಪ್ರಪಂಚವೂ ಸಾಲದು ಅನ್ನುಷ್ಟು! ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧ ಅವನ ಪ್ರೇಮದ ಉತ್ಕೃಷ್ಟತೆಯನ್ನು ಹೆಚ್ಚಿಸುತ್ತಿತ್ತು! ಗಿಡ- ಮರಗಳೊಂದಿಗೆ ಸಂಭಾಷಿಸುತ್ತಿದ್ದ! ಕ್ರಿಮಿ ಕೀಟಗಳನ್ನೂ ಬಿಡುತ್ತಿರಲಿಲ್ಲ! ಎಲ್ಲದರಲ್ಲೂ ಅವನಿಗೆ ಖುಷಿಯೆ- ಪ್ರೇಮವೇ! ಇನ್ನೂ ಇನ್ನೂ ಪ್ರೇಮಿಸಬೇಕು! ಮಕ್ಕಳು, ಪ್ರಾಣಿಗಳು, ಪುಸ್ತಕಗಳು, ವಿಗ್ರಹಗಳು…, ಜೀವನಿರ್ಜೀವಾದಿ ವಸ್ತುಗಳೊಂದಿಗೆ ಸಕಲ ಬ್ರಹ್ಮಾಂಡವನ್ನೂ ಪ್ರೇಮಿಸಬೇಕು! ಅವನ ಪಾಡಿಗೆ ಅವನೆನ್ನುವಂತೆ ಇದ್ದುಬಿಡುತ್ತಿದ್ದ!

ಅವನೊಬ್ಬನಿದ್ದಾನೆ! ಅವಳನ್ನು ಕಂಡ! ಎಷ್ಟು ಚಂದ- ಪ್ರಪಂಚದ ಸೌಂಧರ್ಯವೆಲ್ಲಾ ಅವಳಲ್ಲಿ ಅಡಗಿದೆ ಎಂದು ಭ್ರಮಿಸಿದ! ಪ್ರೇಮನಿವೇದನೆಯನ್ನು ಮಾಡಿದ! ಒಪ್ಪಿದಳು! ಶುರುವಾಯಿತು ಪ್ರೇಮ ಪರೀಕ್ಷೆ! ನಿನ್ನ ಪ್ರೇಮ ನಿಜವೇ ಆದರೆ…, ಅನ್ನುವಲ್ಲಿಂದ ಪ್ರಾಪಂಚಿಕಕ್ಕೆ ಎಳೆದು ತಂದಳು! ನಿಧಾನಕ್ಕೆ ಆನಂದ ಮರೆಯಾಗಿ ಏನೋ ವೇದನೆ! ಅವಳೆಂದ ವೇಗಕ್ಕೆ ತನ್ನ ಪ್ರೇಮವನ್ನು ನಿರುಪಿಸಲಾರದೇ ಹೋದ- ತನ್ನತನವನ್ನು ಕಳೆದುಕೊಳ್ಳಲಾರದೇ ಹೋದ! ನಿಧಾನವಾಗಿ ಅವನಿಂದ ದೂರವಾದಳು! ಬಿಟ್ಟೇ ಹೋದಳು!

ಅವನೊಬ್ಬನಿರುತ್ತಾನೆ! ಯಾವುದೇ ಅಂಕೆಯಿಲ್ಲದ ಜೀವನ! ಅವನಿಗೇನು? ಪ್ರೇಮಿಸಬೇಕು! ಮನಸೋ ಇಚ್ಛೆ ಪ್ರೇಮಿಸಬೇಕು! ಪ್ರೇಮಿಸಲ್ಪಡಬೇಕು ಅನ್ನುವ ಚಿಂತೆಯೇನೂ ಅವನಿಗಿಲ್ಲ! ಪ್ರೇಮಿಸುವುದು ಅವನ ಆಜನ್ಮ ಸಿದ್ಧ ಹಕ್ಕು! ಪುಟಾಣಿ ಮಕ್ಕಳೆಂದರೆ ಅವನಿಗೆ ಅಮಿತ ಪ್ರೇಮ! ಹೋಗುತ್ತಾ ಹೋಗುತ್ತಾ ಅವನೊಂದು ವಿಷಯವನ್ನು ಅರಿತುಕೊಂಡ! ಈ ಪ್ರಪಂಚದಲ್ಲಿ ಅದೆಷ್ಟು ಜನ ಪ್ರೇಮರಾಹಿತ್ಯದಿಂದ ನರಕವನ್ನು ಅನುಭವಿಸುತ್ತಿದ್ದಾರೆ! ಎಷ್ಟೊಂದು ಅನಾಥರು- ವೃದ್ಧರು- ರೋಗಿಷ್ಟರು- ಭಿಕ್ಷುಕರು! ಪ್ರೇಮಿಸಬೇಕೆಂದುಕೊಂಡರೆ…, ಪ್ರಪಂಚದಲ್ಲಿ…, ಒಂದಿಷ್ಟು ಪ್ರೇಮಕ್ಕಾಗಿ ತುಡಿಯುವವರಿಗೇನು ಕೊರತೆಯೇ…? ಈಗವನ ಪ್ರೇಮ ಯಾರನ್ನೂ ಅವಲಂಬಿಸಿಲ್ಲ! ಅವ್ಯಾಹತವಾಗಿ ಹರಿಯುತ್ತಿದೆ! ಕ್ರಿಮಿ ಕೀಟ ಪ್ರಾಣಿ ಪಕ್ಷಿ ಮಣ್ಣು ಬಂಡೆಗಳಿಂದ ಹಿಡಿದು ಪ್ರತಿಯೊಂದೂ ಅವನ ಪ್ರೇಮಕ್ಕೆ ಹೇತುವಾಗಿರುವಾಗ…, ಮನುಷ್ಯರನ್ನು ಕೇಳಬೇಕೆ? ಪ್ರತಿಯೊಂದಕ್ಕೂ…, ಪ್ರತಿಯೊಬ್ಬರಿಗೂ ಅವನ ಪ್ರೇಮದ ಬಾಗಿಲು ತೆರೆದುಕೊಂಡಿದೆ! ಯಾರು ಇದ್ದರೂ ಇಲ್ಲದಿದ್ದರೂ…, ಯಾರಿಗೆ ಅರ್ಥವಾದರೂ ಆಗದಿದ್ದರೂ…, ಪ್ರೇಮ…, ಅದೊಂದು ಅದ್ಭುತ ತಪಸ್ಸು! ಅದೊಂದು ಧ್ಯಾನ! ಅದೊಂದು ವೇದಾಂತ! ಪ್ರೇಮಿಸುವುದಲ್ಲಿರುವ ಸುಖ- ಸುಖವಲ್ಲ- ಆತ್ಮಾನಂದ…, ಇನ್ನು ಯಾವುದರಲ್ಲಿದೆ?

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!