ಸನ್ಯಾಸ!
ಸನ್ಯಾಸ!
೧
ಮದುವೆಯಾದಮೇಲೆ…, ಯಾಕಪ್ಪಾ ಮದುವೆಯಾದೆ, ಸಾಕು ಈ ಜೀವನ ಜಂಜಾಟ ಅನ್ನಿಸುವುದು ಸಾಮಾನ್ಯ!
ಇಲ್ಲೊಬ್ಬನ ಜೀವನವನ್ನು ನೋಡಬೇಕು- ಕರ್ಮ!
೨
ನಾಂದಿ…,
ಹೆಣ್ಣೊಬ್ಬಳಲ್ಲಿ ಪ್ರೇಮ ನಿವೇದನೆಯನ್ನು ಮಾಡಿದೆ!- ನಿಷೇಧಿಸಿದಳು!
೩
ಪ್ರೇಮ ನೈರಾಶ್ಯವನ್ನು ಅಧಿಗಮಿಸುವುದು ಅಷ್ಟು ಸುಲಭವೇ? ಎಷ್ಟೇ ಹಗುರವಾಗಿ ತೆಗೆದುಕೊಂಡರೂ…?
ಮನೆಯವರಿಗೆ ತಿಳಿಸದೆ- ಊರುಬಿಟ್ಟೆ!
ಕನ್ಯಾಕುಮಾರಿ!
ಎರಡು ದಿನದ ಪ್ರಯಾಣ- ಆಹಾರವೋ ನಿದ್ದೆಯೋ ಇಲ್ಲದೆ!
ರೈಲ್ವೇ ಸ್ಟೇಷನ್‌ನಿಂದ ಹೊರಬಂದು ನಡೆಯುವಾಗ…, ವಿವೇಕಾನಂದ ಟ್ರಸ್ಟ್ ಕಾಣಿಸಿತು!
ಸ್ನಾನ ಮಾಡಬೇಕು - ನಿದ್ದೆ ಮಾಡಬೇಕು!
ಬೆಡ್ ಒಂದಕ್ಕೆ ಐದು ರೂಪಾಯಿ! ಆದರೆ ಐಡಿ ಪ್ರೂಫ್ ಇಲ್ಲದೆ ಬೆಡ್ ಕೊಡುವುದಿಲ್ಲ ಅನ್ನುವ ತಕರಾರು! ಸರಿ…,
“ಕೊಂಜನೇರಂ ಇಂಗೆಯೇ ತೂಂಗಟ್ಟುಮಾ?” (ಸ್ವಲ್ಪ ಹೊತ್ತು ಇಲ್ಲೇ ನಿದ್ರೆ ಮಾಡಲೇ…?) ಎಂದೆ- ರಿಸಪ್ಷನ್ ಎದುರಿನ ಜಾಗವನ್ನು ತೋರಿಸಿ! ಏನನ್ನಿಸಿತೋ ಏನೋ…,
“ಪ್ರಚನೈ ಒಣ್ಣುಂ ಇಲ್ಲಯೇ?” (ಸಮಸ್ಯೆಯೇನೂ ಇಲ್ಲ ತಾನೆ?) ಎಂದ.
ಅಂದರೆ…, ಒಬ್ಬನೇ, ಐಡಿಪ್ರೂಫ್ ಇಲ್ಲದೆ, ನಿದ್ದೆಗೆಟ್ಟ ಕಣ್ಣು…!
“ಪ್ರಚನೈ ಎದುವುಮೈ ಇಲ್ಲೈ…, ರಂಡುನಾಳ್ ತಂಗವೇಡುಂ- ಅವಳವ್‌ದಾನ್!” (ಸಮಸ್ಯೆ ಏನಿಲ್ಲ…, ಎರಡು ದಿನ ಇರಬೇಕು ಅಷ್ಟೆ) ಎಂದೆ.
ನಾಲಕ್ಕು ಬೆಡ್ ಇರುವ ಒಂದು ರೂಂ! ಮೂರು ಬೆಡ್ ಆಲ್ರೆಡಿ ಬುಕ್ ಆಗಿದೆ. ನಾಲ್ಕನೆಯದನ್ನು ನನಗೆ ಕೊಟ್ಟರು.
ನಾಲ್ಕು ಕಪ್‌ಬೋರ್ಡ್… ಒಂದರ ಬೀಗವನ್ನೂ ಕೊಟ್ಟರು!
ಜೊತೆಗಿರುವವರು ಕಳ್ಳರೋ ಯಾರೋ…! (ಅದು ಈ ಕಥೆಗೆ ಅಪ್ರಸ್ತುತ!) ನಾಲ್ಕು ಜನ ಅಪರಿಚಿತರು ಒಂದೇ ಕೋಣೆಯಲ್ಲಿ! ಬೆಡ್‌ಗೆ ದಿನಕ್ಕೆ ಐದು ರೂಪಾಯಿ ಬಾಡಿಗೆ! ಎಷ್ಟು ದಿನ ಬೇಕಿದ್ದರೂ ಇರಬಹುದು! ಬಾತ್‌ರೂಂ ಮಾತ್ರ ಹೊರಗೆ- ಕಾಮನ್!
ಬ್ಯಾಗಿನಿಂದ ಬದಲಿಸಲು ಬಟ್ಟೆಗಳನ್ನು ತೆಗೆದುಕೊಂಡು ಬ್ಯಾಗನ್ನು ನಾಲ್ಕನೆಯ ಕಪ್‌ಬೋರ್ಡ್‌ನಲ್ಲಿಟ್ಟು ಲಾಕ್ ಮಾಡಿದೆ.
ರೂಮಿನಿಂದ ಸ್ವಲ್ಪ ದೂರದಲ್ಲಿದ್ದ ಕಾಮನ್ ಬಾತ್‌ರೂಮಿನಲ್ಲಿ ಸ್ನಾನವನ್ನು ಮುಗಿಸಿ ರೂಮಿಗೆ ಬರುವಾಗ…,
“ಪೋನ ಜನ್ಮತ್ತಿನ್ ಕರ್ಮಫಲಂ ಇಂದ ಜನ್ಮತ್ತಿಲುಂ ತುಡರುಂ!” (ಹಿಂದಿನ ಜನ್ಮದ ಕರ್ಮ ಫಲ ಈ ಜನ್ಮದಲ್ಲಿಯೂ ಮುಂದುವರೆಯುತ್ತದೆ!) ಅನ್ನುವ ಮಾತುಗಳು ಕೇಳಿಸಿತು.
ಮಲಗುವ ಧಾವಂತದಲ್ಲಿದ್ದವನು…, ಒಗೆದ ಬಟ್ಟೆಗಳನ್ನು ಮಂಚದಮೇಲೆ ಹರಡಿ ಮಾತು ಕೇಳಿಸಿದ ದಿಕ್ಕಿಗೆ ನಡೆದೆ.
ಬರಿ ನೆಲದಮೇಲೆ ಕುಳಿತಿರುವ ಜನ. ಮೈಕ್‌ಮುಂದೆ ಕುಳಿತ ವೃದ್ಧರೊಬ್ಬರು ಕರ್ಮ ಸಿದ್ಧಾಂತವನ್ನು ಬೋಧಿಸುತ್ತಿದ್ದರು.
ನನ್ನ ಪ್ರವೇಶ ಅವರ ಗಮನವನ್ನು ಸೆಳೆಯಿತು. ಎಲ್ಲರ ಹಿಂದೆ ಕೈಕಟ್ಟಿ ನಿಂತ ನನ್ನನ್ನು ಕೈಬೀಸಿ ಕರೆದರು.
ನನ್ನ ಕಣ್ಣುಗಳನ್ನೊಮ್ಮೆ ದಿಟ್ಟಿಸಿ ನೊಡಿ…,
“ಮಲಯಾಳ ನಾಟಿಲಿರುಂದ್ ವಂದೆಯೋ?” (ಮಲಯಾಳ ಊರು- ಕೇರಳ-ದಿಂದ ಬಂದೆಯಾ?) ಎಂದರು.
ಅವರನ್ನು ಗೇಲಿ ಮಾಡಬೇಕೆನ್ನಿಸಿತು!
“ಇಲ್ಲೈ! ಕನ್ನಡ ನಾಟಿಲಿರುಂದ್ ವಂದೇನ್!” (ಇಲ್ಲ! ಕನ್ನಡ ಊರಿಂದ- ಕರ್ನಾಟಕ-ದಿಂದ ಬಂದೆ) ಎಂದೆ.
ಮುಗುಳುನಕ್ಕರು.
“ಇರುಕ್ಕಲಾಂ! ಆನಾಲ್…, ಮಲಯಾಳತ್ತುಕ್ಕುಂ ಉನಕ್ಕುಂ ಇರುಕ್ಕಿರ ಬಂಧತ್ತೈ ಇಲ್ಲೈ ಎಂಡ್ರ್ ಸೊಲ್ಲಮುಡಿಯುಮಾ?” (ಇರಬಹುದು! ಆದರೆ ನಿನಗೂ ಕೇರಳಕ್ಕೂ ಇರುವ ಸಂಬಂಧವನ್ನು ಇಲ್ಲವೆನ್ನಲಾಗುವುದೇ?) ಎಂದರು.
ನಾನೇನೂ ಮಾತನಾಡಲಿಲ್ಲ. ಈತ ಸನ್ಯಾಸಿಯೇ…?
ಆಗಿನ ನನ್ನ ಕಲ್ಪನೆಯಲ್ಲಿ…, ಉದ್ದುದ್ದವಾಗಿ ಕೂದಲು- ಗಡ್ಡಬಿಟ್ಟವರು ಸನ್ಯಾಸಿಗಳು! ಇವರು ನೋಡಿದರೆ ಕ್ಲೀನ್ ಶೇವ್!
ವಯಸ್ಸು ಎಷ್ಟಿರಬಹುದು ಎಂದು ಊಹಿಸಲು ಶ್ರಮಿಸಿದೆ. ನನ್ನ ಮನವನ್ನು ಓದಿದವರಂತೆ ನಕ್ಕರು.
“ಉನ್ನೈವಿಡ ಮೂಂಡ್ರುಮಡಂಗು!” (ನಿನಗಿಂತ ಮೂರುಪಟ್ಟು!) ಎಂದು ನಿಲ್ಲಿಸಿ, ಮುಗುಳುನಕ್ಕು…,
“ಉನಕ್ಕು ವೀಡು ವಿಟ್ಟು ವರವೇಂಡಿಯ ಯೋಗಂ ಇರುಂದದು- ಇರಂಡು ವರುಷತ್ತುಕ್ಕು ಅಪ್ಪುರಂ ವಂದಿರುಂದಾಲ್!! ಆನಾಲ್ ಅದು ಮುಡಿಂಜು ಪೋಚ್ಚು! ಕಾಲಾಕಾಲತ್ತಿಲೆ- ನೀ ನಿನೈತ್ತದೆಲ್ಲಾಂ ನಡಕ್ಕುಂ! ಎಲ್ಲಾಂ ಕಡವುಳ್ ಪಾತ್ತುಪ್ಪಾರ್…, ನೀ ಪದರಾಮಲ್ ನಿಂಡ್ರಾಲ್ ಮಟ್ಟುಂ ಪೋದುಂ!” (ನಿನಗೆ ಮನೆ ಬಿಟ್ಟು ಬರಬೇಕಾದ ಯೋಗವಿತ್ತು- ಎರಡು ವರ್ಷಗಳ ನಂತರ ಬಂದಿದ್ದರೆ! ಆದರೆ ಅದು ಮುಗಿದು ಹೋಯಿತು! ಕಾಲಾಕಾಲದಲ್ಲಿ- ನೀನು ಅಂದುಕೊಂಡಿದ್ದೆಲ್ಲಾ ನಡೆಯುತ್ತದೆ! ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ! ನೀನು ಚಂಚಲಗೊಳ್ಳದೆ ನಿಂತರೆ ಮಾತ್ರ ಸಾಕು!) ಎಂದು ನಿಲ್ಲಿಸಿ ನನ್ನ ಮುಖವನ್ನೇ ದಿಟ್ಟಿಸಿ..,
“ಮುಡಿಯಾದು! ಸೂರ್ಯೋದಯತ್ತೇಯೋ ವಿವೇಕಾನಂದರೇಯೋ ಪಾಕ್ಕ ಮುಡಿಯಾದು! ಕಾಲೈಯಿಲೇಯೇ ಮುದಲ್ ಕಿಡಕ್ಕಿರ ಟ್ರೈನಿಲ್ ನೀ ತಿರುಂಬಿ ಪೋ ಕಣ್ಣು… ಎಲ್ಲಾಂ ನಲ್ಲದಾ ವರುಂ!” (ಸಾಧ್ಯವಿಲ್ಲ! ಸೂರ್ಯೋದಯವನ್ನೋ ವಿವೇಕಾನಂದನನ್ನೋ ನೋಡಲು ಸಾಧ್ಯವಿಲ್ಲ! ಬೆಳಗ್ಗೆ ಮೊದಲ ಟ್ರೈನಿನಲ್ಲಿ ಮರಳಿ ಹೋಗು ಕಂದ… ಎಲ್ಲವೂ ಒಳ್ಳೆಯದೇ ಆಗುತ್ತದೆ) ಎಂದರು.
ಕನ್ಯಾಕುಮಾರಿಯಲ್ಲಿ ಸೂರ್ಯೋದಯವನ್ನು ನೋಡಲಾಗುವುದಿಲ್ಲ ಅಂದರೆ ಅರ್ಥವೇನು?
ನೋಡಿಯೇ ನೋಡುತ್ತೇನೆ ಅಂದುಕೊಂಡು ಮಲಗಲು ಹೋದೆ.
ಒಣಗಲು ಹಾಕಿದ್ದ ಬಟ್ಟೆಯಮೇಲೆಯೇ ಬಿದ್ದುಕೊಂಡೆ.
ಅಮ್ಮನ ವಾತ್ಸಲ್ಯವೂ ಅಪ್ಪನ ಮಾತೃಹೃದಯವೂ ನೆನಪಾಯಿತು!
ಅವರೇನು ಮಾಡಿದ್ದರು?
ಮರಳುವುದು ನಿಶ್ಚಿತವೇ…, ಮರಳಿ? ಭವಿಷ್ಯವೇನು? ಏನು ಮಾಡಿದರೆ ನನ್ನ ಇಚ್ಛೆಗೆ ಅನುಗುಣವಾಗಿ ಬದುಕಬಹುದು?
ಯೋಚನೆಯಲ್ಲಿಯೇ ಯಾವಾಗ ನಿದ್ರೆ ಮಾಡಿದೆನೋ ತಿಳಿಯದು…, ಎಚ್ಚರವಾದಾಗ ಇನ್ನೂ ಕತ್ತಲು!!
ಅರೆ…! ಸೂರ್ಯೋದಯಕ್ಕೆ ಮುಂಚೆ ಎಚ್ಚರವಾಗುವುದಿಲ್ಲವೇನೋ ಅಂದುಕೊಂಡರೆ…,
ಪಕ್ಕದ ಬೆಡ್‌ನಲ್ಲಿದ್ದವನು ನಕ್ಕ!
“ಎನ್ನ ತೂಕಂ ಇದು…? ರಂಡುನಾಳ್ ಆಚು!” (ಎಂತಾ ನಿದ್ರೆ ಇದು…? ಎರಡುದಿನ ಆಯ್ತು!) ಎಂದ.
ಒಂದುಕ್ಷಣ ಆತ ಏನು ಹೇಳಿದನೆಂದು ತಿಳಿಯಲೇ ಇಲ್ಲ!
“ನಾನ್ ಇಂಡ್ರು ಕೆಳಂಬವೇಂಡುಂ! ಉಂಗಳ್‌ಕೂಡೆ ಪಳಗ ಮುಡಿಯಲೈ! ನೀಂಗಳ್ ಇನಿಯುಂ ಎವಳವ್‌ನಾಳ್?” (ನಾನಿವತ್ತು ಹೊರಡಬೇಕು! ನಿಮ್ಮೊಂದಿಗೆ ಒಡನಾಡಲಾಗಲಿಲ್ಲ! ನೀವು ಇನ್ನೂ ಎಷ್ಟುದಿನ?) ಎಂದ.
“ನಾನುಂ ಇಂಡ್ರೇ ಪೋಗವೇಂಡುಂ!” (ನಾನೂ ಇವತ್ತೇ ಹೊರಡಬೇಕು) ಎಂದೆ.
ಆತ ಮುಗುಳುನಕ್ಕು ಬಟ್ಟೆಗಳೊಂದಿಗೆ ಸ್ನಾನಕ್ಕೆ ಹೊರಟರು.
ಸಮಯವನ್ನು ನೋಡಿದೆ. ಐದೂವರೆ. ಸೂರ್ಯೋದಯವನ್ನು ನೋಡಲಾಗುವುದಿಲ್ಲವಂತೆ…!
ಎದ್ದು ಬಟ್ಟೆಗಳನ್ನು ತೆಗೆದುಕೊಂಡು ನಾನೂ ಸ್ನಾನಕ್ಕೆ ಹೊರಟೆ…!
ಸ್ನಾನವನ್ನು ಮುಗಿಸಿ ಹೊರಬಂದಾಗ ಸಣ್ಣ ಗೊಂದಲ…! ಇದು ಸಂಜೆ ಆರುಗಂಟೆಯೋ…?
ಸೂರ್ಯಾಸ್ತವನ್ನಾದರೂ ನೋಡಬೇಕೆಂದುಕೊಳ್ಳುತ್ತಾ ರೂಮಿಗೆ ಹೋದೆ…!
ಆದರೆ…, ಸಮಯ ಸರಿದಂತೆ ಬೆಳಕು ಹರಡುತ್ತಿದೆ!
ಸೂರ್ಯೋದಯವನ್ನು ನೋಡಿ, ವಿವೇಕಾನಂದರ ಬಂಡೆಗೆ ಹೋಗಿಬರುವ ತೀರ್ಮಾನದಲ್ಲಿ ಹೊರಟೆ.
ಆಕಾಶದತುಂಬಾ ಮೋಡ!
ದೂರದಲ್ಲಿ ಕಾಣಿಸಿತು- ಬಂಡೆಯೂ ಮೂರ್ತಿಯೂ!
ದಟ್ಟ ಕಾರ್ಮೋಡದಿಂದಾಗಿ ಸೂರ್ಯೋದಯವನ್ನು ನೋಡಲಾಗುವುದಿಲ್ಲ ಎಂದು ಹೇಳಿದ್ದು ನಿಜವಾಯಿತಾದರೂ ವಿವೇಕಾನಂದ ಕಾಣಿಸಿದರಲ್ಲಾ- ಅಂದುಕೊಂಡು ಮರಳಿದೆ.
ಬೋಟಿನಲ್ಲಿ ಆ ಬಂಡೆಗೆ ಕರೆದುಕೊಂಡು ಹೋಗುತ್ತಾರೆನ್ನುವುದು ನನಗೆ ಗೊತ್ತೇ ಇರಲಿಲ್ಲ! ಕಾಣಿಸಿದ ಮೂರ್ತಿಯೇ ನನ್ನ ಪ್ರಕಾರ ವಿವೇಕಾನಂದ!!
ಹಿಂದಿನ ರಾತ್ರಿ ಕರ್ಮಸಿದ್ಧಾಂತದಬಗ್ಗೆ ಮಾತನಾಡುತ್ತಿದ್ದವರು ಕಾಣಿಸುತ್ತಾರೇನೋ ನೋಡಿದೆ.
ಕಾಣಿಸಲಿಲ್ಲ! ಪ್ರಪಂಚವೇ ಬದಲಾದ ಭಾವ! ಕನಸಿರಬಹುದು! ಬ್ಯಾಗ್ ತೆಗೆದುಕೊಂಡು ಹೊರಟೆ!
ಟ್ರೈನಿನಲ್ಲಿ ಪ್ರಯಾಣ ಮಾಡುವಾಗ ಯಾರದೋ ಮಾತಿನಲ್ಲಿ ತಿಳಿಯಿತು…, ದೂರದಲ್ಲಿ ಕಾಣಿಸಿದ ಬಂಡಯಮೇಲಿನ ಮೂರ್ತಿ ವಿವೇಕಾನಂದರದಲ್ಲ- ತಿರುವಳ್ಳುವರ್‌ರದ್ದು ಎಂದು!!
ಅಂದಿಗೆ ಸರಿಯಾಗಿ ಎರಡು ವರ್ಷಕ್ಕೆ ನನ್ನ ಮದುವೆಯಾಯಿತು!!
೪
ಅಂದು ನಾನು ಮನೆಬಿಟ್ಟು ಹೋಗದೇ ಇದ್ದಿದ್ದರೆ ನಾನು ಪ್ರೇಮ ನಿವೇದನೆಯನ್ನು ಮಾಡಿದ ಹುಡುಗಿಯ ಮದುವೆ ಬೇರೆ ಯಾರೊಂದಿಗಾದರು ಆಗಿರುತ್ತಿತ್ತೋ ಏನೋ! ನಾನು ಬಚಾವ್ ಆಗಿರುತ್ತಿದ್ದೆ! ಅಂದೇ ಮನೆಬಿಟ್ಟು ಹೋಗಿ ಭವಿಷ್ಯದಲ್ಲಿ- (ಈಗ)- ಸನ್ಯಾಸಿಯಾಗಬಹುದಾಗಿದ್ದ ಅತಿದೊಡ್ಡ ಅವಕಾಶದಿಂದ ವಂಚಿತನಾದೆ!
Comments
Post a Comment