ವ್ಯವಸ್ತೆ!

ವ್ಯವಸ್ತೆ ಅಥವಾ ಮಾಫಿಯಾ!

ಈ ಕಥೆಯನ್ನು ನಾನು ಹೇಗೆ ಹೇಳುವುದು ಮನವೇ…?” ಎಂದೆ.

ವ್ಯವಸ್ತೆಯಬಗ್ಗೆ ಹೇಳಲು ಇದಕ್ಕಿಂತ ಒಳ್ಳೆಯ ಉದಾಹರಣೆ ಏನಿದೆ?!”

ಅರ್ಥವಾಗುತ್ತದೆಯೇ? ಹೇಗೆ ಶುರುಮಾಡಲಿ?”

ಮುದುಕಿಯೊಬ್ಬಳು ಬಂದು ಭಿಕ್ಷೆ ಬೇಡಿದಳು- ಕೊಟ್ಟೆಯ?”

ನನ್ನಲ್ಲಿದ್ದರಲ್ಲವೇ..?” ಎಂದೆ.

ನಿನ್ನದೂ ಒಂದು ಮನುಷ್ಯ ಜನ್ಮ! ಭಿಕ್ಷೆಯನ್ನು ಕೊಡಲಿಲ್ಲ…, ಅವಳಿಗಾಗಿ ಮರುಗಿದೆಯಾ?”

ನಾ…, ಮೌನ!

ಮಾನವ ಧರ್ಮ ಎಂದೊಂದಿದೆ! ಗೊತ್ತೇ?”

ಅರ್ಥವಾಯಿತು!” ಎಂದೆ.

ಹಾಗಿದ್ದರೆ…, ಹೇಳಿಬಿಡು!”

ಅದೆಷ್ಟು ಜನ! ನಾನೊಬ್ಬ ಪ್ರೇಕ್ಷಕ! ನನ್ನ ವಿಷಯದಲ್ಲಿ ಉಳಿದವರು!

ನಾನು ಕುಳಿತಿರುವ ರೀತಿಯಿಂದಾಗಿಯೋ…, ಅವರನ್ನು ನಾನು ಗಮನಿಸುತ್ತಿದ್ದೇನೆ ಅನ್ನುವ ಅರಿವಿನಿಂದಲೋ…, ತಾವು ನೋಡುತ್ತಿರುವ ಅರಿವು ಬಾರದಂತೆ ಅವರೂ ನನ್ನನ್ನು ಗಮನಿಸುತ್ತಿದ್ದರು…!

ಏನಪ್ಪಾ…! ನಿನ್ನೆಯೂ ಕೇಳಿದೆ- ಕೊಡಲಿಲ್ಲ! ಇವತ್ತಾದರೂ…!” ಎಂದರು ಆ ವೃದ್ಧೆ!

ಇವತ್ತು ದುಡ್ಡಿದೆ! ಎದ್ದು…,

ಬನ್ನಿ!” ಎಂದೆ.

ನನ್ನ ಉದ್ದೇಶ ಅರ್ಥವಾಗಿ…,

ಊಟ ಬೇಡ!” ಎಂದರು.

ಸರಿ ಹೋಗಿಬನ್ನಿ!” ಎಂದು ಹೇಳಿ ಕುಳಿತುಕೊಂಡೆ.

ಮನಸ್ಸೇ…! ಕ್ಷಮಿಸು! ನಿನ್ನ ಆತುರಕ್ಕೆ ಅನುಗುಣವಾಗಿ ನಾನು ಮಾನವ ಧರ್ಮವನ್ನು ಪಾಲಿಸಲಾರೆ!” ಎಂದೆ.

ಅರ್ಥವಾಯಿತು! ಅವರಿಗೆ ಮಾಡುವ ಸಹಾಯ- ಅವರಿಗೇ ಸೇರುತ್ತದೆಯೇ ಅನ್ನುವ ಗೊಂದಲ! ಈ ಪ್ರಪಂಚದಲ್ಲಿ ಯಾರೂ ಒಳಿತು ಮಾಡದಿರಲು ಇದೊಂದು ದುರಂತವಾಗುತ್ತಿದೆ! ಅಪಾತ್ರರ ಪಾತ್ರ!”

ಇನ್ನೇನು ಮತ್ತೆ? ಆ ವೃದ್ಧೆಗೆ ಊಟ ಬೇಡವಂತೆ…! ದುಡ್ಡು ಬೇಕಂತೆ!” ಎಂದೆ.

ಅವರನ್ನು ಹಿಂಬಾಲಿಸಿ ಪೂರ್ವಾಪರವನ್ನು ತಿಳಿದುಕೊಂಡೆಯಾ?”

ಇಲ್ಲ!”

ಯಾಕೆ?”

ನನ್ನ ಮನಸ್ಸು ನೀನು…! ನಿನಗೆ ತಿಳಿಯದೆ?” ಎಂದೆ.

ಅಸೂಯೆಯೇ?

ನಾಲ್ಕು ಪುಸ್ತಕವನ್ನು ಬರೆದಿದ್ದಾನೆ ಹುಡುಗ!

ಅವನ ವಯಸ್ಸಿನಲ್ಲಿ ನಾನೇನು ಮಾಡುತ್ತಿದ್ದೆ?

ಹುಡುಗಿಯರ ಹಿಂದೆ ಸುತ್ತುವ ಪೋಲಿ!

ಈಗೇನು ಸಮಸ್ಯೆ?

ದೇಶದ ಪರಿಸ್ಥಿತಿಯಬಗ್ಗೆ- ಮತ್ತು ಗೂಗಲ್‌ನಲ್ಲಿ ಹರಿದಾಡುತ್ತಿರುವ ಇತಿಹಾಸವೊಂದರಬಗ್ಗೆ ಅವನು ಬರೆದ ಲೇಖನ!

ಇದು ನನಗೆ ಅರ್ಥವಾಗುವುದಿಲ್ಲ!

ಹೀಗಾದರೆ ಅರ್ಥವ್ಯವಸ್ತೆಯಬಗ್ಗೆ ಅರಿವು ಮೂಡುವುದು ಹೇಗೆ?

ಈಗಿನ ಪೀಳಿಗೆಯ ಪ್ರತಿನಿಧಿ ಅವನು!

ಸರ್ಕಾರ ಎಂದರೇನು? ಸರ್ಕಾರ ನಡೆಯುವುದು ಹೇಗೆ?

ದೇಶದಲ್ಲಿರುವವರೆಲ್ಲಾ ಬಡವರು! ಬಡವರಿಗೆ ಎಲ್ಲವನ್ನೂ ಫ್ರೀಯಾಗಿ ಕೊಡಬೇಕು- ಅನ್ನುವುದು ಅವನ ತತ್ತ್ವ!

ಹಣವೆಲ್ಲಾ ಶ್ರೀಮಂತರಲ್ಲಿ ಕೇಂದ್ರೀಕೃತವಾಗುತ್ತಿದೆ- ಅನ್ನುವುದು ಅವನ ಆರೋಪ!

ಬೆಲೆ ಏರಿಕೆ, ಸುಂಕ ಕಟ್ಟುವುದು…, ಇದು ಬಡವನಿಗೆ ಹೊರೆ!

ಹೌದು! ಬಡವನಿಗೆ ಹೊರೆಯೇ! ಹಾಗೆಂದು?

ದೇಶದ ಶೇಖಡಾ ತೊಂಬತ್ತರಷ್ಟಿರುವ ಬಡವರ ಹೊರೆಯನ್ನು ಉಳಿದ ಹತ್ತು ಜನ ಹೊತ್ತುಕೊಳ್ಳಬೇಕೆ?

ದೇಶ ಪ್ರಗತಿ ಹೊಂದುವುದು ಅಂದರೆ ಏನು?

ಎಲ್ಲವನ್ನೂ ಉಚಿತವಾಗಿ ಕೊಡಲು- ಸರ್ಕಾರಕ್ಕೆ ಎಲ್ಲಿಂದ ಬರಬೇಕು?

ಹುಡುಗನಬಗ್ಗೆ ಕುತೂಹಲ ಹುಟ್ಟಿತು!

ಈಗ ಏನು ಮಾಡಬೇಕೆಂದು ನಿಮ್ಮ ಅಭಿಪ್ರಾಯ?” ಎಂದರೆ…,

ಸರ್ಕಾರ ನಡೆಸಲು ಬೇರೆಯವರಿಗೆ ಒಂದು ಅವಕಾಶ ಕೊಡಬೇಕು!” ಅನ್ನುವುದು ಉತ್ತರ ಹೊರತು…, ಪರಿಹಾರ ಅವನಿಗೆ ತಿಳಿಯದು!

ಅವನು ಏನು ಓದಿರಬಹುದೆನ್ನುವ ಕುತೂಹಲ! ಕೇಳಿದರೆ…, ವಿಜ್ಞಾನದಲ್ಲಿ ಪದವೀಧರ!

ಅವನ ವಿಷಯಕ್ಕೆ ಸಂಬಂಧಿಸಿದ ಬೇಸಿಕ್ ಮಾಹಿತಿಯೊಂದನ್ನು ಕೇಳಿದೆ! ನಿರೀಕ್ಷಿಸಿದಂತೆ…,

ನನಗೆ ಮರೆತು ಹೋಗಿದೆ! ಗೂಗಲ್‌ನಲ್ಲಿ ಸರ್ಚ್‌ಮಾಡಿ!” ಎಂದ.

ಗೂಗಲ್‌ನಲ್ಲಿ ಹರಿದಾಡುತ್ತಿರುವ ಇತಿಹಾಸವೊಂದರ ವಿರುದ್ಧವಾಗಿ ಹರಿತವಾದ ಲೇಖನವೊಂದನ್ನು ಬರೆದವನು! ಕಾರಣ ಆ ಇತಿಹಾಸ ಅವನ ಮನಸ್ಸಿಗೆ ವಿರುದ್ಧವಾಗಿತ್ತು! ಹಾಗಿರುವಾಗ ನಿಮಗೆ ಬೇಕಾದ ಮಾಹಿತಿಯನ್ನು ಗೂಗಲ್‌ನಲ್ಲಿ ಹುಡುಕಿ ಎಂದು ಹೇಳುವುದರ ಪ್ರಸಕ್ತಿಯೇನೋ…!

ಏನೋಪ್ಪ!

ನಾನು ಪದವಿಯನ್ನು ಪಡೆದಿರುವ ವಿಷಯದಬಗ್ಗೆ ಯಾರಾದರೂ ಮಾಹಿತಿಯನ್ನು ಕೇಳಿದರೆ…, ಮರೆತುಹೋಗಿದ್ದರೆ ಮತ್ತೊಮ್ಮೆ ಅಧ್ಯಯನವನ್ನು ಮಾಡಿ…, ನನ್ನ ರೀತಿಯಲ್ಲಿ ಅವರಿಗೆ ಮಾಹಿತಿಯನ್ನು ಒದಗಿಸುತ್ತೇನೆ! ಅದು ನನ್ನ ರೀತಿ!

ಉತ್ತರವನ್ನು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀಡುವುದು ಒಂದು ಕ್ಯಾಟಗರಿ!

ಉತ್ತರ ಗೊತ್ತಿಲ್ಲ ಅನ್ನುವುದು ಒಂದು ಕ್ಯಾಟಗರಿ!

ನೀವೇ ಕಂಡುಕೊಳ್ಳಿ ಅನ್ನುವುದು ಒಂದು ಕ್ಯಾಟಗರಿ!

ಇಂತಹ ಮೂಲದಿಂದ ಕಂಡುಕೊಳ್ಳಿ ಎನ್ನುವುದು ಮತ್ತೊಂದು ಕ್ಯಾಟಗರಿ!

ಯಾವ ಉತ್ತರವನ್ನು ಅವರು ನೀಡಿದರು ಅನ್ನುವುದರ ಮೇಲೆ ಅವರ ವ್ಯಕ್ತಿತ್ವವಿದೆ!

ಇದನ್ನು ಹೇಳಿದ್ದರ ಉದ್ದೇಶವೇನು?”

ಇದೊಂದು ಸಮಸ್ಯೆ ಮನಸ್ಸೇ! ಈ ಸಮಸ್ಯೆಯ ಸ್ವರೂಪವನ್ನು ಒಂದು ಮಾತಿನಲ್ಲಿ ಹೇಳಿ ಮುಗಿಸಬಹುದು!”

ಆ ಹುಡುಗನನ್ನು ಯಾಕೆ ಎಳೆದುಕೊಂಡು ಬಂದೆ ಅನ್ನುವುದು ಪ್ರಶ್ನೆ!”

ಹೇಳಿದೆನಲ್ಲ? ಆ ಹುಡುಗನ ದೃಷ್ಟಿಕೋನ ನಮ್ಮ ದೇಶದ ಎಲ್ಲರ ದೃಷ್ಟಿಕೋನದ ಪ್ರತಿಬಿಂಬ! ಈ ಜನರೇಷನ್‌ನ ಪ್ರತಿನಿಧಿ ಅವನು! ನಿಜಕ್ಕೂ ಅವನು ಹೇಳಿರುವುದೆಲ್ಲಾ ಸಮಸ್ಯೆಯೇ…!”

ಪರಿಹಾರ ನಿನಗೆ ಗೊತ್ತೆ?”

ಛೆ! ಪರಿಹಾರ ಗೊತ್ತಿಲ್ಲ! ಅವನು ಹೇಳಿದ್ದರ ಸ್ವರೂಪ ಗೊತ್ತು! ವ್ಯವಸ್ತೆ ಯಾಕೆ ಹೀಗಿದೆ ಎಂದು ಹೇಳಬಲ್ಲೆ!”

ಅದೇನೋ ಹೇಳಿ ಮುಗಿಸು!”

ಧೂಮಪಾನ, ಮಧ್ಯಪಾನ, ಆಡಂಬರ, ಮನರಂಜನೆಗಳ ಬೆಲೆ ಎಷ್ಟು ಏರಿಕೆಯಾದರೂ ಬ---ನಿ-ಗೆ ಸಮಸ್ಯೆಯಲ್ಲ! ಆತ ಅದರಿಂದ ಹೊರಬರಲಾರ! ಆದರೆ ಜೀವನಕ್ಕೆ ಬೇಕಾದ ಬೇಸಿಕ್ ಪದಾರ್ಥಗಳು ಅವನಿಗೆ ಉಚಿತವಾಗಿ ಬೇಕು! ಸಾವಿರಾರು ಕೋಟಿ ಖರ್ಚುವೆಚ್ಚದಲ್ಲಿ ಸರ್ಕಾರ ನಿರ್ಮಿಸಿದ ಸೌಲಭ್ಯದ ಅನುಕೂಲ ಉಚಿತವಾಗಿ ಬೇಕು!”

ಆಡಂಬರದ ಜೀವನ- ಆತನ ಸಂಕೇತ!

ಬಡತನ- ಭಿಕ್ಷೆ- ಆಕೆಯ ಸಂಕೇತ!

ಅವರಿಬ್ಬರನ್ನು ಹೋಲಿಸುತ್ತಾ ಕೂರುವುದು- ಮಧ್ಯಮವರ್ಗದ- ನನ್ನ ಸಂಕೇತ!

ಇಟ್ಟಿಗೆಯ ಎತ್ತರದ ಕಟ್ಟೆಯಮೇಲೆ ಕುಳಿತಿದ್ದೇನೆ! ಊಟಕ್ಕೆ ಕೂರುವಂತೆ…, ಮಧ್ಯಭಾಗದಲ್ಲಿ ಪ್ಯಾಂಟ್ ಹರಿದಿರುವುದು ಮರೆತು ಹೋಗಿದ್ದೇನೆ! ಆಕಸ್ಮಿಕವಾಗಿ ನನ್ನನ್ನು ನೋಡಿದವರು ನಗುತ್ತಿರುವುದಕ್ಕೆ ಕಾರಣ ಅದೇಯೋ…, ಅಥವಾ..?

ಅದೂ…, ಜೊತೆಗೆ ನನ್ನ ಅಕ್ಕ ಪಕ್ಕದಲ್ಲಿ ಬಿದ್ದಿರುವ ನಿರೋಧಕಗಳೂ!

ಒಂದು ರೇಂಜ್ ರೋವರ್ ಕಾರು ಬಂದು ನಿಂತಿತು! ಬ್ರಾಂಡೆಡ್ ಬಟ್ಟೆಗಳನ್ನು ಧರಿಸಿ, ಟೀಶರ್ಟ್‌ನಲ್ಲಿ ಸಿಕ್ಕಿಸಿದ್ದ ಕೂಲಿಂಗ್‌ಗ್ಲಾಸನ್ನು ಮೂಗಿಗೆ ಏರಿಸುತ್ತಾ ಇಳಿದ ಆತ! ಅರವತ್ತು ವರ್ಷ ವಯಸ್ಸಿರಬಹುದು! ಒಂದು ಕಾಲದಲ್ಲಿ ಮಾಫಿಯಾ ದೊರೆಯೊಬ್ಬನ ಬಲಗೈ- ಈಗ ಸ್ವತಃ ಮಾಫಿಯಾ ಕಿಂಗ್! ಸಾವಿರ ಕೋಟಿ ಆಸ್ತಿಯಿದೆ! ಪ್ರಸ್ತುತಾ ಜನರ ಸೇವೆಗೆಂದು ಪಣತೊಟ್ಟಿದ್ದಾನೆ! ಸೇವೆ ತನ್ನಲ್ಲಿರುವ ಆಸ್ತಿಯಿಂದಲ್ಲ! ಅಧಿಕಾರಕ್ಕೆ ಬಂದು ಸರ್ಕಾರದ ಹಣದಿಂದ! ಅಧಿಕಾರಕ್ಕೆ ಬರಲು- ತನ್ನ ಆಸ್ತಿ!!

ಅಧಿಕಾರಕ್ಕೆ ಬಂದು ಜನಸೇವೆ ಮಾಡಿ ಅಧಿಕಾರದಿಂದ ಇಳಿಯುವಾಗ ಆತನ ಆಸ್ತಿ ಸಾವಿರಪಟ್ಟು ಹೆಚ್ಚಿರುತ್ತದೆ!

ಕರ್ಮಣ್ಯೇ ವಾದಿಕಾರಸ್ತೇ…, ಅನ್ನುವುದು ಆತನ ತತ್ತ್ವ!!!

ಅದೇ ಸಮಯಕ್ಕೆ ಎಂದಿನಂತೆ ಆ ವೃದ್ಧೆ ಬಂದರು! ಇವತ್ತು ಅವರಿಗೆ ಭರ್ಜರಿ ಲಾಟರಿ ಹೊಡೆಯಿತು ಅಂದುಕೊಂಡೆ! ಆದರೆ ಆಕೆ ಆತನ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡು ಹೋದಳು! ಆತ ಆಕೆಯನ್ನು ಗಮನಿಸಿದರೂ…, ಕಾಣಿಸದವನಂತೆ ತನ್ನದೇ ಒಡೆತನದ ಮಧ್ಯದಂಗಡಿಗೆ ಹೋದ!

ಯಾವ ಕಥೆಯನ್ನೂ ನೀನು ನೇರವಾಗಿ ಹೇಳಬೇಡ!”

ಏನು ಮಾಡಲಿ ಮನಸ್ಸೇ! ಹೊಳೆದಂತೆ ಹೇಳುವುದು! ಅತಿ ದಡ್ಡ ನಾನೆಂಬ ಅರಿವಿದ್ದೂ ಕಥೆ ಹೇಳುವ ಧೈರ್ಯ ಮಾಡಿರುವ ನನ್ನನ್ನು ಮೆಚ್ಚಬೇಕು ಹೊರತು…!”

ಸರಿಸರಿ…! ಮುಗಿಸು! ಇನ್ನು ನನ್ನನ್ನು ಎಳೆದು ತರಬೇಡ!”

ಬದುಕಿಗೂ ಜೀವನಕ್ಕೂ ಇರುವ ವ್ಯತ್ಯಾಸವೇನು?

ಹುಟ್ಟಿನಿಂದ ಸಾಯುವವರೆಗಿನ ಜೀವನ ಬದುಕು! ಹೇಗೆ ಬದುಕಿದೆವು ಅನ್ನುವುದು ಜೀವನ!

ಬದುಕು ಹೇಗೋ ನಡೆಯುತ್ತದೆ- ಅಥವಾ ಹೇಗೆ ನಡೆದರೂ ಬದುಕು ಅನ್ನಿಸಿಕೊಳ್ಳುತ್ತದೆ!

ನಿರ್ದಿಷ್ಟ ಉದ್ದೇಶದಂತೆ, ನಾವು ಅಂದುಕೊಂಡಂತೆ ಬದುಕುವುದು- ಜೀವನ!

ನನ್ನ ಜೀವನವೇನು? ಬದುಕಿನ ಉದ್ದೇಶವೇನು?

ಹುಡುಕುತ್ತಿದ್ದೇನೆ!

ಪ್ರಪಂಚದ ವಿಸ್ತೀರ್ಣದಲ್ಲಿ ಏಳನೇಯ ದೊಡ್ಡ ರಾಷ್ಟ್ರ! ಜನಸಂಖ್ಯೆಯಲ್ಲಿ ಎರಡನೆಯ ದೊಡ್ಡ- ಮೊದಲ ಸ್ಥಾನಕ್ಕೆ ಅತಿ ಶೀಘ್ರವೇ ತಲುಪುವ ಅವಕಾಶವಿರುವ ರಾಷ್ಟ್ರ! ಸಾವಿರಾರು ಆಚಾರ- ವಿಚಾರಗಳು! ಸಾವಿರಾರು ಭಾಷೆಗಳು! ವಿವಿಧ ವೇಷಭೂಷಣ… ಆದರೂ ನಾವೆಲ್ಲರೂ ಒಂದೆ…, ಭಾರತೀಯರು!

ಹೀಗೆ ಇದ್ದಿರಬಹುದು ಎಂದು ಹೇಳಬಹುದಾದ…, ಹೀಗೆಯೇ ಇತ್ತು ಎಂದು ಹೇಳಲಸಾಧ್ಯವಾದ ವಿಷಯ- ಇತಿಹಾಸ!

ಇತಿಹಾಸವೆನ್ನುವುದು ಪ್ರಸಿದ್ಧರ ಕಥೆ- ಸಾಮಾನ್ಯರದ್ದಲ್ಲ! ಅದು ಮಾನವನಾಗಿರಬಹುದು, ವಸ್ತುಗಳಾಗಿರಬಹುದು! ಶೇಖಡಾವಾರು ಹೀಗೆ ಎಂದು ಹೇಳಬಹುದೇ ಹೊರತು ಒಂದೊಂದು ಅಂಶವೂ ಹೀಗೆಯೇ ಎಂದು ಹೇಳಲಾಗುವುದಿಲ್ಲ!

ಆ ಇತಿಹಾಸವನ್ನು ಇಟ್ಟುಕೊಂಡು ಈಗ ಯುದ್ಧವನ್ನು ಮಾಡುತ್ತಿದ್ದೇವೆ!

ವ್ಯವಸ್ತೆಯನ್ನು ದೂಷಿಸಿ ಫಲವಿಲ್ಲ! ಬದಲಿಸಲೂ ಸಾಧ್ಯವಿಲ್ಲ! ಯಾಕೆ?

ಮಧ್ಯದಂಗಡಿ!

ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆಂಬ ಅರಿವಿನಿಂದ…, ತಿರುಗಿ ನೋಡಿದ ಆತ!

ನಾನು ಸಿದ್ಧಾರ್ಥ!” ಎಂದೆ.

ಸಿದ್ಧಾರ್ಥ ಎಂದರೆ ಜಿಗುಪ್ಸೆ ಎಂದು ಅರ್ಥ- ಸೋಮಾರಿತನದ ಸಂಕೇತ- ನನಗೆ! ಎಲ್ಲರೂ ಭಿಕ್ಷುಕರಾದರೆ ಭಿಕ್ಷೆಯನ್ನು ನೀಡುವವರು ಯಾರು ಅನ್ನುವ ಪ್ರಶ್ನೆಯನ್ನು ಹುಟ್ಟಿಸಿದ ಹೆಸರು! ನನ್ನ ಅನ್ವರ್ಥ ನಾಮ!

ಆತ ಏನೂ ಮಾತನಾಡಲಿಲ್ಲ. ಏನಾದರೂ ಹೇಳುವುದಿದೆಯೇ ಅನ್ನುವಂತೆ ನೋಡಿದ.

ನಿಮ್ಮ ಪಕ್ಷದ ಪ್ರವರ್ತಕರಲ್ಲಿ ನಾನೂ ಒಬ್ಬ!” ಎಂದೆ.

ರಿಲಾಕ್ಸ್‌ ಆದನಾದರೂ ನನ್ನ ರೂಪ- ವೇಷದಿಂದಾಗಿ…, ತಾತ್ಸರ! ಆದರೆ…, ತನ್ನದೇ ಪಾರ್ಟಿಯ ಪ್ರವರ್ತಕ! ನಿರ್ಲಕ್ಷಿಸುವಂತಿಲ್ಲ! ಏನು ಹೇಳಬೇಕೋ ತಿಳಿಯದೆ ನಿಂತ.

ಈ ಸಾರಿ ನೀವು ಗೆಲ್ಲುವುದಿಲ್ಲ!” ಎಂದೆ.

ಆತ ನನ್ನನ್ನು ಸೂಕ್ಷ್ಮವಾಗಿ ನೋಡಿದ! ತನ್ನ ಯವ್ವನದ ರೂಪ ನೆನಪಿಗೆ ಬಂದಿರಬಹುದು!

೧೦

ಆತ್ಮಾಭಿಮಾನ ಇರುವವನಿಗೆ ಭಯ ಹುಟ್ಟಿಸುವುದು ಕಷ್ಟ- ಹಾಗೆಯೇ ಆತ್ಮಾಭಿಮಾನ ಎಂದರೆ ಏನೆಂದೇ ತಿಳಿಯದವನಿಗೂ!

ದುಡ್ಡಿದ್ದರೆ ಅಧಿಕಾರ, ಅದಿಕಾರವಿದ್ದರೆ ದುಡ್ಡು! ಜನ ಪ್ರತಿನಿಧಿ ಎಂದರೆ ಅರ್ಥ- ಜನರ ಹೆಸರಿನಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುವುದು ಎಂದು!

ಜನರಿಗೆ ಇರುವುದು ಒಂದೇ ಆಪ್ಷನ್! ಕೆಟ್ಟ ಪ್ರತಿನಿಧಿಗಳಲ್ಲಿ ಅತಿ ಕೆಟ್ಟವರಲ್ಲದವರನ್ನು ಹುಡುಕುವುದು!

ಹೇಳಿದಂತೆ ನಡೆದುಕೊಳ್ಳದಿರುವವರನ್ನು ಆ ಕ್ಷಣವೇ ಅಧಿಕಾರದಿಂದ ಇಳಿಸುವ ಅಧಿಕಾರ ಜನಸಾಮಾನ್ಯನಿಗೆ ಬಂದಾಗ…, ಕ್ರಾಂತಿ ಸಂಭವಿಸುತ್ತದೆ! ಆಗ ಜನಸಾಮಾನ್ಯನೆಂದರೆ ಜನಪ್ರತಿನಿಧಿಗಳಿಗೆ ಭಯ ಗೌರವಗಳುಂಟಾಗುತ್ತದೆ…!

ದುಡ್ಡು ಅಧಿಕಾರ ಇರುವಲ್ಲಿ…, ಜನಸಾಮಾನ್ಯನನ್ನು ಹೆದರುವುದು ಅನ್ನುವುದು- ಅಸಾಧ್ಯ!

ನನ್ನಂತಾ ಬಡವನ ಬಳಿ ಭಿಕ್ಷೆ ಬೇಡುತ್ತೀರ! ಶ್ರೀಮಂತರನ್ನು ಕಂಡರೆ ತಪ್ಪಿಸಿಕೊಂಡು ಹೋಗುತ್ತೀರ- ಯಾಕೆ?” ಎಂದೆ.

ಆಕೆಗೆ ಆಶ್ಚರ್ಯವಾಗಿತ್ತು! ಆಕೆಗೆ ಸಮನಾಗಿ ನಾನು ಕುಳಿತಿದ್ದು!

ಯಾರಪ್ಪ ನೀನು!” ಎಂದರು.

ಪ್ರತಿದಿನ ಬಾರೊಂದರಮುಂದೆ ಭಿಕ್ಷೆ ಬೇಡುತ್ತೀರ! ನನ್ನ ನೆನಪಿಲ್ಲವೇ?” ಎಂದೆ.

ಅದು ನನ್ನ ಏರಿಯಾ!” ಎಂದರು.

೧೧

ಮಾಫಿಯಾ ದೊರೆಯೊಬ್ಬ ರಾಜ್ಯದ ಮುಖ್ಯಮಂತ್ರಿಯಾಗುವುದು…! ಊಹಿಸಲೇ ಅಸಹ್ಯವಾದ ವಿಷಯ! ಆದರೆ ಪ್ರಜಾಪ್ರಭುತ್ತ!!!

ತನಗೆ ಕನ್ಯೆಯಾದ ಹೆಣ್ಣೇ ಬೇಕೆಂದು ಹೇಳಿದನಂತೆ ಆತ- ಪ್ರತಿಸಾರಿಯೂ!

ತಾನು ಇಚ್ಛಿಸುವ ಹೆಣ್ಣುಮಕ್ಕಳ ಪ್ರಾಯದ ಮಗಳೊಬ್ಬಳಿದ್ದಾಳೆ ಆತನಿಗೆ!

ಆ ಮಗಳ ಗಂಡನ ಅಪ್ಪ…, ಕೋಟ್ಯಾಧೀಶ್ವರ- ಆತ್ಮಹತ್ಯೆ ಮಾಡಿಕೊಂಡನಂತೆ!

ಅದೊಂದು ಮಿಸ್ಟರಿ!

ಹೊರಬರದ ವಾಸ್ತವಗಳೇ ರಹಸ್ಯಗಳು!

ವರ್ತಮಾನ ಕಾಲದಲ್ಲೇ ಇಷ್ಟೊಂದು ರಹಸ್ಯಗಳಿರುವಾಗ ತಾವು ಹೇಳಿದ್ದೇ ಇತಿಹಾಸವೆಂದೋ…, ಇತಿಹಾಸ ನಿಜವೆಂದೋ…, ನಿಜವಾದ ಇತಿಹಾಸ ಹೀಗೆಯೇ ಇತ್ತೆಂದೋ ವಾದಿಸಬಹುದೇ?

ನಾನು ಹೇಳುತ್ತಿರುವ ಈ ಕಥೆ ವಾಸ್ತವ ಎಂದರೆ…, ಯಾವಾಗ ಬೇಕಿದ್ದರೂ ನಾನು ಮಾಯವಾಗಬಹುದು!

ಹೌದು…, ಈಗ ಈ ಪ್ರಪಂಚದಲ್ಲಿ ಇರುವುದು ಎರಡೇ ವರ್ಗ! ಒಂದು ಬುದ್ಧಿವಂತರು ಮತ್ತೊಂದು ದಡ್ಡರು ಅಥವಾ ಮುಗ್ಧರು! ಹೇಗೆ ದೇಶದಲ್ಲಿರುವ ಹತ್ತು ಪರ್ಸೆಂಟ್ ಹಣವಂತರು ಉಳಿದ ತೊಂಬತ್ತುಪರ್ಸೆಂಟ್ ಬಡವರ ಹೊಣೆ ಹೊರಬೇಕು ಅಂದುಕೊಳ್ಳುತ್ತೇವೋ…, ಹಾಗೆ…, ಇರುವ ಹತ್ತುಪರ್ಸೆಂಟ್ ಬುದ್ಧಿವಂತ ಜನ ಉಳಿದ ತೊಂಬತ್ತುಭಾಗ ದಡ್ಡರು ಅಥವಾ ಮುಗ್ಧರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ!

ಬುದ್ಧಿವಂತಿಕೆ ನಿಯತ್ತಿನದಾಗಿದ್ದು- ಸಕಾರಾತ್ಮಕವಾಗಿದ್ದರೆ ಒಳಿತು!

ನಕಾರಾತ್ಮಕವಾಗಿದ್ದರೆ…? ಅದಕ್ಕೊಂದು ಉದಾಹರಣೆ ಈ ಕಥೆ!

೧೨

ನಾಲ್ಕು ಪುಸ್ತಕಗಳನ್ನು ಬರೆದ ಯುವಕ ಕಥೆಗಾರನನ್ನು ನಾನು ಕೇಳಿದ ಪ್ರಶ್ನೆಯೇ ಇದು…! ಆದರೆ ಅದು ಅವನಿಗೆ ಅರ್ಥವೇ ಆಗಲಿಲ್ಲ! ಅವನ ಹೆಸರನ್ನು ಗೌತಮ ಎಂದು ಕರೆಯುತ್ತೇನೆ-ನನ್ನ- ಸಿದ್ಧಾರ್ಥನ ಸಮನಾಂತರದಂತೆ!

ವ್ಯವಸ್ತೆ ಹಾಳಾಗೋಗಿದೆ! ಇಲ್ಲದ ಇತಿಹಾಸವನ್ನು ಇಟ್ಟುಕೊಂಡು ಜಗಳ ಮಾಡುತ್ತಿದ್ದೇವೆ! ಪ್ರಗತಿಗಿಂತ ಧರ್ಮ, ಮತಗಳೇ ವಿಜೃಂಭಿಸುತ್ತಿದೆ! ಎಲ್ಲೆಲ್ಲೂ ಬ್ರಷ್ಟಾಚಾರ ತಾಂಡವವಾಡುತ್ತಿದೆ- ಇದು ಗೌತಮನ ಆರೋಪ! ಇದನ್ನವನು ಹೇಳಿದ ಉದ್ದೇಶ ನ್ಯಾಯಕ್ಕಾಗಿ ಅನ್ನುವುದು!

ನನ್ನ ಪ್ರಶ್ನೆ…., ಯಾವುದು ನ್ಯಾಯ? ಈಗ ಇದಕ್ಕೆ ಪರಿಹಾರವೇನು?

ಉತ್ತರ ಅವನಿಗೆ ತಿಳಿಯದು! ಏನೋ ಭಯಂಕರ ಅನ್ಯಾಯವಾಗಿದೆ- ಅದಕ್ಕೆ ಏನೋ ಭಯಂಕರ ಪರಿಹಾರವಿದೆ ಅನ್ನುವ ಭ್ರಮೆಯಲ್ಲಿದ್ದಾನೆ!

ಸಾವಿರ ಸಾವಿರ ವರ್ಷಗಳಿಂದ ಜನರ ಇತಿಹಾಸವೇ ಇದು! ದುರಾಡಳಿತದ ನಾಯಕರು- ಗುಲಾಮರಂತಾ ಪ್ರಜೆಗಳು!!

ಏನೋ ಬದಲಾವಣೆ ಮಾಡುತ್ತೇನೆಂದು ಹೊರಡುವ ಸತ್‌ಪ್ರಜೆ ಅಧಿಕಾರ ಬಂದಕ್ಷಣ ತಾನೂ ಹಿಂದಿನವರಂತೆ ಬದಲಾಗುತ್ತಾನೆ ಹೊರತು- ವ್ಯವಸ್ತೆ ಅವನನ್ನು ಹಾಗೆ ಬದಲಿಸುತ್ತದೆ ಹೊರತು- ಅವನೇನನ್ನೂ ಬದಲಿಸಲಾರ, ಯಾವ ಪ್ರಗತಿಯನ್ನೂ ಸಾಧಿಸಲಾರ! ಸಾಧಿಸಬೇಕಾದರೆ ಗುಲಾಮ ಪ್ರಜೆಗಳು ಎಚ್ಚೆತ್ತುಕೊಳ್ಳಬೇಕು- ನಾಯಕರಲ್ಲ! ನಾಯಕರ ಕೆಲಸ ಗುಲಾಮರು ಯಾವತ್ತಿಗೂ ಎಚ್ಚೆತ್ತುಕ್ಕೊಳ್ಳದಂತೆ…, ಗುಲಾಮರಾಗಿಯೇ ಇರುವಂತೆ ನೋಡಿಕೊಳ್ಳುವುದಷ್ಟೆ!

ಇದಕ್ಕೆ ಪರಿಹಾರ…, ಅವರಿವರನ್ನು ದೂಷಿಸದೆ- ನಮ್ಮ ಕರ್ತವ್ಯವೇನೋ ಮಾಡಿಕೊಂಡು ಹೋಗುವುದು!

ನಿಧಾನಕ್ಕೆ ತೀರಾ ನಿಧಾನಕ್ಕೆ ವ್ಯವಸ್ತೆ ತಾನೇತಾನಾಗಿ ಬದಲಾಗುತ್ತದೆ!

ಗೌತಮನಮೇಲೆ ಅತಿಶಯವಾದ ವಾತ್ಸಲ್ಯ ಉಂಟಾಗಲು ಕಾರಣ ಅದೇ…, ಎಷ್ಟೇ ಗೊಂದಲದಲ್ಲಿದ್ದರೂ ಅವನು ಧ್ವನಿ ಎತ್ತುತ್ತಿದ್ದಾನೆ! ಇಂದಿನ ಪೀಳಿಗೆ- ಗೌತಮನ ಪ್ರತಿಬಿಂಬಕ್ಕೆ- ಒಂದೊಳ್ಳೆಯ ಮಾರ್ಗದರ್ಶನ ದೊರೆತರೆ…, ರಾಜನೀತಿ, ಅರ್ಥಶಾಸ್ತ್ರಗಳಲ್ಲಿ ಅಧ್ಯಯನವನ್ನು ನಡೆಸಿದರೆ ಖಂಡಿತಾ ಮುಂದೊಮ್ಮೆ ದೇಶದ ಪ್ರಗತಿ ಸಾಧ್ಯ!

ಇನ್ನು…,

ಮೂವತ್ತು ವರ್ಷದ ಹಿಂದಿನ ಇತಿಹಾಸಕ್ಕೆ ಹೋಗೋಣ! ಹೀಗೆಯೇ ಇದ್ದಿರಬಹುದಾದ ಇತಿಹಾಸ!

ಅದೊಂದು ಸ್ಮಗ್ಲಿಂಗ್ ಯುಗ!

ಮಾಫಿಯಾ ದೊರೆಯೊಬ್ಬನ ಬಲಗೈ- ಮೂವತ್ತು ವರ್ಷದ ಶ್ರೀಕಂಠ! ಅಂದಿನ ಸ್ಮಗ್ಲಿಂಗ್ ಕೆಲಸವನ್ನೆಲ್ಲಾ ಮುಗಿಸಿ ಮರಳುವಾಗ ಕಂಡಿದ್ದ! ನಲವತ್ತು- ನಲವತ್ತೆರಡು ವರ್ಷದ ಹೆಣ್ಣು! ಅತಿ ಸುಂದರಿ! ಸುಂದರಿಯೆಂದರೆ…, ಒಮ್ಮೆ ಕಣ್ಣು ಬಿದ್ದರೆ- ಕೀಳದಷ್ಟು ಸುಂದರಿ! ಚಂಚಲಗೊಂಡ! ಚಂಚಲಗೊಂಡ ಅನ್ನುವುದಕ್ಕಿಂತ…, ಮೊದಲೇ ಹೆಣ್ಣಿನವಿಷಯದಲ್ಲಿ ಅತಿ ಆಸಕ್ತಿಯವ!

೧೩

ಒಂದು ತಿಂಗಳು!

ಗಂಡುಪ್ರಾಣಿ- ಅವನಿಗೇನು ಗೊತ್ತು ಹೆಣ್ಣಿನ ಕಷ್ಟ!

ಒಂದು ದಿನವೋ ಎರಡು ದಿನವೋ ಆಗಿದ್ದರೆ ಹೇಗೋ ಅಡ್ಜಸ್ಟ್ ಮಾಡುತ್ತಿದ್ದಳೇನೋ…!

ಇನ್ನು ಹೇಗೆ ಜೀವನ?

ಜೊತೆಗೆ…, ಅವಳರಿವಿಲ್ಲದಂತೆ ಹೊಟ್ಟೆಯಲ್ಲೊಂದು ಜೀವ!

ಶ್ರೀಕಂಠನ ಆಸುಪಾಸಿನಲ್ಲೇ ಬದುಕಿದಳು! ಅವಳೊಬ್ಬಳಿದ್ದಾಳೆ ಅನ್ನುವ ಅರಿವು ಪ್ರಪಂಚಕ್ಕೆ ಇಲ್ಲದಂತೆ!

ಅವನೂ ಅಷ್ಟು ಇಷ್ಟು ಭಿಕ್ಷೆಯಂತೆ ಎಸೆಯುತ್ತಿದ್ದ!

ಹೆರಿಗೆಯ ಸಮಯದವರೆಗೆ ಅವಳು ಧೈರ್ಯದಿಂದಿದ್ದಳು! ಹೆರಿಗೆಯಾದಮೇಲೆ…, ಹೇಗೆ ಅನ್ನುವ ಚಿಂತೆಯಲ್ಲಿದ್ದಾಗ…, ನಿಜವಾದ ಮಾಫಿಯಾದ ಪ್ರಭಾವ ಕಾಣಿಸಿಕೊಂಡಿತು!

ಮಗುವನ್ನು ಯಾರಿಗೋ ಮಾರಿದ ಶ್ರೀಕಂಠ- ಅವಳನ್ನು ನಿಧಾನವಾಗಿ ಭಿಕ್ಷುಕಿಯಾಗಿ ಪರಿವರ್ತನೆ ಮಾಡಿದ!

ಹುಡುಗನ ದುರಾದೃಷ್ಟ! ಅವನ ಹದಿನೆಂಟನೆಯ ವಯಸ್ಸಿನಲ್ಲಿ- ದತ್ತು ತೆಗೆದುಕೊಂಡಿದ್ದ ಅಪ್ಪ ಅಮ್ಮ ಮರಣಿಸಿದರು- ಅವನು ಅವರ ನಿಜವಾದ ಮಗನಲ್ಲ ಅನ್ನುವ ನಿಜವನ್ನು ಹೇಳಿ!

೧೪

ಇನ್ನು ವರ್ತಮಾನಕ್ಕೆ ಬಂದರೆ…,

ವ್ಯವಸ್ತೆ…!

ಯಾಕೆ ಬದಲಾಗುವುದಿಲ್ಲ?

ಶೇಖಡಾ ಐವತ್ತರಷ್ಟು ಜನಸಾಮಾನ್ಯರು ನಿರಾಸಕ್ತರು! ಬದುಕಿಗೂ ಜೀವನಕ್ಕೂ ವ್ಯತ್ಯಾಸ ಗೊತ್ತಿಲ್ಲದವರು!

ಶೇಖಡಾ ಇಪ್ಪತ್ತೈದರಷ್ಟು ಜನ ಪುಕ್ಕಲು ಮನಃಸ್ತಿತಿಯವರು!

ಶೇಖಡಾ ಹದಿನೈದರಷ್ಟು ಜನ ಗೌತಮನಂತವರು! ಆವೇಶಪರರು! ಆರಂಭಿಕ ಶೂರರು! ಉದ್ದೇಶ ಉತ್ತಮವಾದರೂ ಏನೂ ಮಾಡಲಾಗದೆ ವ್ಯವಸ್ತೆಯನ್ನು ದೂಷಿಸುತ್ತಾ ನ್ಯಾಯಕ್ಕಾಗಿ "ಬೇಡುವವರು!”

ಶೇಖಡಾ ಐದರಷ್ಟು ಜನ…, ನನ್ನಂತವರು! ತಮ್ಮನ್ನು ತಾವು ಮಾರಿಕೊಳ್ಳುವವರು!

ಉಳಿದವರು ನಿಜವಾದ "ವ್ಯವಸ್ತೆ!”

೧೫

ವ್ಯವಸ್ತೆಯಬಗ್ಗೆ ತಿಳಿಸಲು ಹೇಳಿದ ಕಥೆಯ ಮುಕ್ತಾಯ ಹೀಗೆ…,

ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಏನೂ ಸಾಧ್ಯ!

ಆ ಭಿಕ್ಷುಕಿ ಮಾಯವಾಗಿದ್ದಾರೆ!

ಈ ಸಾರಿ ನೀವು ಗೆಲ್ಲುವುದಿಲ್ಲ!” ಎಂದು ನಾನು ಹೇಳಿದ ಶ್ರೀಕಂಠ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ!

ಯಾಕೆಂದರೆ…, ನೀವು ಸೋಲುತ್ತೀರ ಎಂದು ಹೇಳಿ ನಾನು ಕೊಟ್ಟ "ಕಾರಣವನ್ನು" ಆತನಿಗೆ ಮಾರಿದೆ!

ಆದರೆ ಆತ ಮಾಫಿಯಾ ದೊರೆ! ಯಾವಾಗ ಬೇಕಿದ್ದರೂ ನನ್ನಿಂದ ಕಂಟಕ ಸಾಧ್ಯ ಎಂದು ಅರಿತಿರುವವ! ಹುಡುಕುತ್ತಿರುತ್ತಾನೆ! ಆ ಭಿಕ್ಷುಕಿ- ನನ್ನ ತಾಯಿಯನ್ನು- ಮಾಯ ಮಾಡಿದಂತೆ ನನ್ನನ್ನೂ ಮಾಯ ಮಾಡಲು!

Comments

Popular posts from this blog

ವ್ಯಾಸ- ವೇದವ್ಯಾಸ- ಕಥೆ

ವರ್ಜಿನ್!

ಅನಿರುದ್ಧ ಬಿಂಬ!